ಭಾನುವಾರ, ಡಿಸೆಂಬರ್ 29, 2013

ಫಾದರ್ ಜೋಸೆಫ್ ಬಿಗೊ ಬೋಕ್ಲೇ (Fr. Joseph Bigot Beauclair)

ಬೆಂಗಳೂರಿನ ಸಂತ ಮೇರಿಸ್ ಟೌನಿನಲ್ಲಿರುವ ಮರಿಯಮ್ಮನವರ ಅನಾಥಾಶ್ರಮ ಗೊತ್ತಿದೆಯೇ? ಮರಿಯಾ ಅನಾಥಾಶ್ರಮ, ಸ್ವರ್ಗಾರೋಹಣ ದೇವಾಲಯ, ಮರಿಯ ನಿಕೇತನ ಶಾಲೆ ಹಾಗೂ ಎನ್ಬಿಸಿಎಲ್ಸಿ ಗಳನ್ನೊಳಗೊಂಡ ಬೃಹತ್ ಆವರಣದ ಜಮೀನನ್ನು ಖರೀದಿ ಮಾಡಿದವರು ಮೊತ್ತಮೊದಲ ಭಾರತೀಯ ಬಿಷಪ್ ತೋಮಾಸ್ ಪೊತ್ತಕಮೂರಿಯವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮರಿಯಮ್ಮನವರ ಅನಾಥಾಶ್ರಮವನ್ನು ಸ್ಥಾಪಿಸಿದವರೂ ಪೊತ್ತಕಮೂರಿಯವರೇ ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ ಅನಾಥಾಶ್ರಮವು ಇಲ್ಲಿಗೆ ಬರುವುದಕ್ಕೂ ಮೊದಲು ಬಿಳೇಕಳ್ಳಿ (ಶಿವಾಜಿನಗರ) ದಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಶಿವಾಜಿನಗರದ ಸಂತ ಮರಿಯಮ್ಮನವರ ಮಹಾದೇವಾಲಯದ ಆಶ್ರಯದಲ್ಲಿ ಅನಾಥಾಶ್ರಮವನ್ನು ಸ್ಥಾಪಿಸಿದವರು ಫಾದರ್ ಬೋಕ್ಲೇ ಅವರು.
ಬೋಕ್ಲೇ ಸ್ವಾಮಿಗಳು ಶಿವಾಜಿನಗರದ ಸಂತ ಮರಿಯಮ್ಮನವರ ದೇವಾಲಯದ ಗುರುಗಳಾಗಿ ೨೪ ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದರು. ಹಾಗೂ ದೇವಾಲಯದ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾದರು. ಅವಧಿಯಲ್ಲೇ ಅಂದರೆ ಸುಮಾರು ೧೮೫೪ರಲ್ಲಿ ಅನಾಥ ಮಕ್ಕಳಿಗೊಂದು ಸೂರು ಮತ್ತು ಭವಿಷ್ಯ ಕಲ್ಪಿಸುವ ದೃಷ್ಟಿಯಿಂದ ಅಲ್ಲೊಂದು ಅನಾಥಾಲಯ ತೆರೆದರಲ್ಲದೆ ಮಕ್ಕಳನ್ನು ಪ್ರೀತಿಯ ತಂದೆಯಂತೆ ಪೋಷಿಸಿದರು. ಅವರು ನೂರಾರು ಮಕ್ಕಳು ಅನಾಥಾಲಯದಲ್ಲಿದ್ದಾರೆ, ಅವರಿಗೆ ಊಟ ಹಾಕಲು ಉದಾರ ಹೃದಯದಿಂದ ದಾನ ಮಾಡಿ ಎಂದು ಪ್ರತಿ ಭಾನುವಾರದ ಪೂಜೆಯಲ್ಲಿ ಹೇಳಿ ಪೂಜಾನಂತರ ದೇವಾಲಯದ ಆವರಣದಲ್ಲಿ ಬಿಕ್ಷೆಗಾಗಿ ನಿಲ್ಲುತ್ತಿದ್ದ ಹಾಗೂ ಪೂಜೆಗೆ ಬರುತ್ತಿದ್ದ ಬ್ರಿಟಿಷ್ ಹೆಂಗಸರು ಹಣವನ್ನೂ ಬ್ರೆಡ್ಡನ್ನೂ ಉದಾರವಾಗಿ ದಾನ ನೀಡುತ್ತಿದ್ದರೆಂಬ ಮಾಹಿತಿ ಮಿಂಬಲೆಯಲ್ಲಿ ಸಿಗುತ್ತದೆ ಅನಾಥಾಶ್ರಮವು ಮುಂದೆ ಬಿಷಪ್ ಪೊತ್ತಕಮೂರಿ ತೋಮಾಸರ ಕಾಲದಲ್ಲಿ ಸಂತ ಮೇರಿಸ್ ಟೌನಿಗೆ ಸ್ಥಳಾಂತರಗೊಂಡಿತು.
ಆದರೆ ಅಂದು ಬೆಂಗಳೂರಿನಲ್ಲಿ ನಿಜವಾಗಿಯೂ ಅನಾಥ ಮಕ್ಕಳಿದ್ದರೋ ಅಥವಾ ಬಡಮಕ್ಕಳ ಆರೈಕೆ ಪೋಷಣೆ ಮತ್ತು ಶಿಕ್ಷಣಕ್ಕಾಗಿ ಆಶ್ರಮ ಶುರುವಾಗಿತ್ತೋ ತಿಳಿಯದು. ೧೮೩೨ರಲ್ಲೊಮ್ಮೆ ಭೀಕರ ಬರಗಾಲ ಮತ್ತು ಸಾಂಕ್ರಾಮಿಕ ರೋಗಗಳು ಅಪ್ಪಳಿಸಿದ್ದು ಬಿಟ್ಟರೆ ಕಾಲಕ್ಕೆ ಬೆಂಗಳೂರಿನಲ್ಲಿ ಪ್ಲೇಗು ಇನ್ ಫ್ಲುಯೆಂಜಾ ಎಂಬ ಭಯಂಕರ ಮಾರಿಗಳು ಅಟಾಟೋಪ ನಡೆಸಿರಲಿಲ್ಲ. ೧೮೦೦ರಿಂದೀಚೆಗೆ ಬೆಂಗಳೂರಿನಲ್ಲಿ ಬ್ರಿಟಿಷರು ನೆಲೆನಿಂತು ದಂಡುಪ್ರದೇಶವು ಅಭಿವೃದ್ಧಿ ಹೊಂದುತ್ತಿತ್ತು. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ಹೊಟ್ಟಪಾಡಿಗಾಗಿ ಬೆಂಗಳೂರು ಸೇರುತ್ತಿದ್ದ ಬಡಜನರಿಗೇನೂ ಕಡಿಮೆಯಿರಲಿಲ್ಲ. ಅವರೆಲ್ಲ ಇಂಗ್ಲಿಷ್ ಸೈನಿಕರ ಹಾಗೂ ಅಧಿಕಾರಿಗಳ ಮನೆಗಳಲ್ಲಿ ಉದ್ಯೋಗಾಶ್ರಯ ಕಂಡುಕೊಳ್ಳುತ್ತಿದ್ದರು. ಆದ್ದರಿಂದ ಅದು ಅನಾಥ ಮಕ್ಕಳ ನೆಲೆಯಾಗಿರದೆ ಬಡಮಕ್ಕಳ ಆಶ್ರಮವಾಗಿತ್ತು ಎಂದು ತಿಳಿಯಬಹುದು.
ಅದೇನೇ ಇರಲಿ, ಅನಾಥಾಶ್ರಮ ಮಾತ್ರವಲ್ಲ ಇಡೀ ಬೆಂಗಳೂರಿನ ಕಥೋಲಿಕ ಧರ್ಮಸಭೆಯನ್ನು ಮುಚ್ಚಟಿಕೆಯಿಂದ ಪೊರೆದ ಸ್ವಾಮಿ ಬೊಕ್ಲೇ ಅವರ ಬಗ್ಗೆ ತಿಳಿದುಕೊಳ್ಳೋಣ.
ಫಾದರ್ ಜೋಸೆಫ್ ಬಿಗೊ ಬೋಕ್ಲೇ ಅವರು ೧೮೦೪ರ ಜುಲೈ ೨೧ರಂದು ಫ್ರಾನ್ಸಿನ ಪರಿಯ್ನೆ ಎಂಬಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪ್ರೆಸಿನ್ನೆ ಎಂಬಲ್ಲಿ ಪಡೆದ ಅವರು ಧಾರ್ಮಿಕ ಶಿಕ್ಷಣದ ಕೆಲಭಾಗವನ್ನು ಮಾನ್ ಸೆಮಿನರಿಯಲ್ಲ್ಲೂ ಉಳಿದರ್ಧವನ್ನು ಲವಾಲಿನ ರೀಜೆಂಟ್ ಕಾಲೇಜಿನಲ್ಲೂ ಪಡೆದರು. ತಮ್ಮ ಇಪ್ಪತ್ತೈದನೇ ವಯಸ್ಸಿನಲ್ಲಿ ಅವರು ಸಬ್ ಡೀಕನ್ ಆಗಿರುವಾಗಲೇ ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ ಸಂಸ್ಥೆ (ಎಂಇಪಿ ಸಂಸ್ಥೆ) ಬಗ್ಗೆ ಆಕರ್ಷಿತರಾಗಿ ಅದನ್ನು ಸೇರಿಕೊಂಡು ಡೀಕನ್ನರಾಗಿ ೧೮೩೦ರಲ್ಲಿ ಇಂಡಿಯಾದ ಪಾಂಡಿಚೇರಿಗೆ ಬಂದಿಳಿದರು. ೧೮೩೧ರ ಮೇ ೨೮ರಂದು ಅವರಿಗೆ ಗುರುಪಟ್ಟವಾಯಿತು.
ಗುರುಗಳಾಗಿ ಎರಡು ವರ್ಷಗಳಲ್ಲಿ ಅವರು ಕೆಲಕಾಲ ಪಾಂಡಿಚೇರಿಯ ಗುರುಮಠದಲ್ಲಿ ಬೋಧಿಸಿದರು. ಆಮೇಲೆ ೧೮೩೩ರಲ್ಲಿ ಅವರನ್ನು ಕನ್ನಡನಾಡಿಗೆ ನಿಯೋಜಿಸಲಾಯಿತು. ಶ್ರೀರಂಗಪಟ್ಟಣದ ಮುಖ್ಯ ಕೇಂದ್ರದಲ್ಲಿದ್ದುಕೊಂಡು ಅವರು ಇಡೀ ಪ್ರಾಂತ್ಯದ ಕ್ರೈಸ್ತರ ಆಧ್ಯಾತ್ಮಿಕ ಪೋಷಣೆ ಮಾಡಿದರು.
೧೮೩೪ರಲ್ಲಿ ಕೊಡಗಿನ ಚಿಕ್ಕವೀರರಾಜೇಂದ್ರನ ಅಟಾಟೋಪ ಮೇರೆ ಮೀರಿದ್ದಾಗ ಅವನ ಸೊಕ್ಕು ಮುರಿಯಲು ಕರ್ನಲ್ ಫ್ರೇಸರನ ಸೇತೃತ್ವದಲ್ಲಿ ಬ್ರಿಟಿಷರ ಸೈನ್ಯವು ಕೊಡಗಿಗೆ ತೆರಳಿತು. ಸೈನ್ಯದ ಚಾಪ್ಲೇನ್ (ಸೇನಾ ಧರ್ಮಗುರು) ಆಗಿ ಅದರೊಂದಿಗೆ ತೆರಳಿದ ಬೋಕ್ಲೇ ಸ್ವಾಮಿಗಳು ತಮ್ಮ ಉತ್ಸಾಹಭರಿತ ಉಪನ್ಯಾಸಗಳ ಮೂಲಕ ಸೈನ್ಯವನ್ನು ಧರ್ಮದ ದಾರಿಯಲ್ಲಿ ನಡೆಸಿದರು. ಅವರ ಮಾತುಗಾರಿಕೆ ಹಾಗೂ ನಡೆನುಡಿಯ ಕಾರಣದಿಂದ ಬ್ರಿಟಿಷರ ಗೌರವಾದರಕ್ಕೆ ಪಾತ್ರರಾದರು. ಬ್ರಿಟಿಷ್ ಅಧಿಕಾರಿಗಳು ತಮ್ಮ ಪಾದ್ರಿಯನ್ನು ಗೌರವಿಸಿ ಮಡಿಕೇರಿಯಲ್ಲೊಂದು ದೇವಾಲಯ ಕಟ್ಟಲು ಜಮೀನು ಮಂಜೂರು ಮಾಡಿದರು.
೧೯೩೭ ಜನವರಿ ೨೭ರಂದು ಶಾರ್ಬೊನೊ ಸ್ವಾಮಿಗಳಿಗೆ ಮೈಸೂರು ಪ್ರಾಂತ್ಯದ ಉಸ್ತುವಾರಿ ವಹಿಸಿ ಶ್ರೀರಂಗಪಟ್ಟಣಕ್ಕೆ ಕಳಿಸಿದಾಗ ಬೋಕ್ಲೇ ಸ್ವಾಮಿಯವರೊಬ್ಬರೇ ಅಲ್ಲಿದ್ದದ್ದು. ಅಪರಿಚಿತ ನಾಡಿನಲ್ಲಿ ಗುರುಮಠದ ತಮ್ಮ ಸಹಪಾಠಿಯನ್ನು ಕಂಡು ಶಾರ್ಬೊನೊ ಸ್ವಾಮಿಗಳಿಗೆ ತುಂಬಾ ಸಂತೋಷವಾಯಿತು. ಆದರೆ ಬೋಕ್ಲೇ ಅವರಿಗೆ ನೀಲಗಿರಿ ಪ್ರಾಂತ್ಯದ ಉಸ್ತುವಾರಿ ವಹಿಸಿದ ಕಾರಣ ಅವರು ಶಾರ್ಬೊನೊ ಅವರಿಗೆ ಮೈಸೂರು ಪ್ರಾಂತ್ಯದ ಎಲ್ಲ ವಿವರಗಳನ್ನು ಒಪ್ಪಿಸಿ ಬಿಷಪ್ ಬೊನಾಂ ಅವರ ಅಣತಿಯ ಮೇರೆಗೆ ಊಟಿಗೆ ಹೋದ ಅವರು ಅಲ್ಲಿದ್ದ ಗೋವಾ ಪಾದ್ರಿಗಳ ವಿರುದ್ಧ ಸೆಣಸಬೇಕಾಯಿತು. ಆಮೇಲೆ ಅಲ್ಲೊಂದು ದೇವಾಲಯವನ್ನೂ ಕಟ್ಟಿಸಿದರು. ಅದು ಈಗ ಸಂತ ಜೋಸೆಫರ ಪ್ರಾಥಮಿಕ ಶಾಲೆಯಾಗಿದೆ ಮಾತ್ರವಲ್ಲ ಊಟಿ ಧರ್ಮಪ್ರಾಂತ್ಯದ ಮೊದಲ ಚರ್ಚ್ ಎಂದು ಹೆಸರಾಗಿದೆ.
ಜೆಸ್ವಿತ್ ಮಿಷನರಿಯಾದ ಸ್ವಾಮಿ ಅಮದಿಯೋ ಅವರಿಂದ ೧೬೭೦ರಲ್ಲಿ ಪ್ರಾರಂಭವಾದ ಸತ್ಯಮಂಗಲ ಮಿಷನ್ ಕೇಂದ್ರವಾಗಿದ್ದ ಕಣಿವೆಕೆರೆ ಅಥವಾ ಮಠಪಾಳ್ಯವು ಟಿಪ್ಪುಸುಲ್ತಾನನ ಕಾಲದಲ್ಲಿ ಹೇಳಹೆಸರಿಲ್ಲದಂತೆ ನಾಶವಾಗಿತ್ತು. ಅಲ್ಲಿನ ಕನ್ನಡ ಭಾಷಿಕ ಒಕ್ಕಲಿಗರು ಮತ್ತು ದೇವಾಂಗರು ಉಪದೇಶಿಗಳ ನೆರವಿನಿಂದ ಕ್ರೈಸ್ತಧರ್ಮವನ್ನು ಉಳಿಸಿಕೊಂಡಿದ್ದರು. ೧೬೩೭-೪೧ರ ಅವಧಿಯಲ್ಲಿ ಬೋಕ್ಲೇ ಸ್ವಾಮಿಗಳು ಸ್ಥಳವನ್ನು ಸಂದರ್ಶಿಸಿ ಹತ್ತಿರದ ವಳಿಪಾಳ್ಯದಲ್ಲಿ ಒಂದು ಚರ್ಚು ಕಟ್ಟಿದರು. ಅದು ಇಂದಿನ ಕೊಯಿಮತ್ತೂರು ಧರ್ಮಪ್ರಾಂತ್ಯದ ಮೊತ್ತಮೊದಲ ಧರ್ಮಕೇಂದ್ರವೆಂದು ಇತಿಹಾಸದಲ್ಲಿ ದಾಖಲಾಗಿದೆ.
ಬೋಕ್ಲೇ ಸ್ವಾಮಿಗಳು ಅಲ್ಲಿಂದ ೧೮೪೩ರಲ್ಲಿ ಕೇರಳದ ವೆರಾಪೊಲಿಗೆ ಹೋಗಿ ಕೊಯಮತ್ತೂರಿನ ಪಾಲ್ಗಾಟ್ ಧರ್ಮಕೇಂದ್ರದ ಗಡಿ ವ್ಯಾಜ್ಯವನ್ನು ಸುಸೂತ್ರವಾಗಿ ಬಗೆಹರಿಸಿ ಗೋವನ್ನರ ಮನಗೆದ್ದರು. ೧೮೪೫ರಲ್ಲಿ ಮಲಬಾರ್ ಮಿಷನ್ನು ಇಬ್ಭಾಗವಾದಾಗ ಬೋಕ್ಲೇ ಸ್ವಾಮಿಗಳು ಮೈಸೂರು ಮಿಷನ್ನಿನಲ್ಲೇ ಉಳಿದರು.
ಬ್ರಿಟಿಷರ ಪಾಲಿಗೆ ಅಪ್ಯಾಯಮಾನರಾಗಿದ್ದ ಬೋಕ್ಲೇ ಸ್ವಾಮಿಗಳು ಅವರ ಪ್ರೀತಿ ಒಲವಿನ ಸದುಪಯೋಗ ಮಾಡಿಕೊಂಡು ಇಡೀ ಮೈಸೂರು ಪ್ರಾಂತ್ಯದಲ್ಲಿ ಹಲವಾರು ಗುಡಿಗಳನ್ನು ಕಟ್ಟಿದರು. ಅವರು ಕಟ್ಟಿಸಿದ ದೇವಾಲಯಗಳು ಒಂದೆರಡಲ್ಲ. ೧೮೩೭ರಲ್ಲಿ ಫ್ರೇಸರ್ ಪೇಟೆಯಲ್ಲಿ (ಈಗಿನ ಕುಶಾಲನಗರ), ೧೮೪೦-೪೧ರಲ್ಲಿ ಶೀಮೊಗ್ಗೆ, ಜಾಲಮಂಗಲ, ನಂದಿಗೊಂಡಗಳಲ್ಲಿ, ಮೈಸೂರಿನ ಬಳಿ ದೋರನಹಳ್ಳಿಯಲ್ಲಿ, ಪಾಲ್ಗಾಟು ಬಳಿಯ ಚಿತ್ತೂರಿನಲ್ಲಿ ದೇವಾಲಯಗಳನ್ನು ಕಟ್ಟಿಸಿದರು. ಹರಿಹರ ಮತ್ತು ಆನೆಕಲ್ಲುಗಳಲ್ಲಿ ಸಹಾ ಗುಡಿಗಳನ್ನು ಕಟ್ಟಿದ ಅವರು ಪಾಲಹಳ್ಳಿ ಗುಡಿಯನ್ನು ದುರಸ್ತಿಗೊಳಿಸಿದರಲ್ಲದೆ ಶೆಟ್ಟಿಹಳ್ಳಿಯ ದೇವಾಲಯವನ್ನು ವಿಸ್ತರಿಸಿದರು. ಅತ್ತಿಬೆಲೆಗೆ ಹತ್ತಿರವಿರುವ ಹೊಸೂರಿನಲ್ಲಿ ಗುರುಗಳ ಮನೆಯನ್ನು ಕಟ್ಟಿಸಿದರು. ಪುಂಗನೂರು ಕಡಪಾಗಳಲ್ಲೂ ಇವರು ಸೇವೆ ಸಲ್ಲಿಸಿದ ಕುರಿತು ಉಲ್ಲೇಖವಿದೆಯಾದರೂ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ. ಮೈಸೂರಿನಲ್ಲಿ ಸಂತ ಫಿಲೋಮಿನಾ ದೇವಾಲಯಕ್ಕೆ ಅಡಿಪಾಯ ಹಾಕಿದರಾದರೂ ಮೈಸೂರು ಮಹಾರಾಜರ ಬೆಂಬಲದೊಂದಿಗೆ ಅದನ್ನು ಮುಂದುವರಿಸಿದ್ದು ಶಾರ್ಬೊನೊ ಸ್ವಾಮಿಗಳು.
ಬೆಂಗಳೂರಿನಲ್ಲೂ ಕಾರ್ಯ ನಿರ್ವಹಿಸಿದ ಸ್ವಾಮಿ ಬೋಕ್ಲೇ ಅವರು ಹಲವಾರು ದೇವಾಲಯಗಳನ್ನು ನಿರ್ಮಿಸಿದ ಉಲ್ಲೇಖವಿದೆ. ಸೋಮನಹಳ್ಳಿಯ ದೇವಾಲಯ ನಿರ್ಮಾಣದಲ್ಲಿ ಇವರ ಪಾತ್ರವಿದೆ. ೧೮೪೬ರಲ್ಲಿ ಶೂಲೆ ಬಳಿ ಸೆಮಿನರಿಯೊಂದನ್ನು ಕಟ್ಟಿದರು. ಆದರೆ ಕಟ್ಟಡವನ್ನು ಹೆಣ್ಣು ಮಕ್ಕಳ ಶಾಲೆಗಾಗಿ ಬಿಟ್ಟುಕೊಡಬೇಕಾಯಿತು ಎಂಬುದು ಇತಿಹಾಸ.
ಬೆಂಗಳೂರಿನಲ್ಲಿ ಬೋಕ್ಲೇ ಸ್ವಾಮಿಗಳು ಕಟ್ಟಿಸಿದ ಚರ್ಚುಗಳಲ್ಲಿ ಪ್ರಮುಖವಾದುದು ಚಾಮರಾಜಪೇಟೆಯಲ್ಲಿನ ಸಂತ ಜೋಸೆಫರ ಚರ್ಚು. ಬೆಂಗಳೂರಿನ ಹಳೇ ಪೇಟೆಯಲ್ಲಿದ್ದ ಚವೇರಿಯವರ ಹೆಸರಿನ ಪುರಾತನ ಚರ್ಚು ಜನರಿಂದ ತುಂಬಿ ತುಳುಕುತ್ತಿತ್ತು. ಇಲ್ಲೊಂದು ದೊಡ್ಡ ದೇವಾಲಯದ ಅಗತ್ಯವೂ ಇತ್ತು. ಸಂತ ಜೋಸೆಫರಿಗೆ ಹರಕೆ ಹೊತ್ತಿದ್ದ ಕ್ರೈಸ್ತ ಶ್ರೀಸಾಮಾನ್ಯರೊಬ್ಬರು ದೇವಾಲಯ ಕಟ್ಟಲು ಅಗತ್ಯ ಹಣ ಸಹಾಯ ಮಾಡಿದರು. ೧೮೫೧ರ ಅಕ್ಟೋಬರ್ ೧೫ರಂದು ಶಾರ್ಬೊನೊ ಸ್ವಾಮಿಗಳು ಹೊಸ ದೇವಾಲಯಕ್ಕೆ ಅಡಿಪಾಯ ಹಾಕಿದರು, ಬೋಕ್ಲೇ ಸ್ವಾಮಿಗಳು ಕಟ್ಟಿ ಮುಗಿಸಿದರು.
ಹಿಂದೆ ಇದ್ದ ಅಬ್ಬೆ ದ್ಯು ಬುವಾ ಸ್ವಾಮಿಗಳು ಬೆಂಗಳೂರು ತಮಿಳು ಭಾಷಿಕ ಜನರ ಊರು ಎಂದು ತಪ್ಪಾಗಿ ಬಿಂಬಿಸಿಬಿಟ್ಟಿದ್ದರು. ತಪ್ಪು ಕಳಂಕವನ್ನು ತೊಡೆದವರು ಬೋಕ್ಲೇ ಸ್ವಾಮಿಗಳು. ಕನ್ನಡ ನುಡಿಯನ್ನು ಬಲು ಚೆನ್ನಾಗಿ ಅರಿತಿದ್ದ ಬೋಕ್ಲೇ ಸ್ವಾಮಿಗಳು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆಂದು ಇತಿಹಾಸ ಹೇಳುತ್ತದೆಯಾದರೂ ಅವು ಸಿಕ್ಕಿಲ್ಲ. ಧರ್ಮದ ಕುರಿತ ಪ್ರೌಢಪ್ರಬಂಧವನ್ನು ಅವರು ರಚಿಸಿದ್ದರೆಂದು ಉಲ್ಲೇಖವಿದೆಯಾದರೂ ಅದು ಯಾವ ಗ್ರಂಥಾಲಯದಲ್ಲಿದೆಯೋ ತಿಳಿಯದು. ಅವು ಲಭ್ಯವಾದರೆ ಅಂದಿನ ಬೋಕ್ಲೇ ಸ್ವಾಮಿಗಳ ಕಾಲದ ಆಗುಹೋಗುಗಳ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬಹುದು.

ಬ್ರಿಟಿಷ್ ಸರ್ಕಾರದ ಅಧಿಕಾರಿಗಳಂತೂ ಬೋಕ್ಲೇ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಸಮಾಜದ ಇತರ ಧರ್ಮೀಯರೊಂದಿಗೂ ಬೋಕ್ಲೇ ಅವರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಹೀಗೆ ಅತ್ಯಂತ ಜನಾನುರಾಗಿಯಾಗಿ ಛಲದಿಂದ ಜಾಣ್ಮೆಯಿಂದ ಎಲ್ಲ ಎಲ್ಲೆಗಳನ್ನು ಮೀರಿ ಬದುಕಿದ ಬೋಕ್ಲೇ ಸ್ವಾಮಿಗಳು ದೇವಸೇವೆ ಜನಸೇವೆ ಮಾಡುತ್ತಲೇ ಬಿಳೇಕಳ್ಳಿ (ಶಿವಾಜಿನಗರ) ಯಲ್ಲಿ ೧೮೫೮ರ ಜುಲೈ ೧೬ರಂದು ಸ್ವರ್ಗ ಸೇರಿದರು. (ಆದರೆ ಅವರ ಸಮಾಧಿಕಲ್ಲು ಎಲ್ಲಿದೆಯೆಂಬುದು ತಿಳಿಯದು)

ಗುರುವಾರ, ಅಕ್ಟೋಬರ್ 31, 2013

ಹಿಂದೀ ಎಂಬ ಭೂತ

ದೇಶದ ತುಂಬೆಲ್ಲ “ಹಿಂದೀ ರಾಷ್ಟ್ರಭಾಷೆ” ಎಂಬ ವ್ಯವಸ್ಥಿತ ಸುಳ್ಳನ್ನು ಹರಡಲಾಗುತ್ತಿದೆ ಎಂಬುದು ಆತಂಕಕಾರೀ ವಿಚಾರ. ರಾಜಭಾಷೆಗೂ ರಾಷ್ಟ್ರಭಾಷೆಗೂ ವ್ಯತ್ಯಾಸ ತಿಳಿಯದ ಹಾಗೂ ರಾಜಭಾಷೆಯನ್ನೇ ರಾಷ್ಟ್ರಭಾಷೆ ಎಂದು ತಪ್ಪಾಗಿ ತಿಳಿದಿರುವ ಜನರೇ ಹಿಂದೀಯನ್ನು ರಾಷ್ಟ್ರಭಾಷೆ ಎಂದು ಭಾವಿಸಿದ್ದಾರೆ, ಅವರೇ ಈ ಸುಳ್ಳಿನ ಪ್ರಚಾರಕರೂ ಆಗಿದ್ದಾರೆ. ಕೇಂದ್ರಸರ್ಕಾರವು ಇಂಗ್ಲಿಷಿನ ಜೊತೆಗೆ ಹಿಂದೀಯನ್ನೂ ನಮ್ಮ ದೇಶದ ರಾಜಭಾಷೆ ಎಂಬುದಾಗಿ ಘೋಷಿಸಿದೆ. ರಾಜಭಾಷೆ ಎಂದರೆ ಅಧಿಕೃತ ನುಡಿ ಅಥವಾ ಆಡಳಿತ ನುಡಿ ಎಂದರ್ಥ.
ಫ್ರಾನ್ಸ್, ಜಪಾನ್, ರಷ್ಯಾಗಳು ತಮ್ಮದೇ ಆದ ದೇಶನುಡಿಯನ್ನು ಹೊಂದಿ ಏಳಿಗೆ ಹೊಂದಿರುವುದಲ್ಲದೆ ತಮ್ಮದೇ ಆದ ಒಂದು ಮರ್ಯಾದೆ ಉಳಿಸಿಕೊಂಡಿವೆ. ಅವು ಎಂದೂ ಪರಕೀಯ ನುಡಿಯಾದ ಇಂಗ್ಲಿಷಿನ ಮರೆ ಹೊಕ್ಕಿಲ್ಲ, ಹಾಗೆ ಮಾಡದೆಯೂ ಅವು ತಮ್ಮ ಪಯಿರನ್ನು ಎಲ್ಲೆಡೆ ಹಂಚಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಿದಾಗ ದೇಶಕ್ಕೆಲ್ಲ ಒಂದೇ ನುಡಿಯಿರತಕ್ಕದ್ದೆಂಬ ವಾದ ಒಂದೆಡೆಯಿದೆ.
ಆದರೆ ನಮ್ಮ ದೇಶದ ಸಂದರ್ಭಕ್ಕೆ ಅದು ಅನ್ವಯಿಸುವುದೇ ಎಂಬುದು ಚರ್ಚಿಸಬೇಕಾದ ಸಂಗತಿ. ಏಕೆಂದರೆ ನಮ್ಮ ದೇಶವು ಹಲವು ನುಡಿಗಳ ತವರು. ಆಳ ಅಳವು ಹಲಬಗೆ ಹಾಗೂ ಅಕ್ಕರದ ನಡೆಗಳ ಕಾರಣದಿಂದಾಗಿ ನಮ್ಮಲ್ಲಿ ಹಲವಾರು ಸಿರಿವಂತ ನುಡಿಗಳಿವೆ. ಅವು ಹಿಂದೀ ಮತ್ತು ಇಂಗ್ಲಿಷಿನ ಪ್ರವೇಶಕ್ಕೆ ಮುನ್ನವೇ ಸೊಂಪಾಗಿ ಬೆಳೆದುಬಂದಿವೆ. ಇವೆಲ್ಲವೂ ತಮ್ಮದೇ ಆದ ಪ್ರಾಂತ್ಯಗಳಲ್ಲಿ ತಮ್ಮದೇ ಆದ ರಾಜಾಳ್ವಿಕೆಗಳಲ್ಲಿ ತಮ್ಮದೇ ಭಾಷಿಕ ಜನರ ಹೃದಯಗಳಲ್ಲಿ ವಿಪುಲವಾಗಿ ಸಂಮೃದ್ಧಿಗೊಂಡು ಬಂದಿವೆ. ಅವು ಹಾಗೇ ಇದ್ದಿದ್ದರೆ ಚೆನ್ನಾಗಿತ್ತೇನೋ?
ಆದರೆ ನಮ್ಮ ಈ ವಿಶಾಲ ಭೂಖಂಡದ ಮೇಲೆ ವಾಣಿಜ್ಯೋದ್ದೇಶಗಳಿಗಾಗಿ ಹೊರಗಿನವರ ಅತಿಕ್ರಮಣ ಪ್ರಾರಂಭವಾದ ಮೇಲೆ ನಾವೆಲ್ಲ ಒಂದೇ ದೇಶದವರು ಎನ್ನುವ ಪರಿಕಲ್ಪನೆ ಮೂಡಿಬಂದಿತು. ನಾವೆಲ್ಲ ಭಾರತೀಯರು ಎಂಬುದು ಉದಾತ್ತ ಭಾವನೆಯೇ ಸರಿ. ಈ ಒಂದು ಉದಾತ್ತ ಭಾವನೆಯ ಮುಂದುವರಿದ ಭಾಗವಾಗಿ ನಾವೆಲ್ಲ ಸಂತಸದಿಂದ ಹೊಸ ನುಡಿಯಾದ ಹಿಂದೀಯನ್ನು ಕಲಿಯಲು ಉತ್ಸುಕರಾದೆವು. ನಮ್ಮ ಪಠ್ಯಗಳಲ್ಲಿ ಬಲವಂತವಾಗಿ ಹಿಂದೀಯನ್ನು ಹೇರಿ ಪರೀಕ್ಷೆಗಳಲ್ಲಿ ಅವಕ್ಕೆ ಉತ್ತರಗಳನ್ನೂ ಹೇಳಿ ನಮ್ಮನ್ನು ಪಾಸು ಮಾಡಿದರು. ಒಂದು ಒಳ ಕಾರ್ಯಸೂಚಿ ಹೊಂದಿದ್ದ ಹಿಂದೀ ಭಾಷಿಕ ಪಟ್ಟಭದ್ರರು ನಮ್ಮ ಹಿಂದೀ ಕಲಿಕೆಯು ನಿರ್ವಿಘ್ನವಾಗಿ ನಡೆಯುತ್ತಿರುವುದನ್ನು ಕಂಡು ಸಂಭ್ರಮಪಟ್ಟರು.
ತಮ್ಮದೇ ರಾಜ್ಯಕಟ್ಟುವ ಹುನ್ನಾರ ಹೊಂದಿದ್ದ ಅವರು ದೇಶದ ಇತರ ಸಂಪದ್ಭರಿತ ನುಡಿಗಳನ್ನು ಬಲಿಗೊಟ್ಟು ಹಿಂದೀಯನ್ನು ಪೋಷಿಸಿದರೆಂಬುದೇ ಇತಿಹಾಸದ ವ್ಯಂಗ್ಯ. ಇನ್ನೊಂದು ನುಡಿಯನ್ನು ಸಂವಹನಕ್ಕಾಗಿ ಕಲಿಯಬೇಕೆನ್ನುವುದು ಖುಷಿಯ ವಿಚಾರವೇನೋ ಸರಿಯೇ ಆದರೆ ಆ ಇನ್ನೊಂದು ನುಡಿಯನ್ನು ಬಲವಂತವಾಗಿ ಹೇರುವಾಗ ಅದು ಮನಸಿಗೆ ಕಸಿವಿಸಿ ಮಾಡುವುದಂತೂ ನಿಜ. ಅದರ ಪರಿಣಾಮವಾಗಿ ಇವೊತ್ತು ಹಿಂದೀ ಇಲ್ಲದಿದ್ದರೆ ನೀನು ಬದುಕಲಾರೆ ಎಂಬಂತ ವಾತಾವರಣ ಸೃಷ್ಟಿಯಾಗಿದೆ.
ಹೆಚ್ಚಿನ ಓದಿಗೆ ಇಲ್ಲವೇ ಕೆಲಸಕ್ಕೆ ನೀವು ಫ್ರಾನ್ಸ್ ದೇಶಕ್ಕೆ ಹೋಗಬೇಕಾಗುತ್ತದೆ ಎಂದುಕೊಳ್ಳೋಣ. ಆಗ ನೀವು ಫ್ರೆಂಚ್ ನುಡಿಯನ್ನು ಕಲಿಯಲೇಬೇಕು. ನೀವಾಗೇ ನಿಮ್ಮ ಪರಿಶ್ರಮದಿಂದ ಅದನ್ನು ಕಲಿತರೂ ಅಲೆಯೆನ್ಸ್ ಫ್ರಾಂಚೇಸ್ ಎಂಬ ಫ್ರೆಂಚ್ ಸರ್ಕಾರದ ಏಜೆನ್ಸಿಯಲ್ಲಿ ನಿಮ್ಮ ಪರಿಣತಿಯನ್ನು ಒರೆಗೆ ಒಡ್ಡಿ ಪ್ರಮಾಣಿತರಾಗಬೇಕು. ಆಗಲೇ ನಿಮಗೆ ಫ್ರಾನ್ಸ್ ದೇಶದ ವೀಸಾ ದೊರೆಯುವುದು. ಅದನ್ನೇ ನಮ್ಮ ದೇಶಕ್ಕೂ ಅನ್ವಯಿಸಿ ನಿಮಗೆ ಹಿಂದೀ ಗೊತ್ತಿದ್ದರೆ ಮಾತ್ರವೇ ಸರ್ಕಾರೀ ನೌಕರಿ ಎಂದು ಯಾರಾದರೂ ಹೇಳಿದರೆ ಆತಂಕವಾಗುವುದು ಸಹಜವೇ. ಆದರೆ ಈ ಆತಂಕವನ್ನು ಸೃಜಿಸುವುದು ಸರ್ಕಾರವಲ್ಲ ಬದಲಿಗೆ ಅದರ ನೀತಿಯನ್ನು ತಪ್ಪಾಗಿ ಅರ್ಥೈಸುವ ಅದರ ನೌಕರಶಾಹಿ ಎಂದರೆ ತಪ್ಪಾಗದು. ತಮ್ಮ ವೈಯಕ್ತಿಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಈ ಆತಂಕವಾದಿಗಳು ಅಥವಾ ಭಯೋತ್ಪಾದಕರು ಹಿಂದೀ ಇಲ್ಲದಿದ್ದರೆ ನೀನು ಬದುಕಲಾರೆ ಎಂಬಂತಹ ಭಯವನ್ನು ಹುಟ್ಟಿಸುತ್ತಾರೆ.
ಹಾಗೆ ನೋಡಿದರೆ ಇಂಗ್ಲಿಷ್ ಆಳ್ವಿಕೆಯ ಫಲವಾಗಿ ನಮ್ಮ ದೇಶದ ಆಡಳಿತ ಹಾಗೂ ನ್ಯಾಯಾಂಗದ ಮೂಲೆ ಮೊಡಕುಗಳಲ್ಲಿ ಇಂಗ್ಲಿಷು ಹಬ್ಬಿ ಹರಡಿದೆ. ಅದು ಹಿಂದೀಗೆ ಪರ್ಯಾಯವಾಗಿ ಅಧಿಕೃತ ನುಡಿಯಾಗಿದೆ ಮಾತ್ರವಲ್ಲ ಸಂಪರ್ಕ ನುಡಿಯಾಗಿಯೂ ಇದೆ. ಜಗತ್ತಿನ ಎಲ್ಲ ರಂಗಗಳಲ್ಲೂ ಇಂಗ್ಲಿಷು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ ಇಂಗ್ಲಿಷನ್ನು ಇನ್ನಷ್ಟು ಕಾಲ ನಮ್ಮ ದೇಶದ ಆಡಳಿತ ನುಡಿಯಾಗಿ ಮುಂದುವರಿಸುವುದರಲ್ಲಿ ಏನೇನೂ ತಪ್ಪಿಲ್ಲ.
ಆದರೆ ಸಂವಹನೆಯ ನುಡಿಯಾಗಿ ಸ್ಥಳೀಯ ಜನಪದಕ್ಕೂ ಸ್ಥಾನ ಕಲ್ಪಿಸಬೇಕಾದ್ದು ನ್ಯಾಯ. ಆದರೆ ದೇಶದ ಎಲ್ಲೆಡೆಯೂ ಈ ಜನಪದದ ಜಾಗವನ್ನು ಹಿಂದೀಯು ಎಂದೆಂದೂ ಪಡೆಯಲು ಸಾಧ್ಯವಿಲ್ಲ. ಹಿಂದೀ ರಾಜ್ಯಗಳೆಂದು ಗುರುತಿಸಿಕೊಂಡಿರುವ ರಾಜ್ಯಗಳಲ್ಲೇ ಅವಧೀ, ಭೋಜಪುರೀ, ಖಡೀಬೋಲೀ, ಮುಂತಾದ ಜನಪದಗಳಿವೆ. ಈ ಜನಪದರು ಶಿಷ್ಟ ಹಿಂದೀಯನ್ನು ಶಾಲೆಯಲ್ಲಿ ಕಲಿತು ಶಾಲೆಯ ನಂತರ ಮರೆಯುತ್ತಾರೆ. ಹಿಂದೀ ಸಿನಿಮಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭೋಜಪುರೀ ಸಿನಿಮಾಗಳು ತಯಾರಾಗುತ್ತವೆಂದರೆ ಆ ನುಡಿಯ ಹೆಚ್ಚಳವನ್ನು ಅಲ್ಲಗಳೆಯಲಾಗದು. ಅಂದರೆ ನುಡಿಯುವ ಹಿಂದೀಗೂ ಬರೆಯುವ ಶಿಷ್ಟ ಹಿಂದೀಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಖಚಿತ. ನುಡಿಯುವ ಹಿಂದೀಯನ್ನು ಅಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದಾದರೂ ಬರೆಯುವ ಹಿಂದೀ ಕ್ಲಿಷ್ಟವಾದ ಕಬ್ಬಿಣದ ಕಡಲೆಯಾಗಿದೆ. ಬಂಗಾಲಿ, ಅಸ್ಸಾಮಿ, ಒಡಿಯಾ ರಾಜ್ಯಗಳವರ ಭಾವನೆಯೂ ಇದೇ ಆಗಿದೆ. ಹಿಂದೀಯನ್ನು ಬಲವಾಗಿ ವಿರೋಧಿಸುವವರ ಸಾಲಿನಲ್ಲಿ ಬಂಗಾಳಿಗರಿಗೆ ಹೆಚ್ಚಿನ ಸ್ಥಾನವಿದೆ. ಈಶಾನ್ಯ ರಾಜ್ಯಗಳ ಜನ ಹಿಂದೀ ಹೇರಿಕೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ತಮಿಳರು ಹಿಂದೀ ಹೇರಿಕೆಯನ್ನು ವಿರೋಧಿಸುತ್ತಾರಾದರೂ ದೆಹಲಿಯ ಆಯಕಟ್ಟಿನ ಅಧಿಕಾರಸ್ಥಾನದಲ್ಲಿ ಕುಳಿತು ತಮಗೆ ಬೇಕಾದ್ದನ್ನು ಹಿಂದೀ ಮೂಲಕವೇ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಈಶಾನ್ಯ ರಾಜ್ಯದವರಿಗೆ ಹಿಂದೀ ಮಾತನಾಡುವವರ ಮೇಲೆ ಜನಾಂಗೀಯ ದ್ವೇಷವಿದೆ.
ಹೀಗೆಂದ ಮಾತ್ರಕ್ಕೆ ನಾನು ಹಿಂದೀ ದ್ವೇಷವನ್ನು ಪ್ರತಿಪಾದಿಸುತ್ತಿದ್ದೇನೆಂದು ಅರ್ಥವಲ್ಲ. ಕೆಲಸದ ನಿಮಿತ್ತ ದೇಶ ಸುತ್ತುವ ನನಗೆ ಹಿಂದೀ ಸಂಪರ್ಕ ನುಡಿಯಾಗಿ ಬರುತ್ತದೆ. ಆದರೆ ಹಿಂದೀಯ ಆಡಳಿತ ಪದಕೋಶವು ನನಗಿನ್ನೂ ಜೀರ್ಣವಾಗದ ಸಂಗತಿ. ಹಾಗಾಗಿ ನನಗೆ ಹಿಂದೀ ಒಂದು ಫಾರಿನ್ ಲ್ಯಾಂಗ್ವೇಜ್. ಇಲ್ಲಿ ಫಾರಿನ್ ಎಂದರೆ ವಿದೇಶೀ ಎಂದಲ್ಲ ಅಪರಿಚಿತ ಎಂಬುದಾಗಿ ಪರಿಭಾವಿಸಬೇಕು.
ಅರ್ಜಿಯೊಂದು ಇಂಗ್ಲಿಷಿನಲ್ಲಿದ್ದರೆ ಇಂಗ್ಲಿಷಿನಲ್ಲೇ ತುಂಬುವ ನಾನು ಅದು ಇಂಗ್ಲಿಷ್ ಮತ್ತು ಹಿಂದೀಯಲ್ಲಿದ್ದರೆ ಕನ್ನಡದಲ್ಲಿ ತುಂಬುತ್ತೇನೆ. ಏಕೆಂದರೆ ಅದು ಹಿಂದೀ ವಿರುದ್ಧದ ನನ್ನ ಪ್ರತಿಭಟನೆಯ ಸಂಕೇತ. ಮತ್ತು ಆ ಸಂದರ್ಭಗಳಲ್ಲಿ ನನ್ನೊಂದಿಗೆ ಜಗಳಾಡುವವರು ಹಿಂದೀ ಭಾಷಿಕರಾಗಿರದೆ ಕನ್ನಡಿಗರೇ ಆಗಿರುತ್ತಾರೆಂಬುದೂ ವಿಪರ್ಯಾಸ. ಈ ರೀತಿಯ ಹಿಂದೀ ಬಳಕೆಗೆ ಕೇಂದ್ರಸರ್ಕಾರದ ರಾಜಭಾಷಾ ಇಲಾಖೆಯಿಂದ ಸಂಭಾವನೆ ಸಿಗುತ್ತದೆಂಬುದೂ ಅಷ್ಟೇ ನಿಜ. ಅಂದರೆ ತೆರಿಗೆದಾರನ ಹಣದ ಒಂದಷ್ಟು ಪಾಲು ಈ ರೀತಿಯ ತೆವಲಿಗಾಗಿ ಬಳಕೆಯಾಗುತ್ತದೆ ಎಂದಂತಾಯಿತು.
ನಾನು ಉದ್ಯೋಗದಲ್ಲಿರುವ ಸಂಸ್ಥೆಯಲ್ಲಿ ಪ್ರತಿವರ್ಷ ಹಿಂದೀ ಪಕ್ಷಾಚರಣೆ, ಹಿಂದೀ ಪತ್ರಿಕೆಯ ಪ್ರಕಟನೆ, ಹಿಂದೀ ನಾಮಫಲಕ, ಹಿಂದೀ ಸೂಚನೆಗಳು, ಹಿಂದೀ ಟಿಪ್ಪಣಿಗಳು ಮುಂತಾದವಕ್ಕಾಗಿ ಅಪಾರ ಹಣದ ವ್ಯಯವಾಗುತ್ತದೆ. ಇದಕ್ಕೆಲ್ಲ ಆ ರಾಜಭಾಷಾ ಇಲಾಖೆಯಿಂದಲೇ ಹಣ ಹರಿದುಬರುತ್ತದೆ. ಹಿಂದೀಯನ್ನು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದನ್ನು ಅಳೆಯಲು ಆಡಿಟ್ ವ್ಯವಸ್ಥೆಯೂ ಇದೆ. ಹಿಂದೀ ಬಳಕೆಗೆ ನೀಡುವ ಪ್ರೋತ್ಸಾಹವನ್ನು ಹಣದ ರೂಪದಲ್ಲೇ ನೀಡಲಾಗುತ್ತದೆ. ಇನ್ನಾವ ಉಡುಗರೆಯ ರೂಪದಲ್ಲಲ್ಲ. ಹಿಂದೀ ನುಡಿಯ ಪ್ರದೇಶದ ಹಿಂದೀ ಮಾತುಗಾರರು ಹಾಗೂ ಹಿಂದೀಯೇತರ ನೆಲದ ಅನ್ಯ ಭಾಷಿಕರು ಎಂಬುದಾಗಿ ದೇಶವನ್ನು ವಿಂಗಡಿಸಿ ಈ ಎರಡನೆಯ ಭಾಗದವರಿಗೆ ಗರಿಷ್ಠ ಹಣ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಹೀಗೆ ಈ ಹಿಂದಿಯೇತರರು ಹಣದ ಪ್ರಲೋಭನೆಗೆ ಸೋತು ತಮಗೆ ಅರ್ಥವಾಗಲೀ ಬಿಡಲೀ ತಪ್ಪು ತಪ್ಪು ಹಿಂದೀ ಪ್ರಯೋಗಿಸುತ್ತಾ ಹಿಂದೀ ಪ್ರಚಾರಕರಾಗುತ್ತಾರಲ್ಲದೆ ತಮ್ಮದೇ ತಾಯ್ನುಡಿಯನ್ನು ತಮಗರಿವಿಲ್ಲದೇ ಹೊಸಕುತ್ತಾರೆ.

ಹೀಗೆ ತಮ್ಮತನವನ್ನು ಮಾರಿಕೊಳ್ಳುವುದರಿಂದ ನಮ್ಮ ಮುಂದಿನ ಪೀಳಿಗೆಯ ಸ್ವಂತಿಕೆಯನ್ನು ಚಿವುಟುತ್ತಿದ್ದೇವೆಂಬ ಹಾಗೂ ಅವರ ಉದ್ಯೋಗಾವಕಾಶಗಳನ್ನು ಮೊಟಕುಗೊಳಿಸುತ್ತಿದ್ದೇವೆಂಬ ಸತ್ಯವನ್ನು ಅವರು ಅರಿಯಬೇಕು.