ಬೂದಿ ಬುಧವಾರ ಅಥವಾ ಆಷ್ ವೆನ್ಸ್ ಡೇ ಕ್ರೈಸ್ತರ ತಪಸ್ಸುಕಾಲದ ಪ್ರಾರಂಭದ ದಿನ. ಬೂದಿ ಎಂದರೆ ಬೆಂಕಿ ನಂದಿದ ಮೇಲೆ ಉಳಿಯುವ ಇಂಗಾಲ ವಸ್ತು ಅಲ್ಲವೇ? ಈ ಬೂದಿಗೂ ಬುಧವಾರಕ್ಕೂ ಅದಾವ ನಂಟು? ಈ ದಿನದ ವಿಶೇಷವಾದರೂ ಏನು?
ಶುಭಶುಕ್ರವಾರ ಅಥವಾ ಗುಡ್ ಫ್ರೈಡೇಗೆ ಮುಂಚಿನ ನಾಲ್ವತ್ತು ದಿನಗಳು ಕ್ರೈಸ್ತರಿಗೆ ತಪಸ್ಸಿನ ದಿನಗಳು. ಈ ಬುಧವಾರವೆಂಬ ಬಾಗಿಲ ಮೂಲಕವೆ ತಪಸ್ಸುಕಾಲಕ್ಕೆ ಪ್ರವೇಶ. ಇಂದಿನಿಂದ ಗುಡ್ ಫ್ರೈಡೇವರೆಗೂ ಕ್ರೈಸ್ತರು ತ್ಯಾಗಜೀವನ ನಡೆಸುತ್ತಾರೆ.
ಹಿಂದೆಲ್ಲ ಯೆಹೂದ್ಯ ಸಂಸ್ಕೃತಿಯಲ್ಲಿ ಜನರು ತಮಗೆ ಕೆಡುಕುಂಟಾದಾಗ ತಾವು ದೇವರಿಗೆ ವಿಮುಖರಾದ್ದರಿಂದಲೇ ಕಷ್ಟಕೋಟಲೆ ಅನುಭವಿಸಬೇಕಾಗಿ ಬಂತೆಂದು ಬಗೆದು ಪ್ರಾಯಶ್ಚಿತ್ತ ರೂಪವಾಗಿ ಮೈಗೆಲ್ಲ ಬೂದಿ ಬಳಿದುಕೊಂಡು ಉತ್ತಮ ದುಕೂಲಗಳನ್ನು ತೊರೆದು ನಾರುಮಡಿಯುಟ್ಟು ತಪಶ್ಚರ್ಯೆ ಕೈಗೊಳ್ಳುತ್ತಿದ್ದರು. ಅದನ್ನೇ ಇಂದು ಕ್ರೈಸ್ತರು ಸಾಂಕೇತಿಕವಾಗಿ ಆಚರಿಸುತ್ತಾರೆ.
ಕ್ರೈಸ್ತರೆಲ್ಲ ಚರ್ಚಿಗೆ ತೆರಳಿ ದೇವಾರಾಧನೆ ನಡೆಸಿ ಗುರುವರ್ಯರ ಮುಂದೆ ಸಾಲಾಗಿ ನಿಲ್ಲುತ್ತಾರೆ. ಗುರುವರ್ಯರು ಬೂದಿಬಟ್ಟಲಿನಿಂದ ಚಿಟಿಕೆ ಚಿಟಿಕೆ ಬೂದಿ ತೆಗೆದು ಭಕ್ತಾದಿಗಳ ಹಣೆಯ ಮೇಲೆ ತಿಲಕದಂತೆ ಶಿಲುಬೆ ಗುರುತು ಹಾಕುತ್ತಾ ’ಮಣ್ಣಿಂದ ಬಂದ ಕಾಯವಿದು, ಮರಳಿ ಮಣ್ಣಿಗೇ ಸೇರುವುದು’ ಎಂದು ಉದ್ಘೋಷಿಸುತ್ತಾರೆ. ಆ ಸಂದರ್ಭದಲ್ಲಿ ಗಾನವೃಂದದವರು ’ಮಣ್ಣಿನಿಂದ ಸೃಷ್ಟಿಯಾದ ಮನುಜನೇ ಮರೆಯಬೇಡ ಮರಳಿ ಸೇರ‍್ವೆ ಮಣ್ಣಿಗೆ, ಸುಳ್ಳು ಬೇಡ ಸತ್ಯ ಹಾದಿ ಹುಡುಕುವ, ದ್ವೇಷ ತ್ಯಜಿಸಿ ಐಕ್ಯದಿಂದ ಬಾಳುವ . . . ’ ಎಂದು ಹಾಡುತ್ತಾರೆ.
ಹಣೆಯ ಮೇಲಿನ ವಿಭೂತಿಯ ಅನುಭೂತಿ ಒಂದೆಡೆಯಾದರೆ ಗುರುಗಳ ಮಾತಿನ ಒಳಾರ್ಥ ಮತ್ತೊಂದೆಡೆ, ಮನಕಲಕುವುದಕ್ಕೆ ಇನ್ನೇನು ತಾನೇ ಬೇಕು? ಜೀವನ ನಶ್ವರ, ಜೀವನ ಕ್ಷಣಿಕ, ಈ ಕೂಡಲೇ ಪಾಪಕ್ಕೆ ವಿಮುಖರಾಗಿ ದೇವರೆಡೆಗೆ ಅಭಿಮುಖರಾಗಬೇಕೆನ್ನುವ ಅರಿವು ತಪಶ್ಚರ್ಯೆಗೆ ನಾಂದಿಯಾಗುತ್ತದೆ. ತಪಶ್ಚರ್ಯೆ ಎಂದರೆ ಹಿಂದಿನಂತೆ ವನವಾಸಕ್ಕೆ ತೆರಳಿ ಒಂಟಿಕಾಲಲ್ಲಿ ನಿಂತು, ಪಂಚಾಗ್ನಿಯಲ್ಲಿ ಬೆಂದು ಮಂತ್ರ ಹೇಳುತ್ತಾ ತಪಸ್ಸು ಮಾಡಲು ಸಾಧ್ಯವೇ? ಇಂದಿನ ಕಾಲದ ಸಾಂಕೇತಿಕ ತಪಸ್ಸಿನ ರೀತಿಯೇ ಬೇರೆ. ಈ ದಿನಗಳಲ್ಲಿ ಜನ ದೈನಂದಿನ ಕೆಲಸಗಳನ್ನು ಕುಂದಿಲ್ಲದೆ ನಡೆಸುತ್ತಲೇ ವ್ಯಕ್ತಿಗತ ವಾಂಛೆಗಳನ್ನು ಬಿಟ್ಟುಬಿಡುತ್ತಾರೆ. ಮನರಂಜನೆಯಿಂದ ದೂರಾಗುತ್ತಾರೆ, ಚಟಗಳನ್ನು ತೊರೆಯುತ್ತಾರೆ, ಮಾಂಸಾಹಾರ ವರ್ಜಿಸುತ್ತಾರೆ, ಪಾರ್ಟಿಗಳು ಔತಣಕೂಟಗಳು ಇಲ್ಲವಾಗುತ್ತವೆ, ಮದ್ಯಸೇವನೆ ಧೂಮಪಾನ ಸಿನಿಮಾ ಗಡದ್ದು ಊಟಗಳ ಬದಲಿಗೆ ಒಂದೊತ್ತು ಉಪವಾಸ ಇಲ್ಲವೇ ಸಪ್ಪೆ ಸಾರನ್ನವೇ ಪರಮಾನ್ನವಾಗುತ್ತದೆ. ಆಭರಣಗಳು ಪೆಟ್ಟಿಗೆ ಸೇರುತ್ತವೆ, ಪ್ರಸಾಧನಗಳ ಬಳಕೆ ಕಡಿಮೆಯಾಗುತ್ತದೆ, ಬಟ್ಟೆಗಳಲ್ಲೂ ಸರಳತೆ ಕಾಣುತ್ತದೆ. ತಮಗೆ ತುಂಬಾ ಇಷ್ಟವಾದುದನ್ನು ತ್ಯಾಗ ಮಾಡುವುದೂ ಒಂದು ರೀತಿಯಲ್ಲಿ ತಪಸ್ಸೇ ಹೌದು.
ಕಂದಾಚಾರ, ಡಂಭಾಚಾರ, ಕುರುಡು ಕಟ್ಟಳೆ, ದರ್ಪ ದಬ್ಬಾಳಿಕೆಗಳಲ್ಲಿ ಕಳೆದುಹೋಗಿದ್ದ ಮನುಷ್ಯತ್ವವನ್ನು ಎತ್ತಿಹಿಡಿಯಲು ಯೇಸುಕ್ರಿಸ್ತನು ಎಷ್ಟೆಲ್ಲ ಯಾತನೆ ಅನುಭವಿಸಿರುವಾಗ, ಅದರ ಸ್ಮರಣೆಗಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ?