ಮಾರ್ಚ್ ೧೯ ಸಂತ ಜೋಸೆಫರ ಹಬ್ಬ. ಮರಿಯಳ ಆದರ್ಶ
ಪತಿಯಾಗಿ, ಯೇಸುವಿನ ಸಾಕು
ತಂದೆಯಾಗಿ ವಿಶ್ವ ಧರ್ಮಸಭೆಯ ಪೋಷಕರಾಗಿ ಸಂತ ಜೋಸೆಫರನ್ನು ನಾವು ಗೌರವಿಸುತ್ತಾ ಪ್ರತಿವರ್ಷ
ಮಾರ್ಚ್ ೧೯ರಂದು ಅವರ ಸ್ಮರಣೆಯ ದಿನವೆಂದು ಆಚರಿಸುತ್ತೇವೆ. ಮೇ ಒಂದರಂದು ಅವರನ್ನು ಕಾರ್ಮಿಕರ
ಪಾಲಕರೆಂದು ಸ್ಮರಿಸುತ್ತೇವಾದರೂ ಬಹು ಹಿಂದಿನಿಂದಲೂ ಮಾರ್ಚ್ ತಿಂಗಳನ್ನು ಸಂತ ಜೋಸೆಫರಿಗೆ
ಸಮರ್ಪಿಸಲಾಗಿದೆ.
ಅವರೊಬ್ಬ ಮೌನ ಸಂತ. ಏನನ್ನೂ ಆಡದಲೇ ಎಲ್ಲವನ್ನೂ
ಮಾಡಿ ತೋರಿಸಿದಾತ. ಅವರೊಬ್ಬ ಬಡಗಿಯೆಂದು ನಮಗೆ ತಿಳಿದುಬರುವುದು ಯಾವಾಗೆಂದರೆ ಜನರು ಯೇಸುವನ್ನು
ಕುರಿತು ’ಓ ಇವನು ಆ ಬಡಗಿಯ
ಮಗನಲ್ಲವೇ?’
ಎನ್ನುವಾಗ
ಮಾತ್ರ. ಅವರು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರಲಿಲ್ಲ ಎನ್ನುವುದಕ್ಕೆ ಪವಿತ್ರ ಬೈಬಲಿನಲ್ಲಿ
ಒಂದು ಸೂಚನೆಯಿದೆ. ಅದೇನೆಂದರೆ ಯೇಸುವಿನ ಜನನದ ವೇಳೆ ಅವರು ಜೆರುಸಲೇಮಿನ ಪವಿತ್ರಗುಡಿಗೆ ಎರಡು ಬೆಳುವಕ್ಕಿಗಳನ್ನು
ದಾನವಾಗಿ ನೀಡಿದರಲ್ಲವೇ? ಅಂದರೆ ಕುರಿಯನ್ನು ದಾನ ಕೊಡಲು ಶಕ್ತರಲ್ಲದವರು ಬೆಳುವಕ್ಕಿಯನ್ನು
ಕೊಡಬಹುದೆಂದು ದೇವಾಲಯದ ನಿಯಮವಿತ್ತು ತಾನೇ? ಅಂದ ಮೇಲೆ ಅವರು ಬಡವರೇ ಹೌದು. ಆದರೆ ಅವರು
ದಾವಿದನ ವಂಶಸ್ತರಾಗಿದ್ದರು ಎಂಬುದು ಮಾತ್ರ ನಿಜ, ಏಕೆಂದರೆ ದೇವದೂತನು ಅವರನ್ನು ಕುರಿತು ’ದಾವಿದ ವಂಶಸ್ತನಾದ
ಜೋಸೆಫನೇ’ ಎಂದು
ಕರೆಯುತ್ತಾನೆ. ಅವರು ದಾವಿದ ವಂಶಸ್ತರೆಂಬುದನ್ನು ಮತ್ತಾಯ ಮತ್ತು ಲೂಕ ಇಬ್ಬರೂ ತಮ್ಮ
ಶುಭಸಂದೇಶದಲ್ಲಿ ದಾಖಲಿಸಿದ್ದಾರೆ. ತಮ್ಮ
ಏಕಮಾತ್ರ ಪುತ್ರನನ್ನು ದಾವಿದ ವಂಶಸ್ತನಾಗಿಸುವ ಉದ್ದೇಶದಿಂದ ದೇವರು ಜೋಸೆಫರನ್ನು ಆರಿಸಿಕೊಂಡರು.
ಜೋಸೆಫರು ನೀತಿವಂತರಾಗಿದ್ದರು, ಮರಿಯಳನ್ನು
ಅವಮಾನಕ್ಕೆ ಗುರಿಮಾಡಬೇಕೆಂಬ ಕೀಳು ಅಭಿರುಚಿ ಅವರಿಗಿರಲಿಲ್ಲ, ಹಾಗಾಗಿ ಅವರೊಬ್ಬ
ಘನಗಾಂಭೀರ್ಯದ ವ್ಯಕ್ತಿತ್ವದವರು ಎಂದು ಕೂಡಾ ದಾಖಲಾಗಿರುವುದನ್ನು ನೋಡುವಾಗ ನಮಗೆ ಜೋಸೆಫರ ಬಗ್ಗೆ
ತುಂಬಾ ಗೌರವ ಮೂಡುತ್ತದೆ. ಯೇಸುವಿನ ಜನನದ ಸಂದರ್ಭದಲ್ಲಿ ಜೋಸೆಫರು ಎಲ್ಲ ರೀತಿಯ ಆತಂಕಗಳಿಂದ
ತಮ್ಮ ಕುಟುಂಬವನ್ನು ಜತನದಿಂದ ಕಾಪಾಡಿಕೊಳ್ಳುವುದು ಅವರ ಆದರ್ಶಕ್ಕೆ ಸಾಕ್ಷಿಯಾಗಿದೆ. ಯೇಸು
ಕನ್ಯಾಪುತ್ರನಾಗಿ ಜನಿಸುವುದಕ್ಕೆ ಮೊದಲ ಸಾಕ್ಷಿಯಾಗುವ ಜೋಸೆಫರು ಆಮೇಲೆ ಅಷ್ಟೇ ನಿಗೂಢವಾಗಿ
ಅಂತರ್ಧಾನರಾಗುತ್ತಾರೆ. ಉಳಿದಂತೆ ಅವರ ಕುರಿತ ಕತೆಯೆಲ್ಲವೂ ನಮಗೆ ಬೈಬಲ್ ಹೊರತಾಗಿ ಇತರ
ಐತಿಹ್ಯಗಳಲ್ಲಷ್ಟೇ ಸಿಗುತ್ತವೆ. ಅವಂತೂ ಅತಿ ರಂಜಕ ಹಾಗೂ ಅತಿ ರೋಚಕ. ಸಂತ ಜೋಸೆಫರ
ಮನವಿಮಾಲೆಯಲ್ಲಿ ಅವರ ಕುರಿತು ಬಹು ಮನಮೋಹಕ ಸಂಗತಿಗಳು ನಮಗೆ ಸಿಗುತ್ತವೆ.
ಅದೇನೇ ಇರಲಿ, ಜೋಸೆಫರು ದೇವರಿಗೇ
ಭಿಕ್ಷೆ ನೀಡುವಷ್ಟು ದೊಡ್ಡವರಾಗಿದ್ದರು ಎಂಬುದು ಮಾತ್ರ ಸತ್ಯ. ದೇವರು ತನ್ನ ಒಬ್ಬನೇ ಮಗನನ್ನು
ನಿನ್ನ ಮಗನೆಂದು ತಿಳಿದು ಸಾಕಿಕೊಡಪ್ಪ ಎಂದಾಗ ಮರುಮಾತಾಡದೇ, ಅದರ ಅಡ್ಡ
ಪರಿಣಾಮಗಳನ್ನು ಚಿಂತಿಸದೇ ಒಪ್ಪಿಕೊಂಡ ಮಹಾನುಭಾವ ಜೋಸೆಫರು. ನಿಜ ಹೇಳಬೇಕೆಂದರೆ ಇಡೀ ಬೈಬಲನ್ನು
ತಿರುವಿ ನೋಡಿದಾಗ ಜೋಸೆಫರು ಒಂದು ಮಾತನ್ನಾದರೂ ಆಡಿದ ಉದಾಹರಣೆ ಎಲ್ಲೂ ಇಲ್ಲ. ಬಾಯಿಗೆ ಬೀಗ
ಹಾಕಿಕೊಂಡು ಹಗಲೂರಾತ್ರಿ ನಡೆದು ಬಿಮ್ಮನಸೆ ಮರಿಯಮ್ಮನವರನ್ನು ನಜರೇತಿನಿಂದ ಬೆತ್ಲೆಹೇಮಿಗೆ
ಜೋಪಾನವಾಗಿ ಕರೆತಂದುದಲ್ಲದೆ ಹೆರಿಗೆ ಮಾಡಿಸಿ ಬಾಣಂತಿ ಉಪಚಾರ ಮಾಡಿದ್ದು, ಮಗುವಿಗೆ
ಅಪಾಯವಿದೆ ಎಂದು ಗೊತ್ತಾದಾಗ ಇದ್ದುದೆಲ್ಲವನ್ನೂ ಬಿಟ್ಟು ಬರಿಗೈಯಲ್ಲಿ ಕುಟುಂಬವನ್ನು
ಹೊರದೇಶಕ್ಕೆ ಕರೆದೊಯ್ದು ಜೋಪಾನ ಮಾಡಿದ್ದು, ಹನ್ನೆರಡು ವರ್ಷಗಳ ನಂತರ ಜೆರುಸಲೇಮಿನ ಜಾತ್ರೆಯಲ್ಲಿ
ಮಗು ಕಳೆದುಹೋದಾಗ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಹುಡುಕಾಡಿದ್ದು ಒಂದೇ ಎರಡೇ, ಎಲ್ಲಾದರೂ ಆ
ಬಡಪಾಯಿ ಮಾತನಾಡಿದ್ದೇ ಇಲ್ಲ. ಗಂಡ ಆದವನು ಬಾಯಿ ಮುಚ್ಚಿಕೊಂಡು ತೆಪ್ಪಗಿರಬೇಕು ಅನ್ನೋದನ್ನ ಇದು
ಸೂಚಿಸುತ್ತದೆಯೇ?
ಅವರೊಬ್ಬ
ತುಂಬಿದ ಕೊಡವಾಗಿದ್ದರು, ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯೇ ಇದೆಯಲ್ಲವೇ?
ಇನ್ನು ಯೇಸುವಿನ ಬಹಿರಂಗ ಜೀವನದ ನಂತರ ಎಲ್ಲೂ ಅವರ
ಪ್ರಸ್ತಾಪವಾಗದೇ ಇರುವುದರಿಂದ ಆ ವೇಳೆಗೆ ಜೋಸೆಫರು ಇಹಲೋಕ ತ್ಯಜಿಸಿದ್ದರೆಂಬ ನಿರ್ಣಯ
ತಳೆಯಬೇಕಾಗುತ್ತದೆ. ಅಂದರೆ ಆ ಅನ್ಯೋನ್ಯ ಕುಟುಂಬದಲ್ಲಿ ಯೇಸು ಮತ್ತು ಮರಿಯಮ್ಮನವರ ತೋಳುಗಳಲ್ಲಿ
ಪ್ರಾಣ ಬಿಡುವುದೆಂದರೆ ಅವರೆಂಥ ಪುಣ್ಯಶಾಲಿಯಾಗಿರಬೇಕು ಅಲ್ಲವೇ? ಪ್ರಾಪಂಚಿಕವಾಗಿ
ಅವರು ಬಡವರಾಗಿದ್ದರೂ ಪಾರಮಾರ್ಥಿಕವಾಗಿ ಶ್ರೀಮಂತರಾಗಿದ್ದರು. ಅವರು ನೀತಿಗಾಗಿ ಹಸಿದು
ಹಾತೊರೆದರು. ವಿನಯವಂತರಾಗಿ ಬಾಳಿದರು.
ಅವರೆಂದೂ ಕೋಪಗೊಳ್ಳಲಿಲ್ಲ, ಸಿಡುಕಲಿಲ್ಲ
ದುಡುಕಲಿಲ್ಲ,
ಅವರದು
ಅನುಪಮ ಶಾಂತಹೃದಯ.
ಅವರು ನಿರ್ಮಲಚಿತ್ತರಾಗಿದ್ದರಿಂದ ದೇವರನ್ನು
ಮುಖಾಮುಖಿ ಕಂಡರಲ್ಲದೆ ದೇವರನ್ನು ತಮ್ಮ ಕರಗಳಲ್ಲಿ ಎತ್ತಿ ಆಡಿಸಿದರು. ಯೇಸುಕ್ರಿಸ್ತರು ತಮ್ಮ
ಪರ್ವತಪ್ರಸಂಗದಲ್ಲಿ ಹೇಳಿದ ಎಲ್ಲ ಅಷ್ಟಭಾಗ್ಯಗಳಿಗೂ ಭಾಜನರಾದವರು ಸಂತ ಜೋಸೆಫರು.
ಎರಡು ಮಹಾಯುದ್ಧಗಳ ನಂತರ ಕಮ್ಯುನಿಸ್ಟ್ ಪ್ರಭಾವ
ಅತಿಯಾದಾಗ ಮೇ ಒಂದಕ್ಕೆ ಇನ್ನಿಲ್ಲದ ಪ್ರಾಬಲ್ಯ ಬಂದಿತ್ತಲ್ಲ, ಆಗ ಜಗದ್ಗುರುಗಳಾದ
೧೨ನೇ ಭಕ್ತಿನಾಥರು ಸಂತ ಜೋಸೆಫರನ್ನು ಕಾರ್ಮಿಕರ ಪಾಲಕ ಎಂದು ಸಾರಿ ಆ ದಿನಕ್ಕೆ ಧಾರ್ಮಿಕ ಮೆರುಗು
ನೀಡಿದರು.
ನ್ಯೂ ಮೆಕ್ಸಿಕೋದ ಸಾಂತಾ ಫೆ ಎಂಬಲ್ಲಿನ ಒಂದು
ಕನ್ಯಾಮಠದಲ್ಲಿ ಒಂದು ಸುರುಳಿಯಾಕಾರದ ಅದ್ಭುತ ಮೆಟ್ಟಿಲಿದೆ. ಅದನ್ನೊಬ್ಬ ಮರಗೆಲಸದವನು ಇತರ
ಕೆಲಸಗಾರರ ಸಹಾಯವಿಲ್ಲದೆ ತಾನೊಬ್ಬನೇ ಹಗಲೂ ರಾತ್ರಿ ಕಟ್ಟಿದನಂತೆ, ಕೆಲಸ ಮುಗಿದ ಮೇಲೆ
ಕೂಲಿ ಕೊಡೋಣವೆಂದುಕೊಂಡು ಕನ್ಯಾಸ್ತ್ರೀಯರು ಕಾದಿದ್ದೇ ಕಾದಿದ್ದು, ಆತ ಬರಲೇ
ಇಲ್ಲವಂತೆ,
ಎಷ್ಟೊ ಜನ
ಘಟಾನುಘಟಿ ಮರಗೆಲಸದವರು ಬಂದು ಆ ಮೆಟ್ಟಿಲನ್ನು ನೋಡಿ ಅಚ್ಚರಿಗೊಂಡು ಇದನ್ನು ಕಟ್ಟಿದಾತ
ಅಸಾಮಾನ್ಯ ಮನುಷ್ಯನೇ ಸರಿ, ಏಕೆಂದರೆ ಇದು ನಮ್ಮಿಂದ ಸಾಧ್ಯವಾಗದ ಕೆಲಸ ಎಂದರಂತೆ. ಹಾಗಿದ್ದರೆ
ಅದನ್ನು ಮಾಡಿದವರು ಸಂತ ಜೋಸೆಫರೇ ಇರಬಹುದೆಂದು ಆ ಕಾನ್ವೆಂಟಿನವರು ನಂಬಿದ್ದಾರೆ, ಇಂದಿಗೂ ಅಸಂಖ್ಯಾತ
ಜನ ಆ ಕಾನ್ವೆಂಟನ್ನು ಸಂದರ್ಶಿಸಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
ಪವಿತ್ರ ಕುಟುಂಬದ ಪಾಲಕಸಂತರೇ, ವಿಧೇಯತೆಯ
ಅಪರಾವತಾರ, ಕೆಲಸಗಾರರ ಆದರ್ಶ, ಮೌನಸಂತ, ಪವಿತ್ರ ಮರಣದ ಹರಿಕಾರರೇ ನಿಮ್ಮ ಕೃಪೆ
ನಿರಂತರವೂ ನಮ್ಮ ಮೇಲಿರಲಿ.