ಬುಧವಾರ, ಆಗಸ್ಟ್ 22, 2012

ಕೀರ್ತನಾಂಜಲಿ

ಇತ್ತೀಚೆಗೆ ನಾನು ನೋಡಿದ ಪುಸ್ತಕಗಳಲ್ಲಿ ಕೀರ್ತನಾಂಜಲಿ ಎಂಬ ಅಗಲವಾದ ಪುಸ್ತಕ ಗಮನ ಸೆಳೆಯಿತು. ಭಜನಾಂಜಲಿ ಎಂಬ ಎಲ್ಸಿ ತಟ್ಟೆಯು ಸಹಾ ಇದೇ ಆಕಾರದಲ್ಲಿದ್ದುದರಿಂದ ಇದೊಂದು ಪುಸ್ತಕ ಎಂಬ ಕಲ್ಪನೆ ನನಗಾಗಿರಲಿಲ್ಲ. ಪುಸ್ತಕದ ವರ್ಣಮಯ ಮುಖಪುಟದಲ್ಲಿ ದಾವೀದರಸನು ಹಾರ್ಪ್ ಎಂಬ ತಂತಿ ವಾದ್ಯ ನುಡಿಸುತ್ತಿರುವ ಚಿತ್ರವಿದೆ. ವರ್ಷ-ಬಿ ಗೆ ಸರಿಹೊಂದುವ ವಾಚನಾನಂತರ ಪಠಿಸುವ ಕೀರ್ತನೆಗಳನ್ನೆಲ್ಲ ಸಂಗ್ರಹಿಸಿ ಮಾನ್ಯ ಬೆಂಜಮಿನ್ ಫ್ರಾನ್ಸಿಸ್ ಅವರು ರಾಗಸಂಯೋಜನೆ ಮಾಡಿದ್ದಾರೆ.
ಬೆಂಗಳೂರು ಮಹಾಧರ್ಮಪ್ರಾಂತ್ಯದ ದೈವಾರಾಧನಾ ವಿಧಿ ಆಯೋಗವು ಹೊರತಂದಿರುವ ಪುಸ್ತಕಕ್ಕೆ ಮಹಾಧರ್ಮಾಧ್ಯಕ್ಷರಾದ ಅತಿ ವಂದನೀಯ ಬೆರ್ನಾಡ್ ಮೊರಾಸ್ ಅವರು ಮುನ್ನುಡಿ ಬರೆಯುತ್ತಾ "ದೇವರು ತನ್ನ ಬದುಕಿನಲ್ಲಿ ಎಸಗಿರುವ ಮಹತ್ಕಾರ್ಯಗಳನ್ನು ಸ್ಮರಿಸು ಹಾಡುವ ಕೃತಜ್ಞತಾ ಗೀತೆಗಳು, ದೇವರಲ್ಲಿ ತಾನಿಟ್ಟಿರುವ ನಂಬಿಕೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಗೀತೆಗಳು ಮಾತ್ರವಲ್ಲ, ತನ್ನ ಮನದಾಳದಲ್ಲಿ ಅಡಗಿರುವ ನೋವು, ಹತಾಶೆ, ಆತಂಕ ಮತ್ತು ಅಳಲನ್ನು ವ್ಯಕ್ತಪಡಿಸುವ ಗೀತೆಗಳೇ ಕೀರ್ತನೆಗಳು" ಎಂದಿದ್ದಾರೆ.
ಸುಂದರವಾಗಿ ಮುದ್ರಿಸಿರುವ ಪುಸ್ತಕದ ಕುರಿತು ಹೇಳಲೇಬೇಕಾದ ವೈಶಿಷ್ಟ್ಯವೆಂದರೆ ಇದರಲ್ಲಿ ಪಾಶ್ಚಾತ್ಯಶೈಲಿಯ ಸ್ವರಪ್ರಸ್ತಾರವನ್ನು ಸಹ ಮುದ್ರಿಸಲಾಗಿದೆ. ಬಹುಶಃ ನೊಟೇಷನ್ ನೋಡಿಕೊಂಡು ವಾದ್ಯಗಳನ್ನು ನುಡಿಸುವ ಪರಿಪಾಠವು ಇಂದು ಮರೆತೇಹೋಗುತ್ತಿರುವ ಸಂದರ್ಭದಲ್ಲಿ ಬಳಕೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆಂಬುದನ್ನು ಕಾದು ನೋಡಬೇಕಷ್ಟೆ.
ಅದೊಂದು ಕಾಲವಿತ್ತು, ಗೀತಾಮೃತ ಗಾನಾಮೃತಗಳಿಂದ ಶುರುವಾಗಿ ಸೆಮಿನರಿಯ ಸೈಕ್ಲೊಸ್ಟೈಲ್ಡ್ ಪುಸ್ತಕಗಳವರೆಗೆ ನೊಟೇಷನ್ ಪುಸ್ತಕಗಳು ಬಹುಕಾಲ ಚಾಲ್ತಿಯಲ್ಲಿದ್ದವು. ಅವಕ್ಕೊಂದು ಪುನರುಜ್ಜೀವನ ಕೊಡುವಂತೆ ಕೀರ್ತನಾಂಜಲಿ ಮೈದಳೆದಿದೆ. ಆದರೆ ಇವು ಶಾಸ್ತ್ರೀಯ ಸಂಗೀತವಾಗಿರದೆ ಲಘುಸಂಗೀತದ ಧಾಟಿಯಲ್ಲಿರುವುದು ಮಾತ್ರ ಒಂದು ಕೊರತೆ. ಅದೊಂದು ಬಿಟ್ಟರೆ ಕೀರ್ತನೆಗಳನ್ನೂ ಅದರ ರಾಗಗಳನ್ನೂ ಸ್ಟ್ಯಾಂಡರ್ಡೈಸ್ ಮಾಡುವ ನಿಟ್ಟಿನಲ್ಲಿ ಪುಸ್ತಕ ಯಶಸ್ವಿಯಾಗಲೆಂದು ಹಾರೈಸೋಣ.