ಶುಕ್ರವಾರ, ಮೇ 10, 2013

ದುಂದುಗಾರ ಮಗ

ಯೇಸುಕ್ರಿಸ್ತನು ಕತೆಗಳ ಮೂಲಕ ಜನರಿಗೆ ಹೊಸ ಸಂದೇಶ ನೀಡುತ್ತಿದ್ದನು. ಅವನು ಹೇಳಿದ ಎಷ್ಟೋ ಕತೆಗಳು ಇಂದಿಗೂ ರಂಜನೀಯವಾಗಿವೆ, ಮಾತ್ರವಲ್ಲ ಪ್ರತಿಸಾರಿಕೇಳಿದಾಗಲೂ ಹೊಸ ಅರ್ಥ ಹೊರಡಿಸುತ್ತವೆ.
ಯೇಸುಕ್ರಿಸ್ತನು ಹೇಳಿದ ಕತೆಗಳಲ್ಲಿ ಬಲು ಸುಂದರವಾದುದು ದುಂದುಗಾರ ಮಗನ ಕತೆ.
ಒಬ್ಬ ಶ್ರೀಮಂತನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅಪಾರ ಜಮೀನು, ಆಳುಕಾಳು, ಒಳ್ಳೆ ಆಸ್ತಿಪಾಸ್ತಿ, ಯಾವುದಕ್ಕೂ ಕೊರತೆಯಿಲ್ಲದ ಜೀವನ ಅವರದಾಗಿತ್ತು. ಹಿರಿಮಗ ಹೊಲದ‌ಉಸ್ತುವಾರಿ ನೋಡಿಕೊಂಡರೆ, ತಂದೆಯು ಇತರೆಲ್ಲ ವ್ಯವಹಾರಗಳನ್ನು ನೋಡುತ್ತಿದ್ದರು. ಪ್ರಶಾಂತ ಕಡಲಲ್ಲಿ ಬಿರುಗಾಳಿ ಬೀಸಿತೋ ಎಂಬಂತೆ ಆ ಮನೆಯಲ್ಲಿ ಒಂದು‌ಆಘಾತಕಾರೀ ಘಟನೆ ನಡೆಯಿತು. ಯಾಕೋ ಏನೋ ಕಿರಿಮಗ ಅಪ್ಪನ ಎದುರು ಸೆಟೆದು ನಿಂತು ’ಅಪ್ಪಾ ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಈಗಲೇ ಕೊಟ್ಟುಬಿಡು,ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು’ ಎಂದ. ಅದೇನು ವಯೋಮಾನದ ಗುಣವೋ, ಸಹವಾಸದೋಷವೋ ಅಥವಾ ಯಾವ ಪ್ರಲೋಭನೆಯೋ ಏನೋ ಅಂತೂ ಪಾಲುತೆಗೆದುಕೊಂಡು ಯಾವುದಾದರೂ ಹೊರದೇಶಕ್ಕೆ ಹೋಗಿ ಸ್ವತಂತ್ರವಾಗಿ ಬದುಕಬೇಕೆಂದು ಆತ ಬಯಸಿದ. ಅವನ ಈ ವರ್ತನೆ ನೋಡುತ್ತಲೇ ಅಪ್ಪ ದಂಗಾದ. ಮಗನ‌ಅನುಭವದ ಕುರಿತು ಬುದ್ಧಿ ಹೇಳಿದ. ಆದರೆ ಮಗ ಕೇಳಿಯಾನೇ? ಅವನ ಹಠವೇ ಹಠ. ತನಗೆ ಆಸ್ತಿಯಲ್ಲಿ ಪಾಲು ಬೇಕೇಬೇಕೆಂದು ಕುಣಿಯತೊಡಗಿದ. ವಯಸ್ಸಿಗೆ ಬಂದಮಗನನ್ನು ಎದುರು ಹಾಕಿಕೊಳ್ಳಬಾರದೆಂಬ ಲೋಕಜ್ಞಾನವನ್ನು ಮನಸಿಗೆ ತಂದುಕೊಂಡ ತಂದೆ ವಿಧಿಯಿಲ್ಲದೆ ಆಸ್ತಿಯನ್ನು ಪಾಲು ಮಾಡಿಕೊಟ್ಟ.
ಆ ಕಿರಿಮಗನೋ ತನ್ನ ಪಾಲಿನ ಆಸ್ತಿಯನ್ನು ಮಾರಿ ಎಲ್ಲ ಹಣವನ್ನೂ ಗಂಟು ಕಟ್ಟಿಕೊಂಡು ಹೊರದೇಶಕ್ಕೆ ನಡೆದ. ಅಲ್ಲೇನು ಆ ಹಣವನ್ನು ವಿನಿಯೋಗಿಸಿ ಏಳ್ಗೆ ಹೊಂದಿದನೇ?ಇಲ್ಲವೇ ಇಲ್ಲ. ಹಣವನ್ನು ಎಲ್ಲೆಡೆ ದುಂದು ಮಾಡುತ್ತಾ ಕಳೆದ. ಮೋಜು ಮಾಡಿದ, ತಿಂದ, ಕುಡಿದ, ಸೂಳೆಯರ ಸಹವಾಸ ಮಾಡಿದ. ಅವನನ್ನು ದಾರಿತಪ್ಪಿದ ಮಗ‌ಎನ್ನುವುದಕ್ಕಿಂತ ದುಂದುಗಾರ ಮಗ ಎನ್ನುವುದೇ ಸರಿ. ಇಷ್ಟೆಲ್ಲಾ ದುಂದು ಆದ ಮೇಲೆ ಕೈಯಲ್ಲಿ ಹಣ ಉಳಿದೀತೇ? ಕೂತುಣ್ಣುವವನಿಗೆ ಕುಡಿಕೆ ಹಣ ಸಾಲದು ಎಂಬಂತೆ ಕೆಲವೇದಿನಗಳಲ್ಲಿ ಅವನ ಎಲ್ಲ ದುಡ್ಡೂ ಕರಗಿಹೋಯಿತು. ಅವನ ಜೊತೆಯಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ದೂರ ಸರಿದರು. ಹಣವಿದ್ದಾಗ ಮಿತ್ರರಂತಿದ್ದವರು ಅಪರಿಚಿತರಂತೆ ವರ್ತಿಸಿದರು.ಒಂದೊಮ್ಮೆ ಸಿಕ್ಕಸಿಕ್ಕವರಿಗೆಲ್ಲ ಊಟ ಹಾಕಿದ ನೃತ್ಯಗಾತಿಯರ ಮೇಲೆ ಹಣ ಚೆಲ್ಲಿದ ದುಂದುಗಾರನಿಗೆ ಇಂದು ದಿನನಿತ್ಯದ ಊಟಕ್ಕೂ ಗತಿಯಿಲ್ಲವಾಯಿತು. ಕಂಡಕಂಡವರಲ್ಲಿಬೇಡಿ ನಿರಾಶನಾದ. ಎಲ್ಲರೂ ದುಡಿದು ತಿನ್ನೆಂದು ಮೂದಲಿಸಿದರು. ಕೊನೆಗೆ ಅವನ ಯೋಗ್ಯತೆಗೆ ಹಂದಿ ಮೇಯಿಸುವ ಕೆಲಸ ಸಿಕ್ಕಿತು.
ಅವನ ಯಜಮಾನ ಅವನಿಗೆ ಹೊಟ್ಟೆ ತುಂಬ ಊಟ ಹಾಕುತ್ತಿರಲಿಲ್ಲ. ಈಗಂತೂ ಆ ಕಿರಿಮಗ ತನ್ನ ಹೀನಾಯ ಸ್ಥಿತಿಗಾಗಿ ಹಲುಬಿದ, ಕೊರಗಿದ. ಹಂದಿಗಳು ತಿನ್ನುವತವುಡನ್ನಾದರೂ ತಿನ್ನೋಣವೆಮದರೆ ಅದಕ್ಕೂ ಅವಕಾಶ ಸಿಗಲಿಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಹೀಗೇ ಒಮ್ಮೆ ಕುಳಿತು ಯೋಚಿಸಿದ. ತಾನು ಹೇಗಿದ್ದವನುಹೇಗಾದೆ? ಅಪ್ಪನ ಮನೆಯಲ್ಲಿದ್ದಾಗ ಮೂರು ಹೊತ್ತೂ ಮೃಷ್ಟಾನ್ನ ಭೋಜನ ಉಣ್ಣುತ್ತಿದ್ದೆನಲ್ಲ? ಇಲ್ಲಿ ತವಡು ಕೂಡಾ ಸಿಕ್ಕುತ್ತಿಲ್ಲವಲ್ಲಾ? ಎಂದು ಪೇಚಾಡಿಕೊಂಡ. ಅಪ್ಪ ಅಷ್ಟುಹೇಳಿದರೂ ಕೇಳದೆ ಅವನನ್ನು ಧಿಕ್ಕರಿಸಿ ಬಂದು ದೊಡ್ಡ ತಪ್ಪು ಮಾಡಿಬಿಟ್ಟೆನೆಂದು ಅಲವತ್ತುಕೊಂಡ.
ಆಗಲೇ ಅವನಿಗೆ ಒಂದು ಒಳ್ಳೆ ಆಲೋಚನೆ ಹೊಳೆಯಿತು. ತಾನೀಗಲೇ ಅಪ್ಪನ ಬಳಿಗೆ ಓಡಿಹೋಗಿ ಅವನ ಕಾಲಮೇಲೆ ಬೀಳುತ್ತೇನೆ, ತನ್ನದು ತಪ್ಪಾಯಿತೆಂದುಬೇಡಿಕೊಳ್ಳುತ್ತೇನೆ, ಅಪ್ಪಾ ನನ್ನನ್ನು ನಿನ್ನ ಮಗನಾಗಿ ಅಲ್ಲ, ನಿನ್ನ ಸೇವಕರಲ್ಲಿ ಕಡೆಯವನಾಗಿ ಸ್ವೀಕರಿಸು ಎಂದು ಕೇಳಿಕೊಳ್ಳುತ್ತೇನೆ ಎಂದುಕೊಂಡ. ಬರೀ ಅವನ ಆಪರಿವರ್ತನೆಯೇ ಅವನಲ್ಲಿ ನಿರಾಳ ಭಾವ ಮೂಡಿಸಿತು. ಭರವಸೆಯ ಬೆಳಕೊಂದು ಅವನ ದಾರಿಯನ್ನು ನಿಚ್ಚಳವಾಗಿಸಿತು. ಹೊಸಚೈತನ್ಯ ಹೊಸ ಉತ್ಸಾಹ ಲವಲವಿಕೆಯಿಂದ‌ಆತ ಎದ್ದವನೇ ಅಪ್ಪನ ಊರಿಗೆ ಓಡೇ ಓಡಿದ.
ಇತ್ತ ಅಪ್ಪ ತನ್ನ ದಾರಿತಪ್ಪಿದ ಮಗನಿಗಾಗಿ ಬಹುವಾಗಿ ಕೊರಗಿದ್ದ. ಎಂದಾದರೂ ಒಂದು ದಿನ ತನ್ನ ಮಗ ಮರಳಿ ಬರುವನೆಂದು ಕಾದಿದ್ದ. ಆ ಒಂದು ಎಳೆಯ ಆಸೆಯೇ ಅವನಬದುಕನ್ನು ನಡೆಸಿತ್ತು. ದಿನದಿನವೂ ಆತ ತನ್ನ ಮಗನಿಗಾಗಿ ಹಂಬಲಿಸಿದ. ದಿಕ್ಕುದಿಕ್ಕಿಗೆಲ್ಲ ದೂತರನ್ನು ಕಳುಹಿಸಿ ಮಗನನ್ನು ಹುಡುಕಿಸಿದ. ಹೀಗೇ ಇರುವಲ್ಲಿ ಒಂದು ದಿನ ಅವನ‌ಒಳಮನಸಿಗೆ ತನ್ನ ಮಗ ಮರಳಿ ಬರುತ್ತಿದ್ದಾನೆಂದು ಅರಿವಾಯಿತು. ಕ್ಷಣಕ್ಷಣಕ್ಕೂ ಆ ಭಾವ ಗಟ್ಟಿಯಾಗುತ್ತಾ ಹೋಯಿತು. ಅವನು ತನ್ನ ಮನೆಯ ಮಹಡಿಯೇರಿ ದೂರ ದಿಕ್ಕಿನತ್ತದಿಟ್ಟಿಸಿದ.
ದೂರದಲ್ಲಿ ಹರಕು ಬಟ್ಟೆ ತೊಟ್ಟ ಯುವಕನೊಬ್ಬ ಬರಿಗಾಲಲ್ಲಿ ನಡೆದು ಬರುತ್ತಿರುವುದನ್ನು ಕಂಡ. ಆತನ ನಡಿಗೆಯ ಚಲನೆಯಿಂದಲೇ ಅವನು ತನ್ನ ಕಿರಿಮಗನೆಂಬುದು ತಂದೆಗೆಗೊತ್ತಾಯಿತು. ಮಹಡಿಯಿಂದಿಳಿದವನೇ ಆತುರದಿಂದ ಮಗನತ್ತ ಓಡತೊಡಗಿದ. ಯಜಮಾನ ಓಡುವುದನ್ನು ಕಂಡು ಆಳುಗಳೂ ಅವನನ್ನು ಹಿಂಬಾಲಿಸಿದರು. ಅಪ್ಪ ಮಗನಬಳಿಸಾರಿ ಅವನನ್ನು ಬರಸೆಳೆದು ಅಪ್ಪಿಕೊಂಡ. ಮಗನಾದರೋ ಅತ್ಯಂತ ಕುಬ್ಜನಾಗಿ ದೈನ್ಯದಿಂದ ಅಪ್ಪನ ಕಾಲಿಗೆ ಬಿದ್ದು ’ಅಪ್ಪಾ ನಿನ್ನ ಮಗನೆನಿಸಿಕೊಳ್ಳುವ ಯೋಗ್ಯತೆ ನನಗಿಲ್ಲ,ನಿನ್ನ ಮನೆಯ ಕೂಲಿಯಾಳುಗಳಲ್ಲಿ ಒಬ್ಬನಾಗಿ ನನ್ನನ್ನು ನೇಮಿಸಿಕೊ’ ಎಂದ.
ತಂದೆ ಅದನ್ನು ಕೇಳಿಸಿಕೊಳ್ಳದೇ ತನ್ನ ಸೇವಕರಿಗೆ ’ಓಡಿ ಹೋಗಿ ಉತ್ತಮ ವಸ್ತ್ರವನ್ನು ತನ್ನಿ, ಕಾಲಿಗೆ ನೀರು ಕೊಟ್ಟು ಒಳ್ಳೆಯ ಪಾದರಕ್ಷೆ ತೊಡಿಸಿರಿ, ಬೆರಳಿಗೊಂದುಸುಂದರವಾದ ಉಂಗುರ ಹಾಕಿರಿ, ಬನ್ನಿ ಎಲ್ಲ ಸಂತೋಷ ಪಡೋಣ, ಮೋಜು ಮಾಡಿ ಹಬ್ಬ ಮಾಡೋಣ, ಸತ್ತು ಹೋಗಿದ್ದ ನನ್ನ ಮಗ ಮತ್ತೆ ಬದುಕಿ ಬಂದಿದ್ದಾನೆ’ ಎಂದ.

ಒಡನೆಯೇ ಹಬ್ಬದ ಸಡಗರ ತೊಡಗಿತು. ಗಾನ ನರ್ತನಗಳ ನಾದವು ಅವನ ಮನೆಯಲ್ಲಿ ತುಂಬಿಕೊಂಡಿತು.

ಗುರುವಾರ, ಮೇ 2, 2013

NOH KA LIKAI ನೊಹ್ ಕಾ ಲಿಕಾಯ್


ಮೇಗಾಲಯದ ಬೆಟ್ಟಗುಡ್ಡಗಳ ನಾಡಿನ ಒಂದು ಹಳ್ಳಿ ರಂಗ್ಯಿರ್‍ಟೆ.  ಈ ಹಳ್ಳಿಯ ಅಂಚಿನಲ್ಲಿ ನೊಹ್ ಕಾಲಿಕಾಯ್ ಎಂಬ ನೀರ್‍ಬೀಳು ಇದೆ. ಆ ನೀರ್‍ಬೀಳು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಹೆಣ್ಣುಮಗಳ ಹೆಸರು ಹೊತ್ತಿದೆ. ಆ ಹಳ್ಳಿಯಲ್ಲಿ ಲಿಕಾಯ್ ಎಂಬ ಹೆಂಗಸಿದ್ದಳು. ಕಾಲಿಕಾಯ್ ಅಂದರೆ ಲಿಕಾಯಮ್ಮ ಎಂದರ್‍ತ. ನಮ್ಮಲ್ಲಿ ತೆರೇಸ ಎಂಬುದನ್ನು ತೆರೇಸಮ್ಮ ಎಂದೂ ಅಲಮೇಲು ಎಂಬುದನ್ನು ಅಲಮೇಲಮ್ಮ ಎಂದೂ ಕರೆಯುವುದಿಲ್ಲವೇ ಹಾಗೆ. ಹತ್ತಿರದ ಗಣಿಯಿಂದ ಕಬ್ಬಿಣದ ಅದಿರನ್ನು ಸಿಲ್ಹೆಟ್ ಎಂಬ ಊರಿಗೆ ಹೊತ್ತೊಯ್ಯುವುದೇ ಅವಳ ಗಂಡನ ಕೆಲಸ. ಅದರಿಂದ ಬರುವ ಅಲ್ಪ ಗಳಿಕೆಯಿಂದಲೇ ಅವರಿಬ್ಬರೂ ಸಂತಸದಿಂದಿದ್ದರು. ಆದರೆ ಒಂದು ದಿನ ಲಿಕಾಯಳ ಮಡಿಲಲ್ಲಿ ಪುಟ್ಟ ಕಂದಮ್ಮ ಆಡಿಕೊಂಡಿರುವಾಗಲೇ ಗಂಡ ಸತ್ತನೆಂಬ ಸುದ್ದಿ ಬಂತು. ಲಿಕಾಯ್ ಅತ್ತಳು, ಅವಳ ಅಳುವನ್ನು ಕೇಳಿ ಅವಳ ಪುಟ್ಟ ಮಗಳೂ ಅತ್ತಳು. ಕೊನೆಗೆ ಲಿಕಾಯ್  ಸಾವರಿಸಿಕೊಂಡು ಗಂಡ ಹೊರುತ್ತಿದ್ದ ಹೊರೆಯನ್ನು ತಾನೇ ಹೊರತೊಡಗಿದಳು. ಇಲ್ಲದಿದ್ದರೆ ಬದುಕು ನಡೆಯಬೇಕಲ್ಲ? ಅವಳು ಹೊರಹೊರಟಾಗ ಪುಟ್ಟ ಮಗುವನ್ನು ನೆರೆಯವರ ಕಯ್ಗೊಪ್ಪಿಸಿ ಹೊರಡುತ್ತಿದ್ದಳು. ಹೀಗೆ ಲಿಕಾಯ್ ಮಗಳು ಕಂಡವರ ಕಯ್ಗೂಸಾದಳು.
ಕಂಡವರು ಎಶ್ಟು ದಿನ ತಾನೇ ಮಗುವನ್ನು ಲಾಲಿಸಬಲ್ಲರು, ಅವರು ಒಂದು ದಿನ ಲಿಕಾಯ್ ಮನೆಗೆ ಹಿಂದಿರುಗುತ್ತಿದ್ದಂತೆ ನೀನು ಮತ್ತೊಂದು ಮದುವೆಯಾಗು ನಿನ್ನ ಮಗು ಅಮ್ಮ ಬೇಕೆಂದು ರಚ್ಚೆ ಹಿಡಿಯುವುದು ತಪ್ಪುತ್ತದೆ, ಅದಕ್ಕೂ ಒಬ್ಬ ಅಪ್ಪನೂ ಬೇಕಲ್ಲವೇ? ಎಂದು ಹೇಳಿದರು. ಅವರ ಮಾತನ್ನು ಅರಗಿಸಿಕೊಂಡ ಲಿಕಾಯ್ ಕೆಲದಿನಗಳಲ್ಲೇ ತನಗೊಬ್ಬ ಗಂಡನನ್ನು ಹುಡುಕಿಕೊಂಡಳು. ಹೊಸ ಗಂಡ ಅವಳನ್ನು ಚೆನ್ನಾಗಿ ನೋಡಿಕೊಂಡ. ಆದರೆ ಲಿಕಾಯಳು ತನಗಿಂತಲೂ ತನ್ನ ಮಗುವನ್ನು ಹೆಚ್ಚು ರಮಿಸುವುದು ಅವನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸಿತು. ಹೆಂಡತಿಯು ತನ್ನನ್ನು ಗಮನಿಸುವುದಕ್ಕಿಂತ ಹೆಚ್ಚಾಗಿ ಮಗುವಿನತ್ತಲೇ ಗಮನ ಹರಿಸುತ್ತಾಳಲ್ಲ, ಆ ಮಗುವನ್ನು ಹೇಗಾದರೂ ತವಿಸಬೇಕು ಎಂದುಕೊಂಡ. ಎಶ್ಟಾದರೂ ಅದು ಅವನ ಮಗು ಅಲ್ಲವಲ್ಲ. ಅದರ ಬಗ್ಗೆ ಅವನಿಗೆ ಮಮತೆ ಅಕ್ಕರೆ ಮೂಡುವುದಾದರೂ ಹೇಗೆ? ತೀಟೆ ತೆವಲುಗಳ ಮೇಲಾಟದಲ್ಲಿ ಮಕ್ಕಳೇ ದೇವರುಗಳೆಂಬ ಅನಿಸಿಕೆ ಬರುವುದುಂಟೇ?
ಒಂದು ದಿನ ಲಿಕಾಯಳು ಎಂದಿನಂತೆ ಹೊರೆ ಸಾಗಿಸಲು ಹೋಗಿದ್ದಾಗ ಅವನು ಹೊಂಚು ಹಾಕಿ ಮಗುವನ್ನು ಕೊಂದುಬಿಟ್ಟ. ಕೊಂದ ಮೇಲೆ ಮಗುವಿನ ಒಡಲನ್ನು ಏನು ಮಾಡುವುದು? ಅದನ್ನು ಕತ್ತರಿಸಿ ಅಡುಗೆ ಮಾಡಿದ. ಆಮೇಲೆ ಏನೂ ಗೊತ್ತಿಲ್ಲದವನಂತೆ ಅಂಡಲೆಯುತ್ತಾ ಹೋದ. ಸಂಜೆ ಲಿಕಾಯ್ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಗು ನೆರೆಹೊರೆಯ ಯಾರದಾದರೂ ತೊಡೆಯೇರಿರುತ್ತದೆ ಎಂದುಕೊಂಡ ಆಕೆ  ಹಸಿವಾಗಿದ್ದರಿಂದಲೂ ಅಡುಗೆ ಮನೆಯಿಂದ ಒಳ್ಳೆ ಗಮಲು ಬರುತ್ತಿದ್ದರಿಂದಲೂ ಉಣ್ಣಲು ಕೂತಳು. ಊಟದ ಕೊನೆಯವರೆಗೂ ಅದು ಯಾವ ಪ್ರಾಣಿಯ ಮಾಂಸವಿರಬಹುದು ಎಶ್ಟು ಚೆನ್ನಾಗಿದೆಯಲ್ಲ ಎಂದುಕೊಂಡು ಸವಿದು ಸವಿದು ತಿಂದಳು.
ಉಂಡ ಮೇಲೆದ್ದು ಪಾತ್ರೆಗಳನ್ನು ಮರುಜೋಡಿಸುವಾಗ ಒಲೆಯ ಬಳಿ ಪುಟ್ಟ ಬೆರಳುಗಳು ಕಂಡವು. ಅವಳ ಗಂಡ ಮಗುವಿನ ಕಯ್ ಕಾಲು ತಲೆಗಳನ್ನು ಬಿಸಾಡಿದ್ದನಾದರೂ ಮಗುವಿನ ಬೆರಳುಗಳನ್ನು ತೆಗೆದುಹಾಕಲು ಮರೆತುಬಿಟ್ಟಿದ್ದ. ಆ ಬೆರಳುಗಳನ್ನು ಕಂಡಿದ್ದೇ ಲಿಕಾಯಳಿಗೆ ಕಣ್ಣು ಕತ್ತಲಿಟ್ಟಂತಾಯಿತು. ಕೋಪ ಮತ್ತು ಅಳು ಒಟ್ಟೊಟ್ಟಿಗೇ ಉಮ್ಮಳಿಸಿ ಬಂದವು. ತನ್ನ ಕರುಳ ಕುಡಿಯನ್ನು ತಾನೇ ಚಪ್ಪರಿಸಿ ತಿಂದುದರ ಬಗ್ಗೆ ಅವಳಿಗೆ ತುಂಬಾ ಹೇಸಿಗೆಯೆನಿಸಿತು. ಮುಶ್ಟಿ ಬಿಗಿದು ನೆಲಕ್ಕೆ ಬಡಿದಳು, ಹಣೆಯನ್ನು ಗೋಡೆಗೆ ಗಟ್ಟಿಸಿಕೊಂಡಳು, ಬೋರಾಡಿ ಚೀರಾಡಿ ಅತ್ತಳು, ತಲೆ ಕೆದರಿಕೊಂಡು ಹಾದಿ ಬೀದಿಯೆಲ್ಲ ಹುಚ್ಚಿಯಂತೆ ಓಡಿದಳು. ಕೊಂದ ತಪ್ಪಿಗಿಂತ ತಿಂದುದೇ ದೊಡ್ಡತಪ್ಪು ಎನ್ನಿಸಿತು.
ಆಕೆ ಓಡಿಯೇ ಓಡಿದಳು, ಎಡವಿದ್ದು ಮುಳ್ಳುಚುಚ್ಚಿದ್ದು ಯಾವುದನ್ನೂ ಲೆಕ್ಕಿಸದೆ ಓಡಿದಳು. ಊರವರೂ ಆಕೆ ಯಾತಕ್ಕಾಗಿ ಹಾಗೆ ಓಡುತ್ತಿದ್ದಾಳೆಂದು ತಿಳಿಯದೇ ಅವಳ ಹಿಂದೆಯೇ ಓಡಿದರು. ಓಡುತ್ತಾ ಓಡುತ್ತಾ ಲಿಕಾಯ್ ಊರ ಅಂಚನ್ನು ಮುಟ್ಟಿ ಅಲ್ಲಿಂದ 335 ಮೀಟರುಗಳ ಆಳಕ್ಕೆ ಬೀಳುತ್ತಿದ್ದ ನೀರಿನೊಂದಿಗೆ ಸೇರಿಕೊಂಡು ದುಮ್ಮಿಕ್ಕಿದಳು. ಹೀಗೆ ಮಗಳೊಂದಿಗೆ ಸೇರಿಕೊಂಡಳು. ಆ ನೀರ್‍ಬೀಳು ಇಂದಿಗೂ ಲಿಕಾಯಮ್ಮನ ಹೆಸರು ಹೊತ್ತಿದೆ. NOH KA LIKAI  ಎಂದರೆ ಲಿಕಾಯಮ್ಮನ ದುಮುಕು ಎಂದರ್‍ತ.
Excerpt from the article "Notes on the Kasia Hills, and People" by Lt. Henry Yule, the Bengal Engineers (Sir Henry Yule, the Geographer): Published in the Journal of the Asiatic Society of Bengal Vol. XIV Part II - July to December, 1844