ಸೋಮವಾರ, ಏಪ್ರಿಲ್ 27, 2015

ಗ್ಯಾರಿಸನ್ ಸಿಮಿಟರಿ

ಸಾಹಸೀ ಪ್ರವೃತ್ತಿಯ ಐರೋಪ್ಯರು ಕಳೆದ ಶತಮಾನಗಳಲ್ಲಿ ನಾವೆಗಳನ್ನು ಹತ್ತಿ ಹೊಸ ನೆಲೆಗಳನ್ನು ಹುಡುಕುತ್ತಾ ಹೋದದ್ದು ನಮಗೆಲ್ಲ ತಿಳಿದ ವಿಷಯವೇ. ಅವರು ಹಾಗೆ ಹೊರಟಿದ್ದು ಹೊಸ ವಾಸ್ತವ್ಯಕ್ಕಾಗಿ, ಉದ್ಯೋಗಕ್ಕಾಗಿ, ಧರ್ಮಪ್ರಚಾರಕ್ಕಾಗಿ ಇತ್ಯಾದಿ ಇತ್ಯಾದಿ. ರಾಜ ಪೋಷಿತ ಪ್ರವಾಸಗಳಲ್ಲಿ ಚಿನ್ನದ ಬೇಟೆಯ ರಹಸ್ಯ ಕಾರ್ಯಸೂಚಿ ಇತ್ತೆಂಬುದು ಆಮೇಲೆ ಜಗಜ್ಜಾಹೀರಾದ ವಿಷಯ. ಇವೆಲ್ಲದರ ನಡುವೆ ಕೆಲವರು ಯುದ್ಧಕ್ಕಾಗಿಯೂ ಅಂದರೆ ಬಾಡಿಗೆ ಯೋಧರಾಗಿಯೂ ಹೊರಟರು ಎಂದರೆ ಅದೊಂದು ಸೋಜಿಗದ ಸಂಗತಿಯೇ ಸರಿ. ಅಂಥ ಒಂದು ಸೇನಾ ತುಕಡಿಯು ಡಚ್ ಈಸ್ಟ್ ಇಂಡಿಯಾ ಕಂಪೆನಿಯ ಪರವಾಗಿ ಯುದ್ಧಗಳನ್ನು ಮಾಡಿತ್ತು ಎಂದು ಇತಿಹಾಸ ಹೇಳುತ್ತದೆ.
ಸ್ವಿಝರ್ ಲ್ಯಾಂಡಿನಲ್ಲಿ ೧೭೮೧ರಲ್ಲಿ ಚಾರ್ಲಸ್ ಡೇನಿಯಲ್ ದೆ ಮ್ಯುರಾನ್ ಎಂಬುವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ರೆಜಿಮೆಂಟ್ ದೆ ಮ್ಯೂರಾನ್ ಎಂಬು ಯೋಧರ ತಂಡವು ಡಚ್ಚರ ಪರವಾಗಿ ಕೇಪ್ ಟೌನ್ ಮತ್ತು ಸಿಲೋನಿನಲ್ಲಿ ಕರ್ತವ್ಯ ನಿರ್ವಹಿಸಿತ್ತು. ಒಂದು ಹಂತದಲ್ಲಿ ಸಿಲೋನ್ ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಸೆಣಸಿದ್ದ ಈ ಪಡೆಯು ಮುಂದೆ ಸಂಬಳ ಸಿಗದೆ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದಾಗ ಬ್ರಿಟಿಷರ ಬಳಿಗೇ ಬಂದು ಉದ್ಯೋಗಕ್ಕಾಗಿ ಕೈಚಾಚಿದ್ದು ಮಾತ್ರ ಇತಿಹಾಸದ ವ್ಯಂಗ್ಯ. ಹಿಂದಿನ ಉದ್ಯೋಗದಾತರು ನೀಡಿದ್ದ ಸಂಬಳ ಮತ್ತು ಪದವಿಗಳಿಗೇ ಅಂಕಿತ ಹಾಕಿದ ಬ್ರಿಟಿಷರು ೧೭೯೮ರಲ್ಲಿ ಈ ಪಡೆಯನ್ನು ತಮ್ಮ ಸೇನೆಯ ಭಾಗವಾಗಿ ಭರ್ತಿ ಮಾಡಿಕೊಂಡರು. ಅದರ ಮರುವರ್ಷವೇ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಶ್ರೀರಂಗಪಟ್ಟಣದ ಕೋಟೆಯನ್ನು ಮುತ್ತಲು ಮುಂಚೂಣಿಯ ಪಡೆಯಾಗಿ ಈ ಯೋಧರನ್ನು ಕಳಿಸಿದರು. ಅನ್ನದಾತರ ಹಂಗಿನಲ್ಲಿದ್ದ ಸ್ವಿಸ್ ಯೋಧರು ಪ್ರಾಣದ ಹಂಗು ತೊರೆದು ಹೋರಾಡಿ ಕೋಟೆಯಲ್ಲಿ ಬಿರುಕು ಮೂಡಿಸಿದರು. ಆ ಮೂಲಕ ಟಿಪ್ಪುವು ಕೋಟೆಯಿಂದ ಹೊರಬರುವಂತೆ ಮಾಡಿ ಅವನ ಸಾವಿಗೆ ಕಾರಣರಾದರು ಎಂಬ ವಿಷಯ ಮಾತ್ರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಹೀಗೆ ಶ್ರೀರಂಗಪಟ್ಟಣವು ಬ್ರಿಟಿಷರ ಕೈವಶವಾಯ್ತು. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯು ದಕ್ಷಿಣಕ್ಕೆ ತಿರುಗಿಕೊಳ್ಳುವ ತಿರುವಿನ ದಂಡೆಯಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಗ್ಯಾರಿಸನ್ ಸಿಮಿಟರಿ (ಯೋಧರ ಸಮಾಧಿಭೂಮಿ) ಯಲ್ಲಿ ಸ್ವಿಸ್ ಯೋಧರನ್ನು ಮಣ್ಣು ಮಾಡಲಾಗಿದೆ. ಮುಂದಿನ ಅರುವತ್ತು ವರ್ಷಗಳ ಅವಧಿಯಲ್ಲಿ ಅವರ ಕುಟುಂಬವರ್ಗದವರನ್ನೂ ಇದೇ ಸಮಾಧಿಭೂಮಿಯಲ್ಲಿ ಹುಗಿಯಲಾಗಿದೆ.
ಇತ್ತೀಚಿನವರೆಗೂ ಪ್ರತಿ ನವೆಂಬರ್ ಎರಡನೇ ತಾರೀಕಿನಂದು ನಡೆಯುವ ಮೃತರ ಸ್ಮರಣೆಯ ಪ್ರಯುಕ್ತ ದೂರದ ಸ್ವಿಸರ್ ಲೆಂಡ್ ನಾಡಿನಿಂದ ಹಲವರು ಬಂದು ಈ ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೋಗುತ್ತಿದ್ದರು. ಸ್ಥಳೀಯರು ಪರಂಗಿಗೋರಿ ಎನ್ನುವ ಈ ಸ್ಥಳದಲ್ಲಿ ವಿದೇಶೀಯರು ಬಂದು ಪ್ರಾರ್ಥನೆ ಮಾಡುವುದನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಉಳಿದಂತೆ ವರ್ಷವಿಡೀ ಈ ಸ್ಮಶಾನವು ಪಾಳುಬಿದ್ದು, ಪೊದೆಗಳು ಆಳೆತ್ತರಕ್ಕೆ ಬೆಳೆದು ಕಳ್ಳಕಾಕರ ಆವಾಸವಾಗುತ್ತಿತ್ತು. ಹೀಗೆ ಕೆಲವರು ಗೋರಿಗಳ ಮೇಲಿನ ಅಮೃತಶಿಲೆಯ ಫಲಕಗಳನ್ನು ಹೊತ್ತೊಯ್ದಿದ್ದಾರೆ, ಸಮಾಧಿಗಳ ಸುತ್ತಲಿನ ಕಬ್ಬಿಣದ ಬೇಲಿಗಳನ್ನು ಕಿತ್ತೊಯ್ದಿದ್ದಾರೆ.
ಇತ್ತೀಚೆಗೆ ಅಂದರೆ ಸುಮಾರು ೨೦೦೫ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಮ್ಯುರಾನ್ ವಂಶಸ್ತರಾದ ಲೂಯಿ ದೊಮಿನಿಕ್ ದೆ ಮ್ಯುರಾನ್ ಮತ್ತು ಶ್ರೀಮತಿ ಮೋನಿಕ್ ದೆ ಮ್ಯುರಾನ್ ಎಂಬ ದಂಪತಿ ಸಮಾಧಿಗಳ ಅಧಃಪತನವನ್ನು ಕಂಡು ಮರುಗಿ ಈ ತಾಣದ ಪುನರುದ್ಧಾರಕ್ಕಾಗಿ ಯತ್ನಿಸಿ ಮೈಸೂರು ಪುರಾತತ್ವ ಇಲಾಖೆಯವರೊಂದಿಗೆ ಸಮಾಲೋಚಿಸಿ, ಇಲಾಖೆಯ ಸೂಚನೆಯ ಮೇರೆಗೆ ಆರ್ ಗುಂಡುರಾವ್ ಅಸೋಸಿಯೇಟ್ಸ್ ಎಂಬ ಖಾಸಗಿ ಜೀರ್ಣೋದ್ಧಾರಕ ಸಂಸ್ಥೆಯನ್ನು ತಾವೇ ಸಂಪರ್ಕಿಸಿ ಆ ಸಂಸ್ಥೆಯ ಮೂಲಕ ಸಮಾಧಿಭೂಮಿಯನ್ನು ಸಹಜಸ್ಥಿತಿಗೆ ಮರಳುವಂತೆ ಮಾಡಿದ್ದಾರೆ. ಆದರೆ ಕೆಲಸ ಪೂರ್ಣಗೊಳ್ಳುವ ಮೊದಲೇ ಅಂದರೆ ೨೦೦೭ರಲ್ಲಿ ಆ ದಂಪತಿ ಅಕಾಲಿಕ ಮರಣಕ್ಕೀಡಾದರು. ಆಮೇಲೆ ಅವರ ಮಗ ಈ ಕೆಲಸದ ಉಸ್ತುವಾರಿ ವಹಿಸಿಕೊಂಡರೆಂದು ತಿಳಿದುಬರುತ್ತದೆ.

ಇದೇ ಮ್ಯುರಾನ್ ವಂಶಸ್ತರು ಸ್ಥಳೀಯರಾದ ಶ್ರೀಮತಿ ವಿದ್ಯಾಲಕ್ಷ್ಮಿ ಎಂಬುವರನ್ನು ಈ ಸ್ಥಳವನ್ನು ನೋಡಿಕೊಳ್ಳುವುದಕ್ಕಾಗಿ ನೇಮಿಸಿದ್ದಾರೆ. ವಿದ್ಯಾಲಕ್ಷ್ಮಿಯವರು ಬೆಳಗ್ಗೆ ಒಂಬತ್ತರಿಂದ ಸಂಜೆ ಐದರವರೆಗೆ ಇಲ್ಲಿದ್ದು ಬಂದ ಪ್ರವಾಸಿಗರನ್ನು ಆದರದಿಂದ ಮಾತನಾಡಿಸುತ್ತಾ, ಸಮಾಧಿಭೂಮಿಯನ್ನು ಬಲು ಜತನದಿಂದ ನೋಡಿಕೊಳ್ಳುತ್ತಿದ್ದಾರೆ.

ಸೋಮವಾರ, ಏಪ್ರಿಲ್ 6, 2015

ಒತಪ್ಪ್


ಚಿತ್ರದುರ್ಗದ ಫ್ಲೋಮಿನ್ ದಾಸ್ ಅವರು ಸುಮಾರು ಮೂರು ದಶಕಗಳಿಂದಲೂ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಬಗ್ಗೆ ಕೇಳಿದ್ದೆನಾದರೂ ಮೊನ್ನೆಮೊನ್ನೆಯವರೆಗೂ ಅವರ ಪರಿಚಯ ನನಗಿರಲಿಲ್ಲ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಅವರ ಪುಸ್ತಕವೊಂದು ಸಾದರ ಸ್ವೀಕಾರದಲ್ಲಿ ಪಟ್ಟೀಕರಣವಾದಾಗ ಅವರಿಗೊಂದು ಪತ್ರ ಬರೆದೆ. ಅದಾಗಿ ಒಂದು ವಾರದೊಳಗೇ ಸಂಪಂಗಿರಾಮನಗರದಲ್ಲಿ ನನ್ನ ಅವರ ಭೇಟಿಯಾಯ್ತು. ಅತ್ಯಂತ ಅಭಿಮಾನದಿಂದಲೂ ಸಂಭ್ರಮದಿಂದಲೂ ಅವರು ತಮ್ಮ ಒತಪ್ಪ್ ಎಂಬ ಅನುವಾದಿತ ಪುಸ್ತಕವನ್ನು ನನ್ನ ಕೈಯೊಳಗಿಟ್ಟರು.
ಒತಪ್ಪ್ ಎಂಬುದು ಮಲಯಾಳ ಪದ. ಕಳಂಕ ಎಂದು ಅದರರ್ಥ. ಗುರು ಕನ್ಯಾಸ್ತ್ರೀಯರಂತ ಧಾರ್ಮಿಕ ವ್ಯಕ್ತಿಗಳು ಸಮಾಜಕ್ಕೆ ನಿಷ್ಕಳಂಕ ಮಾದರಿಯಾಗಿರಬೇಕು ಎಂದು ಬಯಸುತ್ತೇವಲ್ಲವೇ? ಅವರೇ ಕಳಂಕಿತರಾದರೆ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಯಿತು? ಆದರೆ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿದ ಮಾನವತೆ ಎಂಬ ನೆಲೆಯಲ್ಲಿ ನಿಂತು ಕಳಂಕವನ್ನು ಅರ್ಥ ಮಾಡಿಸುವುದೇ ಈ ಕಾದಂಬರಿಯ ಆಶಯವೆಂದು ತೋರುತ್ತದೆ.
ಮೂಲತಃ ಇದನ್ನು ಮಲಯಾಳದಲ್ಲಿ ಬರೆದ ಸಾರಾ ಜೋಸೆಫ್ ಅವರು ಶಿಕ್ಷಕಿಯಾಗಿ ಆಮೇಲೆ ದೂರಶಿಕ್ಷಣದಲ್ಲಿ ಬಿಎ, ಎಂಎ ಪದವಿ ಪಡೆದು ಕಾಲೇಜು ಲೆಕ್ಚರರ್ ಆಗಿ ಕೆಲಸ ಮಾಡಿದವರು. ಹೆಂಗಳೆಯರ ಪರವಾಗಿ ಚಿಂತಿಸುವ ಇವರು ’ಮಾನುಷಿ’ ಎಂಬ ಮಹಿಳಾ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕೇರಳದ ಜನಸಂಖ್ಯೆಯ ಕಾಲುಭಾಗದಷ್ಟಿರುವ ಕ್ರೈಸ್ತರ ವಿವಿಧ ಪಂಗಡಗಳ ರೀತಿರಿವಾಜುಗಳನ್ನು ಓರೆಕೋರೆಗಳನ್ನು ಕೊಂಕಿಲ್ಲದೆ ನಾಜೂಕಾಗಿ ವಿಶ್ಲೇಷಿಸುತ್ತಾ ಒಂದು ಪ್ರೇಮಕತೆಯನ್ನು ಅದರಲ್ಲೂ ಕಾನ್ವೆಂಟು ಬಿಟ್ಟು ಬಂದ ಒಂದು ಹೆಣ್ಣಿನ ತವಕ ತಲ್ಲಣ ಕೋಪ ವಿಷಾದ ತ್ಯಾಗ ಕ್ಷಮಾಗುಣಗಳನ್ನು ಅವರು ಈ ಕಾದಂಬರಿಯಲ್ಲಿ ನಿರೂಪಿಸುತ್ತಾರೆ.
ಫ್ಲೋಮಿನ್ ದಾಸ್ ಅವರು ಇದನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯು ಸುಲಲಿತವಾಗಿ ಅಲ್ಲದಿದ್ದರೂ ಕುತೂಹಲಕ್ಕಾಗಿಯಾದರೂ ಓದಿಸಿಕೊಳ್ಳುತ್ತದೆ. ಏಕೆಂದರೆ ಮೂಲ ಮಲಯಾಳ ಕಾದಂಬರಿಯ ಹಂದರವು ಸುನಿಶ್ಚಿತ ಕಟ್ಟೋಣವಾಗಿರದೆ ಹಲವು ಗೊಂದಲಗಳಿಂದ ಕೂಡಿದೆ. ಧುತ್ತನೇ ಎದುರಾಗುವ ವಿವರಣಾತ್ಮಕ ಸಂಗತಿಗಳನ್ನು ಓದುಗನು ಪೂರಕ ಅಂಶವಾಗಿ ಒತ್ತಾಯದಿಂದ ಸ್ವೀಕರಿಸಬೇಕಾಗುವುದರಿಂದ ಹಾಗೂ ಒಂದು ಅಧ್ಯಾಯದಿಂದ ಇನ್ನೊಂದಕ್ಕೆ ಸಕಾರಾತ್ಮಕವಾಗಿ ಬೆಸೆಯಬಲ್ಲಂತ ಕೊಂಡಿಯ ಕೊರತೆಯಿಂದ ಈ ಭಾವ ಕಾಡುವುದು ಸಹಜ. ಕತೆಯ ಸ್ಥೂಲರೂಪವನ್ನು ಇಟ್ಟುಕೊಂಡ ಮೂಲ ಲೇಖಕಿಯು ಅದಕ್ಕೆ ಪೂರಕವಾಗಿಯೆನ್ನುವಂತೆ ಕಥೋಲಿಕ ಚರ್ಚಿನ, ಸುರಿಯಾನಿ ಚರ್ಚಿನ, ಕರಿಸ್ಮಾಟಿಕ್ ಕ್ರಾಂತಿಯ ಹಾಗೂ ಕಾಡುಮೇಡುಗಳಲ್ಲಿ ಅಸ್ತಿತ್ವದಲ್ಲಿರುವ ಅಸಾಂಪ್ರದಾಯಿಕ ಧರ್ಮಾಚರಣೆಗಳ ವಿವರಣಾತ್ಮಕ ಸಂಗತಿಗಳಿಂದ ಕಾದಂಬರಿಯನ್ನು ಭಾರವಾಗಿಸುತ್ತಾರೆ. ಒಂದು ನಿಟ್ಟಿನಲ್ಲಿ ಅವರು ಸಂಸ್ಥೀಕರಣಗೊಂಡ ಕಥೋಲಿಕ ಚರ್ಚಿನ ಹಾಗೂ ಅದರ ಅನುಯಾಯಿಗಳ ಕಠೋರ ಹೃದಯಗಳನ್ನು ಪ್ರತಿಬಿಂಬಿಸುವುದಕ್ಕೆ ಉಳಿದ ಮೂರು ಸಂಘಟನೆಗಳನ್ನು ಅತ್ಯಂತ ಸೂಕ್ತವಾಗಿ ಬಳಸಿಕೊಂಡಿದ್ದಾರೆ.
ಈ ಕಾದಂಬರಿಯು ಕತಾನಾಯಕಿ ಮರ್ಗಲೀತಾಳ ಸುತ್ತಲೇ ಸುತ್ತುತ್ತದೆ. ಮರ್ಗಲೀತಾ ಒಬ್ಬ ಕನ್ಯಾಸ್ತ್ರೀಯಾಗಿದ್ದವಳು. ಒಂದು ದಿನ ಆಕೆ ಕಾನ್ವೆಂಟನ್ನು ತೊರೆದು ಸಂಜೆಯ ಮಬ್ಬುಗತ್ತಲಲ್ಲಿ ತನ್ನ ಮನೆಗೆ ಬಂದಾಗ ತಾಯಿ ಮೊದಲ್ಗೊಂಡು ಅಣ್ಣಂದಿರು ಅತ್ತಿಗೆಯರು ಅವಳು ಹಾದರ ಮಾಡಿ ಬಂದಳೇನೋ ಎಂಬಂತೆ ತಿರಸ್ಕಾರದಿಂದ ಕಂಡು ಅವಳನ್ನು ಬಾಳೆಗುದಿಯಲ್ಲಿ ಕೂಡಿ ಹಾಕುತ್ತಾರೆ. ಕೇರಳದ ಸಂಪ್ರದಾಯಸ್ಥ ಕ್ರೈಸ್ತ ಕುಟುಂಬವೊಂದಕ್ಕೆ ತಮ್ಮ ಮನೆಯ ಮಗಳು ಕಾನ್ವೆಂಟು ಬಿಟ್ಟು ಬರುವುದೆಂದರೆ ಅತ್ಯಂತ ಅಪಮಾನದ ಸಂಗತಿ. ಈ ವಿಷಯ ಊರವರಿಗೆ ತಿಳಿದರಂತೂ ತಮ್ಮ ಮನೆಯ ಗೌರವ ಬೀದಿಪಾಲಾಗುವುದೆಂಬ ಆತಂಕ. ಮನೆಯ ಹಿರಿಮಗ ನಗರಸಭೆಯ ಮೇಯರ್ ಹುದ್ದೆಯ ಆಕಾಂಕ್ಷಿಯಾಗಿದ್ದು ತಂಗಿಯ ವರ್ತನೆ ತನ್ನ ಭವಿಷ್ಯಕ್ಕೆ ಮುಳ್ಳಾದೀತೆಂಬ ಭಯ. 
ಕಾದಂಬರಿಯ ನಾಯಕ ಕರೀಕನ್ ಎಂಬ ಯುವಪಾದ್ರಿ. ಹಲವು ಧರ್ಮಗ್ರಂಥಗಳು ಇತರ ಮೌಲಿಕ ಪುಸ್ತಕಗಳನ್ನು ಓದಿ ವೈಚಾರಿಕ ಬುದ್ಧಿಮತ್ತೆಯಲ್ಲಿ ಹರಿತನಾದವನು. ವಯಸ್ಸಿಗೆ ತಕ್ಕ ಬಂಡಾಯದ ಗುಣದವನು. ಬದಲಾವಣೆ ಬಯಸದ ವೃದ್ಧ ಗುರುವಿನ ಅನಾಸಕ್ತಿಯ ಕುರಿತು ಅಸಹನೆ ತಾಳಿದವನು. ಕ್ರೈಸ್ತ ಮನೆಗಳನ್ನೂ ಕಾನ್ವೆಂಟುಗಳನ್ನೂ ಸಂಧಿಸಿ ಧಾರ್ಮಿಕ ಭಾವಗಳನ್ನು ವಿಶೇಷ ರೀತಿಯಲ್ಲಿ ಉದ್ದೀಪಿಸುವುದು ಅವನ ಹವ್ಯಾಸ. ಕಥೋಲಿಕ ಕ್ರೈಸ್ತರಿಗೆ ಸ್ಪರ್ಧೆಯೊಡ್ಡಿದ ಸುರಿಯಾನಿ ಕ್ರೈಸ್ತರ ಪಾದ್ರಿ ಕಶೀಶ ಎಂಬುವರೊಂದಿಗೆ ಗೆಳೆತನ ಸಾಧಿಸಿ ಅವರೊಂದಿಗೆ ಬೌದ್ಧಿಕ ಚರ್ಚೆಯಲ್ಲಿ ತೊಡಗುವುದು ಮತ್ತೊಂದು ಹವ್ಯಾಸ.
ತನ್ನ ಕಾನ್ವೆಂಟಿಗೆ ಹಾಡುಗಳನ್ನು ಕಲಿಸಲು ಬರುತ್ತಿದ್ದ ಕರೀಕನ ವಿಚಾರಗಳಿಗೂ ಯೌವನಕ್ಕೂ ಮಾರುಹೋದವಳು ಮರ್ಗಲೀತಾ. ಕನ್ಯಾಮಠದ ಇತರ ಸಂನ್ಯಾಸಿನಿಯರ ಕಣ್ಣು ತಪ್ಪಿಸಿ ಅವಳು ಕರೀಕನ್ ನೊಂದಿಗೆ ಪತ್ರವ್ಯವಹಾರ ಇಟ್ಟುಕೊಳ್ಳುತ್ತಾಳೆ. ಹೀಗೆ ಅವಳು ಅವನಿಗೆ ಬರೆದ ಕೊನೆಯ ಪತ್ರದಲ್ಲಿ ತಾನು ಕಾನ್ವೆಂಟು ತೊರೆಯುವ ಉದ್ದೇಶವನ್ನು ತಿಳಿಸಿ ತನಗೊಂದು ಜೊತೆ ಉಡುಪನ್ನೂ ಹೊರಜಗತ್ತಿನಲ್ಲಿ ತನಗೊಂದು ವ್ಯವಸ್ಥೆಯನ್ನೂ ಮಾಡಬೇಕೆಂದು ವಿನಂತಿಸಿಕೊಳ್ಳುತ್ತಾಳೆ.
ನಿಜ ಹೇಳಬೇಕೆಂದರೆ ಕರೀಕನ್ ಒಬ್ಬ ಆರಂಭಶೂರ. ಅವನು ವಿಚಾರಗಳನ್ನು ಬಡಿದೆಬ್ಬಿಸಬಲ್ಲವನೇ ಹೊರತು ಅದರ ಪರಿಣಾಮಗಳನ್ನು ಮುಂದಾಗಿಯೇ ಊಹಿಸಿ ಸಮರ್ಥವಾಗಿ ಎದುರಿಸಬಲ್ಲ ಮುತ್ಸದ್ದಿಯಲ್ಲ. ಮರ್ಗಲೀತಾಳ ಈ ನಿರ್ಧಾರಕ್ಕೆ ಅವನು ಸಿದ್ಧನಾಗಿರುವುದೇ ಇಲ್ಲ. ಅವಳು ಬರೆದ ಪತ್ರವನ್ನು ಒಂದೆರಡು ದಿನ ಗಂಭೀರವಾಗಿ ಪರಿಗಣಿಸುವುದೂ ಇಲ್ಲ.
ಇತ್ತ ಮರ್ಗಲೀತಾ ತನ್ನ ಕಾನ್ವೆಂಟಿನ ಸೇವಕಿ ಆಬೆಲಮ್ಮ ನೀಡಿದ ಉಡುಪು ಧರಿಸಿ ಕಾನ್ವೆಂಟಿನಿಂದ ಹೊರಬೀಳುತ್ತಾಳೆ. ಶಿಕ್ಷಣ, ರೋಗಿಗಳ ಸೇವೆ. ಪೂಜಾಪೀಠದ ಅಲಂಕಾರ, ಧರ್ಮೋಪದೇಶಗಳ ಮೂಲಕ ಕ್ರಿಸ್ತನನ್ನು ಸೇವೆ ಮಾಡುವ ಜೀವನಧ್ಯೇಯದೊಂದಿಗೆ ಕಾನ್ವೆಂಟಿನ ನೇಮವ್ರತಗಳಿಗೆ ಬದ್ಧರಾಗಿ ಹಿರಿಯ ಸಂನ್ಯಾಸಿನಿಯರಿಗೆ ವಿಧೇಯಿಯಾಗಿರುತ್ತಾ ಸುಖವಾಗಿ ಸುರಕ್ಷಿತವಾಗಿರುವುದನ್ನು ಬಿಟ್ಟು ಕಾಣದ ಆದರ್ಶದ ಬೆನ್ನು ಹತ್ತಿ ಬಂದವಳನ್ನು ಮನೆಯಲ್ಲಿ ಸ್ವಾಗತಿಸುವವರಾದರೂ ಯಾರು? ಸಮಾಜಕ್ಕೂ ಅವಳೊಬ್ಬ ದುರ್ಮಾತೃಕೆ.
ಮರ್ಗಲೀತಾಳಿಗೆ ಹೊರಜಗತ್ತನ್ನು ಎದುರಿಸುವುದು ಗೊತ್ತಿಲ್ಲ, ತನ್ನದೆಂಬುದಕ್ಕೆ ಒಂದೇ ಕೊಂಡಿಯಾಗಿದ್ದ ತವರುಮನೆ ಆಸರೆಯಾಗಿ ಉಳಿದಿಲ್ಲ. ಕರೀಕನ್ ಎಂಬ ಒಂದೇ ಒಂದು ಆಶಾಕಿರಣವು ಪುಕ್ಕಲುತನದಲ್ಲಿ ಪಲಾಯನಗೈದಿದೆ. ಹೀಗಿರುವಲ್ಲಿ ಹೇಗೋ ಮನೆಯಿಂದ ಹೊರಬಿದ್ದ ಮರ್ಗಲೀತಾ ದಿನ ರಾತ್ರಿಯೆನ್ನದೆ ರೈಲುನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹುಚ್ಚಿಯಂತೆ ದಿಕ್ಕೆಟ್ಟು ಅಲೆದು ಹಸಿವಿನಿಂದ ಕಂಗೆಟ್ಟು ಸೋತು ನಿತ್ರಾಣಳಾಗಿ ಆಸ್ಪತ್ರೆ ಸೇರುತ್ತಾಳೆ.
ಪಾದ್ರಿ ಕರೀಕನ್ ಅವಳನ್ನು ಪತ್ತೆ ಹಚ್ಚಿ ಗೆಳೆಯ ಕಶೀಶನ ಮನೆಯಲ್ಲಿ ಆಶ್ರಯ ದೊರಕಿಸಿಕೊಡುತ್ತಾನೆ. ಅಲ್ಲಿದ್ದ ಕೆಲದಿನಗಳಲ್ಲಿ ಕಶೀಶ ಮತ್ತು ಮರ್ಗಲೀತಾಳ ನಡುವಿನ ಬೌದ್ಧಿಕ ಚರ್ಚೆಗಳನ್ನು ಗಮನಿಸುವ ಕಶೀಶರ ಪತ್ನಿಗೆ ಮರ್ಗಲೀತಾಳು ತನ್ನ ಗಂಡನನ್ನು ಜಂಕಿಸಿ ಕೇಳುವ ದುರಹಂಕಾರಿಯಂತೆಯೂ ಕಾಮುಕ ಹೆಣ್ಣಂತೆಯೂ ತೋರಿ ಅಸೂಯೆ ಹುಟ್ಟಿಸುತ್ತಾಳೆ. ಇತ್ತ ಅವಳ ಇರುವನ್ನು ತಿಳಿದ ಊರವರು ನುಗ್ಗಿ ಬಂದು ದಾಂಧಲೆ ಎಬ್ಬಿಸಿ ಕಶೀಶರ ಮೇಲೆ ಅಪವಾದ ಹೊರಿಸಿ ಹೋಗುತ್ತಾರೆ. ಅಲ್ಲಿ ನಿಲ್ಲಲಾಗದ ಮರ್ಗಲೀತಾ ಹೊರಬಂದು ತನ್ನ ಓರಗೆಯ ರೆಬೆಕ್ಕಾ ಎಂಬ ಸೋದರಿಯ ಆಶ್ರಯ ಪಡೆಯುತ್ತಾಳೆ. ದೊಡ್ಡಬಾಯಿಯ ರೆಬೆಕ್ಕಾ ಕರಿಸ್ಮಾಟಿಕ್ ಕ್ರಾಂತಿಯವಳಾಗಿದ್ದು ಬೈಬಲ್ ವಚನಗಳನ್ನು ಉದ್ಧರಿಸುತ್ತಾ ಬೋಧನೆ ಮಾಡುತ್ತಿರುತ್ತಾಳೆ.
ಕೆಲದಿನಗಳ ನಂತರ ಮರ್ಗಲೀತಾ ಕಾಡು ಸೇರಿ ಅಲ್ಲಿ ಕಾಡಿನ ಕೂಲಿಕಾರರ ನಡುವೆ ಸಂತನಂತೆ ಬದುಕುತ್ತಿದ್ದ ಅಗಸ್ಟಿನ್ ಎಂಬ ಪಾದ್ರಿಯ ಸಾಹಚರ್ಯದಲ್ಲಿ ತೊಡಗಿಕೊಳ್ಳುತ್ತಾಳೆ. ಆ ತಾಣದ ರಮ್ಯ ಪ್ರಕೃತಿ ಸೌಂದರ್ಯ, ಕೂಲಿಕಾರರ ಮುಗ್ದ ಭಕ್ತಿ, ಅಗಸ್ಟಿನರ ಪರಮ ಸಾತ್ವಿಕ ಸೇವಾನಿಷ್ಠೆ ಮರ್ಗಲೀತಾಳನ್ನು ಸಂಪೂರ್ಣ ಬದಲಾಯಿಸುತ್ತದೆ. ಅದು ಹಾಗೇ ಇದ್ದಿದ್ದರೆ ಚೆನ್ನಾಗಿತ್ತೇನೋ? ಏಕೆಂದರೆ ಕನ್ಯಾಮಠದ ಡಾಂಭಿಕ ಜೀವನಕ್ಕೆ ವಿಮುಖಳಾಗಿ ಅವಳು ನೇರವಾಗಿ ಕ್ರಿಸ್ತಸೇವೆ ಮಾಡಬೇಕು ಎಂದುಕೊಂಡಿದ್ದವಳಲ್ಲವೇ, ಅವಳ ಆ ಇಚ್ಛೆ ಇಲ್ಲಿ ನೆರವೇರಿತ್ತು.
ಆದರೆ ಅವಳ ಬದುಕಿನಲ್ಲಿ ಕರೀಕನ್ ಪಾದ್ರಿಯ ಮರುಪ್ರವೇಶವಾಗುತ್ತದೆ. ಅಗಸ್ಟಿನರ ಗುಡಿಸಲಲ್ಲೇ ಇವರಿಬ್ಬರೂ ತಮ್ಮ ಕಾಮನೆಗಳನ್ನು ಹತ್ತಿಕ್ಕಲಾಗದೆ ಒಂದಾಗುತ್ತಾರೆ. ಅಲ್ಲಿಂದ ಕರೀಕನ್ ಧೈರ್ಯ ತಳೆದು ಮರ್ಗಲೀತಾಳನ್ನು ತನ್ನೊಂದಿಗೆ ಕರೆದುಕೊಂಡು ಮನೆಗೆ ಬರುತ್ತಾನೆ. ಇವರಿಬ್ಬರನ್ನು ಒಟ್ಟಿಗೆ ನೋಡಿದ್ದೇ ವಿಷಯವನ್ನು ಅರ್ಥ ಮಾಡಿಕೊಂಡ ಅವನ ತಂದೆ ಏನೊಂದೂ ಮಾತನಾಡದೇ ಎದ್ದು ಹೋಗಿ ನೇಣು ಹಾಕಿಕೊಳ್ಳುತ್ತಾರೆ. ಮನೆಗೆ ಸೂತಕ ಅಡರುತ್ತದೆ. ಕರೀಕನ್ ತೀವ್ರ ನಿರಾಶೆಯಿಂದ ಖಿನ್ನನಾಗುತ್ತಾನೆ. ಅವರಿಬ್ಬರೂ ವಿಚಾರವಾದಿ ಜೋನೆಸನ ಮನೆಯಲ್ಲಿ ಆಶ್ರಯ ಪಡೆಯುತ್ತಾರಾದರೂ ಕರೀಕನ್ ಹೊರಗಿನ ಪ್ರಪಂಚವನ್ನು ಎದುರಿಸಲು ಸೋತು ಮನೆಯಲ್ಲೇ ಅವಿತುಕೊಳ್ಳುತ್ತಾನೆ.
ಮರ್ಗಲೀತಾ ರೇಷನ್ ಅಂಗಡಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿ ಮನೆ ನಡೆಸುತ್ತಾಳೆ. ಅವಳ ಹೊಟ್ಟೆಯಲ್ಲಿ ಮಗು ಬೆಳೆಯತೊಡಗುತ್ತದೆ. ಈ ನಡುವೆ ಕರೀಕನ್ ಪಶ್ಚಾತ್ತಾಪದಿಂದ ಬೆಂದುಹೋಗುತ್ತಾನೆ. ದೇವರ ಸೇವೆಗೆಂದು ನನ್ನನ್ನು ಮುಡುಪಿಟ್ಟ ತಂದೆಯ ಸಾವಿಗೆ ತಾನೇ ಕಾರಣನಾದೆ, ಮರ್ಗಲೀತಾಳ ಸುಂದರ ಬದುಕನ್ನು ಹಾಳುಗೆಡವಿದೆ, ಮನೆಯ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದೆ, ಊರವರ ಪಾಪಗಳಿಗೆ ಪರಿಹಾರ ಹೇಳಬೇಕಾದ ನಾನೇ ಕಡುಪಾಪಿಯಾದೆ ಎಂದು ನೊಂದುಕೊಂಡು ಊರು ಬಿಟ್ಟು ಹೋಗಿ ದೂರದ ಊರಿನಲ್ಲಿ ಒಂದು ದೇವಾಲಯದ ಆವರಣದಲ್ಲಿ ಅನಾಥನಂತೆ ವಾಸಿಸುತ್ತಾ ತನ್ನ ಬರಿಗೈಯಿಂದಲೇ ದೇವಾಲಯದ ನೆಲವನ್ನು ಗುಡಿಸುತ್ತಾ ಬಿಕ್ಷೆಯೆಂದು ಹಾಕಿದ್ದನ್ನು ತಿನ್ನುತ್ತಾ ಪರಿಹಾರ ಕಂಡುಕೊಳ್ಳುತ್ತಾನೆ.
ಇತ್ತ ಮರ್ಗಲೀತಾ ತನಗೆ ಒದಗಿಬಂದ ಅಮ್ಮನ ಪಾಲಿನ ಆಸ್ತಿಯನ್ನು ತುಚ್ಛೀಕರಿಸಿ, ಕೋರ್ಟಿನ ಮೂಲಕ ಒದಗಬಹುದಾಗಿದ್ದ ತಂದೆಯ ಕೆಲಸವನ್ನು ನಿರಾಕರಿಸಿ, ಅಗಸ್ಟಿನರು ತಂದು ಬಿಟ್ಟ ಅನಾಥ ಮಗುವನ್ನು ತನ್ನದೆಂಬಂತೆ ಸ್ವೀಕರಿಸಿ, ತನ್ನದೇ ಬದುಕನ್ನು ರೂಪಿಸಿಕೊಳ್ಳಲು ಹೆಜ್ಜೆಯಿಡುತ್ತಾಳೆ. ಅವಳ ಯೋಚನಾ ಲಹರಿಯನ್ನೂ ಮನದ ತುಮುಲವನ್ನು ಪರಕಾಯ ಪ್ರವೇಶ ಮಾಡಿ ಹೇಳಿಸುವ ಸಾಹಸವನ್ನು ಸಾರಾ ಅವರು ಮಾಡುವುದಿಲ್ಲ. ಆದರೆ ಕಾದಂಬರಿಯಲ್ಲಿ ಚರ್ಚು ವ್ಯವಸ್ಥೆಯ ಹುಳುಕುಗಳನ್ನೂ ಅವನ್ನು ಮೀರಿ ಹೊರಬರಲಾಗದ ಅಸಹಾಯಕತೆಯನ್ನೂ ಬಿಂಬಿಸುತ್ತಾರೆ. ಸಂಸ್ಥೀಕರಣಗೊಂಡ ಚರ್ಚಿಗಿಂತಲೂ ಜಾನ್ ಕಶೀಶರಂತ ಮನೆಗಳಲ್ಲಿ ಅಗಸ್ಟಿನರಿರುವಂತ ಕಾಡುಗಳಲ್ಲಿ ಕ್ರಿಸ್ತನಿದ್ದಾನೆ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾರೆ. ಕಾನ್ವೆಂಟು ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಗದೆ ಹೊಂದಿಕೊಳ್ಳಲೂ ಆಗದೆ ತೊಳಲುವ ಮೂವರು ಸಂನ್ಯಾಸಿನಿಯರು ತಮ್ಮ ಕನ್ಯಾಮಠದ ಹಿರಿಯರಿಗೆ ಗೊತ್ತಿಲ್ಲದಂತೆ ಮಬ್ಬುಬೆಳಕಿನ ಮರೆಯಲ್ಲಿ ತಾವೇ ಪ್ರೀತಿಯಿಂದ ನೇಯ್ದ ಫ್ರಾಕೊಂದನ್ನು ತಂದು ಮರ್ಗಲೀತಾಳ ಇನ್ನೂ ಹುಟ್ಟದ ಮಗುವಿಗೆ ಉಡುಗೊರೆಯಾಗಿ ಕೊಡುವ ಸನ್ನಿವೇಶವಂತೂ ಕಾನ್ವೆಂಟು ವ್ಯವಸ್ಥೆಯೊಳಗಿನ ಕುಮುಲುವಿಕೆಗೆ ಕನ್ನಡಿಯಾಗುತ್ತದೆ.
ಕಾದಂಬರಿಯ ಶೀರ್ಷಿಕೆ ಒತಪ್ಪ್ ಅಥವಾ ಕಳಂಕ ಕೊನೆಯವರೆಗೂ ಕಳಂಕವಾಗಿಯೇ ಉಳಿಯುತ್ತದೆ. ಜಡ್ಡುಗಟ್ಟಿದ ಕಥೋಲಿಕ ಚರ್ಚು ಬದಲಾಗಬೇಕು ಎಂಬುದನ್ನು ಸಾರಾ ಅವರು ಸೂಚ್ಯವಾಗಿ ಹೇಳುತ್ತಾರೆ, ಆದರೆ ಅವರು ಹೇಳುವ ಕತೆಯೆಲ್ಲವೂ ಕೇರಳದ ಕಟ್ಟಾ ಕ್ರೈಸ್ತರು ಇರುವಂತಹ ಸಮುದಾಯದಲ್ಲೇ ಕೇಂದ್ರಿತವಾಗಿದೆ. ವಿಚಾರವಾದಿ ಜೋನೆಸನನ್ನು ಹೊರತುಪಡಿಸಿದರೆ ಇತರ ಧಾರ್ಮಿಕ ಸಮುದಾಯಗಳಾಗಲೀ, ಮಾಧ್ಯಮಗಳಾಗಲೀ ಇಲ್ಲಿ ಇಣುಕುವುದಿಲ್ಲ.

ಅದೂ ಅಲ್ಲದೆ ಈ ಕತೆ ಇಂದಿನ ಕಾಲದ್ದಲ್ಲವೆಂದು ಸಾರಾಸಗಟಾಗಿ ತಳ್ಳಿಹಾಕಬಹುದು. ನಮ್ಮ ಕನ್ನಡನಾಡಿನಲ್ಲೇ ಕಳೆದ ಮೂರು ನಾಲ್ಕು ದಶಕಗಳಲ್ಲಿ ಕಾನ್ವೆಂಟು ಬಿಟ್ಟುಬಂದವರ, ಗುರುಪಟ್ಟವನ್ನು ತೊರೆದವರ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಹಾಗೂ ನಮ್ಮ ಸಮಾಜವು ಅವನ್ನು ಸಹಜ ಲೌಕಿಕ ಕ್ರಿಯೆ ಎಂಬಂತೆಯೇ ಸ್ವೀಕರಿಸಿದೆ. ಹೀಗಾಗಿ ಪ್ರಸ್ತುತ ಕಾದಂಬರಿಯು ಚರ್ಚ್ ನಡಾವಳಿಗೊಂದು ಕನ್ನಡಿಯಾಗಬಲ್ಲುದೇ ಹೊರತು ಕನ್ನಡ ನಾಡಿನ ಸಂದರ್ಭದಲ್ಲಿ ಸಾಮಾಜಿಕ ವಿಪ್ಲವ ಉಂಟುಮಾಡದು ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು.