ಗುರುವಾರ, ಡಿಸೆಂಬರ್ 1, 2011

ಮಣ್ಣಿನ ದಾಖಲೆ


ಕ್ರೈಸ್ತಧರ್ಮ ನಮ್ಮ ನೆಲದ ಧರ್ಮವಲ್ಲ. ನಮ್ಮ ಮಣ್ಣಿನ ಧರ್ಮಗಳಲ್ಲಾದರೆ ಧರ್ಮಸಂಹಿತೆಗಿಂತಲೂ ಹೆಚ್ಚಾಗಿ ಪುರಾಣಪುಣ್ಯ ಕತೆಗಳು, ಉಪಕತೆಗಳು, ನೀತಿಪ್ರಧಾನ ಪ್ರಸಂಗಗಳು ಜನಜನಿತವಾಗಿವೆ. ಆದರೆ ಕ್ರೈಸ್ತಧರ್ಮವನ್ನು ಪ್ರಚುರಪಡಿಸಿದ ವಿದೇಶೀಯರು ತಮ್ಮ ಪಾಶ್ಚಾತ್ಯ ದೇಶಗಳ ಶೈಲಿಯಲ್ಲೇ ವಿಷಯ ನಿರ್ದುಷ್ಟ ಕಟ್ಟುಪಾಡಿಗೆ ಒಳಗಾದವರು. ಅದರ ಜೊತೆಜೊತೆಗೇ ಅವರು ನಮ್ಮ ನಾಡಿಗೆ ಬಂದಾಗ ಅವರಿಗೆ ಭಾಷೆಯ/ಭಾಷಾಂತರದ ಸಂದಿಗ್ದತೆಯೂ ಕಾಡುತ್ತಿತ್ತು. ಈ ಒಂದು ಹಿನ್ನೆಲೆಯಲ್ಲಿ ಆ ಕಾಲದ ಸಂದರ್ಭವನ್ನು ವಿವೇಚಿಸಿದಾಗ ವಿದೇಶೀ ಪಾದ್ರಿಗಳು ಹಾಗೂ ಕ್ರೈಸ್ತ ಜನಸಾಮಾನ್ಯರ ನಡುವೆ ಸ್ಥಳೀಯರೇ ಆದ ಉಪದೇಶಿಗಳು ಪ್ರಮುಖ ಸೇತುವೆಯಾಗಿ ನಿಲ್ಲುವುದನ್ನು ಕಾಣುತ್ತೇವೆ.
ಒಂದೆಡೆ ಈ ಉಪದೇಶಿಗಳು ವಿದೇಶೀ ಪಾದ್ರಿಗಳಿಗೆ ಕನ್ನಡ ಕಲಿಸುವ ಗುರುಗಳಾಗಿದ್ದರೆ ಅದೇ ನೇರದಲ್ಲಿ ಆ ಪಾದ್ರಿಗಳು ಹೇಳುವ ತತ್ತ್ವಗಳಿಗೆ ದೇಶೀಯ ನೆಲೆಯಲ್ಲಿ ತಕ್ಕ ಪದಗಳನ್ನು ಸಂಯೋಜಿಸಿ ಜನರಿಗೆ ತಲಪಿಸುವ ಹೊಣೆಗಾರಿಕೆಯುಳ್ಳವರೂ ಆಗಿದ್ದರು.
ನಮ್ಮ ದೇಶೀಯ ಸಮಾಜಕ್ಕೆ ಅತಿ ಪುರಾತನ ಧಾರ್ಮಿಕ ಆಕರಗಳೆಂದರೆ ವೇದಗಳು, ಧರ್ಮಪ್ರವರ್ತನ ಸೂತ್ರ, ತೀರ್ಥಂಕರ ಚರಿತ್ರೆ, ಷಟ್‌ಸ್ಥಲಸಿದ್ಧಾಂತ ಮತ್ತು ದ್ವೈತಾದ್ವೈತಗಳು. ಇವೆಲ್ಲವುಗಳಲ್ಲಿ ಅತಿ ಪ್ರಾಚೀನವಾದುದು ವೇದಗಳೇ ಆದ್ದರಿಂದ ಕ್ರೈಸ್ತರ ಧರ್ಮಗ್ರಂಥವನ್ನು ವೇದಗಳಿಗೆ ಸಮನಾಗಿ ಪರಿಗಣಿಸುವುದಾಗಲೀ ಅಥವಾ ಚತುರ್ವೇದಗಳ ಸಾಲಿನಲ್ಲಿಟ್ಟು ಸತ್ಯವೇದ ಎಂದು ಕರೆಯುವುದಾಗಲೀ ಈ ಉಪದೇಶಿಗಳಿಂದಲೇ ಸಾಧ್ಯ. ಆದರೆ ಕನ್ನಡನಾಡು ಮಾತ್ರವಲ್ಲ ಇಡೀ ದಕ್ಷಿಣ ಇಂಡಿಯಾದಲ್ಲಿ ಕ್ರೈಸ್ತಧರ್ಮ ಪ್ರಚಾರವನ್ನು ನಡೆಸಿದ ಜೆಸ್ವಿತರಾಗಲೀ ಫ್ರೆಂಚ್ ಮಿಷನ್ನಿನವರಾಗಲೀ ಯಾರೂ ಈ ಉಪದೇಶಿಗಳನ್ನು ತಮ್ಮ ವರದಿಗಳಲ್ಲಿ ದಾಖಲಿಸಲಿಲ್ಲವೆನ್ನುವುದು ವಿಷಾದಕರ ಸಂಗತಿ.
ಮೇಲೆ ಹೇಳಿದ ಮತಪ್ರಚಾರಕರಿಗೆ ತಾವು ಎಷ್ಟು ಮಂದಿಗೆ ಕ್ರೈಸ್ತದೀಕ್ಷೆ ಕೊಟ್ಟೆವೆನ್ನುವ ಅಂಕಿಸಂಖ್ಯೆಗಳೇ ಮುಖ್ಯವಾಗುತ್ತವೆ ಹೊರತು ಎಂಥಾ ಜನರಿಗೆ ತಾವು ದೀಕ್ಷೆಯನ್ನು ಧಾರೆ ಎರೆದೆವೆನ್ನುವುದು ಮುಖ್ಯವಾಗುವುದಿಲ್ಲ. ಹಾಗೇನಾದರೂ ಉಲ್ಲೇಖವಿದ್ದಲ್ಲಿ ವ್ಯಕ್ತಿಯೊಬ್ಬನ ದೀಕ್ಷಾಸಂದರ್ಭದಲ್ಲಿ ನಡೆದ ಘರ್ಷಣೆ, ಅಲ್ಲಿನ ಪಾಳೇಗಾರನ ಅಥವಾ ಜನನಾಯಕನ ಅಥವಾ ಅರಸನ ಪಾತ್ರಗಳು ಚಿತ್ರಿತವಾಗುವ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಆ ವ್ಯಕ್ತಿಯನ್ನು ಉಲ್ಲೇಖಿಸಲಾಗಿರುತ್ತದೆ. ಇನ್ನೆಲ್ಲಿಯೂ ಹೊಸಕ್ರೈಸ್ತರ ಮೂಲಹೆಸರುಗಳನ್ನು ಪ್ರಸ್ತಾಪಿಸಿರುವುದೇ ಇಲ್ಲ. ಹೀಗೊಬ್ಬ ಬ್ರಾಹ್ಮಣ ಕ್ರೈಸ್ತನಾದ, ಹೀಗೊಬ್ಬ ಶೈವಸಂನ್ಯಾಸಿ ಕ್ರೈಸ್ತನಾದ, ಅಲ್ಲೊಬ್ಬ ಹೆಂಗಸು ಕ್ರೈಸ್ತಳಾದಳು, ಈ ಊರಿನಲ್ಲಿ ಇಷ್ಟು ಸಂಖ್ಯೆಯ ಮಂದಿ ಕ್ರೈಸ್ತರಾದರು ಎಂಬುದನ್ನಷ್ಟೇ ಕಾಣುತ್ತೇವೆ.
ಆಮೇಲೆ ಆ ಹೊಸಕ್ರೈಸ್ತರ ಪಾಡೇನಾಯಿತು, ಅವರ ಬದುಕು ಆಚಾರ ವಿಚಾರಗಳು ತೀವ್ರತರ ಬದಲಾವಣೆಗಳನ್ನು ಕಂಡವೇ, ಅವರಿಂದ ಸೃಷ್ಟಿಯಾದ ಜನಪದವೇನಾದರೂ ಇತ್ತೇ, ಅವರ ಧರ್ಮದೊಂದಿಗೇನೆ ಜನಪದವೂ ಮುಂಪೀಳಿಗೆಗಳಿಗೆ ಹರಿದು ಬಂತೇ ಎಂಬುದನ್ನು ತಿಳಿಸುವ ದಾಖಲೆಗಳಿಲ್ಲ. 

ಕಾಮೆಂಟ್‌ಗಳಿಲ್ಲ: