ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ
ತೊಡಗಿಸಿಕೊಂಡಿದ್ದ ಮಿಶನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ
ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು,
ಅಂದಿನ ಸಾಮಾಜಿಕ ಪರಿಸ್ಥಿತಿ,
ಸಮಕಾಲೀನ ರಾಜಾಳ್ವಿಕೆಗಳು,
ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ
ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಮಿಶನರಿಗಳು ಅವುಗಳನ್ನೆಲ್ಲ ಅಧ್ಯಯನ
ಮಾಡಿ ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ತಾವು ಆ ವರ್ಷ ಎಷ್ಟು ಜನರಿಗೆ
ಕ್ರೈಸ್ತದೀಕ್ಷೆ ನೀಡಿದರೆಂಬುದರ ಲೆಕ್ಕ ಹೇಳಬೇಕಿತ್ತು. ಇದರೊಂದಿಗೆ ಧರ್ಮಪ್ರಚಾರಕಾರ್ಯದಲ್ಲಿ ಅವರು
ಅನುಭವಿಸುತ್ತಿರುವ ಕಷ್ಟಸಂಕಟ ಯಾತನೆಗಳ ಚಿತ್ರಣವೂ ಇರುತ್ತಿತ್ತು.
ಚೆಸ್ವಿತ್ ಪತ್ರಗಳು ಎನಿಸಿಕೊಳ್ಳುವ ಈ ವಾರ್ಷಿಕ
ವರದಿಗಳನ್ನು ಕ್ರಿಸ್ತಶಕ ೧೬೪೦ ರಿಂದ ೧೭೫೦ ಅವಧಿಯವಾಗಿದ್ದು ಲತೀನ್, ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿವೆ.
ಇಂದಿಗೂ ಈ ವರದಿಗಳನ್ನು ಕ್ರೈಸ್ತ ಜಗದ್ಗುರುಪೀಠವಿರುವ ವ್ಯಾಟಿಕನ್ನಿನ ಗ್ರೆಗರಿಯನ್ ವಿಶ್ವವಿದ್ಯಾಲಯದ
ಪತ್ರಾಗಾರದಲ್ಲಿ ಸಂಗ್ರಹಿಸಿಡಲಾಗಿದೆ.
ಜೆಸ್ವಿತ್ ಪತ್ರಗಳನ್ನು ಇತಿಹಾಸಾಧ್ಯಯನದ
ದೃಷ್ಟಿಯಿಂದ ಅವಲೋಕಿಸಿದರೆ ರಾಜರುಗಳ ಪೂರ್ವೋತ್ತರಗಳ ಕುರಿತ ವರದಿಗಳು ಕರ್ನಾಟಕದ ಇತಿಹಾಸದ ಪುನರ್
ರಚನೆಗೆ ಕಾರಣವಾಗಿವೆ ಎಂದು ಘಂಟಾಘೋಷವಾಗಿ ಹೇಳಬಹುದು. ನಮ್ಮ ದೇಶದ ಪ್ರಾಚೀನ ಇತಿಹಾಸದ ದಾಖಲಿಸುವ
ಸಂದರ್ಭದಲ್ಲಿ ಸ್ಥಳೀಯ ಬರಹಗಾರನಿಗೆ ತನ್ನೊಡೆಯನ ಉಪ್ಪಿನ ಋಣವೇ ಭಾರವಾಗುವುದರಿಂದ ಆತ ಒಡೆಯನ ಉನ್ನತಿಯ
ವಿಷಯಗಳನ್ನಷ್ಟೇ ದಾಖಲಿಸುತ್ತಾನೆ, ಅವನತಿಯ ವಿಷಯಗಳನ್ನು ಮರೆಮಾಚುತ್ತಾನೆ.
ಆದ್ದರಿಂದ ನಮ್ಮ ದೇಶದ ಚರಿತ್ರೆಯನ್ನು ಪುನರ್
ನಿರೂಪಿಸುವಾಗ ನಮ್ಮ ನಾಡಿನ ಆಕರಗಳು ಪೂರ್ಣ ನ್ಯಾಯ ಒದಗಿಸುವುದಿಲ್ಲ. ಆದರೆ ವಿದೇಶೀ ವ್ಯಕ್ತಿಗೆ ಈ
ಹಂಗು ಇರುವುದಿಲ್ಲವಾದ್ದರಿಂದ ಆತ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ದಾಖಲಿಸುತ್ತಾನೆ. ಈ ಒಂದು ದೃಷ್ಟಿಯಿಂದ
ಜೆಸ್ವಿತ್ ಪತ್ರಗಳ ಬೆಳಕಲ್ಲಿ ನಮಗೆ ನಮ್ಮ ನಾಡಿನ ಇತಿಹಾಸದ ಸ್ಪಷ್ಟ ದೃಶ್ಯಗಳು ಕಾಣತೊಡಗುತ್ತವೆ.
ಕ್ರಿಸ್ತಶಕ ೧೭೫೬ರ ಒಂದು ಜೆಸ್ವಿತ್ ಪತ್ರದ
ಮೂಸೆಯಲ್ಲಿ ನೋಡಿದಾಗ ಹೈದರನು ಒಬ್ಬ ರಾಜಕೀಯ ಮುತ್ಸದ್ದಿಯಾಗಿರಲಿಲ್ಲ, ಅವನ ರಣತಂತ್ರ ನಡೆನುಡಿ ಎಲ್ಲವೂ ಕುಲೀನ
ಧೀಮಂತಿಕೆಯಿಲ್ಲದ, ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ದುರುಳ ದುಂಡಾವರ್ತಿಯ ’ಗೂಂಡಾ’ / ’ರೌಡಿ’ತನವಾಗಿತ್ತೆಂದು ತಿಳಿಯಬಹುದಾಗಿದೆ.
ಕ್ರಿಸ್ತಶಕ ೧೭೨೨ರಲ್ಲಿ ಬೂದಿಕೋಟೆಯಲ್ಲಿ
ಜನಿಸಿದ ಹೈದರ್‌ಅಲಿಯು ೧೭೪೯ರಲ್ಲಿನ ದೇವನಹಳ್ಳಿ ಮುತ್ತಿಗೆ ಸಂದರ್ಭದಲ್ಲಿ ಸಮರ್ಥ ರಾಹುತನಾಗಿ ಗುರುತಿಸಿಕೊಂಡ.
ಅವನ ಧೈರ್ಯಶಾಲಿ ಮುನ್ನುಗ್ಗುವಿಕೆಯನ್ನು ಕಂಡ ಸೇನಾಪತಿಯು ಆತನನ್ನು ೫೦ ರಾಹುತರ ಹಾಗೂ ೨೦೦೦ ಪದಾತಿ
ಸೈನಿಕರ ಮುಖಂಡನನ್ನಾಗಿ ನೇಮಿಸಿದ. ಹೀಗೆ ದೇವನಹಳ್ಳಿಯು ಮೈಸೂರು ದೇಶದ ಪೂರ್ವದಂಚಿನ ದುರ್ಗವಾಯಿತು.
ದೇವನಹಳ್ಳಿಯಿಂದ ಹಿಡಿದು ಪೂರ್ವಕರಾವಳಿಯವರೆಗಿನ ಪ್ರದೇಶವನ್ನು ಕರ್ನಾಟಕ ರಾಜ್ಯಾಧೀಶರು ವಿಜಯನಗರದಿಂದ
ಆಳುತ್ತಿದ್ದರು. ಈ ಕರ್ನಾಟಕ ಪ್ರಾಂತ್ಯದ ಮೇಲೆ ಸ್ವಾಮ್ಯ ಸಾಧಿಸಲು ಇಂಗ್ಲಿಷರು ಹಾಗೂ ಫ್ರೆಂಚರು ಪೈಪೋಟಿ
ನಡೆಸಿದ್ದರು. ಹೀಗೆ ಅವರಿಬ್ಬರಿಗೆ ಯುದ್ಧ ಸಂಭವಿಸಿದಾಗ ಅವರ ಪೂರೈಕೆ ದಳದ ಮೇಲೆ ಬಿದ್ದ ಹೈದರ್ ಎರಡು
ಒಂಟೆಗಳ ಹೇರಿನಷ್ಟು ಚಿನ್ನದ ನಾಣ್ಯ, ೫೦೦ ಕುದುರೆಗಳು ಹಾಗೂ ೫೦೦ ಹೇರುಗಳನ್ನು ದೋಚಿ ದೇವನಹಳ್ಳಿಗೆ ಸಾಗಿಸಿದ.
ಈ ಕಳವಿನ ಮಾಲಿಗಾಗಿ ದೊರೆಗಳಿಂದ ಮೆಚ್ಚುಗೆಯನ್ನೂ ಪಡೆದ.
ತಿರುಚಿನಾಪಳ್ಳಿ ವಶವಾದ ನಂತರ ಅವನನ್ನು
ದಿಂಡಿಗಲ್ ಕೋಟೆಯ ಸೇನಾಪತಿಯಾಗಿ ನೇಮಿಸಲಾಯಿತು. ಲೂಟಿಗಳಲ್ಲಿ ಮುಂದುವರಿದ ಆತ ೧೫೦೦ ಕುದುರೆ,
೩೦೦೦ ಪದಾತಿ ಸೈನ್ಯ,
ತಲಾ ೪ ಬಂದೂಕು ಹಾಗೂ ಇತರ
ಪರಿಕರಗಳನ್ನು ಹೊಂದಿದ ಪೂರೈಕೆದಾರರು, ಅಸಂಖ್ಯಾತ ಆನೆಗಳು, ಒಂಟೆಗಳು ಮತ್ತು ಗುಡಾರಗಳನ್ನು ಲಪಟಾಯಿಸಿದ. ತನ್ನಿಷ್ಟ ಬಂದಂತೆ
ಸೈನ್ಯವನ್ನು ಎಲ್ಲೆಂದರಲ್ಲಿ ಮುನ್ನುಗ್ಗಿಸಿ ದೋಚುವುದು ಅವನ ಹವ್ಯಾಸವಾಯಿತು. ಮೈಸೂರ ಒಡೆಯರು ಅವನನ್ನು
ಹಿಂದಕ್ಕೆ ಕರೆಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಆತ ಧಿಕ್ಕರಿಸಿದ. ಆ ಜೆಸ್ವಿತ್ ವರದಿಯಲ್ಲಿ “ಹೈದರನ ಸೈನ್ಯ ಬರುತ್ತಿದೆಯೆಂಬ
ಸುದ್ದಿ ಕೇಳಿಯೇ ಗಂಡಸರು ಊರು ತೊರೆದು ಕಾಡು ಸೇರಿಕೊಳ್ಳುತ್ತಿದ್ದರು, ಇನ್ನು ಹೆಣ್ಣುಮಕ್ಕಳಂತೂ ಬೆಂಕಿಗೆ ಹಾರಿಕೊಳ್ಳುತ್ತಿದ್ದರು,
ನಮ್ಮ ನಾಲ್ಕು ಚರ್ಚುಗಳೂ,
ಹಲವು ಊರುಗಳಲ್ಲಿದ್ದ ಮಿಶನರಿಗಳ
ಮನೆಗಳೂ ಅವನ ಸೈನ್ಯಕ್ಕೆ ಆಹುತಿಯಾದವು. ನಮ್ಮ ಹೆಣ್ಣುಮಕ್ಕಳ ಮೇಲೆ ಅವರು ನಡೆಸಿದ ಬಲಾತ್ಕಾರದ ಸಂಗತಿಗಳನ್ನಂತೂ
ಹೇಳಲು ಅಸಾಧ್ಯ” ಎಂದು ದಾಖಲಿಸಲಾಗಿದೆ.
ಫ್ರೆಂಚರ ಕುಮ್ಮಕ್ಕಿನೊಂದಿಗೆ ಹೈದರ್ ಒಂದು
ಪಕ್ಕಾ ಸೈನ್ಯ, ಮದ್ದುಗುಂಡು ದಾಸ್ತಾನು ಹಾಗೂ ಮದ್ದುಗುಂಡು ಕಾರ್ಖಾನೆಯನ್ನು ರೂಪಿಸಿದ. ಅನಂತರ ಅವನು ಬೆಂಗಳೂರ
ಒಡೆಯನಾಗಿ ನೇಮಕಗೊಂಡು ಕೊಯಿಮತ್ತೂರು ಪ್ರಾಂತ್ಯದ ಸಮಸ್ತ ರಾಜಧನ ತನಗೇ ಸೇರುವಂತೆ ನೋಡಿಕೊಂಡ. ಮೈಸೂರಿನ
ಮೇಲೆ ತಂಟೆ ಮಾಡುತ್ತಿದ್ದ ಮರಾಠರನ್ನು ಸದೆಬಡಿದು ಶ್ರೀರಂಗಪಟ್ಟಣದ ರಾಜದರ್ಬಾರಿನಲ್ಲಿ ‘ಫತೇ ಹೈದರ್ ಬಹಾದುರ್’
ಎಂಬ ಬಿರುದುಗಳಿಸಿದ.
ಇಷ್ಟಾದ ಮೇಲೆ ಕ್ರಿಸ್ತಶಕ ೧೭೫೯ರಲ್ಲಿ ಮೈಸೂರ
ಒಡೆಯನಾಗಿದ್ದ ನಂಜರಾಜನನ್ನು ರಾಜಧಾನಿಯಿಂದ ಓಡಿಸಿ ತಾನೇ ರಾಜನೆಂದು ಘೋಷಿಸಿಕೊಂಡ. ಅದೇ ವೇಳೆಗೆ ಫ್ರೆಂಚ್
ರಾಯಭಾರಿಯೊಬ್ಬ ಬಂದು ಆರ್ಕಾಟ್ ಪ್ರಾಂತ್ಯದಿಂದ ಇಂಗ್ಲಿಷರನ್ನು ಹೊಡೆದೋಡಿಸಲು ತಮಗೆ ನೆರವಾಗಬೇಕೆಂದು
ವಿನಂತಿಸಿದ. ಈ ಉದ್ದೇಶಕ್ಕಾಗಿ ೧೭೬೦ರಲ್ಲಿ ಪಾಂಡಿಚೇರಿಯಲ್ಲಿ ಲ್ಯಾಲಿಯೊಂದಿಗೆ ಒಂದು ಒಪ್ಪಂದಕ್ಕೆ
ಬರಲಾಯಿತು. ಈ ಸಂತೋಷದಲ್ಲಿ ಅವನು ಬೀಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮೈಸೂರಿನ ಮೇಲೆ ಮರಾಠರು
ದಾಳಿ ನಡೆಸಿದರು. ಖಂಡೇರಾವನ ನೇತೃತ್ವದಲ್ಲಿ ನಡೆದ ಆ ದಾಳಿ ಎಷ್ಟು ತೀವ್ರವಾಗಿತ್ತೆಂದರೆ ಹೈದರನು
ತನ್ನ ಯುವಪತ್ನಿಯನ್ನೂ ಒಂಬತ್ತು ವರ್ಷದ ಮಗನನ್ನೂ ಬಿಟ್ಟು ತಲೆಮರೆಸಿಕೊಂಡು ಓಡಿಹೋಗಬೇಕಾಯಿತು.
ಅದುವರೆಗೆ ಎಂದೂ ಸೋಲನ್ನೇ ಕಾಣದಿದ್ದ ಹೈದರನಿಗೆ
ಈ ಘಟನೆ ದೊಡ್ಡ ಪಾಠ ಕಲಿಸಿತು. ಮರಾಠರು ಮತ್ತೊಮ್ಮೆ ಮೈಸೂರನ್ನು ಗೆದ್ದುಕೊಂಡ ಅಮಲಿನಲ್ಲಿರುವಾಗಲೇ
ಉತ್ತರದ ಪಾನಿಪತ್ ಕದನದಲ್ಲಿ ತಮಗೆ ಸೋಲು ಸಂಭವಿಸಿದ ಸುದ್ದಿ ಬಂದು ಮೈಸೂರಿನಿಂದ ಕಾಲ್ಕಿತ್ತರು. ಈ
ಸಂದರ್ಭದಲ್ಲಿ ನಂಜರಾಜನನ್ನು ಭೇಟಿಯಾದ ಹೈದರ್ ಆತನನ್ನು ಸಂತೈಸಿ ಅವನ ಮಾನಪ್ರತಿಷ್ಠೆಗಳನ್ನು ಮತ್ತೆ
ಸಿಗುವಂತೆ ಮಾಡುವುದಾಗಿ ಹೇಳಿ ಆತ ತನ್ನ ದಳವಾಯಿಯಾಗಿ ಕೆಲಸ ನಿರ್ವಹಿಸುವಂತೆ ಒಪ್ಪಿಸಿದ. ಯುದ್ಧವೆಂದರೆ
ಬರೀ ಕೊಳ್ಳೆ ಹೊಡೆಯುವುದು, ಭರ್ಭರಕೃತ್ಯಗಳನ್ನು ನಡೆಸುವುದು ಎಂದೇ ತಿಳಿದಿದ್ದ ಅನಕ್ಷರಸ್ಥ ಹೈದರನಿಗೆ
ರಾಜ್ಯಾಳ್ವಿಕೆಯ ಅನುಭವ ಹೇಗೆ ತಾನೇ ಬಂದೀತು? ಈ ಕಾರಣದಿಂದ ರಾಜ್ಯದ ಉಳಿವಿಗಾಗಿ ನಂಜರಾಜ ಹೈದರನ ದಳವಾಯಿಯಾಗಿ
ಊಳಿಗಕ್ಕೆ ಬರಲು ಒಪ್ಪಿಕೊಂಡ. ಒಮ್ಮೆ ತಾನೊಬ್ಬ ರಾಜ, ತನ್ನ ರಾಜ್ಯದ ಸೈನ್ಯದಲ್ಲಿದ್ದ ಒಬ್ಬ ಸಾಮಾನ್ಯ
ಸಿಪಾಯಿ ಈ ಹೈದರ, ಈಗ ಕಾಲದ ಗತಿಯಲ್ಲಿ ಏನೆಲ್ಲ ಏರುಪೇರು ಆಗಿಬಿಟ್ಟಿತು.
ಇವೆಲ್ಲದರ ನಡುವೆ ಪಾನಿಪತ್ ಕದನದಲ್ಲಿ ನಿಜವಾಗಿಯೂ
ಮರಾಠರಿಗೆ ಸೋಲುಂಟಾಯಿತೇ ಅಥವಾ ಅದು ಹೈದರನು ಹಬ್ಬಿಸಿದ ಗಾಳಿಸುದ್ದಿಯೇ? ಏನೋ ಅಂತೂ ಅಸಂಘಟಿತ ಮರಾಠಾ ಸೈನ್ಯದ
ಮೇಲೆ ಬಿದ್ದ ಹೈದರನ ಸೇನೆ ಅದನ್ನು ದಿಕ್ಕಾಪಾಲಾಗಿ ಓಡಿಸಿ ಖಂಡೇರಾವನ ಸೆರೆಹಿಡಿದು ಹೈದರನ ಮುಂದೆ
ತಂದು ನಿಲ್ಲಿಸಿತು. ಜೀವಭಿಕ್ಷೆ ಬೇಡಿದ ಖಂಡೇರಾಯನಿಗೆ ಗಿಳಿಯಂತೆ ನೋಡಿಕೊಳ್ಳುವುದಾಗಿ ಹೇಳಿದ ಹೈದರ
ಅವನನ್ನು ಕಬ್ಬಿಣದ ಸರಳುಗಳ ಹಿಂದೆ ತಳ್ಳಿ ಗಿಳಿಯಂತೆಯೇ ನೋಡಿಕೊಂಡ.
ಹೀಗೆ ಹೈದರ್‌ಅಲಿ ಕ್ರಿಸ್ತಶಕ ೧೭೬೧ರಲ್ಲಿ
ಮೈಸೂರಿನ ರಾಜನಾಗಿ ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಂಡ ಅನಂತರ ಹೊಸಕೋಟೆ, ದೊಡ್ಡಬಳ್ಳಾಪುರ, ಕೋಡಿಕೊಂಡ, ಪೆನುಕೊಂಡ, ಚಿತ್ರದುರ್ಗಗಳನ್ನು ಗೆದ್ದುಕೊಂಡ.
ಆಮೇಲೆ ಅವನ ಕಣ್ಣು ಮಲಬಾರಿನ ಮೇಲೆ ಬಿತ್ತು. ಹೈದರನ ಸೇನೆ ತಮ್ಮತ್ತ ಬಂದುದನ್ನು ತಿಳಿದ ಜಾಮೊರಿನ್
ದೊರೆಯು ಐರೋಪ್ಯದಾಳಿ ಅಥವಾ ತ್ರಿಶೂರಿನ ನಷ್ಟಕ್ಕಿಂತಲೂ ದೊಡ್ಡದಾದ ಗಂಡಾಂತರವಿದೆಂದು ಅರಿತುಕೊಂಡು
ಕೊಚ್ಚಿಯನ್ನು ಬಿಟ್ಟುಕೊಟ್ಟು ವಾರ್ಷಿಕ ೧.೫೯.೯೯೯/- ರೂಪಾಯಿಗಳ ಕಪ್ಪ ನೀಡುವುದಾಗಿ ಹೈದರನೊಂದಿಗೆ
ಒಪ್ಪಂದ ಮಾಡಿಕೊಂಡ. ಈ ಒಪ್ಪಂದದೊಂದಿಗೆ ಶತಶತಮಾನಗಳಿಂದ ಕೇರಳಿಗರು ಅನುಭವಿಸಿಕೊಂಡು ಬಂದ ಸ್ವತಂತ್ರ
ರಾಜಾಳ್ವಿಕೆಯ ಇತಿಹಾಸ ಅಂತಿಮ ತೆರೆಕಂಡಿತು.
ಕ್ರಿಸ್ತಶಕ ೧೭೬೩ರ ಜನವರಿಯಲ್ಲಿ ಹೈದರ್
ಬಿದನೂರಿನ ಮೇಲೆ ಮುತ್ತಿಗೆ ನಡೆಸಿ ಮಾರ್ಚ್ ವೇಳೆಗೆ ಅದನ್ನು ವಶಪಡಿಸಿಕೊಂಡ. ಆಗ ಅವನು ಕೊಳ್ಳೆಹೊಡೆದ
ಸಂಪತ್ತು ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಿದನೂರಿನ ವೃಕ್ಷಸಂಪತ್ತು, ಅಲ್ಲಿನ ಜನರ ರೀತಿರಿವಾಜು ನಡವಳಿಗೆ
ಪರಿಸರ ಎಲ್ಲವೂ ಹೈದರನನ್ನು ಬಹುವಾಗಿ ಆಕರ್ಷಿಸಿದವು. ಬಿದನೂರನ್ನೇ ತನ್ನ ರಾಜ್ಯದ ರಾಜಧಾನಿಯಾಗಿ ಮಾಡಬಯಸಿ
ಅಲ್ಲೊಂದು ಸುಂದರ ಅರಮನೆ ಕಟ್ಟಿ ತನ್ನ ಸಂಸಾರವನ್ನು ಬರಮಾಡಿಕೊಂಡ. ಟಂಕಸಾಲೆ ಸ್ಥಾಪಿಸಿ ಹೈದರಿ ಮತ್ತು
ಬಹಾದುರಿ ಎಂಬ ನಾಣ್ಯಗಳನ್ನು ಟಂಕಿಸಿದ. ಪಶ್ಚಿಮ ಕರಾವಳಿಯಲ್ಲಿ ನೌಕಾದಳವನ್ನು ಸಂಘಟಿಸಿ ಯುದ್ಧನೌಕೆಗಳ
ನಿರ್ಮಾಣಕ್ಕೂ ಕೈಹಾಕಿದ. ಇವೆಲ್ಲದರ ನಡುವೆ ತನ್ನ ವಿರುದ್ಧ ನಡೆದ ಪಿತೂರಿಯನ್ನು ಬಹುಸುಲಭದಲ್ಲಿ ಕಂಡುಕೊಂಡ
ಹೈದರ್ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸಿದ.
ಮರಾಠರೊಂದಿಗೆ ಶಾಂತಿಸಂಧಾನಕ್ಕೆ ಪ್ರಯತ್ನಿಸಿದನಾದರೂ
ಅದು ಫಲಕೊಡಲಿಲ್ಲ ಮಾತ್ರವಲ್ಲ ರಟ್ಟಿಹಳ್ಳಿ ಅಪಜಯದಲ್ಲಿ ಉತ್ತರದ ಸೀಮೆಯನ್ನೆಲ್ಲ ಕಳೆದುಕೊಂಡ. ಕ್ರಿಸ್ತಶಕ
೧೭೬೫ರಲ್ಲಿ ಶಾಂತಿ ಮರುಸ್ಥಾಪನೆಯಾದ ಮೇಲೆ . . . ಹೀಗೆ ಹೈದರನ ಕಾಲದ ಕಾಣದ ಮಗ್ಗಲುಗಳ ಪರಿಚಯ ನಮಗಾಗುವುದು ಜೆಸ್ವಿತ್ ಪತ್ರಗಳಿಂದಲೇ.
ಜೆಸ್ವಿತ್ ಪತ್ರಗಳ ಮೂಲಕ ಸಮಗ್ರ ಇತಿಹಾಸದರ್ಶನವನ್ನು
ನಮಗೆ ಕಟ್ಟಿಕೊಡುವ ಕೆಲಸದಲ್ಲಿ ಮೊತ್ತಮೊದಲು ಅಂದರೆ ೧೯೫೦ರ ದಶಕದಲ್ಲಿ ತೊಡಗಿಕೊಂಡವರು ಜೆಸ್ವಿತ್
ಪಾದ್ರಿಯವರಾದ ಜೆ ಫೆರೋಲಿಯವರು. ‘JESUITS IN MALABAR’ ಮತ್ತು ‘JESUITS IN MYSORE’
ಎಂಬ ತಮ್ಮ ಅಮೂಲ್ಯ ಗ್ರಂಥಗಳ
ಮೂಲಕ ಫೆರೋಲಿಯವರು ನಮ್ಮ ನಾಡಿನ ಇತಿಹಾಸದ ನವೀಕರಣಕ್ಕೆ ಕೈಹಾಕಿದ್ದರು. ಆ ಸಮಯದಲ್ಲಿ ಅವರಿಗೆ ಜೆಸ್ವಿತರ
ಸಮಗ್ರ ಪತ್ರಗಳು ಲಭ್ಯವಿರಲಿಲ್ಲವೆಂಬುದು ಒಂದು ನ್ಯೂನತೆಯಾಗಿ ಪರಿಣಮಿಸುತ್ತದೆ. ಅವರ ಪುಸ್ತಕಗಳನ್ನು
ಪರಾಮರ್ಶಿಸಿದಾಗ ಇತಿಹಾಸವನ್ನು ಕುರಿತಂತೆ ಅವರ ಅಪಾರ ಪಾಂಡಿತ್ಯವನ್ನು ಮೆಚ್ಚದಿರಲು ಸಾಧ್ಯವಾಗದು.