ಗುರುವಾರ, ಮೇ 26, 2011

ಕಪ್ಪು ಕ್ರಿಸ್ತ

ಫಿಲಿಪ್ಪೀನ್ಸ್ ದೇಶದ ರಾಜಧಾನಿ ಮನಿಲಾದ ಒಂದು ಹಳೆಯ ಬಡಾವಣೆ ಕಿಯಾಪೊ. ಈ ಪ್ರದೇಶದ ಹೆಂಚಿನ ಮಾಳಿಗೆಯ ಪುಟ್ಟಗಾತ್ರದ ಸಂತ ಸ್ನಾನಿಕ ಯೊವಾನ್ನರ ಚರ್ಚ್ ಅತ್ಯಂತ ನಯನ ಮನೋಹರವಾಗಿದೆ. ಸುತ್ತೆಲ್ಲ ವಾಣಿಜ್ಯಕೇಂದ್ರಗಳು, ತಿಂಡಿತಿನಿಸಿನ ಮಳಿಗೆಗಳು, ಸರಿಸರಿ (ಮನರಂಜನೆ) ಕೇಂದ್ರಗಳಿಂದ ತುಂಬಿದ್ದರೂ ಈ ಪುಟ್ಟ ಚರ್ಚ್ ಹಗಲೂ ರಾತ್ರಿ ಜನಜಂಗುಳಿಯಿಂದ ತುಂಬಿ ತುಳುಕುತ್ತದೆ. ಅಲ್ಲಿಗೆ ನೀವು ಯಾವಾಗ ಭೇಟಿ ನೀಡಿದರೂ ಅಲ್ಲಿನ ಪ್ರಸಾದಸಂಪುಟದ ಮುಂದೆ ಮೊಣಕಾಲೂರಿ ಭಕ್ತಿಯಿಂದ ಪ್ರಾರ್ಥಿಸುತ್ತಿರುವ ಹಲವಾರು ಭಕ್ತರನ್ನು ಕಾಣುತ್ತೀರಿ. ಬಿಳಿಯರು, ಕರಿಯರು, ಪೌರ್ವಾತ್ಯರು, ಸ್ಥಳೀಯರು, ಪ್ರವಾಸಿಗರು, ಬಡವರು, ಶ್ರೀಮಂತರು, ಸುಖಲೋಲುಪ್ತರು, ಅಂಗಹೀನರು ಹೀಗೆ ಯಾವುದೇ ಭಿನ್ನಭೇದವಿಲ್ಲದೆ ಇವರೆಲ್ಲ ಕ್ರಿಸ್ತನನ್ನು ಕಾಣಲು ಬಂದಿದ್ದಾರೆ. ಅವರ ಭಕ್ತಿಪಾರಮ್ಯವ ಕಂಡು ನೀವೂ ಪರವಶರಾಗಿ ನಿಮಗೇ ಗೊತ್ತಿಲ್ಲದಂತೆ ಕ್ರಿಸ್ತನ ಮುಂದೆ ಮೊಣಕಾಲೂರುತ್ತೀರಿ.


ಹಾಗೇ ತಲೆಯೆತ್ತಿ ಕ್ರಿಸ್ತನನ್ನು ದರ್ಶಿಸುತ್ತೀರಿ. ಅರೆ! ಆಶ್ಚರ್ಯ, ಕ್ರಿಸ್ತ ಕಪ್ಪಗಿದ್ದಾನೆ. ನೀವು ಯಾವಾಗಲೂ ದೇವಾಲಯಗಳಲ್ಲಿ ನೋಡುವ, ಕಣ್ಣು ಮುಚ್ಚಿದರೂ ಒಳಗಣ್ಣಿಗೆ ತೋರುವ ಆ ಗೌರವರ್ಣದ ಸುಂದರ ಸುಕೋಮಲ ಹಾಲುಗಲ್ಲದ ಬಿಳಿಯ ಕ್ರಿಸ್ತಮೂರ್ತಿಯೆಲ್ಲಿ, ಈ ಕಡುಗಪ್ಪಿನ ಕರಾಳ ಆದರೂ ಪ್ರೀತಿಯೇ ಮೈವೆತ್ತಿದಂತಿರುವ ಕರಿಯ ಕಾಷ್ಠ ಶಿಲ್ಪವೆಲ್ಲಿ?

ನಿಜ, ಇಲ್ಲಿ ಕ್ರಿಸ್ತ ಕಪ್ಪಗಿದ್ದಾನೆ, ಕಡುಗಪ್ಪಾಗಿದ್ದಾನೆ. ಆದರೆ . . ಆದರೆ . . ಅವನ ಕಂಗಳಲ್ಲಿ ಪ್ರೀತಿಯಿದೆ, ಶಾಂತಿಯಿದೆ, ಅಪೂರ್ವ ಕಾಂತಿಯಿದೆ, ಪ್ರಶಾಂತಿಯಿದೆ. ಅವನ ಭಕ್ತರ ಕಡೆ ನೋಡಿರಲ್ಲ. ಕಪ್ಪು, ಕಂದು, ಬಿಳಿ, ಹಳದಿ ಮೈಬಣ್ಣಗಳ ಜನಗಳ ನಡುವೆ ಕ್ರಿಸ್ತ ಕಪ್ಪಗಿರುವುದರಲ್ಲಿ ಏನು ವಿಶೇಷ? ಇದೇನು ವಿಚಿತ್ರ? ಕ್ರಿಸ್ತನೇಕೆ ಕಪ್ಪಗಾದ? ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.

ನಮ್ಮ ದೇಶದ ಪುರಾಣಗಳಲ್ಲಿನ ದೇವತೆಗಳಾದ ಕೃಷ್ಣನ ಬಣ್ಣ ಕಪ್ಪು, ರಾಮನ ಬಣ್ಣ ನೀಲಿ, ಹಾಗೆ ನೋಡಿದರೆ ಯೇಸುಕ್ರಿಸ್ತ ಜನಿಸಿದ್ದು ಏಷಿಯಾ ಖಂಡದಲ್ಲಿಯೇ. ಈ ಖಂಡದಲ್ಲಿ ಎಲ್ಲ ಬಣ್ಣಗಳ ಜನ ಇದ್ದಾರೆ. ಆದರೆ ನಮ್ಮ ಕಲ್ಪನೆಯ ಕ್ರಿಸ್ತ ಬೆಳ್ಳಗಿದ್ದಾನೆ, ಹೌದು. ಅದಕ್ಕೆ ಕಾರಣವೇನು?

ಸ್ಪೇನ್, ಇಟಲಿ, ಪೋರ್ಚುಗಲ್, ಫ್ರಾನ್ಸ್ ಮುಂತಾದ ಐರೋಪ್ಯ ದೇಶಗಳ ಮೂಲಕವೇ ನಮಗೆ ಕ್ರಿಸ್ತನ ಪರಿಚಯವಾಯಿತು. ಆ ದೇಶಗಳಿಂದಲೇ ನಮಗೆ ಯೇಸುಕ್ರಿಸ್ತನ, ಮೇರಿಮಾತೆಯ ಸ್ವರೂಪಗಳು ಬಂದವಲ್ಲವೇ? ಆ ಐರೋಪ್ಯ ಜನ ತಮ್ಮ ದೇಶ ಸಂಸ್ಕೃತಿಗನುಗುಣವಾದ, ತಮ್ಮ ಒಡನಾಡಿಗಳ ರೂಪ ಲಾವಣ್ಯ ಗಾಂಭೀರ್ಯಗಳನ್ನು ಆ ಸ್ವರೂಪಗಳಲ್ಲಿ ಮೂಡಿಸಿ ಅವನ್ನೇ ನಮ್ಮ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿದರು ಅಲ್ಲವೇ?

ಅದೇ ರೀತಿ ಕ್ರಿಸ್ತಶಕ ೧೬೦೬ರಲ್ಲಿ ಸ್ಪೇನ್ ದೇಶದ ಪಾದ್ರಿಗಳು ಗೌರವರ್ಣದ ಯೇಸುಕ್ರಿಸ್ತನ ಪ್ರತಿಮೆಯನ್ನು ಫಿಲಿಪ್ಪೀನ್ಸ್ ದೇಶಕ್ಕೆ ಹಡಗಿನಲ್ಲಿ ಕೊಂಡೊಯ್ಯುತ್ತಿದ್ದರು. ಅಂದು ಜನವರಿ ೯ನೇ ದಿನ ಸ್ವಲ್ಪಹೊತ್ತಿಗೆ ದಡ ಸೇರಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಹಡಗಿಗೆ ಬೆಂಕಿ ಬಿದ್ದು ಬಹಳಷ್ಟು ವಸ್ತುಗಳು ದಹಿಸಿಹೋದವು. ಆದರೆ ಕ್ರಿಸ್ತನ ಪ್ರತಿಮೆ ಮಾತ್ರ ಸುಟ್ಟುಹೋಗದೆ ಬಣ್ಣಗೆಟ್ಟು ಕಪ್ಪಾಯಿತೆಂದು ಚರಿತ್ರೆ ಹೇಳುತ್ತದೆ. ಇದೇ ಕಪ್ಪುಕ್ರಿಸ್ತನ ಪ್ರತಿಮೆಯನ್ನು ಕ್ರಿಸ್ತಶಕ ೧೭೮೭ರಿಂದೀಚೆಗೆ ಕಿಯಾಪೊ ಮೊಹಲ್ಲಾದ ಸಂತ ಸ್ನಾನಿಕ ಯೊವಾನ್ನರ ಚರ್ಚಿನಲ್ಲಿ ಬಹಿರಂಗ ಪ್ರದರ್ಶನಕ್ಕೆ ಇಡಲಾಗಿದೆ.

ಕಿಯಾಪೊ ಮೊಹಲ್ಲಾದ ಬೀದಿಗಳಲ್ಲಿ ಜನವರಿ ೯ರಂದು ಹಾಗೂ ಶುಭಶುಕ್ರವಾರದಂದು ಭಾರೀ ಮೆರವಣಿಗೆ ನಡೆಯುತ್ತದೆ. ಭಕ್ತಿಪರವಶರಾದ ಜನ ಮರದಲ್ಲಿ ಕೆತ್ತಲಾದ ಆಳೆತ್ತರದ ಕಪ್ಪು ಕ್ರಿಸ್ತನ ಪ್ರತಿಮೆಯನ್ನು ಹಿಡಿದು "ವಿವಾ ಸೆನೋರ್" ಎಂದು ಕೂಗುತ್ತಾ ಹೋಗುತ್ತಾರೆ. ಈ ಪ್ರತಿಮೆಯನ್ನು ಹೊತ್ತೊಯ್ಯುವ ದಾರಿಯ ಇಕ್ಕೆಲಗಳಲ್ಲಿ ಸೇರಿದ ಜನಜಂಗುಳಿ ಪ್ರತಿಮೆಯ ದರ್ಶನದಿಂದ ಪುಳಕಿತರಾಗುತ್ತಾರೆ. ಕೆಲವರು ಅದನ್ನು ಕೈಯಿಂದ ಮುಟ್ಟಲೆತ್ನಿಸುತ್ತಾರೆ, ಇನ್ನೂ ಕೆಲವರು ತಮ್ಮ ಕರವಸ್ತ್ರಗಳನ್ನೋ ತುಂಡುಬಟ್ಟೆಗಳನ್ನೋ  ಪ್ರತಿಮೆಗೆ ತಾಕಿಸಿ ತಂದು ತಮ್ಮ ಮನೆಯ ದೇವರ ಕೋಣೆಯಲ್ಲಿ ಜೋಪಾನವಾಗಿ ಮಡಗುತ್ತಾರೆ. ಕರಿಯ ಯೇಸುಕ್ರಿಸ್ತನ ಪ್ರತಿಮೆಯ ಸ್ಪರ್ಶವೇ ತಮ್ಮನ್ನು ಕೇಡಿನಿಂದ ತಪ್ಪಿಸಿ ಕ್ಷೇಮವನ್ನು ಪಾಲಿಸುತ್ತೆ ಎಂಬ ಭಾವನೆ ಇದೆಯಲ್ಲ ಅದಕ್ಕಿಂತ ಅನುಪಮವಾದುದು ಬೇರೇನಿದೆ ಅಲ್ಲವೇ?

ಕಾಮೆಂಟ್‌ಗಳಿಲ್ಲ: