ಮಂಗಳವಾರ, ನವೆಂಬರ್ 2, 2010

ಗಿಬ್ರಾನನ ಜೀಸಸ್

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ"
           
ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್‌ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನುಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಆ ಎಪ್ಪತ್ತು ವ್ಯಕ್ತಿಗಳು ಜುದಾಸನಾಗಿ, ಪಿಲಾತನಾಗಿ, ಪೇತ್ರನಾಗಿ, ಮಗ್ದಲದ ಮರಿಯಳಾಗಿ ಮೈದಳೆದಿದ್ದಾರೆ. ಆದರೆ ಗ್ರಮಥದ ಕೊನೆಯಲ್ಲಿನ ನೀಳ್ಗವನದಲ್ಲಿ ಗಿಬ್ರಾನ್ ತಾನೇ ತಾನಾಗಿ ಮೂಡಿ ಬಂದಿದ್ದಾನೆ. ಹತ್ತೊಂಬತ್ತು ಶತಮಾನಗಳ ನಂತರ ಎಂದು ಹೇಳಿದ್ದರೂ ಎಪ್ಪತ್ತು ಜೊತೆ ಕಣ್ಣುಗಳ ಮೂಲಕ ಯೇಸುವಿನ ವಿಶ್ವರೂಪವನ್ನು ಕಂಡ ಭಾಗ್ಯಶಾಲಿ ಗಿಬ್ರಾನ್.

ಕ್ರಿಸ್ತಶಕ ೧೮೮೩ರಲ್ಲಿ ಲೆಬನಾನ್‌ನಲ್ಲಿ ಹುಟ್ಟಿದ ಗಿಬ್ರಾನ್ ಬಹುಶಃ ತನ್ನ ೩೫-೪೦ನೇ ವಯಸ್ಸಿನಲ್ಲಿ ಭ್ರಾಮಕ ಸ್ಥಿತಿಯಲ್ಲಿ ಯೇಸುವಿನ ಜೀವನ ಕಥನವನ್ನು ಕಣ್ಣಾರೆ ಕಂಡವನಂತೆ ಬಣ್ಣಿಸುತ್ತಾ ಇರುವಾಗ್ಗೆ ಆತನ ಗೆಳತಿ ಅದನ್ನು  ಬರೆದುಕೊಂಡಳಂತೆ, "ಜೀಸಸ್, ದಿ ಸನ್ ಆಫ್ ಮ್ಯಾನ್" ಎಂಬ ಆ ಪುಸ್ತಕದಲ್ಲಿ ಯೇಸುವಿನ ಜನನದಿಂದ ಮರಣದವರೆಗಿನ ಕಥೆಯು ಅನುಕ್ರಮವಾಗಿ ಮೂಡಿಬರದೆ ಅಲ್ಲಲ್ಲಿ ಕೆದಕಿದಂತೆ ಇರುವುದಾದರೂ ಆ ಪುಸ್ತಕ ಶ್ರೀಯೇಸುವನ್ನು ಕುರಿತ ಸಾಂಪ್ರದಾಯಿಕ ಕಥಾನಕವನ್ನು ಬದಿಗೊತ್ತಿ ಕ್ರೈಸ್ತ ಪ್ರಪಂಚದಲ್ಲಿ ಹೊಸ ವೈಚಾರಿಕ ತರಂಗಗಳಿಗೆ ಕಾರಣವಾಯಿತು, ಅಷ್ಟೇ ಜನಪ್ರಿಯವೂ ಆಯಿತು.

ಇದರಲ್ಲಿ ಯೇಸುವಿನ ಜೀವನಕಾಲದ ವಿಭಿನ್ನ ಕಾಲಘಟ್ಟದ ವಿಭಿನ್ನ ವ್ಯಕ್ತಿಗಳು ಯೇಸುವಿನ ಜೀವನವನ್ನು ತೆರೆದಿಡುತ್ತಾ ಸಾಗುತ್ತಾರೆ. ಅದು ಹೊಗಳಿಕೆಯಾಗಿರಬಹುದು-ತೆಗಳಿಕೆಯಾಗಿರಬಹುದು, ಅವ್ಯಾಜ ಪ್ರೇಮವಾಗಿರಬಹುದು, ಮಮತೆ ವಾತ್ಸಲ್ಯದ ಆರ್ದ್ರತೆಯಿರಬಹುದು, ಈರ್ಷ್ಯೆಯಿರಬಹುದು-ಸ್ನೇಹವಿರಬಹುದು, ಭಕ್ತಿಯಿರಬಹುದು-ಅಹಮಿಕೆಯಿರಬಹುದು, ಎಲ್ಲ ವಿವರಣೆಯಲ್ಲಿಯೂ ಯೇಸುವನ್ನು ಎಣೆಯಿಲ್ಲದ ಔನ್ನತ್ಯದಲ್ಲಿ ನಿಲ್ಲಿಸುವುದೇ ಗಿಬ್ರಾನನ ತಂತ್ರಗಾರಿಕೆಯಾಗಿದೆ.

ಉದಾಹರಣೆಗೆ ಕೆಲ ತುಣುಕುಗಳನ್ನು ನೋಡೋಣ.
೧.         ಯೇಸುವಿನ ಶಿಷ್ಯ ಲೂಕ ಕೇಳುತ್ತಾನೆ: ಗುರುಗಳೇ, ನೀವು ಪಾಪಿಗಳನ್ನೂ ಬಡಪಾಯಿಗಳನ್ನೂ ಚಂಚಲರನ್ನಷ್ಟೇ ಆದರಿಸಿ, ಡಾಂಭಿಕರನ್ನು ಅಲಕ್ಷಿಸುತ್ತೀರಲ್ಲ? ಅದಕ್ಕೆ ಯೇಸು ಹೇಳುತ್ತಾನೆ ನೀವು ಪಾಪಿಗಳೆಂದು ಕರೆಯುವ ಈ ದುರ್ಬಲರು ಗೂಡಿನಿಂದ ಕೆಳಕ್ಕೆ ಬಿದ್ದ ರೆಕ್ಕೆ ಬಲಿಯದ ಹಕ್ಕಿ ಮರಿಗಳು, ಆದರೆ ಆಷಾಢಭೂತಿಗಳಾದರೋ ಮರಿಹಕ್ಕಿಯ ಮರಣಕ್ಕೆ ಕಾದಿರುವ ರಣಹದ್ದುಗಳು, ದುರ್ಬಲರು ಮರಳುಗಾಡಿನ ನಡುವೆ ಕಳೆದುಹೋದವರು, ಡಂಭಾಚಾರಿಗಳು ತಮ್ಮ ನೆಲೆ ಅರಿತಿದ್ದರೂ ಸುಂಟರಗಾಳಿಯ ನಡುವೆ ತುಂಟಾಟವಾಡುವರು.

೨.         ಪಿಲಾತನ ಆಂತರ್ಯ: ನಾನು ವೇದಿಕೆಯ ಮೇಲೆ ಕುಳಿತಿದ್ದೆ, ಅವನು ನನ್ನೆಡೆಗೆ ಸುದೀರ್ಘ ಹಾಗೂ ಸುನಿಶ್ಚಿತ ಹೆಜ್ಜೆ ಹಾಕುತ್ತಾ ನಡೆದು ಬಂದ, ಬಳಿಕ ಅನು ಸ್ಥೈರ್ಯದಿಂದ ನಿಂತುಕೊಂಡು ಮುಖವನ್ನು ಮೇಲಕ್ಕೆತ್ತಿದ, ಆ ಕ್ಷಣಕ್ಕೆ ನನಗೇನಾಯಿತೋ ನನಗೇ ತಿಳಿಯದಾಯಿತು. ಆದರೆ ನಾನು ನನ್ನ ಆಸನವನ್ನು ಬಿಟ್ಟೆದ್ದು ಅವನೆಡೆಗೆ ಹೋಗಿ ಅನವ ಪಾದದಡಿ ಬೀಳಬೇಕೆಮದು ನನ್ನ ಇಚ್ಛೆ ಅಲ್ಲದಿದ್ದರೂ ನನಗೆ ಆಸೆಯಾಯಿತು. ಒಬ್ಬ ಗ್ರೀಕ್ ತತ್ವಜ್ಞಾನಿಯು 'ಏಕಾಕಿಯೇ ಸಮರ್ಥತಮ ನಾಯಕ' ಎಂದು ಹೇಳಿದ್ದನ್ನು ನಾನು ಓದಿದ್ದು ನನ್ನ ನೆನಪಿಗೆ ಬಂತು.

೩.         ಮಗ್ದಲದ ಮರಿಯಳ ಮನದ ತುಮುಲ: ಗೆಳೆಯಾ ಕೇಳಿಲ್ಲಿ, ನಾನು ಸತ್ತಂತೆಯೇ ಇದ್ದೆ, ಆತ್ಮದಿಂದ ಪರಿತ್ಯಕ್ತಳಾದ ಹೆಣ್ಣಾಗಿದ್ದೆ, ಎಲ್ಲರಿಗೂ ಸೇರಿದವಳಾಗಿದ್ದರೂ ಯಾರಿಗೂ ಬೇಡದವಳಾಗಿದ್ದೆ, ವೇಶ್ಯೆಯೆಂದೇ ನನ್ನನ್ನು ಕರೆಯುತ್ತಿದ್ದರು.
ನಾನು ಅವನತ್ತ ನೋಡಿದೆ. ನನ್ನ ಆತ್ಮವು ಒಳಗೊಳಗೆಯೇ ನಡುಗಿಬಿಟ್ಟಿತು. ನನ್ನ ಮನದ ಬಾಂದಳದ ದಿಗಂತದಿಗಂತವೆಲ್ಲವೂ ಆತನ ಬರುವಿಕೆಗಾಗಿಯೇ ಕಾದಿತ್ತು. ಅವನಿಗೆ ನಾನೆಂದೆ 'ನೀನು ನನ್ನ ಮನೆಗೆ ಬರುವುದಿಲ್ಲವೇ?' ಅವನೆಂದ 'ಈಗಾಗಲೇ ನಾನು ನಿನ್ನ ಮನೆಯೊಳಗಿಲ್ಲವೇ?' ಆತ ಆಡಿದ ಮಾತು ಆಗ ನನಗೆ ಅರ್ಥವಾಗಲಿಲ್ಲ, ಆದರೆ ಈಗ ಅದರರ್ಥವನ್ನು ನಾನು ಬಲ್ಲೆ.
ಅವನು ನನ್ನ ಕಣ್ಣಲ್ಲಿ ಬೆಳಗುಕಂಗಳಿಂದ ನೋಡುತ್ತಾ ಹೇಳಿದ 'ನಿನಗೆ ಅನೇಕ ಪ್ರೇಮಿಗಳಿದ್ದಾರೆ ಆದರೂ ನಾನೊಬ್ಬ ಮಾತ್ರ ನಿನ್ನನ್ನು ಪ್ರೀತಿಸುತ್ತೇನೆ, ಇತರರು ನಿನ್ನ ಸನಿಹದಲ್ಲಿ ತಮ್ಮನ್ನೇ ಪ್ರೀತಿಸಿಕೊಳ್ಳುತ್ತಾರೆ, ನಾನು ಮಾತ್ರ ನಿನ್ನೊಳಗಿನ ನಿನ್ನನ್ನು ಪ್ರೀತಿಸುತ್ತೇನೆ, ಉಳಿದವರು ಅವರ ಆಯುಷ್ಯದೊಂದಿಗೆ ಅಳಿದುಹೋಗುವ ನಿನ್ನ ಚೆಲುವನ್ನು ಮಾತ್ರ ಕಂಡರೆ ನಾನು ಮಾತ್ರ ನಿನ್ನಲ್ಲಿ ಬಾಡದ ಚೆಲುವನ್ನು ಕಾಣುತ್ತೇನೆ, ನಿನ್ನ ಬದುಕಿನ ಶಿಶಿರ ಕಾಲದಲ್ಲಿ ಆ ಚೆಲುವು ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಅಳುಕುವುದಿಲ್ಲ, ಎಲ್ಲರೂ ತಮಗಾಗಿ ನಿನ್ನನ್ನು ಪ್ರೀತಿಸುತ್ತಾರೆ, ನಾನು ನಿನಗಾಗಿ ಮಾತ್ರವೇ ನಿನ್ನನ್ನು ಪ್ರೀತಿಸುವೆ' ಎಂದು ಹೇಳಿ ಆತ ಹೊರಟುಹೋದ. ಆತ ಹೊರಟು ನಡೆದಂತೆ ಇನ್ನಾವ ಪುರುಷನೂ ನನ್ನಿಂದ ನಡೆದುಹೋಗಲಿಲ್ಲ, ನನ್ನ ತೋಟದಲ್ಲಿ ಹುಟ್ಟಿ ಮೂಡಣದೆಡೆಗೆ ಸಾಗಿದ ಉಸಿರೇ ತಾನೆಂಬಂತೆ, ಎಲ್ಲದರ ಅಡಿಗಲ್ಲುಗಳನ್ನು ಅಲುಗಾಡಿಸಿಬಿಡುವ ಬಿರುಗಾಳಿಯಂತೆ, ನನ್ನೊಳಡಗಿದ್ದ ಪೈಶಾಚೀ ಘಟಸರ್ಪವನ್ನು ಅವನ ಕಂಗಳ ಸೂರ್ಯಾಸ್ತವು ಕೊಂದುಬಿಟ್ಟಿತ್ತು. ಅಂದೇ ನಾನು ಸ್ತ್ರೀಯಾದೆ, ಮಗ್ದಲದ ಮರಿಯಳಾದೆ'

೪.         ಗಲಿಲೇಯದ ಒಬ್ಬ ವಿಧವೆ: ನನ್ನ ಚೊಚ್ಚಲ ಒಬ್ಬನೇ ಮಗ ಯೇಸುವಿನ ಬೋಧನೆಯನ್ನು ಕೇಳುವವರೆಗೆ ಹೊಲದಲ್ಲಿ ಗೆಯ್ಮೆ ಮಾಡುತ್ತಾ ತೃಪ್ತಿಯಿಂದಲೇ ಇದ್ದ. ಯೇಸುವನ್ನು ಕಂಡಿದ್ದೇ ನನ್ನ ಮಗ ಬೇರೆಯೇ ಆಗಿಬಿಟ್ಟ. ಯಾವುದೋ ಆತ್ಮವನ್ನು ಆವಾಹಿಸಿದವನಂತೆ, ಹೊಲ ತೋಟಗಳನ್ನಷ್ಟೇ ಅಲ್ಲ ನನ್ನ ಯೋಚನೆಯನ್ನೂ ಬಿಟ್ಟುಬಿಟ್ಟ. ನಜರೇತಿನ ಆ ಯೇಸು ಒಬ್ಬ ಪಾಪಿ; ಏಕೆಂದರೆ ಒಳ್ಳೇ ಜನರು ತಾಯಿಯಿಂದ ಮಗನನ್ನು ಅಗಲಿಸುವರೇ? ಈ ಮನುಷ್ಯರು ಯೇಸುವನ್ನು ಹಿಡಿದು ಶಿಲುಬೆಗೇರಿಸಿ ಒಳ್ಳೆಯದನ್ನೇ ಮಾಡಿದರು. 'ನನ್ನ ನುಡಿಗಳನ್ನು ಕೇಳುವವರೂ, ನನ್ನನ್ನು ಹಿಂಬಾಲಿಸುವವರೂ ನನ್ನ ಬಂಧುಗಳು, ನನ್ನ ತಂದೆತಾಯಿಗಳು' ಎಂದಿದ್ದನಂತೆ. ಆದರೆ ಅವನ ಬೆಂಬತ್ತಿ ಹೋಗಲೆಂದು ಮಕ್ಕಳು ತಮ್ಮ ತಾಯಂದಿರನ್ನು ಏಕೆ ತೊರೆಯಬೇಕು?

ಹೀಗೆ ಗಿಬ್ರಾನನು ಪವಿತ್ರ ಬೈಬಲ್‌ನಲ್ಲಿ ಕಾಣದ ಎಷ್ಟೋ ಪ್ರಸಂಗಗಳನ್ನು ತನ್ನ ಒಳಗಣ್ಣಿಂದ ಹೆಕ್ಕಿ ತೆಗೆದು ಮತ್ತಷ್ಟು ಧ್ವನಿಪೂರ್ಣವಾಗಿ ತನ್ನದೇ ಚಿರಂತನವಾದ ಉಪಮೆಗಳಿಂದ ಅಲಂಕರಿಸಿ ಮನುಕುಲದ ಗದ್ಯಸಾಹಿತ್ಯಕ್ಕೆ ಮೇರುಕೃತಿಯನ್ನು ಕೊಡಮಾಡಿದ್ದಾನೆ.

ಜುದಾಸ ಮತ್ತು ಯೇಸುವಿನ ತುಲನೆಯನ್ನು ಗಿಬ್ರಾನನು ಎರಡೇ ವಾಕ್ಯಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ ನೋಡಿ :
"ಒಬ್ಬ ಮನುಷ್ಯ ತಾನು ರಾಜಕುಮಾರನಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ
ಇನ್ನೊಬ್ಬ ಮನುಷ್ಯ ಎಲ್ಲಾ ಮನುಷ್ಯರೂ ರಾಜಕುಮಾರರಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ"

ಒಟ್ಟಿನಲ್ಲಿ ಕಹ್‌ಲಿಲ್ ಗಿಬ್ರಾನನ "ಜೀಸಸ್" (Jesus, the son of Man) ಹೊಸಒಡಂಬಡಿಕೆಯ ನಂತರದ ಮಹತ್ತರ ದೃಶ್ಯಕಾವ್ಯವೆಂದು ಹೇಳಬಹುದು.

ಕ್ರಿಸ್ತಶಕ ೧೯೫೫ರಲ್ಲಿ ಶ್ರೀಯುತರಾದ ದೇಸಾಯಿ ದತ್ತಮೂರ್ತಿ (ದೇವದತ್ತ) ಅವರು ಇದನ್ನು ಕನ್ನಡಿಸಿ ಧಾರವಾಡದ ಮಿಂಚಿನಬಳ್ಳಿ ಚಾವಡಿ (ಬುರ್ಲಿ ಬಿಂಧುಮಾಧವರ ಪ್ರಕಾಶನ ಸಂಸ್ಥೆ) ಯ ಮೂಲಕ ಕನ್ನಡಿಗರ ಕೈಗಿತ್ತಿದ್ದಾರೆ. ಅದರ ಮುನ್ನುಡಿಯಲ್ಲಿ ವಿನಾಯಕ ಕೃಷ್ಣ ಗೋಕಾಕರು 'ಓರ್ವ ಮಹಾಕವಿಯು ಈ ಕೃತಿಯಲ್ಲಿ ಒಂದು ಮಹಾಜೀವನಕ್ಕೆ ತನ್ನ ಹೃದಯದ ಕನ್ನಡಿಯನ್ನು ಎತ್ತಿ ಹಿಡಿದಿದ್ದಾನೆ' ಎಂದು ಗಿಬ್ರಾನನನ್ನು ಹೊಗಳಿದ್ದಾರೆ, ಅಷ್ಟೇ ಮುಕ್ತ ಕಂಠದಿಂದ ದೇವದತ್ತರ ಕನ್ನಡಾನುವಾದವನ್ನು ಶ್ಲಾಘಿಸಿದ್ದಾರೆ.

ಪ್ರಭುಶಂಕರ ಅವರು ಗಿಬ್ರಾನನ ಕೃತಿಯನ್ನು ಕಿರುಗಾತ್ರದಲ್ಲಿ ಪರಿಚಯಿಸಿದ್ದಾರೆ. ಕೃತಿಯನ್ನು ಇಡಿಯಾಗಿ ನೀಡಲು ಅವರಿಗೆ ತಮ್ಮದೇ ಆದ ಇತಿಮಿತಿಗಳಿವೆ.

ಚಸರಾ ಮತ್ತು ಎಲ್ಸಿ ನಾಗರಾಜರಿಂದ ಅನುವಾದಗೊಂಡಿರುವ "ಜೀಸಸ್" (ಸಂಚಲನ ಪ್ರಕಾಶನ, ಬೆಂಗಳೂರು, ೧೯೯೬) ಶಬ್ದಸಂಪತ್ತು ಮತ್ತು ಭಾಷಾವೈಪರೀತ್ಯದ ದೃಷ್ಟಿಯಿಂದ ದೇವದತ್ತರಿಗಿಂತ ಬೇರೆಯೇ ಆಗಿ ಕಂಡರೂ ಎರಡೂ ಕೃತಿಗಳ ಸಮರ್ಥ ಅನುವಾದವು ಅವುಗಳನ್ನು ಮೇಲ್ಮಟ್ಟದಲ್ಲೇ ಇರಿಸುತ್ತದೆ. ಕನ್ನಡ ಬಲ್ಲ ಪ್ರತಿಯೊಬ್ಬರೂ ಈ ಕೃತಿಗಳನ್ನು ಓದಿ ಅನುಭವಿಸಬೇಕು.

1 ಕಾಮೆಂಟ್‌:

kalsakri ಹೇಳಿದರು...

ಪ್ರಭುಶಂಕರ ಅವರೇ ಇದೇ ಮಾದರಿಯಲ್ಲಿ ಬಸವಣ್ಣನವರ ಬಗೆಗೆ ಒಂದು ಕೃತಿಯನ್ನು ರಚಿಸಿದ್ದಾರೆ . ನೀವು ಓದಿರಬೇಕು. ತುಂಬ ಚೆನ್ನಾಗಿದೆ.