ಕ್ರೈಸ್ತ ಧರ್ಮವು ನಮ್ಮ ನಾಡಿಗೆ ಹೊರಗಿನಿಂದ ಬಂದ ಧರ್ಮವಾದರೂ ಅದರ ಅನುಯಾಯಿಗಳಾದ ನಾವು ಇಲ್ಲಿನ ಮಣ್ಣಿನ ಮಕ್ಕಳೇ ಆಗಿದ್ದೇವೆ. ನಮ್ಮ ಜೀವನಶೈಲಿ, ವೃತ್ತಿ ಮತ್ತು ಸಂಪ್ರದಾಯಗಳು ಉಳಿದ ಜನಸಮುದಾಯಗಳಿಗಿಂತ ಭಿನ್ನವಾಗೇನೂ ಇಲ್ಲ. ಅದೇ ಕೃಷಿಜೀವನ, ಅದೇ ವಸ್ತ್ರಾಭರಣ, ಅದೇ ಆಚಾರ ವಿಚಾರಗಳು, ಅದೇ ಜಾನಪದ ಸಂಸ್ಕೃತಿಗಳು, ಅದೇ ನೋವು ನಲಿವುಗಳು.
ಬದಲಾಗಿದ್ದಾದರೂ ಏನು ಎಂದರೆ ಜೀವನಾದರ್ಶಗಳಿಗೆ ಧರ್ಮದ ಲೇಪ ಅಷ್ಟೇ.
ಆರಕ್ಕೇರದ ಮೂರಕ್ಕಿಳಿಯದ ಬದುಕು ನಮ್ಮದು.
ಯಾರಾದರೂ ಕೇಳಬಹುದು,
ನಿಮ್ಮದೇ ಶಾಲೆಗಳಿದ್ದೂ ನೀವು ಶಿಕ್ಷಣದಲ್ಲಿ ಹಿಂದೆ ಏಕೆ? ಎಂದು,
ಅಲ್ಲಾ ಸ್ವಾಮಿ, ಶಾಲೆಗಳೇನೋ ನಮ್ಮವೇ, ವಿದ್ಯೆಯೇನೋ ಕೊಟ್ಟಿವೆ, ಬದುಕು ರೂಪಿಸಲಿಲ್ಲವಲ್ಲ?
ನಿಜ ... ಬದುಕು ರೂಪಿಸಿಕೊಂಡವರು ಕೇರಳದ ಮಲಯಾಳಿಗರು ಹಾಗೂ ಮಂಗಳೂರಿನ ಕೊಂಕಣಿಗರು. ಬಯಲಸೀಮೆಗೆಲ್ಲಿ ಬರಬೇಕು ಮೇಲೇರುವ ತಂತ್ರ.
ಮತ್ತೆ ನೀವು ಕೇಳಬಹುದು,
ಯೇಸುಕ್ರಿಸ್ತನ ತತ್ವಗಳಿಂದ ನಿಮ್ಮ ಬದುಕನ್ನು ಗಟ್ಟಿಗೊಳಿಸಬಹುದಿತ್ತಲ್ಲ?
ಹೌದು ಸ್ವಾಮೀ, ಆದರೆ, ಯೇಸುತತ್ವಗಳಿಗಿಂತ ಜಾತಿ ಅಂತಸ್ತು ದೊಡ್ಡದು ನೋಡಿ. ಜಾತಿ ನಮಗೆ ಬೇಡೆಂದರೂ ಅದು ನಮ್ಮನ್ನು ಬಿಡದು ಕೇಳಿ. ಇನ್ನು ಪಾದ್ರಿಗಳನ್ನು ಬೈಯುವುದು ನಮಗೊಂದು ಚಾಳಿ.
ಹುಂ ಎಲ್ಲ ಜಾತಿಯವರೂ ತಮ್ಮನ್ನುದ್ಧರಿಸಲು ತಮಗೊಬ್ಬ ಮಠಾಧೀಶ ಬೇಕು ಅನ್ನೋವಾಗ ನಮ್ಮಲ್ಲಂತೂ ಮಠಾಧಿಪತಿಗಳು ಅನಾಯಾಸವಾಗಿ ಸಿಕ್ಕಿದರೂ ನಮ್ಮ ಏಳಿಗೆಯಾಗಲಿಲ್ಲವಲ್ಲಾ? ಅದಕ್ಕೆ ಇನ್ನೇನು ತಾನೇ ಹೇಳೋಣ.
ಎಸ್ಸೆಸ್ಸೆಲ್ಸಿ ಆಯ್ತು ಮುಂದೇನು? ಅದೇನೋ ನಂಗೊತ್ತಿಲ್ಲಪ್ಪ. ಅಣ್ಣ ಬೆಂಗಳೂರಿನಾಗೆ ಇದ್ದಾನೆ, ಹೋಗಿ ಯಾವ್ದಾದರೂ ಕೆಲಸ ಹುಡುಕಬೇಕು. ಅಲ್ಲೇನೂ ಕ್ರೈಸ್ತಧರ್ಮದ ಛತ್ರ ಅನ್ತ ಇಲ್ಲ, ಚರ್ಚುಗಳಿಗೆ ದೊಡ್ಡ ಕಾಂಪೌಂಡು ಗೇಟು ಬೀಗ. ಪಾದ್ರಿ ಮನೆಗಳಲ್ಲಿ ಸೀಳುನಾಯಿಗಳು ಅಟ್ಟಿಸಿಕೊಂಡು ಬತ್ತವೆ.
ಬೆಂಗಳೂರಲ್ಲಿ ನೆಂಟರಿಲ್ಲ ಅಂದ ಮ್ಯಾಲೆ ಊರಲ್ಲೇ ಬೀದಿ ಸುತ್ತು. ಎಂಥಾ ಬುದ್ಧಿವಂತ ಹುಡುಗ ಇದ್ಯಾಕಿಂಗಾದ ಅಂತ ಯಾರೂ ಕೇಳೋದಿಲ್ಲ. ಯಾಕೆ ಅಂದರೆ ನಿನ್ನಂತೆ ಅವರೂ ಕೂಡಾ.
ಇನ್ನು ಓದಿರೋ ಮಂದೀನಾದ್ರೂ ತಮ್ಮ ಸಮುದಾಯಕ್ಕೆ ನೆರವಾಗಿದ್ದಾರಾ?
ಅಯ್ಯೋ ಬುಡ್ತು ಅನ್ನಿ, ತಮ್ಮದು ತೊಳಕೊಳ್ಳೋಕೇ ಅವರಿಗೆ ಪುರಸೊತ್ತಿಲ್ಲ, ಇನ್ನೊಬ್ಬರದು ಯಾಕೆ ಮೂಸಬೇಕು?
ಏನೋ ನಮ್ಮ ಕುಲ ಅನ್ತ ಒಂಚೂರು ದುಡ್ಡು ಬಿಸಾಕಿ ಸುಮ್ಮನಾಗಬೋದು.
ಇನ್ನೊಬ್ಬ ಮತ್ತೊಬ್ಬ ಅದರಲ್ಲೂ ಯಾವಯಾವುದೋ ಜಾತಿಯೋರಿಗೆ ... ಏ ಹೋಗ್ರೀ ನಿಮ್ಮ ಕೆಲಸ ನೋಡ್ರೀ.
ಈ ನಗ್ನಸತ್ಯಗಳ ಭೂಮಿಕೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರನ್ನು ಅವಲೋಕಿಸಿದಾಗ ಮೂಡುವ ಪ್ರಶ್ನೆಗಳು ಹಲವಾರು, ಅದಕ್ಕೆ ಸಿಗುವ ಉತ್ತರಗಳಂತೂ ನೂರಾರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನಮ್ಮ ದೇಶದ ರಾಜಕೀಯವು ಹಲವಾರು ತಿರುವುಗಳನ್ನು ಹಾದು ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಮೇಲಾಟಗಳಿಗಾಗಿ ಜಾತಿಧರ್ಮಗಳನ್ನು ದಾಳಗಳಾಗಿ ಬಳಸುವ ಪರಿಪಾಠ ಬೆಳೆದುಬಂದಿದೆ. ಅನಾಯಾಸವಾಗಿ ಬಂದ ಸ್ಥಾನಮಾನಗಳನ್ನಷ್ಟೇ ನೆಚ್ಚಿಕೊಂಡು ಈ ಸಮುದಾಯ ನಡೆದುಬಂದುದನ್ನು ನೋಡಿದ್ದೇವೆ. ಯಾರ ಹಿಂದೆಯೂ ಹೋಗದೆ ಬಹುಶಃ ಎಲ್ಲರಿಗೂ ಬೇಕಾದವರಾಗಿದ್ದು ಕೇವಲ ದಾಕ್ಷಿಣ್ಯದ ಕಾರಣದಿಂದಲೇ ಜನಪ್ರತಿನಿಧಿಗಳಾಗಿರುವ ಸನ್ನಿವೇಶಗಳೇ ನಮಗೆ ಢಾಳಾಗಿ ಕಾಣುತ್ತವೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಚುನಾವಣೆಗಳನ್ನು ಎದುರಿಸಿ ಆರಿಸಿ ಬಂದಿರುವರಾದರೂ ಅವರು ಇಡೀ ಜನಸಮುದಾಯದ ಪ್ರತಿನಿಧಿಗಳಾಗಿ ವರ್ತಿಸಿದ ಮುತ್ಸದ್ದಿಗಳಾಗಿದ್ದಾರೆಯೇ ಹೊರತು ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ನ್ಯಾಯ ಒದಗಿಸಿಲ್ಲವೆನ್ನಬಹುದು. ನಮ್ಮ ವಿಮೋಚನೆ ನಮ್ಮಿಂದಲೇ ಆಗುತ್ತದೆಯೋ ಅಥವಾ ವಿಮೋಚಕನೊಬ್ಬನನ್ನು ಎದುರುಗೊಳ್ಳಬೇಕೋ ಎಂಬುದೇ ಇಂದಿನ ಪ್ರಶ್ನೆ.