ಶನಿವಾರ, ಡಿಸೆಂಬರ್ 5, 2009

ಹೀಗೊಂದು ಪುಸ್ತಕದ ಮನೆ

ಎಚ್ಎಎಲ್ ಏರೋಇಂಜಿನ್ ವಿಭಾಗದಲ್ಲಿ ಕರ್ನಾಟಕ ಕಲಾಸಂಘದ ಸ್ಥಾಪನೆ ೧೯೬೯ರಲ್ಲಾಯಿತು. ಅಂದು ಕಾರ್ಖಾನೆಯಲ್ಲಿ ತಮಿಳು ಭಾಷಾಂಧರ ಅಟಾಟೋಪ ಮೇರೆ ಮೀರಿದ್ದಾಗ ನೇರವಾಗಿ ಕನ್ನಡಸಂಘ ಎಂದು ಕರೆಯದೆ ಕನ್ನಡ ನಾಡಿನಲ್ಲಿನ ಎಲ್ಲ ಸಂಸ್ಕೃತಿ ಮತ್ತು ಕಲೆಗಳನ್ನು ಎತ್ತಿಹಿಡಿಯುವ ನೆಪದಲ್ಲಿ ಕನ್ನಡಿಗ ನೌಕರರ ಹಿತ ಕಾಯುವುದಕ್ಕೋಸ್ಕರ ಸ್ಥಾಪಿಸಲಾಯಿತು. ಕಾರ್ಖಾನೆ ಮುಖ್ಯಸ್ಥರಾಗಿದ್ದ ರಾಮಚಂದ್ರಕರ್ವೆಯವರು ತಮ್ಮ ಪತ್ನಿ ಮೀರಾಕರ್ವೆಯವರ ನೇತೃತ್ವದಲ್ಲಿ ಕನ್ನಡಿಗರನ್ನು ಒಂದುಗೂಡಿಸಿ ಹಾಡುಗಾರಿಕೆ, ಚರ್ಚಾಗೋಷ್ಠಿ, ಉಪನ್ಯಾಸ, ಯುಗಾದಿ ಮತ್ತು ದಸರಾ ಆಚರಣೆಗಳ ಮೂಲಕ ಕಾರ್ಮಿಕರಲ್ಲಿ ಕಲಾಭಿವ್ಯಕ್ತಿಯನ್ನು ಉದ್ದೀಪನಗೊಳಿಸಿ ಅವರ ಜಡ್ಡುಗಟ್ಟಿದ ಮನಸ್ಸುಗಳಲ್ಲಿ ಲವಲವಿಕೆಯನ್ನು ತುಂಬಿದ್ದರು.

ಆ ದಿನಗಳಲ್ಲಿ ಕಾರ್ಮಿಕನಾಗಿದ್ದ ದೊ ತಿ ಹನುಮಯ್ಯ ಎಂಬ ಉತ್ಸಾಹಿ ಕಾರ್ಯಕರ್ತನಿಂದ ಒಂದು ಪುಟ್ಟ ಗ್ರಂಥಾಲಯ ಸ್ಥಾಪನೆಯಾಯಿತೆನ್ನಬಹುದು. ಹನುಮಯ್ಯನವರು ತಮ್ಮ ಕೆಲಸದ ಸ್ಥಳದಲ್ಲಿಯೇ ಒಂದು ಮರದ ಪೆಟ್ಟಿಗೆಯಲ್ಲಿ ಶ್ರೀಕಂಠಯ್ಯ ಮುಂತಾದವರಿಂದ ಸಂಗ್ರಹಿಸಿ ತಂದ ಪುಸ್ತಕಗಳನ್ನು ಇಟ್ಟುಕೊಂಡು ಆಸಕ್ತರಿಗೆ ಎರವಲು ಕೊಡುತ್ತಾ ಕಾರ್ಮಿಕರಲ್ಲಿ ವಾಚನಾಭಿರುಚಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ವಿಚಿತ್ರವೆಂದರೆ ಎಂಭತ್ತರ ದಶಕದವರೆಗೂ ಎಚ್ಎಎಲ್ ಪ್ರದೇಶದಲ್ಲಿ ಕನ್ನಡ ದಿನಪತ್ರಿಕೆಗಳನ್ನು ಕಾಣುವುದೇ ದುಸ್ತರವಾಗಿತ್ತು. ಕನ್ನಡ ಕಾರ್ಮಿಕರು ತಮಿಳು ಭಾಷಿಕ ಸಹೋದ್ಯೋಗಿಗಳಿಗೆ ಹಾಗೂ ಸೆಕ್ಯುರಿಟಿ/ವಿಜಿಲೆನ್ಸ್ ಸಿಬ್ಬಂದಿಗೆ ಹೆದರುತ್ತಾ ಅವರೊಂದಿಗೆ ತಮಿಳಿನಲ್ಲೇ ವ್ಯವಹರಿಸುತ್ತಾ ಕನ್ನಡ ಪುಸ್ತಕಗಳನ್ನು ಕದ್ದುಮುಚ್ಚಿ ಓದುತ್ತಿದ್ದರು. ಆದರೆ ವಿಪರ್ಯಾಸವೆಂದರೆ ತಮಿಳರ ಗ್ರಂಥಾಲಯವು ಕಾರ್ಪೆಂಟರಿ ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು.

ನಂತರದ ದಿನಗಳಲ್ಲಿ ನಾರಾಯಣಮೂರ್ತಿ, ಗೋ ಶ್ರೀನಿವಾಸ್ ಅವರ ಮುನ್ನುಗ್ಗುವಿಕೆಯ ಫಲವಾಗಿ ಕನ್ನಡ ಪುಸ್ತಕಗಳ ಬಹಿರಂಗ ಓದಿಗೆ ಅವಕಾಶವಾಯಿತು. ಎಚ್ ಜಗದೀಶ, ಜ್ಞಾನೇಂದ್ರಗುಪ್ತಾ, ಮುನಿಗಿರಿಯಪ್ಪ, ಎನ್ ನಾಗರಾಜು, ಚಂದ್ರಪ್ಪ ಮುಂತಾದವರ ಅನುಪಮ ಸೇವೆಯಿಂದ ಅದು ಮುಂದುವರಿಯುತ್ತಾ ಬಂತು.

ಕಾರ್ಮಿಕರ ಭೋಜನಾಲಯದಲ್ಲಿ ಭೋಜನದ ವೇಳೆಯಲ್ಲಿ ಧ್ವನಿವರ್ಧಕದ ಮೂಲಕ ಚಿತ್ರಗೀತೆಗಳನ್ನು ಪ್ರಸಾರ ಮಾಡುವುದು ವಾಡಿಕೆ. ಊಟದ ಸಮಯದ ಮೊದಲ ಐದು ನಿಮಿಷ ಕನ್ನಡದ ಹಾಡು, ನಂತರದ ಹತ್ತು ನಿಮಿಷ ಹಿಂದೀ ಚಿತ್ರಗೀತೆಗಳು ಆಮೇಲಿನ ಹದಿನೈದು ನಿಮಿಷಗಳ ಕಾಲ ತಮಿಳು ಚಿತ್ರಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಊಟದ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿನ ಗದ್ದಲದಲ್ಲಿ ಕನ್ನಡ ಗೀತೆ ಕೇಳಿಸುತ್ತಲೇ ಇರಲಿಲ್ಲ. ಆದರೆ ಊಟ ಮುಗಿದ ನಂತರದ ಪ್ರಶಾಂತ ವೇಳೆಯಲ್ಲಿ ತಮಿಳು ಹಾಡುಗಳಿಗೆ ಕನ್ನಡಿಗರೂ ತಲೆದೂಗುತ್ತಿದ್ದರೆಂದರೆ ಅದು ಕನ್ನಡಿಗರ ಔದಾರ್ಯವೆನ್ನಲೇಬೇಕು. ಆದರೆ ಸೋಮಶೇಖರ, ರುದ್ರಪ್ರಕಾಶ, ಬಸವರಾಜು, ಗಂಗೇಗೌಡ ಹಾಗೂ ನನ್ನಂಥವರಿಗೆ ಅದು ತುಂಬಾ ಅಸಹನೀಯವೆನಿಸಿತ್ತು. ಹೀಗೊಂದು ದಿನ ೧೯೯೮ ರಲ್ಲಿ ಓದಲಿಕ್ಕೆಂದು ಬಹಿರಂಗವಾಗಿ ಪ್ರದರ್ಶಿತವಾಗಿದ್ದ ತಮಿಳು ದಿನಪತ್ರಿಕೆಯೊಂದು ನಮ್ಮ ಬಹುದಿನಗಳ ಅಸಹನೆಯನ್ನು ಆಸ್ಫೋಟಿಸಲು ಸಕಾರಣ ಒದಗಿಸಿತು. ಸಿಡಿದೆದ್ದ ಕನ್ನಡಿಗರ ಕೋಪವನ್ನು ತಣಿಸುವ ಕೆಲಸ ಬಹು ಸುಲಭದ್ದಾಗಿರಲಿಲ್ಲ. ಉದ್ಯಮದಲ್ಲಿನ ಅಶಾಂತಿಯ ಕಾರಣ ನೀಡಿ ಅಂದೇ ತಮಿಳರ ಪುಸ್ತಕ ಸಂಗ್ರಹಕ್ಕೆ ಬೀಗಮುದ್ರೆ ಹಾಕಲಾಯಿತು. ಕನ್ನಡ ಪುಸ್ತಕ ಭಂಡಾರಕ್ಕೆ ರಾಜಮನ್ನಣೆ ದೊರೆತು ಭೋಜನಾಲಯದ ಬಳಿ ಅದಕ್ಕೊಂದು ಸ್ಥಳಾವಕಾಶವೂ ಲಭ್ಯವಾಯಿತು. ಸಂಘದ ಕಚೇರಿಗೂ ವಿಸ್ತೃತ ಜಾಗ ದೊರೆತು ಅದರ ನವೀಕರಣವೂ ಆಯಿತು.

ಆದರೆ ಮುಂದೆ ಕನ್ನಡದ ಕಾವು ಆರಿದ ಕೆಲದಿನಗಳಲ್ಲಿ ಭೋಜನಾಲಯದ ನವೀಕರಣದ ಸಬೂಬು ನೀಡಿ ಗ್ರಂಥಾಲಯವಿದ್ದ ಜಾಗವನ್ನು ತೆರವುಗೊಳಿಸಿ ದೂರವಿರುವ ಈಗಿನ ಸ್ಥಳಕ್ಕೆ ವರ್ಗಾಯಿಸಲಾಯಿತು. ಅದು ಸ್ಥಳಾಂತರಗೊಂಡು ನಿಯಮಿತವಾಗಿ ತೆರೆಯದೇ ಇದ್ದುದರ ಕಾರಣ ಸದಸ್ಯರಲ್ಲಿ ಆಸಕ್ತಿಯೂ ಮೊಟಕುಗೊಂಡಿತು.

ಇಕ್ಕಟ್ಟಾದ ಕೊಠಡಿಯಲ್ಲಿದ್ದ ಈ ಗ್ರಂಥಾಲಯದ ಉಸ್ತುವಾರಿಯನ್ನು ೨೦೦೨ರಲ್ಲಿ ನನಗೆ ವಹಿಸಲಾಯಿತು. ಹಿಂದಿನವರು ಮಾಡಿದ್ದ ಎಲ್ಲ ಸುಕಾರ್ಯಗಳನ್ನೂ ಸ್ಮರಿಸುತ್ತಾ ಈ ಪುಸ್ತಕಭಂಡಾರಕ್ಕೆ ಕಾಯಕಲ್ಪ ನೀಡುವ ಕೆಲಸದಲ್ಲಿ ವಿನೀತನಾಗಿ ತೊಡಗಿಕೊಂಡೆ. ಅಲ್ಲಿ ಪುಸ್ತಕಗಳನ್ನು ಬಿಟ್ಟರೆ ಬೇರೆ ಏನಿತ್ತು ಎನ್ನುವುದಕ್ಕಿಂತ ಏನಿಲ್ಲ ಎಂಬುದೇ ದೊಡ್ಡ ಪಟ್ಟಿಯಾಗಿತ್ತು. ಕಸದಬುಟ್ಟಿ, ಪೊರಕೆ, ಇಂಕ್ಪ್ಯಾಡ್, ಸ್ಟ್ಯಾಪ್ಲರ್, ಪಂಚ್, ಬಿಳಿಕಾಗದ, ಕಡತ, ಗೋಂದು ಬಾಟ್ಲಿಯಿಂದ ಮೊದಲುಗೊಂಡು ವಿದ್ಯುತ್ ವ್ಯವಸ್ಥೆ, ದೀಪವ್ಯವಸ್ಥೆಯನ್ನು ಮಾಡಿಕೊಂಡಿದ್ದಾಯಿತು.

ಅಲ್ಲಿ ಏನೆಲ್ಲ ಪುಸ್ತಕಗಳಿವೆ ಎಂಥ ಪ್ರಕಾರಗಳಿವೆ ಎಂಬುದರ ಪಟ್ಟೀಕರಣ ಆಗಬೇಕಿತ್ತು. ಗೆದ್ದಲು ಹತ್ತಿದ್ದವಕ್ಕೆ ಕಾಯಕಲ್ಪ ಆಗಬೇಕಿತ್ತು. ಬಾಕಿ ಉಳಿಸಿಕೊಂಡವರಿಂದ ಪುಸ್ತಕಗಳನ್ನು ವಾಪಸು ಪಡೆಯಬೇಕಿತ್ತು. ಪಟ್ಟೀಕರಣದ ಕೆಲಸದಲ್ಲಿ ಶ್ರೀಯುತರಾದ ಎಂ ಜಗನ್ನಾಥ ಹಾಗೂ ದಿವಂಗತ ಪಂಡಿತ ಚನಗೊಂಡರವರು ನನಗೆ ನೆರವಾದರು. ಪುಸ್ತಕಗಳನ್ನು ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಸದಸ್ಯರ ಮನವೊಲಿಸಿ ಪುಸ್ತಕಗಳನ್ನು ಹಿಂದಕ್ಕೆ ಪಡೆಯಲಾಯಿತು. ಇದ್ದ ಎಲ್ಲ ಪುಸ್ತಕಗಳ ಪಟ್ಟಿಯನ್ನು ಸದಸ್ಯರ ಅವಗಾಹನೆಗಾಗಿ ಮುದ್ರಿಸಿ ಇಡಲಾಯಿತು.

ಆಗ ಪುಸ್ತಕಾಲಯದಲ್ಲಿ ಸ್ತ್ರೀ ಸಾಹಿತ್ಯ, ಪತ್ತೇದಾರಿ ಸಾಹಿತ್ಯ, ಸಾಮಾಜಿಕ ಕಾದಂಬರಿ ಇತ್ಯಾದಿ ಹಳೆಯ ಶೈಲಿಯ ಸಾಹಿತ್ಯ ಪ್ರಕಾರವೇ ತುಂಬಿದ್ದವು. ಅದರಲ್ಲಿ ಕಥಾಸಂಕಲನ, ವಿಜ್ಞಾನ, ಹಾಸ್ಯ, ಕಾವ್ಯ, ಅಧ್ಯಾತ್ಮ, ಆರೋಗ್ಯ, ವ್ಯಕ್ತಿಚಿತ್ರ, ನಾಟಕ, ಇತಿಹಾಸ, ಮನೋವಿಕಾಸ, ಸಾಹಿತ್ಯಚಿಂತನೆ, ಸಂಸ್ಕೃತಿ, ಪರಿಸರ ಇತ್ಯಾದಿ ಸಮೃದ್ಧ ಪ್ರಕಾರಗಳನ್ನು ತುಂಬಿಸಿ ಗ್ರಂಥಾಲಯವನ್ನು ಪ್ರತಿದಿನವೂ ತೆರೆಯುವಂತೆ ಮಾಡಿ ಓದುಗರನ್ನು ಸೆಳೆಯುವ ಪ್ರಯತ್ನ ಆಗಬೇಕು ಎಂಬುದನ್ನು ಮನಗಂಡೆ. ಈ ಅವಿರತ ಪ್ರಯತ್ನದಿಂದಾಗಿ ಇಂದು ಗ್ರಂಥಾಲಯದಲ್ಲಿ ಸಂಘದ ಹಣದಿಂದ ಖರೀದಿಸಿದ್ದು, ಆಡಳಿತವರ್ಗದಿಂದ ಪಡೆದುಕೊಂಡಿದ್ದು ಮಾತ್ರವಲ್ಲದೆ ಉದಾರ ದಾನಿಗಳಿಂದ ಸಂಗ್ರಹೀತವಾದುವು ಸೇರಿ ಒಟ್ಟಾರೆ ಈ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಗ್ರಂಥಾಲಯಕ್ಕೆ ಹೊಸಪುಸ್ತಕ ಬಂದ ಕೂಡಲೇ ಅದಕ್ಕೊಂದು ದಪ್ಪರಟ್ಟಿನ ಹೊದಿಕೆ ಹಾಕಿ ನಂಬರು ಬರೆದು ಠಸ್ಸೆ ಒತ್ತಿ ಪಟ್ಟೀಕರಣಗೊಳಿಸಿ ಇಡಲಾಗುತ್ತದೆ.

ಗ್ರಂಥಾಲಯಕ್ಕೆ ಗಣಕಯಂತ್ರದ ಕೊಡುಗೆ ಅನುಪಮ ಹಾಗೂ ಅನನ್ಯ. ಆದರೆ ನಮಗೆ ಕೊಟ್ಟ ಗಣಕಯಂತ್ರವು ತೀರಾ ಹಳೆಯದಾಗಿತ್ತಲ್ಲದೆ ಯಾರೋ ಬೇಡವೆಂದು ಮಡಗಿದ್ದನ್ನು ನಮ್ಮ ಸುಪರ್ದಿಗೆ ಕೊಡಲಾಗಿತ್ತು. ಕ್ರಮೇಣ ಅದರ ಬಿಡಿಭಾಗಗಳನ್ನು ಮೇಲ್ದರ್ಜೆಗೇರಿಸಿ, ಅಚ್ಚುಕಟ್ಟಾದ ಮೇಜೊಂದನ್ನು ಹೊಂದಿಸಿದ್ದಾಯಿತು. ಇಷ್ಟೆಲ್ಲ ಇದ್ದರೂ ಮಾನ್ಯ ಸದಸ್ಯರು ಕೇಳುವ ಪುಸ್ತಕಗಳನ್ನು ಸುಲಭದಲ್ಲಿ ಹುಡುಕಿ ತೆಗೆಯಲಾಗುತ್ತಿರಲಿಲ್ಲ. ಒಬ್ಬರು ಹುಡುಕುವಾಗ ಇನ್ನೊಬ್ಬರು ಕಾಯುತ್ತಾ ನಿಲ್ಲುವುದು ಸಾಮಾನ್ಯ ಸಂಗತಿಯಾಗಿತ್ತು. ಇರುವ ಅಲ್ಪಕಾಲದಲ್ಲಿ ಎಲ್ಲರಿಗೂ ಸಮರ್ಥಸೇವೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಜಾಗದ ಕೊರತೆ ಇರುವುದರಿಂದ ಸದಸ್ಯರು ಹೊರಗೆ ಕಾಯುತ್ತಾ ನಿಲ್ಲುವುದು ಸಹಜವಾಗಿತ್ತು. ಮಹಿಳಾ ಸದಸ್ಯರು ಈ ಜನಜಂಗುಳಿಯ ಬಗ್ಗೆ ದೂರುತ್ತಿದ್ದರು. ನಮ್ಮ ಸಂಘದ ಕಾರ್ಯದರ್ಶಿ ಎಂ ಜಯರಾಜಯ್ಯನವರ ಅವಿರತ ಓಡಾಟದ ಫಲವಾಗಿ ಗ್ರಂಥಾಲಯ ಕಟ್ಟಡ ಈಗ ವಿಸ್ತಾರಗೊಂಡಿದೆ.

ಮೊದಲು ಇದ್ದ ನಾಲ್ಕು ಮರದ ಕಪಾಟುಗಳ ಸ್ಥಾನದಲ್ಲಿ ಇಂದು ಹದಿನೆಂಟು ಉಕ್ಕಿನ ಕಪಾಟುಗಳಿವೆ. ಪುಸ್ತಕಾಲಯದ ಗಣಕಯಂತ್ರದಲ್ಲಿ ಎಲ್ಲ ೩೫೦೦ ಪುಸ್ತಕಗಳ ಹಾಗೂ ೧೫೦೦ ಸದಸ್ಯರ ಹೆಸರು ಹಾಗೂ ವಿವರಗಳನ್ನು ದಾಖಲು ಮಾಡಲಾಗಿದೆ. ಪುಸ್ತಕದ ಮೌಲ್ಯ, ಲೇಖಕ ಪ್ರಕಾಶಕರ ದಾನಿಗಳ ಹೆಸರು, ಪ್ರಕಾರ ವಿಂಗಡನೆ, ಎರವಲು ಹೋಗಿದ್ದರೆ ಯಾರು ತೆಗೆದುಕೊಂಡಿದ್ದಾರೆ ಎಂಬ ವಿವರ, ಮೊದಲೇ ಓದಿ ಆಗಿದ್ದರೆ ಅದರ ಬಗೆಗಿನ ಮಾಹಿತಿ, ಸದಸ್ಯರ ವಿಭಾಗ ಬಿಲ್ಲೆ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಕ್ಷಣದಲ್ಲೇ ತಿಳಿಯಲು ಸಂಪೂರ್ಣ ಕನ್ನಡಮಯವಾದ ಒಂದು ಉಪಯುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಚ್ಚಗನ್ನಡ ತಂತ್ರಾಂಶದ ಸಹಾಯದಿಂದ ಪುಸ್ತಕದ ವಿತರಣೆ ಅತ್ಯಂತ ಸುಲಭಸಾಧ್ಯವಾಗಿದೆ. ಪುಸ್ತಕದ ಶೀರ್ಷಿಕೆ ಗೊತ್ತಿಲ್ಲ ಮಗುವಿಗೆ ಸಂಬಂಧಿಸಿದ್ದು ಎಂದರೆ ಸಾಕು, ಬೆರಳ ತುದಿಗಳಲ್ಲೇ ನಿಮ್ಮ ಮಗು, ತಾಯಿ ಮಗು, ಮಗುವಿಗೊಂದು ಹೆಸರು ಈ ರೀತಿಯಾಗಿ ’ಮಗು’ ಎಂಬ ಪದ ಇರುವ ಎಲ್ಲ ಶೀರ್ಷಿಕೆಗಳನ್ನೂ ತೋರಿಸುತ್ತದೆ. ಪುಸ್ತಕದ ಹೆಸರಿನೊಂದಿಗೆ ಲೇಖಕರು ಅನುವಾದಕರು ಪ್ರಕಾಶಕರು ಬೆಲೆ ಲಭ್ಯವಿದೆ/ಲಭ್ಯವಿಲ್ಲ ಇತ್ಯಾದಿ ಮಾಹಿತಿಗಳು ಕಾಣುತ್ತವೆ. ಪುಸ್ತಕಗಳನ್ನು ಪ್ರಕಾರಾದಿ, ಲೇಖಕರಾದಿ, ಶೀರ್ಷಿಕೆಯಾದಿ ಹುಡುಕಬಹುದು. ಮೊದಲೇ ಓದಿದ್ದ ಪುಸ್ತಕವೊಂದನ್ನು ಆಯ್ಕೆ ಮಾಡಿಕೊಂಡಾಗ ಈಗಾಗಲೇ ಅದನ್ನು ಓದಿದ್ದೀರಿ ಮತ್ತೊಮ್ಮೆ ಬೇಕೇ ಎಂಬಂತಹ ಪ್ರಶ್ನೆಗಳೂ ಕಾಣಬರುತ್ತವೆ. ಅವಧಿ ಮೀರಿ ಹಿಂದಿರುಗಿಸಿದಾಗ ಇಂತಿಷ್ಟು ದಂಡ ಪಾವತಿಸಿ ಎಂಬ ಸಂದೇಶವೂ ಕಾಣುತ್ತದೆ.
ಈ ತಂತ್ರಾಂಶವನ್ನು ರೂಪಿಸಿದ ಕರ್ತವ್ಯ ಐ ಟಿ ಸಲ್ಯೂಷನ್ಸಿನ ಸಿದ್ಧಾರೂಢ ಮತ್ತು ಅವರ ಗೆಳೆಯರು ಸದಾ ಸ್ಮರಣೀಯರು. ಏಕೆಂದರೆ ಈ ಗ್ರಂಥಾಲಯ ಕಾರ್ಯನಿರತವಾಗುವುದು ಪ್ರತಿದಿನ ಊಟದ ವೇಳೆಯಲ್ಲಿ ಮಾತ್ರ. ಪುಸ್ತಕ ಹಿಡಿದು ಬರುವವರ ದೊಡ್ಡ ದಂಡು ಲಭ್ಯವಿರುವ ಅಲ್ಪ ಸಮಯದಲ್ಲಿ ತನ್ನ ಅಭೀಷ್ಟೆ ಪೂರೈಸಿಕೊಳ್ಳಲು ಈ ತಂತ್ರಾಂಶ ಗರಿಷ್ಠ ಸಹಾಯ ನೀಡುತ್ತದೆ.

ಕಾರ್ಖಾನೆಯ ಮೊದಲ ಮನುಷ್ಯನಿಂದ ಹಿಡಿದು ಅತ್ಯಂತ ಕೆಳಮನುಷ್ಯನವರೆಗೂ ಎಲ್ಲರೂ ಸದಸ್ಯರಾಗಿರುವ ಈ ಗ್ರಂಥಾಲಯದ ಗುರುತಿನ ಚೀಟಿಯು ಅತ್ಯಂತ ವಿಶಿಷ್ಟವಾಗಿದೆ. ಅದರಲ್ಲಿ ಸದಸ್ಯನ ಹೆಸರು ಸಂಖ್ಯೆ ವಿಭಾಗ ಮತ್ತು ದೂರವಾಣಿಗಳು ಕನ್ನಡದಲ್ಲಿ ಮುದ್ರಿತವಾಗಿವೆ. ಜ್ಞಾನಪೀಠ ಪುರಸ್ಕೃತ ಕನ್ನಡಿಗರ ವರ್ಣಚಿತ್ರದ ಕೊಲಾಜ್ ಇದೆ. ಹಿಂಬದಿಯಲ್ಲಿ ನಿಬಂಧನೆಗಳ ಜೊತೆಗೆ ಕನ್ನಡದ ಅಂಕಿಗಳ ಪರಿಚಯವಿದೆ. ಕನ್ನಡೇತರರೂ ಈ ಗುರುತಿನ ಚೀಟಿಯನ್ನು ತಮ್ಮ ಕಿಸೆಯಲ್ಲಿಟ್ಟುಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತಾರೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕನ್ನಡ ಸಂಘ ಮತ್ತು ವಾಚನಾಲಯದ ಹುಟ್ಟು, ಬೆಳವಣಿಗೆ ಕರ್ನಾಟಕದಲ್ಲೇ ಹೀಗಾಗಿರುವುದು, ನಿಮ್ಮೆಲ್ಲರ ಹೋರಾಟ ಮತ್ತು ಕನ್ನಡ ಕಟ್ಟುವ ಕೆಲಸ ನಿಲ್ಲದೇ ಸಾಗಲಿ

Norman Cousins ರ "A library, to modify the famous metaphor of Socrates, should be the delivery room for the birth of ideas—a place where history comes to life" ಜ್ನಾಪಕಯಿತು

ತೆಗೆದುಕೊಂಡ ಪುಸ್ತಕ ಹಿಂದಿರಿಗುಸುವುದನ್ನು ಜ್ನಾಪಿಸಬೇಕು ನಮ್ಮ ಜನರಿಗೆ! ಕೊಂಡು ಓದುವುದನ್ನು, ಕಡ ತೆಗೆದುಕೊಂಡರೆ ಹಿಂದಿರುಗಿಸುವುದನ್ನು!

ಕೊಂಬಿಲ್ಲದ ದನಗಳು ಗ್ರಾಮಗಳಲ್ಲಿ ಇರುತ್ತವೆ. ಮೆದುಳಿಲ್ಲದ ಜನಗಳು ಪಟ್ಟಣಗಳಲ್ಲಿರುತ್ತಾರೆ.
-ಗೆಲಿಲಿಯೊ