ಗುರುವಾರ, ಜೂನ್ 18, 2009

ಜನಾಂಗದ್ವೇಷ

ಆ ದಿನ ಮೇ ೩೧ ಭಾನುವಾರ ಆಸ್ಟ್ರೇಲಿಯಾದ ಮೆಲ್ ಬೋರ್ನಿನಲ್ಲಿ ಎಷ್ಟೋ ಸಹಸ್ರ ಜನ ಬೀದಿಗಿಳಿದು “ನೀವು ಜನಾಂಗದ್ವೇಷಿಗಳು” ಎಂದು ಕೂಗುತ್ತಿದ್ದ ಆ ಘೋಷಣೆ ಅಲೆಯಲೆಯಾಗಿ ತೇಲಿಬರುತ್ತಿದ್ದರೆ ನನಗೆ ಅದೊಂದು ಮಧುರ ನಿನಾದದಂತೆ ಕೇಳಿಸಿತು. ಏಕೆಂದರೆ ಅದೊಂದು ನ್ಯಾಯಯುತ ಬೇಡಿಕೆ. ಒಂದು ಬಹುಸಮುದಾಯದ, ಬಹುಸಂಸ್ಕೃತಿಯ ನಾಡಿನಲ್ಲಿ ಶಾಂತಿ ಸೌಹಾರ್ದದಿಂದ ಬಾಳಬೇಕೆನ್ನುವ ಆ ಉತ್ಕಟ ಅಭಿಲಾಷೆಯನ್ನು ಹತ್ತಿಕ್ಕುವ ಒಂದು ಅಭದ್ರತೆಯ ಭಾವವನ್ನು ಆವರಿಸಿಕೊಂಡ ಮನಃಸ್ಥಿತಿಯಲ್ಲಿ ಸ್ವಾತಂತ್ರ್ಯದ ಆ ಕೂಗು ಯಾರಿಗೂ ಕೂಡಾ ಕರ್ಕಶವಾಗಿ ಕೇಳಿಸಲೇಬಾರದು.

ಇತ್ತ ನಮ್ಮಲ್ಲಿ ನಮ್ಮ ವೃತ್ತಪತ್ರಿಕೆಗಳೂ ಇತರ ಮಾಧ್ಯಮಗಳೂ ಅಲ್ಲಿನ ನಮ್ಮ ಸೋದರರ (ಹೆಚ್ಚಿನವರು ವಿದ್ಯಾರ್ಥಿಗಳು) ವ್ಯಥೆಯನ್ನು ಮನಕರಗುವಂತೆ ಚಿತ್ರಿಸಿ ಎಲ್ಲರ ಹೃದಯಗಳನ್ನೂ ತೇವವಾಗಿಸಿದರು. ಆ ವಿವರಗಳು ಭಾವನಾತ್ಮಕವಾಗಿದ್ದರೂ ಹೃದಯವಿದ್ರಾವಕವಾಗಿದ್ದರೂ ನಮ್ಮೊಳಗಿನ ನಮ್ಮನ್ನು ತಟ್ಟಿ ಎಬ್ಬಿಸಿ ಆ ನಮ್ಮ ಸೋದರರಿಗಾಗಿ ಮನ ಮಿಡಿಯುವಂತೆ ಮಾಡಿದವು. ಆ ವರದಿಗಳನ್ನು ನೋಡುತ್ತಿದ್ದಂತೆ ನಮ್ಮ ರಕ್ತ ಕುದಿಯುತ್ತಿದೆ. ಜನಾಂಗದ್ವೇಷ, ಶೋಷಣೆ, ತುಳಿತ, ವರ್ಣಬೇಧ, ವರ್ಗಬೇಧ, ಜಾತಿವಾದ, ಅಸ್ಪೃಶ್ಯತೆ, ತಾರತಮ್ಯಗಳನ್ನು ನಾವು ಸಹಿಸೆವು ಎಂದು ಜಗತ್ತಿಗೆ ಕೂಗಿ ಸಾರಲು ಬಾಯಿ ತಹತಹಿಸುತ್ತಿದೆ. ನಾಗರಿಕ ಸಮುದಾಯವೊಂದು ಇಂಥ ಸಮಸ್ಯೆಗಳನ್ನು ಮೊಳಕೆಯಲ್ಲೇ ಚಿವುಟಬೇಕೆಂದೂ ಅದುವೇ ಆಡಳಿತ ದಕ್ಷತೆಯೆಂದೂ, ಮುತ್ಸದ್ದಿತನವೆಂದೂ ಅನ್ನಿಸುತ್ತಿದೆ.

ನಮ್ಮವರೇ ಆದ ರಾಜಠಾಕ್ರೆ ’ಉತ್ತರಭಾರತೀಯರೇ ನಮ್ಮ ಮುಂಬೈ ಬಿಟ್ಟು ತೊಲಗಿ’ ಎಂದಾಗ ನಮಗದು ಸಂಬಂಧಿಸಿದ ಸಂಗತಿಯೇ ಆಗಿರಲಿಲ್ಲ. ಆದರೆ ಇಂದೇಕೆ ನಾವು ದೂರದ ಆಸ್ಟ್ರೇಲಿಯಾದಲ್ಲಿ ಹಿಂಸೆಗೊಳಗಾದ ಆ ತೆಲುಗು ಅಥವಾ ಪಂಜಾಬಿಗಳಿಗೆ ಮರುಗಬೇಕು? ನಮ್ಮ ಹಲ ರಾಜ್ಯಗಳಲ್ಲ್ಲಿರುವ ಕ್ರೈಸ್ತರ ಬದುಕು ಸಹಾ ಇದಕ್ಕಿಂತ ಬೇರೆಯಿಲ್ಲ. ಅಷ್ಟಲ್ಲದೆ ಅವರನ್ನು ತೆರೆಮರೆಯಲ್ಲಿ ಹೆದರಿಸುವ ಹಿಂಸಿಸುವ ಕೃತ್ಯಗಳಂತೂ ನಡೆದೇ ಇವೆ. ಇನ್ನು ದಲಿತರ ಪಾಡಂತೂ ನಾಯಿಗಿಂತಲೂ ಕಡೆ.

ಒರಿಸ್ಸಾದ ನಾಗರಿಕ ಜನ ಎನಿಸಿಕೊಂಡವರು ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ಬರ್ಬರ ಕೃತ್ಯವಂತೂ ಅಕ್ಷಮ್ಯ. ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುತ್ತಿದ್ದ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಏನೋ ಒಂಥರಾ ಇರುಸುಮುರುಸು. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿ ಕ್ರೈಸ್ತರನ್ನೇ ಗುರಿಯಾಗಿಸಿಕೊಂಡು ನಡೆಸಿದ ದೌರ್ಜನ್ಯಕ್ಕೆ ಅನೇಕರು ಬಲಿಯಾಗಿ, ಹೆಂಗಸರು ಅಪಮಾನಿತರಾಗಿ, ಮಕ್ಕಳು ಅನಾಥರಾದರು. ಅವರ ಮನೆಮಠಗಳೆಲ್ಲವೂ ಬೆಂಕಿಯಲ್ಲಿ ಬೆಂದುಹೋದವು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು. ನಿತ್ಯವೂ ದುಃಸ್ವಪ್ನಗಳನ್ನು ಕಾಣುತ್ತಾ ಆ ಜನ ನಿರಾಶ್ರಿತ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ.

ಇಂದು ಆಸ್ಟ್ರೇಲಿಯಾದಲ್ಲಿ ನಡೆದಿರುವ ಜನಾಂಗ ಹಿಂಸೆಯನ್ನು ಒಕ್ಕೊರಲಿನಿಂದ ಖಂಡಿಸುವ ನಾವುಗಳು ನಮ್ಮದೇ ಮನೆಯಲ್ಲಿ ನಮ್ಮದೇ ದೇಶದಲ್ಲಿ ನಡೆದಿರುವ ಜನಾಂಗದ್ವೇಷವನ್ನು ನೋಡಿಯೂ ನೋಡದಂತಿದ್ದೇವೆ ಅಲ್ಲವೇ?

ಕಾಮೆಂಟ್‌ಗಳಿಲ್ಲ: