ಬೆಂಗಳೂರು ನಗರದ ದಕ್ಷಿಣದ ಅಂಚಿನಲ್ಲಿ ಬನಶಂಕರಮ್ಮನ ಗುಡಿ, ವಸಂತರಾಯನ ಗುಡಿಗಳಿರುವ ಸುಬ್ರಮಣ್ಯಪುರ ರಸ್ತೆಯಲ್ಲಿ ಸಾಗಿದರೆ ಉತ್ತರಹಳ್ಳಿ ಅರೆಹಳ್ಳಿ ಬೆಟ್ಟಗಳ ಸಾಲಿನಲ್ಲಿ ಒಂದು ಬೃಹತ್ ಬೆಟ್ಟವು ತನ್ನ ತುದಿಯಲ್ಲಿ ಯೇಸುಕ್ರಿಸ್ತನ ಶಿಲುಬೆಯನ್ನು ಧರಿಸಿ ಬಹು ದೂರದಿಂದಲೇ ಕಣ್ಮನ ಸೆಳೆಯುತ್ತದೆ. ಅದೇ ಪ್ರಸಿದ್ಧವಾದ ಅನ್ನಮ್ಮ ಬೆಟ್ಟ. ಭಾರೀ ಕಲ್ಲುಬಂಡೆಗಳೊಂದಿಗೆ ಹಸಿರಿನ ತೇಪೆ ಹೊದ್ದ ಈ ಅನ್ನಮ್ಮ ಬೆಟ್ಟವು ಎರಡು ಶತಮಾನಗಳಿಂದಲೂ ಕ್ರೈಸ್ತರ ಪುಣ್ಯಕ್ಷೇತ್ರವೆನಿಸಿದೆ.
ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಅನ್ನಮ್ಮ ಎಂಬ ಸಾತ್ವಿಕ ಕನ್ಯೆಯೊಬ್ಬಳು ಈ ಬೆಟ್ಟದ ತಪ್ಪಲಿನಲ್ಲಿ ಇರುವಾಗ (ಬಹುಶಃ ಟಿಪ್ಪುಸುಲ್ತಾನನ) ಸೈನಿಕರಿಬ್ಬರ ಕಾಮುಕ ದೃಷ್ಟಿಗೆ ಬಿದ್ದು ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೆಟ್ಟದ ಮೇಲಕ್ಕೆ ಏರಿದಳೆಂದೂ, ಅಲ್ಲಿಗೂ ಕುದುರೆ ಏರಿ ಬಂದ ಸೈನಿಕರಿಂದ ಮಾನ ರಕ್ಷಿಸಿಕೊಳ್ಳಲು ಬೆಟ್ಟದಿಂದ ಉರುಳಿಬಿದ್ದು ಸತ್ತಳೆಂದೂ ತಿಳಿದುಬರುತ್ತದೆ.
ಬೆಟ್ಟದ ಬುಡದಲ್ಲಿ ಅನ್ನಮ್ಮನನ್ನು ಸಮಾಧಿ ಮಾಡಿದ ಸ್ಥಳವು ಈಗಲೂ ಜನರಿಂದ ಪೂಜನೀಯವಾಗಿದೆ. ಕ್ರೈಸ್ತ ಕ್ರೈಸ್ತೇತರರೆನ್ನದೆ ಅಸಂಖ್ಯ ಹೆಣ್ಣುಮಕ್ಕಳು ಸಾಂಬ್ರಾಣಿ ಮೇಣದಬತ್ತಿಗಳನ್ನು ಅನ್ನಮ್ಮನ ಸಮಾಧಿಯ ಬಳಿ ಅರ್ಪಿಸಿ ಪ್ರಾರ್ಥನೆ ಮಾಡುತ್ತಾರೆ.
ಇಷ್ಟೆಲ್ಲ ಓದಿದಾಗ ನಿಮಗೆ ಅನ್ನಮ್ಮಬೆಟ್ಟವು ಕ್ರೈಸ್ತರಿಗೆ ಮಾತ್ರವೇ ಏಕೆ ಪುಣ್ಯಕ್ಷೇತ್ರವಾಗಿದೆ? ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ ಎಂಬುದೇ ಇಲ್ಲಿ ಅಪಭ್ರಂಶವಾಗಿದೆಯೇ? ಎಂಬ ಅನುಮಾನಗಳು ಮೂಡುವುದು ಸಹಜ.
ಇದಕ್ಕೆ ಸಮರ್ಥನೆಯಾಗಿ ಎರಡು ಕಾರಣಗಳನ್ನು ಕೊಡಬಹುದು.
೧. ಈ ಅನ್ನಮ್ಮ ಎಂಬುದು ಅಪ್ಪಟ ಕ್ರೈಸ್ತ ಹೆಸರು. ಪವಿತ್ರ ಬೈಬಲ್ಲಿನ ಪ್ರಕಾರ ಯೇಸುವಿನ ತಾಯಿ ಮರಿಯಳಿಗೆ ಅಮ್ಮ ಈ ಅನ್ನಮ್ಮ. ಮೇರಿಗೆ ತಾಯಿ ಅಂದರೆ ಯೇಸುಕ್ರಿಸ್ತನ ಅಜ್ಜಿಯಾದ “ಅನ್ನಾ” ಎಂಬ ಹೆಸರು ಕನ್ನಡದ ಜಾಯಮಾನದಲ್ಲಿ ಅನ್ನಮ್ಮ ಎಂದಾಗುವುದು ಅತ್ಯಂತ ಸಹಜ.
೨. ಟಿಪ್ಪುವಿನ ಕಾಲದಲ್ಲಿ ಕ್ರೈಸ್ತರನ್ನು ಬ್ರಿಟಿಷರಿಗೆ ಸುದ್ದಿ ನೀಡುವವರೆಂದು ಅಪನಂಬಿಕೆಯಿಂದ ಕಾಣಲಾಗುತ್ತಿತ್ತು. ಕ್ರೈಸ್ತರ ಮೇಲೆ ಒಂದು ರೀತಿಯ ಗೂಢಚಾರ ಕಣ್ಣು ಇದ್ದೇ ಇರುತ್ತಿತ್ತು. ಹೀಗೆ ಕ್ರೈಸ್ತ ಗ್ರಾಮಗಳ ಬಳಿ ಸುಳಿದಾಡುತ್ತಿದ್ದ ಅವನ ಸೈನಿಕರು ಅನ್ನಮ್ಮ ಎಂಬ ಒಂಟಿ ಹೆಣ್ಣನ್ನು ಆಸೆಗಣ್ಣಿನಿಂದ ನೋಡಿರಲೂ ಬಹುದು.
ಜಾನಪದೀಯ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಗ್ರಾಮದೇವತೆಗಳು ಸಾಮಾನ್ಯವಾಗಿ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಾಮಾನ್ಯ ವ್ಯಕ್ತಿಗಳೇ ಆಗಿದ್ದು ತಮ್ಮ ಮರಣಾನಂತರವಷ್ಟೇ ದೈವೀ ಸ್ಥಾನವನ್ನು ಪಡೆದಿರುತ್ತಾರೆ. ಹೆಚ್ಚಿನ ಗ್ರಾಮದೇವತೆಗಳು ಗಂಡನನ್ನು ಸಾವಿನಲ್ಲೂ ಹಿಂಬಾಲಿಸಿದ ಮಹಾಸತಿಯರಾಗಿದ್ದ ನಿದರ್ಶನಗಳನ್ನು ನಾವು ನೋಡುತ್ತೇವೆ. ಅವರ ಸ್ಮರಣೆಗಾಗಿ ನಿಲ್ಲಿಸಲಾದ ಸ್ಮಾರಕಕಲ್ಲು ಅಥವಾ ಮಾಸ್ತಿಕಲ್ಲುಗಳೇ ಮುಂದೆ ಗುಡಿಗಳಾಗಿ ಬೆಳೆದ ನಿದರ್ಶನಗಳನ್ನೂ ನೋಡಿದ್ದೇವೆ. ಮಾರಮ್ಮ, ಅಣ್ಣಮ್ಮ ಮುಂತಾದ ದೇವತೆಗಳ ಹಿನ್ನೆಲೆಯಲ್ಲೂ ಇಂಥ ಅಸಾಮಾನ್ಯ ಘಟನೆಗಳು ತಳುಕು ಹಾಕಿಕೊಂಡಿರುವುದು ಐತಿಹ್ಯಗಳ ಮೂಲಕ ತಿಳಿದುಬರುತ್ತದೆ.
ಅನ್ನಮ್ಮಬೆಟ್ಟದ ಅನ್ನಮ್ಮನಿಗೂ ಇದೇ ರೀತಿ ಐತಿಹ್ಯ ಬೆಳೆದುಬಂದಿದೆ ಹಾಗೂ ಅನ್ನಮ್ಮಬೆಟ್ಟವು ಕ್ರೈಸ್ತ ಹೆಣ್ಣೊಬ್ಬಳ ಸ್ಮಾರಕಶಿಲೆಯಾಗಿದೆ. ಗಮನಿಸತಕ್ಕ ಸಂಗತಿಯೇನೆಂದರೆ ಇಲ್ಲಿ ಅನ್ನಮ್ಮ ಅವಿವಾಹಿತೆ ಎನ್ನುವ ಅಂಶ.
ಇನ್ನೂರು ವರ್ಷಗಳ ಇತಿಹಾಸವಿರುವ ಈ ಯಾತ್ರಾಸ್ಥಳವು ದಕ್ಷಿಣ ಕರ್ನಾಟಕದ ಕ್ರೈಸ್ತ ಜನಪದದಲ್ಲಿ ಸ್ಥಾನ ಪಡೆದಿರುವುದೂ ಅಚ್ಚರಿಯ ಸಂಗತಿಯೇನಲ್ಲ. ಕನ್ನಡ ಕ್ರೈಸ್ತ ಹಿರಿಯರ ಬಾಯಲ್ಲಿ, ಅವರ ಕೋಲಾಟಗಳಲ್ಲಿ, ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ, ಮೂಡಲದಾಸಾಪುರ, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ನಾಗನಹಳ್ಳಿ ಮುಂತಾದ ಊರುಗಳಲ್ಲಿ ಇನ್ನೂ ಉಳಿದುಕೊಂಡಿರುವ ಬೀಸೋಪದಗಳಲ್ಲಿ ಆಗೊಮ್ಮೆ ಈಗೊಮ್ಮೆ ಅನ್ನಮ್ಮನ ಪ್ರಸ್ತಾವ ಇಣುಕುತ್ತದೆ. ಹಸೆ ಬರೆಯುವ ಸಂದರ್ಭದ ಈ ಹಾಡಂತೂ ಅನ್ನಮ್ಮನನ್ನು ಕುರಿತ ಒಂದು ಸೊಗಸಾದ ಉಲ್ಲೇಖ :
ಸಣ್ಣಕ್ಕಿ ಹಸೆಯ ಸಣ್ಣಾಗಿ ಬರೆಯಮ್ಮ
ಸಣ್ಣಾಕಿ ಉತ್ರಳ್ಳಿ ಅನ್ನಮ್ಮ | ಬರೆದಾರೋ
ಸಣ್ಣ ಸುಣ್ಣಾದ ಹಸೆಗಳ | ಕಂಡಾರೋ
ಮರಿಯವ್ವ ತಾಯಿ ಜರಿದಾರೋ | ಅನ್ನಮ್ಮನ
ಸಣ್ಣಾಗಿ ಹಸೆಯ ಬರೆಯೆಂದು ||
ಹೀಗೆ ಇನ್ನೂರು ವರ್ಷಗಳಿಂದಲೂ ಕ್ರೈಸ್ತ ಜನಪದದಲ್ಲಿ ಬೇರೂರಿರುವ ಈ ಯಾತ್ರಾಸ್ಥಳದ ಪ್ರಸಿದ್ಧಿಯನ್ನು ಮನಗಂಡ ಕ್ರೈಸ್ತ ಪಾದ್ರಿ ಬ್ರಿಯಾಂಡ್ ಸ್ವಾಮಿಯವರು ಈಗ್ಗೆ ಸುಮಾರು ೬೦ ವರ್ಷಗಳ ಹಿಂದೆ ಈ ಅನ್ನಮ್ಮಬೆಟ್ಟದ ತುದಿಯಲ್ಲಿ ಶಿಲುಬೆ ನೆಡಿಸಿ ಅನ್ನಮ್ಮನ ಸಮಾಧಿಯ ಬಳಿ ವರ್ಷಕ್ಕೊಮ್ಮೆ ಕ್ರೈಸ್ತರೆಲ್ಲೂ ಸೇರಿ ಪೂಜೆ ಅರ್ಪಿಸುವ ಪದ್ಧತಿಗೆ ಚಾಲನೆ ನೀಡಿದರು. ಅಂದಿನಿಂದ ಪ್ರತಿವರ್ಷ ತಪಸ್ಸುಕಾಲದ ಐದನೇ ಭಾನುವಾರ ಅನ್ನಮ್ಮಬೆಟ್ಟಕ್ಕೆ ಕ್ರೈಸ್ತರು ತಂಡೋಪತಂಡವಾಗಿ ಆಗಮಿಸಿ ಪೂಜೆ ಮತ್ತು ಶಿಲುಬೆಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ದೈತ್ಯಜೋಕಾಲಿಗಳಿಲ್ಲದ, ತಮಟೆ ನಗಾರಿ ಇಲ್ಲದ, ಅಷ್ಟೇಕೆ ರಥಯಾತ್ರೆಯೂ ಇಲ್ಲದ ಶೋಕಗೀತೆಗಳ ಮೌನ ತಪಸ್ಸಿನ ಜನಜಾತ್ರೆ. ಹಿಂದೆ ಜನ ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬರುತ್ತಿದ್ದರು. ೧೯೬೦ರ ದಶಕದಲ್ಲಿ ಬೆಂಗಳೂರು ನಗರಸಾರಿಗೆ ಪ್ರಾರಂಭವಾದ ಮೇಲೆ ’ಜಾತ್ರೆ ವಿಶೇಷ’ ಬಸ್ಸುಗಳು ಬ್ರಿಯಾಂಡ್ ಚೌಕದಿಂದ ಅನ್ನಮ್ಮಬೆಟ್ಟಕ್ಕೆ ಹೋಗಿಬರುವ ಪರಿಪಾಠ ಶುರುವಾಗಿ ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಅಂದು ಅನ್ನಮ್ಮಬೆಟ್ಟವು ತನ್ನ ಬುಡದಲ್ಲಿ ಅಗಾಧ ಕಲ್ಲುಬಂಡೆಗಳನ್ನೂ ಅವುಗಳನ್ನು ಮರೆಮಾಚುವಂತೆ ಬೆಳೆದ ಮರಗಳನ್ನೂ ಪೊದೆಗಳನ್ನೂ ಹೊಂದಿತ್ತು. ಅನ್ನಮ್ಮನ ಸಮಾಧಿ ಸುಣ್ಣದಿಂದ ಪರಿಶುಭ್ರಗೊಂಡ ಸಣ್ಣ ಗವಿಯಂತೆ ಇತ್ತು. ಜನರು ಒಳತೆರಳಿ ಮೇಣದ ಬತ್ತಿ ಬೆಳಗಿ ನಮಸ್ಕರಿಸಿ ಅಲ್ಲಿನ ಮಣ್ಣನ್ನು ಚಿಟಿಕೆಯಷ್ಟು ತೆಗೆದುಕೊಂಡು ತಲೆಯ ಮೇಲೆ ಉದುರಿಸಿಕೊಳ್ಳುತ್ತಿದ್ದರು. ಕೆಲವರು ಒಂದಷ್ಟು ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಭಕ್ತಿಪೂರ್ವಕವಾಗಿ ಕಣ್ಣಿಗೊತ್ತಿಕೊಂಡು ತಮ್ಮ ಮನೆಗೆ ಒಯ್ಯುತ್ತಿದ್ದರು. ಅಲ್ಲೇ ಸನಿಯದಲ್ಲಿ ತೆರೆದ ಬಾವಿಯೊಂದಿತ್ತು, ಬಾವಿಯ ಸುತ್ತ ಇದ್ದ ಗೇಣುದ್ದದ ಕಟ್ಟೆಯ ಬದಿಯಲ್ಲಿ ಮೊಣಕಾಲೂರಿ ಕುಳಿತು ಕೈಗೇ ಎಟಕುತ್ತಿದ್ದ ಆ ಪರಿಶುದ್ಧ ನೀರನ್ನು ಜನ ಬೊಗಸೆ ತುಂಬಿ ಕುಡಿಯುತ್ತಿದ್ದರು. ಅನತಿ ದೂರದಲ್ಲಿದ್ದ ಕಾಲುವೆಯಲ್ಲಿ ನವಿರಾದ ಮಣ್ಣಿನ ಹೊಯಿಗೆಯಿದ್ದು ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಹರಿದ ಲಕ್ಷಣಗಳಿಗೆ ಸಾಕ್ಷಿಯಾಗಿತ್ತು. ಉತ್ತರಹಳ್ಳಿ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿರುವ ಈ ಬೆಟ್ಟ ಊರಿನಿಂದ ನೋಡಿದಾಗ ಅಸಂಖ್ಯ ಜನರು ಬೆಟ್ಟವನ್ನು ಏರುತ್ತಲೂ ಇಳಿಯುತ್ತಲೂ ಇದ್ದ ದೃಶ್ಯ ಬೆಟ್ಟಕ್ಕೆ ಬಣ್ಣಬಣ್ಣದ ಬಟ್ಟೆ ತೊಡಿಸಿದಂತೆ ನಯನ ಮನೋಹರವಾಗಿ ತೋರುತ್ತಿತ್ತು.
ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬೆಟ್ಟಕ್ಕೆ ಬರುತ್ತಿದ್ದ ಜನ ಅದರ ತಪ್ಪಲಿನಲ್ಲಿಬೀಡುಬಿಟ್ಟು ಮೌನದ ಧ್ಯಾನ ಪ್ರಾರ್ಧನೆಗಳಲ್ಲಿ ತೊಡಗುತ್ತಿದ್ದರು. ಸನಿಹದ ತೋಟ, ಹೊಂಗೆಮರದ ತೋಪು ಅವರಿಗೆ ನೆರಳಾಗುತ್ತಿತ್ತು. ಅವರು ಸರತಿಯಂತೆ ಬೆಟ್ಟ ಹತ್ತಿ ಮೇಲಿನ ಶಿಲುಬೆಗೆ ಮುತ್ತಿಟ್ಟು ಹರಕೆ ತೀರಿಸಿ ಬರುತ್ತಿದ್ದರು. ಬಿಸಿಲೇರಿದಂತೆ ಎಲ್ಲರೂ ತೋಪಿನಲ್ಲಿ ಒಟ್ಟುಗೂಡಿ ಚಾಪೆ ಹಾಸಿಕೊಂಡು ಮನೆಯಿಂದ ಹೊತ್ತು ತಂದಿದ್ದ ಊಟವನ್ನು ಉಂಡು ತಮ್ಮಂತೆಯೇ ಅಲ್ಲಿಗೆ ಬಂದಿದ್ದ ಬಂಧುಬಾಂಧವರೊಂದಿಗೆ ಮತ್ತು ನೆರೆಹೊರೆಯೊಂದಿಗೆ ಕಷ್ಟಸುಖದ ಮಾತುಕತೆ ಆಡುತ್ತಿದ್ದರು. ತಮ್ಮ ಬೆಳೆದ ಮಕ್ಕಳಿಗೆ ಸಂಬಂಧಗಳನ್ನು ಕುದುರಿಸುತ್ತಿದ್ದರು. ಹೊತ್ತಿಳಿಯುತ್ತಿದ್ದಂತೆ ಎಲ್ಲರೂ ತಂತಮ್ಮ ಊರುಗಳಿಗೆ ತೆರಳುತ್ತಿದ್ದಂತೆ ಸಂತೆಯೆದ್ದು ಹೋದಹಾಗೆ ಅನ್ನಮ್ಮ ಬೆಟ್ಟದ ತಪ್ಪಲು ಮುಳುಗುವ ಸೂರ್ಯನಿಗೆ ಅಂತಿಮ ನಮನ ಸಲ್ಲಿಸುವಂತೆ ಕೆಂಪಗೆ ಹೊಳೆಯ ತೊಡಗುತ್ತಿತ್ತು.
ಇಂದು ಬೆಂಗಳೂರು ನಗರವು ವಿಪರೀತ ಬೆಳೆದು ಅನ್ನಮ್ಮ ಬೆಟ್ಟವನ್ನೂ ತನ್ನ ಒಡಲಲ್ಲಿ ಹುದುಗಿಸಿಕೊಂಡು ತಪ್ಪಲನ್ನು ಬೆತ್ತಲಾಗಿಸಿದೆ, ಬೆಟ್ಟವಂತೂ ನೆಲಗಳ್ಳರ ಗಣಿಗಳ್ಳರ ಕಲುಷಿತ ಮನದ ಧಾರ್ಮಿಕ ವಿಪ್ಲವಕಾರರ ಕಬಂಧ ಬಾಹುವಿನಲ್ಲಿ ಸಿಲುಕಿ ನಲುಗುತ್ತಿದೆ. ಬೆಟ್ಟದ ಬುಡದವರೆಗೂ ಮನೆಗಳನ್ನು ಕಟ್ಟಲಾಗಿದೆ. ಹೊಸಕೆರೆಹಳ್ಳಿ ಇತ್ತಮಡು ಗ್ರಾಮದ ಕಡೆಗಿನ ಬೆಟ್ಟದ ಒಂದು ಭಾಗವಂತೂ ಕಟ್ಟಡದ ಕಲ್ಲು ಪೂರೈಕೆಗಾಗಿ ಸಿಡಿದು ಕರಗಿದೆ. ಇನ್ನೊಂದು ಭಾಗ ಉದ್ಯಮಿಯೊಬ್ಬರ ಪಾಲಾಗಿದೆ. ಬೆಟ್ಟದ ಮೇಲೆ ಹನುಮಂತನ ಹಾಗೂ ಶಿವನ ಗುಡಿಗಳು ತಲೆಯೆತ್ತಿವೆ, ಅಲ್ಲಿನ ಬೃಹತ್ ಬಂಡೆಯ ಮೇಲೆ “ಹನುಮಗಿರಿ” ಎಂದು ಬರೆಯಲಾಗಿದೆ. ಆದರೂ ಈ ಬೆಟ್ಟವು ಸ್ಥಳೀಯರ ಬಾಯಲ್ಲಿ ಅನ್ನಮ್ಮಬೆಟ್ಟ / ಯೇಸುಬೆಟ್ಟ ಎಂದೇ ಕರೆಸಿಕೊಳ್ಳುತ್ತಿದೆ. ಜಾನಪದ ತಜ್ಞ ಡಿ ಲಿಂಗಯ್ಯನವರು ಇದನ್ನು ಶಿಲುಬೆಬೆಟ್ಟ ಎಂದು ಕರೆದಿದ್ದಾರೆ.
ಪ್ರತಿವರ್ಷದ ತಪಸ್ಸುಕಾಲದಲ್ಲಿ ಮಾತ್ರವೇ ಗರಿಗೆದರುತ್ತಿದ್ದ ಅನ್ನಮ್ಮಬೆಟ್ಟ ಇಂದು ಪ್ರತಿನಿತ್ಯವೂ ಯೇಸುಭಜನೆಯನ್ನು ಧ್ವನಿಸುತ್ತಿದೆ. ಅನ್ನಮ್ಮನ ಸಮಾಧಿಯ ಸ್ಥಳದಲ್ಲಿರುವ ಪುಟ್ಟದಾದ ಕ್ರೈಸ್ತ ದೇಗುಲವು ಸ್ಥಳೀಯ ಕ್ರೈಸ್ತರಿಗೆ ದಿನನಿತ್ಯದ ಅಧ್ಯಾತ್ಮ ಪೋಷಣೆಯನ್ನು ನೀಡುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ