ಗುರುವಾರ, ಜನವರಿ 31, 2013

ದ ರಾ ಬೇಂದ್ರೆ


ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಅಪಾರ ಸಾಹಿತ್ಯರಾಶಿಯನ್ನು ವಷರ್ಿಸಿದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಯುಗದಕವಿ ಜಗದಕವಿ ಸಹಜಕವಿ. `ಅಂಬಿಕಾತನಯದತ್ತ'ನಾಗಿ ಅವರು `ಇಳಿದು ಬಾ ತಾಯೆ ಇಳಿದು ಬಾ', 'ಮೂಡಲ ಮನೆಯ ಮುತ್ತಿನ ನೀರಿನ', 'ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಮುಂತಾದ ಜನಪ್ರಿಯ ಕವನಗಳನ್ನು ಕನ್ನಡಿಗರಿಗಿತ್ತಿದ್ದಾರೆ.
1896ನೆಯ ಇಸವಿ ಜನವರಿ 31 ರಂದು ಜನಿಸಿದ ಬೇಂದ್ರೆಯವರು 1913ರಲ್ಲಿ ಮೆಟ್ರಿಕ್ಯುಲೇಶನ್ ತೇರ್ಗಡೆಯಾಗಿ ಪುಣೆಯ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಕೆಲಕಾಲ ಧಾರವಾಡದ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. 1935ರಲ್ಲಿ ಎಂಎ ಪದವಿಯ ನಂತರ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ (1942-1956) ಕೆಲಸ ಮಾಡಿದರು. 1956ರಲ್ಲಿ ಧಾರವಾಡ ಆಕಾಶವಾಣಿಯ ಸಾಹಿತ್ಯ ಸಲಹೆಗಾರ ವೃತ್ತಿಗೆ ಬಂದರು. ಕವಿತೆ ಬರೆಯುವುದು ಇವರ ಹವ್ಯಾಸವಾಗಿತ್ತು. 1925 ರಲ್ಲಿ ಪ್ರಕಟವಾದ `ಕೃಷ್ಣಕುಮಾರಿ' ಇವರ ಮೊದಲ ಕವನಸಂಕಲನ. ಮುಂದೆ ಸಾಲು ಸಾಲಾಗಿ `ಗರಿ', `ಕಾಮಕಸ್ತೂರಿ', `ಸೂರ್ಯಪಾನ', `ನಾದಲೀಲೆ', `ನಾಕುತಂತಿ', `ಸಖೀಗೀತ', `ಮೇಘದೂತ', `ಶ್ರಾವಣ ಬಂತು' ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.
ಮರಾಠಿಯು ಅವರ ಮನೆಯ ಮಾತಾಗಿತ್ತು. ಹೊರಗೆ ಕನ್ನಡದ ಗೆಳೆಯರೊಡನೆ `ಗೆಳೆಯರ ಗುಂಪು' ಕಟ್ಟಿ ಕನ್ನಡ ಸಾರಸ್ವತಲೋಕದ ಚಟುವಟಿಕೆಗಳಲ್ಲಿ ತೊಡಗುವುದು ಅವರ ಹವ್ಯಾಸವಾಗಿತ್ತು. ಧಾರವಾಡದ ಸಾಧನಕೇರಿ ಅವರ ಸಾಹಿತ್ಯಕೃಷಿಯ ನೆಲೆಯಾಗಿ ರೂಹು ಪಡೆಯಿತು. ಅದಮ್ಯ ದೇಶಪ್ರೇಮಿಯಾದ ಅವರು ಕವನಗಳ ಮೂಲಕವೇ ಜನರಲ್ಲಿ ದೇಶಾಭಿಮಾನದ ರೋಮಾಂಚಕ ಭಾವಗಳನ್ನು ಬಿತ್ತಿದರು. `ನರಬಲಿ' ಎಂಬ ಅವರ ಕವನದಿಂದ ಅಸಮಾಧಾನಗೊಂಡ ಆಗಿನ ಬ್ರಿಟಿಷ್ ಸರ್ಕಾರವು ಕೆಲಕಾಲ ಅವರನ್ನು ಸೆರೆಮನೆಗೂ ದೂಡಿತ್ತು.
ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಅವರ 'ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಂವಾ' ಎನ್ನುವಂತ ಕವಿತೆಗಳು ಜನಪದ ಸಾಹಿತ್ಯದಂತೆ ಜನಜನಿತವಾಗಿದ್ದವು. 'ಪಾತರಗಿತ್ತೀ ಪಕ್ಕಾ ನೋಡಿದೇನೇ ಅಕ್ಕಾ' ಎಂದು ಮಕ್ಕಳೂ ಹಾಡಿ ಕುಣಿದರು.
ಜೀವನ ಸುಂದರವಾಗಿ ನಡೆಯುತ್ತಿದೆ ಎನ್ನುವಾಗ ಅವರ ಬದುಕಿನಲ್ಲಿ ದುರಂತಗಳು ಸಂಭವಿಸಿ ಅವರನ್ನು ಅಧ್ಯಾತ್ಮ ದರ್ಶನದತ್ತ ದೂಡಿದವು. ಪ್ರೀತಿಪ್ರೇಮಗಳ ಕಥನಗಳ ಕವನಗಳನ್ನು ಲೆಕ್ಕವಿಲ್ಲದೆ ಬರೆದಿದ್ದ ಅವರು ಮಾಗಿದ ಕಾಲಕ್ಕೆ ದಾರ್ಶನಿಕನಂತೆ ಬರೆಯತೊಡಗಿದರು. 'ನೀ ಹೀಂಗ ನೋಡಬ್ಯಾಡ ನನ್ನ' ಎಂಬ ಕವನ ಅದಕ್ಕೆ ನಾಂದಿಯಾಗಿತ್ತು. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬುದು ಅವರ ಜೀವನಮಂತ್ರವಾಯಿತು. ಮಹರ್ಷಿ ಅರವಿಂದರ ಛಾಯೆ ಅವರ ಜೀವನದಲ್ಲೂ ಕಾವ್ಯದಲ್ಲೂ ಕಾಣಬರುತ್ತದೆ.
ಕವಿತೆಗಳಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ಅಣಕವಾಡುಗಳು, ನಗೆಬರಹಗಳು, ಅನವಾದ ಹಾಗೂ ವಿಮರ್ಶಾ ಪ್ರಕಾರಗಳಲ್ಲೂ ಸಹಾ ಅವರು ಕೈಯಾಡಿಸಿದ್ದಾರೆ. ಒಂಭತ್ತು ವಿಮರ್ಶಾ ಗ್ರಂಥಗಳನ್ನು, ಹದಿನಾಲ್ಕು ನಾಟಕಗಳನ್ನು, ಏಳು ಅನುವಾದ ಕೃತಿಗಳನ್ನು ರಚಿಸಿದ್ದಾರಲ್ಲದೆ ಮರಾಠಿ ಭಾಷೆಯಲ್ಲೂ ಐದು ಕೃತಿಗಳನ್ನು ಬರೆದಿದ್ದಾರೆ. ಮರಾಠಿಯ ಅವರ ಕೃತಿಯೊಂದಕ್ಕೆ ಅಲ್ಲಿನ ಪ್ರತಿಷ್ಠಿತ ಕೇಳ್ಕರ್ ಪ್ರಶಸ್ತಿ ದೊರೆತಿದೆ. ಉಪನಿಷತ್ ರಹಸ್ಯ, ಕಬೀರ ವಚನಾವಲಿ, ಭಗ್ನಮೂರ್ತಿ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಬರೆದ ನಾಟಕಗಳು ವಾಸ್ತವ ಜೀವನದ ಚಿತ್ರಣವಾದರೂ ಗೂಢಾರ್ಥವನ್ನು ನಿರ್ದೇಶಿಸುತ್ತವೆ. ಈ ಪ್ರಯೋಗ ಕೂಡಾ ಕನ್ನಡಕ್ಕೆ ಹೊಸದು.
ಸಂಖ್ಯೆಗಳ ಸಂಕೇತಗಳನ್ನು ಬಹು ಸಮರ್ಥವಾಗಿ ಕಾವ್ಯಗಳಲ್ಲಿ ಬಳಸಿಕೊಂಡ ವಿಶಿಷ್ಟ ಕವಿ ಬೇಂದ್ರೆಯವರು. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು. ಈ ನಿಟ್ಟಿನಲ್ಲಂತೂ ಅವರು ಶಕ್ತಿಕವಿ. ಅವರ ಪದಸಂಪತ್ತು ಎಲ್ಲರಿಗೂ ನಿಲುಕುವಂತದಲ್ಲ. ಸಂಸ್ಕೃತಭೂಯಿಷ್ಟವಲ್ಲದ ಧಾರವಾಡದ ಗಂಡುಭಾಷೆಯಲ್ಲಿ ಅವರು ಪದಗಳನ್ನು ತಕದಿಮಿ ಆಡಿಸಿದ್ದಾರೆ. ಅವರ ಕಾವ್ಯಗಳನ್ನು ಓದಿ ವಿವರಿಸಬಲ್ಲವನಿಗೆ ಎಂಟೆದೆ ಇರಬೇಕು. ಅವು ಆಡುಮಾತು, ಬಳಕೆಮಾತು ವ್ಯಂಜನ ಗುಂಜನಗಳ ಸಂಮೃದ್ಧಿ, ಭಾವ ಬುದ್ಧಿಗಳ ಸಮಾಗಮ. ಕನ್ನಡ ಭಾಷೆಯ ಅರ್ಥಗೌರವವನ್ನು ಅಭಿವ್ಯಕ್ತಿ ಶಕ್ತಿಯನ್ನು ದೇದೀಪ್ಯಮಾನವಾಗಿ ಬೆಳಗಿಸಿದರು. ಈ ದೃಷ್ಟಿಯಿಂದ ಅವರು ಅಪ್ರತಿಮ ಕನ್ನಡಿಗ ಮತ್ತು ವರಕವಿ.
ಎಲ್ಲ ಕಾಲದ ಕಾವ್ಯಪ್ರೇಮಿಗಳಿಗೆ ಸ್ಫೂರ್ತಿಯ ಸೆಲೆಯಾದ ಬೇಂದ್ರೆಯವರಿಗೆ ರಾಷ್ಟ್ರದ ಅತ್ಯುನ್ನತ ಸಾಹಿತ್ಯಪುರಸ್ಕಾರವಾದ ಜ್ಞಾನಪೀಠದ ಗೌರವ ಲಭಿಸಿದೆ. ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ. ಸಾಧನಕೇರಿಯ ಅವರ ಮನೆಯನ್ನು ಸರ್ಕಾರವು ಸ್ಮಾರಕವಾಗಿ ಸಂರಕ್ಷಿಸಿದೆ.