ಭಾನುವಾರ, ಮಾರ್ಚ್ 16, 2014

ಕ್ರಿಸ್ತಕಾವ್ಯ

ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ’ಕ್ರಿಸ್ತ ಕಾವ್ಯ’ ಎಂಬ ವಿಭಿನ್ನ ಸಾಂಸ್ಕೃತಿಕ ಮನೋಲ್ಲಾಸ ರೂಹುತಳೆದಿತ್ತು. ಫೆಬ್ರವರಿ ೨೩ರ ಭಾನುವಾರ ಸೇವಾಸದನ ರಂಗಮಂದಿರದಲ್ಲಿ ಡಾ, ಕೆ ಎಸ್ ಪವಿತ್ರಾ ಅವರು ಯೇಸುಸ್ವಾಮಿಯ ಜೀವನ ಕಥನವನ್ನು ಭರತನಾಟ್ಯವೆಂಬ ತೇಜೋಮಯ ಲಾಸ್ಯರೂಪದಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದರು. ಯೇಸುಕ್ರಿಸ್ತನ ಜೀವನಮೌಲ್ಯಗಳು ಮತ್ತು ಉಪದೇಶಗಳನ್ನು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಭರತನಾಟ್ಯದ ಮುಖೇನ ಪರಿಶೋಧಿಸುವ ಪವಿತ್ರಾ ಅವರ ಆಸಕ್ತಿಯನ್ನು ಮೆಚ್ಚಲೇಬೇಕು. ಈ ಹಿಂದೆಯೂ ಅನೇಕರು ಈ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿದ್ದಾರಾದರೂ ಕನ್ನಡ ಕಾವ್ಯಸುಧೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಮಾರ್ಗದಲ್ಲಿ ಪವಿತ್ರಾ ಅವರು ಗೆದ್ದಿದ್ದಾರೆ.
ಸುಮಾರು ೧೯೮೯ರಲ್ಲಿ ಇದೇ ಮಲ್ಲೇಶ್ವರದ ಕೇಶವ ನೃತ್ಯಶಾಲೆಯ ತಂಡದವರ ’ಮಹಾತ್ಮ ಯೇಸುಕ್ರಿಸ್ತ’ ಎಂಬ ನೃತ್ಯರೂಪಕವನ್ನು ನಾನು ಪ್ರಾಯೋಜಿಸಿದಾಗ ಅದು ಎಲ್ಲರ ಮೆಚ್ಚುಗೆ ಪಡೆದಿತ್ತು. ಅಂದು ಫಾದರ್ ಪ್ಯಾಟ್ರಿಕ್ ಡಿಗ್ಬಿ ಎಂಬ ಹಿರಿಯ ಗುರುಗಳು ’ತುಂಬಾ ಬೊಂಬಾಟ್ ಆಗಿತ್ತು’ ಎಂದು ಉದ್ಗರಿಸಿದ್ದು ನನಗಿಂದೂ ನೆನಪಿದೆ. ಇದೇ ಮಲ್ಲೇಶ್ವರದ ಸಂತ ರಾಯಪ್ಪರ ಗುರುಮಠದಲ್ಲಿ ಹಿಂದೊಮ್ಮೆ ಫ್ರಾನ್ಸಿಸ್ ಬಾರ್ಬೊಸಾ ಅವರೂ ಯೇಸುಕಾವ್ಯವನ್ನು ಪ್ರಯೋಗಿಸಿದ್ದರು. ಕೇಶವ ನೃತ್ಯಶಾಲೆಯದು ತಂಡದ ಪ್ರಯತ್ನವಾದರೆ ಫ್ರಾನ್ಸಿಸ್ ಬಾರ್ಬೊಸಾ ಅವರು ಏಕವ್ಯಕ್ತಿ ನರ್ತನ.
ಮಲ್ಲೇಶ್ವರದಲ್ಲಿ ನಡೆದ ಪವಿತ್ರಾ ಅವರ ಈ ನೃತ್ಯ ಕಾರ್ಯಕ್ರಮವೂ ಏಕವ್ಯಕ್ತಿ ನಾಟ್ಯವೇ. ಮನೋವೈದ್ಯರಾದ ಆಕೆ ನೃತ್ಯಪ್ರಕಾರದಲ್ಲೂ ಪಳಗಿದ್ದಾರೆ. ಅವರು ’ಕ್ರಿಸ್ತಕಾವ್ಯ’ ನೃತ್ಯರೂಪಕದ ಮೂಲಕ ಯೇಸುವಿನ ಜೀವನಮೌಲ್ಯಗಳನ್ನು ನಮ್ಮ ಮಣ್ಣಿನ ಕಲೆಯ ಮೂಲಸ್ರೋತದಲ್ಲಿ ಏಕೀಭವಿಸಿದರು.
ದೇವರು ಜಗತ್ ಸೃಷ್ಟಿಯನ್ನು ಸಾಕಾರಗೊಳಿಸಿದ್ದನ್ನು ಮಂದಸ್ಮಿತ ಹಾವಭಾವಗಳಲ್ಲಿ ನಿರಾಕಾರವಾಗಿ ನಿರೂಪಿಸಿದ ಪವಿತ್ರಾ ಅವರು ಮೀನಾಗಿ ಈಜಿದರು, ಹರಿಣವಾಗಿ ಜಿಗಿದರು, ನವಿಲಾಗಿ ಕುಣಿದರು, ಹಾವಾಗಿ ತೆವಳಿದರು. ಮೃಣ್ಮಯ ಮೂರ್ತಿಯನ್ನು ಕಡೆದ ದೇವಕುಂಬಾರ ಅದಕ್ಕೆ ನವಿರಾದ ಬೆರಳುಗಳನ್ನೂ ಮಾತನ್ನೂ ದಯಪಾಲಿಸಿ ನರನಾಗಿ ಮಾಡಿದರು. ಅವನ ಪಕ್ಕೆಲುಬಿನಿಂದ ಪವಿತ್ರಾ ಅವರು ತಾವೇ ’ಇವಳು’ ಆಗಿ ’ಈವ್ ಳಾದರು’.
ಆಮೇಲೆ ಚೈತ್ರ ಅವರ ವಾಙ್ಮಯ ನಿರೂಪಣೆಯಲ್ಲಿ ಮನುಷ್ಯಕುಲ ಬೆಳೆದು ದ್ವೇಷಾಸೂಯೆಗಳು ಹೆಚ್ಚಿ ದೇವನ ಕೋಪ ಮಿತಿಮೀರಿತು. ವರ್ಷಕಾಲ ಬಿಡದೆ ಸುರಿದ ವರ್ಷಧಾರೆಯಿಂದ ಭೂಮಿಯಲ್ಲಿ ಪ್ರಳಯವಾಗಿ ಅಖಿಲ ಜೀವಜಂತು ನಾಶವಾಯಿತು. ದೇವಕೃಪೆಯಿಂದ ನೋಹ ಮತ್ತವನ ಪರಿವಾರವಷ್ಟೇ ಬದುಕುಳಿದದ್ದು. ತನ್ನ ಸೃಷ್ಟಿಯ ತಾನೇ ನಾಶಗೈದುದಕ್ಕೆ ದೇವನು ನೊಂದುಕೊಂಡ, ಇನ್ನೆಂದೂ ಜಗತ್ತಿಗೆ ಪ್ರಳಯ ತಾರೆನೆಂದು ಅಂದುಕೊಂಡ. ಅದರ ನೆನಪಿಗೆ ಭೂಮಿಯ ಈ ತುದಿಯಿಂದ ಆ ತುದಿಗೆ ಕಾಮನಬಿಲ್ಲನ್ನು ಕಟ್ಟಿದ.
ಇನ್ನು ಕ್ರಿಸ್ತನಾಗಮನ. ನವಮಾಸ ಉದರಲ್ಲಿ ಹೊತ್ತು ಕ್ರಿಸ್ತನನ್ನು ಜಗತ್ತಿಗಿತ್ತು ಪಲ್ಲವಿಸಿ ಸಂಭ್ರಮಿಸಿ ಪೊರೆದಳು ಮೇರಿ ಯಶೋದೆಯಂತೆ. ಬೀದರಿನ ಜಾನಪದ ಹಾಡಾದ ’ಕೂಸ ನೋಡೋಣ ಬನ್ನಿ ಯೇಸುಸ್ವಾಮಿ ಕೂಸ ನೊಡೋಣ ಬನ್ನಿ, ಹಾಸಿದ ಅರಿವೆಯಲ್ಲಿ ಮಾಸದ ಹೊಸ ಕೂಸ . . ’ ಎಂಬುದು ನಾಟ್ಯತಂಡದವರ ಗಾನದಲ್ಲಿ ತೇಲಿಬಂತು.
ಆಮೇಲಾಯ್ತು ಹಸುಗೂಸುಗಳ ಕಗ್ಗೊಲೆ. ತನ್ನನ್ನು ಕೊಲ್ಲಲೆಂದೇ ಯೇಸು ಹುಟ್ಟಿದ್ದಾನೆಂಬ ಸಮಾಚಾರ ತಿಳಿದಿದ್ದೇ ಹೆರೋದ ರಾಜ ಬೆಚ್ಚಿ ಬೆದರುತ್ತಾನೆ. ’ಮಗು ನೀನು ಪೆತ್ತರ್ಗೆ ಲೋಕಕ್ಕೆ ವೈರಿ’ (You are a darling to your parent but a competitor to the world) ಎಂಬಂತೆ, ಕೃಷ್ಣನನ್ನು ಕೊಲ್ಲಲು ಕಂಸನು ಎಳಸಿದಂತೆ, ಹೆರೋದ ರಾಜ ತನ್ನ ನಾಡಿನ ಎಳೆಗೂಸುಗಳನ್ನು ಕೊಚ್ಚಿಹಾಕಿ ಎಂದು ಇತಿಹಾಸವೇ ಬೆಚ್ಚುವಂಥ ಆಜ್ಞೆ ಹೊರಡಿಸುತ್ತಾನೆ. ಕಚಕ್ ಕಚಕ್ ಎಂದು ಕೊಚ್ಚಿದ ರಭಸಕ್ಕೆ ಕುಸುಮರೂಪದ ಅಸುಗೂಸುಗಳು ನಸುನಗುವಂತ ತೊಟ್ಟಲಲಿ ರಕ್ತಮಡುವಿನಲ್ಲಿ ಅಸುನೀಗಿದವು. ಅಯ್ಯೋ, ಆ ದೃಶ್ಯ ಭಯಾನಕ! ಚಿಗುರು ಕೈಗಳು ಎಳೆಯ ಕಾಲ್ಗಳು ತುಂಡಾಗಿ ಬಿದ್ದವು. ಕರುಳು ಹೊರಚೆಲ್ಲಿ ಹೆತ್ತ ಕರುಳನ್ನು ನರಳಿಸಿದವು. ಮಕ್ಕಳ ತಂದೆತಾಯಿಯರು ಬೋರಾಡಿ ಚೀರಾಡಿ ನಿಡುಸುಯ್ದು ತಲೆಚಚ್ಚಿ ಹುಚ್ಚರಾಗಿ ಬೆಪ್ಪರಾಗಿ ಗೋಳಾಡಿದರು. ನಾಟ್ಯದ ರೌದ್ರ ಭಯಾನಕ ಭೀಭತ್ಸ ಕರುಣ ರಸಾರ್ದ್ರದ ಭಾವಲಹರಿಯಲ್ಲಿ ಮಿಂದವರು ಪ್ರೇಕ್ಷಕರು.
ಆದರೆ ಆ ಸಮಯದಲ್ಲಿ ಆ ನಾಡಿನಿಂದಾಚೆ ಬಾಲಯೇಸು ’ಇಹಳು ತಾಯಿ ಪೊರೆವುದವಳ ಹಾಲ ತೊಟ್ಟಿಲೆಂದು ನಂಬಿ ಬಾಳು ತುಂಬಿ ಬದುಕು ಅವಳು ಪ್ರೇಮಸಿಂಧು’ ಎಂಬಂತೆ ಮರಿಯಳ ಮಡಿಲಲ್ಲಿ ಹಾಯಾಗಿ ಮಲಗಿದ್ದರು. ಆ ಎಳೆಕಂದ ಬೆಳೆದು ಬೇರೆ ಮಕ್ಕಳೊಡನೆ ಆಟಕ್ಕೆ ಹೋಗಿ ಎಷ್ಟೊತ್ತಾದರೂ ಮನೆಗೆ ಬರಲಿಲ್ಲ. ಮಗನನ್ನು ಹುಡುಕಿ ಹೊರಟ ಮೇರಿತಾಯಿಗೆ ದೂರದಲ್ಲಿ ಮಗ ಒಂಟಿಯಾಗಿ ನಿಂತಿರುವುದು ಕಂಡಿತು. ಹತ್ತಿರ ಹೋಗಿ ನೋಡಿದರೆ ಅವನ ಕೆನ್ನೆಯ ಮೇಲೆ ಎಳೆಬೆರಳುಗಳ ಗುರುತು. ಕಣ್ಣಲ್ಲಿ ಕಂಬಿನಿಯ ಧಾರೆ. ಯಾಕಳುವೆ ಎಲೆ ಕಂದಾ ಎನ್ನಲು ಆಟವಾಡುವಾಗ ಜಗಳ ಹುಟ್ಟಿತು, ಹುಡುಗನೊಬ್ಬ ನನ್ನ ಕೆನ್ನೆಗೆ ಹೊಡೆದ, ಪಾಪ ಅವನ ಕೈಯೆಷ್ಟು ನೊಂದಿತೋ ಎಂದ ಬಾಲಕ ಯೇಸು.
ಯೇಸು ದೊಡ್ಡವನಾಗಿ ಬೋಧನೆಗೆ ತೊಡಗಿದ. ನನ್ನ ಜನರ ಉದ್ಧಾರ ಹೇಗೆ ಎಂದು ಚಿಂತಿಸಿದ. ಕಳೆದು ಹೋದ ಕುರಿಮರಿಯು ಸಿಕ್ಕಾಗ ಒಡೆಯನು ನಲಿಯುವಂತೆ ದೇವರ ನಲಿವಿಗೆ ಕಾರಣರಾಗಿ ಎಂದು ಹೇಳಿದ. ಯೇಸುವಿನ ಬೋಧೆಗಳು, ಪವಾಡಗಳಿಗಿಂತ ಅವನ ಮನುಜಪ್ರೇಮ ಅಸದಳ. ಪರಿಸಾಯರು ಹೆಂಗಳೆಯೊಬ್ಬಳನ್ನು ಎಳೆತಂದು ಹಾದರಗಿತ್ತಿಯಿವಳು ಇವಳನ್ನು ಕಲ್ಲಿನಿಂದ ಹೊಡೆದು ದಂಡಿಸಬೇಕೆಂದು ಶಾಸ್ತ್ರ ಹೇಳುತ್ತದೆ ನೀನೇನು ಹೇಳುವೆ ಎಂದಾಗ ಯೇಸು ನಯನಕ್ಕೆ ನಯನ ದಂತಕ್ಕೆ ದಂತ ಎಂಬ ಕಠೋರನ್ಯಾಯದ ಬಗ್ಗೆ ಬೇಸರಿಸಿದ, ಅಪಮಾನಗೊಂಡ ಸ್ತ್ರೀತ್ವದ ಬಗ್ಗೆ ಮರುಕಗೊಂಡ, “ಆಗಲಪ್ಪ ಆಗಲಿ ನಿಮ್ಮ ಶಾಸ್ತ್ರದಂತೆಯೇ ಆಗಲಿ ಆದರೆ ಒಂದು ಮಾತು, ನಿಮ್ಮಲ್ಲಿ ಯಾರೊಬ್ಬನು ಯಾವುದೇ ತಪ್ಪು ಮಾಡಿಲ್ಲದವನು ಮೊದಲ ಕಲ್ಲೆಸೆಯಲಿ.” ಒಬ್ಬೊಬ್ಬರಾಗಿ ಅವರೆಲ್ಲ ಕಾಲ್ಕಿತ್ತರು.
ಯೇಸುವನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಪರಿಸಾಯರು ಹೊಂಚುಹಾಕಿದರು. ಅಂದೋ ಯೇಸುವಿನ ಹನ್ನೆರಡು ಶಿಷ್ಯರಲಿ ಒಬ್ಬ ಜುದಾಸನಿದ್ದ, ಇಂದೋ ಒಬ್ಬನಲ್ಲಿಯೇ ಹನ್ನೆರಡು ಜುದಾಸ! ಯೇಸುವಿನ ಬಾಧೆ ಹಿಂಸೆ ನೋವು ಯಾತನೆ ಶಿಲುಬೆಮರಣಗಳನ್ನು ಪವಿತ್ರಾ ಅವರು ನಯವಾಗಿ ನವಿರಾಗಿ ಅಷ್ಟೇ ಸುಭಗವಾಗಿ ತೋರಿ ನಡೆದರು. ಪುನರುತ್ಥಾನ, ಅದು ಯೇಸುವಿನ ಪುನರುತ್ಥಾನ ಮಾತ್ರವಲ್ಲ, ಹಳೆಯ ಧರ್ಮಸಂಹಿತೆಗಳ ಸಮಾಧಿಯ ಮೇಲೆ ಹೊಸ ಜೀವನಮೌಲ್ಯಗಳ ಪುನರುತ್ಥಾನ. ಆದ್ದರಿಂದಲೇ ಕ್ರಿಸ್ತ ಎಲ್ಲರಿಗೂ ಬೇಕಾದವನು. ಕ್ರಿಸ್ತ ಬೇರೆಯಲ್ಲ ಕೃಷ್ಣ ಬೇರೆಯಲ್ಲ ಎಂದಲ್ಲವೇ ಗೋವಿಂದ ಪೈಗಳು ಹಾಡಿದ್ದು. ಯದುನಾಥನೇ ಯೂದನಾಥನಲ್ಲವೇ ಎಂದಿದ್ದು.
ನಾಟ್ಯದ ಹಾಡುಗಳಲ್ಲಿ ’ನಾವೀಗ ಕೂಡಿ ಹಾಡಿ ಕರ್ತನ್ಗೆ ಸ್ತೋತ್ರ ಮಾಡಿ’ ಎಂಬ ಜರ್ಮನ್ ಕವಿಯ ಕನ್ನಡದ ಹಾಡೂ ಕೇಳಿತು. ಕೆ ಎಸ್ ನರಸಿಂಹಸ್ವಾಮಿಯವರ ’ಪ್ರಾರ್ಥನೆಯ ಕೊರಳು ಬಾನಿಗೆ ಏರಬೇಕು, ಎತ್ತರದ ಗಂಟೆಗಳು ಎಡೆಬಿಡದೆ ಮೊಳಗಬೇಕು, ಶಾಂತಿ ನೆಲೆಸಬೇಕು. ಬಯಲ ಹಸಿರಿನ ತುಂಬ ಹೂವಾಡಬೇಕು, ಪ್ರೀತಿಯೇ ದೇವರೆಂದವನ ನೆನೆಯಬೇಕು, ಕಣ್ಣಹನಿಗಳ ನಡುವೆ ಕೈಮುಗಿಯಬೇಕು’ ಎನ್ನುವಲ್ಲಿಗೆ ನಾಟ್ಯ ಪರಿಸಮಾಪ್ತ.
ಡಾ. ಪವಿತ್ರಾ ಅವರೊಂದಿಗೆ ಡಾ. ಕೆ ಎಸ್ ಶುಭ್ರತಾ ಅವರು ನಟ್ಟುವಾಂಗ, ವಿದ್ವಾನ್ ಮಹೇಶಸ್ವಾಮಿಯವರು ಹಾಡುಗಾರಿಕೆ, ವಿದ್ವಾನ್ ಜನಾರ್ಧನರಾವ್ ಅವರು ಮೃದಂಗ, ವಿದ್ವಾನ್ ಕೆ ಎಸ್ ಜಯರಾಮ್ ಅವರು ಕೊಳಲು, ವಿದ್ವಾನ್ ಕಾರ್ತಿಕ್ ಅವರು ರಿದಂ ಪ್ಯಾಡ್ ಗಳೊಂದಿಗೆ ಜೊತೆಗೂಡಿ ಕಾರ್ಯಕ್ರಮಕ್ಕೆ ಕಳೆಯೇರಿಸಿದರು. ಡಾ. ಕೆ ಎಸ್ ಚೈತ್ರ ಅವರು ಸುಭಗಸುಸ್ಪಷ್ಟವಾಗಿ ಗದ್ಯನಿರೂಪಣೆ ಮಾಡಿದರು.
ಕಾರ್ಯಕ್ರಮವನ್ನು ಪ್ರಾಯೋಜಿಸಿದ ಅನನ್ಯ ಸಂಸ್ಥೆಯ ರಾಘವೇಂದ್ರ ಅವರು ಕಾವ್ಯಕ್ಕೆ ಶಬ್ದವೇ ಆಧಾರ. ನಾಟ್ಯಕ್ಕೆ ಶಬ್ದ ಅನಿವಾರ್ಯವಾದರೂ ಅದು ಭಾರವಾಗದಂತೆ ಮೇಳೈಸಿದ ಶ್ರೀವಿಜಯ ತಂಡವನ್ನು ಹರಸಿ, ಕ್ರಿಸ್ತನಿಗೇಕೆ ಭರತನಾಟ್ಯ ಎನ್ನುವವರಿಗೆ ಅವನ ಸಂದೇಶವೇ ಉತ್ತರ ಎಂದರು. ಈ ಮಾತು ಎಷ್ಟು ಅರ್ಥಪೂರ್ಣ ಅಲ್ಲವೇ?

ಭಾನುವಾರ, ಫೆಬ್ರವರಿ 9, 2014

ಕೆಟ್ಟ ದಡಿಯನ ಕತೆ

[ಇದು ಆಸ್ಕರ್ ವಿಲ್ಡನು ಮಕ್ಕಳಿಗಾಗಿ ಬರೆದ The Selfish Giant ಕತೆಯ ಕನ್ನಡ ರೂಪಾಂತರ]

ಆ ದಡಿಯನದೊಂದು ಸುಂದರ ತೋಟವಿತ್ತು. ಶಾಲೆ ಬಿಟ್ಟಾಗ ಅದೇ ದಾರಿಯಲ್ಲಿ ಬರುತ್ತಿದ್ದ ಮಕ್ಕಳಿಗೆ ಆ ತೋಟ ಬಲು ಮೆಚ್ಚಿನ ತಾಣವಾಗಿತ್ತು.
ಆ ತೋಟವು ವಿಶಾಲವಾಗಿತ್ತಲ್ಲದೆ ಮೃದುವಾದ ಹಸಿರ ಹುಲ್ಲು ಬೆಳೆದು ಸಿಕ್ಕಾಪಟ್ಟೆ ಚೆನ್ನಾಗಿತ್ತು, ಹುಲ್ಲು ಹಾಸಿನ ಮೇಲೆ ಅಲ್ಲೊಂದು ಇಲ್ಲೊಂದು ನಕ್ಷತ್ರದಂತ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿದ್ದ ಹನ್ನೆರಡು ಸೀಬೆ ಮರಗಳು ವಸಂತನ ಆಗಮನದೊಂದಿಗೆ ರತ್ನಾಭರಣ ತೊಡುವಂತೆ ಮನೋಹರ ಹೂಗಳನ್ನು ಧರಿಸಿ ಬೀಗುತ್ತಿದ್ದವು. ಮಳೆಗಾಲ ಸನಿಹವಾಗುತ್ತಿದ್ದಂತೆ ಹೇರಳವಾದ ಕಾಯಿಹಣ್ಣುಗಳನ್ನು ಹೊತ್ತು ಬಾಗುತ್ತಿದ್ದವು. ಗಿಳಿ ಕೋಗಿಲೆ ಗುಬ್ಬಚ್ಚಿಗಳು ಆ ಮರಗಳಲ್ಲಿ ಕುಳಿತು ಹಾಡುತ್ತಿದ್ದರೆ ಮಕ್ಕಳು ಆಟ ಮರೆತು ಆ ಗಾನವನ್ನು ಆಲಿಸುತ್ತಿದ್ದರು. ’ಏ ಎಷ್ಟೊಂದು ಮಜಾ ಅಲ್ವಾ?’ ಎನ್ನುತ್ತಾ ಸಂಭ್ರಮ ಪಡುತ್ತಿದ್ದರು.
ಹೀಗೇ ಇರುವಲ್ಲಿ ಒಂದು ದಿನ ದಡಿಯ ಬಂದ. ಸ್ನೇಹಿತನ ಊರಿಗೆ ಎಂದು ಹೋದವನು ಏಳು ವರ್ಷಗಳ ಕಾಲ ಅಲ್ಲೇ ಉಳಿದುಬಿಟ್ಟಿದ್ದನಂತೆ. ಅವನು ಹಿಂದಿರುಗಿ ಬಂದಾಗ ಅವನ ಈ ತೋಟದಲ್ಲಿ ಮಕ್ಕಳು ತುಂಟಾಟವಾಡುತ್ತಿದ್ದರು.
ಒಮ್ಮೆಲೇ ಅವನು ಗುಟುರು ಹಾಕುತ್ತಾ ’ಯಾರದು, ನೀವೆಲ್ಲ ಏನು ಮಾಡ್ತಾ ಇದ್ದೀರಿ?’ ಎಂದ ಕೂಡಲೇ ಮಕ್ಕಳೆಲ್ಲ ಭಯಭೀತರಾಗಿ ಓಡಿಹೋದರು.
’ಇದು ನನ್ನ ತೋಟ, ನನ್ನ ಸ್ವಂತ ತೋಟ, ಅರ್ಥವಾಯಿತು ತಾನೇ? ಇಲ್ಲಿ ಯಾರನ್ನೂ ಸೇರಿಸಿಕೊಳ್ಳಲ್ಲ, ನಾನೊಬ್ಬನೇ ಆಡಿಕೊಳ್ಳುತ್ತೇನೆ’ ಎಂದು ಕೂಗು ಹಾಕಿದ. ಆಮೇಲೆ ಆ ತೋಟದ ಸುತ್ತ ಎತ್ತರದ ಗೋಡ ಕಟ್ಟಿಸಿದ. ಹಾಗೂ ಒಂದು ಹಲಗೆಯ ಮೇಲೆ
’ಅಡಿಯಿಟ್ಟರೆ ಕಡಿದುಬಿಡುವೆ’
ಎಂದು ಬರೆದು ತೂಗುಹಾಕಿದ.
ಅಲ್ಲ, ಯಾರಾದರೂ ಇಷ್ಟೊಂದು ಕೆಟ್ಟವರಾಗಿರ್ತಾರಾ? ಮಕ್ಕಳು ದೇವರ ಸಮಾನ ಅನ್ತಾರೆ, ಇವನ್ಯಾಕೋ ಮಕ್ಕಳು ಅಂದರೆ ಸಿಡುಕುತ್ತಾನಲ್ಲ?
ಪಾಪ ಬಡಪಾಯಿ ಮಕ್ಕಳಿಗೆ ಆಟಕ್ಕೆ ಜಾಗವಿಲ್ಲದಂತಾಯ್ತು. ರಸ್ತೆ ಮೇಲೆ ಆಡಿಕೊಳ್ಳೋಣ ಅಂದರೆ ಒಂದರ ಹಿಂದೆ ಒಂದು ಬಂಡಿ ಬರ್ತಾ ಇರುತ್ತೆ. ಹೊಳೆಗೆ ಹೋಗಿ ಆಡೋಣ ಅಂದ್ರೆ ಹೊಳೆ ನೀರೆಲ್ಲ ಗಲೀಜಾಗಿದೆ. ಏನು ಮಾಡೋದು, ಪ್ರತಿದಿನ ಅವರು ದಡಿಯನ ತೋಟದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಅದರ ಸುತ್ತಲೂ ಠಳಾಯಿಸುತ್ತಿದ್ದರು. ಶಾಲೆ ಬಿಟ್ಟಾಗೆಲ್ಲ ಅದೇ ದಾರಿಯಲ್ಲಿ ಬರುತ್ತಾ ತೋಟದ ಕತೆಗಳನ್ನು ಹಂಚಿಕೊಳ್ಳುತ್ತಿದ್ದರು. ’ಅದೆಷ್ಟು ಚೆನ್ನಾಗಿತ್ತು ಗೊತ್ತಾ?’ ಎಂದು ಪರಸ್ಪರ ಹೇಳಿಕೊಂಡು ಮನಸಿನಲ್ಲೇ ಮಿಠಾಯಿ ಸವಿಯುತ್ತಿದ್ದರು.
< 2 >
 ಋತುಗಳ ರಾಜ ವಸಂತ ಬಂದ, ಎಲ್ಲೆಡೆ ಮರಗಿಡಗಳು ಚಿಗುರೊಡೆದವು, ಕೋಗಿಲೆ ಕುಹೂಕುಹೂ ಹಾಡಿತು. ಎಲ್ಲೆಲ್ಲಿಂದಲೋ ಗುಬ್ಬಚ್ಚಿ ಗಿಳಿ ಗೊರವಂಕಗಳು ಬಂದು ಚಿಲಿಪಿಲಿಗುಟ್ಟಿ ಹಾಡಿ ತಣಿದವು, ಹಸಿರ ನಡುವೆ ಮೊಗ್ಗು ಒಡೆದು ಹೂಗಳರಳಿ ಗಾಳಿ ಗಮ್ಮೆಂದಿತು. ಆದರೆ .. ಆದರೆ ಆ ದಡಿಯನ ತೋಟದಿಂದ ಚಳಿಗಾಲ ಹೊರಹೋಗಲೇ ಇಲ್ಲ. ಅಲ್ಲಿ ಗಿಡಮರಗಳು ಚಿಗುರಲಿಲ್ಲ, ತಂಬೆಲರು ಸುಳಿಯಲಿಲ್ಲ. ಹಕ್ಕಿಗಳಂತೂ ಬರಲೇ ಇಲ್ಲ. ಮಕ್ಕಳೇ ಇಲ್ಲದ ಮೇಲೆ ಅಲ್ಲಿ ಹಾಡುವುದಾದರೂ ಹೇಗೆ ಎಂದುಕೊಂಡವೇನೋ. ಮರಗಳ ರೆಂಬೆಕೊಂಬೆಗಳಲ್ಲಿ ಮಕ್ಕಳು ಮರಕೋತಿ ಆಡದೆ ಮರಗಳಿಗೂ ಬೇಸರವಾಗಿ ಅವು ಮೊಗ್ಗು ತೊಡಲೇ ಇಲ್ಲ. ಹುಲ್ಲಿನ ನಡುವಿನಿಂದ ಹೂವೊಂದು ಇಣುಕಿ ನೋಡಿತು, ದಡಿಯನ ಎಚ್ಚರಿಕೆಯ ಬೋರ್ಡು ಕಂಡಿದ್ದೇ ಹೆದರಿಕೆಯಾಗಿ ಮತ್ತೆ ಹುಲ್ಲಿನೊಳಗೆ ಅವಿತುಕೊಂಡಿತು.
ಹಸಿರೊಂದೇ ಮಕ್ಕಳ ಬಗ್ಗೆ ಮರುಕಪಟ್ಟಿದ್ದು. ಚಳಿಯೂ ಇಬ್ಬನಿಯೂ ನಮಗಾವ ತಂಟೆಯೂ ಬೇಡ ಎಂದು ತಮ್ಮ ಪಾಡಿಗೆ ತಾವು ಬಿದ್ದುಕೊಂಡಿದ್ದವು. ಆದರೂ ಅವು ’ವಸಂತ ಯಾಕೋ ಇಲ್ಲಿಗೆ ಬರುವುದನ್ನು ಮರೆತುಬಿಟ್ಟಿದ್ದಾನೆ, ಅವನು ಬರಲಿಲ್ಲ ಅಂದರೆ ಕತ್ತೆ ಬಾಲ ಹೋಯ್ತು, ಯಾವೋನು ಹೆಂಗಿದ್ರೆ ನಮಗೇನು, ನಾವು ಚೆನ್ನಾಗಿದ್ದರೆ ಸಾಕು’ ಎಂದು ಮಾತಾಡಿಕೊಂಡವು. ಇಬ್ಬನಿಯು ಹುಲ್ಲು ಹಾಸಿನ ಮೇಲೆ ತನ್ನ ಬಿಳಿಯುಡುಗೆಯನ್ನು ಹಾಸಿತು. ಸಾಲದೆಂಬಂತೆ ಮರಗಳ ಎಲೆಗಳ ಮೇಲೆ ಸಕ್ಕತ್ತಾಗಿ ಸುರಿದು ತೋಯಿಸಿಬಿಟ್ಟಿತು. ಚಳಿಯಿಂದಾಗಿ ಮರಗಳು ಗಾಢನಿದ್ದೆಗೆ ಜಾರಿದವು. ಸೊಕ್ಕಿದ ಚಳಿಯು ಉತ್ತರದ ಗಾಳಿಯನ್ನೂ ಕರೆದು ತನ್ನ ಜೊತೆಯಲ್ಲಿರಿಸಿಕೊಂಡಿತು. ಉತ್ತರದ ಗಾಳಿಯು ಬಂದವನೇ ತೋಟದ ಮೇಲೆಲ್ಲ ಸುಂಯೆಂದು ಸುತ್ತಾಡಿದ, ಹೊಗೆಕೊಳವೆಯಲ್ಲಿ ಪೀಪಿ ಊದಿದ. ’ಈ ಜಾಗ ನನಗೆ ತುಂಬಾ ಇಷ್ಟವಾಯಿತು’ ಎಂದು ಸಡಗರಗೊಂಡ ಅವನು ತನ್ನ ಜೊತೆ ಸುಂಟರಗಾಳಿಯೂ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಂಡ. ಅದೆಲ್ಲಿದ್ದನೋ ಸುಂಟರಗಾಳಿ, ಕೂಡಲೇ ಅಲ್ಲಿಗೆ ಆಗಮಿಸಿ ಮನೆಯ ಹೆಂಚುಗಳನ್ನೆಲ್ಲ ಅಲ್ಲಾಡಿಸಿ ಸಿಳ್ಳೆ ಹಾಕಿ ತನ್ನ ಪ್ರತಾಪ ತೋರಿಸಿದನಲ್ಲದೆ ತೋಟದಲ್ಲೆಲ್ಲ ಬಿರುಸಾಗಿ ಸುತ್ತಾಡಿದ. ದಟ್ಟ ಮಂಜಿನ ಉಡುಗೆ ತೊಟ್ಟಿದ್ದ ಅವನ ಉಸಿರಿನ ಗಾಳಿ ಕೊರೆತಕ್ಕೆ ಮೈ ನಡುಗುತ್ತಿತ್ತು.
ಇತ್ತ ಮನೆಯೊಳಗೆ ಬೆಂಕಿ ಗೂಡಿಗೆ ಕೊಳ್ಳಿಯನ್ನು ತುರುಕಿ ಆರಾಮ ಕುರ್ಚಿಯ ಮೇಲೆ ಕುಳಿತ ದಡಿಯ ಯಾಕಿನ್ನೂ ಚಳಿ ಹೋಗಿಲ್ಲ ಎಂದುಕೊಂಡವನು ಕಿಟಕಿ ತೆರೆದು ನೋಡಿದಾಗ ಹೊರಗೆ ಮಂಜು ಸುರಿಯುತ್ತಿತ್ತು. ಬಹುಶಃ ಕಾಲದಲ್ಲೇನೋ ಬದಲಾವಣೆಯಾಗಿದೆ’ ಎಂದುಕೊಂಡು ಕಿಟಕಿ ಮುಚ್ಚಿದ.
ಆದರೆ ಚಳಿಗಾಲ ಅವನ ತೋಟದಿಂದಹ ಹೊರಹೋಗಲೇ ಇಲ್ಲ, ಮತ್ತೆ ಬೇಸಿಗೆಯೂ ಬರಲಿಲ್ಲ. ಮಳೆಗಾಲ ಹತ್ತಿರವಾಗುತ್ತಿದ್ದಂತೆ ಎಲ್ಲ ಮರಗಳೂ ಚಿನ್ನದಂಥ ಹಣ್ಣುಗಳನ್ನುದುರಿಸಿದರೆ ದಡಿಯನ ತೋಟದ ಮರಗಳು ಇನ್ನೂ ಮಲಗಿಯೇ ಇದ್ದವು. ಮಲೆನಾಡಿನ ತಂಡಿ ಗಾಳಿ ಅವನ ತೋಟಕ್ಕೆ ಕಾಲಿಡಲು ಇಷ್ಟಪಡಲಿಲ್ಲ. ಹಾಗಾಗಿ ಅವನ ತೋಟದಲ್ಲಿ ಚಳಿಗಾಲ ಶಾಶ್ವತವಾಗಿ ಮನೆಮಾಡಿತು, ಉತ್ತರದ ಶೀತಗಾಳಿ ಬೀಸಿಯೇ ಬೀಸಿತು, ಕೊರೆಯುವ ಮಂಜಿನಸೋನೆ ಇಡೀ ತೋಟವನ್ನು ತೋಯಿಸಿತು. ಹಿಮ ಮತ್ತು ಇಬ್ಬನಿಗಳು ಮರಗಳ ಕೊಂಬೆ ರೆಂಬೆಗಳಲ್ಲಿ ಕುಣಿದು ಕುಪ್ಪಳಿಸಿ ಚೆಲ್ಲಾಟವಾಡಿದವು.
ಹೀಗೇ ಇರುವಲ್ಲಿ ಒಂದಾನೊಂದು ಮುಂಜಾನೆ ದಡಿಯನು ಇನ್ನೂ ಹಾಸಿಗೆಯ ಮೇಲೆ ಉರುಳಾಡುತ್ತಿರುವಾಗ ಎಲ್ಲಿಂದಲೋ ಇಂಪಾದ ನಾದ ಮಾಧುರ್ಯ ತೇಲಿಬಂತು. ಅದರ ಇಂಚರದಿಂದ ಅವನು ಪುಳಕಗೊಂಡ, ಅರಮನೆಯ ಬ್ಯಾಂಡಿನವರು ತನ್ನ ಮನೆಯ ಮುಂದೆ ಹಾದುಹೋಗುತ್ತಿರಬೇಕು ಎಂದುಕೊಂಡ. ಕಣ್ಣುಮುಚ್ಚಿ ಕಿವಿದೆರೆದು ಆಲಿಸಿಯೇ ಆಲಿಸಿದ. ಅದು ಯಾವ ವಾದ್ಯಮೇಳವೂ ಅಲ್ಲ ತನ್ನ ಕೋಣೆಯ ಕಿಟಕಿಯಾಚೆ ಯಾವುದೋ ಹಕ್ಕಿ ಹಾಡುತ್ತಿದೆ ಎನಿಸಿತು. ಎಷ್ಟೋ ವರ್ಷಗಳ ಕಾಲ ಅವನು ಹಕ್ಕಿಯ ಹಾಡನ್ನೇ ಕೇಳಿರಲಿಲ್ಲವಾದ್ದರಿಂದ ಈ ಒಂಟಿ ಹಕ್ಕಿಯ ಗಾನ ಅವನನ್ನು ಹುಚ್ಚನಾಗಿಸಿತು. ಜಗತ್ತಿನಲ್ಲೇ ಅತ್ಯಂತ ಮಧುರವಾದ ರಾಗವಿದು ಎಂದುಕೊಂಡ. ಸುಂಯೆನ್ನುವ ಕುಳಿರ್ಗಾಳಿ ನಿಂತುಹೋಯಿತು. ಇಬ್ಬನಿ ಕರಗಿತು. ಮಂಜಿನ ತೆರೆ ಸರಿದು ವಾತಾವರಣ ಬೆಚ್ಚಗಾಗತೊಡಗಿತು. ಎಲ್ಲಿಂದಲೋ ಸುಗಂಧ ಸೌರಭ ಸೂಸಿ ದಡಿಯನ ಮುಖವರಳಿತು. ಮಂಚದಿಂದ ಎದ್ದವನೇ ’ಅಬ್ಬ ಕೊನೆಗೂ ವಸಂತ ಬಂದ’ ಎಂದು ಕುಣಿದು ಕುಪ್ಪಳಿಸಿದ. ಮನೆಯ ಕಿಟಕಿಗಳನ್ನು ತೆರೆದ.
< 3 >
 ಓ ಅದೊಂದು ಅದ್ಭುತ ನೋಟ!
ತೋಟದ ಹೊರಗೋಡೆಯಲ್ಲಿ ಸಣ್ಣದೊಂದು ಸಂದು ಮಾಡಿಕೊಂಡು ಮಕ್ಕಳು ನುಗ್ಗಿ ಬರುತ್ತಿದ್ದರು. ಬಂದವರೇ ಮರಗಳ ಕೊಂಬೆರೆಂಬೆಗಳನ್ನೇರಿ ಜೋಕಾಲಿಯಾಡುತ್ತಿದ್ದರು. ಮರಗಳಿಗೂ ಮಕ್ಕಳನ್ನು ನೋಡಿ ಸಂತೋಷವಾಗಿ ಮೈಕೈಯೆಲ್ಲ ಹೂಗಳನ್ನು ಮುಡಿದು ಸ್ವಾಗತಿಸುತ್ತಿದ್ದವು. ಮಕ್ಕಳ ತಲೆಯ ಮೇಲೆ ಹಸಿರೆಲೆಗಳನ್ನು ನವಿರಾಗಿ ಸೋಕಿಸುತ್ತಿದ್ದವು. ಹಕ್ಕಿಗಳು ಸಂಭ್ರಮದಿಂದ ಕಲರವ ಮಾಡುತ್ತಿದ್ದವು. ಹುಲ್ಲಿನೊಳಗಿಂದ ಹೊರಬಂದ ಹೂಗಳು ಚಂದದ ಮೊಗದಿಂದ ನಗುತ್ತಿದ್ದವು. ಅಲ್ಲಿದ್ದ ಪ್ರತಿ ಮರದ ಮೇಲೂ ಒಬ್ಬನಾದರೂ ಹುಡುಗ ಕುಳಿತಿದ್ದ.
ಮನಮೋಹಕವೂ ರಮಣೀಯವೂ ಆದ ನೋಟವದು. ಆದರೆ ತೋಟದ ದೂರದ ಒಂದು ಮೂಲೆಯಲ್ಲಿ ಮಾತ್ರ ಇನ್ನೂ ಇಬ್ಬನಿ ಹೆಪ್ಪುಗಟ್ಟಿತ್ತು. ಅಲ್ಲೊಬ್ಬ ಪುಟ್ಟ ಹುಡುಗ ನಿಂತುಕೊಂಡಿದ್ದ. ಅವನೆಷ್ಟು ಪುಟ್ಟ ಹುಡುಗನೆಂದರೆ ಮರದ ಕೊಂಬೆಗಳತ್ತ ಕೈಚಾಚಿದರೆ ನಿಲುಕುತ್ತಲೇ ಇರಲಿಲ್ಲ. ಮರದ ಸುತ್ತಲೂ ಸುತ್ತುತ್ತ ಎಲ್ಲಿಯಾದರೂ ಹತ್ತಲು ಆಸ್ಪದವುಂಟೇ ಎಂದು ನೋಡುತ್ತಿದ್ದ. ಅಸಹಾಯಕನಾಗಿ ಅಳುತ್ತಿದ್ದ. ಮರದ ಕೊಂಬೆಗಳು ಕವಲುಗಳು ಇನ್ನೂ ಇಬ್ಬನಿಯಿಂದ ತೊಯ್ದು ಮುದ್ದೆಯಾಗಿದ್ದವು. ಮರದ ಮೇಲೆ ಇನ್ನೂ ಶೀತಗಾಳಿ ಬೀಸುತ್ತಿತ್ತು. ಹತ್ತು ಮಗೂ ಹತ್ತು ಎಂದು ಮರ ಪಿಸುಗುಡುತ್ತಿತ್ತು. ತನ್ನ ರೆಂಬೆಗಳನ್ನು ಸಾಧ್ಯವಾದಷ್ಟೂ ಕೆಳಕ್ಕೆ ಚಾಚುತ್ತಿತ್ತು. ಆದರೆ ಆ ಪುಟ್ಟ ಹುಡುಗನವರೆಗೂ ಅವು ತಲಪಲಾಗುತ್ತಿಲ್ಲ.
ಅದನ್ನು ನೋಡುತ್ತಿದ್ದಂತೆ ದಡಿಯನ ಹೃದಯ ಕರಗಿತು. ’ನಾನೆಷ್ಟು ಸ್ವಾರ್ಥಿಯಾಗಿದ್ದೆ’ ಎಂದು ಮನಸಿನಲ್ಲೇ ಅಂದುಕೊಂಡ. ’ಅದಕ್ಕೇ ಇಲ್ಲಿಗೆ ವಸಂತ ಬರಲಿಲ್ಲ, ನಾನೀಗಲೇ ಹೋಗಿ ಆ ಪುಟ್ಟ ಕಂದನನ್ನು ಮರದ ಮೇಲೆ ಕೂರಿಸುವೆ, ಆಮೇಲೆ ಈ ಗೋಡೆಯನ್ನು ಬೀಳಿಸುವೆ, ನನ್ನ ತೋಟ ಮಕ್ಕಳಾಟಕ್ಕೆ ಒದಗಲಿ, ಅದು ಎಂದೆಂದೂ ಮಕ್ಕಳ ತೋಟವಾಗಲಿ’ ಎಂದುಕೊಂಡ. ಇದುವರೆಗೆ ಆದುದಕ್ಕೆ ಬಲು ಪರಿತಾಪ ಪಟ್ಟ.
ಮೆಲ್ಲನೆ ಮನೆಯ ಬಾಗಿಲನು ತೆರೆದು ತೋಟದ ಒಳಹೊಕ್ಕ. ಮಕ್ಕಳು ಅವನನ್ನು ನೋಡಿದ್ದೇ ಚೆಲ್ಲಾಪಿಲ್ಲಿಯಾಗಿ ಫೇರಿ ಕಿತ್ತು ಓಡಿಹೋದರು. ತೋಟದಲ್ಲಿ ಮತ್ತೆ ಚಳಿಗಾಲ ಅಮರಿಕೊಂಡಿತು. ಆದರೆ ಆ ಪುಟ್ಟ ಹುಡುಗ ಮಾತ್ರ ಅಲ್ಲೇ ನಿಂತಿದ್ದ. ಅವನ ಕಣ್ಣುಗಳಲ್ಲಿ ಕಂಬನಿ ತುಂಬಿದ್ದರಿಂದ ದಡಿಯ ಬಂದಿದ್ದನ್ನು ಅವನು ನೋಡಲಿಲ್ಲ. ದಡಿಯನು ಆ ಮಗುವನ್ನು ಹೂವಿನಂತೆ ಮೇಲೆತ್ತಿ ಮರದ ಮೇಲೆ ಕುಳ್ಳಿರಿಸಿದ. ಕೂಡಲೇ ಮರವು ನಲಿದಾಡಿ ತಳಿರು ಹೊದೆಯಿತು. ಹಸಿರೆಲೆಗಳ ನಡುವಿನಿಂದ ತಂಬೆಲರು ತೂರಿ ಹೂಗಳು ಅರಳಿ ಕಂಪು ಸೂಸಿದವು. ಎಲ್ಲೆಲ್ಲಿಂದಲೋ ಹಕ್ಕಿಗಳು ಕುಣಿದು ಬಂದು ಪಂಚಮ ಸ್ವರವಲ್ಲರಿಯ ಗಾನವಾಡಿದವು. ಪುಟ್ಟ  ಹುಡುಗನು ಕಿಲಕಿಲ ನಗುತ್ತಾ ದಡಿಯನ ಕೊರಳ ಸುತ್ತ ತೋಳು ಬಳಸಿ ಅವನಿಗೊಂದು ಮುತ್ತು ಕೊಟ್ಟ. ದಡಿಯ ರೋಮಾಂಚನಗೊಂಡ. ಅವನ ಕಠೋರ ಹೃದಯ ಕುಸುಮದಂತೆ ಮೃದುವಾಯಿತು.
ದೂರದಿಂದ ಇಣುಕಿ ನೋಡುತ್ತಿದ್ದ ಮಕ್ಕಳಿಗೆ ದಡಿಯ ಒಳ್ಳೆಯವನು ಎನಿಸಿತು. ಕೂಡಲೇ ಅವರು ಕೇಕೆ ಹಾಕುತ್ತಾ ತೋಟದೊಳಕ್ಕೆ ಓಡಿ ಬಂದರು. ಅವರ ಹಿಂದೆಯೇ ವಸಂತನಾಗಮನವೂ ಆಗಿ ತೋಟ ನಳನಳಿಸಿತು. ದಡಿಯನು ’ಮಕ್ಕಳೇ ಇನ್ನು ಮುಂದೆ ಈ ತೋಟ ನಿಮ್ಮದೇ’ ಎಂದು ಕೂಗಿ ಹೇಳಿ ತಾನು ಹಾಕಿದ್ದ ಬೋರ್ಡನ್ನು ಕಿತ್ತು ಬಿಸಾಡಿದ ಗೋಡೆಯನ್ನು ಒಡೆದು ಹಾಕಿದ. ಸಂತೆಗೆಂದು ಹೊರಟಿದ್ದ ಊರಜನ ಮಕ್ಕಳೊಂದಿಗೆ ಆಡುತ್ತಿದ್ದ ದಡಿಯನನ್ನೂ ಸ್ವರ್ಗದಂತಿದ್ದ ತೋಟವನ್ನೂ ನೋಡಿ ಬೆರಗಾದರು. ಇಂಥ ಸುಂದರವಾದ ತೋಟವನ್ನು ತಾವೆಂದೂ ಕಂಡಿದ್ದೇ ಇಲ್ಲವೆಂದು ಮಾತಾಡಿಕೊಂಡರು.
< 4 >
 ಅವರು ದಿನವೆಲ್ಲ ಆಡಿದರು, ಹಾಡಿ ಕುಣಿದರು, ಸಂಜೆ ಹತ್ತಿರವಾಗುತ್ತಿದ್ದಂತೆ ಮಕ್ಕಳೆಲ್ಲ ದಡಿಯನಿಗೆ ವಂದಿಸಿ ತಮ್ಮ ಮನೆಗಳಿಗೆ ಹಿಂದಿರುಗಿದರು.
’ಆದರೆ ನಾನು ಮರದ ಮೇಲೆ ಕೂರಿಸಿದೆನಲ್ಲ ಆ ಪುಟ್ಟ ಎಲ್ಲಿ?’ ಎಂದು ಅವನು ಕಕ್ಕುಲತೆಯಿಂದ ಕೇಳಿದ. ಆ ಹುಡುಗ ನೀಡಿದ ಸವಿಮುತ್ತಿನ ಮಾಧುರ್ಯವನ್ನು ಅವನಿನ್ನೂ ಮೆಲುಕು ಹಾಕುತ್ತಿದ್ದ. ಆ ಹುಡುಗನ ಬಗ್ಗೆ ಏನೋ ಒಂದು ಮಮತೆ ವಾತ್ಸಲ್ಯ ಮೂಡಿತ್ತು.
ಎಲ್ಲ ಮಕ್ಕಳೂ ’ನಮಗೆ ಗೊತ್ತಿಲ್ಲ, ಅವನು ಹೋಗಿರಬಹುದು’ ಎಂದರು.
’ನಾಳೆಯೂ ಕಂಡಿತ ಬರಬೇಕೆಂದು ಅವನಿಗೆ ಹೇಳಿ’ ಎಂದು ಹೇಳಿದ್ದಕ್ಕೆ ಮಕ್ಕಳು ’ಇಲ್ಲ ಅವನಾರೆಂದೇ ನಮಗೆ ತಿಳಿಯದು, ಇವೊತ್ತೇ ನಾವು ಅವನನ್ನು ನೋಡಿದ್ದು’ ಎಂದಾಗ ದಡಿಯನಿಗೆ ತುಂಬಾ ಬೇಸರವಾಯಿತು.  
ಪ್ರತಿದಿನ ಶಾಲೆ ಮುಗಿದಾಗ ಮಕ್ಕಳು ತೋಟಕ್ಕೆ ಬಂದು ದಡಿಯನ ಜೊತೆ ಆಡುತ್ತಿದ್ದರು. ಆದರೆ ಅವನ ಪ್ರೀತಿಯ ಪುಟ್ಟ ಹುಡುಗ ಮಾತ್ರ ಬರಲೇ ಇಲ್ಲ. ದಡಿಯ ಎಲ್ಲ ಮಕ್ಕಳನ್ನೂ ಪ್ರೀತಿಯಿಂದ ಕಾಣುತ್ತಿದ್ದ. ಆದರೆ ಅವನ ಮೊದಲ ಪುಟ್ಟ ಗೆಳೆಯನ ಮೇಲೆ ಅವನಿಗೆ ವಿಶೇಷ ಅಕ್ಕರೆಯಿತ್ತು. ಯಾವಾಗಲೂ ಅವನ ಬಗ್ಗೆಯೇ ಮಾತನಾಡುತ್ತಿದ್ದ. ’ಹೇಗಾದರೂ ಅವನನ್ನು ಕಾಣಲೇಬೇಕು’ ಎಂದುಕೊಳ್ಳುತ್ತಿದ್ದ. 
ವರ್ಷಗಳೇ ಕಳೆದು ಹೋದವು, ದಡಿಯ ಮುದುಕನಾದ, ದೇಹದ ಕಸುವು ಕಡಿಮೆಯಾಯಿತು. ಮುನ್ನಿನಂತೆ ಅವನು ಆಡಲಾಗುತ್ತಿಲ್ಲ, ದೊಡ್ಡದಾದ ಆರಾಮಕುರ್ಚಿಯಲ್ಲಿ ಕುಳಿತು ಮಕ್ಕಳಾಟವನ್ನು ನೋಡುವುದೇ ಅವನ ದಿನಚರಿಯಾಯಿತು, ತನ್ನ ತೋಟದ ಬಗ್ಗೆ ಅವನಿಗೆ ಹೆಮ್ಮಯೆನಿಸಿತು. ’ನನ್ನಲ್ಲಿ ಎಷ್ಟೋ ಸುಂದರ ಹೂಗಳಿವೆ, ಆದರೆ ಮಕ್ಕಳು ಮಾತ್ರ ಎಲ್ಲ ಹೂಗಳಿಗಿಂತ ಮಿಗಿಲು’ ಎಂದುಕೊಂಡ.
ಒಂದು ಚಳಿಗಾಲದ ಮುಂಜಾನೆ ಅವನು ಬಟ್ಟೆ ಉಡುತ್ತಿರುವಾಗ ಕಿಟಕಿಯಾಚೆ ನೋಡಿದ. ಈಗವನು ಚಳಿಯನ್ನು ದ್ವೇಷಿಸುತ್ತಿಲ್ಲ, ಅವನಿಗೆ ಗೊತ್ತು ವಸಂತನ ನಿದ್ದೆಯ ಕಾಲವದು ಮತ್ತು ಹೂಗಳಿಗೂ ವಿಶ್ರಾಂತಿ ಬೇಕೆಂದು.
ಇದ್ದಕ್ಕಿದ್ದಂತೆ ಅವನು ಅಚ್ಚರಿಯಿಂದ ಕಣ್ಣಗಲಿಸಿ ನೋಡಿದ, ದೂರದ ಮೂಲೆಯತ್ತ ದೃಷ್ಟಿಸಿ ನೋಡಿದ. ಅದು ನಿಜವಾಗಿಯೂ ಒಂದು ಅನುಪಮ ಕಾಣ್ಕೆ. ತೋಟದ ದೂರದ ಮೂಲೆಯಲ್ಲಿನ ಆ ಮರ ಕಣ್ಣಿಗೆ ಹಬ್ಬದಂತೆ ಬಲು ಮೋಹಕವಾದ ಬಿಳಿಯ ಹೂಗಳನ್ನು ಧರಿಸಿತ್ತು. ಅದರ ಬಂಗಾರದ ಕೊಂಬೆಗಳಲ್ಲಿ ಬೆಳ್ಳಿಯ ಹಣ್ಣುಗಳು ಜೋತಾಡುತ್ತಿದ್ದವು. ಕೆಳಗೆ ಅವನು ಅತಿಯಾಗಿ ಹಚ್ಚಿಕೊಂಡಿದ್ದ ಅದೇ ಹುಡುಗ ನಿಂತಿದ್ದ.
ಸಂತೋಷಾತಿರೇಕದಿಂದ ದಡಿಯ ಅಲ್ಲಿಗೆ ಧಾವಿಸಿ ಓಡಿದ. ಹುಲ್ಲು ಸಸಿ ಪೊದೆ ಗಿಡಗಳನ್ನು ದಾಟಿ ಮಗುವಿನ ಬಳಿ ಬಂದ. ಆದರೆ ಮಗುವನ್ನು ನೋಡುತ್ತಿದ್ದಂತೆ ಅವನ ಮುಖ ಕೆಂಪಾಯಿತು, ಕೋಪದಿಂದ ಅವನು ಕುದಿಯ ತೊಡಗಿದ. ’ಯಾರು? ಯಾರದು ಈ ಪುಟ್ಟ ಕಂದನಿಗೆ ಹೊಡೆದವರು? ರಕ್ತ ಸುರಿಯುವಂತೆ ಗಾಯಗೊಳಿಸಲು ಮನಸ್ಸಾದರೂ ಹೇಗೆ ಬಂತು’ ಎಂದು ಕಿರುಚಾಡಿದ. ಏಕೆಂದರೆ ಆ ಮಗುವಿನ ಎರಡೂ ಅಂಗೈ ತೂತಾಗಿತ್ತು ಪಾದಗಳಲ್ಲೂ ತೂತಾಗಿತ್ತು.
< 5 >
’ಮಗುವೇ ಹೇಳಪ್ಪಾ ಯಾರು ನಿನಗೆ ಹೀಗೆ ಮಾಡಿದ್ದು, ಈಗಲೇ ದೊಡ್ಡದೊಂದು ಕೊಡಲಿ ತೆಗೆದುಕೊಂಡು ಹೋಗಿ ಅವನ್ನು ಅಡ್ಡಡ್ಡ ಸಿಗಿದು ಹಾಕುವೆ’ ಎಂದ.
’ಇಲ್ಲ, ಇವು ಪ್ರೀತಿಯಿಂದಾದ ಗಾಯಗಳು’ ಎಂದಿತು ಆ ಮಗು.
’ಏನು!?’  ದಡಿಯನ ಗಂಟಲುಬ್ಬಿತು. ಅವನು ಮಗುವಿನ ಮುಂದೆ ಮಂಡಿಯೂರಿ ಕುಳಿತ.
ಅವನನ್ನು ನೋಡಿ ಮಗು ಮುಗುಳುನಗೆ ನಕ್ಕಿತು. ’ನಿನ್ನ ತೋಟದಲ್ಲಿ ನನಗೆ ಆಡಲು ಬಿಟ್ಟೆಯಲ್ಲವೇ, ಇಂದು ನೀನು ನನ್ನ ತೋಟಕ್ಕೆ ಬಾ, ಸ್ವರ್ಗವೇ ನನ್ನ ತೋಟ’ ಎಂದಿತು.

ಮಧ್ಯಾಹ್ನ ಶಾಲೆ ಬಿಟ್ಟಾಗ ಮಕ್ಕಳೆಲ್ಲ ಬಂದು ನೋಡಿದ್ದೇನು? ದಡಿಯ ಮರದ ಕೆಳಗೆ ಸುವಾಸಿತ ಬಿಳಿಯ ಹೂಗಳನ್ನು ಹೊದ್ದು ಮಲಗಿದ್ದ.