ನವೆಂಬರ್
೧೫ನೇ ತಾರೀಖು ತೆಸಿಯೇ ಸ್ವಾಮಿಯವರ ಜನ್ಮದಿನ. ಬೆಂಗಳೂರು, ಮೈಸೂರು ಮತ್ತು ಶೀಮೊಗ್ಗೆ ಧರ್ಮಪ್ರಾಂತ್ಯಗಳು
ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾದಂಥ ಅನುಪಮ ಚೇತನ ಈ ತೆಸಿಯೇ ಸ್ವಾಮಿಯವರು. ಫ್ರಾನ್ಸ್ ದೇಶದ ಐಷಾರಾಮೀ
ಜೀವನವನ್ನು ಬದಿಗೊತ್ತಿ ಕ್ರಿಸ್ತರಾಜ್ಯವನ್ನು ಪಸರಿಸುವ ಕಷ್ಟಕರ ಹಾದಿ ತುಳಿದ ಇವರು ಏಳು ದಶಕಗಳ ಕಾಲ
ನಮ್ಮ ನಾಡಿನಲ್ಲಿ ಜೀವ ಸವೆಸಿದವರು. ಅಂದು ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಅದೇ ತಾನೇ ಪ್ರವರ್ಧಿಸುತ್ತಿತ್ತು.
ಇಲ್ಲಿ ಧರ್ಮಪ್ರಚಾರ ನಡೆಸಿದ್ದ ಜೆಸ್ವಿತರು ತಂತಮ್ಮ ನಾಡುಗಳಿಗೆ ಹಿಂದಿರುಗಿ ಐವತ್ತು ವರ್ಷಗಳಾಗಿದ್ದವು.
ಸ್ಥಳೀಯ ಕ್ರೈಸ್ತರು ಆಧ್ಯಾತ್ಮಿಕ ಪೋಷಣೆಯಿಲ್ಲದೆ ಜ್ಞಾನಸ್ನಾನ ಪೂಜೆ ಸತ್ಪ್ರಸಾದಗಳಿಲ್ಲದೆ ಮದುವೆ
ಮತ್ತು ಸಾವುಗಳನ್ನು ಮಂತ್ರಿಸುವವರಿಲ್ಲದೆ ಸೊರಗಿದ್ದರು. ಉಪದೇಶಿಗಳಷ್ಟೇ ಜಪತಪಗಳನ್ನು ಮುಂದುವರಿಸಿದ್ದರು.
ಫ್ರಾನ್ಸ್
ದೇಶದ ಮಿಷನರಿಗಳು ಧರ್ಮಸೇವೆಯ ಹೊಣೆ ಹೊತ್ತುಕೊಂಡಿದ್ದರಾದರೂ ಅವರ ವ್ಯಾಪಕ ಚಟುವಟಿಕೆಗೆ ಅಪಾರ ಹಣ
ಮತ್ತು ಗುರುವರ್ಯರ ಅವಶ್ಯಕತೆ ಇತ್ತು. ದೇಶೀಯ ಗುರುಗಳನ್ನು ಹುಟ್ಟುಹಾಕುವ ಪದ್ಧತಿ ಇನ್ನೂ ಶುರುವಾಗಿರಲಿಲ್ಲ.
ಪ್ರತಿಯೊಂದಕ್ಕೂ ಯೂರೂಪಿನತ್ತಲೇ ನೋಡಬೇಕಾದಂಥ ಪರಿಸ್ಥಿತಿ ಇತ್ತು. ಫ್ರೆಂಚರು ವಸಾಹತು ಹೊಂದಿದ್ದ
ಪಾಂಡಿಚೇರಿಯಲ್ಲಿ ಫ್ರೆಂಚ್ ಮಿಷನರಿಗಳು ಕೇಂದ್ರ ಕಚೇರಿ ಇಟ್ಟುಕೊಂಡು ಗುರುಗಳಿಗೆ ನಿರ್ದೇಶನ ನೀಡುತ್ತಿದ್ದರು.
ಅಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದ್ಯುಬುವಾ, ಶಾರ್ಬೊನೊ, ಶೆವಾಲಿಯೇ ಮುಂತಾದವರು ಕ್ರಿಸ್ತರಾಜ್ಯದ
ಸಸಿಗೆ ನೀರೆರೆದು ಪೋಷಿಸಿದರು. ತೆಸಿಯೇ ಅವರು ಕೂಡಾ ಇಂಥ ಮಹನೀಯರಲ್ಲಿ ಒಬ್ಬರು.
೧೮೫೩ರಲ್ಲಿ
ಫ್ರಾನ್ಸ್ ದೇಶದಲ್ಲಿ ಹುಟ್ಟಿದ ತೆಸಿಯೇ ಅವರು ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಅಂದರೆ ೧೮೭೯ರಲ್ಲಿ
ಗುರುಪಟ್ಟ ಪಡೆದು ಅದೇ ವರ್ಷ ಬೆಂಗಳೂರಿಗೆ ಬಂದರು. ಆರು ತಿಂಗಳ ಕಾಲ ಇಲ್ಲಿ ಕನ್ನಡವನ್ನು ಅಭ್ಯಸಿಸಿದ
ಅವರು ಇಂದು ತಮಿಳುನಾಡಿಗೆ ಸೇರಿಹೋಗಿರುವ ಹೊಸೂರಿನ ಸಮೀಪದ ಮತ್ತಿಕೆರೆಗೆ ನಿಯುಕ್ತರಾದರು. ಹೊಸೂರಿಗೆ
ಸಮೀಪವಿರುವ ಮತ್ತಿಕೆರೆ, ಮರಂದನಹಳ್ಳಿ, ದಾಸರಹಳ್ಳಿ, ತಳಿ ಮುಂತಾದ ಧರ್ಮಕೇಂದ್ರಗಳು ಅಂದು ಕನ್ನಡನಾಡಿನ
ಭಾಗಗಳೇ ಆಗಿದ್ದು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರು ಕನ್ನಡದಲ್ಲಿಯೇ ಜಪತಪಗಳನ್ನು ಮಾಡುತ್ತಿದ್ದರೆಂಬುದು
ಗಮನಾರ್ಹ.
ಅಲ್ಲಿ
ಕೆಲ ತಿಂಗಳು ಕಳೆದ ಮೇಲೆ ತೆಸಿಯೇ ಸ್ವಾಮಿಯವರನ್ನು ಶೀಮೊಗ್ಗೆಗೆ ಕಳಿಸಲಾಯಿತು. ಮಲೆನಾಡಿನ ಸುಂದರ
ಪರಿಸರದಲ್ಲಿ ಮೂರುವರ್ಷಗಳ ಕಾಲ ಕ್ರಿಸ್ತನ ಸೇವೆ ಮಾಡಿದ ಆ ಉತ್ಸಾಹೀ ತರುಣ ೧೮೮೪ರ ಜನವರಿಗೆ ಬೆಂಗಳೂರಿನ
ಶಿಲ್ವೆಪುರಕ್ಕೆ ಬಂದರು. ಆಗಷ್ಟೇ ಶಿಲ್ವೆಪುರವು ಕ್ಷಾಮ ಮತ್ತು ಪ್ಲೇಗಿನಿಂದ ಅನಾಥರಾಗಿದ್ದವರ ಪುನರ್ವಸತಿ ಕೇಂದ್ರವಾಗಿ ರೂಪುಗೊಂಡಿತ್ತು.
ಆ ಹೊಸ ಶಿಬಿರದ ಜನರಿಗೆ ಒಂದು ವರ್ಷಕಾಲ ಕೃಷಿ ಚಟುವಟಿಕೆಗಳ ಕುರಿತ ಮಾರ್ಗದರ್ಶನ ನೀಡಿದ ತೆಸಿಯೇ ಸ್ವಾಮಿಗಳು
೧೮೮೫ರ ಜೂನ್ ತಿಂಗಳಲ್ಲಿ ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಊರಿಗೆ ವರ್ಗವಾದರು.
ಗಂಜಾಮು ಮೈಸೂರು ಪ್ರಾಂತ್ಯದ ಪ್ರಾಚೀನ ಕ್ರೈಸ್ತಕೇಂದ್ರ.
ಅಲ್ಲಿದ್ದ ಕ್ರೈಸ್ತರೆಲ್ಲ ಸಿರಿವಂತ ಒಕ್ಕಲುಮಕ್ಕಳು. ಜೆಸ್ವಿತರ ನಿರ್ಗಮನದ ನಂತರ ತಮಗೆ ಗುರುಗಳ ಕೊರತೆಯಾದಾಗ
ಟಿಪ್ಪುಸುಲ್ತಾನನ ಮೂಲಕ ಗೋವೆಯವರೆಗೂ ಅಹವಾಲು ಕೊಂಡೊಯ್ದ ಜನ ಅವರು. ಅಂಥಾ ಹೋರಾಟದ ಪರಂಪರೆಯುಳ್ಳ
ಗಂಜಾಮು ತೆಸಿಯೇ ಅವರ ಕರ್ಮಭೂಮಿಯಾಯಿತು. ಅಲ್ಲಿದ್ದುಕೊಂಡೇ ಅವರು ಇಡೀ ಮೈಸೂರು ಜಿಲ್ಲೆಯಲ್ಲಿ ಸುತ್ತಾಡಿ
ಕ್ರೈಸ್ತರಿಗೆ ಅಧ್ಯಾತ್ಮದ ಪೋಷಣೆ ಮಾಡಿದರು. ಕೊಡಗಿನ ಗಡಿಯ ಕಾಡುಕುರುಬರನ್ನು ಕ್ರೈಸ್ತಧರ್ಮಕ್ಕೆ
ಬರಮಾಡಿಕೊಳ್ಳುವಲ್ಲಿ ಅವರ ಸಾಧನೆ ಗಣನೀಯ. ದೋರನಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರವನ್ನು ಜನಪ್ರಿಯಗೊಳಿಸಿ
ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ನಿರರ್ಗಳವಾಗಿ ಕನ್ನಡದಲ್ಲಿ
ಮಾತನಾಡುತ್ತಾ ಜನಸಾಮಾನ್ಯರೊಂದಿಗೆ ಆತ್ಮೀಯರಾಗಿದ್ದ ತೆಸಿಯೇ ಸ್ವಾಮಿಯವರನ್ನು ಅಂದು ಮೈಸೂರು ಧರ್ಮಪ್ರಾಂತ್ಯದ
ಬಿಷಪರಾಗಿದ್ದ ಕುವಾಡು (Mgr. Couadou) ಅವರು ೧೮೯೦ರಲ್ಲಿ ಎಂಟು ಜಿಲ್ಲೆಗಳ ಇಡೀ ಮೈಸೂರು ಪ್ರಾಂತ್ಯಕ್ಕೆ
prosecutor ಆಗಿ ನೇಮಿಸಿ ಬಿಷಪರ ಮನೆಯಲ್ಲಿಯೇ ಅವರಿಗೊಂದು ಸ್ಥಾನ ಕಲ್ಪಿಸಿದರು.
ಸುಮಾರು
ಇಪ್ಪತ್ತಾರು ವರ್ಷಗಳ ಕಾಲ ಅವರು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದರಲ್ಲದೆ ಬೆಂಗಳೂರಿನ ಮಾರ್ಥಾ
ಆಸ್ಪತ್ರೆಯಲ್ಲಿ ಆಧ್ಯಾತ್ಮಿಕ ಗುರುವಾಗಿಯೂ ಜನರಿಗೆ ಮಾರ್ಗದರ್ಶನ ನೀಡಿದರು. ಮಾರ್ಥಾ ಆಸ್ಪತ್ರೆಯಲ್ಲಿ
ನರ್ಸಿಂಗ್ ಶಾಲೆಯನ್ನು ತೆರೆದು ನೂರಾರು ಹೆಣ್ಣುಮಕ್ಕಳಿಗೆ ಕೆಲಸ ಕಲ್ಪಿಸಿದರು. ದೇಶೀ ಹೆಣ್ಣುಮಕ್ಕಳಿಗಾಗಿಯೇ
ಸಂತ ಫ್ರಾನ್ಸಿಸರ ಮೂರನೇ ಮಠವನ್ನು ಸ್ಥಾಪಿಸಿದರು. ಬೆಂಗಳೂರಿನ ಪ್ರಸಿದ್ಧ ಸಂತ ಜೋಸೆಫರ ಕಾಲೇಜನ್ನು
ಕಟ್ಟಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
೧೯೧೬ರ
ಸೆಪ್ಟೆಂಬರ್ ೪ನೇ ತಾರೀಖು ತೆಸಿಯೇ ಸ್ವಾಮಿಯವರ ಜೀವನದಲ್ಲಿ ಒಂದು ಮಹತ್ವದ ದಿನ. ಆ ದಿನ ಅವರು ಇಡೀ
ಮೈಸೂರು ಪ್ರಾಂತ್ಯಕ್ಕೆ ಮೇತ್ರಾಣಿಯಾಗಿ ನೇಮಕಗೊಂಡರು. ನಿಜ ಹೇಳಬೇಕೆಂದರೆ ಬಿಷಪ್ ಪದವಿ ಅವರಿಗೆ ಹೂವಿನ
ಹಾಸಿಗೆಯಾಗಿರಲಿಲ್ಲ. ಹಲವಾರು ಕಷ್ಟ ತೊಂದರೆಗಳನ್ನು ಅವರು ಎದುರಿಸಬೇಕಾಗಿತ್ತು. ಯೂರೋಪಿನಲ್ಲಿ ಮಹಾಯುದ್ಧ
ನಡೆಯುತ್ತಿದ್ದ ಕಾರಣ ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ಜನಜೀವನ ದುರ್ಭರವಾಗಿತ್ತು. ಗುರುಗಳ ಸಂಖ್ಯೆಯೂ
ಕಡಿಮೆಯಿತ್ತು. ಯೂರೋಪಿನ ಸಹಾಯಧನ ನಿಂತುಹೋಗಿತ್ತು. ಇಂಥ ಕಠಿಣವಾದ ದಿನಗಳಲ್ಲಿ ತೆಸಿಯೇ ಸ್ವಾಮಿಗಳು
ವಿಶಾಲ ಧರ್ಮಪ್ರಾಂತ್ಯವನ್ನು ತನ್ನ ಕಾಲುಗಳ ಮೇಲೆ ನಿಲ್ಲುವಂತೆ ಮಾಡಲು ಬಹುವಾಗಿ ಶ್ರಮಿಸಿದರು.
ಅವರ
೪೭ವರ್ಷಗಳ ದೀರ್ಘಕಾಲದ ಅವಿರತ ಸೇವೆಯ ಫಲವಾಗಿ ಅವಿಭಜಿತ ಮೈಸೂರು ಧರ್ಮಪ್ರಾಂತ್ಯವು ಇಡೀ ದೇಶದಲ್ಲಿಯೇ
ಒಂದು ಮಾದರಿ ಧರ್ಮಪ್ರಾಂತ್ಯವಾಗಿ ರೂಪುಗೊಂಡಿತು ಎಂದರೆ ಅತಿಶಯವಲ್ಲ. ಹೀಗೆ ಯೇಸುಕ್ರಿಸ್ತನ ವಿನಮ್ರ
ಸೇವಕನಾಗಿ ಹಗಲೂ ಇರುಳೂ ದುಡಿದ ಅವರು ೧೯೨೨ ಫೆಬ್ರವರಿ ೨೬ರಂದು ಸ್ವರ್ಗಸ್ಥರಾದರು. ಅಂದಿನ ಕಾಲದಲ್ಲಿ
ಬಿಷಪರ ನಿವಾಸವೂ ಪ್ರಧಾನಾಲಯವೂ ಆಗಿದ್ದ ಸಂತ ಪ್ಯಾಟ್ರಿಕ್ಕರ ದೇವಾಲಯದ ಆವರಣದಲ್ಲಿಯೇ ಅವರನ್ನು ಮಣ್ಣುಮಾಡಲಾಗಿದೆ.
ಯಾವಾಗಲಾದರೂ
ಆ ದೇವಾಲಯಕ್ಕೆ ಭೇಟಿ ನೀಡಿದಾಗ ಬಲಿಪೀಠದ ಬಳಿ ಬಲರೆಕ್ಕೆಯಲ್ಲಿ ತೆಸಿಯೇ ಸ್ವಾಮಿಗಳ ಸಮಾಧಿಕಲ್ಲನ್ನು
ನೋಡಿ ನಮಿಸೋಣ. ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಬಲವಾಗಿ ಬೇರೂರಲು ಶ್ರಮವಹಿಸಿ ನೀರೆರೆದ ಒಬ್ಬ
ಮಹಾನ್ ದೇವಸೇವಕನನ್ನು ಹೃತ್ಪೂರ್ವಕವಾಗಿ ಸ್ಮರಿಸೋಣ.