ಭಾನುವಾರ, ಡಿಸೆಂಬರ್ 28, 2008

ಕ್ರಿಸ್ತಜಯಂತಿಯ ಮೆಲುಕು

"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅನ್ನೋ ಪದ ಮನಸ್ಸಿಗೆ ಲಗತ್ತಾಗಿ ಓ ಅದು ಕ್ರಿಸ್ಮಸ್ ಅಲ್ಲವೇ ಎಂಬುದು ಹೊಳೆದು ಮನ ಪ್ರಫುಲ್ಲವಾಗುತ್ತದೆ. ಈ ಕ್ರಿಸ್ಮಸ್ ಅನ್ನೋ ಪದವೇ ವಿಶ್ವದೆಲ್ಲೆಡೆ ಎಲ್ಲರ ಮನಸಿನಲ್ಲೂ ಸಂತಸದ ಭಾವ ಮೂಡಿಸುತ್ತದೆ.

ಕ್ರಿಸ್ಮಸ್ಸು ಅಂತ ನಾವು ಹೇಳೋ ಪದ ತಾತನ ಬಾಯಲ್ಲಿ ಕಿಸ್‌ಮಿಸ್ಸು ಆಗುವಾಗ ಮರೆಯಲ್ಲೇ ಕಿಸಕ್ಕನೆ ನಕ್ಕು ರಾತ್ರಿ ಅಮ್ಮನೊಟ್ಟಿಗೆ ಈ ಮಾತು ಹೇಳುತ್ತಾ ನಗುತ್ತಿದ್ದುದು ಕನಸೆಂಬಂತೆ ಕ್ರಿಸ್ಮಸ್ ಬಂದ ಕೂಡಲೇ ಮನಸಿನಲ್ಲಿ ಹಾಯ್ದುಹೋಗುತ್ತದೆ.

ಅದು ಸರಿ ಕ್ರಿಸ್ಮಸ್ಸಿಗೆ ಅಮ್ಮ ಅದೇನೆಲ್ಲ ತಿಂಡಿಗಳನ್ನು ಮಾಡುತ್ತಿದ್ದರಲ್ಲ. ಶಾಲೆ ಕಳೆದು ಮನೆಗೆ ಬರುವಷ್ಟರಲ್ಲಿ ನಾನಾ ತರದ ತಿಂಡಿಗಳನ್ನು ಮಾಡಿ ಡಬ್ಬಿಗಳಿಗೆ ತುಂಬಿ ಅಟ್ಟಕ್ಕೇರಿಸಿ, ಏನೂ ನಡೆದಿಲ್ಲವೆಂಬಂತೆ ಮನೆಯನ್ನು ಒಪ್ಪ ಓರಣವಾಗಿಟ್ಟಿರುತ್ತಿದ್ದರಲ್ಲ. ಹಬ್ಬದ ದಿನವಷ್ಟೇ ಅಷ್ಟೂ ತಿಂಡಿಗಳು ಹೊರಬರುತ್ತಿದ್ದವು. ಕಜ್ಜಾಯ, ಕರ್ಚಿಕಾಯಿ, ಚಕ್ಕುಲಿ, ಕಲ್‌ಕಲ್, ರೋಸ್‌ ಕುಕ್ಕೀಸ್, ಶಕ್ಕರ್‍ ಪೊಳೆಯಂಥ ಬಿಸ್ಕತ್ತು, ರವೆಉಂಡೆ, ನಿಪ್ಪಟ್ಟು, ಕೋಡುಬಳೆ, ಕಾರಸೇವೆ ಇನ್ನೂ ಏನೇನೋ? ನೆರೆಹೊರೆಯವರಿಗೆಲ್ಲ ಅವನ್ನು ಹಂಚಿದಾಗ ಅಪರೂಪದ ತಿಂಡಿಗಳನ್ನು ಕಂಡ ಅವರ ಮುಖಗಳು ಅರಳುವುದನ್ನು ನೋಡುವುದೇ ಒಂದು ಚೆಂದವಾಗಿತ್ತು.

ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯ (ಚರ್ಚ್) ದ ಹಿಂದುಗಡೆಯೇ ತಾತ ನೆಲೆಸಿದ್ದು ಅವರು ನಿತ್ಯ ಬೆಳಕು ಹರಿಯುವ ಮುನ್ನವೇ ಅಂದಿನ ಶಾಂತ ಪ್ರಶಾಂತ ವಾತಾವರಣದ ಆ ಗುಡಿಯಲ್ಲಿನ ಬೃಹತ್ ಗಂಟೆ ಬಾರಿಸಿದಾಗ ಢಣ್ ಎಂಬ ಆ ನಿನಾದ ಬಹುದೂರದವರೆಗೆ ಬಹುಹೊತ್ತಿನವರೆಗೆ ಅನುರಣಿಸುತ್ತ ಅನೂಹ್ಯ ಭಾವದೀಪ್ತಿಯನ್ನು ಬೆಳಗುತ್ತಿತ್ತು. ನವೆಂಬರ್ ಕೊನೆಯ ಭಾನುವಾರದಂದು ಆ ದೇವಾಲಯದಲ್ಲಿ ಕ್ರಿಸ್ತರಾಜರ ಹಬ್ಬವನ್ನು ವೈಭವದಿಂದ ಆಚರಿಸುವುದರೊಂದಿಗೆ ಕ್ರೈಸ್ತರ ಧಾರ್ಮಿಕ ವರ್ಷಕ್ಕೆ ಅಂತ್ಯ ಹಾಡಿ ಅದರ ಮರುದಿನದಿಂದಲೇ ಕ್ರಿಸ್ತನ ಹುಟ್ಟನ್ನು ಎದುರು ನೋಡುವ ಸಂಭ್ರಮ ತಾತನ ಮಾತುಗಳಲ್ಲಿ ಮೂಡಿಬಂದ ರೀತಿಯೂ ಅತ್ಯಂತ ಆಪ್ತವಾಗಿತ್ತು.

ಅಲ್ಲ, ಈ ಕ್ರಿಸ್ಮಸ್ ಸೀಸನ್ ಒಂಥರಾ ಮನಸಿಗೆ ಮುದ ನೀಡೋ ಸೀಸನ್ನು. ಒಂದು ತಿಂಗಳ ಆ ಸೀಸನ್ನು ಹೇಗೆ ಕಳೆಯುತ್ತಿತ್ತೆಂಬುದೇ ತಿಳಿಯುತ್ತಿರಲಿಲ್ಲ. ಗಾನವೃಂದದವರಂತೂ ಆ ಒಂದು ತಿಂಗಳೆಲ್ಲ ಮನೆಮನೆಗಳಿಗೆ ಭೇಟಿ ನೀಡಿ ಕ್ರಿಸ್ಮಸ್ ಗೀತೆಗಳನ್ನು ಹಾಡಿ ಊರೆಲ್ಲ ನಲಿವು ತುಂಬುತ್ತಾರೆ. ದೇವಾಲಯವು ಮೊದಲೇ ವಾರ್ಷಿಕ ಹಬ್ಬಕ್ಕೆಂದು ಸುಣ್ಣಬಣ್ಣ ಕಂಡಿರುತ್ತಿತ್ತಲ್ಲ. ಇನ್ನು ಕ್ರಿಸ್ಮಸ್ಸಿಗಾಗಿ ಬರೀ ಬಣ್ಣದ ತೋರಣಗಳ ಸಿಂಗಾರವಾಗುತ್ತಿತ್ತು ಅಷ್ಟೇ.

ಅಷ್ಟೇ ಅನ್ನೋದು ಬರೀ ಉಡಾಫೆಯ ಮಾತಾದೀತು. ಹಗಲೆಲ್ಲ ಕೆಲಸಕ್ಕೆ ತೆರಳುವ ಜನ ಸಂಜೆಯಾಗುತ್ತಲೇ ದೇವಾಲಯಕ್ಕೆ ಬಂದು ಈ ಸಿಂಗಾರದ ಕೆಲಸಕ್ಕೆ ತೊಡಗುತ್ತಿದ್ದರು. ಕೆಲವರು ಹಸಿ ಬಿದಿರಿನಿಂದ ದೊಡ್ಡದಾದ ನಕ್ಷತ್ರ ಕಟ್ಟುತ್ತಿದ್ದರು. ಕೆಲವರು ಬಹು ದೂರದವರೆಗೆ ಬಟ್ಟೆಯ ತೋರಣಗಳನ್ನು ಕಟ್ಟುತ್ತಿದ್ದರು. ಕೆಲವರು ಬಣ್ಣಬಣ್ಣದ ಜಗಮಗಿಸುವ ವಿದ್ಯುದ್ದೀಪಗಳನ್ನು ಕಟ್ಟುತ್ತಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಯೇಸು ಜನನಕ್ಕೆ ಆಸರೆಯಾದ ದನದ ಕೊಟ್ಟಿಗೆಯನ್ನು ಕಟ್ಟುವುದು ಇದೆಯಲ್ಲ ಅದಂತೂ ಬಲು ನಾಜೂಕಿನ ಕೆಲಸ. ಅದೇನು ಸುಮ್ಮನೇ ಆದೀತೇ? ಬಿದಿರ ಗಳಗಳನ್ನು ಸಿಗಿದು ಅಡ್ಡಕ್ಕೆ ಉದ್ದಕ್ಕೆ ಬಿಗಿದು, ಅದಕ್ಕೆ ಎತ್ತರೆತ್ತರಕ್ಕೆ ಬೆಳೆದಿದ್ದ ಕಾಸೆ ಹುಲ್ಲನ್ನು ಕಟ್ಟಿ ಗೋಡೆ ರಚಿಸಬೇಕು. ಅಗಲವಾದ ಕಾಗದಗಳಿಗೆ ಕಂದು ಬಣ್ಣ ಬಳಿದು ಮುದ್ದೆ ಮಾಡಿ ಬಂಡೆಗಳ ಆಕೃತಿ ಮಾಡಿಟ್ಟು ಸೂರು ರೂಪಿಸಬೇಕು. ಗಿಡಗಳನ್ನೂ ಸಸಿಗಳನ್ನೂ ಕಲಾತ್ಮಕವಾಗಿ ಜೋಡಿಸಿ ಪುಟ್ಟ ಸಸ್ಯೋದ್ಯಾನ ರೂಪಿಸಿ ಅವುಗಳ ನಡುವೆ ನಿರ್ಭರವಾಗಿ ಹರಿವ ನೀರಿನ ಸಣ್ಣ ಒರತೆಗಳನ್ನು ಮಾಡಬೇಕು.

ಇಷ್ಟೆಲ್ಲ ಆದ ಮೇಲೆ ಆ ಗೋಶಾಲೆಯಲ್ಲಿ ಹಸುಕರುಗಳು ಇಲ್ಲದಿದ್ದರೆ ಹೇಗೆ? ಬಣ್ಣಬಣ್ಣದ ಮಣ್ಣಿನ ದನಗಳು, ಕರುಗಳು, ಕುರಿ ಮಂದೆಯೊಂದಿಗೆ ಕುರುಬರು, ಮೂರು ಜ್ಞಾನಿಗಳು ಮತ್ತು ಅವರ ಒಂಟೆಗಳು, ಮತ್ತು ಮುಖ್ಯವಾಗಿ ಎಲ್ಲ ಆಕರ್ಷಣೆಗಳ ಕೇಂದ್ರಬಿಂದುವಾಗಿ ಮರಿಯಾಮಾತೆ ಮತ್ತು ಜೋಸೆಫರ ನಡುವೆ ಪುಟ್ಟ ಗೋದಲಿಯಲ್ಲಿ ಮಲಗಿದ ಯೇಸುಕಂದನ ಆ ಸುಂದರ ನಗು. ಜೊತೆಯಲ್ಲಿ ನಾವೂ ಇದ್ದೇವೆ ಎಂಬಂತೆ ಹಸಿಹುಲ್ಲಿನ ಸ್ನಿಗ್ದ ಕಂಪು, ಮೊಂಬತ್ತಿಗಳಲ್ಲಿ ಕುಣಿಯುವ ಬೆಳಕು.

ಡಿಸೆಂಬರ್ ಇಪ್ಪತ್ನಾಲ್ಕರ ರಾತ್ರಿ ಹನ್ನೊಂದಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಜನ ಬರತೊಡಗಿ ದೇವಾಲಯದ ತುಂಬೆಲ್ಲ ಹೊಸಬಟ್ಟೆಯ ಗಮಲಿನೊಂದಿಗೆ ಸುಗಂಧದ ಪರಿಮಳ ಹರಡಿರುತ್ತಿತ್ತು. ಅಷ್ಟು ಜನರಿದ್ದರೂ ಅಲ್ಲಿ ದಿವ್ಯ ಮೌನ. ಹನ್ನೆರಡಕ್ಕೆ ಇನ್ನೂ ಐದು ನಿಮಿಷ ಇರುವಂತೆಯೇ ಒಂದು ಭಜನೆಯೊಂದಿಗೆ ಪೂಜಾವಿಧಿ ಪ್ರಾರಂಭವಾಗಿ ಸರಿಯಾಗಿ ಹನ್ನೆರಡು ಗಂಟೆಗೆ ಚರ್ಚಿನ ಗಂಟೆಯ ಢಣ್ ಢಣ್ ನಾದದೊಂದಿಗೆ ಎಲ್ಲರೂ ಭಕ್ತಿಯೊಂದಿಗೆ "ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ" ಎಂದು ಎದೆತುಂಬಿ ಹಾಡುವ ಆ ಶುಭಗಳಿಗೆ "ಕ್ರಿಸ್ತಜಯಂತಿಯ ಶುಭಾಶಯಗಳು" ಎಂಬ ಘೋಷಣೆಗೆ ನಾಂದಿಯಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಹೊರಗೆ ನಕ್ಷತ್ರಗಳು ನಗುತ್ತಿದ್ದವು. ಅವುಗಳೊಂದಿಗೆ ವಿದ್ಯುದ್ದೀಪಗಳು ಪೈಪೋಟಿ ನಡೆಸುತ್ತಿದ್ದವು. ಕ್ರಿಸ್ಮಸ್ ಮರದಲ್ಲಿ ತೂಗುಬಿಟ್ಟ ದೀಪಗಳು ಕಣ್ಣು ಮಿಟುಕಿಸುತ್ತಿದ್ದವು. ಚಿತ್ತಾರವುಳ್ಳ ಬಣ್ಣದ ಬೆಲೂನುಗಳು ತೇಲಾಡುತ್ತಿದ್ದವು.

ಜನರೆಲ್ಲ ಹಳೆಯ ವಿರಸಗಳೆಲ್ಲವನ್ನೂ ಮರೆತು ಗಂಡು ಹೆಣ್ಣು, ಮಕ್ಕಳು ವೃದ್ಧರೆಂಬ ಭೇದವಿಲ್ಲದೆ ಕೈ ಕುಲುಕುತ್ತಾ ಸಂಭ್ರಮ ಸಡಗರಗಳಿಂದ ಕ್ರಿಸ್ತಜಯಂತಿಯ ಶುಭಾಶಯಗಳನ್ನು ಹಂಚಿಕೊಳ್ಳುವ ಈ ಕ್ರಿಸ್ಮಸ್ ಮತ್ತೆ ಮತ್ತೆ ಬರುತ್ತಿರಲಿ, ಸಂಭ್ರಮ ಸಡಗರಗಳ ಜೊತೆಜೊತೆಗೇ, ಜಾತಿ ಮತಗಳ ಭೇದವ ಕಿತ್ತೊಗೆದು ಶಾಂತಿ ಸೌಹಾರ್ದ ಮೂಡಿಸಲಿ.

2 ಕಾಮೆಂಟ್‌ಗಳು:

Ashok Uchangi ಹೇಳಿದರು...

ಪ್ರಿಯರೆ
ಕ್ರಿಸ್ಮಸ್ ತಿನಿಸುಗಳ ಬಗ್ಗೆ ನನ್ನ ಬ್ಲಾಗ್ನಲ್ಲಿ ಲೇಖನವೊಂದಿದೆ.ತಾವು ದಯಮಾಡಿ ನೋಡಿ.ಇದಕ್ಕೆ ಪೂರಕ ಲೇಖನ ನೀವು ಬರೆಯಿರಿ ಎಂಬ ಮನವಿ ಅಥವಾ ನನ್ನ ಬ್ಲಾಗನಲ್ಲಿ ಪ್ರತಿಕ್ರಿಯಿಸಿ.
ಧನ್ಯವಾದ
ಅಶೋಕ ಉಚ್ಚಂಗಿ
http://mysoremallige01.blogspot.com/

Ashok Uchangi ಹೇಳಿದರು...

thanks for the information
ashok uchangi