ಭಾನುವಾರ, ಡಿಸೆಂಬರ್ 29, 2013

ಮಾರ್ಸೆಲಿನೊ

ನನ್ನ ಹಳೆಯ ಪಳೆಯ ನೆನಪುಗಳಲ್ಲಿ ಆಗಾಗ್ಗೆ ಕಾಡುವುದು ಎಪ್ಪತ್ತರ ದಶಕದಲ್ಲಿ ನಮ್ಮ ಶಾಲೆಯಲ್ಲಿ ತೋರಿಸಿದ ಒಂದು ಚಲನಚಿತ್ರ. ಬಹುಶಃ ನಾನಾಗ ಐದನೇ ತರಗತಿಯ ವಿದ್ಯಾರ್ಥಿ.
ಆ ಚಿತ್ರದ ನಾಯಕ ಒಬ್ಬ ಪುಟಾಣಿ ತುಂಟ ಹುಡುಗ. ಅಂದೊಮ್ಮೆ ಬೆಳಂಜಾವ ಆ ಮಠದ ಸ್ವಾಮಿಗಳು ಚರ್ಚಿನ ಗಂಟೆ ಬಾರಿಸುವಾಗ ಗೇಟಿನ ಬಳಿ ಬಟ್ಟೆಯಲ್ಲಿ ಸುತ್ತಿ ಮಲಗಿಸಿದ್ದ ಒಂದು ಅನಾಥ ಮಗುವನ್ನು ಕಾಣುತ್ತಾರೆ. ಮಠದ ಎಲ್ಲ ಸಂನ್ಯಾಸಿಗಳೂ ಅದರ ಸುತ್ತ ನೆರೆದು ಪಾಪುವನ್ನು ಮುದ್ದಿಸಿ ಒಳಕರೆತರುತ್ತಾರೆ. ಒಬ್ಬರು ಬೆಚ್ಚನೆಯ ಹಾಸಿಗೆ ಮಾಡಿದರೆ ಮತ್ತೊಬ್ಬರು ಹಾಲಿನ ಬಾಟಲಿ ತರುತ್ತಾರೆ. ಎಲ್ಲರೂ ಸೇರಿ ಮಗುವಿಗೆ ಮಾರ್ಸೆಲಿನೊ ಎಂದು ಹೆಸರಿಟ್ಟು ದೀಕ್ಷಾಸ್ನಾನ ಕೊಡುತ್ತಾರೆ. 
ಮಠದೊಳಗಿನ ಧಾರ್ಮಿಕ ಶಿಸ್ತಿನ ಪರಿಸರದೊಳಗಿದ್ದೂ ಹುಡುಗ ಬಲು ತುಂಟನಾಗಿ ಬೆಳೆಯುತ್ತಾನೆ. ಹೋಗಬಾರದೆನ್ನುವ ಕಡೆ ಹೋಗುತ್ತಾನೆ, ಮುಟ್ಟಬಾರದೆಂದುದನ್ನು ಮುಟ್ಟುತ್ತಾನೆ, ಕಲ್ಲಿನ ಕೆಳಗೆ ಅವಿತಿದ್ದ ಚೇಳನ್ನು ಮುಟ್ಟಿ ಕಿಟಾರನೆ ಕಿರುಚಿಕೊಂಡು ಜ್ವರಬಂದು ಮಲಗುತ್ತಾನೆ, ಕೆಟ್ಟ ಹುಡುಗರ ಸಹವಾಸ ಮಾಡಿ ಊರವರೆಲ್ಲರಿಂದ ಉಗಿಸಿಕೊಳ್ಳುತ್ತಾನೆ. ಹೀಗೆ ಒಮ್ಮೆ ಸಂತೆಗೆ ಹೋಗಿದ್ದಾಗ ಹಸುಕರುಗಳನ್ನು ಬಿಚ್ಚಿ ಓಡಿಸಿ ಸಂತೆಯೆಲ್ಲ ಗಲಿಬಿಲಿಗೊಳ್ಳುವಂತೆ ಮಾಡುತ್ತಾನೆ. ಊರಿನ ಮುಖಂಡ ಬಂದು ಹುಡುಗನನ್ನು ನನಗೆ ಕೊಡಿ ಅವನಿಗೆ ಚೆನ್ನಾಗಿ ಬುದ್ದಿ ಕಲಿಸುವೆ, ಇಡೀ ದಿನ ನನ್ನ ಕುಲುಮೆಯ ತಿದಿಯೊತ್ತಲಿ ಎನ್ನುತ್ತಾನೆ. ಆದರೆ ಗುರುಗಳು ಒಪ್ಪುವುದಿಲ್ಲ. 
ಮಠದ ಅಟ್ಟದಲ್ಲಿ ಏನಿದೆಯೋ ಎಂದು ನೋಡುವ ಕುತೂಹಲ ಮಾರ್ಸೆಲಿನೊಗೆ. ಆದರೆ ನೀನೆಲ್ಲಿ ಬೇಕಾದರೂ ಹೋಗು, ಆದರೆ ಅಟ್ಟಕ್ಕೆ ಮಾತ್ರ ಹತ್ತಬೇಡ, ಅದರ ಮೆಟ್ಟಿಲುಗಳಿಗೆ ಹಿಡಿಗಂಬಿ ಇಲ್ಲ, ಜಾರಿಬಿದ್ದೀಯೆ, ಅಲ್ಲದೆ ಅಟ್ಟದ ಮೇಲೆ ಭೂತವಿದೆ ಎಂದು ಅವನಿಗೆ ಮಠದ ಸ್ವಾಮಿಗಳು ಹೆದರಿಸುತ್ತಾರೆ. ಆದರೂ ಆ ಹುಡುಗನಿಗೆ ಒಂದು ಕೆಟ್ಟ ಕುತೂಹಲ. ಒಂದು ದಿನ ಅಟ್ಟ ಹತ್ತಿ ಅಲ್ಲಿನ ಕೋಣೆಯ ಬಾಗಿಲು ತೆರೆದು ದೆವ್ವ ಕಂಡವನಂತೆ ಬೆಚ್ಚಿಬಿದ್ದು ಓಡಿ ಬರುತ್ತಾನೆ. ಮತ್ತೊಂದು ದಿನ ಧೈರ್ಯಮಾಡಿ ಮತ್ತೆ ಅಲ್ಲಿಗೆ ತೆರಳಿ ಬಾಗಿಲಲ್ಲಿ ಇಣುಕುತ್ತಾನೆ. ಅದು ಭೂತವಾಗಿರದೆ ಶಿಲುಬೆಯ ಮೇಲೆ ನೇತಾಡುತ್ತಿರುವ ಒಬ್ಬ ಮನುಷ್ಯನಂತೆ ತೋರುತ್ತದೆ. ಅದರ ಹತ್ತಿರ ಹೋಗಿ ಮಾತಾಡಿಸುತ್ತಾನೆ. ನೀನೇಕೆ ಹೀಗಿದ್ದೀಯ, ಹಸಿವಾಗುತ್ತಿದೆಯೇ ತಾಳು ರೊಟ್ಟಿ ತರುವೆ ಎಂದು ಅಡಿಗೆಮನೆಗೆ ಹೋಗಿ ಕದ್ದುಮುಚ್ಚಿ ರೊಟ್ಟಿ ತಂದು ಶಿಲುಬೆಯ ಮೇಲಿನ ಮನುಷ್ಯನಿಗೆ ಕೊಡುತ್ತಾನೆ. ನಿಧಾನವಾಗಿ ಕೈ ಕೆಳಗಿಳಿಸುವ ಆ ವ್ಯಕ್ತಿ ರೊಟ್ಟಿಯನ್ನು ತಿನ್ನುತ್ತಾನೆ. 
ಹೀಗೇ ಹಲವಾರು ದಿನ ನಡೆಯುತ್ತದೆ. ಊಟದ ಮೇಜಿನ ಬಳಿ ಕುಳಿತಾಗ ಎಲ್ಲರ ತಟ್ಟೆಗೂ ರೊಟ್ಟಿ ಬಡಿಸುತ್ತಾರೆ. ಒಂದೇ ಕ್ಷಣದಲ್ಲಿ ಮಾರ್ಸೆಲಿನೊ ತನ್ನ ತಟ್ಟೆಯೊಳಗಿನ ರೊಟ್ಟಿಯನ್ನು ಯಾರಿಗೂ ಕಾಣದಂತೆ ತೆಗೆದು ತನ್ನ ಅಂಗಿಯೊಳಗೆ ಸೇರಿಸಿಕೊಳ್ಳುತ್ತಾನೆ. ಅಡಿಗೆಯವನಿಗೆ ಏನೋ ಸಂದೇಹ, ಈಗಷ್ಟೇ ಅವನ ತಟ್ಟೆಯಲ್ಲಿ ರೊಟ್ಟಿ ಹಾಕಿದ ನೆನಪು, ಹುಡುಗ ಅಷ್ಟು ಬೇಗನೇ ತಿಂದು ಮುಗಿಸಿದನೇ, ಅಥವ ನಾನು ಅವನಿಗೆ ರೊಟ್ಟಿಯನ್ನೇ ಹಾಕಲಿಲ್ಲವೇ...?
ಒಂದು ದಿನ ಅಡಿಗೆಯವ ಈ ಕಳ್ಳಾಟವನ್ನು ಕಂಡುಕೊಂಡ. ಹುಡುಗನಿಗೆ ಗೊತ್ತಾಗದಂತೆ ಹಿಂಬಾಲಿಸಿ ಹೋದ. ಅಟ್ಟದಲ್ಲಿನ ಕೋಣೆಯಲ್ಲಿ ಮುರುಕಲು ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಶಿಲುಬೆಯ ಮನುಷ್ಯ ಹುಡುಗನ ಕೈಯಿಂದ ರೊಟ್ಟಿ ಇಸಿದುಕೊಂಡು ತಿಂದು ನೀರು ಕುಡಿಯುತ್ತಾನೆ. ಆಮೇಲೆ ಹುಡುಗನಿಗೆ ತಾನ್ಯಾರೆಂದು ಹೇಳುತ್ತಾನೆ. ಜಪಗಳನ್ನು ಹೇಳಿಕೊಡುತ್ತಾನೆ. ನಿನಗೇನು ಬೇಕು ಕೇಳು ಕೊಡುತ್ತೇನೆ ಎಂದಾಗ ಹುಡುಗ ನನಗೆ ನನ್ನ ಅಮ್ಮ ಬೇಕು ಎನ್ನುತ್ತಾನೆ. 
ನಿನ್ನ ಅಮ್ಮ ನನ್ನ ಅಮ್ಮನ ಬಳಿಯಿದ್ದಾಳೆ, ಬಾ ಕರೆದುಕೊಂಡು ಹೋಗುತ್ತೇನೆ ಎಂದು ಶಿಲುಬೆಯವ ಹೇಳುತ್ತಿದ್ದಂತೆ ಮಾರ್ಸೆಲಿನೊಗೆ ಗಾಢ ನಿದ್ದೆ ಬರುತ್ತದೆ, ಅವನ ದೇಹವನ್ನು ಒಂದು ಅಪೂರ್ವ ಬೆಳಕು ಆವರಿಸುತ್ತದೆ. ಬಾಗಿಲ ಸಂದಿಯಲ್ಲಿ ಇಣುಕುತ್ತಿದ್ದ ಮಠದ ಸ್ವಾಮಿಗಳೆಲ್ಲ ಬಿಟ್ಟ ಬಾಯಿ ಬಿಟ್ಟ ಹಾಗೇ ಇದನ್ನು ನೋಡುತ್ತಿರುತ್ತಾರೆ. ಆಮೇಲೆ ಅವರು ಚರ್ಚಿನ ಗಂಟೆಯನ್ನು ಢಣಢಣ ಬಾರಿಸಿ ಊರವರನ್ನೆಲ್ಲ ಕರೆದು ನಡೆದ ಕತೆಯನ್ನೆಲ್ಲ ಹೇಳಿ ಸುಂದರವಾದ ಹಾಡು ಹಾಡುತ್ತಾರೆ. 

ನಾ. ಡಿಸೋಜ

ನಮ್ಮೆಲ್ಲರ ಹೆಮ್ಮೆಯ ಹಾಗೂ ಮಕ್ಕಳ ಮೆಚ್ಚಿನ ಕತೆಗಾರ ನಾ ಡಿಸೋಜರ ಬಗ್ಗೆ ಕೇಳದವರಾರು? ಅವರ ಹೆಚ್ಚಿನ ಕತೆಗಳು ಚರ್ಚಿನ ಸುತ್ತಾಲೆ(compound)ಯಲ್ಲಿ ಅಡ್ಡಾಡಿದರೂ ಮಕ್ಕಳಿಂದ ಮುದುಕರವರೆಗೆ ಓದಿನ ಹುಚ್ಚು ಹಚ್ಚಿದ್ದು ಮಾತ್ರ ಸುಳ್ಳಲ್ಲ.
ನಾ. ಡಿಸೋಜ ಎಂದೇ ಹೆಸರುವಾಸಿಯಾಗಿರುವ ನಾರ್ಬರ್ಟ್ ಡಿಸೋಜರು ಶೀಮೊಗ್ಗೆ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು ಹುಟ್ಟಿದರು. ಇವರ ತಂದೆ ಫಿಲಿಪ್ ಡಿಸೋಜರು ಶಾಲಾ ಮಾಸ್ತರರಾಗಿದ್ದರಿಂದ ಅವರು ಶಾಲಾಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದುತ್ತಿದ್ದ ನಾ ಡಿಸೋಜ ಅವರಲ್ಲಿ ತನ್ನಿಂತಾನೇ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು, ಕತೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಮಲೆನಾಡಿನ ಸೊಬಗಿನೊಂದಿಗೆ ಎಲ್ಲಜನರ(public) ಪುಸ್ತಕಭಂಡಾರಗಳ ಅಪಾರ ಬರಹದ ಹೆದ್ದೊರೆಗಳ ನೀರು ಕುಡಿದ ನಾ ಡಿಸೋಜರಿಗೆ ಬರವಣಿಗೆ ತಾನಾಗಿ ಒದಗಿಬಂತು. ಇಂದಿಗೆ ಸುಮಾರು ಐವತ್ತು ವರುಶಗಳಿಂದಲೂ ಲೆಕ್ಕಣಿ(pen)ವಿಡಿದು ಕನ್ನಡ ಸಾಹಿತ್ಯದ ಎಲ್ಲ ನಮೂನೆಗಳಲ್ಲಿಯೂ ಗೀಚುತ್ತ ಬಂದಿರುವ ನಾರ್ಬರ್ಟ್ ಡಿಸೋಜರು ಇದೇ ಜನವರಿಯಲ್ಲಿ ನಡೆಯಲಿರುವ ೮೦ನೇ ಇಂಡಿಯಾ ದೇಶದ ಕನ್ನಡ ಸಾಹಿತ್ಯ ಕೂಟದ ತಲೆಯಾಳಾಗಿ(president) ಯಿಕೆಯಾಗಿದ್ದಾರೆ.

ಬದುಕಿಗೆ ಮೊದಲಿಟ್ಟಿದ್ದು
ನಾ ಡಿಸೋಜರು ಜನಗೆಲಸಗಳ ಚಾವಡಿಯಲ್ಲಿ (ಪೀಡಬ್ಲಿಯುಡಿ) ಬೆರಳಚ್ಚುಗಾರನಾಗಿ ಉಜ್ಜುಗಕ್ಕೆ ಸೇರಿ, ಆಮೇಲೆ ಅಲ್ಲಿಯೇ ಕಾರಕೂನನಾಗಿ ಶರಾವತಿ ಹಮ್ಮುಗೆ(project), ಕಾರ್ಗಲ್, ಮಾಸ್ತ್ತಿಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕೆಲಸ ಮಾಡಿದರು. ಜನಗೆಲಸಗಳ ಚಾವಡಿಯು ಕೈಗೊಂಡಿದ್ದ ಅಣೆಕಟ್ಟು ಹಮ್ಮುಗೆಗಳಲ್ಲ್ಲಿ ಮುಳುಗಡೆಯಾದ ಊರುಗಳ ಉಸಿರುಗಳು ಚಡಪಡಿಸಿದ ಪರಿಯನ್ನು ತಮ್ಮ ಲೆಕ್ಕಣಿಯಲ್ಲಿ ಪಡಿಮೂಡಿಸಿ ಬರೆದರು. ನಾಡಿಗೆ ಬೆಳಕನ್ನು ನೀಡಲು ಮೊದಲಿಟ್ಟ ಮಿನ್ಬಲ ಹಮ್ಮುಗೆಗಾಗಿ (ವಿದ್ಯುಚ್ಛಕ್ತಿ ಯೋಜನೆ) ಎಷ್ಟೋ ಜನರ ಹದುಳವಾದ ಬದುಕನ್ನು ಮೂರಾಬಟ್ಟೆಯಾಗಿಸಿದ್ದನ್ನು ಹೇಳುವಮುಳುಗಡೆಎಂಬ ನೀಳ್ಗತೆಯು ಸುಧಾ ಯುಗಾದಿ ಕಾದಂಬರಿ ಪೋಟಿಯಲ್ಲಿ ಬೋಮಾನ ಪಡೆಯಿತು. ಅದೇ ಸರಕುಳ್ಳದ್ವೀಪನೀಳ್ಗತೆಯು ಓಡುಚಿತ್ತಾರವಾಗಿ ಹೊಂದಾವರೆಯನ್ನು ಮುಡಿಗೇರಿಸಿತು.
ಹಸಿರೇ ಉಸಿರೆನ್ನುವ ಕತೆಗಾರ ನಾ ಡಿಸೋಜರು ತಮ್ಮೆಲ್ಲ ಬರಹಗಳಲ್ಲಿ ಹಸಿರುಳಿಸುವ ಬಗ್ಗೆ ಎಚ್ಚರಿಸುತ್ತ ಬಂದಿದ್ದು ಹಸಿರಿನ ಅಳಿವೇ ಮಂದಿಯ ಅಳಿವು ಎಂಬುದನ್ನು ಮತ್ತೆ ಮತ್ತೆ ತೋರಿದ್ದಾರೆ. ಕನ್ನಡ ನುಡಿಸಿರಿಯಲ್ಲಿ ಮಕ್ಕಳಿಗಾಗಿಯೇ ಬಹಳಷ್ಟು ಬರಹಗಳನ್ನು ಬರೆದಿರುವ ಡಿಸೋಜರು ಮಕ್ಕಳ ಮೆಚ್ಚಿನ ಕತೆಗಾರನಾಗಿದ್ದಾರೆ.

ಕತೆ ಕಾದಂಬರಿ
ನಾ ಡಿಸೋಜ ಅವರ ಕತೆಗಳ ಬೇಸಾಯವು ಪ್ರಪಂಚ ಪತ್ರಿಕೆಯಲ್ಲಿ ಮೊದಲ ಫಸಲು ಬಿಟ್ಟಿತು. ಇಂದು ನಾಡಿನ ಎಲ್ಲ ಸುದ್ದಿಹಾಳೆಗಳು ಡಿಸೋಜರಿಗೆ ಕತೆ ಬರೆದುಕೊಡಿ ಎಂದು ಕೇಳುವಷ್ಟು ಜನಮೆಚ್ಚುಗೆ ಅವರ ಹಿರಿಮೆ. ಹಿಂದೊಮ್ಮೆ ಅವರ ಇಪ್ಪತ್ತೈದು ಸಣ್ಣ ಕತೆಗಳ ಗೊಂಚಲು ಬೆಳಕುಕಂಡಿತ್ತು. ಇದೀಗ ಸಾಗರ ಪ್ರಕಾಶನದವರು ನಾ ಡಿಸೋಜರ ಎಲ್ಲ ಸಣ್ಣಕತೆಗಳನ್ನು ಕೂಡಿಸಿ ಎರಡು ಹಿರಿಹೊತ್ತಿಗೆಗಳನ್ನು ಹೊರತಂದಿದ್ದಾರೆ. ಡಿಸೋಜ ಅವರ ಹಲವಾರು ಸಣ್ಣಕತೆಗಳು ಕೊಂಕಣಿ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲಿಷ್ ನುಡಿಗಳಿಗೂ ಮಾರ್ಪಾಟಾಗಿವೆ. ನಾ ಡಿಸೋಜರ ಕತೆಗಳ ಎಣಿಕೆಯೇ ೪೦೦ ಮುಟ್ಟುತ್ತದೆಂದರೆ ಅವರ ಲೆಕ್ಕಣಿಯ ಹರಿವು ಎಷ್ಟು ಸರಾಗ ಎಂದು ಊಹಿಸಬಹುದು.
ಡಿಸೋಜರ ಮೊದಲ ಕಾದಂಬರಿಬಂಜೆ ಬೆಂಕಿ೧೯೬೪ರಲ್ಲಿ ಬೆಳಕಿಗೆ ಬಂತು. ಹಸಿರಿನಳಿವು, ಕ್ರಿಸ್ತುವ ಮಂದಿಯ ನಡೆನುಡಿ, ಕಳ್ಳ ಸಂಪಾದನೆ, ಹಿಂದುಳಿದ ಬುಡಕಟ್ಟು ಜನರ ಬದುಕು ಹೀಗೆ ಹಲವು ಹತ್ತು ಚಿತ್ತಾರಗಳನ್ನೊಳಗೊಂಡ ಅವರ ೮೦ಕ್ಕೂ ಮಿಗಿಲಾದ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ಸುರೇಶ್ ಹೆಬ್ಳೀಕರ್ ಅವರ ತೋರುದಾರಿ(direction)ಯಲ್ಲಿಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ತೋರುದಾರಿಯಲ್ಲಿದ್ವೀಪ’, ಸಿರಿಗಂಧ ಶ್ರೀನಿವಾಸಮೂರ್ತಿಯವರ ತೋರುದಾರಿಯಲ್ಲಿಬಳುವಳಿ’, ಕೋಡ್ಲು ರಾಮಕೃಷ್ಣರವರ ತೋರುದಾರಿಯಲ್ಲಿಬೆಟ್ಟದಪುರದ ದಿಟ್ಟಮಕ್ಕಳುಮತ್ತು ಮನುರವರ ತೋರುದಾರಿಯಲ್ಲಿಆಂತರ್ಯಕಾದಂಬರಿಗಳು ಓಡುಚಿತ್ತಾರಗಳಾಗಿಯೂ ಜಮೆಚ್ಚುಗೆಯನ್ನು ಪಡೆದಿವೆ. ದ್ವೀಪ ಕಾದಂಬರಿಯು ಐಲ್ಯಾಂಡ್ ಎಂಬ ಹೆಸರಿನಲ್ಲಿ ಇಂಗ್ಲಿಶಿಗೆ ಹೋಗಿ ಆಕ್ಸ್ಫರ್ಡ್ ಓದುಮನೆಯ ಅಚ್ಚುಗೂಡಿನ ಮೂಲಕ ಬೆಳಕು ಕಂಡಿದೆ.
ಕುವೆಂಪು ಓದುಮನೆ, ಬೆಂಗಳೂರು ಓದುಮನೆ, ಮಂಗಳೂರು ಓದುಮನೆ ಮತ್ತು ಕರ್ನಾಟಕ ಓದುಮನೆಗಳಲ್ಲಿಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳುಮುಂತಾದ ಕಾದಂಬರಿಗಳು ಕಲಿಕಾಪುಸ್ತಕಗಳಾಗಿ ಅವರ ಬರಹಗಳ ಎತ್ತರಕ್ಕೆ ತೋರುಗನ್ನಡಿಯಾಗಿವೆ. ಹೀಗೆ ಎಲ್ಲರಿಗೂ ಓದನ್ನೇ ಉಣಬಡಿಸಿದ ಡಿಸೋಜರವರ ಎಲ್ಲ ಬರಹಗಳು ಓದುಮನೆಗಳಲ್ಲಿ ಅರಿವಿನ ಹುಡುಕಾಟಕ್ಕೆ ಪಿರಿದಾದ ಸರಕಾಗಿಯೂ ಹೊರಹೊಮ್ಮಿದೆ. ಎಂಫಿಲ್ ಪದವಿಗಾಗಿ ಮದರಾಸು ಓದುಮನೆಯ ಶ್ರೀ ಪ್ರಕಾಶ್ ಸೈಮನ್ರವರುನಾ. ಡಿಸೋಜರವರ ೨೫ ಕತೆಗಳು ಒಂದು ಅಧ್ಯಯನ’ (೧೯೯೫), ಮಧುರೆ ಕಾಮರಾಜ ಓದುಮನೆಯ ಎಂ.ಎಂ. ಮಂಜುನಾಥರವರುನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ - ಒಂದು ಅಧ್ಯಯನ’ (೧೯೯೮), ಕುವೆಂಪು ಓದುಮನೆಯ ಟಿ.ಎಸ್. ಶೈಲಾರವರುನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳು’ (೨೦೦೧) ಮುಂತಾದ ಪೆರ್ಬರಹ(thesis)ಗಳನ್ನು ಬರೆದಿದ್ದಾರೆ. ಕರ್ನಾಟಕ ಓದುಮನೆಯ ಗಂಗಾ ಮೂಲಿಮನಿಯವರುನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನಪೆರ್ಬರಹಕ್ಕೆ ಡಾಕ್ಟರೇಟ್ (೨೦೦೧) ಪಡೆದಿದ್ದಾರೆ.

ಚುರುಕಾದ ಆಳ್ತನ
ನಾ. ಡಿಸೋಜ ಅವರು ಬರವಣಿಗೆ ಮಾತ್ರವಲ್ಲದೆ ಹಸಿರುಳಿಕೆಯ ಜಗ್ಗಾಟಕ್ಕೂ ಟೊಂಕಕಟ್ಟಿ ನಿಂತಿದ್ದಾರೆ. ಇಕ್ಕೇರಿ ಗಣಿಬೇಡ ಹೋರಾಟ, ಅಂಬುತೀರ್ಥದಿಂದ ಅರಬ್ಬೀಸಮುದ್ರದವರೆಗಿನ ಶರಾವತಿ ನಡೆ, ತಾಳಗುಪ್ಪ ಶಿವಮೊಗ್ಗ ಬ್ರಾಡ್ ಗೇಜ್ ಹೋರಾಟ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ (೧೯೯೫), ಕನ್ನಡ ಪುಸ್ತಕ ಪ್ರಾಧಿಕಾರ (೧೯೯೫), ಕುವೆಂಪು ಓದುಮನೆ ಸೆನೆಟ್ (೧೯೯೬-೯೮), ಹಂಪಿ ಕನ್ನಡ ಓದುಮನೆ ಸೆನೆಟ್ (೧೯೯೩-೯೫; ೧೯೯೬-೯೮), ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್ತು (೧೯೯೬-೯೯), ಕುವೆಂಪು ರಂಗಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆಗಳಲ್ಲಿ ತಾವು ಪಡೆದಿದ್ದಾರೆ.
ಹಲವಾರು ಹಿರಿತನದ ಮರ್ಯಾದೆಗಳು ನಾ ಡಿಸೋಜರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮರ್ಯಾದೆಯು ಎರಡು ಸಲ (೧೯೮೮, ೧೯೯೩) ಇವರ ಮುಡಿಗೇರಿದೆ. ಅಲ್ಲದೆ ಗುಲ್ವಾಡಿ ವೆಂಕಟಾವ್ ಬಾಳ್ಗಳ್ಚು(award)(೧೯೮೮), ಸಂದೇಶ್ ಸಾಹಿತ್ಯ ಬಾಳ್ಗಳ್ಚು(೧೯೯೮), ನಿರಂಜನ ಸಾಹಿತ್ಯ ಬಾಳ್ಗಳ್ಚು(೨೦೦೩), ಆಳ್ವಾಸ್ ನುಡಿಸಿರಿ ಬಾಳ್ಗಳ್ಚು(೨೦೦೬), ವರ್ಧಮಾನ ಬಾಳ್ಗಳ್ಚು(೨೦೦೬), ಚಿತ್ರದುರ್ಗದ ಬೃಹನ್ಮಠದಿಂದ ಶಿವಮೂರ್ತಿ ಮುರುಘಾ ಶರಣ ಬಾಳ್ಗಳ್ಚು(೨೦೧೧), ಕೇಂದ್ರಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಬಾಳ್ಗಳ್ಚು(೨೦೧೧), ಮಾಸ್ತಿ ಬಾಳ್ಗಳ್ಚು(೨೦೧೨), ಭಟ್ಕಳ ತಾಲ್ಲೂಕು ಎರಡನೇ ಸಾಹಿತ್ಯ ಸಮ್ಮೇಳ ಹಿರಿಪದ (೨೦೦೬), ಬೊಂಬಾಯಿಯ ಇಡೀ ಇಂಡಿಯಾ ಸಂಸ್ಕೃತಿ ಸಮ್ಮೇಳನದ ಹಿರಿಪದ (೨೦೦೬), ಕನ್ನಡ ದೇಶೋತ್ಸವ ಬಾಳ್ಗಳ್ಚು(೧೯೯೭), ಮತ್ತು ಕುವೆಂಪು ಓದುಮನೆ ಗವುರವ ಡಾಕ್ಟರೇಟ್ (೨೦೦೭) ಮುಂತಾದ ಹೊನ್ನಿನ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ನಾ. ಡಿಸೋಜರವರಿಗೆ ಒಳಿತಾಗಲಿ.

ನಾ ಡಿಸೋಜರ ಬಗೆಗೆ ಮತ್ತಷ್ಟು ತಿಳಿಯಬೇಕೆನ್ನುವವರು ಹೊತ್ತಿಗೆಗಳನ್ನು ನೋಡಬಹುದು. ಸಾಗರದ ವಿಲಿಯಂ ಅವರು ಬರೆದಿರುವ "ನಾ. ಡಿಸೋಜ ಬದುಕು ಬರಹ", ಸರ್ಪರಾಜ ಚಂದ್ರಗುತ್ತಿಯವರು ಬರೆದಿರುವ "ನಾ. ಡಿಸೋಜ ಎಂಬ ಶರಾವತಿಯ ನಾಲ್ಕು ಜಲಧಾರೆಗಳು", "ಮಲೆನಾಡಿಗ" ಡಾ. ನಾ. ಡಿಸೋಜ ಸಾಹಿತ್ಯ ಕುರಿತ ಚಿಂತನ ಮಂಥನ ಹಾಗೂ "ಬುತ್ತಿ" ನಾ. ಡಿಸೋಜರ ಬದುಕಿನ ಒಳ ನೋಟಗಳು.