ಗುರುವಾರ, ನವೆಂಬರ್ 11, 2010

Bengaluru ಎಂದು ಬರೆಯೋಣ

ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ ಇದು ಚಲಾವಣೆಯಲ್ಲಿದೆ.

ಈಗ ಬೆಂಗಳೂರನ್ನು ಬೆಂಗಳೂರೆಂದೇ ಕರೆಯೋಣವೆಂಬ ಕೂಗು ಎದ್ದಿದೆ. ಆದರೆ ಜನಮಾನಸದ ಚಟವನ್ನು ಅಷ್ಟು ಸುಲಭದಲ್ಲಿ ಹೋಗಲಾಡಿಸಲಾದೀತೇ?

ಬೆಂಗಳೂರನ್ನು ಬೆಂಗಳೂರೆಂದು ಉಚ್ಚರಿಸುವ, ಬರೆಯುವ ಹಾಗೂ ಬೇರೆಯವರಿಂದ ಹಾಗೆ ಹೇಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಕಲ್ಪನೆಗೂ ಮೀರಿದ ಇಚ್ಛಾಶಕ್ತಿ ಹಾಗೂ ಪ್ರೇರಣೆಗಳ ಅಗತ್ಯವಿದೆ. ಈಗಾಗಲೇ NDTV ಯವರು BENGALURU ಪದದ ಬಳಕೆಯನ್ನು ತಮ್ಮ ಟಿವಿ ವಾಹಿನಿಯಲ್ಲಿ ತಂದುಬಿಟ್ಟಿದ್ದಾರೆ. www.map.google.com ನಲ್ಲಿ BENGALURU ಎಂದು ಟೈಪಿಸಿದರೆ ಅದು ಸ್ವೀಕರಿಸುತ್ತದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದೆಸೆಯಿಂದ ಇಂದು ಹಲವಾರು ವಿಮಾನಯಾನ ಸಂಸ್ಥೆಗಳು BENGALURU ಎಂದು ಬಳಸಲಾರಂಭಿಸಿದ್ದಾರೆ. ಹಾಗೆಯೇ ಬೆಂಗಳೂರಿನ ಪೊಲೀಸು ಇಲಾಖೆ ಸೇರಿದಂತೆ ಹಲವರು ಸ್ವಯಂಪ್ರೇರಣೆಯಿಂದ ತಮ್ಮ ನಾಮಫಲಕಗಳಲ್ಲಿ ಹಾಗೂ ವಿಳಾಸಗಳಲ್ಲಿ BENGALURU ಎಂಬುದಾಗಿ ಬಳಸುತ್ತಿದ್ದಾರೆ. ಸರ್ಕಾರದ ಆದೇಶ ಬರುವವರೆಗೂ ಕಾಯದೆ ಈಗಿಂದೀಗಲೇ ನಾವೆಲ್ಲ ಬೆಂಗಳೂರನ್ನು ‘ಬೆಂಗಳೂರು’ ಎಂದು ಕರೆಯುವ, ಬರೆಯುವ ಹಾಗೂ ತಿದ್ದುವ ಪ್ರಯತ್ನದಲ್ಲಿ ತೊಡಗೋಣ.

ನಮ್ಮೆಲ್ಲ ಪತ್ರಗಳು, ಲೇಖನಗಳು, ದಾಖಲೆಗಳು, ದಸ್ತಾವೇಜುಗಳು, ಕರಡಚ್ಚುಗಳು, ನಾಮಫಲಕಗಳು, ಠಸ್ಸೆಗಳು, ಶಿರೋನಾಮೆಗಳು, ವಿಳಾಸಸೂಚಿಗಳು ಇತ್ಯಾದಿಗಳಲ್ಲೆಲ್ಲ Bangalore ಅನ್ನು BENGALURU ಆಗಿ ಬದಲಾಯಿಸುವ ಕೆಲಸಕ್ಕೆ ಇಂದೇ ಚಾಲನೆ ನೀಡೋಣ.

ಶುಕ್ರವಾರ, ನವೆಂಬರ್ 5, 2010

ದೇವರು ನಕ್ಕುಬಿಟ್ಟ

ಇದು ಓಷೋ ಹೇಳಿದ ಕಥೆ.
ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.
ಬಡವರು ತಮ್ಮದೇ ಆದ ಗುಡಿ ಕಟ್ಟಿಕೊಳ್ಳಲಿ ಎಂದು ನೀವು ವಾದಿಸಬಹುದು. ಆದರೆ ಕೇಳಿ, ಅವರು ತಮ್ಮ ಜೀವನ ನಡೆಸುವುದೇ ಕಷ್ಟವಿರುವಾಗ ಗುಡಿಯನ್ನೆಂತು ಕಟ್ಟಬಲ್ಲರು? ಅವರಿಗೆ ಹೊಟ್ಟೆಯೇ ದೇವರು, ಸಿರಿವಂತರು ಮಾತ್ರ ಅನೇಕ ಗುಡಿಗಳನ್ನು ಕಟ್ಟಬಲ್ಲರು. ಅದರಲ್ಲೂ ಅತಿ ದೊಡ್ಡ ಅತಿ ಎತ್ತರದ ಅತಿ ವಿಸ್ತಾರದ ಗುಡಿಗಳು. ಅವರಿಗೆ ದೇವರಿಗಿಂತಲೂ ದೇವಾಲಯದ ಗಾತ್ರ ಮುಖ್ಯ. ಅವರ ಹಣದ ತೂಕದಷ್ಟೇ ಗುಡಿಯ ಗಾತ್ರವು ಇರುತ್ತದೆ. ಇನ್ನೊಂದು ವಿಷಯ ಗಮನಿಸಿದ್ದೀರಾ? ಇಂದು ದೇವರು ಸಹ ಮಾರುಕಟ್ಟೆಯಲ್ಲಿ ಕೊಳ್ಳುವ ವಸ್ತುವಾಗಿದ್ದಾನೆ. ಸಿರಿವಂತರ ದೇವರು ದೊಡ್ಡದಾಗಿದ್ದರೆ ಬಡವರ ದೇವರು ಚಿಕ್ಕದಾಗಿರುತ್ತಾನೆ.
ಇರಲಿ ಇನ್ನು ನಮ್ಮ ಬಡವನ ವಿಷಯಕ್ಕೆ ಬರೋಣ. ಆತ ಬಹುಶಃ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದಿದ್ದಾಗ ಪೂಜಾರಿ ದಯೆತೋರಿ ಗುಡಿಯ ಬಾಗಿಲು ತೆರೆಯಬಹುದೆಂದು ಭಾವಿಸಿದ್ದ. ತನ್ನ ವಿನಂತಿಯನ್ನು ಕೇಳಿ ಅಥವಾ ತನ್ನ ದಯಾರ್ದ್ರ ಗೋಳಿಗೆ ಪೂಜಾರಿಯ ಮನ ಕರಗಬಹುದೆಂದು ಅವ ಭಾವಿಸಿದ್ದ. ಗುಡಿಯೊಳಗಿನ ದೇವರು ಕಲ್ಲಾಗಿದ್ದ ನಿಜ, ಆದರೆ ಅದಕ್ಕಿಂತ ಕಠಿಣತಮ ಮನಸ್ಸು ಪೂಜಾರಿಯದಾಗಿತ್ತು. ಆ ಪೂಜಾರಿ ಕತ್ತಲೆಯಲ್ಲೂ ಮನುಷ್ಯರ ಚರ್ಮದ ಬಣ್ಣವನ್ನು ತಿಳಿಯಬಲ್ಲ ಚಾಣಾಕ್ಷನೂ ಆಗಿದ್ದ. ಬಂದಿದ್ದವನು ಬಡವನೆಂದು ಅವನಿಗೆ ತಿಳಿದುಹೋಯಿತು. ಬಡವ ನಿಧಾನವಾಗಿ ವಿನಂತಿ ಮಾಡಿದ 'ಸ್ವಾಮಿ ಗುಡಿಯ ಬಾಗಿಲು ತೆರೆಯಿರಿ, ನಾನು ದೇವರನ್ನು ನೋಡಲು ಬಂದಿದ್ದೇನೆ.'
ಹಿಂದಿನ ಕಾಲವಾಗಿದ್ದರೆ ಆ ಪೂಜಾರಿ 'ಎಲೈ ದುಷ್ಟನೇ! ತೊಲಗಿಲ್ಲಿಂದ, ಈ ಗುಡಿ ಪರಮಪಾವನಾತ್ಮನದು, ನಿನ್ನ ಅಪವಿತ್ರ ಗಾಳಿ ಇಲ್ಲಿ ಸುಳಿಯಬಾರದು, ನಡಿಯಾಚೆ' ಎನ್ನುತ್ತಿದ್ದನೇನೋ? ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೆ ಹೊರಗಟ್ಟುವುದು ನಾಗರೀಕ ಲಕ್ಷಣವಲ್ಲ. ಆತ ಸುರಕ್ಷಿತ ಮಾರ್ಗ ಅನುಸರಿಸಿದ. ನಾನು ಮೊದಲೇ ಹೇಳಿದಂತೆ ಪೂಜಾರಿ ಪುರೋಹಿತರೆಲ್ಲರೂ ಬಲು ಚಾಣಾಕ್ಷ ಮಂದಿ, ಮಿಕ್ಕವರು ಅಕ್ಕಿ ಬೇಳೆ ಮಾರಿದರೆ ಇವರು ದೇವರನ್ನೇ ಮಾರುವವರು.
ಆ ಕಿಲಾಡಿ ಪೂಜಾರಿ ಹೇಳಿದ 'ಸೋದರನೇ, ಗುಡಿಯೊಳಕ್ಕೆ ನೀನು ಬರುವುದರಿಂದ ಆಗುವ ಪ್ರಯೋಜನವಾದರೂ ಏನು? ಎಲ್ಲಿಯ ತನಕ ನಿನ್ನ ಮನಸ್ಸು ಶುದ್ಧವಾಗುವುದಿಲ್ಲವೋ, ಎಲ್ಲಿಯ ತನಕ ನಿನ್ನ ಮನಸ್ಸು ಶಾಂತವಾಗುವುದಿಲ್ಲವೋ ಅಲ್ಲಿಯ ತನಕ ಮಂದಿರದೊಳಗೆ ಪ್ರವೇಶಿಸಿ ಏನೂ ಲಾಭವಿಲ್ಲ, ದೇವರ ದರ್ಶನವೂ ಆಗುವುದಿಲ್ಲ.'
ತನ್ನ ಮನಸ್ಸು ಶಾಂತವಾಗಿಲ್ಲ ಎಂಬುದು ಆಗ ಬಡವನಿಗೆ ಅರಿವಾಯಿತು. ತನ್ನ ಮನದ ತಳಮಳ, ದುಃಖ ದುಗುಡ ಆತಂಕ ಅತಂತ್ರಸ್ಥಿತಿಗೆ ಪರಿಹಾರ ಅದನ್ನು ಶಾಂತವಾಗಿಸುವುದು ಎಂಬ ಸತ್ಯವನ್ನು ಕೇವಲ ಒಂದೇ ಮಾತಿನಲ್ಲಿ ಪೂಜಾರಿ ತಿಳಿಸಿಕೊಟ್ಟದ್ದು, ಅವನಿಗೆ ಪೂಜಾರಿಯ ಬಗ್ಗೆ ಅಪಾರ ಗೌರವ ತಳೆಯುವಂತೆ ಮಾಡಿತು. ಮನಸ್ಸನ್ನು ಶಾಂತವಾಗಿಸಿಕೊಂಡು ಮರಳಿ ಬರುವೆ ಎಂದುಕೊಂಡ. ಆದರೆ ಪೂಜಾರಿಯ ಮುಖದಲ್ಲಿ ಕಿರುನಗೆ ಸುಳಿದುಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ.
ಮೂರು ತಿಂಗಳಾಯಿತು, ಆರು ತಿಂಗಳಾಯಿತು, ಬಡವ ಮರಳಿ ಬರಲಿಲ್ಲ. ಒಂದು ದಿನ ಪೂಜಾರಿ ಅವನನ್ನು ರಸ್ತೆಯಲ್ಲಿ ಕಂಡ. ಆ ಬಡವನ ಮುಖದಲ್ಲಿ ಅನಿರ್ವಚನೀಯ ತೇಜಸ್ಸಿತ್ತು. ಅವನ ಕಣ್ಣುಗಳಲ್ಲಿ ಅನುಪಮ ಕಾಂತಿಯಿತ್ತು. ಆತ ಮತ್ಯಾರೋ ಹೊಸ ವ್ಯಕ್ತಿಯಾದಂತೆ ತೊರುತ್ತಿತ್ತು. ಪುಜಾರಿ ಅವನನ್ನು ತಡೆದು ಕೇಳಿದ 'ಗೆಳೆಯನೇ, ನೀನು ಮತ್ತೆ ಬರಲೇ ಇಲ್ಲವಲ್ಲ?'
ಬಡವ ಉತ್ತರಿಸಿದ 'ಸ್ವಾಮೀ, ನಾ ಹೇಗೆ ತಾನೇ ಬರಲಿ, ಮನಸ್ಸನ್ನು ಶಾಂತಗೊಳಿಸುವ ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನನಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿಗಳಲ್ಲಿ ಕಣ್ಣೀರಿಡುತ್ತಾ ದೇವಪ್ರಾರ್ಥನೆಯಲ್ಲಿ ಕಳೆಯುತ್ತಿದ್ದೆ. ಒಂದು ರಾತ್ರಿ ಕನಸಿನಲ್ಲಿ ದೇವರು ಬಂದು 'ಏಕೆ ಅಳುತ್ತಿರುವೆ?' ಎಂದು ಕೇಳಿದ. ಅದಕ್ಕೆ ನಾನು 'ದೇವರೇ, ಆ ಗುಡಿಯೊಳಕ್ಕೆ ನಾನು ಹೋಗಬೇಕು, ಅಲ್ಲಿ ನಿನ್ನನ್ನು ಕಾಣಬೇಕು' ಎಂದೆ. ಅದಕ್ಕೆ ದೇವರು ನಕ್ಕುಬಿಟ್ಟ. ನಗುತ್ತಾ ಆತ ಹೇಳಿದ 'ನಿಜಕ್ಕೂ ನೀನೊಬ್ಬ ಹುಚ್ಚ, ಆ ಗುಡಿಯೊಳಕ್ಕೆ ನೀನು ಹೋಗಲಾರೆ, ಸ್ವತಃ ನಾನೇ ಹತ್ತಾರು ವರ್ಷಗಳಿಂದ ಅದರೊಳಕ್ಕೆ ಹೋಗಲು ಪ್ರಯತ್ನಿಸಿ ಸೋತಿದ್ದೇನೆ. ನಾನೇ ಸೋತಿದ್ದೇನೆ ಎಂದ ಮೇಲೆ ನೀನು ಹೇಗೆ ತಾನೇ ಹೋಗಬಲ್ಲೆ, ನಾನು ಬೇಕಾದರೆ ನಿನ್ನ ಹೃದಯ ಮಂದಿರದಲ್ಲಿ ನಿಲ್ಲಬಹುದು, ಆದರೆ ಆ ಗುಡಿಯೊಳಗೆ ಹೋಗುವುದು ಬಲು ಕಷ್ಟ.'
ನಿಜ ಹೇಳಬೇಕೆಂದರೆ ಹತ್ತಾರು ವರ್ಷಗಳಿಂದ ಅಲ್ಲ, ನೂರಾರು ವರ್ಷಗಳಿಂದ ದೇವರಿಗೆ ಮಾನವರು ಕಟ್ಟಿದ ಗುಡಿಗಳೊಳಗೆ ಹೋಗಲಾಗಿಲ್ಲ, ಗುಡಿಗಳು ದಿವ್ಯ ಭವ್ಯ ವಿರಾಟ್ ಸ್ವರೂಪಿಯದಾಗಿದ್ದರೂ ದೇವರಿಗೆ ಅವು ಚಿಕ್ಕವು, ಆದರೆ ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ, ಒಂಟೆಯು ಸೂಜಿಯ ಕಣ್ಣೊಳಗೆ ಪ್ರವೇಶಿಸುವಂತೆ.


ಮಂಗಳವಾರ, ನವೆಂಬರ್ 2, 2010

ಗಿಬ್ರಾನನ ಜೀಸಸ್

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ"
           
ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್‌ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನುಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಆ ಎಪ್ಪತ್ತು ವ್ಯಕ್ತಿಗಳು ಜುದಾಸನಾಗಿ, ಪಿಲಾತನಾಗಿ, ಪೇತ್ರನಾಗಿ, ಮಗ್ದಲದ ಮರಿಯಳಾಗಿ ಮೈದಳೆದಿದ್ದಾರೆ. ಆದರೆ ಗ್ರಮಥದ ಕೊನೆಯಲ್ಲಿನ ನೀಳ್ಗವನದಲ್ಲಿ ಗಿಬ್ರಾನ್ ತಾನೇ ತಾನಾಗಿ ಮೂಡಿ ಬಂದಿದ್ದಾನೆ. ಹತ್ತೊಂಬತ್ತು ಶತಮಾನಗಳ ನಂತರ ಎಂದು ಹೇಳಿದ್ದರೂ ಎಪ್ಪತ್ತು ಜೊತೆ ಕಣ್ಣುಗಳ ಮೂಲಕ ಯೇಸುವಿನ ವಿಶ್ವರೂಪವನ್ನು ಕಂಡ ಭಾಗ್ಯಶಾಲಿ ಗಿಬ್ರಾನ್.

ಕ್ರಿಸ್ತಶಕ ೧೮೮೩ರಲ್ಲಿ ಲೆಬನಾನ್‌ನಲ್ಲಿ ಹುಟ್ಟಿದ ಗಿಬ್ರಾನ್ ಬಹುಶಃ ತನ್ನ ೩೫-೪೦ನೇ ವಯಸ್ಸಿನಲ್ಲಿ ಭ್ರಾಮಕ ಸ್ಥಿತಿಯಲ್ಲಿ ಯೇಸುವಿನ ಜೀವನ ಕಥನವನ್ನು ಕಣ್ಣಾರೆ ಕಂಡವನಂತೆ ಬಣ್ಣಿಸುತ್ತಾ ಇರುವಾಗ್ಗೆ ಆತನ ಗೆಳತಿ ಅದನ್ನು  ಬರೆದುಕೊಂಡಳಂತೆ, "ಜೀಸಸ್, ದಿ ಸನ್ ಆಫ್ ಮ್ಯಾನ್" ಎಂಬ ಆ ಪುಸ್ತಕದಲ್ಲಿ ಯೇಸುವಿನ ಜನನದಿಂದ ಮರಣದವರೆಗಿನ ಕಥೆಯು ಅನುಕ್ರಮವಾಗಿ ಮೂಡಿಬರದೆ ಅಲ್ಲಲ್ಲಿ ಕೆದಕಿದಂತೆ ಇರುವುದಾದರೂ ಆ ಪುಸ್ತಕ ಶ್ರೀಯೇಸುವನ್ನು ಕುರಿತ ಸಾಂಪ್ರದಾಯಿಕ ಕಥಾನಕವನ್ನು ಬದಿಗೊತ್ತಿ ಕ್ರೈಸ್ತ ಪ್ರಪಂಚದಲ್ಲಿ ಹೊಸ ವೈಚಾರಿಕ ತರಂಗಗಳಿಗೆ ಕಾರಣವಾಯಿತು, ಅಷ್ಟೇ ಜನಪ್ರಿಯವೂ ಆಯಿತು.

ಇದರಲ್ಲಿ ಯೇಸುವಿನ ಜೀವನಕಾಲದ ವಿಭಿನ್ನ ಕಾಲಘಟ್ಟದ ವಿಭಿನ್ನ ವ್ಯಕ್ತಿಗಳು ಯೇಸುವಿನ ಜೀವನವನ್ನು ತೆರೆದಿಡುತ್ತಾ ಸಾಗುತ್ತಾರೆ. ಅದು ಹೊಗಳಿಕೆಯಾಗಿರಬಹುದು-ತೆಗಳಿಕೆಯಾಗಿರಬಹುದು, ಅವ್ಯಾಜ ಪ್ರೇಮವಾಗಿರಬಹುದು, ಮಮತೆ ವಾತ್ಸಲ್ಯದ ಆರ್ದ್ರತೆಯಿರಬಹುದು, ಈರ್ಷ್ಯೆಯಿರಬಹುದು-ಸ್ನೇಹವಿರಬಹುದು, ಭಕ್ತಿಯಿರಬಹುದು-ಅಹಮಿಕೆಯಿರಬಹುದು, ಎಲ್ಲ ವಿವರಣೆಯಲ್ಲಿಯೂ ಯೇಸುವನ್ನು ಎಣೆಯಿಲ್ಲದ ಔನ್ನತ್ಯದಲ್ಲಿ ನಿಲ್ಲಿಸುವುದೇ ಗಿಬ್ರಾನನ ತಂತ್ರಗಾರಿಕೆಯಾಗಿದೆ.

ಉದಾಹರಣೆಗೆ ಕೆಲ ತುಣುಕುಗಳನ್ನು ನೋಡೋಣ.
೧.         ಯೇಸುವಿನ ಶಿಷ್ಯ ಲೂಕ ಕೇಳುತ್ತಾನೆ: ಗುರುಗಳೇ, ನೀವು ಪಾಪಿಗಳನ್ನೂ ಬಡಪಾಯಿಗಳನ್ನೂ ಚಂಚಲರನ್ನಷ್ಟೇ ಆದರಿಸಿ, ಡಾಂಭಿಕರನ್ನು ಅಲಕ್ಷಿಸುತ್ತೀರಲ್ಲ? ಅದಕ್ಕೆ ಯೇಸು ಹೇಳುತ್ತಾನೆ ನೀವು ಪಾಪಿಗಳೆಂದು ಕರೆಯುವ ಈ ದುರ್ಬಲರು ಗೂಡಿನಿಂದ ಕೆಳಕ್ಕೆ ಬಿದ್ದ ರೆಕ್ಕೆ ಬಲಿಯದ ಹಕ್ಕಿ ಮರಿಗಳು, ಆದರೆ ಆಷಾಢಭೂತಿಗಳಾದರೋ ಮರಿಹಕ್ಕಿಯ ಮರಣಕ್ಕೆ ಕಾದಿರುವ ರಣಹದ್ದುಗಳು, ದುರ್ಬಲರು ಮರಳುಗಾಡಿನ ನಡುವೆ ಕಳೆದುಹೋದವರು, ಡಂಭಾಚಾರಿಗಳು ತಮ್ಮ ನೆಲೆ ಅರಿತಿದ್ದರೂ ಸುಂಟರಗಾಳಿಯ ನಡುವೆ ತುಂಟಾಟವಾಡುವರು.

೨.         ಪಿಲಾತನ ಆಂತರ್ಯ: ನಾನು ವೇದಿಕೆಯ ಮೇಲೆ ಕುಳಿತಿದ್ದೆ, ಅವನು ನನ್ನೆಡೆಗೆ ಸುದೀರ್ಘ ಹಾಗೂ ಸುನಿಶ್ಚಿತ ಹೆಜ್ಜೆ ಹಾಕುತ್ತಾ ನಡೆದು ಬಂದ, ಬಳಿಕ ಅನು ಸ್ಥೈರ್ಯದಿಂದ ನಿಂತುಕೊಂಡು ಮುಖವನ್ನು ಮೇಲಕ್ಕೆತ್ತಿದ, ಆ ಕ್ಷಣಕ್ಕೆ ನನಗೇನಾಯಿತೋ ನನಗೇ ತಿಳಿಯದಾಯಿತು. ಆದರೆ ನಾನು ನನ್ನ ಆಸನವನ್ನು ಬಿಟ್ಟೆದ್ದು ಅವನೆಡೆಗೆ ಹೋಗಿ ಅನವ ಪಾದದಡಿ ಬೀಳಬೇಕೆಮದು ನನ್ನ ಇಚ್ಛೆ ಅಲ್ಲದಿದ್ದರೂ ನನಗೆ ಆಸೆಯಾಯಿತು. ಒಬ್ಬ ಗ್ರೀಕ್ ತತ್ವಜ್ಞಾನಿಯು 'ಏಕಾಕಿಯೇ ಸಮರ್ಥತಮ ನಾಯಕ' ಎಂದು ಹೇಳಿದ್ದನ್ನು ನಾನು ಓದಿದ್ದು ನನ್ನ ನೆನಪಿಗೆ ಬಂತು.

೩.         ಮಗ್ದಲದ ಮರಿಯಳ ಮನದ ತುಮುಲ: ಗೆಳೆಯಾ ಕೇಳಿಲ್ಲಿ, ನಾನು ಸತ್ತಂತೆಯೇ ಇದ್ದೆ, ಆತ್ಮದಿಂದ ಪರಿತ್ಯಕ್ತಳಾದ ಹೆಣ್ಣಾಗಿದ್ದೆ, ಎಲ್ಲರಿಗೂ ಸೇರಿದವಳಾಗಿದ್ದರೂ ಯಾರಿಗೂ ಬೇಡದವಳಾಗಿದ್ದೆ, ವೇಶ್ಯೆಯೆಂದೇ ನನ್ನನ್ನು ಕರೆಯುತ್ತಿದ್ದರು.
ನಾನು ಅವನತ್ತ ನೋಡಿದೆ. ನನ್ನ ಆತ್ಮವು ಒಳಗೊಳಗೆಯೇ ನಡುಗಿಬಿಟ್ಟಿತು. ನನ್ನ ಮನದ ಬಾಂದಳದ ದಿಗಂತದಿಗಂತವೆಲ್ಲವೂ ಆತನ ಬರುವಿಕೆಗಾಗಿಯೇ ಕಾದಿತ್ತು. ಅವನಿಗೆ ನಾನೆಂದೆ 'ನೀನು ನನ್ನ ಮನೆಗೆ ಬರುವುದಿಲ್ಲವೇ?' ಅವನೆಂದ 'ಈಗಾಗಲೇ ನಾನು ನಿನ್ನ ಮನೆಯೊಳಗಿಲ್ಲವೇ?' ಆತ ಆಡಿದ ಮಾತು ಆಗ ನನಗೆ ಅರ್ಥವಾಗಲಿಲ್ಲ, ಆದರೆ ಈಗ ಅದರರ್ಥವನ್ನು ನಾನು ಬಲ್ಲೆ.
ಅವನು ನನ್ನ ಕಣ್ಣಲ್ಲಿ ಬೆಳಗುಕಂಗಳಿಂದ ನೋಡುತ್ತಾ ಹೇಳಿದ 'ನಿನಗೆ ಅನೇಕ ಪ್ರೇಮಿಗಳಿದ್ದಾರೆ ಆದರೂ ನಾನೊಬ್ಬ ಮಾತ್ರ ನಿನ್ನನ್ನು ಪ್ರೀತಿಸುತ್ತೇನೆ, ಇತರರು ನಿನ್ನ ಸನಿಹದಲ್ಲಿ ತಮ್ಮನ್ನೇ ಪ್ರೀತಿಸಿಕೊಳ್ಳುತ್ತಾರೆ, ನಾನು ಮಾತ್ರ ನಿನ್ನೊಳಗಿನ ನಿನ್ನನ್ನು ಪ್ರೀತಿಸುತ್ತೇನೆ, ಉಳಿದವರು ಅವರ ಆಯುಷ್ಯದೊಂದಿಗೆ ಅಳಿದುಹೋಗುವ ನಿನ್ನ ಚೆಲುವನ್ನು ಮಾತ್ರ ಕಂಡರೆ ನಾನು ಮಾತ್ರ ನಿನ್ನಲ್ಲಿ ಬಾಡದ ಚೆಲುವನ್ನು ಕಾಣುತ್ತೇನೆ, ನಿನ್ನ ಬದುಕಿನ ಶಿಶಿರ ಕಾಲದಲ್ಲಿ ಆ ಚೆಲುವು ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಅಳುಕುವುದಿಲ್ಲ, ಎಲ್ಲರೂ ತಮಗಾಗಿ ನಿನ್ನನ್ನು ಪ್ರೀತಿಸುತ್ತಾರೆ, ನಾನು ನಿನಗಾಗಿ ಮಾತ್ರವೇ ನಿನ್ನನ್ನು ಪ್ರೀತಿಸುವೆ' ಎಂದು ಹೇಳಿ ಆತ ಹೊರಟುಹೋದ. ಆತ ಹೊರಟು ನಡೆದಂತೆ ಇನ್ನಾವ ಪುರುಷನೂ ನನ್ನಿಂದ ನಡೆದುಹೋಗಲಿಲ್ಲ, ನನ್ನ ತೋಟದಲ್ಲಿ ಹುಟ್ಟಿ ಮೂಡಣದೆಡೆಗೆ ಸಾಗಿದ ಉಸಿರೇ ತಾನೆಂಬಂತೆ, ಎಲ್ಲದರ ಅಡಿಗಲ್ಲುಗಳನ್ನು ಅಲುಗಾಡಿಸಿಬಿಡುವ ಬಿರುಗಾಳಿಯಂತೆ, ನನ್ನೊಳಡಗಿದ್ದ ಪೈಶಾಚೀ ಘಟಸರ್ಪವನ್ನು ಅವನ ಕಂಗಳ ಸೂರ್ಯಾಸ್ತವು ಕೊಂದುಬಿಟ್ಟಿತ್ತು. ಅಂದೇ ನಾನು ಸ್ತ್ರೀಯಾದೆ, ಮಗ್ದಲದ ಮರಿಯಳಾದೆ'

೪.         ಗಲಿಲೇಯದ ಒಬ್ಬ ವಿಧವೆ: ನನ್ನ ಚೊಚ್ಚಲ ಒಬ್ಬನೇ ಮಗ ಯೇಸುವಿನ ಬೋಧನೆಯನ್ನು ಕೇಳುವವರೆಗೆ ಹೊಲದಲ್ಲಿ ಗೆಯ್ಮೆ ಮಾಡುತ್ತಾ ತೃಪ್ತಿಯಿಂದಲೇ ಇದ್ದ. ಯೇಸುವನ್ನು ಕಂಡಿದ್ದೇ ನನ್ನ ಮಗ ಬೇರೆಯೇ ಆಗಿಬಿಟ್ಟ. ಯಾವುದೋ ಆತ್ಮವನ್ನು ಆವಾಹಿಸಿದವನಂತೆ, ಹೊಲ ತೋಟಗಳನ್ನಷ್ಟೇ ಅಲ್ಲ ನನ್ನ ಯೋಚನೆಯನ್ನೂ ಬಿಟ್ಟುಬಿಟ್ಟ. ನಜರೇತಿನ ಆ ಯೇಸು ಒಬ್ಬ ಪಾಪಿ; ಏಕೆಂದರೆ ಒಳ್ಳೇ ಜನರು ತಾಯಿಯಿಂದ ಮಗನನ್ನು ಅಗಲಿಸುವರೇ? ಈ ಮನುಷ್ಯರು ಯೇಸುವನ್ನು ಹಿಡಿದು ಶಿಲುಬೆಗೇರಿಸಿ ಒಳ್ಳೆಯದನ್ನೇ ಮಾಡಿದರು. 'ನನ್ನ ನುಡಿಗಳನ್ನು ಕೇಳುವವರೂ, ನನ್ನನ್ನು ಹಿಂಬಾಲಿಸುವವರೂ ನನ್ನ ಬಂಧುಗಳು, ನನ್ನ ತಂದೆತಾಯಿಗಳು' ಎಂದಿದ್ದನಂತೆ. ಆದರೆ ಅವನ ಬೆಂಬತ್ತಿ ಹೋಗಲೆಂದು ಮಕ್ಕಳು ತಮ್ಮ ತಾಯಂದಿರನ್ನು ಏಕೆ ತೊರೆಯಬೇಕು?

ಹೀಗೆ ಗಿಬ್ರಾನನು ಪವಿತ್ರ ಬೈಬಲ್‌ನಲ್ಲಿ ಕಾಣದ ಎಷ್ಟೋ ಪ್ರಸಂಗಗಳನ್ನು ತನ್ನ ಒಳಗಣ್ಣಿಂದ ಹೆಕ್ಕಿ ತೆಗೆದು ಮತ್ತಷ್ಟು ಧ್ವನಿಪೂರ್ಣವಾಗಿ ತನ್ನದೇ ಚಿರಂತನವಾದ ಉಪಮೆಗಳಿಂದ ಅಲಂಕರಿಸಿ ಮನುಕುಲದ ಗದ್ಯಸಾಹಿತ್ಯಕ್ಕೆ ಮೇರುಕೃತಿಯನ್ನು ಕೊಡಮಾಡಿದ್ದಾನೆ.

ಜುದಾಸ ಮತ್ತು ಯೇಸುವಿನ ತುಲನೆಯನ್ನು ಗಿಬ್ರಾನನು ಎರಡೇ ವಾಕ್ಯಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ ನೋಡಿ :
"ಒಬ್ಬ ಮನುಷ್ಯ ತಾನು ರಾಜಕುಮಾರನಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ
ಇನ್ನೊಬ್ಬ ಮನುಷ್ಯ ಎಲ್ಲಾ ಮನುಷ್ಯರೂ ರಾಜಕುಮಾರರಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ"

ಒಟ್ಟಿನಲ್ಲಿ ಕಹ್‌ಲಿಲ್ ಗಿಬ್ರಾನನ "ಜೀಸಸ್" (Jesus, the son of Man) ಹೊಸಒಡಂಬಡಿಕೆಯ ನಂತರದ ಮಹತ್ತರ ದೃಶ್ಯಕಾವ್ಯವೆಂದು ಹೇಳಬಹುದು.

ಕ್ರಿಸ್ತಶಕ ೧೯೫೫ರಲ್ಲಿ ಶ್ರೀಯುತರಾದ ದೇಸಾಯಿ ದತ್ತಮೂರ್ತಿ (ದೇವದತ್ತ) ಅವರು ಇದನ್ನು ಕನ್ನಡಿಸಿ ಧಾರವಾಡದ ಮಿಂಚಿನಬಳ್ಳಿ ಚಾವಡಿ (ಬುರ್ಲಿ ಬಿಂಧುಮಾಧವರ ಪ್ರಕಾಶನ ಸಂಸ್ಥೆ) ಯ ಮೂಲಕ ಕನ್ನಡಿಗರ ಕೈಗಿತ್ತಿದ್ದಾರೆ. ಅದರ ಮುನ್ನುಡಿಯಲ್ಲಿ ವಿನಾಯಕ ಕೃಷ್ಣ ಗೋಕಾಕರು 'ಓರ್ವ ಮಹಾಕವಿಯು ಈ ಕೃತಿಯಲ್ಲಿ ಒಂದು ಮಹಾಜೀವನಕ್ಕೆ ತನ್ನ ಹೃದಯದ ಕನ್ನಡಿಯನ್ನು ಎತ್ತಿ ಹಿಡಿದಿದ್ದಾನೆ' ಎಂದು ಗಿಬ್ರಾನನನ್ನು ಹೊಗಳಿದ್ದಾರೆ, ಅಷ್ಟೇ ಮುಕ್ತ ಕಂಠದಿಂದ ದೇವದತ್ತರ ಕನ್ನಡಾನುವಾದವನ್ನು ಶ್ಲಾಘಿಸಿದ್ದಾರೆ.

ಪ್ರಭುಶಂಕರ ಅವರು ಗಿಬ್ರಾನನ ಕೃತಿಯನ್ನು ಕಿರುಗಾತ್ರದಲ್ಲಿ ಪರಿಚಯಿಸಿದ್ದಾರೆ. ಕೃತಿಯನ್ನು ಇಡಿಯಾಗಿ ನೀಡಲು ಅವರಿಗೆ ತಮ್ಮದೇ ಆದ ಇತಿಮಿತಿಗಳಿವೆ.

ಚಸರಾ ಮತ್ತು ಎಲ್ಸಿ ನಾಗರಾಜರಿಂದ ಅನುವಾದಗೊಂಡಿರುವ "ಜೀಸಸ್" (ಸಂಚಲನ ಪ್ರಕಾಶನ, ಬೆಂಗಳೂರು, ೧೯೯೬) ಶಬ್ದಸಂಪತ್ತು ಮತ್ತು ಭಾಷಾವೈಪರೀತ್ಯದ ದೃಷ್ಟಿಯಿಂದ ದೇವದತ್ತರಿಗಿಂತ ಬೇರೆಯೇ ಆಗಿ ಕಂಡರೂ ಎರಡೂ ಕೃತಿಗಳ ಸಮರ್ಥ ಅನುವಾದವು ಅವುಗಳನ್ನು ಮೇಲ್ಮಟ್ಟದಲ್ಲೇ ಇರಿಸುತ್ತದೆ. ಕನ್ನಡ ಬಲ್ಲ ಪ್ರತಿಯೊಬ್ಬರೂ ಈ ಕೃತಿಗಳನ್ನು ಓದಿ ಅನುಭವಿಸಬೇಕು.

ಸೋಮವಾರ, ನವೆಂಬರ್ 1, 2010

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೇ?

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹಿಂದೆಯೇ ಮಹಾಕಾವ್ಯಗಳನ್ನು ನೀಡಿದ ಕನ್ನಡವೆಲ್ಲಿ, ಕೇವಲ ನಾಲ್ಕುನೂರು ವರ್ಷಗಳ ಹಿಂದೆ ಮುಸ್ಲಿಮರ ಆಳ್ವಿಕೆಯಲ್ಲಿ ಕಲಬೆರೆಕೆಯಾಗಿ ಹುಟ್ಟಿದ ಹಿಂದೀ ಎಲ್ಲಿ?
ಐದು ಕೋಟಿ ಜನ ಕನ್ನಡ ಮಾತನಾಡುತ್ತಾರೆ ಹೌದು ಆದರೆ ಐದು ರಾಜ್ಯಗಳ ಜನ ಹಿಂದೀ ಭಾಷೆಯಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಕೇಳಿ ಬಿಹಾರದ ಹಿಂದೀ ಭಾಷೆ ಉತ್ತರಪ್ರದೇಶದಲ್ಲಿ ಅರ್ಥವಾಗದು. ಜಾನ್ಸಿಯಲ್ಲಿ ಬರೆದ ಹಿಂದೀಯನ್ನು ಜಾರ್ಖಂಡ್ ಜನ ಅರ್ಥ ಮಾಡಿಕೊಳ್ಳಲಾಗದು. ಹಿಂದೀಯನ್ನು ಒಂದು ಸಂಪರ್ಕ ಭಾಷೆಯಾಗಿ ತರುವ ಪ್ರಯತ್ನವೇನೋ ಸರಿಯೇ. ಆದರೆ ಅದು ಉತ್ತರ ಇಂಡಿಯಾಕ್ಕಷ್ಟೇ ಸರಿ. ಏಕೆಂದರೆ ಅಲ್ಲಿನ ಜನರಿಗೆ ತಮ್ಮ ಹಿಂದೀಯನ್ನು ಮತ್ತೊಬ್ಬ ಹಿಂದೀ ಮನುಷ್ಯನಿಗೆ ಸಂವಹಿಸಲು ಒಂದೇ ರೀತಿಯ ಹಿಂದೀಯ ಅವಶ್ಯಕತೆ ಇದೆ. ಆದರೆ ದಕ್ಷಿಣ ಇಂಡಿಯಾಕ್ಕೆ ಹಿಂದೀಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಉತ್ತರದ ಪಂಜಾಬ, ಕಾಶ್ಮೀರದಲ್ಲಿ ಹಾಗೂ ಒರಿಸ್ಸಾ, ಬಂಗಾಳ, ಅಸ್ಸಾಂ, ಅರುಣಾಚಲದಂಥ ಈಶಾನ್ಯ ರಾಜ್ಯಗಳಲ್ಲಿ ಹಿಂದೀ ನಡೆಯದು. ಈ ರಾಜ್ಯಗಳಲ್ಲಿ ಇಂಗ್ಲಿಷು ಸಂಪರ್ಕ ಭಾಷೆಯಾಗಿ ನಿಲ್ಲಬಲ್ಲದು. ನಮ್ಮ ದಕ್ಷಿಣ ಇಂಡಿಯಾದಲ್ಲೂ ಇಂಗ್ಲಿಷು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಈ ಹಿಂದೀ ಜನಕ್ಕೆ ಇಂಗ್ಲಿಷು ಬಾರದ್ದರಿಂದ ತಮ್ಮ ಮಾತೃಭಾಷೆಯನ್ನೇ ಇಂಡಿಯಾದ ಇತರ ಜನರೆಲ್ಲ ಕಲಿಯಲಿ ಎಂದು ಆಶಿಸುತ್ತಾರೆ.
ಅದರ ಬದಲು ಜಾಗತಿಕ ವೇದಿಕೆಯಲ್ಲಿ ಸೆಣೆಸಲು ಎಲ್ಲರೂ ಇಂಗ್ಲಿಷನ್ನು ಉಪಭಾಷೆಯಾಗಿ ಕಲಿತರೆ ಒಳ್ಳೆಯದು. ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಇಂಗ್ಲಿಷನ್ನು ಒಂದು ಸಂಪರ್ಕಭಾಷೆಯಾಗಿ ನೆಲೆಗೊಳಿಸುವುದು ಸುಲಭ. ವಿಪರ್ಯಾಸವೆಂದರೆ ಅವುಗಳಲ್ಲಿ ಹಿಂದೀಯನ್ನು ಜಾರಿಗೆ ತರಲಿಕ್ಕಾಗಿ ಅಪಾರ ಹಣ ವ್ಯಯ ಮಾಡಲಾಗುತ್ತಿದೆ. ಕೆಲವೊಮ್ಮೆಯಂತೂ ಹಿಂದೀಯನ್ನು ಬಲವಂತವಾಗಿ ಹೇರಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನೆಲೆಗೊಂಡ ಅಂಥ ಸಂಸ್ಥೆಗಳಲ್ಲಿ ಆಯಾ ರಾಜ್ಯಭಾಷೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹಿಂದೀಯನ್ನು ಬಲವಂತವಾಗಿ ಹೇರಬಾರದು.
ಆದರೆ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಹಿಂದೀ ಭಾಷೆಯೇ ಪ್ರಧಾನ ಎಂಬುದಾಗಿ ಕೆಲ ಮುಟ್ಠಾಳರು ಪ್ರತಿಪಾದಿಸುತ್ತಿದ್ದಾರೆ. ಅವರನ್ನು ಮುಟ್ಠಾಳರು ಎಂದು ಏಕೆ ಕರೆಯುತ್ತಿದ್ದೇನೆ ಎಂದರೆ ಅವರಿಗೆ ಹಿಂದೀ ಕುರಿತ ವಾಸ್ತವತೆಯ ಅರಿವಿಲ್ಲ. ಹಿಂದೀಗಾಗಿ ನೀಡಲಾಗುವ ಪುಡಿಗಾಸಿನ ಎಂಜಲಿಗಾಗಿ ಅವರು ಕನ್ನಡವನ್ನು ಬಲಿಗೊಡುತ್ತಿದ್ದಾರೆ. ಅದೇ ನೇರದಲ್ಲಿ ಅವರು ತಮ್ಮ ಮುಂದಿನ ಪೀಳಿಗೆಗೂ ವಂಚನೆ ಮಾಡುತ್ತಿದ್ದಾರೆ.
ಈ ಸಂಸ್ಥೆಗಳಲ್ಲಿ ನಡೆವ ಹಿಂದೀ ಪಕ್ಷಾಚರಣೆಯನ್ನೇ ನೋಡೋಣ. ಅದರಲ್ಲಿ ಭಾಗವಹಿಸುವವರಾದರೂ ಎಷ್ಟು ಮಂದಿ? ಕೇವಲ ಬೆರಳೆಣಿಕೆಯಷ್ಟು ಮಂದಿ. ಪ್ರತಿವರ್ಷವೂ ನೋಟಿಂಗ್ ಅಂಡ್ ಡ್ರಾಫ್ಟಿಂಗ್, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಗಾಯನಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಅದೇ ನಾಲ್ಕೈದು ಮಂದಿ. ಅದರ ಬಹುಮಾನಗಳನ್ನು ಅವರವರೇ ಹಂಚಿಕೊಳ್ಳುತ್ತಾರೆ.

ಕನ್ನಡದಲ್ಲಿ ಓಸಿಆರ್‍

ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ? ಈಗಾಗಲೇ ನವದೆಹಲಿಯ AES ನವರು ಹಳೆಯ ಕನ್ನಡ ಪುಸ್ತಕಗಳನ್ನು ಹೀಗೆಯೇ ಮರುಮುದ್ರಣ ಮಾಡಿದ್ದಾರೆ. ಆದರೆ ಅಚ್ಚಾಗುವ ಮುನ್ನ ಆ ಪುಸ್ತಕದ ಒಡಲಲ್ಲಿ ಏನನ್ನಾದರೂ ತಿದ್ದಬೇಕೆಂದರೆ ಅದು ಸಾಧ್ಯವಿಲ್ಲ.

ಮೈಸೂರು ವಿವಿ ಯವರು ತಮ್ಮ ಇಂಗ್ಲಿಷ್ ಕನ್ನಡ ನಿಘಂಟನ್ನು ಪಿಡಿಎಫ್ ರೂಪದಲ್ಲಿ ನೀಡಿದ್ದಾರೆ.

ಪುಸ್ತಕದ ಪುಟಗಳನ್ನು ನೋಡಿ ತಾನಾಗೇ ಅಕ್ಷರಗಳನ್ನು ಕಂಪೋಸ್ ಮಾಡುತ್ತಂತಲ್ಲ ಒಂದು ತಂತ್ರಾಂಶ, ಅದು ಕನ್ನಡದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಿತ್ತು ಅಲ್ಲವೇ? ಇಂಗ್ಲಿಷಿನಲ್ಲಿ ಈಗಾಗಲೇ ಅಂಥದು ಇದೆಯಂತೆ. ಇಂಗ್ಲಿಷಿನಲ್ಲಿ ಬರೇ ೨೬+೨೬ ಅಕ್ಷರಗಳಿರುವುದರಿಂದ ಈ ತಂತ್ರಾಂಶ ಸಾಧ್ಯವಾಗಿದೆಯಂತೆ. ಆದರೆ ಕನ್ನಡದಲ್ಲಿ ಅಕ್ಷರಮಾಲೆ, ಒತ್ತಕ್ಷರ, ಕಾಗುಣಿತ ಎಲ್ಲ ಸೇರಿದರೆ ಅದು ಹತ್ತಿರ ಹತ್ತಿರ ೫೦೦ ಆಗುತ್ತದೆಯಾದ್ದರಿಂದ ಈ ಓಸಿಆರ್‍ (ಆಪ್ಟಿಕಲ್ ಕ್ಯಾರಕ್ಟರ್‍ ರೆಕಗ್ನಿಶನ್) ತಂತ್ರಾಂಶ ಸಾಧ್ಯವಾಗುತ್ತಿಲ್ಲವಂತೆ.

ಹಿಂದೊಮ್ಮೆ ತಾತಾ ವಿಜ್ಞಾನ ಮಂದಿರದ ಇಬ್ಬರು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರಂತೆ. ನೋಡಿ http://www.springerlink.com/content/09gn4jx2eqcwk9xy/ ಅಲ್ಲದೆ ಅಡೋಬ್ ನವರಾಗಲೀ, ಮೈಕ್ರೋಸಾಫ್ಟಿನವರಾಗಲೀ ಅಥವಾ ಇನ್ಯಾರಾದರೂ ಈ ಕುರಿತು ತಮ್ಮ ಪ್ರಯತ್ನ ಮುಂದುವರಿಸಿರಬಹುದು. ಆ ಪ್ರಯತ್ನ ಬೇಗ ಕೈಗೂಡಲಿ ಎಂದು ಆಶಿಸುತ್ತೇನೆ.

ಏಕೆಂದರೆ ನಮ್ಮಲ್ಲಿ ನವಕರ್ನಾಟಕದವರ ಜ್ಞಾನವಿಜ್ಞಾನಕೋಶ, ಮೈಸೂರು ವಿಶ್ವವಿದ್ಯಾಲಯದವರ ಕನ್ನಡ ವಿಶ್ವಕೋಶ, ರೈಸರ ಎಪಿಗ್ರಾಫಿಯಾ ಕರ್ನಾಟಿಕಾ, ಕಿಟೆಲರ ನಿಘಂಟು, ಕವಿಗಳ ಸಾರಸ್ವತ ಭಂಡಾರ ಎಲ್ಲವೂ ಪುಸ್ತಕ ರೂಪದಲ್ಲಿದೆ. ಅವನ್ನೆಲ್ಲ ಡಿಜಿಟೈಸ್ ಮಾಡಿ ಅಂತರ್ಜಾಲದಲ್ಲಿ ಊಡಿದರೆ ಎಷ್ಟು ಚೆನ್ನ ಅಲ್ಲವೇ? ಆದ್ದರಿಂದ ಅಂಥಾ ಒಂದು ತಂತ್ರಾಂಶದ ಅಗತ್ಯ ಇಂದು ಎದ್ದು ಕಾಣುತ್ತಿದೆ.