ಸಾಹಸೀ ಪ್ರವೃತ್ತಿಯ ಐರೋಪ್ಯರು ಕಳೆದ
ಶತಮಾನಗಳಲ್ಲಿ ನಾವೆಗಳನ್ನು ಹತ್ತಿ ಹೊಸ ನೆಲೆಗಳನ್ನು ಹುಡುಕುತ್ತಾ ಹೋದದ್ದು ನಮಗೆಲ್ಲ ತಿಳಿದ
ವಿಷಯವೇ. ಅವರು ಹಾಗೆ ಹೊರಟಿದ್ದು ಹೊಸ ವಾಸ್ತವ್ಯಕ್ಕಾಗಿ, ಉದ್ಯೋಗಕ್ಕಾಗಿ, ಧರ್ಮಪ್ರಚಾರಕ್ಕಾಗಿ
ಇತ್ಯಾದಿ ಇತ್ಯಾದಿ. ರಾಜ ಪೋಷಿತ ಪ್ರವಾಸಗಳಲ್ಲಿ ಚಿನ್ನದ ಬೇಟೆಯ ರಹಸ್ಯ ಕಾರ್ಯಸೂಚಿ ಇತ್ತೆಂಬುದು
ಆಮೇಲೆ ಜಗಜ್ಜಾಹೀರಾದ ವಿಷಯ. ಇವೆಲ್ಲದರ ನಡುವೆ ಕೆಲವರು ಯುದ್ಧಕ್ಕಾಗಿಯೂ ಅಂದರೆ ಬಾಡಿಗೆ ಯೋಧರಾಗಿಯೂ ಹೊರಟರು
ಎಂದರೆ ಅದೊಂದು ಸೋಜಿಗದ ಸಂಗತಿಯೇ ಸರಿ. ಅಂಥ ಒಂದು ಸೇನಾ ತುಕಡಿಯು ಡಚ್ ಈಸ್ಟ್ ಇಂಡಿಯಾ ಕಂಪೆನಿಯ
ಪರವಾಗಿ ಯುದ್ಧಗಳನ್ನು ಮಾಡಿತ್ತು ಎಂದು ಇತಿಹಾಸ ಹೇಳುತ್ತದೆ.
ಸ್ವಿಝರ್ ಲ್ಯಾಂಡಿನಲ್ಲಿ ೧೭೮೧ರಲ್ಲಿ ಚಾರ್ಲಸ್
ಡೇನಿಯಲ್ ದೆ ಮ್ಯುರಾನ್ ಎಂಬುವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ರೆಜಿಮೆಂಟ್ ದೆ ಮ್ಯೂರಾನ್ ಎಂಬು
ಯೋಧರ ತಂಡವು ಡಚ್ಚರ ಪರವಾಗಿ ಕೇಪ್ ಟೌನ್ ಮತ್ತು ಸಿಲೋನಿನಲ್ಲಿ ಕರ್ತವ್ಯ ನಿರ್ವಹಿಸಿತ್ತು. ಒಂದು
ಹಂತದಲ್ಲಿ ಸಿಲೋನ್ ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಸೆಣಸಿದ್ದ ಈ ಪಡೆಯು ಮುಂದೆ ಸಂಬಳ ಸಿಗದೆ
ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದಾಗ ಬ್ರಿಟಿಷರ ಬಳಿಗೇ ಬಂದು ಉದ್ಯೋಗಕ್ಕಾಗಿ ಕೈಚಾಚಿದ್ದು ಮಾತ್ರ
ಇತಿಹಾಸದ ವ್ಯಂಗ್ಯ. ಹಿಂದಿನ ಉದ್ಯೋಗದಾತರು ನೀಡಿದ್ದ ಸಂಬಳ ಮತ್ತು ಪದವಿಗಳಿಗೇ ಅಂಕಿತ ಹಾಕಿದ
ಬ್ರಿಟಿಷರು ೧೭೯೮ರಲ್ಲಿ ಈ ಪಡೆಯನ್ನು ತಮ್ಮ ಸೇನೆಯ ಭಾಗವಾಗಿ ಭರ್ತಿ ಮಾಡಿಕೊಂಡರು. ಅದರ
ಮರುವರ್ಷವೇ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಶ್ರೀರಂಗಪಟ್ಟಣದ ಕೋಟೆಯನ್ನು
ಮುತ್ತಲು ಮುಂಚೂಣಿಯ ಪಡೆಯಾಗಿ ಈ ಯೋಧರನ್ನು ಕಳಿಸಿದರು. ಅನ್ನದಾತರ ಹಂಗಿನಲ್ಲಿದ್ದ ಸ್ವಿಸ್
ಯೋಧರು ಪ್ರಾಣದ ಹಂಗು ತೊರೆದು ಹೋರಾಡಿ ಕೋಟೆಯಲ್ಲಿ ಬಿರುಕು ಮೂಡಿಸಿದರು. ಆ ಮೂಲಕ ಟಿಪ್ಪುವು
ಕೋಟೆಯಿಂದ ಹೊರಬರುವಂತೆ ಮಾಡಿ ಅವನ ಸಾವಿಗೆ ಕಾರಣರಾದರು ಎಂಬ ವಿಷಯ ಮಾತ್ರ ಹೆಚ್ಚಿನವರಿಗೆ
ತಿಳಿದಿರಲಿಕ್ಕಿಲ್ಲ.
ಹೀಗೆ ಶ್ರೀರಂಗಪಟ್ಟಣವು ಬ್ರಿಟಿಷರ
ಕೈವಶವಾಯ್ತು. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯು ದಕ್ಷಿಣಕ್ಕೆ ತಿರುಗಿಕೊಳ್ಳುವ ತಿರುವಿನ
ದಂಡೆಯಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಗ್ಯಾರಿಸನ್ ಸಿಮಿಟರಿ (ಯೋಧರ ಸಮಾಧಿಭೂಮಿ) ಯಲ್ಲಿ
ಸ್ವಿಸ್ ಯೋಧರನ್ನು ಮಣ್ಣು ಮಾಡಲಾಗಿದೆ. ಮುಂದಿನ ಅರುವತ್ತು ವರ್ಷಗಳ ಅವಧಿಯಲ್ಲಿ ಅವರ
ಕುಟುಂಬವರ್ಗದವರನ್ನೂ ಇದೇ ಸಮಾಧಿಭೂಮಿಯಲ್ಲಿ ಹುಗಿಯಲಾಗಿದೆ.
ಇತ್ತೀಚಿನವರೆಗೂ ಪ್ರತಿ ನವೆಂಬರ್
ಎರಡನೇ ತಾರೀಕಿನಂದು ನಡೆಯುವ ಮೃತರ ಸ್ಮರಣೆಯ ಪ್ರಯುಕ್ತ ದೂರದ ಸ್ವಿಸರ್ ಲೆಂಡ್ ನಾಡಿನಿಂದ ಹಲವರು
ಬಂದು ಈ ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೋಗುತ್ತಿದ್ದರು. ಸ್ಥಳೀಯರು ಪರಂಗಿಗೋರಿ ಎನ್ನುವ ಈ
ಸ್ಥಳದಲ್ಲಿ ವಿದೇಶೀಯರು ಬಂದು ಪ್ರಾರ್ಥನೆ ಮಾಡುವುದನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು.
ಉಳಿದಂತೆ ವರ್ಷವಿಡೀ ಈ ಸ್ಮಶಾನವು ಪಾಳುಬಿದ್ದು, ಪೊದೆಗಳು ಆಳೆತ್ತರಕ್ಕೆ ಬೆಳೆದು ಕಳ್ಳಕಾಕರ
ಆವಾಸವಾಗುತ್ತಿತ್ತು. ಹೀಗೆ ಕೆಲವರು ಗೋರಿಗಳ ಮೇಲಿನ ಅಮೃತಶಿಲೆಯ ಫಲಕಗಳನ್ನು ಹೊತ್ತೊಯ್ದಿದ್ದಾರೆ,
ಸಮಾಧಿಗಳ ಸುತ್ತಲಿನ ಕಬ್ಬಿಣದ ಬೇಲಿಗಳನ್ನು ಕಿತ್ತೊಯ್ದಿದ್ದಾರೆ.
ಇತ್ತೀಚೆಗೆ ಅಂದರೆ ಸುಮಾರು ೨೦೦೫ರಲ್ಲಿ
ಇಲ್ಲಿಗೆ ಭೇಟಿ ನೀಡಿದ್ದ ಮ್ಯುರಾನ್ ವಂಶಸ್ತರಾದ ಲೂಯಿ ದೊಮಿನಿಕ್ ದೆ ಮ್ಯುರಾನ್ ಮತ್ತು ಶ್ರೀಮತಿ
ಮೋನಿಕ್ ದೆ ಮ್ಯುರಾನ್ ಎಂಬ ದಂಪತಿ ಸಮಾಧಿಗಳ ಅಧಃಪತನವನ್ನು ಕಂಡು ಮರುಗಿ ಈ ತಾಣದ
ಪುನರುದ್ಧಾರಕ್ಕಾಗಿ ಯತ್ನಿಸಿ ಮೈಸೂರು ಪುರಾತತ್ವ ಇಲಾಖೆಯವರೊಂದಿಗೆ ಸಮಾಲೋಚಿಸಿ, ಇಲಾಖೆಯ
ಸೂಚನೆಯ ಮೇರೆಗೆ ಆರ್ ಗುಂಡುರಾವ್ ಅಸೋಸಿಯೇಟ್ಸ್ ಎಂಬ ಖಾಸಗಿ ಜೀರ್ಣೋದ್ಧಾರಕ ಸಂಸ್ಥೆಯನ್ನು ತಾವೇ ಸಂಪರ್ಕಿಸಿ
ಆ ಸಂಸ್ಥೆಯ ಮೂಲಕ ಸಮಾಧಿಭೂಮಿಯನ್ನು ಸಹಜಸ್ಥಿತಿಗೆ ಮರಳುವಂತೆ ಮಾಡಿದ್ದಾರೆ. ಆದರೆ ಕೆಲಸ
ಪೂರ್ಣಗೊಳ್ಳುವ ಮೊದಲೇ ಅಂದರೆ ೨೦೦೭ರಲ್ಲಿ ಆ ದಂಪತಿ ಅಕಾಲಿಕ ಮರಣಕ್ಕೀಡಾದರು. ಆಮೇಲೆ ಅವರ ಮಗ ಈ
ಕೆಲಸದ ಉಸ್ತುವಾರಿ ವಹಿಸಿಕೊಂಡರೆಂದು ತಿಳಿದುಬರುತ್ತದೆ.
ಇದೇ ಮ್ಯುರಾನ್ ವಂಶಸ್ತರು ಸ್ಥಳೀಯರಾದ
ಶ್ರೀಮತಿ ವಿದ್ಯಾಲಕ್ಷ್ಮಿ ಎಂಬುವರನ್ನು ಈ ಸ್ಥಳವನ್ನು ನೋಡಿಕೊಳ್ಳುವುದಕ್ಕಾಗಿ ನೇಮಿಸಿದ್ದಾರೆ.
ವಿದ್ಯಾಲಕ್ಷ್ಮಿಯವರು ಬೆಳಗ್ಗೆ ಒಂಬತ್ತರಿಂದ ಸಂಜೆ ಐದರವರೆಗೆ ಇಲ್ಲಿದ್ದು ಬಂದ ಪ್ರವಾಸಿಗರನ್ನು
ಆದರದಿಂದ ಮಾತನಾಡಿಸುತ್ತಾ, ಸಮಾಧಿಭೂಮಿಯನ್ನು ಬಲು ಜತನದಿಂದ ನೋಡಿಕೊಳ್ಳುತ್ತಿದ್ದಾರೆ.
2 ಕಾಮೆಂಟ್ಗಳು:
Nimma ee prayatna nijakku prashamsaniya.tavu nijavagalu ondu uttama prayatna maadi adaralli yashasvi aagiddiri.nimage nanna vandanegalu.god bless you.wish you all the success.
ಇದು ಎಲ್ಲರ ಪ್ರಯತ್ನವಾಗಬೇಕು. ಯಾವುದೇ ಇತಿಹಾಸವನ್ನು ಮರೆಯದೆ ಕಾಪಿಟ್ಟುಕೊಳ್ಳುವುದು ನಮ್ಮ ಧರ್ಮವಾಗಬೇಕು.
ಕಾಮೆಂಟ್ ಪೋಸ್ಟ್ ಮಾಡಿ