೧೯೩೯ ರಲ್ಲಿ ಶುರುವಾದ ಎರಡನೇ ಮಹಾಯುದ್ಧವು ಆರು ವರ್ಷಗಳಾದರೂ ಅಂತ್ಯ ಕಂಡಿರಲಿಲ್ಲ. ನೇರ ಹಣಾಹಣಿ ಬಹುತೇಕ ನಿಂತಿದ್ದರೂ ಶೀತಲ ಸಮರ ಮುಂದುವರಿದೇ ಇತ್ತು. ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಶತ್ರುರಾಷ್ಟ್ರಗಳು ಎಂಬ ಎರಡು ಬಣಗಳಿದ್ದವು. ಮಿತ್ರರಾಷ್ಟ್ರಗಳ ಪರ ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರಿಟನ್, ಫ್ರಾನ್ಸ್, ಸೋವಿಯತ್ ಒಕ್ಕೂಟವು ಒಂದುಗೂಡಿ ಜರ್ಮನ್, ಇಟಲಿ ಮತ್ತು ಜಪಾನ್ ದೇಶಗಳ ವಿರುದ್ಧ ಮೀಸೆ ತಿರುವುತ್ತಿದ್ದವು. ಜಗತ್ತಿನಲ್ಲಿ ಹಿರಿಯಣ್ಣನಾಗುವ ಬಯಕೆಯಿಂದಾಗಿ ಉಭಯ ಬಣದ ಮುಂಚೂಣಿ ದೇಶಗಳು ಯುದ್ಧದಲ್ಲಿ ನೇರವಾಗಿ ಭಾಗಿಯಾಗದ ಹಾಗೂ ಯುದ್ಧದಿಂದ ಯಾವುದೇ ರೀತಿಯ ಲಾಭನಷ್ಟಗಳ ಸೋಂಕಿಲ್ಲದ ದೇಶಗಳನ್ನೂ ತಮ್ಮತ್ತ ಸೆಳೆದುಕೊಂಡಿದ್ದವು. ಅಭಿವೃದ್ಧಿಶೀಲರನ್ನು ಮೊಟಕಿ ಯುದ್ಧದಲ್ಲಿ ಮೇಲುಗೈ ಸಾಧಿಸಿ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ರಾಜ್ಯವಿಸ್ತರಣೆಯ ಅಮಲು ಎಲ್ಲರಲ್ಲೂ ಇತ್ತು. ಮಾನವತೆ, ಮಾನವಧರ್ಮ, ಆಲಿಪ್ತನೀತಿ, ವಿಶ್ವಶಾಂತಿ, ಅಹಿಂಸೆ ಮುಂತಾದ ಆದರ್ಶಗಳೆಲ್ಲಾ ಅಕ್ಷರಶಃ ಮಣ್ಣುಪಾಲಾಗಿದ್ದವು.
ತಮ್ಮ ಪಶ್ಚಿಮ ಕರಾವಳಿಯಿಂದ ಯುದ್ಧರಂಗಕ್ಕಿಳಿದಿದ್ದ ಅಮೆರಿಕನ್ನರು ಅಗಾಧ ವಿಸ್ತಾರದ ಶಾಂತಸಾಗರವನ್ನು ದಾಟಿಕೊಂಡು ಫಿಲಿಪ್ಪೀನ್ ಸಮುದ್ರದವರೆಗೂ ಬಂದಿದ್ದರು. ಇಷ್ಟು ದೂರ ಕ್ರಮಿಸುತ್ತಿದ್ದ ತಮ್ಮ ಯುದ್ಧವಿಮಾನಗಳಿಗೆ ಇಂಧನ ತುಂಬಿಸಿಕೊಳ್ಳಲು ಹಾಗೂ ಮಿಲಿಟರಿ ನೆಲೆ ಸ್ಥಾಪಿಸಲು ಸೂಕ್ತ ನಡುಗಡ್ಡೆಗಳನ್ನು ಅವರು ಹುಡುಕುತ್ತಿದ್ದರು. ಜಪಾನಿನ ದಕ್ಷಿಣಕ್ಕೆ ಸುಮಾರು ೧೫೦೦ ಕಿಲೋಮೀಟರುಗಳ ಅಂತರದಲ್ಲಿ ಗುವಾಮ್, ಸೇಪಾನ್ ಮತ್ತು ತಿನಿಯಾನ್ ನಡುಗಡ್ಡೆಗಳು ಅವರ ಕಣ್ಣಿಗೆ ಬಿದ್ದವು. ಆದರೆ ಆ ದ್ವೀಪಗಳು ಜಪಾನಿನ ಹಿಡಿತದಲ್ಲಿದ್ದವು.
೧೯೪೪ರ ಜೂನ್ ಹದಿನೈದನೇ ತಾರೀಕು, ಅಮೆರಿಕದ ಸೈನ್ಯ ಸೇಪಾನ್ ದ್ವೀಪವನ್ನು ಮುತ್ತಿಗೆ ಹಾಕಿತು. ದ್ವೀಪದಲ್ಲಿದ್ದ ೨೫೦೦೦ ಜಪಾನೀ ಸೈನಿಕರನ್ನು ಅತಿ ಸುಲಭದಲ್ಲಿ ಮಣಿಸಬಹುದೆಂದು ಅಂದಾಜಿಸಿದ್ದ ಅಮೆರಿಕನ್ ಸೈನ್ಯದ ಊಹೆ ತಪ್ಪಾಯಿತು. ಜಪಾನ್ ದೇಶವು ಗಾತ್ರದಲ್ಲಿ ಪುಟ್ಟದಾದರೂ ಜಪಾನ್ ಯೋಧರ ಅಪ್ರತಿಮ ದೇಶಭಕ್ತಿ ಹಾಗೂ ರಾಜಭಕ್ತಿ ತುಂಬಿದ್ದ ವೀರಾವೇಶದ ಹೋರಾಟದ ಮುಂದೆ ಅಮೆರಿಕ ಸಾಕಷ್ಟು ಬೆವರಿಳಿಸಬೇಕಾಯಿತು. ಅಮೆರಿಕದ ಬೋಯಿಂಗ್ ಬಿ-೨೯ ಯುದ್ಧವಿಮಾನಗಳು ಹಲವು ದಿನಗಳ ಕಾಲ ಈ ದ್ವೀಪದ ಸೇನಾ ನೆಲೆಗಳ ಮೇಲೆ ಬಾಂಬುಗಳನ್ನು ಹಾಕಿದ ಮೇಲೆಯೇ ಸೇಪಾನ್ ಕೈವಶವಾಗಿದ್ದು.
ತಿನಿಯಾನ್ ನಡುಗಡ್ಡೆಯ ಮೇಲೆ ಜುಲೈ ೨೪ರಂದು ದಾಳಿ ಶುರುವಾಗಿ ಆಗಸ್ಟ್ ಒಂದರಂದು ಅದು ಅಮೆರಿಕದ ತೆಕ್ಕೆಗೆ ಬಂದಿತು. ತಿನಿಯಾನ್ ಯುದ್ಧದಲ್ಲಿ ಮುನ್ನೂರು ಅಮೆರಿಕನ್ ಸೈನಿಕರು ಹಾಗೂ ಜಪಾನಿನ ಆರು ಸಾವಿರ ಯೋಧರು ಅಸುನೀಗಿದರು. ತಿನಿಯಾನ್ ಅನ್ನು ಅಮೆರಿಕವು ತನ್ನ ವಾಯುನೆಲೆಯಾಗಿ ಮಾಡಬಯಸಿತು. ಕೇವಲ ನೂರು ಚದರ ಕಿಲೊಮೀಟರುಗಳ ವಿಸ್ತೀರ್ಣದ ಆ ನಡುಗಡ್ಡೆಯಲ್ಲಿನ ಹವಳ ದಿಬ್ಬಗಳನ್ನು ಅಮೆರಿಕದ ನೂರಾರು ಬುಲ್ಡೋಜರುಗಳು ಕಡಿದು ಸಮತಟ್ಟು ಮಾಡಿದವು. ಎರಡೇ ತಿಂಗಳಲ್ಲಿ ಅಲ್ಲಿ ಆರು ಓಡುಹಾದಿ (ರನ್ವೇ) ಗಳ ನಿರ್ಮಾಣವಾಯಿತು. ಆ ಕಾಲಕ್ಕೆ ಅದು ಜಗತ್ತಿನ ಅತ್ಯಂತ ದೊಡ್ಡ ವಾಯುನೆಲೆಯಾಯಿತು. ವಿಶಾಲ ಸಾಗರದ ನಡುವೆ ಮೂರು ಕಿಲೋಮೀಟರು ಉದ್ದದ ಓಡುಹಾದಿಗಳು ಹಾಗೂ ಅವುಗಳ ಇಕ್ಕೆಲಗಳಲ್ಲಿ ನೂರಾರು ಲೋಹವಕ್ಕಿಗಳನ್ನು ಪಕ್ಷಿನೋಟಗಳಲ್ಲಿ ಕಂಡಾಗ ಒಂದು ಭಾರೀ ಯುದ್ಧವಿಮಾನವೊಂದು ಶಸ್ತ್ರಸಜ್ಜಿತವಾಗಿ ಯುದ್ಧಕ್ಕೆ ಹೊರಟಂತೆ ತೋರುತ್ತಿತ್ತು.
೧೯೪೫ ಫೆಬ್ರವರಿಯಲ್ಲಿ ಈ ದ್ವೀಪಗಳಿಂದ ಹೊರಟ ಯುದ್ಧವಿಮಾನಗಳು ೫೧ ಕಾರ್ಯಾಚರಣೆಗಳಲ್ಲಿ ಪಂಪ್ಕಿನ್ ಬಾಂಬ್ ಎಂಬ ಬಿ ವರ್ಗದ ಭಾರೀ ಸ್ಫೋಟಕಗಳನ್ನು ಜಪಾನಿನ ವಿವಿಧೆಡೆಗಳಲ್ಲಿ ಉದುರಿಸಿದವು. (ಪಂಪ್ಕಿನ್ ಬಾಂಬ್ ಎಂಬುದು ಸುಮಾರು ೨೮೫೦ ಕೆಜಿ ತೂಕದ ಕಾಂಕ್ರೀಟ್ ಗಟ್ಟಿ, ಅವನ್ನು ಸೇನಾನೆಲೆಗಳನ್ನು ಧ್ವಂಸಮಾಡಲು ಬಳಸಲಾಗುತ್ತದೆ, ಆದರೆ ಅಮೆರಿಕನ್ನರು ಬಳಸಿದ ಪಂಪ್ಕಿನ್ ಬಾಂಬುಗಳು ಸ್ಫೋಟಕಗಳನ್ನು ಹೊಂದಿದ್ದ ಲೋಹಕೋಶಗಳು)
ಯುದ್ಧ ನಡೆಯುತ್ತಿದ್ದ ಇದೇ ಸಂದರ್ಭದಲ್ಲಿ ಇತ್ತ ಅಮೆರಿಕದ ವಿಜ್ಞಾನಿಗಳು ವಿವಿಧ ಪ್ರಯೋಗಗಳಲ್ಲಿ ತೊಡಗಿ ದೇಶಕ್ಕೆ ಉಪಯುಕ್ತವಾಗಬಹುದಾದ ಅಪರಿಮಿತ ಅನ್ವೇಷಣೆಗಳ ಜನಕರಾಗಿದ್ದರು. ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದಕ್ಕಾಗಿ ಅಮೆರಿಕ ಸರ್ಕಾರವು ಧಾರಾಳ ಹಣಕಾಸಿನ ನೆರವು ನೀಡುತ್ತಿತ್ತು. ಅದೇ ವೇಳೆಯಲ್ಲಿ ಆಲ್ಬರ್ಟ್ ಐನ್ಸ್ಟೀನರ ಸಾಪೇಕ್ಷವಾದ ಹಾಗೂ ಶಕ್ತಿಮೂಲವಾದ (ಇ=ಎಂಸಿ ಸ್ಕ್ವೇರ್) ಗಳು ವಿಶ್ವದ ಗಮನ ಸೆಳೆದಿದ್ದವು.
ಅಗಾಧ ವೇಗದ ಕಾಯವೊಂದು ಅಷ್ಟೇ ವೇಗದ ಇನ್ನೊಂದು ಕಾಯಕ್ಕೆ ಡಿಕ್ಕಿಯಾದಾಗ ಅಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆನ್ನುವುದು ಇ= ಎಂಸಿ ಸ್ಕ್ವೇರ್ ಸೂತ್ರದ ಸಾರಾಂಶ. ಅಗಾಧ ವೇಗದ ಗುಣ ಹೊಂದಿದ ಯುರೇನಿಯಂ ೨೩೫ ಎಂಬ ಖನಿಜದ ಅಣುಗಳನ್ನು ಪರಸ್ಪರ ಘಟ್ಟಿಸಿದರೆ ಅಪಾರ ಶಕ್ತಿ ಉದ್ಭವವಾಗುವುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ಒಂದು ಲೆಕ್ಕಚಾರದ ಪ್ರಕಾರ ೨,೭೬,೦೦೦ ಕಿಲೋಗ್ರಾಂ ತೂಕದ ಕಲ್ಲಿದ್ದಲು ನೀಡಬಲ್ಲ ಶಾಖಶಕ್ತಿಯನ್ನು ಒಂದೇ ಒಂದು ಕಿಲೋಗ್ರಾಂ ಯುರೇನಿಯಂ ನಿಂದ ಪಡೆಯಬಹುದು ಅಂದಮೇಲೆ ಅಣು ಢಿಕ್ಕಿಯ ವಿಪರೀತ ಪರಿಣಾಮವನ್ನು ಊಹಿಸಿಕೊಳ್ಳಬಹುದು. ಈ ಶಾಖಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಮಾನವ ಸ್ನೇಹಿಯಾಗಬಹುದು ಅಥವಾ ಬಾಂಬಿನಂತೆ ಸಿಡಿಸಿ ಮಾನವ ವಿನಾಶಕ್ಕೂ ಕಾರಣವಾಗಬಹುದು.
ಅಮೆರಿಕದ ಅಧ್ಯಕ್ಷರ ಗುಪ್ತ ಅಣತಿಯ ಮೇರೆಗೆ ಯುದ್ಧ ತಜ್ಞರು ಐನ್‌ಸ್ಟೀನ್ ಸೂತ್ರವನ್ನು ಬಳಸಿಕೊಂಡು ಅಂಥಾ ಒಂದು ಅಣುಬಾಂಬ್ ತಯಾರಿಗೆ ಆದ್ಯತೆ ಇತ್ತಿದ್ದರು. ಖಂಡಾಂತರಗಳ ವಿಸ್ತಾರ ಹೊಂದಿದ್ದ ವಿಶಾಲ ಶಾಂತಸಾಗರದ ನಿರ್ಜನ ನಡುಗಡ್ಡೆಯಲ್ಲಿ ಅತ್ಯಂತ ರಹಸ್ಯವಾಗಿ ಅಮೆರಿಕದ ಅಣು ವಿಜ್ಞಾನಿಗಳು ಪ್ರಯೋಗ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಆ ದ್ವೀಪ ಸಮುಚ್ಚಯವು ಮುಖ್ಯನೆಲದಿಂದ ಬಹುದೂರವಿದ್ದುದರಿಂದ ಯಾರಿಗೂ ಸುಲಭದಲ್ಲಿ ನಿಲುಕವಂತೆ ಇರಲಿಲ್ಲ. ಹಾಗಾಗಿ ಅಣುಬಾಂಬಿನ ಪ್ರಯೋಗಗಳು ನಿರಾತಂಕವಾಗಿ ನಡೆದಿದ್ದವು. ನಿರ್ಜನ ದ್ವೀಪಗಳಲ್ಲಿ ಸಾಗರತಳದಲ್ಲಿ ಅನೇಕ ಸಣ್ಣ ಪುಟ್ಟ ಪ್ರಯೋಗಗಳು ನಡೆದಿದ್ದವಾದರೂ ಬೃಹತ್ ಪ್ರಮಾಣದ ಪ್ರಯೋಗಕ್ಕೆ ರಂಗವಿನ್ನೂ ಅಣಿಯಾಗಿರಲಿಲ್ಲ. ಭಾರೀ ಬಾಂಬು ಬಹುತೇಕ ಸಿದ್ಧವಾಗಿದ್ದರೂ ಅದನ್ನು ರಣಾರಂಗದಲ್ಲಿ ಪ್ರಯೋಗ ಮಾಡಿರಲಿಲ್ಲ.
ಅಮೆರಿಕದ ಅಧ್ಯಕ್ಷರು ತಮ್ಮ ಸೇನೆಯ ಅಧಿಕಾರಿಗಳಿಂದ ಎಲ್ಲ ಮಾಹಿತಿ ಪಡೆಯುತ್ತಿದ್ದರು. ಜಪಾನಿನಂತ ಪುಟ್ಟ ದೇಶದ ಅಪ್ರತಿಮ ದೇಶಭಕ್ತಿಯ ವೀರಾಗ್ರಣಿ ಯೋಧರು ತಮ್ಮ ದೇಶದ ಯುವಸೈನಿಕರನ್ನು ಬಗ್ಗುಬಡಿಯುತ್ತಿರುವುದು ಅವರಿಗೆ ಚಿಂತೆಯಾಗಿ ಕಾಡಿತ್ತು. ಅಮೆರಿಕದ ಹೆಂಗಳೆಯರು ಸೈನ್ಯದಿಂದ ತಮ್ಮ ಮಕ್ಕಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಅಧ್ಯಕ್ಷರಿಗೆ ದಂಬಾಲು ಬಿದ್ದಿದ್ದರು. ಹೇಗಾದರೂ ಮಾಡಿ ಜಪಾನನ್ನು ಶರಣಾಗತಿಗೆ ದೂಡಬೇಕು ಹಾಗೂ ಆ ಮೂಲಕ ಅಮೆರಿಕವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಯುದ್ಧವನ್ನು ಕೊನೆಗಾಣಿಸಬೇಕು ಎಂದು ಅಮೆರಿಕ ತುಡಿಯತೊಡಗಿತು. ಅಧ್ಯಕ್ಷರು ತಮ್ಮ ಸೇನಾವಿಜ್ಞಾನಿಗಳಿಗೆ ಒಂದು ರಹಸ್ಯ ಸಂದೇಶವನ್ನು ರವಾನಿಸಿದರು.
ಅದು ೧೯೪೫ರ ಆಗಸ್ಟ್ ೬ನೇ ದಿನ. ಮುಂಜಾವದ ೨:೪೫ ರ ವೇಳೆ. ಅಗಸವಿನ್ನೂ ಕಪ್ಪಗಿತ್ತು. ಪರಿಸರು ನೀರವವಾಗಿತ್ತು. ಆದರೆ ಆ ಟಿನಿಯನ್ ದ್ವೀಪದ ವಾಯುನೆಲೆಯಲ್ಲಿ ಒಂದು ನಿಗೂಢ ಚಲನೆಯಿತ್ತು. ಕರ್ನಲ್ ಪಾಲ್ ಟಿಬ್ಬೆಟ್ಸ್ ನವರು ಎನೊಲಾ ಗೇ ಎಂಬ ತಮ್ಮ ಬಿ-೨೯ ಬಾಂಬರ್ ವಿಮಾನವನ್ನು ನೆಲದಿಂದ ಮೇಲಕ್ಕೆ ಚಿಮ್ಮಿಸಿದರು. ಅದರ ಸರಕುಗಳ ಅಟ್ಟಣಿಗೆಯಲ್ಲಿ ’ಲಿಟಲ್ ಬಾಯ್’ ಎಂಬ ಹತ್ತಡಿ ಉದ್ದ ಮೂರಡಿ ವ್ಯಾಸದ ಕಬ್ಬಿಣದ ಕೊಳಗವೊಂದು ಮಲಗಿತ್ತು. ಅದರ ಒಡಲೊಳಗಿನ ಉದ್ದನೆಯ ಕೊಳವೆಯಲ್ಲಿ ೬೪ ಕಿಲೋಗ್ರಾಮಿನಷ್ಟು ಯುರೇನಿಯಂ ಅಡಗಿತ್ತು. ವಿಮಾನ ಹಾರುತ್ತಾ ಮೆಲ್ಲಮೆಲ್ಲನೆ ವೇಗ ಹೆಚ್ಚಿಕೊಳ್ಳುತ್ತಾ ಹದಿನೈದು ನಿಮಿಷಗಳು ಕಳೆದಿದ್ದವು. ವಿಜ್ಞಾನಿ ಕ್ಯಾಪ್ಟನ್ ವಿಲಿಯಂ ಎಸ್ ಪಾರ್ಸನ್ ನವರು ಮೇಲೆದ್ದು ತಮ್ಮ ಸಲಕರಣೆಗಳೊಂದಿಗೆ ಕೆಲಸ ಶುರುಮಾಡಿಕೊಂಡರು. ಕೊಳಗದ ಬಾಗಿಲು ತೆರೆದು ತಣ್ಣಗೆ ಮಲಗಿದ್ದ ಬಾಂಬನ್ನು ಸಕ್ರಿಯಗೊಳಿಸುವ ಸಾಧನಗಳಲ್ಲಿ ಜೀವ ತುಂಬಿದರು. ಗಡಿಯಾರದ ಮುಳ್ಳುಗಳು, ವಿದ್ಯುತ್ ತಂತಿಗಳು, ಇಂಧನದ ಕೊಳವೆಗಳು ಮಿನಮಿನ ದೀಪಗಳು, ಗಾಳಿಯ ಕವಾಟಗಳು, ಕೀಲೆಣ್ಣೆಯ ನಳಿಕೆಗಳು, ಯಂತ್ರಗಳ ಚಕ್ರಗಳು ಚುರುಕಾದವು. ಎಲ್ಲವೂ ಸಜ್ಜಾಗಿ ಒಂಬತ್ತು, ಎಂಟು, ಏಳು, ಆರು ಎಂಬ ಇಳಿಯಣಿಕೆ ಶುರುವಾಯಿತು.
ಸೂರ್ಯೋದಯವಾಗಿ ಹೊತ್ತು ಮೇಲೇರಿತ್ತು. ಆಗ ಬೆಳಗಿನ ೭:೨೫ ರ ಸಮಯ ಹೊಳೆವ ನೀಲಾಗಸದಲ್ಲಿ ೨೬,೦೦೦ ಅಡಿಗಳ ಎತ್ತರದಲ್ಲಿ ಎನೊಲಾ ಗೇ ವಿಮಾನ ಹಾರುತ್ತಿತ್ತು. ವಿಮಾನ ಜಪಾನಿನ ಹಿರೋಶಿಮಾ ನಗರದ ಮೇಲೆ ಹಾರುತ್ತಿರುವಾಗ ಎಂಟುಗಂಟೆ ಹದಿನಾರು ನಿಮಿಷಕ್ಕೆ ಸರಿಯಾಗಿ ಇಳಿಯಣಿಕೆಯ ಘೋಷಣೆ ತಾರಕಕ್ಕೇರಿ “ಮೂರು, ಎರಡು, ಇನ್ನೇನು, ಈಗ” ಎನ್ನುತ್ತಿದ್ದ ಹಾಗೆಯೇ ವಿಮಾನದ ಪೈಲಟ್ ಕರ್ನಲ್ ಟಿಬ್ಬೆಟ್ಸ್ ನವರು ಕೀಲು ಎಳೆದರು. ಬಾಂಬು ತುಂಬಿದ್ದ ಕಬ್ಬಿಣದ ಕೊಳಗ ಸರಕ್ಕನೇ ಕೆಳಕ್ಕೆ ಜಿಗಿಯಿತು. ಅದರ ಚೂಪಾದ ಮೂತಿ ನೆಲದತ್ತ ಮುಖ ಮಾಡಿತ್ತು. ಹಿಂದಿನ ಬಾಲದ ಕಡೆ ಇದ್ದ ನಾಲ್ಕು ರೆಕ್ಕೆಗಳು ಕೊಳಗವು ಗಾಳಿಗೆ ಓಲಾಡದಂತೆ ಸ್ತಿಮಿತಕ್ಕೆ ತರುತ್ತಿದ್ದವು. ನೆಲದಿಂದ ೧೯೦೦ ಅಡಿ ಮೇಲಿರುವಾಗ ಅದರ ಅಂತರಾಳದ ಬಾಂಬಿಗೆ ಕಿಡಿ ತಗುಲಿತು. ಲೋಹದ ಕಾಯವಿನ್ನೂ ನೆಲ ತಲಪುವ ಮೊದಲೇ ಭಾರೀ ಶಬ್ದದೊಂದಿಗೆ ಬಾಂಬು ಸ್ಫೋಟಿಸಿ ಅಪಾರ ಪ್ರಮಾಣದ ಬೆಂಕಿಯನ್ನು ಹೊರಹಾಕಿತು. ೪೦೦೦ ಡಿಗ್ರಿ ಸೆಲ್ಷಿಯಸ್ ಇದ್ದ ಆ ಬೆಂಕಿಯ ತಾಪಕ್ಕೆ ಎಪ್ಪತ್ತು ಸಾವಿರ ಮಂದಿ ಇದ್ದಲ್ಲೇ ಸುಟ್ಟು ಬೂದಿಯಾದರು. ಸುತ್ತಲಿನ ಎಂಟು ಕಿಲೋಮೀಟರು ವ್ಯಾಪ್ತಿಯ ಎಲ್ಲ ಮನೆಗಳು, ಕಟ್ಟಡಗಳು, ಮರಗಿಡಗಳು, ಗುಡ್ಡಗಳು ಎಲ್ಲವೂ ನೆಲಸಮವಾಗಿ ಬಟಾಬಯಲಾದವು. ಭಾರಿ ಅಣಬೆಯಾಕಾರದ ಹೊಗೆಯ ಮೋಡ ಭುಗಿಲೆದ್ದಿತು.
ಬಾಂಬುಗಳ ದಾರ್ಢ್ಯವನ್ನು ಟಿಎನ್ಟಿ ಎಂದು ಅಳೆಯಲಾಗುತ್ತದೆ. ಒಂದು ಕೆಜಿಯಷ್ಟು ಟಿಎನ್ಟಿ ಆರುದ್ಧ ಆರಗಲ ಚದರಡಿಯ ಕೋಣೆಯ ಎಲ್ಲವನ್ನೂ ಧ್ವಂಸಗೊಳಿಸಬಲ್ಲದು. ಒಂದು ಕೆಜಿಯ ಸಾವಿರಪಟ್ಟು ಅಂದರೆ ಒಂದು ಟನ್ನು. ಅಂಥಾ ಇಪ್ಪತ್ತು ಸಾವಿರ ಟನ್ ಟಿಎನ್ಟಿ ಯ ಶಕ್ತಿಯನ್ನು ಹಿರೋಶಿಮಾ ಬಾಂಬು ಸಿಡಿಸಿತ್ತು. ತಕ್ಷಣವೇ ಭಸ್ಮವಾದ ಆ ಎಪ್ಪತ್ತು ಸಾವಿರ ಜನರೇ ಪುಣ್ಯವಂತರು. ಬಾಂಬಿನ ದುಷ್ಟರಿಣಾಮಗಳ ಪರಿವೆಯೇ ಇಲ್ಲದಂತೆ, ನೋವಿನ ಹಾಗೂ ಉರಿಯ ಅನುಭವವೇ ಆಗದಂತೆ ಒಂದೇ ಕ್ಷಣದಲ್ಲಿ ಅವರು ಪ್ರಾಣ ಕಳೆದುಕೊಂಡರು. ಆದರೆ ಅಣುಬಾಂಬ್ ಸಿಡಿದು ಒಂದು ತಿಂಗಳ ತನಕ ಹಿರೋಶಿಮಾ ಹೊತ್ತಿ ಉರಿಯಿತು. ನೋವಿನಿಂದ, ಉರಿಯಿಂದ, ಧಗೆಯಿಂದ, ಅನ್ನನೀರಿಲ್ಲದೆ, ಔಷಧೋಪಚಾರವಿಲ್ಲದೆ ನರಳಿ ನರಳಿ ಸತ್ತವರು ಸುಮಾರು ಎಂಬತ್ತು ಸಾವಿರ ಮಂದಿ. ಅವರಿಗೆ ಸಹಾಯ ಹಸ್ತ ನೀಡ ಹೋದವರೂ ಅಣುವಿನ ವಿಕಿರಣಕ್ಕೆ ಬಲಿಯಾಗಿ ’ಕೂಳ್ ಕುದಿವಂತೆ ಕುದಿದುವನಿಮಿಷತತಿಗಳ್’ ಎಂಬಂತೆ ವಿಲವಿಲ ಒದ್ದಾಡಿ ಸತ್ತರು. ಜೀವ ಗಟ್ಟಿಯಿದ್ದ ಕೆಲವರಷ್ಟೇ ಬದುಕುಳಿದರು.
ತ್ಸುತೊಮು ಯಮಾಗುಚಿಯವರು ಮಿತ್ಸುಬಿಶಿ ಹೆವಿ ಇಂಡಸ್ಟ್ರಿಯ ನೌಕರ. ಅಂದು ಕಂಪೆನಿಯ ವ್ಯವಹಾರಕ್ಕಾಗಿ ಹಿರೋಶಿಮಾಗೆ ಬಂದು ಅತಿಥಿಗೃಹದಲ್ಲಿ ಮಲಗಿದ್ದರು. ಅವರಿದ್ದ ತಾಣ ಬಾಂಬು ಬಿದ್ದ ಮೂರು ಕಿಲೋಮೀಟರು ದೂರದಲ್ಲಿತ್ತು. ಒಮ್ಮೆಲೇ ಕಣ್ಣುಕೋರೈಸುವ ಬೆಳಕು ಅವರ ಕೋಣೆಯಲ್ಲಿ ಪ್ರಕಾಶಿಸಿತು. ಅವರು ಎಚ್ಚರಾಗಿ ಅದು ಮಿಂಚಿನ ಹೊಳಪು ಎಂದುಕೊಳ್ಳುತ್ತಿರುವಾಗಲೇ ಧಗೆಯುಂಟಾಗಿ ಬಾಂಬಿನ ಸಿಡಿತಲೆಯ ಬೆಂಕಿಯ ಶಾಖಕ್ಕೆ ಅವರ ಮೈಕೈಮುಖವೆಲ್ಲಾ ಸೀದುಹೋದವು. ತಲೆಗೂದಲೆಲ್ಲಾ ಸುಟ್ಟುಹೋದವು. ಕಿವಿ ಕಿವುಡಾಯಿತು. ಅಂಗೈ ಚರ್ಮ ಬಾತುಕೊಂಡಿತು. ಆದರೆ ಅದ್ಭುತಕರವಾಗಿ ಅವರು ಬದುಕುಳಿದರು. ಹತ್ತಿರದ ತುರ್ತು ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಾ ಒಂದು ರಾತ್ರಿ ಕಳೆದು, ಸುಮಾರು ಮುನ್ನೂರು ಕಿಲೋಮೀಟರು ದೂರದಲ್ಲಿದ್ದ ಅವರೂರಿಗೆ ನಡೆದುಕೊಂಡೇ ಹೋಗಿ ತಲಪಿದಾಗ ಅವರ ಹೆಂಡತಿ ಮಕ್ಕಳು ಅವರನ್ನು ಗುರುತು ಹಿಡಿಯಲೇ ಇಲ್ಲ.
ಅಂದು ಆಗಸ್ಟ್ ಒಂಬತ್ತರ ನಡುಹಗಲು. ತ್ಸುತೊಮುನವರು ಕಚೇರಿಗೆ ತೆರಳಿ ತಮ್ಮ ಅಧಿಕಾರಿಗಳಿಗೆ ವರದಿಯೊಪ್ಪಿಸುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಅವರ ಕಚೇರಿಯನ್ನು ಪ್ರಖರವಾದ ಬೆಳಕೊಂಡು ಆವರಿಸಿತು. ಹಿರೋಶಿಮಾದ ಬಾಂಬ್ ಭೂತ ತಮ್ಮನ್ನು ಅಟ್ಟಿಸಿಕೊಂಡು ಬಂತೆಂದು ತ್ಸುತೊಮುನವರು ಥರಥರಗುಟ್ಟಿ ನಡುಗಿಹೋದರು. ಈ ಸಲ ಅವರಿದ್ದ ಸ್ಥಳಕ್ಕೆ ಮೂರು ಕಿಲೊಮೀಟರು ದೂರದಲ್ಲಿದ್ದ ನಾಗಾಸಾಕಿ ಪಟ್ಟಣದ ಮೇಲೆ ಅಮೆರಿಕನ್ ಯುದ್ಧವಿಮಾನವು ಪ್ಲುಟೋನಿಯಂ ಅಣು ಬಾಂಬನ್ನು ಬೀಳಿಸಿತ್ತು. ಮತ್ತೆ ಸುಮಾರು ೩೫,೦೦೦ ಮಂದಿ ಸುಟ್ಟು ಬೂದಿಯಾದರು. ಆದರೆ ತ್ಸುತೊಮುನವರು ಈ ಸಾರಿಯೂ ಬದುಕುಳಿದಿದ್ದರು.
ಅಣುಬಾಂಬ್ ಪ್ರಯೋಗವಾದ ಮೇಲೆಯೂ ಗುವಾಮ್, ಸೇಪಾನ್ ಮತ್ತು ತಿನಿಯಾನ್ ದ್ವೀಪಗಳಿಂದ ಅಮೆರಿಕವು ಜಪಾನಿನ ಮೇಲೆ ನಿರಂತರವಾಗಿ ದಾಳಿ ನಡೆಸಿತು. ಆಗಸ್ಟ್ ಹದಿನಾಲ್ಕರಂದು ನೂರಾರು ಬಿ-೨೯ ಬಾಂಬರ್ ವಿಮಾನಗಳು ಜಪಾನಿನ ಮೇಲೆ ಬಾಂಬುಗಳ ಸುರಿಮಳೆಗೈದವು. ಅದೇ ರಾತ್ರಿ ಜಪಾನ್ ರೇಡಿಯೋದ ಮೂಲಕ ಸಂದೇಶ ಬಿತ್ತರಿಸಿದ ಜಪಾನ್ ಚಕ್ರವರ್ತಿ ಹಿರೊಹಿಟೋ ನವರು “ನಮ್ಮ ದೇಶವು ಹಿರಿಯರು ಹಾಕಿಕೊಟ್ಟ ದೇಶಭಕ್ತಿಯ ಮಾರ್ಗದಲ್ಲಿ ನಡೆದು ತನ್ನ ನೆಲದ ಒಂದೊಂದು ಅಂಗುಲವನ್ನೂ ಕಳೆದುಕೊಳ್ಳಲಿಚ್ಛಿಸದೆ ಸ್ವಾಭಿಮಾನವನ್ನು ಪ್ರದರ್ಶಿಸಿದೆ. ಆದರೆ ಅತ್ಯಂತ ಕ್ರೂರವೂ ಅಮಾನುಷವೂ ಆದ ಬಾಂಬ್ ಪ್ರಯೋಗವು ನಮ್ಮ ಅಮಾಯಕ ಪ್ರಜೆಗಳ ಜೀವವನ್ನು ಹೊಸಕುತ್ತಿರುವುದರಿಂದ ನಮ್ಮ ಹೃದಯ ಬೆಂದಿದೆ. ಈ ತಕ್ಷಣದಿಂದ ನಾವು ಯುದ್ಧದಿಂದ ತಟಸ್ಥರಾಗೋಣ. ನಮ್ಮ ಪ್ರಜೆಗಳು ಬೇರೊಂದು ರೀತಿಯಲ್ಲಿ ಸಶಕ್ತ ಜಪಾನನ್ನು ಮರುನಿರ್ಮಿಸುವ ಮೂಲಕ ಮೃತರಾದ ಸಹಪ್ರಜೆಗಳಿಗೆ ಅಶ್ರುತರ್ಪಣ ನೀಡಲಿ. ಆ ಮೂಲಕ ವಿಶ್ವದೆಲ್ಲೆಡೆಯ ನಾಗರಿಕರು ಶಾಂತಿ ಸಹಬಾಳ್ವೆಯಿಂದ ಬಾಳುವಂತಾಗಲಿ” ಎಂದು ನುಡಿದರು. ಆ ಬಾನುಲಿ ಸಂದೇಶವನ್ನು ಇಂದಿಗೂ ’ಜುವೆಲ್ ವಾಯ್ಸ್ ಬ್ರಾಡ್‌ಕಾಸ್ಟಿಂಗ್’ ಎಂದು ಕರೆದು ಮರು ಬಿತ್ತರಿಸಲಾಗುತ್ತಿದೆ.
ಚಕ್ರವರ್ತಿಯ ಈ ಮಾತನ್ನು ಜಪಾನಿನ ಶರಣಾಗತಿ ಎಂದೇ ಬಿಂಬಿಸಲಾಗುತ್ತದೆ. ಆದರೆ ಅದು ವಿಶ್ವದ ಕ್ರೂರಮನಸುಗಳ ಮೇಲಿನ ದಿಗ್ವಿಜಯ ಎಂದೇ ನಾನು ಬಣ್ಣಿಸುತ್ತೇನೆ.
ಚಿಟಿಕೆಯಷ್ಟು ಯುರೇನಿಯಂ ಒಂದು ನಗರಕ್ಕೆ ಒಂದಿಡೀ ವರ್ಷಕ್ಕೆ ಬೇಕಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸಬಲ್ಲದು. ಅದೇ ಚಿಟಿಕೆ ಯುರೇನಿಯಂ ಆ ನಗರವನ್ನು ಒಂದೇ ನಿಮಿಷದಲ್ಲಿ ಬಲಿ ತೆಗೆದುಕೊಳ್ಳಬಹುದು. ಇದೆಲ್ಲ ನಾವು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿದೆ. ಅಂದರೆ ಮನುಷ್ಯನ ಬುದ್ಧಿಶಕ್ತಿಯು ಕೆಡಕನ್ನು ಗೆದ್ದು ಒಳಿತನ್ನು ಸಾಧಿಸುವ ಕಡೆಗೆ ಹರಿಯಲಿ ಎಂಬುದೇ ಶಾಂತಿಪ್ರಿಯರ ಹಾರೈಕೆ. ಆಗಸ್ಟ್ ೬ ಹಿರೋಶಿಮಾ ದಿನದ ಆಚರಣೆಯ ಹಿಂದಿನ ಧ್ವನಿಯೂ ಅದೇ ಆಗಿದೆ.