ಬುಧವಾರ, ಮಾರ್ಚ್ 20, 2013

ಕೆಂಪ್ಟಿ ಫಾಲ್ಸ್

ಮಸ್ಸೂರಿಗೆ ಹೋದವರು ಕೆಂಪ್ಟಿ ಜಲಪಾತವನ್ನು ನೋಡದೆ ಹಿಂದಿರುಗಿದರೆ ಆ ಪ್ರಯಾಣ ವ್ಯರ್ಥವೇ ಸರಿ. ಮಸೂರಿಯಿಂದ ಚಕ್ರಾತಾ ರಸ್ತೆಯಲ್ಲಿ ಸುಮಾರು ೧೮ ಕಿಲೋಮೀಟರು ದೂರದಲ್ಲಿರುವ ಕೆಂಪ್ಟಿ ಫಾಲ್ ಒಂದು ಮನಮೋಹಕ ತಾಣ. ಡೆಹರಾದೂನಿನಿಂದಲೂ ಸರಿಸುಮಾರು ಅಷ್ಟೇ ದೂರವಿದ್ದು ಅಲ್ಲಿಂದಲೂ ನೇರವಾಗಿ ಬರಬಹುದು. ಸಮುದ್ರ ಮಟ್ಟದಿಂದ ೧೩೬೪ಮೀಟರು (೪೪೭೫ ಅಡಿ)ಗಳ ಮೇಲೆ ಇರುವ ಈ ಪ್ರವಾಸಿ ತಾಣವು ಹೆಚ್ಚಿನ ಜನರಿಗೆ ತಿಳಿದಿಲ್ಲ. ಜಾನ್ ಮೆಕಿನನ್ ಎಂಬ ಬ್ರಿಟಿಷ್ ಅಧಿಕಾರಿಯು ೧೮೩೫ರಲ್ಲಿ ಈ ತಾಣವನ್ನು ಅಭಿವೃದ್ಧಿ ಪಡಿಸಿದನೆಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ರಮಣೀಯ ದೃಶ್ಯಾವಳಿ, ವಿಶಾಲವೂ ವಿಸ್ತಾರವೂ ಆದ ಪರಿಸರದ ಸೊಬಗು, ರುದ್ರಗಾಂಭೀರ್ಯದಲ್ಲಿ ಧುಮ್ಮಿಕ್ಕುವ ನೀರು ಇವುಗಳ ನಡುವೆ ಸಮಯ ಕಳೆಯುವುದೇ ತಿಳಿಯದ ಈ ತಾಣ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಬಿಡುವಾದಾಗ ಈ ಸುಂದರ ಜಾಗದಲ್ಲಿ ಶಿಬಿರ ಹೂಡಿ ಚಹಾ ಸವಿಯುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ CAMP TEA ಎಂಬ ಹೆಸರುಂಟಾಗಿ ಅದೇ ಆಮೇಲೆ KEMPTY ಆಗಿದೆ ಎನ್ನಲಾಗಿದೆ.
ಬಂಗ್ಲೋ ಕಿ ಕಂಡಿ ಎಂಬ ಹಳ್ಳಿಯಲ್ಲಿ ಸಣ್ಣ ಚಿಲುಮೆಯಾಗಿ ಹುಟ್ಟುವ ಈ ನೀರು ಹಲವು ತೊರೆಗಳನ್ನು ಕೂಡಿಕೊಂಡು ಕೆಂಪ್ಟಿಯ ಬಳಿ ಬಂಡೆಗಳ ಬಳಿಸಾರಿ ೪೦ಅಡಿಗಳ ಎತ್ತರದಿಂದ ಧುಮ್ಮಿಕ್ಕುತ್ತದೆ. ಐದು ಶಾಖೆಗಳಾಗಿ ಬೀಳುವ ಜಲಧಾರೆಗೆ ಮೈಯೊಡ್ಡಿ ಬೆಚ್ಚನೆಯ ಬಿಸಿಲಿಗೆ ತುಂತುರ ನೀರ ಹನಿಯ ಮೇಲೆ ಅರಳುವ ನವಿರಾದ ಕಾಮನಬಿಲ್ಲನ್ನು ಸವರುತ್ತಾ, ಶುಭ್ರಸ್ಫಟಿಕ ನೀರಲ್ಲಿ ಈಜುತ್ತಾ, ಗೆಳೆಯ ಗೆಳತಿಯರತ್ತ ನೀರು ಎರಚುತ್ತಾ ಹಾಡುತ್ತ ಕೂಗುತ್ತಾ ಇಲ್ಲಿ ಎಷ್ಟು ಹೊತ್ತಾದರೂ ಮೈಮರೆಯಬಹುದು. ನೀರಿಗಿಳಿಯಲು ಮನಸ್ಸಿಲ್ಲದಿದ್ದರೆ ಜಲಪಾತವನ್ನೇ ನೋಡುತ್ತಾ ಪಾಪ್ ಕಾರ್ನ್ ಮೆಲ್ಲಬಹುದು, ಬಿಸಿಬಿಸಿಯಾದ ಆಲೂಪರಾಟದೊಂದಿಗೆ ಮೊಟ್ಟೆಪಲ್ಯವನ್ನು ಮುಕ್ಕುತ್ತಾ ಜಲಪಾತದ ಎತ್ತರವನ್ನು ಗುಣಿಸಬಹುದು. ಬಿಸಿಯಾದ ಮಸಾಲೆ ಚಹಾ ಹೀರುತ್ತಾ ಸಂಗಾತಿಗಳನ್ನು ಚುಡಾಯಿಸಬಹುದು. ಒಟ್ಟಿನಲ್ಲಿ ದಿನವಿಡೀ ಕಾಲ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಮಸ್ಸೂರಿಯಿಂದ ಸ್ವಲ್ಪ ಹೊರಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಸುಮೊ ಅಥವಾ ಸಫಾರಿ ಗಾಡಿಗಳು ನಿಂತು ಕೆಂಪ್ಟಿಗೆ ಕರೆದೊಯ್ಯುತ್ತವೆ. ಹಿಮಾಲಯದ ಪರ್ವತಶ್ರೇಣಿಯ ನಡುವೆ ಮೋಡಗಳಲ್ಲಿ ತೇಲುತ್ತಾ ಆಳ ತಿರುವುಗಳಲ್ಲಿ ಇಳಿಯುತ್ತಾ ಕುಳಿರ್ಗಾಳಿಯ ಕಂಪು ಸವಿಯುತ್ತಾ ಉಲ್ಲಾಸದ ಪಯಣ ಸಾಗುತ್ತದೆ. ಜಲಪಾತ ಇನ್ನೂ ಎರಡು ಕಿಲೊಮೀಟರು ಇರುವಂತೆಯೇ ಅದರ ಸದ್ದು ಅನುರಣಿಸುತ್ತದೆ. ಒಂದು ಸುದೀರ್ಘ ವರ್ತುಳವನ್ನು ಸುತ್ತಿ ಜಲಪಾತದ ಬಳಿಗೆ ಗಾಡಿ ಬಂದು ನಿಲ್ಲುವ ವೇಳೆಗೆ ನಿಮ್ಮ ಕ್ಯಾಮೆರಾವು ಜಲಪಾತದ ಹಲವು ದೂರದೃಶ್ಯಗಳನ್ನು ಕ್ಲಿಕ್ಕಿಸಿರುತ್ತೆ. ರಸ್ತೆಯ ತಡಿಯಲ್ಲೇ ಸೇತುವೆಯ ಮೂಲಕ ಹರಿದ ನೊರೆನೊರೆಯಾದ ನದೀನೀರು ಸನಿಹದಲ್ಲೇ ಕೆಳಕ್ಕೆ ಬೀಳುವ ಸದ್ದಿನೊಂದಿಗೆ ಪ್ರವಾಸಿಗರ ಕೇಕೆ ಮಿಳಿತವಾಗಿ ಕೇಳಿಬರುತ್ತದೆ. ಇಲ್ಲಿಂದ ಮುಂದೆ ನಿಮ್ಮ ವಾಹನ ಸಾಗದು. ನೀವು ಕೆಳಗಿಳಿದು ನಡೆಯುತ್ತಾ ಅಂಗಡಿ ಸಾಲಿನ ನಡುವೆ ಜಲಪಾತದೆಡೆಗೆ ಸಾಗುವ ಮೆಟ್ಟಿಲುಗಳಿಗಾಗಿ ತಡಕುತ್ತೀರಿ. ನಿಮ್ಮ ತಡಕಾಟ ಕಂಡು ಅಲ್ಲಿನ ಸ್ನೇಹಪರ ಘರವಾಲಿ ಜನ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಮೆಟ್ಟಲಿಳಿಯಲು ಕಷ್ಟವಾದವರಿಗೆ ಕೇಬಲ್ ತೊಟ್ಟಿಲಿನ ಸೌಕರ್ಯವೂ ಇದೆ.
ಕೆಂಪ್ಟಿ ಫಾಲ್ ಅನ್ನೋ ಈ ದಬದಬೆಯಷ್ಟೇ ಇಲ್ಲಿನ ನೋಟದಾಣವಲ್ಲ. ಮೇಲೆ ಹತ್ತಿ ನದಿಯ ಗುಂಟ ಸಾಗಿದರೆ ಅಲ್ಲಲ್ಲಿ ಕಿರು ಜಲಪಾತಗಳೂ, ಕೊರಕಲುಗಳ ನಡುವಿನ ನದೀ ಹಾಸುಗಳೂ, ಸ್ವಚ್ಛ ನೀರಿನ ಕೊಳಗಳೂ ಇದ್ದು ನೀರಿನಲ್ಲಿ ಸುಖಾಸುಮ್ಮನೆ ಆಟವಾಡಬಹುದು, ಬೊಗಸೆ ಮೊಗೆದು ನೀರು ಕುಡಿಯಬಹುದು, ನೀರ ಜುಳು ಜುಳು ನಾದ ಕೇಳುತ್ತಾ ಟೈಮ್ ಪಾಸ್ ಮಾಡಬಹುದು. ಇಲ್ಲವೇ ಕೆಳಗೆ ನದೀ ಗುಂಟ ನಿಸರ್ಗ ರಮಣೀಯತೆಯನ್ನು ಆಸ್ವಾದಿಸುತ್ತಾ ೧೨ ಕಿಲೋಮೀಟರು ನಡೆದು ಹೋಗಿ ಯಮುನೆಯೊಂದಿಗೆ ಸಂಗಮವಾಗುವವರೆಗಿನ ಚಾರಣ ಮಾಡಬಹುದು. ಅಲ್ಲಲ್ಲಿ ನಿಂತ ನೀರಿನಲ್ಲಿ ಈಜಬಹುದು ಅಥವಾ ಮೀನಿಗೆ ಗಾಳ ಹಾಕಬಹುದು. ಇಲ್ಲಿ ಹೇಳೋವರೂ ಇಲ್ಲ ಕೇಳೋವರೂ ಇಲ್ಲ.
ಕೆಂಪ್ಟಿಯಿಂದ ವಾಪಸು ಮಸೂರಿಗೆ ಬರುವಾಗ ಸಮಯವಿದ್ದರೆ ದಾರಿ ಮಧ್ಯೆ ಕಂಪೆನಿ ಗಾರ್ಡನ್ ಹಾಗೂ ಗನ್ ಹಿಲ್ ಪಾಯಿಂಟ್ ಸಿಗುತ್ತೆ. ಮಸೂರಿಗೆ ಹಿಂದಿರುಗಿ ಸ್ವಲ್ಪ ವಿಶ್ರಮಿಸಿ ಸಂಜೆ ಮಾಲ್ ರಸ್ತೆಯಲ್ಲಿ ನಡೆದಾಡುತ್ತಾ ಸ್ವಪ್ನಲೋಕದ ಸವಿ ಉಣ್ಣಬಹುದು.
ಡೆಹರಾಡೂನ್ ರೈಲುನಿಲ್ದಾಣದಿಂದ ಹೊರಬಂದರೆ ಮಸೂರಿಗೆ ಹೋಗುವ ಮಿನಿಬಸ್ಸುಗಳು ಹಲವಾರಿದ್ದು ಮಸೂರಿ ಮಸೂರಿ ಎಂದು ಕೂಗುತ್ತಿರುತ್ತಾರೆ. ಡೆಹರಾಡೂನಿನಿಂದ ಮಸೂರಿಗೆ ಒಂದು ಗಂಟೆ ಬಸ್ ಪ್ರಯಾಣ. ಡೆಹರಾಡೂನಿಗೆ ರೈಲು ಹಾಗು ವಿಮಾನಗಳ ಸಂಪರ್ಕವಿದೆ. ಚಂಡೀಗಡದಿಂದ ಬಸ್ಸಿನಲ್ಲಿ ಡೆಹರಾಡೂನ್ ಅಥವಾ ಹರದ್ವಾರ ತಲಪಿ ಅಲ್ಲಿಂದಲೂ ಮಸ್ಸೂರಿಗೆ ಬರಬಹುದು. ಡೆಹರಾಡೂನಿನಿಂದ ೩೫ ಕಿ. ಮೀ, ಹಾಗೂ ಹರದ್ವಾರದಿಂದ ೫೫ ಕಿ.ಮೀ.

ಡಿಸಂಬರಿನಿಂದ ಫೆಬ್ರವರಿ ಕೊನೆಯವರೆಗೆ ಹಿಮಪಾತ ಇಲ್ಲವೇ ಮಂಜು ಹಾಸಿರುತ್ತೆ. ಆಮೇಲೆ ಹೋಗುವುದು ಚೆನ್ನ. ಯಾವುದಕ್ಕೂ ಸ್ವೆಟರು ಅಥವಾ ಶಾಲು ಇರಲಿ. ಮಳೆಗಾಲದಲ್ಲಿ ಮಾತ್ರ ಬೇಡವೇ ಬೇಡ.

ಕಾಮೆಂಟ್‌ಗಳಿಲ್ಲ: