ಮಂಗಳವಾರ, ಫೆಬ್ರವರಿ 22, 2011

ತಾಯ್ನುಡಿಯ ಹಿರಿಮೆ

ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದು.

ಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಬೇರೆ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಷೆಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ಆದರೆ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಡಿ ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.

ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ. ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ.


ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ನುಡಿ ಗೊತ್ತು. ಆತ್ಮವಿದ್ದವರೆಲ್ಲ ನುಡಿಗೆ ಸ್ಪಂದಿಸುತ್ತಾರೆ.

            ನುಡಿಯ ಬಗೆಗಿನ ಅಭಿಮಾನದ ವಿಷಯದಲ್ಲಿ ಬಂಗಾಳಿಗಳು ವಿಶ್ವಕ್ಕೇ ಮಾದರಿಯಾಗಿದ್ದಾರೆ. ೧೯೪೮ರ ಮಾರ್ಚ್ ೨೨ ರಂದು ಪಾಕಿಸ್ತಾನದ ಪ್ರಧಾನಿಯಾಗಿದ್ದ ಮಹಮದಾಲಿ ಜಿನ್ನಾ ಅವರು ತಮ್ಮ ದೇಶದ ಅಧಿಕೃತ ನುಡಿ ಉರ್ದು ಎಂದು ಘೋಷಿಸಿದರು. ಪಡುವಣ ಪಾಕಿಗಳಿಗೆ ಅದು ಒಪ್ಪಿಗೆಯಾಯಿತಾದರೂ ಮೂಡಣ ಪಾಕಿಸ್ತಾನದ ಪ್ರಜೆಗಳಿಗೆ ಆದೇಶ ಪಥ್ಯವಾಗಲಿಲ್ಲ. ಎಷ್ಟಾದರೂ ಅವರು ಬಂಗಾಲದ ಬೇರಿನಿಂದ ಬೇರೆಯಾದವರಲ್ಲವೇ? ತಮ್ಮ ತಾಯ್ನುಡಿಯ ಉಳಿವಿಗಾಗಿ ಅವರು ಹೋರಾಡಿದರು. ಅದು ಉಗ್ರಸ್ವರೂಪ ತಾಳಿ ಕರ್ಫ್ಯೂ ಗೋಲಿಬಾರುಗಳಾಗಿ ಪೆಬ್ರವರಿ ೨೧ರಂದು ಮೂರು ವಿದ್ಯಾರ್ಥಿಗಳು ಬಲಿದಾನವಾದರು. ತಕ್ಷಣವೇ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ ಯಾವುದೇ ಮನುಷ್ಯನು ತನ್ನದೇ ನುಡಿಯನ್ನಾಡಲು ಮತ್ತು ಅದನ್ನು ಜತನದಿಂದ ಕಾಪಾಡಿಕೊಂಡು ಬರಲು ಹಕ್ಕುಳ್ಳವನಾಗಿದ್ದಾನೆಂದು ಸಾರಿತು. ಅಂದಿನಿಂದ ಫೆಬ್ರವರಿ ೨೧ಅನ್ನು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂದು ಜಿನ್ನಾ ಮಾಡಿದ ಅದೇ ತಪ್ಪನ್ನು ಇಂದು ನಮ್ಮ ಭಾರತಸರ್ಕಾರ ಮಾಡುತ್ತಿರುವುದು ನಮ್ಮ ಕರ್ಮ. ಇಂದು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಉದ್ದಿಮೆಗಳಲ್ಲಿ ಹಿಂದೀ ಪ್ರಚಾರಕ್ಕೆಂದು ಕೋಟ್ಯಂತರ ರೂಪಾಯಿಗಳನ್ನು ವ್ಯಯಮಾಡಲಾಗುತ್ತಿದೆ. ಉತ್ತರ ಭಾರತದ ಹಿಂದೀ ತಾಯ್ನುಡಿಯವರಿಗೆ ಅನುಕೂಲ ಮಾಡಿಕೊಡಲು ಅವರು ನಮಗೆಲ್ಲ ಹಿಂದೀ ಕಲಿಸಿ ಅವರೊಂದಿಗೆ ಸ್ಪರ್ಧಿಸಲು ತಯಾರು ಮಾಡುತ್ತಿದ್ದಾರೆ. ಇಂದಿನ ಪ್ರೋತ್ನಾಹಧನಕ್ಕೆ ಆಸೆಬಿದ್ದು ಹಿಂದೀ ಕಲಿಯುವ ನಾವು ಮುಂದೆ ನಮ್ಮ ಪೀಳಿಗೆಯವರು ಉತ್ತರಭಾರತದವರ ದಬ್ಬಾಳಿಕೆಯಡಿ ನಲುಗುವಂತೆ ವೇದಿಕೆ ರೂಪಿಸುತ್ತಿದ್ದೇವೆ.

ಹಿಂದೀ ಎಂಬುದು ರಾಷ್ಟ್ರಭಾಷೆ ಎಂಬ ವಾದವನ್ನು ಕೆಲ ಮುಟ್ಠಾಳರು ಮುಂದಿಡುತ್ತಿದ್ದಾರೆ. ರಾಷ್ಟಭಾಷೆಗೂ ರಾಜಭಾಷೆಗೂ ವ್ಯತ್ಯಾಸವಿದೆ. ಇಂಡಿಯಾದಲ್ಲಿ ಕನ್ನಡವೂ ಸೇರಿದಂತೆ ಹದಿನೈದು ರಾಷ್ಟ್ರಭಾಷೆಗಳಿವೆ. ಬೇಕಿದ್ದರೆ ನಿಮ್ಮ ಜೇಬಿನಲ್ಲಿರುವ ಕರೆನ್ಸಿನೋಟನ್ನು ತೆರೆದು ನೋಡಿ. ಇನ್ನು ರಾಜಭಾಷೆ ಎಂದರೆ ಅಧಿಕೃತ ಭಾಷೆ ಎಂದರ್ಥ. ಹಿಂದೀಯ ಜೊತೆಜೊತೆಗೇ ಇಂಗ್ಲಿಷು ಸಹ ನಮ್ಮ ದೇಶದ ಅಧಿಕೃತ ಭಾಷೆಯಾಗಿದೆ. ಇಂದು ಜಗತ್ತಿನಾದ್ಯಂತದ ವ್ಯವಹಾರಕ್ಕಾಗಿ ನಾವು ಇಂಗ್ಲಿಷು ಕಲಿಯುವುದರಿಂದ ನಮ್ಮ ದೇಶದ ಅಧಿಕೃತ ನುಡಿಯಾಗಿ ಇಂಗ್ಲಿಷೇ ಮುಂದುವರಿದರೆ ನಮಗೆ ಅನುಕೂಲವಾಗಿರುತ್ತದೆ. ಆದರೆ ಹಿಂದೀ ಮಾತ್ರವೇ ರಾಜಭಾಷೆ ಎಂದಾಗ ಹಿಂದೀಯವರ ಕೈ ಮೇಲಾಗುತ್ತದೆ. ಅವರಿಗೆ ಇಂಗ್ಲಿಷು ಬೇಕಾಗದು, ಕನ್ನಡವಂತೂ ಬೇಡವೇ ಬೇಡ. ಹೀಗೆ ಬಹುಸಂಖ್ಯಾತ ಉತ್ತರಭಾರತೀಯರ ನಡುವೆ ನಮಗೆ ಅನ್ಯಾಯವಾಗುವುದು ಖಚಿತ. ಅನ್ಯಾಯ ಈಗಾಗಲೇ ಆಗುತ್ತಿದೆ. ಇಂದು ಬ್ಯಾಂಕುಗಳು, ಕೇಂದ್ರಸರ್ಕಾರದ ಕಚೇರಿಗಳು, ಎಚ್ಎಎಲ್ ನಂತಹ ಕಾರ್ಖಾನೆಗಳಲ್ಲಿ ಬಹುಪಾಲಿನ ಅಧಿಕಾರಿಗಳು ಹಿಂದೀ ಭಾಷಿಕರೇ ಆಗಿದ್ದಾರೆ. ಅವರಿಗೆ ಭಾರತದ ಇತರ ಯಾವ ನುಡಿಗಳೂ ಗೊತ್ತಿಲ್ಲ ಮಾತ್ರವಲ್ಲ ಇಂಗ್ಸಿಷೂ ಅಷ್ಟಕ್ಕಷ್ಟೇ. ಅವರೊಂದಿಗೆ ಸೆಣಸಲು ನಾವು ಕನ್ನಡ ಮತ್ತು ಇಂಗ್ಲಿಷು ಎರಡನ್ನೂ ಬಲಿಗೊಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ: