ಕಳೆದ ಶತಮಾನದಲ್ಲಿ ನಮ್ಮ ಬೆಂಗಳೂರನ್ನೊಳಗೊಂಡ ಮೈಸೂರು
ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ ಎಂಇಪಿ ಗುರುಗಳ ಪೈಕಿ ಫಾದರ್ ಪಿಯೇರ್ ಅಗಸ್ತೆ ಬೊತೆಲೊ
ಅವರು ತುಂಬಾ ಪ್ರತಿಭಾನ್ವಿತ ಗುರುಗಳಾಗಿದ್ದರು.
೧೮೨೦ ಮೇ ೩೧ರಂದು ಜನಿಸಿದ ಬೊತೆಲೊ ಅವರು ಫ್ರಾನ್ಸಿನ ಲ
ಮಾನ್ ಧರ್ಮಪ್ರಾಂತ್ಯದಲ್ಲಿ ೧೮೪೩ರ ಡಿಸೆಂಬರ್ ೩೧ರಂದು ಗುರುದೀಕ್ಷೆ ಪಡೆದು ಸೋಲ್ಜೆ ಲ ಬ್ರುಯಾಂ ಚರ್ಚಿನ ಗುರುಗಳಾಗಿ ಸೇವೆ
ಮಾಡಿದರು. ಅದಾದ ಮೇಲೆ ಬಹುಶಃ ೧೮೪೪ ನವೆಂಬರಿನಲ್ಲಿ ಜೆಸ್ವಿತ್ ಸಭೆಗೆ ಸೇರಿದ್ದರಾದರೂ ಮತ್ತೆ
ಕೆಲ ದಿನಗಳಲ್ಲಿಯೇ ಮಾತೃ ಧರ್ಮಪ್ರಾಂತ್ಯಕ್ಕೆ ಹಿಂದಿರುಗಿ ಲವಾಲಿನ ಸಂತ ವೆನೆರಾನ್ ಚರ್ಚಿನಲ್ಲಿ
ಗುರುಗಳಾದರು. ೧೮೪೯ರ ಜೂನ್ ೨೯ರಂದು ಇವರು ಎಂಇಪಿ (ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ
ಸಂಸ್ಥೆ) ಯ ಮೂಲಕ ನಮ್ಮ ದೇಶಕ್ಕೆ ನಿಯುಕ್ತರಾಗಿ ೧೮೫೦ ಏಪ್ರಿಲ್ ಹತ್ತರಂದು ಮೈಸೂರು
ಧರ್ಮಪ್ರಾಂತ್ಯಕ್ಕೆ ಬಂದಿಳಿದರು.
ನಮ್ಮ ನಾಡಿನಲ್ಲಿ ಅಂದು ಬ್ರಿಟಿಷರ ಆಳ್ವಿಕೆಯಿತ್ತು.
ಪ್ರೊಟೆಸ್ಟೆಂಟರು ಅಪಾರ ಧನಕನಕಗಳೊಂದಿಗೆ ಸಜ್ಜಾಗಿ ಪುಸ್ತಕಗಳು, ಕರಪತ್ರಗಳು, ಆಸ್ಪತ್ರೆಗಳು, ಶಾಲೆಗಳು ಮುಂತಾದ ಸೇವೆಗಳ ಮೂಲಕ ಕ್ರಿಸ್ತಧರ್ಮವನ್ನು
ಗಟ್ಟಿಯಾಗಿ ನೆಲೆಗೊಳಿಸುತ್ತಿದ್ದರು. ಅವರೊಂದಿಗೆ ಪೈಪೋಟಿಗೆ ನಿಲ್ಲಲಾಗದೆ ಕಥೋಲಿಕ ಧರ್ಮಸಭೆ
ಸೊರಗುತ್ತಿತ್ತು. ಇದನ್ನು ಮನಗಂಡ ಬೊತೆಲೊ ಅವರು ಕ್ಷಣಿಕ ಕಾಲದಲ್ಲಿಯೇ ನಮ್ಮ
ಧರ್ಮಪ್ರಾಂತ್ಯದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣಕರ್ತರಾಗಿ ಮಿಂಚಿನ ಸಂಚಾರ ಉಂಟುಮಾಡಿದರು.
೧೮೫೧ರಲ್ಲಿ ಬೆಂಗಳೂರಿನ ಸಂತ ಜೋಸೆಫರ ಸೆಮಿನರಿಯ
ನಿರ್ದೇಶಕರಾಗಿ ನೇಮಕಗೊಂಡ ಇವರು ಮೂರು ವರ್ಷಗಳ ನಂತರ ಅಂದರೆ ೧೮೫೪ರಲ್ಲಿ ಆ ಗುರುಮಠವನ್ನು ಹೊಸ
ರೂಪದಲ್ಲಿ ಪುನರ್ ನಿರ್ಮಾಣ ಮಾಡಿದ ಹೆಗ್ಗಳಿಗೆ ಹೊಂದಿದ್ದಾರೆ. ಇಂದು ಆ ಕಟ್ಟಡವು ಸೆಂಟ್
ಜೋಸೆಫ್ಸ್ ಯೂರೋಪಿಯನ್ ಹೈಸ್ಕೂಲ್ ಎಂದು ಬದಲಾಗಿದೆ. ಅಂದು ಅದರ ನಿರ್ಮಾಣ ವೆಚ್ಚ ಮೂರು ಸಾವಿರ
ರೂಪಾಯಿಗಳು. ಅದರ ಆವರಣದಲ್ಲಿ ಒಂದು ಅನಾಥಾಶ್ರಮ ಹಾಗೂ ವಸತಿಶಾಲೆಯೂ ಇತ್ತೆಂದು ದಾಖಲೆಗಳು
ಹೇಳುತ್ತವೆ.
ಬೊತೆಲೊ ಅವರ ಸಾಹಿತ್ಯ ಸೇವೆ ಅನುಕರಣೀಯ.
ಪ್ರೊಟೆಸ್ಟೆಂಟರ ಪ್ರಾಬಲ್ಯವನ್ನು ಸರಿಗಟ್ಟಲು ಅಪಾರ ಪ್ರಮಾಣದ ಸಾಹಿತ್ಯವರ್ಧನೆ ಅಗತ್ಯವೆಂದು
ಅವರು ಮನಗಂಡರು. ಅದಕ್ಕಾಗಿ ಅವರು ಮುದ್ರಣ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡರು. ಕನ್ನಡ
ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡರು. ಕಥೋಲಿಕ ಧರ್ಮದ ತತ್ವಗಳು, ಪ್ರೊಟೆಸ್ಟೆಂಟರ ತಪ್ಪಾದ ಬೋಧನಾನೀತಿ ಮುಂತಾದ ವಿಷಯಗಳ
ಕುರಿತಂತೆ ಪುಸ್ತಕಗಳನ್ನು ಪ್ರಕಟಿಸಿದರು. ಕಥೋಲಿಕ ಮುದ್ರಣಾಲಯವನ್ನೂ ತಾವೇ ಮುನ್ನಡೆಸಿದರು.
ಅಲ್ಪಕಾಲದಲ್ಲಿಯೇ ಅವರು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೆ ತಾವು ಮುದ್ರಿಸಿದ
ಪುಸ್ತಕಗಳನ್ನು ೧೮೬೭ರಲ್ಲಿ ಪ್ಯಾರಿಸ್ಸಿನಲ್ಲಿ ನಡೆದ ಅಂತರಾಷ್ಟ್ರೀಯ ಪುಸ್ತಕಮೇಳದ
ಪ್ರದರ್ಶನಕ್ಕೆಂದು ಕಳಿಸಿಕೊಟ್ಟರು. ಈ ಅನುಭವದ ಆಧಾರದಲ್ಲಿ ಅವರು ೧೮೭೦ರಲ್ಲಿ ಕನ್ನಡ ಪುಸ್ತಕಗಳ
ಮುದ್ರಣ ಮತ್ತು ಪ್ರಕಾಶನದ ಕುರಿತಂತೆ ಒಂದು ಯೋಜನಾವರದಿಯನ್ನು ಸಿದ್ಧಪಡಿಸಿದರು.
೧೮೬೧ರಲ್ಲಿ ಅವರು ಕಥೋಲಿಕ ಧರ್ಮದ ಪರಿಚಯ ಮತ್ತು
ಪ್ರೊಟೆಸ್ಟೆಂಟರ ಖಂಡನೆಯುಳ್ಳ “ಸತ್ಯೋಪದೇಶ”
ಎಂಬ ಪುಸ್ತಕವನ್ನು
ಪ್ರಕಟಿಸಿದರು. ಕೆಲದಿನಗಳಲ್ಲೇ ಆ ಲೇಖನಗಳನ್ನು ಬಿಡಿಬಿಡಿಯಾಗಿ ಪುಸ್ತಕಗಳನ್ನಾಗಿಸಿದರು.
ತಿರುಸಭೆಯ ಲಕ್ಷಣಗಳು, ಕನ್ನಡ ಜ್ಞಾನೋಪದೇಶವು,
ಹಬ್ಬ ಸಾಂಗ್ಯಗಳ
ವ್ಯಾಖ್ಯಾನವು, ಪತಿತರ ಖಂಡನೆಯು
ಅಥವಾ ವೇದ ಮಾರ್ಪಡಿಸುವಿಕೆಯು (Refutation of Protestantism) ಎಂಬ ಆ ಪುಸ್ತಕಗಳು
ಹಲವಾರು ಮರುಮುದ್ರಣಗಳನ್ನು ಕಂಡವು. ಇದರಲ್ಲಿ ೧೩೮ ಪುಟಗಳ ’ಹಬ್ಬ ಸಾಂಗ್ಯಗಳ ವ್ಯಾಖ್ಯಾನವು’ ತಮಿಳಿನಿಂದ ಅನುವಾದವಾಗಿದ್ದು ೧೮೮೨ರಲ್ಲಿ ಮರುಮುದ್ರಣ
ಕಂಡಿತು ಹಾಗೂ ೧೮೯೭ರಲ್ಲಿ ಪರಿಷ್ಕೃತ ಮುದ್ರಣ ಕಂಡಿತು. ಕನ್ನಡ ಜ್ಞಾನೋಪದೇಶವು (೧೦೨ ಪುಟಗಳು)
೧೮೯೯ರಲ್ಲಿ ಪರಿಷ್ಕೃತವಾಯಿತು.
ಇವಲ್ಲದೆ ಬೊತೆಲೊ ಅವರು ಕಥೋಲಿಕ ಶಾಲೆಗಳಲ್ಲಿ
ಓದುತ್ತಿದ್ದ ಮಕ್ಕಳ ಬಳಕೆಗಾಗಿ ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಇಂಗ್ಲೆಂಡು ಶೀಮೆಯ
ಚರಿತ್ರೆ (Histoire
d'Angleterre) (೧೯೪ ಪುಟಗಳು), ಭೂಗೋಳ ಶಾಸ್ತ್ರದ ಸಂಕ್ಷೇಪವು (೪೩೮ ಪುಟಗಳು),
ಗಣಿತದ ಪುಸ್ತಕ, ಓನಾಮಗಳು, ಬಾಲರು ಓದುವ ಪುಸ್ತಕ ಮುಂತಾದ ಪಠ್ಯಪುಸ್ತಕಗಳನ್ನೂ
ಪ್ರಕಟಿಸಿದರು. ಮೈಸೂರು ಪ್ರಾಂತ್ಯದ ಕಥೋಲಿಕ ಗುರು ಅಭ್ಯರ್ಥಿಗಳ ಬಳಕೆಗೆ ಅನುವಾಗಲೆಂದು
೧೮೫೫ರಲ್ಲಿ ೧೦೦೮ ಪುಟಗಳ ’ಲತೀನು ಕನ್ನಡ
ಅಕಾರಾದಿ’ (Dictionarium
Canarense latinul ad usum Maïsurensis catholici seminarii) ಹಾಗೂ ತಿರುಸಭೆಯ ಚರಿತ್ರೆಯು (೧೮೬೭) (Histoire de l'Eglise) ಎಂಬ ಪುಸ್ತಕದ ಎರಡು
ಸಂಪುಟಗಳನ್ನು (ಪುಟಗಳು ೩೯೨ + ೪೪೮) ಹೊರತಂದರು. ಸೆಮಿನರಿಯಲ್ಲಿ ಬೋಧಕರಾಗಿದ್ದವರು ನಮ್ಮ ದೇಶದ
ಮತವಿಚಾರಗಳನ್ನು ಅರಿತಿರುವುದು ಒಳ್ಳೆಯದು ಎಂಬ ಉದ್ದೇಶದಿಂದ ಭಾರತೀಯ ತತ್ವಶಾಸ್ತ್ರದ ಪರಿಚಯ (Philosophiae Indicae Expositio ad
usum scholarum) ಎಂಬ ೧೨೮ ಪುಟಗಳ ಗ್ರಂಥವನ್ನು ೧೮೬೮ರಲ್ಲಿ
ಪ್ರಕಟಿಸಿದರು. ಬೊತೆಲೊ ಅವರು ರಚಿಸಿದ ಮತ್ತೊಂದು ಮಹೋನ್ನತ ಕೃತಿ ’ಕನ್ನಡ ಲತೀನು ನಿಘಂಟು (Dictionarium Canarense-Latinum) ೧೮೫೫ರಲ್ಲಿ ಪ್ರಕಟವಾಯಿತು.
ಫಾದರ್ ಬೆಶ್ಚಿಯವರು ತಮಿಳಿನಲ್ಲಿ ಬರೆದಿದ್ದ
ಜ್ಞಾನಬೋಧಕ (೧೮೬೪) ಎಂಬ ಪುಸ್ತಕವನ್ನು ಹಾಗೂ ಅದೇ ರೀತಿ ತಮಿಳಿನಲ್ಲಿ ಜನಪ್ರಿಯವಾಗಿದ್ದ
ಅರ್ಚಶಿಷ್ಟರ ಚರಿತ್ರೆಯು (೧೮೬೯) ಎಂಬ ಪುಸ್ತಕವನ್ನು ಅನುವಾದಿಸಿ ಪ್ರಕಟಿಸಿದರು. ೨೦೮ ಪುಟಗಳ ಆ
ಪುಸ್ತಕವು ೧೮೯೯ರಲ್ಲಿ ಮರುಮುದ್ರಣವಾಯಿತು. ಕನ್ನಡ ಕ್ರೈಸ್ತರಲ್ಲಿ ನೆನ್ನೆಮೊನ್ನೆಯವರೆಗೂ
ಅತ್ಯಂತ ಜನಪ್ರಿಯವಾಗಿ ಬಳಕೆಯಲ್ಲಿದ್ದ ಆದಿತ್ಯವಾರದ ಅದ್ಭುತವು (Les miracles du dimanche) ಎಂಬ ಎರಡು ಸಂಪುಟಗಳ ಪುಸ್ತಕವನ್ನು ಮೊತ್ತಮೊದಲು ಅಂದರೆ ೧೮೬೭ರಲ್ಲಿ ಪ್ರಕಟಿಸಿದ
ಹೆಗ್ಗಳಿಕೆಯೂ ಬೊತೆಲೊ ಅವರದು. ಆನಂತರದಲ್ಲಿ ಸ್ವಾಮಿ ದೆಸೇಂ ಅವರು ಅವನ್ನು ಮರುಮುದ್ರಣ
ಮಾಡಿದರು. ಶಿಷ್ಟಕನ್ನಡದ ತಿರುಳು (Elementa Prodiae Canarensis) ಎಂಬ ೩೮ ಪುಟಗಳ
ಕಿರುಪುಸ್ತಕ ೧೮೭೦ರಲ್ಲಿ ಪ್ರಕಟಿಸಿದ್ದಾರಾದರೂ ಅದರ ಮೂಲ ಲೇಖಕರು ಯಾರೆಂಬುದು ಖಚಿತವಾಗಿಲ್ಲ.
ಕನ್ನಡ ಛಂದಸ್ಸುಗಳ ಕುರಿತೂ ಸಹ ಅವರು ಲತೀನ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವರೆಂದು
ದಾಖಲೆಗಳಿಂದ ತಿಳಿದು ಬರುತ್ತದೆ. ಐರೋಪ್ಯರಿಗಾಗಿ ಕನ್ನಡ ವ್ಯಾಕರಣದ ಪುಸ್ತಕ Grammatica
Canarico-Latina ad usum scholarum (೧೮೬೫) (೨೯೦
ಪುಟಗಳು) ಹಾಗೂ ಕನ್ನಡಿಗರಿಗೆ ’ಲತೀನು ವ್ಯಾಕರಣ’
(೧೮೬೯) ವನ್ನು ಪರಿಚಯಿಸಿದ್ದು
ಕನ್ನಡಕ್ಕೆ ಸಂದ ಅಮೋಘ ಕೊಡುಗೆಯೇ ಸರಿ.
ಬಿಷಪ್ ಶಾರ್ಬೊನೊ ಅವರ ಕೋರಿಕೆಯ ಮೇರೆಗೆ ನಮ್ಮ
ಶಾಲೆಗಳಿಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿಕೊಳ್ಳಲು ೧೮೫೮ರಲ್ಲಿ ಯೂರೋಪಿಗೆ ತೆರಳಿದರಾದರೂ ಅದು
ಪ್ರಯೋಜನವಾಗದೆ ಅವರು ಬರಿಗೈಯಲ್ಲಿ ಹಿಂದಿರುಗಬೇಕಾಯಿತು. ಆಮೇಲೆ ಅವರ ಸೇವೆ ಚಿಕ್ಕಬಳ್ಳಾಪುರ
ಚರ್ಚಿನಲ್ಲಾಯಿತು. ಅದೇ ವೇಳೆಯಲ್ಲಿ ಅವರು ಕನ್ನಳ್ಳಿ, ಮಂಚನಹಳ್ಳಿ ಮುಂತಾದ ಹಲವೆಡೆಗಳಲ್ಲಿ ಪ್ರಾರ್ಥನಾ
ಮಂದಿರಗಳನ್ನು ಕಟ್ಟಿದರು.
ಇಷ್ಟೆಲ್ಲ ಸಾಧನೆಗಳನ್ನು ಮಾಡಿದರೂ ಬೊತೆಲೊ ಅವರಿಗೆ
ಹೆಸರಿನ ಹಂಬಲ ಇರಲಿಲ್ಲ. ಎಲ್ಲೂ ತಮ್ಮ ಹೆಸರು ಎದ್ದು ಕಾಣದಂತೆ ಅವರು ಕೆಲಸ ಮಾಡಿದ್ದಾರೆ.
ತಮ್ಮೆಲ್ಲ ಕೆಲಸಗಳಿಗೂ ಅವರು ತಮ್ಮ ಬಿಷಪರಾಗಿದ್ದ ಶಾರ್ಬೊನೊ ಅವರ ಹೆಸರನ್ನೇ ಆರೋಪಿಸಿದ್ದಾಗಿ
ಕಂಡುಬರುತ್ತದೆ. ಏಕೆಂದರೆ ಇವರ ಪದಸಂಪತ್ತು ಮತ್ತು ವಾಕ್ಯಪ್ರಯೋಗಗಳನ್ನೇ ನಾವು ಶಾರ್ಬೊನೊ ಅವರ
ಕೃತಿಗಳಲ್ಲೂ ಕಾಣುತ್ತೇವೆ. ಅಥವಾ ತಮ್ಮ ಹೆಸರನ್ನು ಎಲ್ಲೂ ಬಿಂಬಿಸದಂತೆ ಅವರಿಗೆ ಒತ್ತಡವಿತ್ತೇನೋ
ತಿಳಿಯದು.
ಅದೇನಾಯಿತೋ ಏನೋ ೧೮೭೨ರಲ್ಲಿ ಇದ್ದಕ್ಕಿದ್ದಂತೆ ಬೊತೆಲೊ
ಅವರು ಎಂಇಪಿ ಸಂಸ್ಥೆಯನ್ನು ತೊರೆದು ಕೇರಳದ ಎರಣಾಕುಲದಲ್ಲಿನ ವೆರಾಪೊಲಿಗೆ ತೆರಳಿ ಅಲ್ಲಿನ
ಕಾರ್ಮೆಲೈಟ್ ಮಠಕ್ಕೆ ಸೇರಿಕೊಂಡರು. ತಮ್ಮ ಕೊನೆಗಾಲವನ್ನು ಅಲ್ಲಿಯೇ ಕಳೆದ ಅವರು ೧೮೯೨ರ ಮೇ
೨೧ರಂದು ತೀರಿಕೊಂಡರು. ಅವರನ್ನು ವೆರಾಪೊಲಿಯ ಮಗ್ನುಮೆಲ್ ಪ್ರದೇಶದ ಒಂದು ಕಾನ್ವೆಂಟಿನ
ಪ್ರಾರ್ಥನಾ ಮಂದಿರದಲ್ಲಿ ಸಮಾಧಿ ಮಾಡಲಾಗಿದೆಯೆಂದು ದಾಖಲೆಗಳು ಹೇಳುತ್ತವೆ.
ಬಹುಮುಖ ಪ್ರತಿಭೆಯ ಈ ಗುರುಗಳು ಕೇರಳಕ್ಕೆ ತೆರಳಿದ
ಮೇಲೆ ಇಪ್ಪತ್ತು ವರ್ಷಗಳ ಕಾಲ ಅಲ್ಲಿ ಜೀವಿಸಿದ್ದರು. ಆ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅವರು
ಸುಮ್ಮನೆ ಕೂಡದೆ ಏನಾದರೂ ಸಾಧಿಸಿರುತ್ತಾರೆ. ಆದರೆ ನಮಗೆ ಆ ಕುರಿತ ಮಾಹಿತಿ ಲಭ್ಯವಿಲ್ಲ.
ಕಾರ್ಮೆಲ್ ಸಭೆಯವರು ಅವರಿಗೆ ಅಗಸ್ಟಿನ್ ದೆ ಲ ಸಾಂತಾ ವಿರ್ಗೆ (ಪವಿತ್ರ ಕನ್ಯೆಯ ಅಗಸ್ಟಿನ್)
ಎಂದು ಮರುನಾಮಕರಣ ಮಾಡಿದ್ದಂತೆ ತೋರುತ್ತದೆ. ಆ ಹೆಸರಿನಲ್ಲಿಯೇ ಅವರು ಲತೀನ್ ಭಾಷೆಯಲ್ಲಿ ಮಲಬಾರ್
ವ್ಯಾಕರಣ, ಇಂಗ್ಲಿಷಿನಲ್ಲಿ
ಮಲಬಾರ್ ವ್ಯಾಕರಣ ಹಾಗೂ ಗುರುಮಠದ ಅಭ್ಯರ್ಥಿಗಳಿಗಾಗಿ ಇಂಗ್ಲಿಶು-ಮಲಬಾರ್ ನಿಘಂಟುವನ್ನು
ಪ್ರಕಟಿಸಿದ ಉಲ್ಲೇಖವಿದೆ. ಅದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ.