ನಾನು ಮೊತ್ತಮೊದಲು ಫಾದರ್
ಅಂತಪ್ಪನವರನ್ನು ಭೇಟಿಯಾಗಿದ್ದು ಸುಮಾರು ೧೯೮೬ರಲ್ಲಿ ಅವರು ಸಂತ ಪ್ಯಾಟ್ರಿಕ್ಕರ ಚರ್ಚಿನಲ್ಲಿ
ಗುರುವಾಗಿದ್ದಾಗ.
ರಿಸರ್ವ್ ಬ್ಯಾಂಕಿನಲ್ಲಿ
ಆಗಷ್ಟೇ ಉದ್ಯೋಗ ಪಡೆದು ಯಶವಂತಪುರದಲ್ಲಿ ಮನೆಮಾಡಿದ್ದ ಒಬ್ಬ ಯುವತಿ ತನ್ನ ಮದುವೆಗಾಗಿ ಹಾಡಲು
ನಮ್ಮ ಗಾನವೃಂದವನ್ನು ಆಹ್ವಾನಿಸಿದ್ದಳು. ಆಕೆ ನಮಗೆ ಹೊಸಬಳಾದರೂ ಕನ್ನಡದ ಕೆಲಸವದು ಎಂಬ
ಉತ್ಸಾಹದಿಂದ ನಾವು ಒಪ್ಪಿಕೊಂಡೆವು. ಮದುವೆಗಳಿಗೆ ಹಾಡಲು ಗಾನವೃಂದಗಳು ಹಣ ಪಡೆಯುವ ಕಾಯಿಲೆ
ಹತ್ತಿಸಿಕೊಂಡಿವೆ ಎಂಬುದು ಆಗಷ್ಟೇ ನಮಗೆ ತಿಳಿಯಿತು. ಪುಣ್ಯವಶಾತ್ ನಮ್ಮ ತಂಡದಲ್ಲಿನ ಯಾರಿಗೂ ಆ
ರೋಗ ಇರಲಿಲ್ಲ.
ಸಂತ ಪ್ಯಾಟ್ರಿಕ್ಕರ
ಚರ್ಚಿನಲ್ಲಿ ಕನ್ನಡದ ಕಂಪು ಇರಲಿಲ್ಲವೆಂದಲ್ಲ. ಭಾನುವಾರ ಬೆಳಗ್ಗೆ ೫:೪೫ಕ್ಕೆ ನಡೆಯುತ್ತಿದ್ದ ಕನ್ನಡ ಪೂಜೆಗೆ ಸಂತ ಫಿಲೋಮಿನಾ ಚರ್ಚಿನ ನರ್ಸುಗಳು ಹಾಗೂ
ಸುತ್ತಮುತ್ತಲಿನ ಕಾನ್ವೆಂಟುಗಳ ಸಿಸ್ಟರುಗಳು ಸಂತೋಷದಿಂದ ಪಾಲುಗೊಳ್ಳುತ್ತಿದ್ದರು. ಅದರಲ್ಲಿ
ಸಂಗೀತಜ್ಞ ದಿವಂಗತ ಮೈಕೆಲ್ ಜಾನ್ ಅವರು ಗಾನವೃಂದದ ನೇತೃತ್ವ ವಹಿಸುತ್ತಿದ್ದರು. ಗೆಳೆಯ ಮೈಕಲ್
ಜಾನರು ನನ್ನ ಮದುವೆಯ ಪೂಜೆಯಲ್ಲಿ ನಮ್ಮ ಗಾನವೃಂದದ ಹೊಣೆ ಹೊತ್ತಿದ್ದರು.
ಇರಲಿ, ಫಾದರ್ ಅಂತಪ್ಪನವರ ವಿಚಾರ
ಹೇಳುತ್ತಿದ್ದೆ. ಸುಮಾರು ೧೯೮೫ರಲ್ಲಿ ಮಹಾಬಿಷಪರಾಗಿದ್ದ ಪಾಕ್ಯಂ ಆರೋಗ್ಯಸಾಮಿಯರ ವಿರುದ್ಧ ನಡೆದ
ಕನ್ನಡ ಚಳವಳಿಯಲ್ಲಿ ಬಿಷಪರ ಮನೆಯಲ್ಲಿ ಕನ್ನಡ ಯಾಜಕರು ಬಿಷಪರೊಂದಿಗೆ ನಡೆಸಿದ ಮಾತುಕತೆ
ಮುರಿದುಬಿದ್ದಾಗ ವೇದಿಕೆಗೆ ಬಂದ ಫಾದರ್ ಅಂತಪ್ಪನವರು ಈ ಬಿಷಪರು ಇರುವವರೆಗೆ ಕನ್ನಡಕ್ಕೆ
ಉಳಿಗಾಲವಿಲ್ಲ ಇವರನ್ನು ಹೊರದೂಡಬೇಕು ಎಂದು ಕರೆ ಕೊಟ್ಟರು. ಬಹು ರೋಮಾಂಚಕಾರಿ ಕರೆ ಅದು. ಅಂತೆಯೇ ನಡೆಯಿತು ಕೂಡಾ.
ಅದಾಗಿ ಕೆಲ ದಿನಗಳ ನಂತರ
ಬೆಂಗಳೂರಿನ ಎಲ್ಲ ಯಾಜಕರು ತಮ್ಮ ಕ್ಲರ್ಜಿ ಮೀಟಿಂಗಿಗಾಗಿ ಎರಡು ಬಸ್ಸುಗಳಲ್ಲಿ ಮಂಡ್ಯದತ್ತ
ಪ್ರಯಾಣ ಬೆಳಸಿದಾಗ ನಾವು ಯುವಕರು ಕೆಂಗೇರಿ ಕೆರೆಯ ಏರಿಯ ಮೇಲೆ ಆ ಬಸ್ಸುಗಳನ್ನು ತಡೆದು ಜ್ವಲಂತ
ಸಮಸ್ಯೆಗಳ ಬಗ್ಗೆ ಮಾತಾಡಿದ್ದೆವು. ಆ ಬಸ್ಸಿನಲ್ಲಿದ್ದ ಫಾದರ್ ಅಂತಪ್ಪನವರೇ ನಮ್ಮನ್ನು ಆ
ಕೆಲಸಕ್ಕೆ ಚೂ ಬಿಟ್ಟಿದ್ದರೆಂದು ಅಮೇಲೆ ಅವರ ಮೇಲೆ ಗೂಬೆ ಕೂರಿಸಿದ್ದರಂತೆ.
ಈ ಎರಡು ಘಟನೆಗಳಾದ ಮೇಲೆ ಅವರ
ಚರ್ಚಿನಲ್ಲಿ ನಡೆದ ಮದುವೆಯ ನಂತರ ಗಾನವೃಂದದ ನಾವೆಲ್ಲ ಪಾದ್ರಿಮನೆಗೆ ಹೋಗಿ ಫಾದರ್
ಅಂತಪ್ಪನವರನ್ನು ಭೇಟಿಯಾದೆವು. ಅವರು ನಮ್ಮನ್ನೆಲ್ಲ ಕೂರಿಸಿ ಬಲು ಆದರ ಅಭಿಮಾನದಿಂದ ಮಾತಾಡಿದರು.
ಅದೇ ವೇಳೆಯಲ್ಲಿ ಒಬ್ಬ ವಯಸ್ಸಾದ ಹೆಂಗಸು ಅಲ್ಲಿಗೆ ಬಂದರು. ಅವರ ಮಾತಿನಿಂದ ಅವರು ಹಾರೋಬೆಲೆಯಿಂದ
ಬಂದವರೆಂದು ತಿಳಿಯಿತು. ಆಕೆ ಮಾಸಿದ ಬಟ್ಟೆ ಧರಿಸಿದ್ದರು. ಬಾಗಿಲ ಹೊರಗೆ ಚಪ್ಪಲಿ ಬಿಟ್ಟು ಬಂದ
ಆಕೆ ಸ್ವಾಮಿ ಅಂತ್ಪಪನವರ ಬಳಿ ಬಂದು ಕಾಲಿಗೆ ಬಿದ್ದರು. ಇದೆಲ್ಲ ಬೇಡ ಎಂದು ಸ್ವಾಮಿಗಳು ಸಂಕೋಚದಿಂದ
ಹಿಂಜರಿದರೂ ಆಕೆ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.
ನಮ್ಮ ಗಾನವೃಂದದ ಹುಡುಗಿ
ಎಲಿಜಕ್ಕನವರು ಇದೇನಪ್ಪ ಹೀಗೆ ಅಂತ ಸೋಜಿಗಪಟ್ಟರು. (ಮುಂದೆ ಅವರು ಹಾರೋಬೆಲೆಯ ಹುಡುಗನನ್ನೇ
ಮದುವೆಯಾದರೆಂಬುದು ಬೇರೆ ವಿಷಯ). ಫಾದರ್ ಅಂತಪ್ಪನವರು ನಮ್ಮ ಬಳಿ ಬಲು ಉತ್ಸಾಹದಿಂದ ತಮ್ಮ
ಹವ್ಯಾಸಗಳ ಕುರಿತು ಮಾತಾಡಿದರು. ನಾವೆಲ್ಲ ಆಗ ಹದಿನೆಂಟು ಇಪ್ಪತ್ತರ ಆಸುಪಾಸಿನ ಯುವಕ ಯುವತಿಯರು.
ಕನ್ನಡದಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಅವರು ತಿಳಿಹೇಳಿದರು. ರೋಮಿನ ಜೆಸ್ವಿತ್ ಹೌಸ್
ಗ್ರಂಥಾಲಯದಿಂದ ತಂದಿದ್ದ ಜೆಸ್ವಿತ್ ವರದಿಗಳ ಜೆರಾಕ್ಸ್ ಪ್ರತಿಗಳನ್ನು ನಮಗೆ ತೋರಿಸಿ ಇವೆಲ್ಲ
ನಮ್ಮ ಇತಿಹಾಸದ ಅಮೂಲ್ಯ ನಿಧಿಗಳು. ನಾನು ನಿವೃತ್ತನಾದ ಮೇಲೆ ಇವುಗಳನ್ನು ಪುಸ್ತಕಗಳಾಗಿ
ಪ್ರಕಟಿಸುತ್ತೇನೆ ಎಂದರು.
ಇತ್ತೀಚೆಗೆ ಅವರನ್ನು
ಭೇಟಿಯಾದಾಗ ಕನಕದಾಸರ ಕುರಿತ ಮೂರನೇ ಪುಸ್ತಕ ಬರೆಯುತ್ತಿದ್ದೇನೆ ಎಂದು ಅದೇ ಉತ್ಸಾಹದಿಂದ
ಹೇಳಿದರು. ನೀನು ಏನು ಬರೀತಿದ್ದೀಯಾ ಎಂದು ಕೇಳಿದರು. ಲೂರ್ದುಪ್ರಸಾದ್ ನವರ ಪ್ರೌಢಪ್ರಬಂಧವನ್ನು
ಅನುವಾದಿಸುತ್ತಿದ್ದೇನೆ ಎಂದೆ. ಈಗೆಲ್ಲಿದ್ದಾನೆ ಅವನು ಎಂದರು. ನನಗೂ ಅದು ತಿಳಿಯದ ವಿಚಾರ.
ಎಂದೆ. ಏನೇ ಆಗಲಿ, ಐ ವಾಂಟ್ ಯೂ ಟು ಕಂಟಿನ್ಯೂ ಮೈ ವರ್ಕ್ ಎಂದರು. ಅದು ನನ್ನಿಂದಾಗುವುದೇ
ಎಂಬ ಅಳುಕು ನನ್ನದು. ಕುಮಾರಿಗೆ ಎಲ್ಲ ಹೇಳಿದ್ದೇನೆ ಎಂದರು. ಸಿಸ್ಟರ್ ವರ್ಜಿನಿಯಾ
ರಾಜಕುಮಾರಿಯವರು ಫಾದರ್ ಅಂತಪ್ಪನವರ ತಮ್ಮನ ಮಗಳು. ತಮ್ಮ ಪುಸ್ತಕಗಳನ್ನೆಲ್ಲ ವರ್ಕರ್ಸ್ ಸೆಂಟರಿನ
ಒಂದು ಕೊಠಡಿಯಲ್ಲಿಟ್ಟಿದ್ದೇನೆ, ಅದಕ್ಕೆ ಕುಮಾರಿಯದೇ ಉಸ್ತುವಾರಿ ಎಂದರು.
ಬಹುಶಃ ಅಂದೊಮ್ಮೆ ಅವರು ಹೇಳಿದ
ಹಾಗೆ ನಾನೂ ಕೂಡಾ ನಿವೃತ್ತನಾದ ಮೇಲೆ ಆ ಕೆಲಸ ಮಾಡುತ್ತೇನೋ ಹೇಗೋ ಗೊತ್ತಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ