ಗುರುವಾರ, ಫೆಬ್ರವರಿ 21, 2008

ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು). ಗ್ರೀಕರ ಪ್ರಕಾರ ಅವರ ದೇವರ ಹೆಸರು AJAX ಎಂಬುದನ್ನು 'ಅಯಾಸ್' ಎಂದು ಉಚ್ಚರಿಸುವಂತೆ 'Jesus' ಎಂಬುದು 'ಯೇಸು' ಎಂದಾಯಿತು.

ಅದೇರೀತಿ ಜೆಹೋವ>ಯೆಹೋವ, ಜೂದ>ಯೂದ, ಜೋಸೆಫ್>ಯೋಸೆಫ್, ಜೋರ್ಡಾನ್>ಯೋರ್ದಾನ್, ಜೋನಾ>ಯೋನಾ, ಜೊವಾನ್ನ>ಯೊವಾನ್ನ, ಜೆರಿಕೋ>ಯೆರಿಕೋ, ಜೆರೆಮಿಯ>ಯೆರೆಮಿಯ, ಜೆಹೊಶುವ>ಯೆಹೊಶುವ ಇತ್ಯಾದಿಗಳನ್ನು ಹೆಸರಿಸಬಹುದು.

ಕನ್ನಡದ ಸಂದರ್ಭದಲ್ಲಿ ಕೆಲವರು ಯೇಸು ಎಂಬುದನ್ನು ಏಸು ಎಂದು ಬರೆಯುವುದನ್ನು ಕಂಡಿದ್ದೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ಜ ಮತ್ತು ಯ ಎರಡೂ ವ್ಯಂಜನಗಳೇ ಆಗಿವೆ. ಆದರೆ ಇಲ್ಲಿ ನಾವು ತಿಳಿದಂತೆ ಎ ಏ ಗಳು ನಮ್ಮ ಅಕ್ಷರಮಾಲೆಯಲ್ಲಿ ಸ್ವರಗಳಾಗಿ ಸ್ಥಾನ ಪಡೆದಿವೆ. ಮೇಲಿನ ಹೆಸರುಗಳಿಗೆ ಸ್ವರಗಳನ್ನು ಬಳಸುವುದಾದರೆ ಯೇಸುವನ್ನು ಏಸುವಾಗಿ, ಯೆಹೋವನನ್ನು ಎಹೋವನನ್ನಾಗಿ, ಜೆರಿಕೋವನ್ನು ಎರಿಕೋವನ್ನಾಗಿ ಮಾಡಬಹುದೇನೋ ಸರಿ. ಆದರೆ ಜೋಸೆಫ್, ಜೊವಾನ್ನ ಇತ್ಯಾದಿಗಳನ್ನು ಹೇಗೆ ಬರೆಯುವುದು?

1 ಕಾಮೆಂಟ್‌:

cmariejoseph.blogspot.com ಹೇಳಿದರು...

ಪ್ರಜಾವಾಣಿಯ ಪದಸಂಪದದಲ್ಲಿ ಡಾ. ಕೆ.ವಿ.ನಾರಾಯಣ ಅವರು ಮಾಡಿದ ವಿಶ್ಲೇಷಣೆ ಹೀಗಿದೆ:

ಮರಿ ಜೋಸೆಫ್ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಯೇಸು ಎಂಬುದನ್ನು ಏಸು ಎಂದು ಬರೆಯುವುದು ರೂಢಿಯ್ಲಲಿದೆ. ಪದಾದಿಯ ಯಕಾರದ ಬದಲು ಎ ಸ್ವರವನ್ನು ಬರೆಯುವುದಾದರೆ ಯೋಹಾನ ಎಂಬ ಪದವನ್ನು ಹೇಗೆ ಬರೆಯಬೇಕು ಎನ್ನುವುದು ಅವರ ಪ್ರಶ್ನೆ. ಹಿಬ್ರೂ ಭಾಷೆಯ ಜೇಸು ಪದ ಇಂಡೋ ಯುರೋಪಿಯನ್ ಭಾಷೆಗಳ್ಲಲಿ ಜೀಸಸ್ ಆಗಿದೆ; ಪದಾದಿಯಲ್ಲಿ ಜಕಾರವನ್ನು ಬರೆದರೂ ಉಚ್ಚರಿಸುವಾಗ ಯಕಾರವಾಗಿಯೇ ಉಚ್ಚರಿಸಲಾಗುತ್ತದೆಂದು ಮರಿಜೋಸೆಫ್ ಹೇಳುತ್ತಾರೆ. ಯ ಮತ್ತು ಜ-ಈ ಎರಡು ಧ್ವನಿಗಳು ಉಚ್ಚಾರಣೆಯಾಗುವ ಜಾಗಗಳು ತುಂಬ ಹತ್ತಿರವಾಗಿವೆ. ಹಾಗಾಗಿ ಒಂದರ ಬದಲು ಇನ್ನೊಂದನ್ನು ಉಚ್ಚರಿಸುವುದು ಹಲವು ಭಾಷೆಗಳಲ್ಲಿ ಕಂಡುಬರುತ್ತದೆ. ಭಾರತದ ಮಧ್ಯ ಇಂಡೋ ಯುರೋಪಿಯನ್ ಭಾಷೆಗಳಲ್ಲಿ (ಇವು ಮೊದಲು ಪ್ರಾಕೃತ ನುಡಿಗಳಾಗಿದ್ದವು) ಸಂಸ್ಕೃತದ ಪದಗಳ ಪದಾದಿಯ ಯಕಾರವನ್ನು ಜಕಾರವನ್ನಾಗಿ ಬದಲಿಸಿಕೊಳ್ಳುವ ಬಗೆ ಇದೆ. ಯಮುನಾ/ಜಮುನಾ, ಯಜ್ಞ/ಜನ್ನ, ಯಾತ್ರಾ/ಜಾತ್ರಾ ಇವು ಉದಾಹರಣೆಗಳು. ಇಲ್ಲೆಲ್ಲಾ ಆ ಭಾಷೆಗಳಲ್ಲಿ ಬರವಣಿಗೆಯಲ್ಲೂ ಜಕಾರವನ್ನೇ ಬಳಸಲಾಗುವುದು. ಆದರೆ ಪದಾದಿಯ ಜಕಾರ ಎಲಿಯೂ ಯಕಾರವಾದಂತಿಲ್ಲ. ಅಂದರೆ ಇದು ಒಂದು ದಿಕ್ಕಿನ ಬದಲಾವಣೆ.

ಕನ್ನಡದಲ್ಲಿ ಯೇಸು, ಯೆಹೋವಾ ಮತ್ತು ಯೆರಿಕೋ ಎಂಬ ಪದಗಳನ್ನು ಏಸು, ಎಹೋವಾ ಮತ್ತು ಎರಿಕೋ ಎಂದು ಬರೆಯುವ ಪ್ರವೃತ್ತಿ ಇದೆ. ಹಾಗಿದ್ದ್ಲಲಿ ಜೋಸೆಫ್ (=ಯೋಸೆಫ್), ಜೊವಾನ್ನ (=ಯೊವಾನ್ನ) ಪದಗಳನ್ನು ಹೇಗೆ ಬರೆಯುವುದೆಂಬುದು ಮರಿ ಜೋಸೆಫ್ ಅವರ ಸಮಸ್ಯೆ. ಕನ್ನಡದಲ್ಲಿ ಪದಾದಿಯಲ್ಲಿರುವ ಎ/ಏ, ಇ/ಈ ಮತ್ತು ಅ ಗಳನ್ನು ಬರೆಯುವಾಗ ಯೆ/ಯೇ, ಯಿ/ಯೀ ಮತ್ತು ಯ ಎಂದು ಬರೆಯುವುದು ರೂಢಿಯಲ್ಲಿದೆ. ಕನ್ನಡ ನಾಡಿನ ಕೆಲವು ಕಡೆಗಳಲ್ಲಿ ಪದಾದಿಯ ಈ ಸ್ವರಗಳನ್ನು ನುಡಿಯುವಾಗ ಯಕಾರ ಸೇರಿಸಿ ನುಡಿಯುವುದುಂಟು. ಅಪ್ಪ ಯಪ್ಪ ಎಂದಾಗುತ್ತದೆ. ಎಲ್ಲಿ ಎಂಬುದು ಯೆಲ್ಲಿ ಎಂದಾಗುತ್ತದೆ. ಕನ್ನಡ ಶಾಸನ ಮತ್ತು ಹಸ್ತಪ್ರತಿಗಳನ್ನು ನೋಡಿದರೆ ಬರವಣಿಗೆಯ್ಲಲಿ ಪದಾದಿಯ ಈ ಸ್ವರಗಳನ್ನು ಯಕಾರ ಸೇರಿಸಿ ಬರೆಯುವುದು ವ್ಯಾಪಕವಾಗಿ ಬಳಕೆಯಲ್ಲಿದ್ದಂತೆ ತೋರುತ್ತದೆ. ಹೀಗೆಯೇ ಒ/ಓ ಮತ್ತು ಉ/ಊ ಸ್ವರಗಳಿಂದ ಮೊದಲಾಗುವ ಪದಗಳನ್ನು ಬರೆಯುವಾಗ ಕ್ರಮವಾಗಿ ವೊ/ವೋ ಮತ್ತು ವು/ವೂ ಎಂದು ಬರೆಯುವುದುಂಟು. ವತ್ತು(ಒತ್ತು),ವೋಲೆ(=ಓಲೆ), ವುರಿ(=ಉರಿ),ವೂರು(=ವೂರು) ಇಂತಹ ಪದಗಳು.

ಆದರೆ ಪದಾದಿಯಲ್ಲಿ ಯಕಾರ ಇರುವ ಪದಗಳನ್ನು ನುಡಿಯುವಾಗ ಕನ್ನಡದ ಕೆಲವು ಪ್ರಭೇದಗಳಲ್ಲಿ ಯಕಾರವನ್ನು ಬಿಟ್ಟು ಅದರ ಮುಂದಿನ ಸ್ವರವನ್ನಷ್ಟೆ ಉಳಿಸಿಕೊಳ್ಳುವ ಇಲ್ಲವೇ ಯಕಾರದ ಬದಲು ವಕಾರವನ್ನು ನುಡಿಯುವ ಬಗೆ ಇದೆ.


ಯಂತ್ರ/ಅಂತ್ರ, ಯೋಚನೆ, ಏಚ್ನೆ/ವೇಚ್ನೆ ಮುಂತಾದ ಉದಾಹರಣೆಗಳಿವೆ. ಆದರೆ ಈ ಪದಗಳನ್ನು ಬರೆಯುವಾಗ ಯಕಾರವನ್ನು ಬಿಟ್ಟು ಕೇವಲ ಸ್ವರವನ್ನು ಬರೆಯುವುದು ರೂಢಿಯಲ್ಲಿ ಇಲ್ಲ. ಆದ್ದರಿಂದ ಯೇಸು ಎಂದು ಬರೆಯಬೇಕಾದ ಪದವನ್ನು ಏಸು ಎಂದು ಬರೆಯುವುದೇ ಸರಿಯಾದುದಲ್ಲ. ಯಕಾರವನ್ನು ಬಿಟ್ಟು ಬರೆಯುವುದು ಕನ್ನಡ ಬರವಣಿಗೆಯ ರೂಢಿಗೆ ಸಲ್ಲುವ ಬಗೆಯಲ್ಲ. ಹೀಗಿರುವಾಗ ಯೋ, ಯು ನಿಂದ ಮೊದಲಾಗುವ ಹೆಸರುಗಳನ್ನು ಸ್ವರದಿಂದ ಮೊದಲಾಗುವಂತೆ ಬರೆಯುವ ಪ್ರಶ್ನೆಗೆ ಜಾಗವೇ ಇಲ್ಲವೆಂದು ತೋರುತ್ತದೆ.