ಇದು ನಾನು ಕಾರ್ಖಾನೆಗೆ ಸೇರಿದ ದಿನದ ಅನುಭವ. ನನ್ನ ಆಯ್ಕೆ ಪ್ರಕ್ರಿಯೆಗಳೆಲ್ಲ ಮುಖ್ಯಕಾರ್ಖಾನೆಯಲ್ಲಿ ಮುಗಿದು ಇಂಜಿನ್ ವಿಭಾಗಕ್ಕೆ ನನ್ನನ್ನು ಹೊತ್ತು ಹಾಕಿದರು. ಜೀಪಿನಲ್ಲಿ ನನ್ನನ್ನು ಕರೆದೊಯ್ದವರು ಇಂಜಿನ್ ವಿಭಾಗದ ದ್ವಾರದಲ್ಲಿ ನನ್ನನ್ನು ಇಳಿಸಿ ಒಳಹೋದರು. ನಾನು ಬಾಗಿಲ ಬಳಿ ಬಂದಾಗ ಅಲ್ಲಿದ್ದ ಸೆಕ್ಯುರಿಟಿ ’ಎನ್ನ’ ಅಂದ. ಒಳಗೆ ಹೋಗ್ಬೇಕು ಅಂದೆ. ನನ್ನ ಅಂಗಿನ ಜೇಬಿನಲ್ಲಿ ಪಂಚ್ ಕಾರ್ಡು ಇಣುಕುತ್ತಿತ್ತು. ಆತ ತಮಿಳಿನಲ್ಲಿ ಏನಯ್ಯ ಪಂಚುಕಾರ್ಡು ತೊಗೊಂಡು ಎಲ್ಲೆಲ್ಲೋ ಓಡಾಡ್ತಿದ್ದೀಯಾ, ನೀನೇನೂ ಟ್ರೇನಿನೋ, ಎಂಪ್ಲಾಯೋ ಅನ್ತ ಕೇಳಿದ. ನನಗೇನೂ ಅರ್ಥವಾಗಲಿಲ್ಲ ಅದೇನು ಕನ್ನಡದಲ್ಲಿ ಕೇಳು ಅಂದೆ. ಎಲ್ಲಿ ಬ್ಯಾಡ್ಜ್ ತೋರಿಸು ಎಂದು ಹೇಳಿ ಅಕ್ಷರಶಃ ಅದನ್ನು ಕಿತ್ತುಕೊಂಡ ಆತ ’ಇದೆನ್ನ ಜೋಸೆಫ್ ಅನ್ನಿ ಪೇರು ಇರುಕ್ಕು, ಕ್ರಿಶ್ಚಿಯನ್ ಅಯಿಟು ತಮಿಳು ತೆರಿಯಾದು ಅನಿ ಸೊಲ್ಲರಿಯಾ, ಎತ್ತನೆ ಗಾಂಚಾಲಿ’ (ಇದೇನು ಜೋಸೆಫ್ ಅನ್ತ ಹೆಸರಿದೆ, ಕ್ರಿಶ್ಚಿಯನ್ ಆಗಿದ್ರೂ ತಮಿಳು ಗೊತ್ತಿಲ್ಲ ಅಂತೀಯಲ್ಲ, ನಿನಗೆಷ್ಟು ಸೊಕ್ಕು) ಅಂದ. ನಾನು ಮುಚ್ಕಂಡ್ ವೋಗಲೋ ಅಂದೆ. ಅವನ ಪಿತ್ತ ನೆತ್ತಿಗೇರಿತು, ’ಐ ವಿಲ್ ಟೀಚ್ ಯು ಎ ಲೆಸನ್’ ಅಂದು ಕೂಗಾಡತೊಡಗಿದ. ನನಗೂ ಮನಸ್ಸಿನಲ್ಲೇ, ಇವತ್ತು ಏನಾದ್ರೂ ಆಗಲಿ ನಾಲಕ್ ಜನಾನ ಕರ್ಕೊಂಡು ಬಂದು ಈ ನನ್ಮಗನ್ನ ಹೊಡೆಸ್ಬೇಕು ಅನ್ತ ಅಂದುಕೊಳ್ತಿದ್ದೆ. ಅಷ್ಟರಲ್ಲಿ ಅವನ ಮೇಲಧಿಕಾರಿ ಹೊರಗೆ ಬಂದವನು ಇವನು ಕೂಗಾಡುತ್ತಿದ್ದುದನ್ನು ಕಂಡು ’ಏಯ್ ಪೊನ್ನುಸ್ವಾಮಿ, ಇದೇನಯ್ಯ ಯಾವಾಗ್ಲೂ ಗೇಟಲ್ಲಿ ಏನಾದ್ರೂ ಸೀನ್ ಕ್ರಿಯೇಟ್ ಮಾಡ್ತಾ ಇರ್ತೀಯ, ನೀನು ಹೀಗೇ ಮಾಡ್ರಾ ಇದ್ರೆ ನಿನ್ನ ಆ ಡ್ಯೂಟಿಗೆ ಹಾಕೋದೇ ಒಳ್ಳೇದು ಅಂದ. ಆ ಡ್ಯೂಟಿ ಅಂದರೇನು ನನಗೆ ಗೊತ್ತಿಲ್ಲ ಆದರೆ ಆ ಪೊನ್ನುಸ್ವಾಮಿಗೆ ಅರ್ಥವಾಯಿತು. ಇದು ಕಾರ್ಖಾನೆಯ ನನ್ನ ಮೊದಲದಿನದ ಅನುಭವ.
ಇನ್ನೊಂದು ಅನುಭವವನ್ನು ಹಂಚಿಕೊಳ್ಳಬಯಸುತ್ತೇನೆ. ಕಾರ್ಯಾಗಾರದಲ್ಲಿ ಕೆಲಸ ಮಾಡಲು ಹಲವು ಉಪಕರಣಗಳ ಅಗತ್ಯವಿರುತ್ತದೆ. ಎಲ್ಲರಿಗೂ ಸಿಗಲಿ ಎಂಬ ಕಾರಣದಿಂದ ಕೆಲ ವಿಶೇಷ ಉಪಕರಣಗಳನ್ನು ಕೋಠಿಯಲ್ಲಿ ಸಂಗ್ರಹಿಸಿರುತ್ತಾರೆ. ಅದಕ್ಕೊಬ್ಬ ಯಜಮಾನ ಇರುತ್ತಾನೆ. ಹೀಗೇ ನನಗೊಂದು ಉಪಕರಣ ಬೇಕಾಯ್ತು. ಅಲ್ಲಿಗೆ ಹೋಗಿ ವಾಡಿಕೆಯಂತೆ ಅಲ್ಲಿದ್ದ ಚೀಟಿಯಲ್ಲಿ ನನ್ನ ವಿವರ ಬರೆದು ಬೇಕಾದ ಉಪಕರಣದ ಬಗ್ಗೆ ಬರೆದೆ. ಕನ್ನಡದಲ್ಲಿದ್ದ ನನ್ನ ಚೀಟಿಯನ್ನು ನೋಡಿ ಅಲ್ಲಿದ್ದ ಕನ್ನಡಿಗನೇ ಆದ ತರಿಯಪ್ಪ ಎಂಬಾತ ಸಿಡಿಮಿಡಿಗೊಂಡ. ಅಲ್ಲಪ್ಪಾ ಇಷ್ಟುದಿನ ಇಲ್ಲಿದ್ದ ಆ ತಮಿಳು ವ್ಯಕ್ತಿ ಏನೂ ಕೊಸರದೆ ಉಪಕರಣಗಳನ್ನು ಕೊಡುತ್ತಿದ್ದನಲ್ಲ ನಿನ್ನದೇನು ರಗಳೆ ಎಂದೆ. ಇದು ಕೇಂದ್ರಸರ್ಕಾರದ ಕಾರ್ಖಾನೆ, ಇಲ್ಲಿ ಕನ್ನಡ ನಡೆಯೋಲ್ಲ, ನಿನಗೆ ತಾಕತ್ತಿದ್ದರೆ ಈ ಚೀಟಿಯನ್ನು ಕನ್ನಡದಲ್ಲಿ ಮುದ್ರಿಸುವಂತೆ ಮಾಡು ಆಮೇಲೆ ಕನ್ನಡದಲ್ಲಿ ಭರ್ತಿ ಮಾಡು ಎಂದು ಇನ್ನೇನೆಲ್ಲ ಮಾತನಾಡಿದ. ನಾನು ಉತ್ತರಿಸುತ್ತಾ ಮುದ್ರಣದ ಮಾತೆಲ್ಲ ಬೇಡ, ಯಾವುದೇ ಕೇಂದ್ರಸರ್ಕಾರದ ಸಂಸ್ಥೆಯಲ್ಲಿ ತ್ರಿಭಾಷಾ ಸೂತ್ರವಿದೆ, ನಾನು ಪ್ರಾದೇಶಿಕ ಭಾಷೆ ಕನ್ನಡವನ್ನು ಬಳಸಿದ್ದೇನೆ ಎಂದೆ. ಸುತ್ತ ಇತರೆಲ್ಲ ಕಾರ್ಮಿಕರು ಜಮಾಯಿಸಿ ಅವನಿಗೆ ಬುದ್ದಿ ಹೇಳಿದರು. ನಾನು ಗೆದ್ದೆನೆಂದು ಬೀಗಿದೆ.
ಮರುದಿನ ಭದ್ರತಾದಳದ ಮುಖ್ಯಸ್ಥರು ದೂರವಾಣಿಯ ಮೂಲಕ ನನ್ನನ್ನು ಅವರ ಕಚೇರಿಗೆ ಕರೆದರು. ತರಿಯಪ್ಪನು ಪರಿಶಿಷ್ಟ ವರ್ಗಕ್ಕೆ ಸೇರಿದವನೆಂದೂ ನಾನು ಗುಂಪು ಕಟ್ಟಿಕೊಂಡು ಹೋಗಿ ಅವನನ್ನು ಜಾತಿಯ ಹೆಸರಲ್ಲಿ ನಿಂದಿಸಿದೆನೆಂದೂ ದೂರು ಬಂದಿರುವುದರಿಂದ ನನ್ನನ್ನು ವಿಚಾರಿಸಲು ಅಲ್ಲಿಗೆ ಕರೆದಿದ್ದರು. ವಾಸ್ತವವಾಗಿ ನಡೆದ ವಿಷಯವೇನೆಂದು ವಿವರಿಸಿ ನನ್ನ ಹೇಳಿಕೆಯನ್ನು ಬರೆದುಕೊಟ್ಟೆ. ತರಿಯಪ್ಪನನ್ನು ಕರೆಸಿ ಏನ್ರೀ ನಿಮಗೆ ಕನ್ನಡ ಗೊತ್ತಿಲ್ಲವಾದರೆ ಮೇಲಧಿಕಾರಿಗೆ ಹೋಗಿ ಹೇಳಬಹುದಿತ್ತು, ನೀವೇ ಏನೇನೆಲ್ಲ ಮಾತನಾಡಿ ಈಗ ಜಾತಿಯ ಪ್ರಸ್ತಾಪ ಮಾಡುತ್ತಿದ್ದೀರಿ ಎಂದರು. ಅದಕ್ಕಾತ ಇದೇನ್ ಸಾರ್ ನೀವು ನನಗೆ ಸಪೋರ್ಟ್ ಮಾಡುವುದು ಬಿಟ್ಟು ಅವರ ಕಡೇನೇ ಮಾತಾಡ್ತೀರಿ, ನಾನು ಸೆಲ್ ಗೆ ಹೋಗಬೇಕಾಗುತ್ತೆ ಎಂದು ದಬಾಯಿಸಿದ. ಅದಕ್ಕವರು ನೀನೆಲ್ಲಿಗೇ ಹೋದರೂ ಇದೇ ಗೇಟಿನಲ್ಲಿ ಒಳಗೆ ಬರಬೇಕು ಹೊರಗೆ ಹೋಗಬೇಕು, ನಿನ್ನದೆಲ್ಲ ನಮಗೆ ಗೊತ್ತಿದೆ ಅಂದರು. ಅಲ್ಲಿಗೆ ಕೇಸು ಬಿದ್ದುಹೋಯಿತು.
ಹೀಗೆ ನಮ್ಮದೇ ನುಡಿಯ ಬಳಕೆಗೆ ಏನೆಲ್ಲ ತೊಡಕುಗಳು ಹಾಗೂ ಅದನ್ನು ನಿವಾರಿಸಿಕೊಳ್ಳುವಲ್ಲಿ ಇರಬೇಕಾದ ಇಚ್ಛಾಶಕ್ತಿಯ ಕುರಿತು ಹೇಳಿದ್ದೇನೆ. ನೀವು ಮೆಚ್ಚಿಕೊಳ್ಳಬೇಕೆಂಬುದು ನನ್ನ ಬಯಕೆಯಲ್ಲ, ದೈನಂದಿನ ನಡಾವಳಿಗಳಲ್ಲಿ ಕನ್ನಡದ ಬಳಕೆಗೆ ಈ ಬರಹ ಉದ್ದೀಪನವಾಗಲಿ ಎಂಬುದಷ್ಟೇ ನನ್ನ ಹಿರಿಯಾಸೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ