ಗುರುವಾರ, ಅಕ್ಟೋಬರ್ 15, 2020

ನೆತ್ತಮನಾಡಿ..


ಯೊವಾನ್ನ ೭ನೇ ಅಧ್ಯಾಯ
ತನಗೆ ವಿರೋಧಿಗಳು ಹೆಚ್ಚಾಗಿರುವುದನ್ನು ಅರಿತ ಯೇಸು ಪರ್ಣಶಾಲೆಗಳ ಜಾತ್ರೆಗೆ ಹೋಗದೆ ಮನೆಯಲ್ಲಿಯೇ ಉಳಿದು ತನ್ನ ಸೋದರರನ್ನಷ್ಟೇ ಕಳಿಸುತ್ತಾನೆ. ಆಮೇಲೆ ಯಾರಿಗೂ ತಿಳಿಯದಂತೆ ತಾನು ಹೊರಟು ಜೆರುಸಲೇಮ್ ಗುಡಿಯಲ್ಲಿ ಕಾದಿದ್ದ ಜನರಿಗೆ ಬೋಧಿಸ ತೊಡಗುತ್ತಾನೆ. 
ಈ ಸುದ್ದಿ ಹಿರೀಕರ ಸಭೆಗೆ, ಮಹಾಗುರುವಿಗೆ, ಫರಿಸಾಯರಿಗೆ ತಿಳಿದು ಅವರು ಸಿಡಿಮಿಡಿಗೊಳ್ಳುತ್ತಾರೆ. 
ಆದರೂ ಧರ್ಮಶಾಸ್ತ್ರದ ವಿದ್ವಾಂಸರನ್ನು ಕರೆಸಿ ಯೇಸುವಿನ ಭಾಷಣದಲ್ಲಿ ಬಂಡಾಯದ ಅಥವಾ ಸಂಪ್ರದಾಯ ವಿರೋಧದ ಮಾತುಗಳಿವೆಯೇ ಎಂದು ಪರೀಕ್ಷಿಸುವಂತೆ ಹೇಳುತ್ತಾರೆ.
ಹಾಗೆ ಬಂದ ವಿದ್ವಾಂಸರಿಗೆ ಯೇಸುವಿನ ಮಾತುಗಳಲ್ಲಿ ಏನೂ ತಪ್ಪು ಕಾಣುವುದಿಲ್ಲ.
ಆ ವಿದ್ವಾಂಸರ ತಂಡದಲ್ಲಿದ್ದ ನಿಕೊದೆಮುಸ್ ಮೊದಲೊಮ್ಮೆ ಯೇಸುವನ್ನು ಗುಟ್ಟಾಗಿ ಸಂಧಿಸಿ ವಿಚಾರ ವಿನಿಮಯ ನಡೆಸಿದ್ದವನು. 
ಈ ಭೇಟಿಯಿಂದ ಅವರಿಬ್ಬರ ಗೆಳೆತನ ಗಟ್ಟಿಯಾಯಿತು.
ಮುಂದೆ ಯೇಸು ಅವಮಾನಕರವಾದ ಮರಣ ಹೊಂದಿದರೂ ಆತನನ್ನು ಗೌರವಯುತವಾಗಿ ಸಮಾಧಿ ಮಾಡಿದ್ದು ನಿಕೊದೆಮನೆಂಬ ಈ ಗೆಳೆಯನೇ.

ಶುಕ್ರವಾರ, ಆಗಸ್ಟ್ 7, 2020

ಹಿರೋಷಿಮಾ ದಿನ

೧೯೩೯ ರಲ್ಲಿ ಶುರುವಾದ ಎರಡನೇ ಮಹಾಯುದ್ಧವು ಆರು ವರ್ಷಗಳಾದರೂ ಅಂತ್ಯ ಕಂಡಿರಲಿಲ್ಲ. ನೇರ ಹಣಾಹಣಿ ಬಹುತೇಕ ನಿಂತಿದ್ದರೂ ಶೀತಲ ಸಮರ ಮುಂದುವರಿದೇ ಇತ್ತು. ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಶತ್ರುರಾಷ್ಟ್ರಗಳು ಎಂಬ ಎರಡು ಬಣಗಳಿದ್ದವು. ಮಿತ್ರರಾಷ್ಟ್ರಗಳ ಪರ ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರಿಟನ್, ಫ್ರಾನ್ಸ್, ಸೋವಿಯತ್ ಒಕ್ಕೂಟವು ಒಂದುಗೂಡಿ ಜರ್ಮನ್, ಇಟಲಿ ಮತ್ತು ಜಪಾನ್ ದೇಶಗಳ ವಿರುದ್ಧ ಮೀಸೆ ತಿರುವುತ್ತಿದ್ದವು. ಜಗತ್ತಿನಲ್ಲಿ ಹಿರಿಯಣ್ಣನಾಗುವ ಬಯಕೆಯಿಂದಾಗಿ ಉಭಯ ಬಣದ ಮುಂಚೂಣಿ ದೇಶಗಳು ಯುದ್ಧದಲ್ಲಿ ನೇರವಾಗಿ ಭಾಗಿಯಾಗದ ಹಾಗೂ ಯುದ್ಧದಿಂದ ಯಾವುದೇ ರೀತಿಯ ಲಾಭನಷ್ಟಗಳ ಸೋಂಕಿಲ್ಲದ ದೇಶಗಳನ್ನೂ ತಮ್ಮತ್ತ ಸೆಳೆದುಕೊಂಡಿದ್ದವು. ಅಭಿವೃದ್ಧಿಶೀಲರನ್ನು ಮೊಟಕಿ ಯುದ್ಧದಲ್ಲಿ ಮೇಲುಗೈ ಸಾಧಿಸಿ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ರಾಜ್ಯವಿಸ್ತರಣೆಯ ಅಮಲು ಎಲ್ಲರಲ್ಲೂ ಇತ್ತು. ಮಾನವತೆ, ಮಾನವಧರ್ಮ, ಆಲಿಪ್ತನೀತಿ, ವಿಶ್ವಶಾಂತಿ, ಅಹಿಂಸೆ ಮುಂತಾದ ಆದರ್ಶಗಳೆಲ್ಲಾ ಅಕ್ಷರಶಃ ಮಣ್ಣುಪಾಲಾಗಿದ್ದವು.
ತಮ್ಮ ಪಶ್ಚಿಮ ಕರಾವಳಿಯಿಂದ ಯುದ್ಧರಂಗಕ್ಕಿಳಿದಿದ್ದ ಅಮೆರಿಕನ್ನರು ಅಗಾಧ ವಿಸ್ತಾರದ ಶಾಂತಸಾಗರವನ್ನು ದಾಟಿಕೊಂಡು ಫಿಲಿಪ್ಪೀನ್ ಸಮುದ್ರದವರೆಗೂ ಬಂದಿದ್ದರು. ಇಷ್ಟು ದೂರ ಕ್ರಮಿಸುತ್ತಿದ್ದ ತಮ್ಮ ಯುದ್ಧವಿಮಾನಗಳಿಗೆ ಇಂಧನ ತುಂಬಿಸಿಕೊಳ್ಳಲು ಹಾಗೂ ಮಿಲಿಟರಿ ನೆಲೆ ಸ್ಥಾಪಿಸಲು ಸೂಕ್ತ ನಡುಗಡ್ಡೆಗಳನ್ನು ಅವರು ಹುಡುಕುತ್ತಿದ್ದರು. ಜಪಾನಿನ ದಕ್ಷಿಣಕ್ಕೆ ಸುಮಾರು ೧೫೦೦ ಕಿಲೋಮೀಟರುಗಳ ಅಂತರದಲ್ಲಿ ಗುವಾಮ್, ಸೇಪಾನ್ ಮತ್ತು ತಿನಿಯಾನ್ ನಡುಗಡ್ಡೆಗಳು ಅವರ ಕಣ್ಣಿಗೆ ಬಿದ್ದವು. ಆದರೆ ಆ ದ್ವೀಪಗಳು ಜಪಾನಿನ ಹಿಡಿತದಲ್ಲಿದ್ದವು. 
೧೯೪೪ರ ಜೂನ್ ಹದಿನೈದನೇ ತಾರೀಕು, ಅಮೆರಿಕದ ಸೈನ್ಯ ಸೇಪಾನ್ ದ್ವೀಪವನ್ನು ಮುತ್ತಿಗೆ ಹಾಕಿತು. ದ್ವೀಪದಲ್ಲಿದ್ದ ೨೫೦೦೦ ಜಪಾನೀ ಸೈನಿಕರನ್ನು ಅತಿ ಸುಲಭದಲ್ಲಿ ಮಣಿಸಬಹುದೆಂದು ಅಂದಾಜಿಸಿದ್ದ ಅಮೆರಿಕನ್ ಸೈನ್ಯದ ಊಹೆ ತಪ್ಪಾಯಿತು. ಜಪಾನ್ ದೇಶವು ಗಾತ್ರದಲ್ಲಿ ಪುಟ್ಟದಾದರೂ ಜಪಾನ್ ಯೋಧರ ಅಪ್ರತಿಮ ದೇಶಭಕ್ತಿ ಹಾಗೂ ರಾಜಭಕ್ತಿ ತುಂಬಿದ್ದ ವೀರಾವೇಶದ ಹೋರಾಟದ ಮುಂದೆ ಅಮೆರಿಕ ಸಾಕಷ್ಟು ಬೆವರಿಳಿಸಬೇಕಾಯಿತು. ಅಮೆರಿಕದ ಬೋಯಿಂಗ್ ಬಿ-೨೯ ಯುದ್ಧವಿಮಾನಗಳು ಹಲವು ದಿನಗಳ ಕಾಲ ಈ ದ್ವೀಪದ ಸೇನಾ ನೆಲೆಗಳ ಮೇಲೆ ಬಾಂಬುಗಳನ್ನು ಹಾಕಿದ ಮೇಲೆಯೇ ಸೇಪಾನ್ ಕೈವಶವಾಗಿದ್ದು. 
ತಿನಿಯಾನ್ ನಡುಗಡ್ಡೆಯ ಮೇಲೆ ಜುಲೈ ೨೪ರಂದು ದಾಳಿ ಶುರುವಾಗಿ ಆಗಸ್ಟ್ ಒಂದರಂದು ಅದು ಅಮೆರಿಕದ ತೆಕ್ಕೆಗೆ ಬಂದಿತು. ತಿನಿಯಾನ್ ಯುದ್ಧದಲ್ಲಿ ಮುನ್ನೂರು ಅಮೆರಿಕನ್ ಸೈನಿಕರು ಹಾಗೂ ಜಪಾನಿನ ಆರು ಸಾವಿರ ಯೋಧರು ಅಸುನೀಗಿದರು. ತಿನಿಯಾನ್ ಅನ್ನು ಅಮೆರಿಕವು ತನ್ನ ವಾಯುನೆಲೆಯಾಗಿ ಮಾಡಬಯಸಿತು. ಕೇವಲ ನೂರು ಚದರ ಕಿಲೊಮೀಟರುಗಳ ವಿಸ್ತೀರ್ಣದ ಆ ನಡುಗಡ್ಡೆಯಲ್ಲಿನ ಹವಳ ದಿಬ್ಬಗಳನ್ನು ಅಮೆರಿಕದ ನೂರಾರು ಬುಲ್ಡೋಜರುಗಳು ಕಡಿದು ಸಮತಟ್ಟು ಮಾಡಿದವು. ಎರಡೇ ತಿಂಗಳಲ್ಲಿ ಅಲ್ಲಿ ಆರು ಓಡುಹಾದಿ (ರನ್ವೇ) ಗಳ ನಿರ್ಮಾಣವಾಯಿತು. ಆ ಕಾಲಕ್ಕೆ ಅದು ಜಗತ್ತಿನ ಅತ್ಯಂತ ದೊಡ್ಡ ವಾಯುನೆಲೆಯಾಯಿತು. ವಿಶಾಲ ಸಾಗರದ ನಡುವೆ ಮೂರು ಕಿಲೋಮೀಟರು ಉದ್ದದ ಓಡುಹಾದಿಗಳು ಹಾಗೂ ಅವುಗಳ ಇಕ್ಕೆಲಗಳಲ್ಲಿ ನೂರಾರು ಲೋಹವಕ್ಕಿಗಳನ್ನು ಪಕ್ಷಿನೋಟಗಳಲ್ಲಿ ಕಂಡಾಗ ಒಂದು ಭಾರೀ ಯುದ್ಧವಿಮಾನವೊಂದು ಶಸ್ತ್ರಸಜ್ಜಿತವಾಗಿ ಯುದ್ಧಕ್ಕೆ ಹೊರಟಂತೆ ತೋರುತ್ತಿತ್ತು.
೧೯೪೫ ಫೆಬ್ರವರಿಯಲ್ಲಿ ಈ ದ್ವೀಪಗಳಿಂದ ಹೊರಟ ಯುದ್ಧವಿಮಾನಗಳು ೫೧ ಕಾರ್ಯಾಚರಣೆಗಳಲ್ಲಿ ಪಂಪ್ಕಿನ್ ಬಾಂಬ್ ಎಂಬ ಬಿ ವರ್ಗದ ಭಾರೀ ಸ್ಫೋಟಕಗಳನ್ನು ಜಪಾನಿನ ವಿವಿಧೆಡೆಗಳಲ್ಲಿ ಉದುರಿಸಿದವು. (ಪಂಪ್ಕಿನ್ ಬಾಂಬ್ ಎಂಬುದು ಸುಮಾರು ೨೮೫೦ ಕೆಜಿ ತೂಕದ ಕಾಂಕ್ರೀಟ್ ಗಟ್ಟಿ, ಅವನ್ನು ಸೇನಾನೆಲೆಗಳನ್ನು ಧ್ವಂಸಮಾಡಲು ಬಳಸಲಾಗುತ್ತದೆ, ಆದರೆ ಅಮೆರಿಕನ್ನರು ಬಳಸಿದ ಪಂಪ್ಕಿನ್ ಬಾಂಬುಗಳು ಸ್ಫೋಟಕಗಳನ್ನು ಹೊಂದಿದ್ದ ಲೋಹಕೋಶಗಳು)
ಯುದ್ಧ ನಡೆಯುತ್ತಿದ್ದ ಇದೇ ಸಂದರ್ಭದಲ್ಲಿ ಇತ್ತ ಅಮೆರಿಕದ ವಿಜ್ಞಾನಿಗಳು ವಿವಿಧ ಪ್ರಯೋಗಗಳಲ್ಲಿ ತೊಡಗಿ ದೇಶಕ್ಕೆ ಉಪಯುಕ್ತವಾಗಬಹುದಾದ ಅಪರಿಮಿತ ಅನ್ವೇಷಣೆಗಳ ಜನಕರಾಗಿದ್ದರು. ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದಕ್ಕಾಗಿ ಅಮೆರಿಕ ಸರ್ಕಾರವು ಧಾರಾಳ ಹಣಕಾಸಿನ ನೆರವು ನೀಡುತ್ತಿತ್ತು. ಅದೇ ವೇಳೆಯಲ್ಲಿ ಆಲ್ಬರ್ಟ್ ಐನ್ಸ್ಟೀನರ ಸಾಪೇಕ್ಷವಾದ ಹಾಗೂ ಶಕ್ತಿಮೂಲವಾದ (ಇ=ಎಂಸಿ ಸ್ಕ್ವೇರ್) ಗಳು ವಿಶ್ವದ ಗಮನ ಸೆಳೆದಿದ್ದವು. 
ಅಗಾಧ ವೇಗದ ಕಾಯವೊಂದು ಅಷ್ಟೇ ವೇಗದ ಇನ್ನೊಂದು ಕಾಯಕ್ಕೆ ಡಿಕ್ಕಿಯಾದಾಗ ಅಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆನ್ನುವುದು ಇ= ಎಂಸಿ ಸ್ಕ್ವೇರ್ ಸೂತ್ರದ ಸಾರಾಂಶ. ಅಗಾಧ ವೇಗದ ಗುಣ ಹೊಂದಿದ ಯುರೇನಿಯಂ ೨೩೫ ಎಂಬ ಖನಿಜದ ಅಣುಗಳನ್ನು ಪರಸ್ಪರ ಘಟ್ಟಿಸಿದರೆ ಅಪಾರ ಶಕ್ತಿ ಉದ್ಭವವಾಗುವುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ಒಂದು ಲೆಕ್ಕಚಾರದ ಪ್ರಕಾರ ೨,೭೬,೦೦೦ ಕಿಲೋಗ್ರಾಂ ತೂಕದ ಕಲ್ಲಿದ್ದಲು ನೀಡಬಲ್ಲ ಶಾಖಶಕ್ತಿಯನ್ನು ಒಂದೇ ಒಂದು ಕಿಲೋಗ್ರಾಂ ಯುರೇನಿಯಂ ನಿಂದ ಪಡೆಯಬಹುದು ಅಂದಮೇಲೆ ಅಣು ಢಿಕ್ಕಿಯ ವಿಪರೀತ ಪರಿಣಾಮವನ್ನು ಊಹಿಸಿಕೊಳ್ಳಬಹುದು. ಈ ಶಾಖಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಮಾನವ ಸ್ನೇಹಿಯಾಗಬಹುದು ಅಥವಾ ಬಾಂಬಿನಂತೆ ಸಿಡಿಸಿ ಮಾನವ ವಿನಾಶಕ್ಕೂ ಕಾರಣವಾಗಬಹುದು.
ಅಮೆರಿಕದ ಅಧ್ಯಕ್ಷರ ಗುಪ್ತ ಅಣತಿಯ ಮೇರೆಗೆ ಯುದ್ಧ ತಜ್ಞರು ಐನ್‌ಸ್ಟೀನ್ ಸೂತ್ರವನ್ನು ಬಳಸಿಕೊಂಡು ಅಂಥಾ ಒಂದು ಅಣುಬಾಂಬ್ ತಯಾರಿಗೆ ಆದ್ಯತೆ ಇತ್ತಿದ್ದರು. ಖಂಡಾಂತರಗಳ ವಿಸ್ತಾರ ಹೊಂದಿದ್ದ ವಿಶಾಲ ಶಾಂತಸಾಗರದ ನಿರ್ಜನ ನಡುಗಡ್ಡೆಯಲ್ಲಿ ಅತ್ಯಂತ ರಹಸ್ಯವಾಗಿ ಅಮೆರಿಕದ ಅಣು ವಿಜ್ಞಾನಿಗಳು ಪ್ರಯೋಗ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಆ ದ್ವೀಪ ಸಮುಚ್ಚಯವು ಮುಖ್ಯನೆಲದಿಂದ ಬಹುದೂರವಿದ್ದುದರಿಂದ ಯಾರಿಗೂ ಸುಲಭದಲ್ಲಿ ನಿಲುಕವಂತೆ ಇರಲಿಲ್ಲ. ಹಾಗಾಗಿ ಅಣುಬಾಂಬಿನ ಪ್ರಯೋಗಗಳು ನಿರಾತಂಕವಾಗಿ ನಡೆದಿದ್ದವು. ನಿರ್ಜನ ದ್ವೀಪಗಳಲ್ಲಿ ಸಾಗರತಳದಲ್ಲಿ ಅನೇಕ ಸಣ್ಣ ಪುಟ್ಟ ಪ್ರಯೋಗಗಳು ನಡೆದಿದ್ದವಾದರೂ ಬೃಹತ್ ಪ್ರಮಾಣದ ಪ್ರಯೋಗಕ್ಕೆ ರಂಗವಿನ್ನೂ ಅಣಿಯಾಗಿರಲಿಲ್ಲ. ಭಾರೀ ಬಾಂಬು ಬಹುತೇಕ ಸಿದ್ಧವಾಗಿದ್ದರೂ ಅದನ್ನು ರಣಾರಂಗದಲ್ಲಿ ಪ್ರಯೋಗ ಮಾಡಿರಲಿಲ್ಲ.
ಅಮೆರಿಕದ ಅಧ್ಯಕ್ಷರು ತಮ್ಮ ಸೇನೆಯ ಅಧಿಕಾರಿಗಳಿಂದ ಎಲ್ಲ ಮಾಹಿತಿ ಪಡೆಯುತ್ತಿದ್ದರು. ಜಪಾನಿನಂತ ಪುಟ್ಟ ದೇಶದ ಅಪ್ರತಿಮ ದೇಶಭಕ್ತಿಯ ವೀರಾಗ್ರಣಿ ಯೋಧರು ತಮ್ಮ ದೇಶದ ಯುವಸೈನಿಕರನ್ನು ಬಗ್ಗುಬಡಿಯುತ್ತಿರುವುದು ಅವರಿಗೆ ಚಿಂತೆಯಾಗಿ ಕಾಡಿತ್ತು. ಅಮೆರಿಕದ ಹೆಂಗಳೆಯರು ಸೈನ್ಯದಿಂದ ತಮ್ಮ ಮಕ್ಕಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಅಧ್ಯಕ್ಷರಿಗೆ ದಂಬಾಲು ಬಿದ್ದಿದ್ದರು. ಹೇಗಾದರೂ ಮಾಡಿ ಜಪಾನನ್ನು ಶರಣಾಗತಿಗೆ ದೂಡಬೇಕು ಹಾಗೂ ಆ ಮೂಲಕ ಅಮೆರಿಕವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಯುದ್ಧವನ್ನು ಕೊನೆಗಾಣಿಸಬೇಕು ಎಂದು ಅಮೆರಿಕ ತುಡಿಯತೊಡಗಿತು. ಅಧ್ಯಕ್ಷರು ತಮ್ಮ ಸೇನಾವಿಜ್ಞಾನಿಗಳಿಗೆ ಒಂದು ರಹಸ್ಯ ಸಂದೇಶವನ್ನು ರವಾನಿಸಿದರು.
ಅದು ೧೯೪೫ರ ಆಗಸ್ಟ್ ೬ನೇ ದಿನ. ಮುಂಜಾವದ ೨:೪೫ ರ ವೇಳೆ. ಅಗಸವಿನ್ನೂ ಕಪ್ಪಗಿತ್ತು. ಪರಿಸರು ನೀರವವಾಗಿತ್ತು. ಆದರೆ ಆ ಟಿನಿಯನ್ ದ್ವೀಪದ ವಾಯುನೆಲೆಯಲ್ಲಿ ಒಂದು ನಿಗೂಢ ಚಲನೆಯಿತ್ತು. ಕರ್ನಲ್ ಪಾಲ್ ಟಿಬ್ಬೆಟ್ಸ್‌ ನವರು ಎನೊಲಾ ಗೇ ಎಂಬ ತಮ್ಮ ಬಿ-೨೯ ಬಾಂಬರ್ ವಿಮಾನವನ್ನು ನೆಲದಿಂದ ಮೇಲಕ್ಕೆ ಚಿಮ್ಮಿಸಿದರು. ಅದರ ಸರಕುಗಳ ಅಟ್ಟಣಿಗೆಯಲ್ಲಿ ’ಲಿಟಲ್ ಬಾಯ್’ ಎಂಬ ಹತ್ತಡಿ ಉದ್ದ ಮೂರಡಿ ವ್ಯಾಸದ ಕಬ್ಬಿಣದ ಕೊಳಗವೊಂದು ಮಲಗಿತ್ತು. ಅದರ ಒಡಲೊಳಗಿನ ಉದ್ದನೆಯ ಕೊಳವೆಯಲ್ಲಿ ೬೪ ಕಿಲೋಗ್ರಾಮಿನಷ್ಟು ಯುರೇನಿಯಂ ಅಡಗಿತ್ತು. ವಿಮಾನ ಹಾರುತ್ತಾ ಮೆಲ್ಲಮೆಲ್ಲನೆ ವೇಗ ಹೆಚ್ಚಿಕೊಳ್ಳುತ್ತಾ ಹದಿನೈದು ನಿಮಿಷಗಳು ಕಳೆದಿದ್ದವು. ವಿಜ್ಞಾನಿ ಕ್ಯಾಪ್ಟನ್ ವಿಲಿಯಂ ಎಸ್ ಪಾರ್ಸನ್ ನವರು ಮೇಲೆದ್ದು ತಮ್ಮ ಸಲಕರಣೆಗಳೊಂದಿಗೆ ಕೆಲಸ ಶುರುಮಾಡಿಕೊಂಡರು. ಕೊಳಗದ ಬಾಗಿಲು ತೆರೆದು ತಣ್ಣಗೆ ಮಲಗಿದ್ದ ಬಾಂಬನ್ನು ಸಕ್ರಿಯಗೊಳಿಸುವ ಸಾಧನಗಳಲ್ಲಿ ಜೀವ ತುಂಬಿದರು. ಗಡಿಯಾರದ ಮುಳ್ಳುಗಳು, ವಿದ್ಯುತ್ ತಂತಿಗಳು, ಇಂಧನದ ಕೊಳವೆಗಳು ಮಿನಮಿನ ದೀಪಗಳು, ಗಾಳಿಯ ಕವಾಟಗಳು, ಕೀಲೆಣ್ಣೆಯ ನಳಿಕೆಗಳು, ಯಂತ್ರಗಳ ಚಕ್ರಗಳು ಚುರುಕಾದವು. ಎಲ್ಲವೂ ಸಜ್ಜಾಗಿ ಒಂಬತ್ತು, ಎಂಟು, ಏಳು, ಆರು ಎಂಬ ಇಳಿಯಣಿಕೆ ಶುರುವಾಯಿತು.
ಸೂರ್ಯೋದಯವಾಗಿ ಹೊತ್ತು ಮೇಲೇರಿತ್ತು. ಆಗ ಬೆಳಗಿನ ೭:೨೫ ರ ಸಮಯ ಹೊಳೆವ ನೀಲಾಗಸದಲ್ಲಿ ೨೬,೦೦೦ ಅಡಿಗಳ ಎತ್ತರದಲ್ಲಿ ಎನೊಲಾ ಗೇ ವಿಮಾನ ಹಾರುತ್ತಿತ್ತು. ವಿಮಾನ ಜಪಾನಿನ ಹಿರೋಶಿಮಾ ನಗರದ ಮೇಲೆ ಹಾರುತ್ತಿರುವಾಗ ಎಂಟುಗಂಟೆ ಹದಿನಾರು ನಿಮಿಷಕ್ಕೆ ಸರಿಯಾಗಿ ಇಳಿಯಣಿಕೆಯ ಘೋಷಣೆ ತಾರಕಕ್ಕೇರಿ “ಮೂರು, ಎರಡು, ಇನ್ನೇನು, ಈಗ” ಎನ್ನುತ್ತಿದ್ದ ಹಾಗೆಯೇ ವಿಮಾನದ ಪೈಲಟ್ ಕರ್ನಲ್ ಟಿಬ್ಬೆಟ್ಸ್ ನವರು ಕೀಲು ಎಳೆದರು. ಬಾಂಬು ತುಂಬಿದ್ದ ಕಬ್ಬಿಣದ ಕೊಳಗ ಸರಕ್ಕನೇ ಕೆಳಕ್ಕೆ ಜಿಗಿಯಿತು. ಅದರ ಚೂಪಾದ ಮೂತಿ ನೆಲದತ್ತ ಮುಖ ಮಾಡಿತ್ತು. ಹಿಂದಿನ ಬಾಲದ ಕಡೆ ಇದ್ದ ನಾಲ್ಕು ರೆಕ್ಕೆಗಳು ಕೊಳಗವು ಗಾಳಿಗೆ ಓಲಾಡದಂತೆ ಸ್ತಿಮಿತಕ್ಕೆ ತರುತ್ತಿದ್ದವು. ನೆಲದಿಂದ ೧೯೦೦ ಅಡಿ ಮೇಲಿರುವಾಗ ಅದರ ಅಂತರಾಳದ ಬಾಂಬಿಗೆ ಕಿಡಿ ತಗುಲಿತು. ಲೋಹದ ಕಾಯವಿನ್ನೂ ನೆಲ ತಲಪುವ ಮೊದಲೇ ಭಾರೀ ಶಬ್ದದೊಂದಿಗೆ ಬಾಂಬು ಸ್ಫೋಟಿಸಿ ಅಪಾರ ಪ್ರಮಾಣದ ಬೆಂಕಿಯನ್ನು ಹೊರಹಾಕಿತು. ೪೦೦೦ ಡಿಗ್ರಿ ಸೆಲ್ಷಿಯಸ್ ಇದ್ದ ಆ ಬೆಂಕಿಯ ತಾಪಕ್ಕೆ ಎಪ್ಪತ್ತು ಸಾವಿರ ಮಂದಿ ಇದ್ದಲ್ಲೇ ಸುಟ್ಟು ಬೂದಿಯಾದರು. ಸುತ್ತಲಿನ ಎಂಟು ಕಿಲೋಮೀಟರು ವ್ಯಾಪ್ತಿಯ ಎಲ್ಲ ಮನೆಗಳು, ಕಟ್ಟಡಗಳು, ಮರಗಿಡಗಳು, ಗುಡ್ಡಗಳು ಎಲ್ಲವೂ ನೆಲಸಮವಾಗಿ ಬಟಾಬಯಲಾದವು. ಭಾರಿ ಅಣಬೆಯಾಕಾರದ ಹೊಗೆಯ ಮೋಡ ಭುಗಿಲೆದ್ದಿತು.
ಬಾಂಬುಗಳ ದಾರ್ಢ್ಯವನ್ನು ಟಿಎನ್ಟಿ ಎಂದು ಅಳೆಯಲಾಗುತ್ತದೆ. ಒಂದು ಕೆಜಿಯಷ್ಟು ಟಿಎನ್ಟಿ ಆರುದ್ಧ ಆರಗಲ ಚದರಡಿಯ ಕೋಣೆಯ ಎಲ್ಲವನ್ನೂ ಧ್ವಂಸಗೊಳಿಸಬಲ್ಲದು. ಒಂದು ಕೆಜಿಯ ಸಾವಿರಪಟ್ಟು ಅಂದರೆ ಒಂದು ಟನ್ನು. ಅಂಥಾ ಇಪ್ಪತ್ತು ಸಾವಿರ ಟನ್ ಟಿಎನ್ಟಿ ಯ ಶಕ್ತಿಯನ್ನು ಹಿರೋಶಿಮಾ ಬಾಂಬು ಸಿಡಿಸಿತ್ತು. ತಕ್ಷಣವೇ ಭಸ್ಮವಾದ ಆ ಎಪ್ಪತ್ತು ಸಾವಿರ ಜನರೇ ಪುಣ್ಯವಂತರು. ಬಾಂಬಿನ ದುಷ್ಟರಿಣಾಮಗಳ ಪರಿವೆಯೇ ಇಲ್ಲದಂತೆ, ನೋವಿನ ಹಾಗೂ ಉರಿಯ ಅನುಭವವೇ ಆಗದಂತೆ ಒಂದೇ ಕ್ಷಣದಲ್ಲಿ ಅವರು ಪ್ರಾಣ ಕಳೆದುಕೊಂಡರು. ಆದರೆ ಅಣುಬಾಂಬ್ ಸಿಡಿದು ಒಂದು ತಿಂಗಳ ತನಕ ಹಿರೋಶಿಮಾ ಹೊತ್ತಿ ಉರಿಯಿತು. ನೋವಿನಿಂದ, ಉರಿಯಿಂದ, ಧಗೆಯಿಂದ, ಅನ್ನನೀರಿಲ್ಲದೆ, ಔಷಧೋಪಚಾರವಿಲ್ಲದೆ ನರಳಿ ನರಳಿ ಸತ್ತವರು ಸುಮಾರು ಎಂಬತ್ತು ಸಾವಿರ ಮಂದಿ. ಅವರಿಗೆ ಸಹಾಯ ಹಸ್ತ ನೀಡ ಹೋದವರೂ ಅಣುವಿನ ವಿಕಿರಣಕ್ಕೆ ಬಲಿಯಾಗಿ ’ಕೂಳ್ ಕುದಿವಂತೆ ಕುದಿದುವನಿಮಿಷತತಿಗಳ್’ ಎಂಬಂತೆ ವಿಲವಿಲ ಒದ್ದಾಡಿ ಸತ್ತರು. ಜೀವ ಗಟ್ಟಿಯಿದ್ದ ಕೆಲವರಷ್ಟೇ ಬದುಕುಳಿದರು.
ತ್ಸುತೊಮು ಯಮಾಗುಚಿಯವರು ಮಿತ್ಸುಬಿಶಿ ಹೆವಿ ಇಂಡಸ್ಟ್ರಿಯ ನೌಕರ. ಅಂದು ಕಂಪೆನಿಯ ವ್ಯವಹಾರಕ್ಕಾಗಿ ಹಿರೋಶಿಮಾಗೆ ಬಂದು ಅತಿಥಿಗೃಹದಲ್ಲಿ ಮಲಗಿದ್ದರು. ಅವರಿದ್ದ ತಾಣ ಬಾಂಬು ಬಿದ್ದ ಮೂರು ಕಿಲೋಮೀಟರು ದೂರದಲ್ಲಿತ್ತು. ಒಮ್ಮೆಲೇ ಕಣ್ಣುಕೋರೈಸುವ ಬೆಳಕು ಅವರ ಕೋಣೆಯಲ್ಲಿ ಪ್ರಕಾಶಿಸಿತು. ಅವರು ಎಚ್ಚರಾಗಿ ಅದು ಮಿಂಚಿನ ಹೊಳಪು ಎಂದುಕೊಳ್ಳುತ್ತಿರುವಾಗಲೇ ಧಗೆಯುಂಟಾಗಿ ಬಾಂಬಿನ ಸಿಡಿತಲೆಯ ಬೆಂಕಿಯ ಶಾಖಕ್ಕೆ ಅವರ ಮೈಕೈಮುಖವೆಲ್ಲಾ ಸೀದುಹೋದವು. ತಲೆಗೂದಲೆಲ್ಲಾ ಸುಟ್ಟುಹೋದವು. ಕಿವಿ ಕಿವುಡಾಯಿತು. ಅಂಗೈ ಚರ್ಮ ಬಾತುಕೊಂಡಿತು. ಆದರೆ ಅದ್ಭುತಕರವಾಗಿ ಅವರು ಬದುಕುಳಿದರು. ಹತ್ತಿರದ ತುರ್ತು ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಾ ಒಂದು ರಾತ್ರಿ ಕಳೆದು, ಸುಮಾರು ಮುನ್ನೂರು ಕಿಲೋಮೀಟರು ದೂರದಲ್ಲಿದ್ದ ಅವರೂರಿಗೆ ನಡೆದುಕೊಂಡೇ ಹೋಗಿ ತಲಪಿದಾಗ ಅವರ ಹೆಂಡತಿ ಮಕ್ಕಳು ಅವರನ್ನು ಗುರುತು ಹಿಡಿಯಲೇ ಇಲ್ಲ.
ಅಂದು ಆಗಸ್ಟ್ ಒಂಬತ್ತರ ನಡುಹಗಲು. ತ್ಸುತೊಮುನವರು ಕಚೇರಿಗೆ ತೆರಳಿ ತಮ್ಮ ಅಧಿಕಾರಿಗಳಿಗೆ ವರದಿಯೊಪ್ಪಿಸುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಅವರ ಕಚೇರಿಯನ್ನು ಪ್ರಖರವಾದ ಬೆಳಕೊಂಡು ಆವರಿಸಿತು. ಹಿರೋಶಿಮಾದ ಬಾಂಬ್ ಭೂತ ತಮ್ಮನ್ನು ಅಟ್ಟಿಸಿಕೊಂಡು ಬಂತೆಂದು ತ್ಸುತೊಮುನವರು ಥರಥರಗುಟ್ಟಿ ನಡುಗಿಹೋದರು. ಈ ಸಲ ಅವರಿದ್ದ ಸ್ಥಳಕ್ಕೆ ಮೂರು ಕಿಲೊಮೀಟರು ದೂರದಲ್ಲಿದ್ದ ನಾಗಾಸಾಕಿ ಪಟ್ಟಣದ ಮೇಲೆ ಅಮೆರಿಕನ್ ಯುದ್ಧವಿಮಾನವು ಪ್ಲುಟೋನಿಯಂ ಅಣು ಬಾಂಬನ್ನು ಬೀಳಿಸಿತ್ತು. ಮತ್ತೆ ಸುಮಾರು ೩೫,೦೦೦ ಮಂದಿ ಸುಟ್ಟು ಬೂದಿಯಾದರು. ಆದರೆ ತ್ಸುತೊಮುನವರು ಈ ಸಾರಿಯೂ ಬದುಕುಳಿದಿದ್ದರು.
ಅಣುಬಾಂಬ್ ಪ್ರಯೋಗವಾದ ಮೇಲೆಯೂ ಗುವಾಮ್, ಸೇಪಾನ್ ಮತ್ತು ತಿನಿಯಾನ್ ದ್ವೀಪಗಳಿಂದ ಅಮೆರಿಕವು ಜಪಾನಿನ ಮೇಲೆ ನಿರಂತರವಾಗಿ ದಾಳಿ ನಡೆಸಿತು. ಆಗಸ್ಟ್ ಹದಿನಾಲ್ಕರಂದು ನೂರಾರು ಬಿ-೨೯ ಬಾಂಬರ್ ವಿಮಾನಗಳು ಜಪಾನಿನ ಮೇಲೆ ಬಾಂಬುಗಳ ಸುರಿಮಳೆಗೈದವು. ಅದೇ ರಾತ್ರಿ ಜಪಾನ್ ರೇಡಿಯೋದ ಮೂಲಕ ಸಂದೇಶ ಬಿತ್ತರಿಸಿದ ಜಪಾನ್ ಚಕ್ರವರ್ತಿ ಹಿರೊಹಿಟೋ ನವರು “ನಮ್ಮ ದೇಶವು ಹಿರಿಯರು ಹಾಕಿಕೊಟ್ಟ ದೇಶಭಕ್ತಿಯ ಮಾರ್ಗದಲ್ಲಿ ನಡೆದು ತನ್ನ ನೆಲದ ಒಂದೊಂದು ಅಂಗುಲವನ್ನೂ ಕಳೆದುಕೊಳ್ಳಲಿಚ್ಛಿಸದೆ ಸ್ವಾಭಿಮಾನವನ್ನು ಪ್ರದರ್ಶಿಸಿದೆ. ಆದರೆ ಅತ್ಯಂತ ಕ್ರೂರವೂ ಅಮಾನುಷವೂ ಆದ ಬಾಂಬ್ ಪ್ರಯೋಗವು ನಮ್ಮ ಅಮಾಯಕ ಪ್ರಜೆಗಳ ಜೀವವನ್ನು ಹೊಸಕುತ್ತಿರುವುದರಿಂದ ನಮ್ಮ ಹೃದಯ ಬೆಂದಿದೆ. ಈ ತಕ್ಷಣದಿಂದ ನಾವು ಯುದ್ಧದಿಂದ ತಟಸ್ಥರಾಗೋಣ. ನಮ್ಮ ಪ್ರಜೆಗಳು ಬೇರೊಂದು ರೀತಿಯಲ್ಲಿ ಸಶಕ್ತ ಜಪಾನನ್ನು ಮರುನಿರ್ಮಿಸುವ ಮೂಲಕ ಮೃತರಾದ ಸಹಪ್ರಜೆಗಳಿಗೆ ಅಶ್ರುತರ್ಪಣ ನೀಡಲಿ. ಆ ಮೂಲಕ ವಿಶ್ವದೆಲ್ಲೆಡೆಯ ನಾಗರಿಕರು ಶಾಂತಿ ಸಹಬಾಳ್ವೆಯಿಂದ ಬಾಳುವಂತಾಗಲಿ” ಎಂದು ನುಡಿದರು. ಆ ಬಾನುಲಿ ಸಂದೇಶವನ್ನು ಇಂದಿಗೂ ’ಜುವೆಲ್ ವಾಯ್ಸ್ ಬ್ರಾಡ್‌ಕಾಸ್ಟಿಂಗ್’ ಎಂದು ಕರೆದು ಮರು ಬಿತ್ತರಿಸಲಾಗುತ್ತಿದೆ. 
ಚಕ್ರವರ್ತಿಯ ಈ ಮಾತನ್ನು ಜಪಾನಿನ ಶರಣಾಗತಿ ಎಂದೇ ಬಿಂಬಿಸಲಾಗುತ್ತದೆ. ಆದರೆ ಅದು ವಿಶ್ವದ ಕ್ರೂರಮನಸುಗಳ ಮೇಲಿನ ದಿಗ್ವಿಜಯ ಎಂದೇ ನಾನು ಬಣ್ಣಿಸುತ್ತೇನೆ. 
ಚಿಟಿಕೆಯಷ್ಟು ಯುರೇನಿಯಂ ಒಂದು ನಗರಕ್ಕೆ ಒಂದಿಡೀ ವರ್ಷಕ್ಕೆ ಬೇಕಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸಬಲ್ಲದು. ಅದೇ ಚಿಟಿಕೆ ಯುರೇನಿಯಂ ಆ ನಗರವನ್ನು ಒಂದೇ ನಿಮಿಷದಲ್ಲಿ ಬಲಿ ತೆಗೆದುಕೊಳ್ಳಬಹುದು. ಇದೆಲ್ಲ ನಾವು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿದೆ. ಅಂದರೆ ಮನುಷ್ಯನ ಬುದ್ಧಿಶಕ್ತಿಯು ಕೆಡಕನ್ನು ಗೆದ್ದು ಒಳಿತನ್ನು ಸಾಧಿಸುವ ಕಡೆಗೆ ಹರಿಯಲಿ ಎಂಬುದೇ ಶಾಂತಿಪ್ರಿಯರ ಹಾರೈಕೆ. ಆಗಸ್ಟ್‌ ೬ ಹಿರೋಶಿಮಾ ದಿನದ ಆಚರಣೆಯ ಹಿಂದಿನ ಧ್ವನಿಯೂ ಅದೇ ಆಗಿದೆ.

ಭಾನುವಾರ, ನವೆಂಬರ್ 10, 2019

ಪುಸ್ತಕ ಸಂಸ್ಕೃತಿ

ಕಣ್ದಿಟ್ಟಿ ಹರಿದತ್ತ ಗ್ರಂಥ ಗಿರಿಪಂಕ್ತಿಗಳು ನಿಂತು ಬೆರಗೀಯುತಿವೆ ಪುಸ್ತಕಾಲಯದಲ್ಲಿ ... ಎಂಬ ಕವಿವಾಣಿಯು ಗ್ರಂಥಾಲಯದ ಕಪಾಟುಗಳಲ್ಲಿ ವಿಜೃಂಭಿಸುವ ಪುಸ್ತಕಗಳ ಪರ್ವತಸಾಲು ಹೇಗೆ ಅಚ್ಚರಿ ಮೂಡಿಸುತ್ತವೆ ಎಂದು ಬಣ್ಣಿಸುತ್ತದೆ. ನಿಜವಾಗಿಯೂ ಪುಸ್ತಕಗಳೇ ನಮ್ಮ ಒಳ್ಳೆಯ ಗೆಳೆಯರು. ಏಕತಾನದ ಬದುಕಿನಲ್ಲಿ ನಕ್ಷತ್ರಗಳನ್ನು ಮಿನುಗಿಸಿ ಯಾವುದೋ ಅಪ್ರತಿಮ ಲೋಕಕ್ಕೆ ನಮ್ಮನ್ನು ಕರೆದೊಯ್ದು ಮನವನ್ನು ಪ್ರಫುಲ್ಲಗೊಳಿಸುವ ತನ್ಮೂಲಕ ಜ್ಞಾನಾರ್ಜನೆಗೆ ಹಾಗೂ ಮನೋವಿಕಾಸಕ್ಕೆ ಇಂಬಾಗುವ ಪರಿ ಪುಸ್ತಕಗಳಿಂದಲ್ಲದೆ ಇನ್ನೇತರಿಂದ ಸಾಧ್ಯ.
ಪುಸ್ತಕಪ್ರೇಮವು ಪ್ರಾಚೀನ ಕಾಲದಲ್ಲೂ ಇತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಕ್ರಿಸ್ತಪೂರ್ವ ೩೨೦ರಲ್ಲಿ ಎರಡನೇ ಟಾಲೆಮಿ ಎಂಬ ಅರಸನು ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾ (ಈಗಿನ ಕೈರೋ ಪಟ್ಟಣ) ದಲ್ಲಿ ದೇಶವಿದೇಶಗಳ  ಹೊತ್ತು ತಂದಿದ್ದ ಎಲ್ಲ ಗ್ರಂಥಗಳನ್ನು ಶೇಖರಿಸಲು ಒಂದು ಬೃಹತ್ ಗ್ರಂಥಾಲಯವನ್ನು ಕಟ್ಟಿಸಿದ್ದನೆಂದು ಇತಿಹಾಸ ಹೇಳುತ್ತದೆ. ಜಗತ್ತಿನ ಇತಿಹಾಸದಲ್ಲಿ ಇದೇ ಮೊತ್ತಮೊದಲ ಪುಸ್ತಕಾಲಯ. ಅಲ್ಲಿನ ದೇಶೀ ವಿದ್ವಾಂಸರಿಗೂ ಪ್ರವಾಸಿ ಜ್ಞಾನಪಿಪಾಸುಗಳಿಗೂ ಆ ಪುಸ್ತಕದ ಮನೆ ವಿಶಿಷ್ಟವಾಗಿ ನೆರವಾಗುತ್ತಿತ್ತು. ಆದರೆ ರೋಮನ್ ಸೈನಿಕರು ಕ್ರಿಸ್ತಪೂರ್ವ ೪೮ರಲ್ಲಿ  ಅಲೆಕ್ಸಾಂಡ್ರಿಯಾದ ಮೇಲೆ ಧಾಳಿ ಮಾಡಿದಾಗ ಆ ಪುಸ್ತಕಾಲಯಕ್ಕೆ ಬೆಂಕಿ ಬಿದ್ದು ಅಲ್ಲಿದ್ದ ಅಮೂಲ್ಯ ಗ್ರಂಥಗಳೆಲ್ಲವೂ ಬೂದಿಯಾಗಿ ಬಿಡುತ್ತವೆ. ಆಗಿದ್ದು ಆಗಿಹೋಯಿತು, ತಮ್ಮಲ್ಲಿ ಇಂಥಿಂಥಾ ದೇಶಗಳ ಬೆಲೆಕಟ್ಟಲಾಗದ ಇಂಥಿಂಥಾ ಪುಸ್ತಕಗಳಿದ್ದವು ಎಂದು ಹೇಳಿಕೊಳ್ಳಲಿಕ್ಕಾದರೂ ಇರಲೆಂದು ಅವುಗಳ ಶೀರ್ಷಿಕೆಗಳನ್ನು ಬರೆದುಕೊಳ್ಳುತ್ತಾರೆ ಅಲ್ಲಿನ ಚತುರ ಲಿಪಿಕರು. ಅವರು ಗ್ರಂಥಗಳ ಬೂದಿಯನ್ನು ಕದಡದೇ ಅವುಗಳ ಮುಖಪುಟದ ಮೇಲೆ ಕಂಡುಬರುವ ಒಂದೊಂದು ನುಡಿಯ ಒಂದೊಂದು ಅಕ್ಷರವನ್ನು ಯಥಾವತ್ತಾಗಿ ಬರೆದುಕೊಂಡು ಅವನ್ನೆಲ್ಲ ದೊಡ್ಡದೊಂದು ಕಲ್ಲಿನ ಫಲಕದಲ್ಲಿ ಕೆತ್ತಿಸಿ ಆ ಗ್ರಂಥಾಲಯದ ಆವರಣದಲ್ಲಿ ಸ್ಥಾಪಿಸುತ್ತಾರೆ. ಈಜಿಪ್ಟಿನ ರಾಜಧಾನಿ ಕೈರೋ ನಗರಕ್ಕೆ ಹೋದವರು ಆ ಶಿಲಾಫಲಕವನ್ನು ನೋಡಬಹುದು, ವಿಶೇಷವೆಂದರೆ ಆ ಫಲಕದಲ್ಲಿ ಹಳಗನ್ನಡದ ಅಕ್ಷರವೂ ಇದೆ ಎಂಬುದು ನಮ್ಮ ಹೆಮ್ಮೆ.
ಇನ್ನು ನಮ್ಮ ದೇಶದ ಸಂದರ್ಭಕ್ಕೆ ಬಂದರೆ ಹರಪ್ಪ ಉತ್ಖನನದಲ್ಲಿ ಕೆಲ ಅಕ್ಷರವಿನ್ಯಾಸಗಳು ಕಂಡುಬಂದರೂ ಪದೇ ಪದೇ ಆಕ್ರಮಣಕಾರರ ದುಂಡಾವರ್ತಿಯಿಂದ ಬೇಸತ್ತ ಸಿಂಧೂ ಬಯಲಿನ ಶಾಂತಿಪ್ರಿಯ ನಾಗರಿಕರು ಅಲ್ಲಿಂದ ವಲಸೆ ಹೋದ ಮೇಲೆ ಅವರ ಅಕ್ಷರ ಸಂಪತ್ತು ಏನಾಯಿತೆಂದು ತಿಳಿಯಲು ಅಸಾಧ್ಯವಾಗಿದೆ. ಬದಲಾದ ಅಂದಿನ ಕಾಲಘಟ್ಟದಲ್ಲಿ ಪುಸ್ತಕಗಳನ್ನು ಬರೆದಿಡುವ ಪದ್ದತಿ ಇರಲಿಲ್ಲವಾದ್ದರಿಂದ ಮಹತ್ತಾದುದೆಂದು ಹೇಳಿಕೊಳ್ಳುವ ವೇದಗಳು ಸಹ ಕಂಠಪಾಠದ ಮೂಲಕವೇ ಮುಂದಿನ ಪೀಳಿಗೆಗೆ ರವಾನೆಯಾಗುತ್ತಾ ಬಂದವೆಂದು ತಿಳಿದುಬರುತ್ತದೆ. ತಿಳಿದುಬಂದ ಇತಿಹಾಸದ ಪ್ರಕಾರ ನಮ್ಮಲ್ಲಿ ಬರವಣಿಗೆ ಶುರುವಾಗುವುದೇ ಪ್ರಾಕೃತ ಎಂಬ ಆಡುಭಾಷೆಯಿಂದ. ಅದೇ ಮುಂದೆ ಶಿಷ್ಟರೂಪ ತಳೆದು ಸಂಸ್ಕೃತ ಭಾಷೆಗೆ ನಾಂದಿಯಾಗುತ್ತದೆ. ವಿಪರ್ಯಾಸವೆಂದರೆ ಸಂಸ್ಕೃತಕ್ಕೆ ತನ್ನದೇ ಆದ ಲಿಪಿ ಇಲ್ಲ. ಮತ್ತೊಂದು ಲಿಪಿಯನ್ನು ಎರವಲು ಪಡೆದ ಆ ಭಾಷೆ ಅನುಪಮವಾದ ಕಾವ್ಯಗಳನ್ನು ಹೆತ್ತಿತು ಎಂದರೆ ಅಚ್ಚರಿ ಎನಿಸಿದರೂ ಸತ್ಯ!
ಇಡೀ ಇಂಡಿಯಾ ದೇಶಕ್ಕೇ ಅನ್ವಯವಾಗುವಂತ ಲಿಪಿಯನ್ನು ಜಾರಿಗೊಳಿಸಿದ ಕೀರ್ತಿ ಅಶೋಕನಿಗೆ ಸಲ್ಲುತ್ತದೆ. ದೇಶದ ವಿವಿಧೆಡೆಯ ವಿಬುಧರು ತಮ್ಮಲ್ಲಿ ಸ್ಥಳೀಯವಾಗಿ ದೊರೆಯುವ ತಾಳೆಗರಿ, ಬೂರ್ಜ್ವಪತ್ರಗಳ ಜೈವಿಕ ವಿನ್ಯಾಸಕ್ಕೆ ಅಳವಡುವಂತೆ ಅಶೋಕ ಲಿಪಿಯನ್ನು ರೂಪಾಂತರಿಸಿಕೊಂಡು ತಮ್ಮದೇ ಆದ ಭಾಷಾ ಲಿಪಿಯನ್ನು ರೂಢಿಗತ ಮಾಡಿಕೊಂಡರೆಂಬುದು ವೇದ್ಯ. ಭೂರ್ಜ್ವಪತ್ರದಲ್ಲಿ ಮೇಲಿನಿಂದ ಕೆಳಗೆ ಗೀಟು ಹಾಕುವ ರೀತಿಯಲ್ಲಿ ಅಕ್ಷರ ಬರೆದರೆ ತಾಳೆಗರಿಗಳ ಮೇಲೆ ದುಂಡಾಗಿ ಬರೆಯುವುದರ ಮೂಲಕ ಅಕ್ಷರ ಟಂಕಿಸಲಾಗುತ್ತದೆ. ಹೀಗೆ ಗೀಟಕ್ಷರ ಮತ್ತು ದುಂಡಕ್ಷರಗಳ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ಎರಡೂ ಶೈಲಿಗಳ ನಡುವಿನ ಸಮಾನತೆಯನ್ನು ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ ಉತ್ತರ ಇಂಡಿಯಾದಲ್ಲಿ ಬರೆಯಲಾಗುವ ’ಕ’ ಅಕ್ಷರಕ್ಕೂ ದಕ್ಷಿಣ ಇಂಡಿಯಾದ ಭಾಷೆಗಳಲ್ಲಿ ಬರೆಯಲಾಗುವ ’ಕ’ ಅಕ್ಷರಕ್ಕೂ ಹೋಲಿಕೆಯಿರುವುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ತಿಳಿಯಬಹುದು.
ಆಮೇಲೆ ನಮ್ಮ ದೇಶದಲ್ಲಿ ನಡೆದ ಅಕ್ಷರಕ್ರಾಂತಿ ಹಾಗೂ ಅದರ ಮುಂದುವರಿಕೆಯಾಗಿ ನಡೆದ ಗ್ರಂಥಾಲಯ ಚಳವಳಿಗೆ ಸೋಪಾನ ಒದಗಿಸಿದವರು ಬೌದ್ಧ ಅನುಯಾಯಿಗಳು. ಅವರು ವಿವಿಧ ವಿಷಯಗಳ ಅಪಾರ ಜ್ಞಾನಭಂಡಾರವನ್ನ ಸಾವಿರಾರು ಹಸ್ತಪ್ರತಿಗಳಲ್ಲಿ ಪಡಿಮೂಡಿಸಿ ತಕ್ಷಶಿಲಾ, ನಳಂದಾ, ನಾಗಾರ್ಜುನ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಜತನದಿಂದ ಸಂಗ್ರಹಿಸಿ ಆ ಗ್ರಂಥ ದೇಗುಲಗಳ ಮೂಲಕ ಸರ್ವರಲ್ಲೂ ಜ್ಞಾನದೀವಿಗೆ ಬೆಳಗುತ್ತಿದ್ದರೆಂದು ಇತಿಹಾಸ ಅರುಹುತ್ತದೆ. ದುರದೃಷ್ಟವೆಂದರೆ ಪುಸ್ತಕಸಂಸ್ಕೃತಿಯನ್ನು ದ್ವೇಷಿಸುತ್ತಿದ್ದ ಪಾಷಂಡವಾದಿಗಳು ಬೌದ್ಧರ ಮಾರಣಹೋಮ ನಡೆಸಿ ವಿಶ್ವವಿದ್ಯಾಲಯಗಳನ್ನು ನೆಲಸಮಗೊಳಿಸಿ ಅಮೂಲ್ಯ ಆಕರಗ್ರಂಥಗಳನ್ನು ಸುಟ್ಟು ಬೂದಿ ಮಾಡಿದರೆಂದೂ ಇತಿಹಾಸ ಹೇಳುತ್ತದೆ. ದುಷ್ಕರ್ಮಿಗಳೊಂದಿಗೆ ಸೆಣಸಿ ಉಳಿದ ಕೆಲವೇ ಬೌದ್ಧರು ಕೈಗೆ ಸಿಕ್ಕ ಗ್ರಂಥಗಳನ್ನು ಬಾಚಿಕೊಂಡು ಅಜಂತಾ, ಚಂದವಳ್ಳಿ, ಬನವಾಸಿ ಮುಂತಾದ ದುರ್ಗಮ ಗುಹ್ವರಗಳಲ್ಲಿ ಆಶ್ರಯ ಪಡೆದು ಇಂಡಿಯಾದ ಅಕ್ಷರಕ್ರಾಂತಿಯನ್ನು ಜೀವಂತವಾಗಿರಿಸಿದರು ಎಂಬುದು ಸ್ವಲ್ಪ ಸಮಾಧಾನಕರ ಸಂಗತಿ.
ಕನ್ನಡ ನಾಡಿನಲ್ಲಿ ಬಹು ಹಿಂದಿನಿಂದಲೂ ಬೌದ್ಧ ವಿಹಾರಗಳಲ್ಲಿ ಪುರಾತನ ಹಸ್ತಪ್ರತಿಗಳನ್ನು ಸಂಗ್ರಹಿಸಿ ಓದುಗರ ಜ್ಞಾನತೃಷೆಯನ್ನು ನೀಗಿಸಲಾಗುತ್ತಿತ್ತು. ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಸಂಪ್ರದಾಯವೂ ಬೆಳೆದುಬಂದಿತ್ತು. ಕ್ರಿಸ್ತಶಕ ಮೂರನೇ ಶತಮಾನದ ಬನವಾಸಿಯ ಒಂದು ಶಾಸನದಲ್ಲಿ ರಾಜಕುಮಾರಿಯೊಬ್ಬಳು ಬೌದ್ಧ ವಿಹಾರ ನಿರ್ಮಿಸಿದ ಉಲ್ಲೇಖವಿದೆ. ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ಇಂತಹ ವಿಹಾರಗಳ ಸಂಖ್ಯೆ ನೂರಕ್ಕೆ ಏರಿತ್ತು.
ಮುಂದೆ ಎಂಟನೇ ಶತಮಾನದ ವೇಳೆಗೆ ಪ್ರತಿಗಾಮಿ ಸಂಸ್ಕೃತಿಯು ಬೌದ್ಧರ ಈ ವಿಚಾರಪ್ರದ ಆಂದೋಲನವನ್ನು ಹೊಸಕಿ ಹಾಕಿಬಿಟ್ಟಿತು. ಆದರೆ ಕನ್ನಡದ ಸುದೈವವೋ ಎಂಬಂತೆ ಬೌದ್ಧರ ಪುಸ್ತಕಕ್ರಾಂತಿಯನ್ನು ಜೈನರು ವಹಿಸಿಕೊಂಡರು. ಜೈನಯುಗದ ಕಾಲದಲ್ಲೇ ರತ್ನತ್ರಯರು ಕಾವ್ಯಕೃಷಿ ಮಾಡಿದರು. ಅಂದಿನ ಕಾಲದ ಅತ್ತಿಮಬ್ಬೆ ಎಂಬ ಮಹಾಸ್ತ್ರೀ ಗ್ರಂಥದಾನದ ಹೆಸರಲ್ಲಿ ನೂರಾರು ಬರಹಗಾರರಿಗೆ ಊಟ ಹಾಕಿ ಅನೇಕ ಗ್ರಂಥಗಳನ್ನು ನಕಲು ಮಾಡಿಸಿದಳು ಎಂಬುದು ಗ್ರಂಥೇತಿಹಾಸದ ಒಂದು ಪ್ರಸಿದ್ಧ ಉಲ್ಲೇಖವಾಗಿದೆ.
ಜೈನ ಕವಿಗಳು ಮಹಾಭಾರತ ಕಾವ್ಯಕ್ಕೆ ಜೈನಸಂಸ್ಕೃತಿಯ ವೇಷಗಳನ್ನು ಹಾಕಿ ಮೆರೆಸಿ ಅದನ್ನು ಜನಪ್ರಿಯಗೊಳಿಸಿದರು. ಆದರೂ ವೈದಿಕ ಪರಂಪರೆಯ ಬಗೆಗಿನ ಅಸಹನೆ ಕನ್ನಡಿಗರ ಮನದಲ್ಲಿ ಮುಲುಗುಡುತ್ತಲೇ ಇತ್ತು. ಈ ವೈದಿಕ ಯಾಜಮಾನ್ಯವನ್ನು ಧಿಕ್ಕರಿಸಿದ ಶರಣ ಚಳವಳಿಯು ಸಾಹಿತ್ಯವು ಕನ್ನಡದ ಆಡುಭಾಷೆಯಲ್ಲಿ ಎಲ್ಲೆಡೆ ಪ್ರವರ್ಧಿಸಿತು. ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯಗಳು ಸುಲಭ ಸರಳ ವಚನಗಳ ಮೂಲಕ ಜನಮನ ಗೆದ್ದರು, ಸಮಸಮಾಜದ ಪರಿಕಲ್ಪನೆಯನ್ನು ಹುಟ್ಟುಹಾಕಿದರು.
ಮನುಸ್ಮೃತಿಯನ್ನು ಅಲ್ಲಗಳೆದ ಶರಣರ ವಿರುದ್ಧ ರಾಜರನ್ನು ಎತ್ತಿಕಟ್ಟಿದ ಒಂದು ವರ್ಗ ಶರಣರನ್ನು ಅಟ್ಟಾಡಿಸಿ ಮಾರಣಹೋಮಗೈದು ಅವರ ಮಠಗಳಿಗೂ ಪುಸ್ತಕಭಂಡಾರಗಳಿಗೂ ಧಾಳಿಯಿಟ್ಟು ಸರ್ವನಾಶ ಮಾಡಿತು. ಅಂದು ಮೂರುಸಾವಿರ ಶರಣರು ಆಶ್ರಯ ಪಡೆದ ಸುರಕ್ಷಿತ ತಾಣವೇ ಮೂರುಸಾವಿರ ಮಠ. ಹೀಗೆ ದಕ್ಷಿಣಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಗಳಿಗೆ ಓಡಿಹೋದ ಶರಣರೇ ಗವಿ ಗುಹ್ವರಗಳಂಥ ಸುರಕ್ಷಿತ ತಾಣಗಳಲ್ಲಿ ಬೃಹನ್ಮಠ, ಗವಿಮಠ, ಗೂಳೂರು ಮಠ, ಗುಮ್ಮಳಾಪುರಮಠ, ಯಡಿಯೂರು ಮಠ ಮುಂತಾದ ಮಠಗಳನ್ನು ಸ್ಥಾಪಿಸಿ ಶತಮಾನಗಳ ಕಾಲ ಸದ್ದಿಲ್ಲದೆ ಸರ್ವರಿಗೂ ವಿದ್ಯಾದಾನ ಮಾಡುವ ಕಾಯಕ ವಹಿಸಿಕೊಂಡರೆಂಬುದು ಕನ್ನಡ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಹೆಮ್ಮೆಯ ದಾಖಲೆಯಾಗಿದೆ.
ಹದಿನಾಲ್ಕನೇ ಶತಮಾನದಿಂದ ಹದಿನೆಂಟನೇ ಶತಮಾನವದರೆಗೆ ಕನ್ನಡನಾಡಿನಲ್ಲಿ ಸದ್ದು ಮಾಡಿದ್ದು ಯುದ್ದಗಳು ಜಗಳಗಳು ಪಿತೂರಿಗಳು ಹಾಗೂ ರಾಜಕೀಯ ವಿಪ್ಲವಗಳು. ಈ ನಡುವೆ ಕುಮಾರವ್ಯಾಸ, ಲಕ್ಮೀಶ ಮತ್ತು ಕೀರ್ತನಕಾರರು ಬಂದು ಹೋಗಿರುವರಾದರೂ ಇವರೆಲ್ಲರ ಸಾಹಿತ್ಯವು ಅಶಾಂತಿಯಲ್ಲಿ ಕಂಗೆಟ್ಟಿದ್ದ ಜನರಿಗೆ ಒಂದು ಹೊತ್ತಿನ ಮುಕ್ತಿಮಾರ್ಗಕ್ಕೆ ಆಸರೆಯಾದವೇ ವಿನಃ ಪೀಳಿಗೆಗಳ ಶಿಕ್ಷಣಕ್ಕೆ ನೀರುಣಿಸಲಿಲ್ಲ ಎಂಬುದೇ ಇತಿಹಾಸದ ವ್ಯಂಗ್ಯ.
ಮತ್ತೆ ಮೈಸೂರರಸರ ಕಾಲಕ್ಕೆ ಕನ್ನಡದ ಪುಸ್ತಕಕ್ರಾಂತಿ ಚಿಗುರೊಡೆಯಿತು. ಅದೇ ವೇಳೆಗೆ ಕನ್ನಡನಾಡಿಗೆ ಆಗಮಿಸಿದ ಕ್ರೈಸ್ತ ಧರ್ಮಪ್ರಚಾರಕರು ತಮ್ಮ ಕ್ಷೇತ್ರಕಾರ್ಯಕ್ಕಾಗಿ ಸ್ಥಳೀಯ ಭಾಷೆ ಕನ್ನಡವನ್ನು ಕಲಿಯಬೇಕಾದ ಸಂದರ್ಭದಲ್ಲಿ ಕನ್ನಡದ ಕಾವ್ಯಪರಂಪರೆಯನ್ನು ಕಂಡು ಬೆರಗಾದರು. ಆ ಕಾವ್ಯ ಮತ್ತು ಸಾಹಿತ್ಯಗಳಾವುವೂ ಸಮಾಜದ ಎಲ್ಲ ವರ್ಗವನ್ನೂ ತಲಪುತ್ತಿಲ್ಲ ಎಂಬುದನ್ನೂ ಅವರು ಮನಗಂಡರು. ಅಂದು ದೇಶವ್ಯಾಪಿಯಾಗಿದ್ದ ಇಂಗ್ಲಿಷ್ ದೊರೆಗಳ ಆಡಳಿತವು ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತು ನೀಡಿತ್ತು. ಬ್ರಿಟಿಷ್ ಸರಕಾರವು ಜಾತ್ಯತೀತವಾಗಿದ್ದು ಮಿಷನರಿ ಕೆಲಸಕ್ಕೆ ಬೆಂಬಲ ನೀಡಲಿಲ್ಲವಾದರೂ ಸಾರ್ವತ್ರಿಕ ಶಿಕ್ಷಣಕ್ಕೆ ಪಠ್ಯಪುಸ್ತಕಗಳನ್ನು ರೂಪಿಸಲು ಮಿಷನರಿಗಳ ನೆರವು ಪಡೆಯಿತೆಂಬುದು ಗಮನಾರ್ಹ. ಸ್ವತಃ ವಿದ್ವಾಂಸರಾಗಿದ್ದ ಮಿಷನರಿಗಳು ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಶಾಲೆಗಳಿಗಾಗಿ ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ದೇಶವಿದೇಶಗಳ ಚರಿತ್ರೆ, ಸಾಮಾನ್ಯ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ರೂಪಿಸಿ ಅದರ ಜೊತೆಗೆ ಕನ್ನಡ ಕಾವ್ಯಗಳ ರಸಸಾರವನ್ನು ಸಂಗ್ರಹಿಸಿ ಮಕ್ಕಳಿಗೆ ಕಾವ್ಯಬೋಧೆಯನ್ನೂ ಮಾಡಿದರು. ಹೀಗೆ ದೇವರ ಗೂಡುಗಳಲ್ಲಿ, ಮಠದ ಅಟ್ಟಣಿಗೆಗಳಲ್ಲಿ ಬಟ್ಟೆ ಕಟ್ಟಿ ಇಡಲಾಗಿದ್ದ ಪ್ರಾಚೀನ ತಾಳೆಗರಿಗಳೂ, ಕಾವ್ಯಹೊತ್ತಿಗೆಗಳೂ ಹೊರಬಂದು ಮುದ್ರಣಯಂತ್ರಗಳ ಮೂಲಕ ಅಚ್ಚು ಹಾಕಲ್ಪಟ್ಟು ಸರ್ವಜನರಿಗೂ ತಲಪುವಂತಾದವು.
ಶಬ್ದಮಣಿದರ್ಪಣ, ಛಂದೋಂಬುಧಿ, ಪಂಪಭಾರತ, ವಚನಸಾಹಿತ್ಯ, ದಾಸಸಾಹಿತ್ಯ, ಕುಮಾರವ್ಯಾಸ ಭಾರತ, ಜೈಮಿನಿಭಾರತಗಳೆಲ್ಲ ಜನಸಾಮಾನ್ಯರ ಕೈಗೆ ಸಿಗುವಂತಾದವು. ಮಿಷನರಿಗಳು ಸುದ್ದಿಪತ್ರಿಕೆಗಳನ್ನೂ ನಡೆಸಿದರು. ನಾಡಿನೆಲ್ಲೆಡೆ ಸಂಚರಿಸಿ ಹಾದಿಬೀದಿಗಳಲ್ಲಿ ಗುಡಿಗೋಪುರಗಳಲ್ಲಿ ಕಂಡುಬಂದ ಶಿಲಾಶಾಸನಗಳನ್ನು ಓದಿ ಅಭ್ಯಸಿಸಿ ಅವುಗಳನ್ನೂ ಪುಸ್ತಕರೂಪಕ್ಕೆ ತಂದು ತುಲನೆ ಮಾಡಿದರಲ್ಲದೆ ನಾಡಿನ ಇತಿಹಾಸವನ್ನೂ ಬರೆದು ಕನ್ನಡಿಗರಲ್ಲಿ ಅಖಂಡ ಕರ್ನಾಟಕತ್ವದ ಪರಿಕಲ್ಪನೆಯನ್ನು ಪಡಿಮೂಡಿಸಿದರು.
ಮುದ್ರಣಕ್ರಾಂತಿಯಿಂದಾಗಿ ನಾವು ಕನ್ನಡದಲ್ಲಿ ನಮ್ಮ ಸಾಹಿತ್ಯವನ್ನಷ್ಟೇ ಅಲ್ಲದೆ ಜಗತ್ತಿನ ವಿವಿಧ ಭಾಷೆಗಳ ಪ್ರಮುಖ ಪುಸ್ತಕಗಳನ್ನು ನಮ್ಮ ಭಾಷೆಯಲ್ಲೇ ಓದುತ್ತಿದ್ದೇವೆ. ವಿಶ್ವಕೋಶಗಳ ಮೂಲಕ ಅಪಾರ ಜ್ಞಾನವನ್ನು ಪಡೆಯುತ್ತಿದ್ದೇವೆ. ಮಿನ್ಬಲದ ಹೊಸ ಹೊಸ ಆವಿಷ್ಕಾರಗಳಿಂದಾಗಿ ನಾವಿಂದು ಜಗತ್ತಿನ ಎಲ್ಲ ಪುಸ್ತಕಗಳನ್ನೂ ಅಂಗೈ ಮೇಲಿನ ಸಾಧನಗಳಲ್ಲಿ ಓದಬಹುದಾಗಿದೆ.
ಆದರೂ ನಗರಜೀವಿಗಳು ಯಾಂತ್ರಿಕ ಜೀವನದ ಜಂಜಾಟದಲ್ಲಿ ಓದುವ ಕ್ರಿಯೆಗೇ ಸಮಯ ನೀಡುತ್ತಿಲ್ಲ. ಓದುವ ಎಲ್ಲ ಆಕರಗಳೂ ಸುಲಭವಾಗಿ ಸಿಗುತ್ತಿವೆಯಾದರೂ ಓದಲು ನಾವು ಮಾನಸಿಕವಾಗಿ ಸಿದ್ಧರಾಗಿಲ್ಲ. ಓದುಗರ ಸಂಖ್ಯೆ ಕ್ರಮೇಣ ಕ್ಷಯಿಸುತ್ತಿದೆ. ಕುವೆಂಪು, ಜಿ ಎಸ್ ಶಿವರುದ್ರಪ್ಪ, ಗೋವಿಂದಪೈ, ಪೂರ್ಣಚಂದ್ರ ತೇಜಸ್ವಿ, ನಿರಂಜನ, ಹಂಪ ನಾಗರಾಜಯ್ಯ, ಎಂ ಎಂ ಕಲಬುರ್ಗಿ, ನಾ ಡಿಸೋಜ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ಎಲ್ ಭೈರಪ್ಪ ಮುಂತಾದವರ ಪುಸ್ತಕಗಳನ್ನು ನಾವು ಓದಲೇಬೇಕು. ಮದುವೆ ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಬೇಕು. ಪುಸ್ತಕಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ ಇತರರಲ್ಲಿ ಮಾತಾಡಬೇಕು.

ಸೋಮವಾರ, ಡಿಸೆಂಬರ್ 24, 2018

ಸೈಲೆಂಟ್ ನೈಟ್


ಸೈಲೆಂಟ್ ನೈಟ್, ಹೋಲಿ ನೈಟ್, ಆಲ್ ಈಸ್ ಕಾಮ್ ಅಂಡ್ ಆಲ್ ಈಸ್ ಬ್ರೈಟ್’ ... ಅದೊಂದು ಸುಂದರ ಸುಮಧುರ ಮನೋಹರ ಗೀತೆ. ಎಷ್ಟೋ ಸಿನಿಮಾಗಳಲ್ಲಿ ಅದೊಂದು ಸುಶ್ರಾವ್ಯ ಹಿನ್ನೆಲೆ ಸಂಗೀತವಾಗಿ ಮಂದ್ರ ಮನೋಜ್ಞವಾದ ಇನಿದಾದ ಸ್ವರದಲ್ಲಿ ತೇಲಿ ಬರುವುದನ್ನು ಆಲಿಸಿರುತ್ತೇವೆ. ಅಪ್ರತಿಮ ಸ್ವರವಲ್ಲರಿಯ ನಾದಮಾಧುರ್ಯಕ್ಕೆ ಮನಸೋಲದವರಾರು! ಮೂಲತಃ ಜರ್ಮನ್ ಭಾಷೆಯಲ್ಲಿ ರಚಿತವಾದ ಹಾಡು ಇಂದು ಪ್ರಪಂಚದ ಮುನ್ನೂರಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿ ಅದೇ ಗಾನಸುಧೆಯ ಚೆಲುವನ್ನು ಉಳಿಸಿಕೊಂಡಿದೆ. ಪ್ರತಿ ಬಾರಿ ಕೇಳಿಸಿಕೊಂಡಾಗಲೂ ಹೊಸದಾಗಿ ತೋರಿ ರೋಮಾಂಚನವೇಳಿಸಿ ಭಾವತರಂಗಗಳನ್ನು ಮೀಟುವ ಹಾಡು ಹುಟ್ಟಿ ಹರಡಿದ ಬಗೆಯೇ ಒಂದು ರಮ್ಯ ರೋಚಕ ಕತೆ.
ಆಸ್ಟ್ರಿಯಾದ ಜರ್ಮನ್ ಮನೆಮಾತಿನ ಪುಟ್ಟ ಹಳ್ಳಿ ಓಬೆರ್ನಡಾರ್. ೧೮೧೮ರ ಡಿಸೆಂಬರ್ ತಿಂಗಳ ಚಳಿಗಾಲ. ಊರ ಪಕ್ಕದಲ್ಲೇ ಹರಿಯುವ ಸಾಲ್ಝ್ ಹೊಳೆಯು ಹೆಪ್ಪುಗಟ್ಟುವ ಸಮಯ. ಆಗಮನಕಾಲದ ಚುಮುಚುಮು ರಾತ್ರಿಗಳ ನೀರವ ವಾತಾವರಣದಲ್ಲಿ ಅಲ್ಲಿನ ಸಂತ ನಿಕೊಲಾಸ್ ಚರ್ಚು ಎಂಬ ಪುಟ್ಟ ಗುಡಿಯು ಕ್ರಿಸ್ತಜಯಂತಿಯ ಆಚರಣೆಗೆ ಸಿದ್ಧಗೊಳ್ಳುತ್ತಿತ್ತು. ನಡುರಾತ್ರಿಯ ಪೂಜೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲು ಫಾದರ್ ಜೋಸೆಫ್ ಮೋಹ್ರ್ ನವರು ಹಲವು ಗಂಟೆಗಳ ಮೊದಲೇ ಚರ್ಚಿನೊಳಗೆ ಪ್ರವೇಶಿಸಿ ಗಾನವೃಂದದ ಸ್ಥಳಕ್ಕೆ ಬಂದರು. ಯುವಪಾದ್ರಿಯು ಚರ್ಚಿಗೆ ಬಂದು ಒಂದು ವರ್ಷವಾಗಿತ್ತಷ್ಟೇ. ಇದು ಚರ್ಚಿನಲ್ಲಿ ಅವರ ಮೊದಲ ಕ್ರಿಸ್ಮಸ್. ಇಂಥಾ ದೊಡ್ಡ ಹಬ್ಬಗಳಿಗೆಂದೇ ಉಪಯೋಗಿಸುವ ಬೃಹತ್ ಪೈಪ್ ಆರ್ಗನ್ ಅನ್ನು ಅವರು ಪ್ರೀತ್ಯಭಿಮಾನದಿಂದ ಸವರಿದರು. ಅದರ ಮೇಲೆ ಕುಳಿತಿದ್ದ ಕಂಡೂ ಕಾಣದ ಧೂಳನ್ನು ನಯವಾದ ಹತ್ತಿಯ ಬಟ್ಟೆಯಿಂದ ಒರೆಸಿದರು. ಮೊನ್ನೆ ಮೊನ್ನೆಯಷ್ಟೇ ಅದರ ನಿಪುಣನನ್ನು ಕರೆಸಿ ರಿಪೇರಿ ಮಾಡಿಸಿದ್ದರು. ಕ್ರಿಸ್ಮಸ್ ಹಬ್ಬದ ಪ್ರಮುಖ ಗೀತೆ ಗ್ಲೋರಿಯಾವನ್ನು ಹಾಡುವುದಕ್ಕೆ ಇಂಬಾಗಿ ಪೈಪ್ ಆರ್ಗನ್ ಹೊರಡಿಸುವ ಅಷ್ಟೈಶ್ವರ್ಯಭೋಗಭಾಗ್ಯಗಳ ಶ್ರೀಮಂತ ನಾದವನ್ನು ಕಲ್ಪಿಸಿಕೊಂಡು ಅವರು ಭಾವಪರವಶರಾದರು. ವೀಣಾವಾದಕನು ತನ್ನ ವೀಣೆಯನ್ನು ಮಾಣಿಕ್ಯದಂತೆ ನಲುಮೆಯಿಂದ ಸ್ಪರ್ಶಿಸಿ ಪರಮಾನಂದ ಪಡುವ ಹಾಗೆ ಫಾದರ್ ಮೋಹ್ರ್ ನವರು ಆರ್ಗನ್ನಿನ ಮೇಲೆ ನಿಧಾನವಾಗಿ ಕೈಯಾಡಿಸಿ ಪ್ರಸನ್ನರಾದರು.
ಪೈಪ್ ಆರ್ಗನ್ ಎಂಬುದು ಒಂದು ಗಾಳಿ ವಾದ್ಯ. ಹಿಂದೆಲ್ಲ ಅಡಿಗೆ ಮಾಡುವಾಗ ಸೌದೆ ಒಲೆಯಲ್ಲಿ ಬೆಂಕಿ ಪುಟಿದೇಳಿಸಲು ಅಮ್ಮ ಊದುಕೊಳವೆಯನ್ನು ಊದುವಾಗ ಒಂದು ರೀತಿಯ ನಾದ ಹೊರಹೊಮ್ಮುತ್ತಿದ್ದುದನ್ನು ನಾವು ಕುತೂಹಲದಿಂದ ಗಮನಿಸಿದ್ದೇವಲ್ಲವೇ? ಪಿಳ್ಳಂಗೋವಿ ಅಥವಾ ಕೊಳಲನ್ನು ತುಟಿಗೆ ಸಿಲುಕಿಸಿ ಊದುತ್ತಾ ಕೈಬೆರಳುಗಳನ್ನು ಅದರ ಒಡಲಿನ ರಂಧ್ರಗಳ ಮೇಲೆ ಲಾಸ್ಯವಾಡಿಸುತ್ತಾ ಬಗೆಬಗೆಯ ದನಿಗಳನ್ನು ಹೊರಡಿಸುತ್ತೇವಲ್ಲವೇ? ಚರ್ಮದ ಚೀಲವೊಂದಕ್ಕೆ ಉಸಿರೂದಿ ಹಿಗ್ಗಿಸಿ ಅದರ ಹೊರಮೈಯಿಂದ ಹೊರಟ ಹಲವು ರೀತಿಯ ತುತೂರಿಗಳನ್ನು ಒಮ್ಮೆಗೇ ನುಡಿಸುವ ಬ್ಯಾಗ್ ಪೈಪರುಗಳನ್ನು ಕೆಲ ಇಂಗ್ಲಿಷ್ ಸಿನಿಮಾಗಳಲ್ಲಿ ನೋಡಿದ್ದೇವಲ್ಲವೇ?
ಅದೇ ರೀತಿಯಲ್ಲಿ ಹಿತ್ತಾಳೆಯಲ್ಲಿ ಮಾಡಿದ ಹಲವಾರು ಬಗೆಯ ವಿವಿಧ ಗಾತ್ರದ ಕೊಳವೆಗಳನ್ನು ಆಳೆತ್ತರಕ್ಕೆ ನಿಲ್ಲಿಸಿ ಕುಲುಮೆಯ ತಿದಿಯಂತಹ ಗಾಳಿಚೀಲ ತುಂಬಿಸಿ ಹಿತ್ತಾಳೆಯ ಕೊಳವೆಗಳ ಮೂಲಕ ಸುನಾದ ಹೊರಡಿಸಿದರೆ ಇಡೀ ದೇವಾಲಯವೇ ಸಂಗೀತದ ರೋಮಾಂಚನದಲ್ಲಿ ಮಿಂದೇಳುತ್ತದೆ. ಬೆಂಗಳೂರಿನ ಸಂತ ಮಾರ್ಕನ ಕಥೀಡ್ರಲ್, ಮೈಸೂರಿನ ಸಂತ ಫಿಲೋಮಿನ ಕಥೀಡ್ರಲ್ ಗಳಿಗೆ ಹೋದಾಗ ಪೀಠಕ್ಕೆ ಎದುರಾಗಿ ಅಟ್ಟಣಿಗೆಯ ಮೇಲೆ ಪೈಪ್ ಆರ್ಗನ್ ವಿರಾಜಮಾನವಾಗಿರುವುದನ್ನು ನೋಡಬಹುದು
ಇರಲಿ ಈಗ ಮತ್ತೆ ಆಸ್ಟ್ರಿಯಾದ ಓಬೆರ್ನಡಾರ್ ಹಳ್ಳಿಯ ದೇವಾಲಯಕ್ಕೆ ಹೋಗೋಣ. ಫಾದರ್ ಜೋಸೆಫ್ ಮೋಹ್ರ್ ನವರು ಪೈಪ್ ಆರ್ಗನ್ನಿನ ಮುಂದೆ ತಮ್ಮ ಕುರ್ಚಿಯ ಮೇಲೆ ಕುಳಿತು ಆರ್ಗನ್ ಅನ್ನು ನುಡಿಸಲು ತೊಡಗಿದರು. ಅಯ್ಯೋ ಏನು ಹೇಳೋಣ! ಆರ್ಗನ್ನಿನ ಹಿತ್ತಾಳೆಯ ನಳಿಕೆಗಳು ಶಬ್ದವನ್ನೇ ಹೊರಡಿಸಲಿಲ್ಲ. ಕಾಲಿನಿಂದ ತಾವೆಷ್ಟು ಒತ್ತಿದರೂ ಗಾಳಿಯ ಚೀಲಗಳು ತುಂಬಿಕೊಳ್ಳದೇ ಪುಸ್ ಪುಸ್ ಎನ್ನುವುದನ್ನು ಕಂಡು ಫಾದರ್ ಮೋಹ್ರ್ ನವರು ವಿಪರೀತವಾಗಿ ಗಾಬರಿಗೊಂಡರು. ಏನಾಯ್ತಪ್ಪಾ ಎನ್ನುತ್ತಾ ಪರಿಶೀಲಿಸಿದಾಗ ತಿದಿಯನ್ನು ಇಲಿಗಳು ಕಡಿದು ಹರಿದು ಹಾಕಿರುವುದನ್ನು ನೋಡಿ ಒಮ್ಮೆಲೇ ಅವರು ಸೋತುಹೋದರು. ಕ್ರಿಸ್ಮಸ್ ನಡುರಾತ್ರಿಯ ಪೂಜೆಗೆ ವಾದ್ಯವಿಲ್ಲದೆ ಹಾಡುವುದಾದರೂ ಹೇಗೆ ಎಂಬ ಚಿಂತೆ ಮಡುಗಟ್ಟಿತು. ಡಿಸೆಂಬರಿನ ಕೊರೆವ ಚಳಿಯಲ್ಲೂ ಅವರ ಹಣೆಯ ಮೇಲೆ ಬೆವರು ಜಿನುಗಿತು. ಮ್ಲಾನವದನರಾಗಿ ಅವರು ಪೀಠದತ್ತ ದಿಟ್ಟಿಸಿದರು. ಶಿಲುಬೆಯ ಮೇಲಿನ ಯೇಸು ಅವರಿಗೆ ಸಾಂತ್ವನ ಹೇಳಿದಂತೆ ಭಾಸವಾಯಿತು. ಆರ್ಗನ್ ಇಲ್ಲದಿದ್ದರೇನು ಬೇರೆ ಪರ್ಯಾಯ ಮಾರ್ಗವಿದೆ ಎಂದು ನುಡಿದಂತಾಯಿತು.
ಫಾದರ್ ಮೋಹ್ರ್ ನವರು ಸ್ವಲ್ಪ ಹೊತ್ತಿನಲ್ಲೇ ಗಡಬಡಿಸಿ ಎದ್ದು ಸೈಕಲ್ಲೇರಿ ಪಕ್ಕದ ಊರಿನಲ್ಲಿದ್ದ ಶಾಲಾ ಶಿಕ್ಷಕ ಫ್ರಾಂಝ್ ಝೇವೆರ್ ಗ್ರುಬೇರ್ ನವರ ಮನೆಯತ್ತ ಧಾವಿಸಿದರು. ಗ್ರುಬೇರ್ ನವರು ಬರೀ ಮೇಷ್ಟರು ಮಾತ್ರವಲ್ಲ ಆರ್ಗನ್ ನಿಪುಣರೂ, ಗಾನವೃಂದದ ಮುಖ್ಯಸ್ಥರೂ ಆಗಿದ್ದರು. ಪ್ರೌಢವಯಸ್ಸಿನ ಅವರು ಕ್ಲಿಷ್ಟ ಸಂದರ್ಭಗಳಲ್ಲಿ ಸಲಹೆ ಪಡೆಯಬಹುದಾದ ನಂಬಿಗಸ್ಥ ನಿಸ್ಪೃಹ ವ್ಯಕ್ತಿಯಾಗಿದ್ದರು. ಫಾದರ್ ನವರು ಆಗಿರುವ ಅನಾಹುತವನ್ನು ಒಂದೆರಡು ಮಾತುಗಳಲ್ಲಿ ವಿವರಿಸಿದರು. ಕ್ರಿಸ್ತಜಯಂತಿಗಾಗಿ ಕೇವಲ ಕೆಲವೇ ಗಂಟೆಗಳಷ್ಟೇ ಉಳಿದಿವೆ, ತುರ್ತಾಗಿ ಏನಾದರೂ ಉಪಾಯ ಮಾಡಬೇಕು ಎನ್ನುತ್ತಾ ತಾವು ಒಂದೆರಡು ವರ್ಷಗಳ ಹಿಂದೆ ಎಂದೋ ಜರ್ಮನ್ ಭಾಷೆಯಲ್ಲಿ ಬರೆದಿಟ್ಟುಕೊಂಡಿದ್ದಸ್ಟೀಲ್ಲೆ ನಾಕ್ಟ್ ಹೈಳಿಗೆ ನಾಕ್ಟ್ಎಂಬ ಗೀತಸಾಹಿತ್ಯವನ್ನು ಗ್ರುಬೇರ್ ಮೇಷ್ಟ್ರ ಮುಂದಿಟ್ಟು ಅದನ್ನು ಗಿಟಾರ್ ವಾದ್ಯ ನುಡಿಸಿ ಹಾಡಲು ಅನುವಾಗುವಂತೆ ಸಂಗೀತ ಪ್ರಸ್ತಾರ ರಚಿಸಿಕೊಡಲು ದುಂಬಾಲು ಬಿದ್ದರು. ಮೇಷ್ಟ್ರು ಹಾಡಿನತ್ತ ಕಣ್ಣಾಡಿಸುತ್ತಾ ಗಿಟಾರು ಕೈಗೆತ್ತಿಕೊಂಡು ಯಾವುದೋ ಒಂದು ರಾಗವನ್ನು ಗುನುಗಿದರು. ಏನಾಶ್ಚರ್ಯ! ಕಾಗದದ ತುಣುಕಿನ ಮೇಲಿದ್ದ ಪದಗಳು ಒಮ್ಮೆಲೇ ಸುಭಗ ಸುಲಲಿತವಾಗಿ ಲೋಕಾದ್ವಿತೀಯ ಹಾಡಾಗಿ ಮೂಡಿಬಂತು. ಗಿಟಾರ್ ನುಡಿಸುತ್ತಾ ಅವರು ಮೈಮರೆತು ಎದೆ ತುಂಬಿ ಹಾಡುತ್ತಿದ್ದರೆ ಇತ್ತ ಫಾದರ್ ಮೋಹ್ರ್ ನವರ ಜನ್ಮ ಪಾವನವೆಂಬಂತೆ ಕಂಗಳು ತುಂಬಿ ಬಂದವು.
ಅದೇ ರಾತ್ರಿ ಸೇಂಟ್ ನಿಕೊಲಾ ದೇಗುಲದಲ್ಲಿ ಕ್ರಿಸ್ಮಸ್ ಆಚರಣೆಗಾಗಿ ಸೇರಿದ್ದ ಜನರೆಲ್ಲರೂ ಹಾಡನ್ನು ಮನದುಂಬಿ ಹಾಡಿ ಪುನೀತರಾದರು. ಪೂಜೆ ಮುಗಿದ ಮೇಲೆ ಒಬ್ಬರಿಗೊಬ್ಬರು ಕ್ರಿಸ್ತಜಯಂತಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಅಂಥ ಹಾಡನ್ನು ತಾವೆಂದೂ ಮರೆಯಲಾರೆವು ಎಂದು ಮತ್ತೊಮ್ಮೆ ಮತ್ತೊಮ್ಮೆ ಗುನುಗಿದರು. ಅವರ ಕನಸುಗಳಲ್ಲೂ ಅದೇ ಹಂಸಗಾನ ಮತ್ತೆ ಮತ್ತೆ ಮಾರ್ದನಿಸಿ ಕಿನ್ನರ ಲೋಕವನ್ನೇ ತೆರೆಯಿತು. ಎಷ್ಟೋ ದಿನಗಳವರೆಗೆ ಮಕ್ಕಳು ಮುದುಕರೆನ್ನದೆ ಎಲ್ಲರೂ ಹಾಡನ್ನು ಮೆಲುಕು ಹಾಕಿದ್ದೇ ಹಾಕಿದ್ದು.
ಪಲ್ಲವಿಯೊಂದಿಗೆ ಆರು ಚರಣಗಳ ಮೃದು ಮಧುರ ಮಂಜುಳಗಾನ ವರ್ಷಾನುಗಾಲ ಕ್ರಿಸ್ಮಸ್ ಸಂದರ್ಭದಲ್ಲಿ ಇಡೀ ಯುರೋಪ್ ಖಂಡದ ಎಲ್ಲ ಊರು ನಗರ ಕೇರಿಗಳ ದಟ್ಟಾರಣ್ಯದ ಗುಡ್ಡ ಕಣಿವೆಗಳ ಸಮುದ್ರ ಕಿನಾರೆಗಳ ಪುಟ್ಟ ಮಂದಿರಳಲ್ಲಿ ಹಾಗೂ ದಿವ್ಯ ಭವ್ಯ  ಆಲಯಗಳಲ್ಲಿ ಪದೇ ಪದೇ ಸುಶ್ರಾವ್ಯವಾಗಿ ತೇಲಿ ಭಾವದೀಪ್ತಿಗಳನ್ನು ಬೆಳಗಿತು.  ಸುಮಾರು ೧೮೩೫ರಲ್ಲಿ ಮಧುರನಿನಾದ ಇಂಗ್ಲೀಷಿಗೆ ತರ್ಜುಮೆಯಾಗಿ ಅಮೆರಿಕವನ್ನು ಪ್ರವೇಶಿಸಿದಾಗ ಅಮೆರಿಕದಾದ್ಯಂತ ಜನ ಹುಚ್ಚೆದ್ದು ಕುಣಿದರು.
ಹೀಗೇ ಸುಮಾರು ಒಂದು ನೂರು ವರ್ಷಗಳೇ ಕಳೆದವು. ೧೯೧೪ ನವೆಂಬರ್, ಪ್ರಪಂಚದ ಮೊದಲ ಮಹಾಯುದ್ಧ ಪ್ರಾರಂಭವಾಗಿ ಐದು ತಿಂಗಳಾಗಿತ್ತು. ಜರ್ಮನ್ ಪಡೆಗಳು ಯೂರೋಪಿನ ಬಹುಭಾಗವನ್ನು ಆಕ್ರಮಿಸಿ ಪ್ಯಾರಿಸ್ಸಿನ ಹೊರ ವಲಯದವರೆಗೂ ಬಂದು ಬೀಡು ಬಿಟ್ಟಿದ್ದರು. ಫ್ರೆಂಚ್ ಮತ್ತು ಬ್ರಿಟಿಷ್ ಪಡೆಗಳು ಜಂಟಿಯಾಗಿ ಜರ್ಮನ್ ಸೈನ್ಯವನ್ನು ಎದುರಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದರು. ಎರಡೂ ಸೈನ್ಯಗಳ ನಡುವೆ ಬಟಾಬಯಲು ಇತ್ತು. ಗುಂಡಿನ ಫಿರಂಗಿಗಳ ಚಕಮಕಿ ನಿರಂತರವಾಗಿತ್ತು. ಸೈನಿಕರು ತಮ್ಮನ್ನು ಕಾಪಾಡಿಕೊಳ್ಳಲು ಟ್ರೆಂಚ್ ಅಂದರೆ ಕಂದಕಗಳನ್ನು ಅಗೆದು ಅದರಲ್ಲಡಗಿ ಶತ್ರುಗಳ ಕಡೆಗೆ ಬಂದೂಕು ಮುಖ ಮಾಡಿದ್ದರು. ಯಾರೊಬ್ಬರು ತಲೆಯೆತ್ತಿ ನೋಡಿದರೂ ಯದ್ವಾತದ್ವಾ ಹಾರಿಬರುವ ಗುಂಡಿಗೆ ಬಲಿಯಾಗುವುದು ಶತಸ್ಸಿದ್ಧವಾಗಿತ್ತು. ಕ್ರಿಸ್ಮಸ್ ಹತ್ತಿರವಾಗುತ್ತಿದ್ದರೂ ಯುದ್ಧ ಮುಗಿಯುವ ಸೂಚನೆಗಳೇ ಕಾಣುತ್ತಿರಲಿಲ್ಲ. ನಿಲ್ಲದ ಯುದ್ಧದಿಂದ ಬೇಸತ್ತ ಬ್ರಿಟಿಷ್ ಯೋಧರ ಮಡದಿಯರು ೧೦೧ ಸಹಿಗಳೊಂದಿಗೆ ಜರ್ಮನ್ ಯೋಧರ ಹೆಂಡತಿಯರಿಗೆ ಒಂದು ಬಹಿರಂಗ ಪತ್ರ ಬರೆದರು. ಕ್ರಿಸ್ಮಸ್ಸಿಗಾದರೂ ಗಂಡಂದಿರು ಮನೆಗೆ ಒಂದು ಹೋಗಲಿ ಎಂದು.
ಡಿಸೆಂಬರ್ ಏಳನೇ ತಾರೀಕು, ಜಗದ್ಗುರುಗಳಾಗಿದ್ದ ಪೋಪ್ ಹದಿನೈದನೇ ಆಶೀರ್ವಾದಪ್ಪನವರುಕೊನೇಪಕ್ಷ ಸಮ್ಮನಸ್ಸುಗಳು ಹಾಡುವ ಕ್ರಿಸ್ಮಸ್ ರಾತ್ರಿಯಲ್ಲಾದರೂ ಬಂದೂಕುಗಳನ್ನು ಕೆಳಗಿಳಿಸಬೇಕುಎಂದು ಮನವಿ ಮಾಡಿದರು. ಎರಡೂ ಮನವಿಗಳನ್ನು ಸೇನಾಪಡೆಯ ಮುಖ್ಯಸ್ಥರು ತಿರಸ್ಕರಿಸಿದರು. ಉಭಯ ಬಣದ ಸೈನಿಕರ ಮನಗಳಲ್ಲಿ ತಲ್ಲಣ ಮನೆ ಮಾಡಿತು.
ಡಿಸೆಂಬರ್ ೨೪, ಸೈನಿಕರು ತಮ್ಮ ಕಂದಕಗಳಲ್ಲೇ ಕ್ರಿಸ್ಮಸ್ ಸಿದ್ಧತೆಗೆ ತೊಡಗಿದರು. ಅವರಲ್ಲಿ ಎಷ್ಟೋ ಮಂದಿ ಇನ್ನೂ ಹದಿನೆಂಟು ತುಂಬದ ಚಿಗುರು ಮೀಸೆಯ ಹುಡುಗರು. ಕ್ರಿಸ್ಮಸ್ ಆಚರಣೆಗೆ ಸಂಜೆಯೇ ಚರ್ಚುಗಳಿಗೆ ತೆರಳಿ ಅಪ್ಪ ಅಮ್ಮ ಬಂಧು ಬಾಂಧವರೊಂದಿಗೆ ಗೆಳೆಯ ಗೆಳತಿಯರೊಂದಿಗೆ ಕ್ರಿಸ್ತಜಯಂತಿಯ ಹಾಡು ಭಜನೆಗಳನ್ನು ಹಾಡಿ ಬಿಸುಪಾದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದ ಮಧುರ ನೆನಪುಗಳು ಅವರಲ್ಲಿ ಕಾಡಿದವು. ಕಂದಕಗಳ ಆಚೀಚೆ ಬೆಳೆದಿದ್ದ ಸಸಿಪೊದೆಗಳನ್ನು ತಂದು ಅಲಂಕಾರ ಮಾಡಿದರು. ತಮ್ಮಲ್ಲಿದ್ದ ಬಣ್ಣದ ಪುಡಿಗಳಿಂದ ರಂಗೋಲಿ ಬರೆದರು. ರಾತ್ರಿಯಾಗುತ್ತಿದ್ದಂತೆ ಕಂದಕಗಳ ಹೊರಗೆ ಮೇಣದ ಬತ್ತಿಗಳನ್ನು ಹಚ್ಚಿದರು. ಅಧಿಕೃತವಾಗಿ ಕದನವಿರಾಮ ಘೋಷಣೆ ಆಗಿರಲಿಲ್ಲ. ಯಾವ ಸಮಯದಲ್ಲಾದರೂ ಬಂದೂಕುಗಳು ಗರ್ಜಿಸಬಹುದಿತ್ತು.
ನಡುರಾತ್ರಿ ಸಮೀಪಿಸಿತು. ಎಲ್ಲೆಡೆ ನೀರವ. ಹುಳುಹುಪ್ಪಟೆಗಳ ಗುಂಗಿನಾದ ಕೇಳಿಸುತ್ತಿಲ್ಲ, ತಂಬೆಲರಿನ ಸದ್ದೂ ಇಲ್ಲ. ಜರ್ಮನ್ ಪಡೆಯ ಕಡೆಯಿಂದ ಒಬ್ಬ ಧೀರದಿಟ್ಟ ಸೈನಿಕನೊಬ್ಬ ತನ್ನ ಎಲ್ಲ ಧೈರ್ಯವನ್ನೂ ಒಟ್ಟುಗೂಡಿಸಿ ತಲೆ ಮೇಲೆತ್ತಿದ. ಗಟ್ಟಿದನಿಯಿಂದ ಅಷ್ಟೇ ಸ್ಪಷ್ಟತೆಯಿಂದ ತನ್ನ ಜರ್ಮನ್ ಭಾಷೆಯಲ್ಲಿಸ್ಟೀಲ್ಲೆ ನಾಕ್ಟ್ ಹೈಳಿಗೆ ನಾಕ್ಟ್ಎಂದು ಭಾವಪೂರಿತವಾಗಿ ಹಾಡಿದ. ಕತ್ತಲ ನೀರವ ವಾತಾವರಣದ ನಡುವೆ ಮೆಲುಗಾಳಿಯ ಅಲೆಅಲೆಯಲ್ಲಿ ಅವನ ಹಾಡು ಸ್ಪಟಿಕಸ್ಪಷ್ಟವಾಗಿ ನಿನದಿಸಿತು. ಅರೆಕ್ಷಣದ ಮೌನವನ್ನು ಮುರಿದು ಬ್ರಿಟಿಷ್ ಪಡೆಯ ಕಡೆಯಿಂದಆಲ್ ಈಸ್ ಕಾಮ್ ಆಲ್ ಈಸ್ ಬ್ರೈಟ್ಎಂಬ ಉತ್ತರ ಅದೇ ರಾಗದಲ್ಲಿ ಬಂತು. ಜರ್ಮನ್ ಪಡೆಯ ಸೈನಿಕರು ಒಕ್ಕೊರಲಿನಿಂದಹ್ಯಾಪೀ ಕ್ರಿಸ್ಮಸ್ಎಂದು ಕೂಗಿದರು. ತಕ್ಷಣವೇ ವಿರೋಧಿ ಬಣದ ಎಲ್ಲ ಸೈನಿಕರು ದನಿಗೂಡಿಸಿಮೆರ್ರಿ ಕ್ರಿಸ್ಮಸ್ಎಂದರು. ಇದುವರೆಗೆ ಕತ್ತಲಾಗಿದ್ದ ಬ್ರಿಟಿಷ್ ಫ್ರೆಂಚ್ ಪಡೆಗಳ ಕಂದಕಗಳುದ್ದಕ್ಕೂ ಸಾವಿರಾರು ಮೇಣದಬತ್ತಿಗಳು  ಒಮ್ಮಿಂದೊಮ್ಮೆಲೇ ಜಗ್ಗೆಂದು ಹತ್ತಿಕೊಂಡವು. ಅಲ್ಲಿಯತನಕ ಬಂದೂಕುಗಳೇ ಬೆಂಕಿ ಕಾರುತ್ತಿದ್ದ ರಣರಂಗದಲ್ಲಿ ಶತ್ರುಮಿತ್ರರೆನ್ನದೆ ಎರಡೂ ಕಡೆ ಮೈಲುಗಟ್ಟಲೇ ಸಾಲುಸಾಲಾಗಿ ಕ್ಯಾಂಡಲ್ಲುಗಳ ಪ್ರಶಾಂತ ಜ್ಯೋತಿ ನರ್ತಿಸಿ ಅದೊಂದು ಅಭೂತಪೂರ್ವ ರಾತ್ರಿಯೆನಿಸಿತು.
ಎರಡೂ ಬದಿಯ ಯೋಧರು ಕಂದಕಗಳಿಂದ ಮೇಲಕ್ಕೆ ಜಿಗಿದು ಬಂದು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಕ್ರಿಸ್ಮಸ್ ಶುಭಾಶಯಗಳನ್ನು ಹಂಚಿಕೊಂಡರು. ಉಡುಗೊರೆಯಾಗಿ ಕಾಗದ, ಪೆನ್ನು, ಬಣ್ಣದಪೆನ್ಸಿಲ್ಲು, ಸಿಗರೇಟು, ಮದ್ಯಬಾಟಲಿಗಳು ವಿನಿಮಯವಾದವು. ಇವರ ಟೋಪಿಯನ್ನು ಅವರು ತೊಟ್ಟು, ಅವರ ಟೋಪಿಯನ್ನು ಇವರು ತೊಟ್ಟು ಸಂಭ್ರಮಿಸಿದರು. ಎಲ್ಲರೂ ತಂತಮ್ಮ ಕ್ರಿಸ್ಮಸ್ ಹಾಡುಗಳನ್ನು ಹಾಡಿ ಬೆಂಕಿಯ ಸುತ್ತ ಕುಣಿದರು. ಎರಡೂ ಕಡೆಯ ಸೇನಾಮುಖ್ಯಸ್ಥರು ಎದುರುಬದುರಾಗಿ ಪರಸ್ಪರ ಕೈಕುಲುಕಿದರು. ಶಾಂತಿ ಹಂಚೋಣದ ಗುರುತಾಗಿ ಇವರ ಕೋಟಿನ ಎರಡು ಗುಂಡಿಗಳನ್ನು ಕಿತ್ತು ಅವರ ಕೈಗಿತ್ತರು, ಅದೇ ರೀತಿ ಅವರೂ ತಮ್ಮ ಗುಂಡಿಗಳನ್ನು ಕಿತ್ತು ಇವರ ಕಿಸೆಯಲ್ಲಿ ಹಾಕಿದರು. ಅದೊಂದು ಮರೆಯಲಾಗದ ಅತ್ಯಂತ ಭಾವುಕ ದೃಶ್ಯವಾಗಿತ್ತು.
ಡಿಸೆಂಬರ್ ೨೫, ಪಡ್ಡೆ ಸೈನಿಕನೊಬ್ಬ ತನ್ನ ತಾಯಿಗೆ ಪತ್ರ ಬರೆಯುತ್ತಾನೆ. ’ಪ್ರೀತಿಯ ಅಮ್ಮಾ, ಈಗ ಹಗಲು ಹನ್ನೊಂದು ಗಂಟೆ, ನಾನೀಗ ಕಂದಕದಲ್ಲಿದ್ದೇನೆ. ನನ್ನ ಪಕ್ಕದಲ್ಲಿರುವ ಬೆಂಕಿಯ ಕೆಂಡ ನನ್ನನ್ನು ಬೆಚ್ಚಗಿಟ್ಟಿದೆ. ವಾತಾವರಣ ನಿಜವಾಗಿಯೂ ತಣ್ಣಗಿದೆ. ಅಮ್ಮಾ ನನ್ನ ಬಾಯಲ್ಲಿ ಪೈಪ್ ಇದೆ, ರಾಜಕುಮಾರಿಯವರು ಉಡುಗೊರೆಯಾಗಿ ಕೊಟ್ಟ ಪೈಪ್, ಅಮ್ಮಾ ಇದರಲ್ಲೇನಿದೆ ಗೊತ್ತಾ? ಹಹ್ಹ ತಂಬಾಕಲ್ಲದೆ ಇನ್ನೇನಿರುತ್ತೆ ಅನ್ತೀಯಲ್ವಾ! ತಂಬಾಕಿದೆಯಮ್ಮ ನಿಜ, ಆದರೆ ಇದು ಜರ್ಮನ್ ಸೈನಿಕನ ತಂಬಾಕು. ಅವನನ್ನು ಹೊಡೆದುರುಳಿಸಿ ಅವರ ತಂಬಾಕನ್ನು ಕಿತ್ತುಕೊಂಡಿದ್ದೇನೆ ಅಂದುಕೋಬೇಡಮ್ಮ, ಇದು ಅವನೇ ನನಗೆ ಕೊಟ್ಟನಮ್ಮ, ನಿನ್ನೆ ರಾತ್ರಿ ಏನಾಯ್ತು ಗೊತ್ತೇನಮ್ಮಾ, ಕೇಳಿದರೆ ನೀನು ನಂಬೋದೇ ಇಲ್ಲ . . .’
ಒಂದು ಅಘೋಷಿತ ಯುದ್ಧವಿರಾಮವು ಜನವರಿ ಒಂದರವರೆಗೂ ಮುಂದುವರಿಯಿತು. ರಣಾಂಗಣದಲ್ಲಿ ಗಾಯಗೊಂಡು ನರಳುತ್ತಿದ್ದ ಸೈನಿಕರಿಗೆ ಸಾಂತ್ವನದ ಉಪಚಾರ ದೊರೆಯಿತು. ಸೆರೆಯಲ್ಲಿದ್ದ ಶತ್ರುಸೈನಿಕರನ್ನು ಗೌರವಪೂರ್ವಕವಾಗಿ ಮರಳಿಸಲಾಯಿತು. ವೀರಮರಣವಪ್ಪಿ ಅನಾಥವಾಗಿ ಬಿದ್ದದ್ದ ಶವಗಳನ್ನು ಎರಡೂ ಬಣಗಳವರು ಧಾರ್ಮಿಕ ವಿಧಿಯನುಸಾರ ಸಾಮೂಹಿಕ ಅಂತ್ಯಕ್ರಿಯೆ ನಡೆಸಿ ಗೌರವ ಸಲ್ಲಿಸಿದರು. ಕ್ರಿಸ್ಮಸ್ ಸೌಹಾರ್ದದ ಸಂಕೇತವಾಗಿ ಎರಡೂ ಪಡೆಗಳ ನಡುವೆ ಕಾಲ್ಚೆಂಡಾಟವೂ ನಡೆಯಿತು. ಅದೊಂದು ಅವಿಸ್ಮರಣೀಯ ಆಟ.
ಹೀಗೆ ಒಂದು ಮಹಾಯುದ್ಧವನ್ನು ತಾತ್ಕಾಲಿಕವಾಗಿಯಾದರೂ ಶಮನಗೊಳಿಸಿದ ಹೆಗ್ಗಳಿಗೆ ಸೈಲೆಂಟ್ ನೈಟ್ಹಾಡಿಗಿದೆ. ಇದಾದನಂತರ ಹಾಡಿನ ಕಂಪು ಪ್ರಪಂಚದ ಉದ್ದಗಲಕ್ಕೂ ಹರಡಿತು. ಎಲ್ಲ ಆರ್ಕೆಸ್ಟ್ರಾಗಳ ಆಲ್ಬಮ್ಮುಗಳಲ್ಲಿ ರಾಗ ಅನಿವಾರ್ಯವೆಂಬಂತೆ ತಾಣವಡೆಯಿತು.
೧೮೧೮ರಿಂದ ೨೦೧೮, ರಾಗ ಸಂಯೋಜನೆಗೊಂಡು ಇನ್ನೂರು ವರ್ಷಗಳಾಗಿವೆ. ಜಗತ್ತಿನ ಮುನ್ನೂರು ಭಾಷೆ ಉಪಭಾಷೆಗಳಿಗೆ ಹಾಡು ಅನುವಾದವಾಗಿ ಮೂಲ ರಾಗದೊಂದಿಗೆ ಸಹೃದಯತೆಯಿಂದ ಮಿಳಿತವಾಗಿದೆ. ಇಂದು ಹಾಡಲಾಗುವ ಹಾಡು ಮೂಲ ಗ್ರುಬೆರನ ರಾಗವನ್ನೇ ಹೋಲುವುದಾದರೂ ಕೊನೆಯ ಚರಣ ಮಾತ್ರ ಸ್ವಲ್ಪ ವ್ಯತ್ಯಸ್ತವಾಗಿ ತೋರುವುದುಂಟು. ಅದೇನೆಂದರೆ ಗ್ರುಬೆರನು ಮೂಲದಲ್ಲಿ ಕೊನೆಯ ಚರಣವನ್ನು ತ್ರಿಪುಟ ತಾಳದಲ್ಲಿ ರಚಿಸಿ ಉತ್ಕರ್ಷ ನೀಡಿದ್ದರೆ ಈಗಿನ ರಾಗದಲ್ಲಿ ಕೊನೆಯ ಚರಣವು ಮೊದಲಿನ ಚರಣಗಳಂತೆಯೇ ನಿಧಾನಗತಿಯ ಆಲಾಪನೆಯನ್ನು ಹೊಂದಿದೆ. ಸವಿಗಾನವು ಇಂದಿಗೂ ಕಾಲ ದೇಶ ಸಂಸ್ಕೃತಿ ಧರ್ಮಗಳನ್ನು ಮೀರಿ ಕೇಳಿದವರ ಸುಪ್ತ ಭಾವನೆಗಳನ್ನು ಪುಟಿದೆಬ್ಬಿಸಿ ಸಾಂತ್ವನವನ್ನೂ ಭರವಸೆಯನ್ನೂ ಮನೋಲ್ಲಾಸವನ್ನೂ ಪಡಿಮೂಡಿಸುತ್ತಿದೆ.
ಮೊತ್ತಮೊದಲು ಹಾಡನ್ನು ಹಾಡಿದ ಸಂತ ನಿಕೊಲಾ ಚರ್ಚು ಇಂದು ವಿಶ್ವಸಂಸ್ಥೆಯಿಂದವಿಶ್ವಪರಂಪರೆಯ ತಾಣಎಂದು ಮಾನ್ಯತೆ ಪಡೆದಿದೆ. ಜರ್ಮನಿಗೆ ಹೋದವರಾರೂ ಸೈಲೆಂಟ್ ನೈಟ್ ಚರ್ಚನ್ನು ನೋಡದೇ ಹಿಂದಿರುಗುವುದಿಲ್ಲ. ಪ್ರತಿವರ್ಷ ಕ್ರಿಸ್ಮಸ್ ಮುನ್ನಾದಿನ ಅಂದರೆ ಡಿಸೆಂಬರ್ ೨೪ರ ಸಂಜೆ ಐದು ಗಂಟೆಗೆ ವಿಶ್ವದೆಲ್ಲೆಡೆಯ ಪ್ರಸಿದ್ಧ ಗಾಯಕರು ಆಹ್ವಾನಿತರಾಗಿ ಇಲ್ಲಿನ ಗ್ರುಬೇರ್ ಸಮಾಧಿಯ ಮುಂದೆ ಸಮೂಹಗಾನದೊಂದಿಗೆ ಗ್ರುಬೇರನ ಆತ್ಮಕ್ಕೆ ಗೌರವ ಸಲ್ಲಿಸುತ್ತಾರೆ. ರಾತ್ರಿ ಕ್ರಿಸ್ಮಸ್ ಆಚರಣೆಯಲ್ಲಿ ಚರ್ಚಿನ ಪೈಪ್ ಆರ್ಗನ್ ನಾದದೊಂದಿಗೆ ಹಾಡನ್ನು ಗಾನವೃಂದವು ಹಾಡುವಾಗ ಭಕ್ತಾದಿಗಳು ಮಾತ್ರವಲ್ಲ ಅಲ್ಲಿಗೆ ಭೇಟಿಕೊಟ್ಟ ಎಲ್ಲರೂ ರಸಾರ್ದ್ರಲೋಕದಲ್ಲಿ ಮಿಂದು ಪುಳಕಿತರಾಗುತ್ತಾರೆ.
ಸೈಲೆಂಟ್ ನೈಟ್ ಹಾಡು ಕನ್ನಡದಲ್ಲಿಲ್ಲವೇ ಎಂಬ ಕುತೂಹಲ ನಿಮಗಿದೆಯೇ? ಐದು ದಶಕಗಳ ಹಿಂದೆ ಶ್ರೀಮತಿ ಸರಳಾ ಬ್ಲೇರ್ ನವರು ಹಾಡಿನ ಎರಡು ಚರಣಗಳನ್ನು ಕನ್ನಡಕ್ಕೆ ತಂದಿದ್ದಾರೆ. ಬನ್ನಿ, ಅವರೊಂದಿಗೆ ಸೇರಿ ನಾವೂ ಹಾಡೋಣ;
ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಮ್ ಚತ್ರದಿ
ವರಕನ್ಯೆಯಲಿ ಜನಿಸಿದ
ದೇವಪುತ್ರನಂ ವಂದಿಸುವ
ವಂದನೆ ರಕ್ಷಕನೇ ವಂದನೆ ರಕ್ಷಕನೇ

ಮಂಗಳಶ್ರೀ ರಾತ್ರಿಯಲಿ ದೂತರು ಹೊಲದಿ
ಹಿಂಡುಕಾಯುವ ಕುರುಬರ್ಗೆ
ತಂದ ವಾರ್ತೆಯು ಶ್ರೇಷ್ಠವೇ
ಸ್ವಾಗತ ರಕ್ಷಕನೇ ಸ್ವಾಗತ ರಕ್ಷಕನೇ