ಶನಿವಾರ, ಅಕ್ಟೋಬರ್ 20, 2012

ಚಿತ್ರಕಲ್ಲುದುರ್ಗದ ತಾಯಿ

ಹುಬ್ಬಳ್ಳಿಯ ಕಥೋಲಿಕರಾದ ಮಾನ್ಯ ಫ್ರಾನ್ಸಿಸ್ ಎಂ ನಂದಗಾಂವ್ ಅವರು ಕ್ರೈಸ್ತ ಸಾಹಿತ್ಯಲೋಕಕ್ಕೆ ಅಪರಿಚಿತರೇನಲ್ಲ. ಪ್ರಜಾವಾಣಿಯ ಸಂಪಾದಕ ವರ್ಗದಲ್ಲಿರುವ ಅವರ ಬರಹಗಳು ಒಳ್ಳೆ ಹದ ಕಂಡಿವೆ. ಅವರ ಐದು ಕಥಾಸಂಕಲನಗಳೂ ಎರಡು ಅನುವಾದಿತ ಕೃತಿಗಳೂ ವೈಜ್ಞಾನಿಕ ಲೇಖನಗಳೂ ಪ್ರಕಟವಾಗಿವೆ. ಜಾನಪದ ಅಧ್ಯಯನವಾಗಿ ’ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ’ ಒಂದು ವಿಶಿಷ್ಟ ಹೊಳಹು ನೀಡಿದ ಪುಸ್ತಕ.

ಇವರ ಇತ್ತೀಚಿನ ಪುಸ್ತಕ ’ಹಾರೊಬೆಲೆಯ ಚಿತ್ರಕಲ್ಲುದುರ್ಗದ ಮಾತೆ’.

ಅರಿತೋ ಅರಿಯದೆಯೋ ಮರಿಯಾಮಾತೆಯ ಒಂದು ಸ್ವರೂಪದ ಮೂಲಕ ಒಂದು ಜಾನಪದ ಪಳೆಯುಳಿಕೆಯನ್ನು ತಮ್ಮ ಎದೆಯ ಹಣತೆಯಲ್ಲಿ ಕಾಪಾಡುತ್ತಾ ಬಂದಿರುವ ಹಾರೋಬೆಲೆಯ ಕ್ರೈಸ್ತ ಜನಪದರಿಗೆ ಈ ಪುಸ್ತಕವನ್ನು ಅರ್ಪಿಸಿರುವುದು ಅತ್ಯಂತ ವಿಶಿಷ್ಟವಾಗಿದೆ. ಡೋಂಗಿ ಜಾನಪದ ವಿದ್ವಾಂಸರ ನಡುವೆ ಫ್ರಾನ್ಸಿಸರ ಈ ಕೃತಿ ಅತ್ಯಂತ ಮೇರುಮಟ್ಟದಲ್ಲಿ ನಿಲ್ಲುವುದಾಗಿದೆ. ಈ ಪುಸ್ತಕದ ಮೂಲಕ ಪ್ರೌಢಜಾನಪದ ಅಧ್ಯಯನಕ್ಕೆ ಮುಂದಾಗಿರುವ ಫ್ರಾನ್ಸಿಸರ ನಿಲುವನ್ನು ಸ್ವತಃ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಡಾ. ಬೆರ್ನಾಡ್ ಮೊರಾಸ್ ಅವರು ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ. ಮೊನ್ನೆಯಷ್ಟೇ ತೀರಿಕೊಂಡ ಹಿರಿಯ ಜಾನಪದ ತಜ್ಞ ಪ್ರೊ. ಡಿ ಲಿಂಗಯ್ಯನವರು ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಇದೊಂದು ಜನಾಂಗೀಯ ಅಧ್ಯಯನವೆಂದು ಕರೆದಿದ್ದಾರೆ. ಮತ್ತೊಬ್ಬ ಜಾನಪದ ವಿದ್ವಾಂಸ ಮೀರ್ ಸಾಬಿಹಳ್ಳಿ ಶಿವಣ್ಣನವರು ನಲ್ಮೆಯ ಮಾತುಗಳನ್ನಾಡುತ್ತಾ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ಮೈಸೂರು ಆಸುಪಾಸಿನಲ್ಲಿ ಕ್ರೈಸ್ತರ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನು ವಿವರಿಸುವ ಪರಿ ಇಲ್ಲಿಯವರೆಗೂ ಯಾರ ಗಮನಕ್ಕೂ ಬಾರದ ಅನೇಕ ಸಂಗತಿಗಳನ್ನು ತಿಳಿಸುವಲ್ಲಿ ಸಫಲವಾಗಿವೆ ಎಂದು ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಪುಸ್ತಕದ ಒಡಲಲ್ಲಿ ಆರು ಅಧ್ಯಾಯಗಳಿದ್ದು ಫ್ರಾನ್ಸಿಸರು ಮರಿಯಾಮಾತೆಯ ಚಿತ್ರದುರ್ಗದ ನಂಟು, ಚಿತ್ರಕಲ್ಲು ಮಾತೆಯ ಪದಗಳ ವರ್ಗೀಕರಣ, ಕ್ರೈಸ್ತ ಜಾನಪದ ಸಂಸ್ಕೃತಿ ಇತಿಹಾಸಗಳ ಹಾಗೂ ಕನ್ನಡ ಜಾನಪದ ಕಥನ ಕಾವ್ಯಗಳ ಬೆಳಕಿನಲ್ಲಿ ಅಧ್ಯಯನ ಮಾಡಿ ಓದುಗರಿಗೆ ವಸ್ತುನಿಷ್ಠ ಮಾಹಿತಿ ನೀಡಿದ್ದಾರೆ. ಸುಂದರವಾದ ರೇಖಾಚಿತ್ರಗಳು ಪುಸ್ತಕದ ಅಂದ ಹೆಚ್ಚಿಸುತ್ತಾ ಓದುಗನಿಗೆ ಆಸಕ್ತಿ ಮೂಡಿಸುತ್ತಿವೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಆಯಾ ಅಧ್ಯಾಯದ ಅಡಿ ಟಿಪ್ಪಣಿಗಳನ್ನು ಕೊಡಲಾಗಿದೆ.

ಕನ್ನಡ ಕ್ರೈಸ್ತ ಜಾನಪದದ ಅಧ್ಯಯನದ ವ್ಯಾಪ್ತಿಗೆ ಇನ್ನೂ ಸೇರಬೇಕಾದ ಬೀದರದ ಭಜನೆ ಸಂಸ್ಕೃತಿಯಂತೆಯೇ ಹಾರೋಬೆಲೆಯ ಚಿತ್ರಕಲ್ಲು ದುರ್ಗದ ಮಾತೆಯ ಸ್ವರೂಪದ ಹಿನ್ನೆಲೆ ಕುರಿತೂ ಅನೇಕ ಸತ್ಯಗಳು ಕಾಲಗರ್ಭದಲ್ಲಿ ಹೂತುಹೋಗಿವೆ. ನಂದಗಾಂವ್ ಫ್ರಾನ್ಸಿಸರು ಈ ಕುರಿತು ಅಪಾರ ಆಸಕ್ತಿ ತಳೆದು ಶಾಸ್ತ್ರೀಯವಾಗಿ ಅಭ್ಯಸಿಸಿ ಜಾನಪದ ತೌಲನಿಕ ಒರೆಗೆ ಹಚ್ಚಿರುವುದು ಕನ್ನಡ ಕ್ರೈಸ್ತರು ತಮ್ಮ ಇತಿಹಾಸದ ಕುರಿತಂತೆ ಹೆಮ್ಮೆ ಪಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ.

ಇದೇ ಅಕ್ಟೋಬರ್ ಏಳರಂದು ಜಪಮಾಲೆ ಮಾತೆಯ ಹಬ್ಬದಂದು ಹಾರೋಬೆಲೆಯಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಚಿತ್ರಕಲ್ಲುದುರ್ಗದ ಮಾತೆಯು ಹಾರೋಬೆಲೆಯ ಆಸ್ತಿಕ ಜನರ ಕಣ್ಮಣಿಯಾಗಿರುವಂತೆಯೇ ಅದರ ಸಾಂಸ್ಕೃತಿಕ ಅಧ್ಯಯನದ ಈ ಪುಸ್ತಕವೂ ಅವರ ಅಭಿಮಾನದ ಮಾಸ್ಟರ್ ಪೀಸ್ ಆಗಲೆಂದು ಆಶಿಸುತ್ತೇನೆ.

ಕಾಮೆಂಟ್‌ಗಳಿಲ್ಲ: