ಮದರ್ ತೆರೇಸಾ ಅವರು ಹುಟ್ಟಿದ ದಿನಾಂಕ ತಿಳಿಯದು. ಆದರೆ ಮ್ಯಾಸಿಡೋನಿಯಾದ ಸ್ಕೊಪಿಯೆ ಊರಿನ ಚರ್ಚಿನಲ್ಲಿ ಅವರು ಕ್ರಿಸ್ತದೀಕ್ಷೆ ಪಡೆದ ಬಗ್ಗೆ ಉಲ್ಲೇಖವಿದ್ದು ಅದು ೧೯೧೦ ಆಗಸ್ಟ್ ೨೭ ಎಂದು ಹೇಳುತ್ತದೆ. ಹೆಚ್ಚಿನ ಜನ ಇದೇ ಅವರ ಜನ್ಮದಿನ ಎಂದು ತಿಳಿದಿದ್ದಾರೆ. ಆಗ ಅವರ ಹೆಸರು ಆಗ್ನೆಸ್ ಗೊನ್ಸಾ ಬೊಯಾಷಿಯು.
ಇಂಡಿಯಾ ದೇಶಕ್ಕೆ ಬಂದ ಅವರು ಹದಿನೇಳು ವರ್ಷಗಳ ಕಾಲ ಶಿಕ್ಷಕಿಯಾಗಿದ್ದರು. ೧೯೪೬ರ ಒಂದು ದಿನ ಬಡವರ ಮತ್ತು ರೋಗಿಗಳ ಹಿತ ಕಾಯುವಂತೆ ಅವರ ಅಂತರಾತ್ಮಕ್ಕೆ ಪ್ರೇರಣೆಯಾಯಿತು. ತಮ್ಮ ಒಳಹೃದಯದ ಕರೆಗೆ ಓಗೊಟ್ಟ ಅವರು ಶಿಕ್ಷಕ ವೃತ್ತಿಯನ್ನು ತೊರೆದು ತಮ್ಮದೇ ಒಂದು ಶುಶ್ರೂಷಾ ಕೇಂದ್ರವನ್ನು ಕಟ್ಟಿ ಕುರುಡರ, ಮುದುಕರ, ಅಂಗಹೀನರ, ಕೈಲಾಗದವರ ಮತ್ತು ಕುಷ್ಟರೋಗಿಗಳ ಸೇವೆಗೆಂದು ನಡುಗಟ್ಟಿ ನಿಂತರು. ಇವರ ಸೇವೆಯನ್ನು ಕಂಡು ೧೯೬೮ರಲ್ಲಿ ರೋಮ್ ನಗರವು ಕರೆದು ಸನ್ಮಾನಿಸಿತು. ೧೯೭೯ರಲ್ಲಿ ಪ್ರಖ್ಯಾತ ನೊಬೆಲ್ ಪ್ರಶಸ್ತಿಗೂ ಇವರು ಭಾಜನರಾದರು.
ಬಾಲ್ಯ
ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾದ ರಾಜಧಾನಿ ಸ್ಕೊಪಿಯೊ ಎಂಬಲ್ಲಿ ಜನಿಸಿದ ಇವರಿಗೆ ೧೯೧೦ರ ಆಗಸ್ಟ್ ೨೭ರಂದು ಕ್ರಿಸ್ತದೀಕ್ಷೆ ನೀಡಿ ಆಗ್ನೆಸ್ ಗೊನ್ಸಾ ಬೊಯಾಶಿಯು ಎಂದು ಹೆಸರಿಟ್ಟರು. ಅವರ ತಾಯ್ತಂದೆಯರು ಆಲ್ಬೇನಿಯನ್ ಜನಾಂಗದವರಾಗಿದ್ದು ತಂದೆಯು ಮನೆ ನಿರ್ಮಾಣ, ಔಷಧ ಮತ್ತು ಇತರ ಸರಕುಗಳ ವ್ಯಾಪಾರಿಯೂ ಆಗಿದ್ದರು. ಅವರು ಸ್ಥಳೀಯ ಚರ್ಚಿನ ಉತ್ಸುಕ ಸದಸ್ಯರಾಗಿದ್ದರಲ್ಲದೆ ಆಲ್ಬೇನಿಯದ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದವರಲ್ಲಿ ಗುರುತಿಸಿಕೊಂಡಿದ್ದರು.
೧೯೧೯ರಲ್ಲಿ ಆಗ್ನೆಸರು ತಮ್ಮ ಎಂಟನೇ ವಯಸ್ಸಿನಲ್ಲಿದ್ದಾಗ ತಂದೆಯವರು ಇದ್ದಕ್ಕಿದ್ದಂತೆ ನಿಗೂಢ ರೀತಿಯಲ್ಲಿ ತೀರಿಕೊಂಡರು. ಆನಂತರದ ದಿನಗಳಲ್ಲಿ ಆಗ್ನೆಸರು ತಮ್ಮ ತಾಯಿಯೊಂದಿಗೆ ಅತೀವ ಒಡನಾಟ ಬೆಳೆಸಿಕೊಂಡು ಚರ್ಚಿನ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರಲ್ಲದೆ ಸಹನೆ ಅನುಕಂಪಗಳನ್ನು ರೂಢಿಸಿಕೊಂಡರು.
ಅಷ್ಟೇನೂ ಶ್ರೀಮಂತರಲ್ಲದಿದ್ದರೂ ಅವರ ತಾಯಿಯು ಊರಿನ ಬಡಬಗ್ಗರಿಗೆ ಊಟ ಹಾಕುತ್ತಿದ್ದರು. "ಮಗಳೇ ಒಂದೇ ತುತ್ತನ್ನಾದರೂ ಎಲ್ಲರೊಂದಿಗೆ ಹಂಚಿಕೊಂಡು ತಿನ್ನು"
ಎಂದು ಅವರು ಹೇಳುತ್ತಿದ್ದರು.
ದೈವಕರೆ
ಆಗ್ನೆಸ್ ಶಿಕ್ಷಣ ಮೊದಲು ಕಾನ್ವೆಂಟ್ ಶಾಲೆಯಲ್ಲೂ ಆಮೇಲೆ ಸರ್ಕಾರೀ ಶಾಲೆಯಲ್ಲೂ ನಡೆಯಿತು. ಒಳ್ಳೆ ಕಂಠವಿದ್ದ ಆಕೆ ಸ್ಥಳೀಯ ಗಾನವೃಂದದಲ್ಲಿ ಸಕ್ರಿಯಳಾಗಿದ್ದಳು. ಸ್ಕೊಪಿಯೆ ಊರಿನವರು ವರ್ಷಕ್ಕೊಮ್ಮೆ ಸಮೀಪದ ಬೆಟ್ಟಕ್ಕೆ ಧಾರ್ಮಿಕ ಯಾತ್ರೆ ನಡೆಸುತ್ತಿದ್ದರು. ೧೨ನೇ ವಯಸ್ಸಿನಲ್ಲಿ ಇಂಥ ಒಂದು ಯಾತ್ರೆಯಲ್ಲಿ ಪಾಲ್ಗೊಂಡ ಆಗ್ನೆಸಳಿಗೆ ದೇವರು ತನ್ನ ಸೇವೆಗೆ ಕರೆಯುತ್ತಿರುವಂತೆ ಭಾಸವಾಯಿತು. ಆರು ವರ್ಷಗಳಾದ ಮೇಲೆ ಅಂದರೆ ೧೯೨೮ರಲ್ಲಿ ಆಕೆ ತಾನು ಸಂನ್ಯಾಸಿನಿಯಾಗಲು ನಿರ್ಧರಿಸಿ ಅಯರ್ಲೆಂಡಿಗೆ ತೆರಳಿ ಲೊರೆಟೊ ಕನ್ಯಾಮಠ ಸೇರಿದರು. ಅಲ್ಲಿ ಆಕೆಗೆ ಸಿಸ್ಟರ್ ಮೇರಿ ತೆರೇಸಾ ಎಂದು ಹೆಸರಿಡಲಾಯಿತು. ಅಲ್ಲಿಂದಾಚೆಗೆ ಅವರು ತಮ್ಮ ತಾಯಿಯನ್ನಾಗಲೀ ಸಹೋದರಿಯನ್ನಾಗಲೀ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಡಬ್ಲಿನ್ ನಗರದಲ್ಲಿ ಒಂದು ವರ್ಷದ ತರಬೇತಿಯ ನಂತರ ಅಕ್ಕ ತೆರೇಸಾ ಅವರು ನಮ್ಮ ದೇಶದ ದಾರ್ಜಿಲಿಂಗಿಗೆ ಬಂದು ೧೯೩೧ರ ಮೇ ತಿಂಗಳಲ್ಲಿ ಸಂನ್ಯಾಸವ್ರತದ ವಚನ ಸ್ವೀಕರಿಸಿದರು. ಅಲ್ಲಿಂದ ಆಕೆಯನ್ನು ಕಲಕತ್ತೆಗೆ ಕಳಿಸಲಾಯಿತು ಹಾಗೂ ಅಲ್ಲಿನ ಬಡ ಹೆಣ್ಣುಮಕ್ಕಳ ಸಂತ ಮೇರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯನ್ನಾಗಿ ನೇಮಿಸಲಾಯಿತು. ಬಂಗಾಳಿಯನ್ನು ಸುಲಲಿತವಾಗಿ ಮಾತನಾಡಲು ಕಲಿತ ಅಕ್ಕ ತೆರೇಸಾ ಅವರು ಭೂರಚನೆ ಮತ್ತು ಇತಿಹಾಸವನ್ನು ಬೋಧಿಸತೊಡಗಿದರು. ೧೯೩೭ರ ಮೇ ೨೪ರಂದು ಆಕೆ ಸಂಪೂರ್ಣ ಸಂನ್ಯಾಸತ್ವದ ದೀಕ್ಷೆ ಪಡೆದು ಬಡತನ, ವಿನಯ ಮತ್ತು ವಿಧೇಯತೆಯ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡರು. ಅಲ್ಲಿಂದಾಚೆಗೆ ಅವರನ್ನು ’ಮದರ್ ತೆರೇಸಾ’ ಎಂದು ಕರೆಯಲಾರಂಭವಾಯಿತು.
೧೯೪೪ರಲ್ಲಿ ಆಕೆ ಅದೇ ಶಾಲೆಯ ಪ್ರಿನ್ಸಿಪಾಲರಾದರು. ಅವರ ಆದರ್ಶ ಪರಿಪಾಲನೆಯಲ್ಲಿ ಆ ಶಾಲೆಯ ಮಕ್ಕಳು ಸಮಾಜದಲ್ಲಿ ಸದೃಢರಾದರು. ಆದರೆ ಕಲ್ಕತ್ತೆಯ ಹಾದಿ ಬೀದಿಗಳ ಬದಿಯಲ್ಲಿ ಸೂರಿಲ್ಲದೆ ಬದುಕುತ್ತಿದ್ದ ನಿರ್ಗತಿಕರ, ವೃದ್ಧರ, ರೋಗಿಗಳ ಪಾಡು ತೆರೇಸಾ ಅವರ ಹೃದಯವನ್ನು ಕಲಕುತ್ತಿತ್ತು. ಸುಮಾರು ೧೯೪೮ರಲ್ಲಿ ಕಲ್ಕತ್ತೆಯ ಆಸ್ಪತ್ರೆಯೊಂದರ ಮುಂದೆ ಸಾವಿನಂಚಿನಲ್ಲಿದ್ದ ಅನಾಥ ಹೆಂಗಸನ್ನು ಕಂಡರು. ಆ ಹೆಂಗಸಿಗೆ ಸಾಂತ್ವನ ಹೇಳುತ್ತಾ ಶುಶ್ರೂಷೆ ಮಾಡುತ್ತಿದ್ದಂತೆ ಅವಳು ಕೊನೆಯುಸಿರೆಳೆದಳು. ಯಾವುದೇ ಒಂದು ಮನುಷ್ಯಜೀವ, ಸಾವಿನ ಸಂದರ್ಭದಲ್ಲಾದರೂ ಶಾಂತಮನಸ್ಕರಾಗಿ ಗೌರವಯುತವಾಗಿ ಸತ್ತು ಸಂಸ್ಕಾರ ಪಡೆಯದಿದ್ದಲ್ಲಿ ಆ ಮನುಷ್ಯಜೀವಕ್ಕೆ ಬೆಲೆಯಾದರೂ ಏನು ಎಂಬ ಪ್ರಶ್ನೆ ಬಹುಕಾಲ ಅವರನ್ನು ಕಾಡಿತು.
ಮತ್ತೊಂದು ಕರೆ
ಹೀಗಿರುವಲ್ಲಿ ೧೯೪೬ರ ಸೆಪ್ಟೆಂಬರ್ ೧೦ರಂದು ಮದರ್ ತೆರೇಸಾ ಅವರನ್ನು ದೇವರು ಮತ್ತೊಮ್ಮೆ ಕರೆದರು. ಈ ಕರೆಯು ಆಕೆಯ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಆಕೆ ಕಲಕತ್ತೆಯಿಂದ ಹಿಮಾಲಯದ ಬುಡಕ್ಕೆ ರೈಲಿನಲ್ಲಿ ಪಯಣಿಸುತ್ತಿರುವಾಗ್ಗೆ ಯೇಸುಕ್ರಿಸ್ತನು ಆಕೆಯೊಂದಿಗೆ ಪಿಸುದನಿಯಲ್ಲಿ ಶಾಲೆಯ ಕೆಲಸವನ್ನು ತೊರೆದು ಕೊಳೆಗೇರಿಗಳಲ್ಲಿನ ಕಡುಬಡವರ ಹಾಗೂ ರೋಗಪೀಡಿತರ ಸೇವೆ ಮಾಡು ಎಂದು ಹೇಳಿದಂತಾಯಿತು. ಯೇಸು ಆಕೆಗೆ ’ನನಗೆ ಗೊತ್ತು ನಿನ್ನ ಕೈಲಾಗದು ಎಂದು...ನೀನು ಅಶಕ್ತಳು...ಆದರೆ ನಿನ್ನನ್ನು ನನ್ನ ಕರಣವಾಗಿ ಬಳಸುತ್ತೇನೆ, ನಿರಾಕರಿಸುವೆಯಾ?’ ಎಂದುದು ಕೇಳಿಸಿತು. ಅದನ್ನು ಮದರ್ ತೆರೇಸಾ ಅವರು ’ಕಾಲ್ ವಿತಿನ್ ಎ ಕಾಲ್’ ಎಂದು ಭಾವಿಸಿದ್ದಾರೆ.
ಅವರು ವಿಧೇಯತೆಯ ಸಂಕಲ್ಪ ತೊಟ್ಟವರಾದ್ದರಿಂದ ತಮ್ಮ ಕಾನ್ವೆಂಟನ್ನು ಅನುಮತಿಯಿಲ್ಲದೆ ಬಿಡುವುದು ಸಾಧ್ಯವಿರಲಿಲ್ಲ. ಹಾಗೂ ಹೀಗೂ ಸುಮಾರು ಒಂದೂವರೆ ವರ್ಷಗಳ ತೊಳಲಾಟದ ನಂತರ ೧೯೪೮ರ ಜನವರಿಯಲ್ಲಿ ಸ್ಥಳೀಯ ಆರ್ಚ್ಬಿಷಪರು ಅವರಿಗೆ ಹೊಸ ದಾರಿಯನ್ನು ಕಂಡುಕೊಳ್ಳಲು ಅನುಮತಿ ನೀಡಿದರು. ಅದೇ ವರ್ಷದ ಆಗಸ್ಟ್ ೧೭ರಂದು ಅವರು ನೀಲಿಯಂಚಿನ ಬಿಳಿ ಸೀರೆಯುಟ್ಟು ತಮ್ಮ ಉಳಿದ ಬದುಕನ್ನು ಜನರ ನಡುವೆ ಕಳೆಯುವ ಆಶಯದೊಂದಿಗೆ ಬೀದಿಗಿಳಿದರು. ಆರು ತಿಂಗಳ ಕಾಲ ವೈದ್ಯಕೀಯದ ಪ್ರಾಥಮಿಕ ಶಿಕ್ಷಣ ಪಡೆದು ಕಲಕತ್ತೆಯ ಕೊಳಗೇರಿಗಳತ್ತ ಸಾಗಿ ’ಪರಿತ್ಯಕ್ತರ, ಅನಾಥರ, ನಿರ್ಗತಿಕರ’ ಕೈಹಿಡಿದೆತ್ತಲು ಮುಂದಾದರು.
ದ ಮಿಶನರೀಸ್ ಆಫ್ ಚಾರಿಟಿ
ಹೀಗೆ ಪ್ರಾರಂಭವಾದುದೇ ’ದ ಮಿಶನರೀಸ್ ಆಫ್ ಚಾರಿಟಿ’ ಎಂಬ ಸೇವಾಸಂಸ್ಥೆ. ತಮ್ಮ ಯೋಜನೆಯ ಅಡಿಪಾಯದ ಕೆಲಸಗಳನ್ನು ದೃಢಚಿತ್ತದಿಂದ ಕೈಗೊಂಡ ಅವರು ದಿನದಿಂದ ದಿನಕ್ಕೆ ದಾಪುಗಾಲು ಹಾಕುತ್ತಾ ಸಾಗಿದರು. ತಬ್ಬಲಿ ಮಕ್ಕಳಿಗಾಗಿ ಒಂದು ಬಯಲುಶಾಲೆಯನ್ನು ತೆರೆದರು. ಸಾಯುವ ಸ್ಥಿತಿಯಲ್ಲಿರುವ ನಿರ್ಗತಿಕರನ್ನು ಉಪಚರಿಸಲು ಅನುವಾಗುವಂತೆ ಒಂದು ಪಾಳುಬಿದ್ದ ಕಟ್ಟಡವನ್ನು ಸರ್ಕಾರದಿಂದ ಕೇಳಿ ಪಡೆದರು. ಕ್ಷಾಮ ಮತ್ತು ದೇಶವಿಭಜನೆಯ ಕಾರಣದಿಂದ ನಿರಾಶ್ರಿತರ ಮತ್ತು ನಿರ್ಗತಿಕರ ಸಂಖ್ಯೆ ಏರುತ್ತಲೇ ಇತ್ತಲ್ಲದೆ ಹೊಸ ಸರ್ಕಾರಕ್ಕೆ ಇವೆಲ್ಲ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಕಾರಣದಿಂದ ತೆರೇಸಾ ಅವರ ಯೋಜನೆಗಳು ಸುಸೂತ್ರವಾಗಿ ಸಾಗಿದವು. ಹೀಗೆ ೧೯೫೨ರಲ್ಲಿ
" ದಿ ಕಾಳಿಘಾಟ್ ಹೋಮ್ ಫಾರ್ ಪ್ಯೂರ್ ಹಾರ್ಟ್" ಅಥವಾ “ನಿರ್ಮಲ ಹೃದಯ ನಿವಾಸ" ತಲೆಯೆತ್ತಿ ಮರಣಶಯ್ಯೆಯಲ್ಲಿದ್ದ ನಿರ್ಗತಿಕರಿಗೆ ಮನೆಯಾಯಿತು. ಅವರು ಮುದುಕರೋ ಕುಷ್ಟರೋ ಕುರುಡರೋ ಅನಾಥರೋ ಎಲ್ಲರಲ್ಲೂ ತೆರೇಸಾರವರು ಯೇಸುಕ್ರಿಸ್ತನನ್ನೇ ಕಾಣುತ್ತಿದ್ದರು. ಅವರಿಗೆ ಮದರ್ ತೆರೇಸಾ ತೋರುತ್ತಿದ್ದ ನಿಷ್ಕಾಮ ಕಾಳಜಿ ಎಂದೂ ಕುಗ್ಗಲಿಲ್ಲ.
ನಿರ್ಮಲ ಹೃದಯ ನಿವಾಸಕ್ಕೆ ಬಂದವರಿಗೆ ಸೂಕ್ತ ವೈದ್ಯಕೀಯ ಸೇವೆಗಳನ್ನು ನೀಡಿ ಅವರವರ ಧರ್ಮದ ನಂಬಿಕೆಯ ಅನುಸಾರವೇ ಘನತೆಯಿಂದ ಸಾಯುವ ಅವಕಾಶವನ್ನು ನೀಡುತ್ತಿದ್ದರು.; ಮುಸ್ಲಿಮರಿಗೆ ಕುರಾನ್ ಅನ್ನು ಪಠಿಸುವ ಅವಕಾಶವಿತ್ತು; ಹಿಂದೂಗಳಿಗೆ ಪವಿತ್ರ ಗಂಗಾಜಲವನ್ನು ನೀಡಲಾಗುತ್ತಿತ್ತು; ಇರುವಾಗ ಯಾರಿಗೂ ಬೇಡದವರಾಗಿ ಪ್ರಾಣಿಗಳಂತೆ ಬದುಕಿ, ಸಾಯುವಾಗ ಎಲ್ಲರಿಗೂ ಬೇಕಾದವರೂ, ಪ್ರೀತಿ ಪಾತ್ರರೂ ಆಗಿ ದೇವತೆಗಳಂತೆ ಸಾವನ್ನಪ್ಪುವಂಥ
"ಗೌರವಾನ್ವಿತ ಸಾವು" ಪಡೆಯುವ ಭಾಗ್ಯಕ್ಕಾಗಿ ಆ ಜನ ಬಲು ಆರ್ದ್ರರಾಗಿದ್ದರು.
"ಹೊಟ್ಟೆಗೆ ಬಟ್ಟೆಗೆ ಇಲ್ಲದವರು, ಸೂರಿಲ್ಲದವರು, ಅಂಗವಿಕಲರು, ಕುರುಡರು, ಕುಷ್ಠರೋಗಿಗಳು, ಸಮಾಜಕ್ಕೆ ಬೇಡವಾದವರು, ಪ್ರೀತಿ ವಂಚಿತರು, ಜನತೆಯ ಆದರ-ಪೋಷಣೆ ಇಲ್ಲದೆ ಸಮಾಜದಲ್ಲಿ ಉಪೇಕ್ಷೆಗೆ ಈಡಾದವರು, ಸಮಾಜಕ್ಕೆ ಹೊರೆಯೆನಿಸಿ ಎಲ್ಲರಿಂದ ಪರಿತ್ಯಕ್ತರಾದವರು-ಇವರೆಲ್ಲರ ಸೇವೆ ಮಾಡುವುದೇ ಈ ಮಿಷನರಿಯ ಮೂಲ ಧ್ಯೇಯ" ಎಂದು ಮದರ್ ತೆರೇಸಾ ಅವರು ಒಂದೆಡೆ ಹೇಳಿಕೊಂಡಿದ್ದಾರೆ.
ಅವರ ಈ ಸೇವಾಕಾರ್ಯವು ಬಹುಬೇಗನೇ ಜನಮನ್ನಣೆ ಗಳಿಸಿತು. ೧೯೫೦ರಲ್ಲಿ ವ್ಯಾಟಿಕನ್ ಮಹಾಸಭೆಯು ತೆರೇಸಾ ಅವರ ಹೊಸ ಆಶ್ರಮವಾದ ’ಮಿಶನರೀಸ್ ಆಫ್ ಚಾರಿಟಿ’ ಅನ್ನು ಅನುಮೋದಿಸಿತು. ಆಗ ಅದರಲ್ಲಿ ಕೇವಲ ಹನ್ನೆರಡು ಮಂದಿ ಸದಸ್ಯರಿದ್ದರು. ಅವರಲ್ಲಿ ಹೆಚ್ಚಿನವರು ಸಂತ ಮೇರಿ ಶಾಲೆಯ ಹಳೆಯ ಶಿಕ್ಷಕಿಯರು ಇಲ್ಲವೇ ವಿದ್ಯಾರ್ಥಿನಿಯರು.
ಆಶ್ರಮವು ತನ್ನ ಕೆಲಸಗಳನ್ನು ವಿಸ್ತರಿಸುತ್ತಾ ಹೋದಂತೆ ಅದಕ್ಕೆ ಎಲ್ಲೆಡೆಗಳಿಂದಲೂ ದಾನ ಹರಿದು ಬರತೊಡಗಿತು. ೫೦-೬೦ರ ಎರಡು ದಶಕಗಳಲ್ಲಿ ಅವರು ಕುಷ್ಟರ ಕಾಲನಿ, ಅನಾಥಾಶ್ರಮ, ಚಿಕಿತ್ಸಾಲಯ ಹಾಗೂ ಅನೇಕ ಸಂಚಾರಿ ಆರೋಗ್ಯಕೇಂದ್ರಗಳನ್ನು ತೆರೆದರು.
ಅಂತರಾಷ್ಟ್ರೀಯ ಮನ್ನಣೆ
ಫೆಬ್ರವರಿ ೧೯೬೫ರಲ್ಲಿ ಆಗಿನ ಕ್ರೈಸ್ತ ಜಗದ್ಗುರು ಆರನೇ ಚಿನ್ನಪ್ಪರು ಮಿಶನರೀಸ್ ಆಫ್ ಚಾರಿಟಿಯ ಕೆಲಸಗಳ ಕುರಿತು ಮೆಚ್ಚುಗೆಪತ್ರ ಹೊರಡಿಸಿದರು. ಇದರಿಂದ ಸ್ಫೂರ್ತಿಗೊಂಡ ಮದರ್ ತೆರೇಸಾ ಅವರು ತಮ್ಮ ಆಶ್ರಮವನ್ನು ಹೊರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿದರು. ಹೀಗೆ ೧೯೯೭ರಲ್ಲಿ ಅವರು ಸಾಯುವ ವೇಳೆಗೆ ಮಿಶನರೀಸ್ ಆಫ್ ಚಾರಿಟಿಯು ಜಗತ್ತಿನ ಏಳೂ ಖಂಡಗಳ ೧೨೩ ದೇಶಗಳಲ್ಲಿ ನಾಲ್ಕು ಸಾವಿರ ಶಾಖೆಗಳನ್ನು ತೆರೆದಿತ್ತು, ಅದರ ೬೧೦ ವಿವಿಧ ಯೋಜನೆಗಳಲ್ಲಿ ಸಂನ್ಯಾಸಿಯರು ಮಾತ್ರವಲ್ಲದೆ ಸಾವಿರಾರು ಜನಸಾಮಾನ್ಯರು ಸ್ವಯಂ ಸ್ಫೂರ್ತಿಯಿಂದ ತೊಡಗಿಸಿಕೊಂಡಿದ್ದರು,
೧೯೭೧ರಲ್ಲಿ ನ್ಯೂಯಾರ್ಕ್ ನಗರಕ್ಕೆ ತೆರಳಿದ ಮದರ್ ತೆರೇಸಾ ಅವರು ಅಲ್ಲಿನ ಎಚ್ಐವಿ ಸೋಂಕಿನ ಜನರಿಗಾಗಿ ಆಶ್ರಯ ಕಲ್ಪಿಸಿ ಅವರ ಪೋಷಣೆಯ ಹೊಣೆ ಹೊತ್ತರು. ಅದರ ಮರುವರ್ಷ ಲೆಬನಾನಿಗೆ ಹೋಗಿ ಬೇರೂತ್ ಮುತ್ತಿಗೆಯಲ್ಲಿ ತೊಡಗಿದ್ದ ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ತೀನ್ ಗೆರಿಲ್ಲಾಗಳು ತಾತ್ಕಾಲಿಕ ಸಮರವಿರಾಮಕ್ಕೆ ಒಪ್ಪುವಂತೆ ಮಧ್ಯಸ್ತಿಕೆ ವಹಿಸಿ ಅಲ್ಲಿನ ರಣರಂಗದ ಮುಂಚೂಣಿಯಲ್ಲಿನ ಆಸ್ಪತ್ರೆಯಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಅಪಾಯದಿಂದ ಪಾರುಮಾಡಿದ್ದರು. ಅಲ್ಲದೆ ಧ್ವಂಸಗೊಂಡ ಆಸ್ಪತ್ರೆಗಳಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಅಲ್ಲಿಂದ ಪಾರುಮಾಡಲು ಇವರು ಕಾರ್ಯಕರ್ತರೊಡನೆ ಸೇರಿ ಯುದ್ಧ ವಲಯದುದ್ದಕ್ಕೂ ತಿರುಗಾಡಿ ಬೇರೂತಿನ ಕ್ರಿಶ್ಚಿಯನ್ ಸಮುದಾಯ ಹಾಗೂ ಮುಸ್ಲಿಮ್ ಸಮುಯದಾಯಗಳ ಮಕ್ಕಳ ಪ್ರೀತಿಯನ್ನು ಗೆದ್ದರು. ಆಪ್ರಿಕಾ, ಲ್ಯಾಟಿನ್ ಅಮೆರಿಕಾ, ಪೂರ್ವಯೂರೋಪ್, ಸೋವಿಯತ್ ಒಕ್ಕೂಟಗಳಲ್ಲಿ ಸಂಚರಿಸಿ ಪ್ರವಾಹ ಪೀಡಿತರ, ಸಾಂಕ್ರಾಮಿಕ ರೋಗಪೀಡಿತರ, ಕ್ಷಾಮಪೀಡಿತರ ಹಾಗೂ ನಿರಾಶ್ರಿತರ ನೆರವಿಗೆ ನಿಂತರು. ಕೈದಿಗಳ, ಮದ್ಯವಸನಿಗಳ, ನಿರ್ಗತಿಕರ ಸಾಂತ್ವನವಾದರು. ಒಂದೊಮ್ಮೆ ಇದೇ ಸೋವಿಯತ್ತಿನ ಕಮ್ಯುನಿಸ್ಟ್ ಸರ್ಕಾರವು ಇವರ ಯೋಜನೆಗಳನ್ನು ತಿರಸ್ಕರಿಸಿತ್ತು ಎಂಬುದು ವಿಪರ್ಯಾಸ.
ದಣಿವರಿಯದ ಅವರ ಸೇವೆಯನ್ನು ಗುರುತಿಸಿ ಹಲವಾರು ಸಮುದಾಯಗಳು ದೇಶಗಳು ಅವರನ್ನು ಆದರಿಸಿ ಗೌರವಿಸಿದವು. ಸೋವಿಯತ್ ಒಕ್ಕೂಟವು ಚಿನ್ನದ ಪದಕ ನೀಡಿ ಸತ್ಕರಿಸಿತು. ಕ್ರೈಸ್ತ ಜಗದ್ಗುರುಪೀಠವು ಶಾಂತಿ ಪ್ರಶಸ್ತಿ ನೀಡಿತು. ಅಂತರಾಷ್ಟ್ರೀಯ ಶಾಂತಿಗಾಗಿ ನೀಡುವ ನೆಹರೂ ಪ್ರಶಸ್ತಿ ಅವರ ಮುಡಿಗೇರಿತು, ಬಾಲ್ಜನ್, ಟೆಂಪಲ್ಟನ್ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿಗಳಿಗೂ ಅವರು ಭಾಜನರಾದರು. ನಮ್ಮ ದೇಶವು ’ಭಾರತರತ್ನ’ ಎಂದು ಕರೆದು ಮನ್ನಣೆ ನೀಡಿತು. ಅಮೆರಿಕ ಸಂಯುಕ್ತ ಸಂಸ್ಥಾನವು ಅವರಿಗೆ ಗೌರವ ಪೌರತ್ವ ನೀಡಿತು.
೧೯೭೯ರಲ್ಲಿ ಜಗತ್ತಿನ ಅತ್ಯುನ್ನತ ನೊಬೆಲ್ ಆಯ್ಕೆ ಕೂಟವು ಮದರ್ ತೆರೇಸಾ ಅವರನ್ನು ’ನೊಂದ ಮಾನವೀಯತೆಯನ್ನು ಕೈಹಿಡಿದೆತ್ತಿದ ಮಾತೆ’ ಎಂದು ಕರೆದು ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿ ವಿಜೇತರಿಗೆ ನೀಡಲಾದ ಸಾಂಪ್ರದಾಯಿಕ ಔತಣಕೂಟದಲ್ಲಿ ಪಾಲುಗೊಳ್ಳಲು ಒಪ್ಪದ ಮದರ್, ಪ್ರಶಸ್ತಿ ಮೊತ್ತವಾದ ೧,೯೨,೦೦೦ಡಾಲರ್ ನಿಧಿಯನ್ನು ಇಂಡಿಯಾದ ಬಡವರಿಗೆ ನೆರವಾಗಲು ನೀಡಬೇಕೆಂದು ಕೋರಿದರು.
ಪ್ರಶಸ್ತಿ ಪ್ರದಾನ ಮಾಡಿದ ಮೇಲೆ "ವಿಶ್ವ ಶಾಂತಿಯನ್ನು ಉತ್ತೇಜಿಸಲು ನಾವು ಏನು ಮಾಡಬಹುದು?" ಎಂದು ಮದರ್ ತೆರೇಸಾರನ್ನು ನೊಬೆಲ್ ಪ್ರಶಸ್ತಿ ಸಂಸ್ಥೆ ಕೇಳಿತ್ತು.
"ಮನೆಗೆ ಹೋಗಿ, ನಿಮ್ಮ ಕುಟುಂಬವನ್ನು ಪ್ರೀತಿಸಿ" ಎಂಬ ಚುಟುಕು ಉತ್ತರವನ್ನು ತೆರೇಸಾ ನೀಡಿದ್ದರು. "ಬಡ ರಾಷ್ಟ್ರಗಳಲ್ಲಿ ಮಾತ್ರವಲ್ಲ ಪಶ್ಚಿಮದಲ್ಲೂ ನಾನು ಬಡತನವನ್ನು ಕಂಡಿದ್ದೇನೆ, ಪಶ್ಚಿಮದಲ್ಲಿರುವ ದಾರಿದ್ರ್ಯ ನಿವಾರಣೆ ತೊಲಗಿಸುವುದು ತುಂಬಾ ಕಷ್ಟ ಸಾಧ್ಯ" ಎಂದು ತಮ್ಮ ಪ್ರಶಸ್ತಿ ಭಾಷಣದಲ್ಲಿ ಹೇಳಿದರು. ಒಬ್ಬ ಹಸಿದ ವ್ಯಕ್ತಿಯನ್ನು ಬೀದಿಯಿಂದ ಕರೆತಂದಾಗ ಅವನಿಗೆ ಒಂದು ತಟ್ಟೆ ಅನ್ನ ನೀಡಿ ನಾನು ಅವನನ್ನು ತೃಪ್ತಿಪಡಿಸಿದ್ದೇನೆ. ಅವನ ಹಸಿವನ್ನು ಇಂಗಿಸಿದ್ದೇನೆ. ಸಮಾಜವು ದೂರೀಕರಿಸಿದ ವ್ಯಕ್ತಿಗೆ ತಾನು ಬಹಿಷ್ಕೃತ ಹಾಗೂ ಪ್ರೀತಿವಂಚಿತ ಎಂಬ ಭಾವನೆ ಕಾಡುತ್ತದೆ, ಆ ಭೀತಗ್ರಸ್ತ ಭಾವನೆಗಳು ನೋವಿನ ನೆರಳಿನಂತೆ ಹಿಂಬಾಲಿಸುತ್ತವೆ.
ಸಮಾಜದಿಂದ ಬಹಿಷ್ಕೃತನಾದ ವ್ಯಕ್ತಿಗಿರುವ ನೋವೇ ಒಂದು ಬಡತನ, ಅದು ಸಹಿಸಲಸಾಧ್ಯ ಎನ್ನುತ್ತಾರವರು.
ವಿವಾದ
ಇಷ್ಟೆಲ್ಲ ಜಗದ್ವ್ಯಾಪಿ ಜನಮನ್ನಣೆಯ ನಡುವೆ ತೆರೇಸಾ ಅವರಿಗೆ ನಿಂದಕರೂ ಇದ್ದರು. ೧೯೭೯ರಲ್ಲಿ ನೊಬೆಲ್ ಭಾಷಣ ಮಾಡುವ ವೇಳೆ ಅವರು ನುಡಿದ ’ಗರ್ಭಪಾತವು ಶಾಂತಿಯನ್ನು ಹಾಳುಗೆಡಹುವ ಮೊದಲ ಮಾರಿ’ ಎಂಬ ಮಾತು ಅಪಾರ ಟೀಕೆಗಳಿಗೆ ಕಾರಣವಾಯಿತು.
೧೯೯೫ರಲ್ಲಿ ಅಯರ್ಲೆಂಡ್ ದೇಶವು ಮದುವೆಮುರಿತ ಹಾಗೂ ಮರುಮದುವೆಗೆ ಜಾರಿಯಲ್ಲಿದ್ದ ಸಾಂವಿಧಾನಿಕ ನಿಷೇಧವನ್ನು ತೆಗೆದುಹಾಕುವ ಪ್ರಸ್ತಾವಕ್ಕೆ ಮುಂದಾದಾಗ ಮದರ್ ಅವರು ಆ ಪ್ರಸ್ತಾವದ ವಿರುದ್ಧ ಜನಾಭಿಪ್ರಾಯವನ್ನು ಎಚ್ಚರಗೊಳಿಸಿದ್ದರು. ”ದ ಮಿಶನರಿ ಪೊಸಿಶನ್: ಮದರ್ ತೆರೇಸಾ ಇನ್ ತಿಯರಿ’ ಎಂಬ ಪುಸ್ತಕವನ್ನು ಬರೆದ ಕ್ರಿಸ್ಟೊಫರ್ ಹಿಚೆನ್ಸ್ ಎಂಬ ಲೇಖಕನು ತನ್ನ ಆ ಪುಸ್ತಕದಲ್ಲಿ ಮದರ್ ಅವರನ್ನು ಕಟುವಾಗಿ ಟೀಕಿಸಿದ್ದಾನೆ. ಮದರ್ ತೆರೇಸಾ ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಬಡತನವನ್ನು ಮೆರೆಸಿದರು, ಬಡತನವು ಸಮಾಜದ ಅನಿವಾರ್ಯವೆಂದು ಭಾವಿಸುವ ಸಾಂಸ್ಥಿಕ ವಾದಗಳನ್ನು ಪುಷ್ಟೀಕರಿಸಿದರು ಎಂದು ಅವನು ಹೇಳಿಕೊಂಡಿದ್ದಾನೆ. ಮದರ್ ತೆರೇಸಾ ಅವರು ಬಡತನವನ್ನು ಹೋಗಲಾಡಿಸುವುದರ ಬದಲು ಬಡವರು ಬಡವರಾಗಿಯೇ ಬದುಕುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಡೇವಿಡ್ ಸ್ಕಾಟ್ ಎಂಬುವನು ಟೀಕಿಸಿದ್ದಾನೆ. ಮೈಕೇಲ್ ಪೇರಂಟಿ, ಅರೂಪ್ ಚಟರ್ಜೀ ಮುಂತಾದವರೂ ಮದರ್ ತೆರೇಸಾ ಅವರನ್ನು ಟೀಕಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಎಂಬ ಸಂಸ್ಥೆಯು ತೆರೇಸಾ ಅವರ ಸೇವಾಕಾರ್ಯಗಳನ್ನು ಮತಾಂತರದ ಹುನ್ನಾರ ಎಂದು ಕರೆದಿದೆ. ಮದರ್ ತೆರೇಸಾ ಅವರು ಸತ್ತಾಗ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸುವುದನ್ನು ಇದೇ ವಿಶ್ವ ಹಿಂದೂ ಪರಿಷತ್ತು ವಿರೋಧಿಸಿತ್ತು.
ಮರಣ
ಹಲವಾರು ವರ್ಷಗಳ ಅವಿರತ ದುಡಿಮೆಯಿಂದಾಗಿ ಮದರ್ ತೆರೇಸಾ ಅವರ ಒಡಲು ಜರ್ಜರಿತವಾಗಿತ್ತು. ಹೃದಯ, ಉಸಿರುಚೀಲ ಹಾಗೂ ಮೂತ್ರಕೋಶಗಳು ಸೊರಗಿದ್ದವು. ಅವರು ೧೯೯೭ ಸೆಪ್ಟೆಂಬರ್ ೫ರಂದು ತಮ್ಮ ೮೭ನೇ ವಯಸ್ಸಿನಲ್ಲಿ ಸ್ವರ್ಗ ಸೇರಿದರು. ೨೦೦೩ರಲ್ಲಿ ಅವರ ಪತ್ರವ್ಯವಹಾರಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದಾಗ ತಮ್ಮ ಜೀವನದ ಕೊನೆಯ ಐವತ್ತು ವರ್ಷಗಳಲ್ಲಿ ಅವರು ಅನುಭವಿಸಿದ ಧರ್ಮಜಿಜ್ಞಾಸೆಯ ವೇದನೆಯನ್ನು ಜಗತ್ತು ಅರಿಯುವ ಮೂಲಕ ಅವರ ಬದುಕಿನ ಮರು ಮೌಲ್ಯಮಾಪನ ನಡೆಸಿತು.
ತಮ್ಮ ಸಂಸ್ಥೆಯನ್ನು ಕಟ್ಟಿದ ಮೊದಲ ವರ್ಷವು ಹಲವಾರು ಎಡರು-ತೊಡರುಗಳಿಂದ ತುಂಬಿತ್ತು ಎಂದು ತೆರೇಸಾ ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ.ಆದಾಯದ ಯಾವುದೇ ಮೂಲಗಳಿರಲಿಲ್ಲ, ಹೀಗಾಗಿ ಇವರು ಆಹಾರ ಮತ್ತು ಅಗತ್ಯ ಪೂರೈಕೆಗಾಗಿ ಅನ್ಯರನ್ನು ಬೇಡುವ ಪರಿಸ್ಥಿತಿಗೆ ಬೀಳಬೇಕಾಯಿತು. ಒಂಟಿತನ ಆಗಾಗ್ಗೆ ಕಾಡಿತು ಮತ್ತು ಮೊದಲಿನ ಬದುಕಿನ ಸೌಕರ್ಯಗಳಿಗೆ ಮತ್ತೆ ಹಿಂತಿರುಗುವ ಪ್ರಲೋಭನೆಯೂ ಉಂಟಾಯಿತು ಎಂದೆಲ್ಲ ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ. ನೋವು ಮಡುಗಟ್ಟಿದ ಒಂದು ಪತ್ರದಲ್ಲಿ ಅವರು: ’ಎಲ್ಲಿ ನನ್ನ ನಂಬಿಕೆ... ಎಷ್ಟೇ ಆಳಕ್ಕಿಳಿದರೂ ಎಲ್ಲ ಖಾಲಿ ಖಾಲಿ ಎಲ್ಲ ಕತ್ತಲೆ... ನನ್ನ ದೇವರೇ... ಈ ಕಾಣದ ನೋವು ಬಾಧಿಸುತ್ತಿದೆ... ನನ್ನಲ್ಲಿ ನಂಬಿಕೆಯೇ ಹೊರಟುಹೋಗಿದೆ... ನನ್ನ ಹೃದಯದ ತಳಮಳವನ್ನು ಹೊರಗೆಡವಲು ಆಗದು... ಅವ್ಯಕ್ತ ನೋವನ್ನು ಅನುಭವಿಸಲು ಬಿಡು’ ಇತ್ಯಾದಿಯಾಗಿ ಅವರು ಹೇಳಿಕೊಂಡಿರುವುದರಿಂದ ಅವರೂ ಎಲ್ಲರಂತೆ ಸಾಮಾನ್ಯರು, ಮಾನವಾತೀತ ಶಕ್ತಿಗಳೇನೂ ಅವರಿಗಿರಲಿಲ್ಲ, ನಮ್ಮಂತೆ ಅವರಿಗೂ ಭಾವನೆಗಳಿದ್ದವು ಎಂಬುದು ಅರಿವಾಗುತ್ತದೆ.
ಆದರೆ ನಿರ್ಬಲರಿಗೆ ನಿರ್ಗತಿಕರಿಗೆ ನೀಡಿದ ಸಹಾಯಹಸ್ತದ ಕಾರಣದಿಂದ ಆಕೆ ೨೦ನೇ ಶತಮಾನದ ಮಹಾನ್ ಮಾನವತೆಯ ಸಂಕೇತಗಳಲ್ಲಿ ಒಬ್ಬರಾಗಿದ್ದಾರೆ. ಮಾನವ ಹೃದಯವನ್ನು ಅರ್ಥಮಾಡಿಕೊಳ್ಳುವ ಹಾಗೂ ಅದಕ್ಕೆ ತಕ್ಕಂತೆ ಮಿಡಿಯುವ ಅವರ ನಡೆನುಡಿಯಿಂದಾಗಿಯೇ ಅವರು ಪ್ರಪಂಚದೆಲ್ಲೆಡೆ ತಮ್ಮ ತತ್ವಗಳಿಗೆ ನಿಷ್ಠರನ್ನು ಪಡೆಯುವಂತಾಯಿತು.
ತಮ್ಮ ಸಂಸ್ಥೆಗಳ ಮೂಲಕ ಪ್ರಪಂಚದೆಲ್ಲೆಡೆ ಅಗಾಧ ಸೇವಾಕಾರ್ಯಗಳನ್ನು ನಡೆಸಿ, ಅಪಾರ ಹೃದಯಗಳನ್ನು ತಟ್ಟಿದ ಮದರ್ ತೆರೇಸಾ ಅವರದು ಸದಾ ವಿನೀತ ಭಾವ. ತಾವು ಸಾಯುವ ದಿನ ಅವರು ಸಂತೃಪ್ತಿಯಿಂದ ಆಡಿದ ಮಾತು ಹೀಗಿದೆ: "ಹುಟ್ಟಿನಿಂದ ನಾನು ಆಲ್ಬೇನಿಯನ್, ಪೌರತ್ವದಿಂದ ಇಂಡಿಯನ್, ಜೀವಿತದಿಂದ ಒಬ್ಬ ಸಂನ್ಯಾಸಿನಿ, ದೈವಕರೆಯಿಂದಾಗಿ ಜಗತ್ತಿಗೇ ಸೇರಿದವಳು, ಹೃದಯದಲ್ಲಿ ಮಾತ್ರ ನಾನು ಯೇಸುವಿಗೆ ಸೇರಿದವಳು"
ಕೊಲ್ಕತ್ತಾದ ಜನಮಾನಸದಲ್ಲಿ ಅವರು ಇನ್ನೂ ಜೀವಂತರಾಗಿದ್ದಾರೆ. ಅವರನ್ನು ಪೂಜಿಸುವ ಅರ್ಚಿಸುವ ಜನರ ಸಂಖ್ಯೆಯೂ ಕಡಿಮೆಯಿಲ್ಲ. ಜನಮಾನಸದ ಸದಿಚ್ಛೆಯಂತೆ ಕ್ರೈಸ್ತ ಧರ್ಮಮಂಡಲಿಯು ೧೯ ಅಕ್ಟೋಬರ್ ೨೦೦೩ರಂದು ಅವರಿಗೆ ಪೂಜನೀಯ ಸ್ಥಾನಮಾನ ನೀಡಿ ಗೌರವಿಸಿದೆ.
ಇವರ ಜೀವನದ ಕುರಿತು ಸಮ್ಥಿಂಗ್ ಬ್ಯೂಟಿಫುಲ್ ಫಾರ್ ಗಾಡ್ ಎಂಬ ಪುಸ್ತಕ ಹೊರಬಂದಿದೆ ಹಾಗೂ ಇದೇ ಕೃತಿಯನ್ನು ಆಧರಿಸಿ ಸಾಕ್ಷ್ಯ ಚಿತ್ರವೂ ತೆರೆಕಂಡಿದೆ.