ಸೋಮವಾರ, ಡಿಸೆಂಬರ್ 24, 2018

ಸೈಲೆಂಟ್ ನೈಟ್


ಸೈಲೆಂಟ್ ನೈಟ್, ಹೋಲಿ ನೈಟ್, ಆಲ್ ಈಸ್ ಕಾಮ್ ಅಂಡ್ ಆಲ್ ಈಸ್ ಬ್ರೈಟ್’ ... ಅದೊಂದು ಸುಂದರ ಸುಮಧುರ ಮನೋಹರ ಗೀತೆ. ಎಷ್ಟೋ ಸಿನಿಮಾಗಳಲ್ಲಿ ಅದೊಂದು ಸುಶ್ರಾವ್ಯ ಹಿನ್ನೆಲೆ ಸಂಗೀತವಾಗಿ ಮಂದ್ರ ಮನೋಜ್ಞವಾದ ಇನಿದಾದ ಸ್ವರದಲ್ಲಿ ತೇಲಿ ಬರುವುದನ್ನು ಆಲಿಸಿರುತ್ತೇವೆ. ಅಪ್ರತಿಮ ಸ್ವರವಲ್ಲರಿಯ ನಾದಮಾಧುರ್ಯಕ್ಕೆ ಮನಸೋಲದವರಾರು! ಮೂಲತಃ ಜರ್ಮನ್ ಭಾಷೆಯಲ್ಲಿ ರಚಿತವಾದ ಹಾಡು ಇಂದು ಪ್ರಪಂಚದ ಮುನ್ನೂರಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿ ಅದೇ ಗಾನಸುಧೆಯ ಚೆಲುವನ್ನು ಉಳಿಸಿಕೊಂಡಿದೆ. ಪ್ರತಿ ಬಾರಿ ಕೇಳಿಸಿಕೊಂಡಾಗಲೂ ಹೊಸದಾಗಿ ತೋರಿ ರೋಮಾಂಚನವೇಳಿಸಿ ಭಾವತರಂಗಗಳನ್ನು ಮೀಟುವ ಹಾಡು ಹುಟ್ಟಿ ಹರಡಿದ ಬಗೆಯೇ ಒಂದು ರಮ್ಯ ರೋಚಕ ಕತೆ.
ಆಸ್ಟ್ರಿಯಾದ ಜರ್ಮನ್ ಮನೆಮಾತಿನ ಪುಟ್ಟ ಹಳ್ಳಿ ಓಬೆರ್ನಡಾರ್. ೧೮೧೮ರ ಡಿಸೆಂಬರ್ ತಿಂಗಳ ಚಳಿಗಾಲ. ಊರ ಪಕ್ಕದಲ್ಲೇ ಹರಿಯುವ ಸಾಲ್ಝ್ ಹೊಳೆಯು ಹೆಪ್ಪುಗಟ್ಟುವ ಸಮಯ. ಆಗಮನಕಾಲದ ಚುಮುಚುಮು ರಾತ್ರಿಗಳ ನೀರವ ವಾತಾವರಣದಲ್ಲಿ ಅಲ್ಲಿನ ಸಂತ ನಿಕೊಲಾಸ್ ಚರ್ಚು ಎಂಬ ಪುಟ್ಟ ಗುಡಿಯು ಕ್ರಿಸ್ತಜಯಂತಿಯ ಆಚರಣೆಗೆ ಸಿದ್ಧಗೊಳ್ಳುತ್ತಿತ್ತು. ನಡುರಾತ್ರಿಯ ಪೂಜೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲು ಫಾದರ್ ಜೋಸೆಫ್ ಮೋಹ್ರ್ ನವರು ಹಲವು ಗಂಟೆಗಳ ಮೊದಲೇ ಚರ್ಚಿನೊಳಗೆ ಪ್ರವೇಶಿಸಿ ಗಾನವೃಂದದ ಸ್ಥಳಕ್ಕೆ ಬಂದರು. ಯುವಪಾದ್ರಿಯು ಚರ್ಚಿಗೆ ಬಂದು ಒಂದು ವರ್ಷವಾಗಿತ್ತಷ್ಟೇ. ಇದು ಚರ್ಚಿನಲ್ಲಿ ಅವರ ಮೊದಲ ಕ್ರಿಸ್ಮಸ್. ಇಂಥಾ ದೊಡ್ಡ ಹಬ್ಬಗಳಿಗೆಂದೇ ಉಪಯೋಗಿಸುವ ಬೃಹತ್ ಪೈಪ್ ಆರ್ಗನ್ ಅನ್ನು ಅವರು ಪ್ರೀತ್ಯಭಿಮಾನದಿಂದ ಸವರಿದರು. ಅದರ ಮೇಲೆ ಕುಳಿತಿದ್ದ ಕಂಡೂ ಕಾಣದ ಧೂಳನ್ನು ನಯವಾದ ಹತ್ತಿಯ ಬಟ್ಟೆಯಿಂದ ಒರೆಸಿದರು. ಮೊನ್ನೆ ಮೊನ್ನೆಯಷ್ಟೇ ಅದರ ನಿಪುಣನನ್ನು ಕರೆಸಿ ರಿಪೇರಿ ಮಾಡಿಸಿದ್ದರು. ಕ್ರಿಸ್ಮಸ್ ಹಬ್ಬದ ಪ್ರಮುಖ ಗೀತೆ ಗ್ಲೋರಿಯಾವನ್ನು ಹಾಡುವುದಕ್ಕೆ ಇಂಬಾಗಿ ಪೈಪ್ ಆರ್ಗನ್ ಹೊರಡಿಸುವ ಅಷ್ಟೈಶ್ವರ್ಯಭೋಗಭಾಗ್ಯಗಳ ಶ್ರೀಮಂತ ನಾದವನ್ನು ಕಲ್ಪಿಸಿಕೊಂಡು ಅವರು ಭಾವಪರವಶರಾದರು. ವೀಣಾವಾದಕನು ತನ್ನ ವೀಣೆಯನ್ನು ಮಾಣಿಕ್ಯದಂತೆ ನಲುಮೆಯಿಂದ ಸ್ಪರ್ಶಿಸಿ ಪರಮಾನಂದ ಪಡುವ ಹಾಗೆ ಫಾದರ್ ಮೋಹ್ರ್ ನವರು ಆರ್ಗನ್ನಿನ ಮೇಲೆ ನಿಧಾನವಾಗಿ ಕೈಯಾಡಿಸಿ ಪ್ರಸನ್ನರಾದರು.
ಪೈಪ್ ಆರ್ಗನ್ ಎಂಬುದು ಒಂದು ಗಾಳಿ ವಾದ್ಯ. ಹಿಂದೆಲ್ಲ ಅಡಿಗೆ ಮಾಡುವಾಗ ಸೌದೆ ಒಲೆಯಲ್ಲಿ ಬೆಂಕಿ ಪುಟಿದೇಳಿಸಲು ಅಮ್ಮ ಊದುಕೊಳವೆಯನ್ನು ಊದುವಾಗ ಒಂದು ರೀತಿಯ ನಾದ ಹೊರಹೊಮ್ಮುತ್ತಿದ್ದುದನ್ನು ನಾವು ಕುತೂಹಲದಿಂದ ಗಮನಿಸಿದ್ದೇವಲ್ಲವೇ? ಪಿಳ್ಳಂಗೋವಿ ಅಥವಾ ಕೊಳಲನ್ನು ತುಟಿಗೆ ಸಿಲುಕಿಸಿ ಊದುತ್ತಾ ಕೈಬೆರಳುಗಳನ್ನು ಅದರ ಒಡಲಿನ ರಂಧ್ರಗಳ ಮೇಲೆ ಲಾಸ್ಯವಾಡಿಸುತ್ತಾ ಬಗೆಬಗೆಯ ದನಿಗಳನ್ನು ಹೊರಡಿಸುತ್ತೇವಲ್ಲವೇ? ಚರ್ಮದ ಚೀಲವೊಂದಕ್ಕೆ ಉಸಿರೂದಿ ಹಿಗ್ಗಿಸಿ ಅದರ ಹೊರಮೈಯಿಂದ ಹೊರಟ ಹಲವು ರೀತಿಯ ತುತೂರಿಗಳನ್ನು ಒಮ್ಮೆಗೇ ನುಡಿಸುವ ಬ್ಯಾಗ್ ಪೈಪರುಗಳನ್ನು ಕೆಲ ಇಂಗ್ಲಿಷ್ ಸಿನಿಮಾಗಳಲ್ಲಿ ನೋಡಿದ್ದೇವಲ್ಲವೇ?
ಅದೇ ರೀತಿಯಲ್ಲಿ ಹಿತ್ತಾಳೆಯಲ್ಲಿ ಮಾಡಿದ ಹಲವಾರು ಬಗೆಯ ವಿವಿಧ ಗಾತ್ರದ ಕೊಳವೆಗಳನ್ನು ಆಳೆತ್ತರಕ್ಕೆ ನಿಲ್ಲಿಸಿ ಕುಲುಮೆಯ ತಿದಿಯಂತಹ ಗಾಳಿಚೀಲ ತುಂಬಿಸಿ ಹಿತ್ತಾಳೆಯ ಕೊಳವೆಗಳ ಮೂಲಕ ಸುನಾದ ಹೊರಡಿಸಿದರೆ ಇಡೀ ದೇವಾಲಯವೇ ಸಂಗೀತದ ರೋಮಾಂಚನದಲ್ಲಿ ಮಿಂದೇಳುತ್ತದೆ. ಬೆಂಗಳೂರಿನ ಸಂತ ಮಾರ್ಕನ ಕಥೀಡ್ರಲ್, ಮೈಸೂರಿನ ಸಂತ ಫಿಲೋಮಿನ ಕಥೀಡ್ರಲ್ ಗಳಿಗೆ ಹೋದಾಗ ಪೀಠಕ್ಕೆ ಎದುರಾಗಿ ಅಟ್ಟಣಿಗೆಯ ಮೇಲೆ ಪೈಪ್ ಆರ್ಗನ್ ವಿರಾಜಮಾನವಾಗಿರುವುದನ್ನು ನೋಡಬಹುದು
ಇರಲಿ ಈಗ ಮತ್ತೆ ಆಸ್ಟ್ರಿಯಾದ ಓಬೆರ್ನಡಾರ್ ಹಳ್ಳಿಯ ದೇವಾಲಯಕ್ಕೆ ಹೋಗೋಣ. ಫಾದರ್ ಜೋಸೆಫ್ ಮೋಹ್ರ್ ನವರು ಪೈಪ್ ಆರ್ಗನ್ನಿನ ಮುಂದೆ ತಮ್ಮ ಕುರ್ಚಿಯ ಮೇಲೆ ಕುಳಿತು ಆರ್ಗನ್ ಅನ್ನು ನುಡಿಸಲು ತೊಡಗಿದರು. ಅಯ್ಯೋ ಏನು ಹೇಳೋಣ! ಆರ್ಗನ್ನಿನ ಹಿತ್ತಾಳೆಯ ನಳಿಕೆಗಳು ಶಬ್ದವನ್ನೇ ಹೊರಡಿಸಲಿಲ್ಲ. ಕಾಲಿನಿಂದ ತಾವೆಷ್ಟು ಒತ್ತಿದರೂ ಗಾಳಿಯ ಚೀಲಗಳು ತುಂಬಿಕೊಳ್ಳದೇ ಪುಸ್ ಪುಸ್ ಎನ್ನುವುದನ್ನು ಕಂಡು ಫಾದರ್ ಮೋಹ್ರ್ ನವರು ವಿಪರೀತವಾಗಿ ಗಾಬರಿಗೊಂಡರು. ಏನಾಯ್ತಪ್ಪಾ ಎನ್ನುತ್ತಾ ಪರಿಶೀಲಿಸಿದಾಗ ತಿದಿಯನ್ನು ಇಲಿಗಳು ಕಡಿದು ಹರಿದು ಹಾಕಿರುವುದನ್ನು ನೋಡಿ ಒಮ್ಮೆಲೇ ಅವರು ಸೋತುಹೋದರು. ಕ್ರಿಸ್ಮಸ್ ನಡುರಾತ್ರಿಯ ಪೂಜೆಗೆ ವಾದ್ಯವಿಲ್ಲದೆ ಹಾಡುವುದಾದರೂ ಹೇಗೆ ಎಂಬ ಚಿಂತೆ ಮಡುಗಟ್ಟಿತು. ಡಿಸೆಂಬರಿನ ಕೊರೆವ ಚಳಿಯಲ್ಲೂ ಅವರ ಹಣೆಯ ಮೇಲೆ ಬೆವರು ಜಿನುಗಿತು. ಮ್ಲಾನವದನರಾಗಿ ಅವರು ಪೀಠದತ್ತ ದಿಟ್ಟಿಸಿದರು. ಶಿಲುಬೆಯ ಮೇಲಿನ ಯೇಸು ಅವರಿಗೆ ಸಾಂತ್ವನ ಹೇಳಿದಂತೆ ಭಾಸವಾಯಿತು. ಆರ್ಗನ್ ಇಲ್ಲದಿದ್ದರೇನು ಬೇರೆ ಪರ್ಯಾಯ ಮಾರ್ಗವಿದೆ ಎಂದು ನುಡಿದಂತಾಯಿತು.
ಫಾದರ್ ಮೋಹ್ರ್ ನವರು ಸ್ವಲ್ಪ ಹೊತ್ತಿನಲ್ಲೇ ಗಡಬಡಿಸಿ ಎದ್ದು ಸೈಕಲ್ಲೇರಿ ಪಕ್ಕದ ಊರಿನಲ್ಲಿದ್ದ ಶಾಲಾ ಶಿಕ್ಷಕ ಫ್ರಾಂಝ್ ಝೇವೆರ್ ಗ್ರುಬೇರ್ ನವರ ಮನೆಯತ್ತ ಧಾವಿಸಿದರು. ಗ್ರುಬೇರ್ ನವರು ಬರೀ ಮೇಷ್ಟರು ಮಾತ್ರವಲ್ಲ ಆರ್ಗನ್ ನಿಪುಣರೂ, ಗಾನವೃಂದದ ಮುಖ್ಯಸ್ಥರೂ ಆಗಿದ್ದರು. ಪ್ರೌಢವಯಸ್ಸಿನ ಅವರು ಕ್ಲಿಷ್ಟ ಸಂದರ್ಭಗಳಲ್ಲಿ ಸಲಹೆ ಪಡೆಯಬಹುದಾದ ನಂಬಿಗಸ್ಥ ನಿಸ್ಪೃಹ ವ್ಯಕ್ತಿಯಾಗಿದ್ದರು. ಫಾದರ್ ನವರು ಆಗಿರುವ ಅನಾಹುತವನ್ನು ಒಂದೆರಡು ಮಾತುಗಳಲ್ಲಿ ವಿವರಿಸಿದರು. ಕ್ರಿಸ್ತಜಯಂತಿಗಾಗಿ ಕೇವಲ ಕೆಲವೇ ಗಂಟೆಗಳಷ್ಟೇ ಉಳಿದಿವೆ, ತುರ್ತಾಗಿ ಏನಾದರೂ ಉಪಾಯ ಮಾಡಬೇಕು ಎನ್ನುತ್ತಾ ತಾವು ಒಂದೆರಡು ವರ್ಷಗಳ ಹಿಂದೆ ಎಂದೋ ಜರ್ಮನ್ ಭಾಷೆಯಲ್ಲಿ ಬರೆದಿಟ್ಟುಕೊಂಡಿದ್ದಸ್ಟೀಲ್ಲೆ ನಾಕ್ಟ್ ಹೈಳಿಗೆ ನಾಕ್ಟ್ಎಂಬ ಗೀತಸಾಹಿತ್ಯವನ್ನು ಗ್ರುಬೇರ್ ಮೇಷ್ಟ್ರ ಮುಂದಿಟ್ಟು ಅದನ್ನು ಗಿಟಾರ್ ವಾದ್ಯ ನುಡಿಸಿ ಹಾಡಲು ಅನುವಾಗುವಂತೆ ಸಂಗೀತ ಪ್ರಸ್ತಾರ ರಚಿಸಿಕೊಡಲು ದುಂಬಾಲು ಬಿದ್ದರು. ಮೇಷ್ಟ್ರು ಹಾಡಿನತ್ತ ಕಣ್ಣಾಡಿಸುತ್ತಾ ಗಿಟಾರು ಕೈಗೆತ್ತಿಕೊಂಡು ಯಾವುದೋ ಒಂದು ರಾಗವನ್ನು ಗುನುಗಿದರು. ಏನಾಶ್ಚರ್ಯ! ಕಾಗದದ ತುಣುಕಿನ ಮೇಲಿದ್ದ ಪದಗಳು ಒಮ್ಮೆಲೇ ಸುಭಗ ಸುಲಲಿತವಾಗಿ ಲೋಕಾದ್ವಿತೀಯ ಹಾಡಾಗಿ ಮೂಡಿಬಂತು. ಗಿಟಾರ್ ನುಡಿಸುತ್ತಾ ಅವರು ಮೈಮರೆತು ಎದೆ ತುಂಬಿ ಹಾಡುತ್ತಿದ್ದರೆ ಇತ್ತ ಫಾದರ್ ಮೋಹ್ರ್ ನವರ ಜನ್ಮ ಪಾವನವೆಂಬಂತೆ ಕಂಗಳು ತುಂಬಿ ಬಂದವು.
ಅದೇ ರಾತ್ರಿ ಸೇಂಟ್ ನಿಕೊಲಾ ದೇಗುಲದಲ್ಲಿ ಕ್ರಿಸ್ಮಸ್ ಆಚರಣೆಗಾಗಿ ಸೇರಿದ್ದ ಜನರೆಲ್ಲರೂ ಹಾಡನ್ನು ಮನದುಂಬಿ ಹಾಡಿ ಪುನೀತರಾದರು. ಪೂಜೆ ಮುಗಿದ ಮೇಲೆ ಒಬ್ಬರಿಗೊಬ್ಬರು ಕ್ರಿಸ್ತಜಯಂತಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಅಂಥ ಹಾಡನ್ನು ತಾವೆಂದೂ ಮರೆಯಲಾರೆವು ಎಂದು ಮತ್ತೊಮ್ಮೆ ಮತ್ತೊಮ್ಮೆ ಗುನುಗಿದರು. ಅವರ ಕನಸುಗಳಲ್ಲೂ ಅದೇ ಹಂಸಗಾನ ಮತ್ತೆ ಮತ್ತೆ ಮಾರ್ದನಿಸಿ ಕಿನ್ನರ ಲೋಕವನ್ನೇ ತೆರೆಯಿತು. ಎಷ್ಟೋ ದಿನಗಳವರೆಗೆ ಮಕ್ಕಳು ಮುದುಕರೆನ್ನದೆ ಎಲ್ಲರೂ ಹಾಡನ್ನು ಮೆಲುಕು ಹಾಕಿದ್ದೇ ಹಾಕಿದ್ದು.
ಪಲ್ಲವಿಯೊಂದಿಗೆ ಆರು ಚರಣಗಳ ಮೃದು ಮಧುರ ಮಂಜುಳಗಾನ ವರ್ಷಾನುಗಾಲ ಕ್ರಿಸ್ಮಸ್ ಸಂದರ್ಭದಲ್ಲಿ ಇಡೀ ಯುರೋಪ್ ಖಂಡದ ಎಲ್ಲ ಊರು ನಗರ ಕೇರಿಗಳ ದಟ್ಟಾರಣ್ಯದ ಗುಡ್ಡ ಕಣಿವೆಗಳ ಸಮುದ್ರ ಕಿನಾರೆಗಳ ಪುಟ್ಟ ಮಂದಿರಳಲ್ಲಿ ಹಾಗೂ ದಿವ್ಯ ಭವ್ಯ  ಆಲಯಗಳಲ್ಲಿ ಪದೇ ಪದೇ ಸುಶ್ರಾವ್ಯವಾಗಿ ತೇಲಿ ಭಾವದೀಪ್ತಿಗಳನ್ನು ಬೆಳಗಿತು.  ಸುಮಾರು ೧೮೩೫ರಲ್ಲಿ ಮಧುರನಿನಾದ ಇಂಗ್ಲೀಷಿಗೆ ತರ್ಜುಮೆಯಾಗಿ ಅಮೆರಿಕವನ್ನು ಪ್ರವೇಶಿಸಿದಾಗ ಅಮೆರಿಕದಾದ್ಯಂತ ಜನ ಹುಚ್ಚೆದ್ದು ಕುಣಿದರು.
ಹೀಗೇ ಸುಮಾರು ಒಂದು ನೂರು ವರ್ಷಗಳೇ ಕಳೆದವು. ೧೯೧೪ ನವೆಂಬರ್, ಪ್ರಪಂಚದ ಮೊದಲ ಮಹಾಯುದ್ಧ ಪ್ರಾರಂಭವಾಗಿ ಐದು ತಿಂಗಳಾಗಿತ್ತು. ಜರ್ಮನ್ ಪಡೆಗಳು ಯೂರೋಪಿನ ಬಹುಭಾಗವನ್ನು ಆಕ್ರಮಿಸಿ ಪ್ಯಾರಿಸ್ಸಿನ ಹೊರ ವಲಯದವರೆಗೂ ಬಂದು ಬೀಡು ಬಿಟ್ಟಿದ್ದರು. ಫ್ರೆಂಚ್ ಮತ್ತು ಬ್ರಿಟಿಷ್ ಪಡೆಗಳು ಜಂಟಿಯಾಗಿ ಜರ್ಮನ್ ಸೈನ್ಯವನ್ನು ಎದುರಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದರು. ಎರಡೂ ಸೈನ್ಯಗಳ ನಡುವೆ ಬಟಾಬಯಲು ಇತ್ತು. ಗುಂಡಿನ ಫಿರಂಗಿಗಳ ಚಕಮಕಿ ನಿರಂತರವಾಗಿತ್ತು. ಸೈನಿಕರು ತಮ್ಮನ್ನು ಕಾಪಾಡಿಕೊಳ್ಳಲು ಟ್ರೆಂಚ್ ಅಂದರೆ ಕಂದಕಗಳನ್ನು ಅಗೆದು ಅದರಲ್ಲಡಗಿ ಶತ್ರುಗಳ ಕಡೆಗೆ ಬಂದೂಕು ಮುಖ ಮಾಡಿದ್ದರು. ಯಾರೊಬ್ಬರು ತಲೆಯೆತ್ತಿ ನೋಡಿದರೂ ಯದ್ವಾತದ್ವಾ ಹಾರಿಬರುವ ಗುಂಡಿಗೆ ಬಲಿಯಾಗುವುದು ಶತಸ್ಸಿದ್ಧವಾಗಿತ್ತು. ಕ್ರಿಸ್ಮಸ್ ಹತ್ತಿರವಾಗುತ್ತಿದ್ದರೂ ಯುದ್ಧ ಮುಗಿಯುವ ಸೂಚನೆಗಳೇ ಕಾಣುತ್ತಿರಲಿಲ್ಲ. ನಿಲ್ಲದ ಯುದ್ಧದಿಂದ ಬೇಸತ್ತ ಬ್ರಿಟಿಷ್ ಯೋಧರ ಮಡದಿಯರು ೧೦೧ ಸಹಿಗಳೊಂದಿಗೆ ಜರ್ಮನ್ ಯೋಧರ ಹೆಂಡತಿಯರಿಗೆ ಒಂದು ಬಹಿರಂಗ ಪತ್ರ ಬರೆದರು. ಕ್ರಿಸ್ಮಸ್ಸಿಗಾದರೂ ಗಂಡಂದಿರು ಮನೆಗೆ ಒಂದು ಹೋಗಲಿ ಎಂದು.
ಡಿಸೆಂಬರ್ ಏಳನೇ ತಾರೀಕು, ಜಗದ್ಗುರುಗಳಾಗಿದ್ದ ಪೋಪ್ ಹದಿನೈದನೇ ಆಶೀರ್ವಾದಪ್ಪನವರುಕೊನೇಪಕ್ಷ ಸಮ್ಮನಸ್ಸುಗಳು ಹಾಡುವ ಕ್ರಿಸ್ಮಸ್ ರಾತ್ರಿಯಲ್ಲಾದರೂ ಬಂದೂಕುಗಳನ್ನು ಕೆಳಗಿಳಿಸಬೇಕುಎಂದು ಮನವಿ ಮಾಡಿದರು. ಎರಡೂ ಮನವಿಗಳನ್ನು ಸೇನಾಪಡೆಯ ಮುಖ್ಯಸ್ಥರು ತಿರಸ್ಕರಿಸಿದರು. ಉಭಯ ಬಣದ ಸೈನಿಕರ ಮನಗಳಲ್ಲಿ ತಲ್ಲಣ ಮನೆ ಮಾಡಿತು.
ಡಿಸೆಂಬರ್ ೨೪, ಸೈನಿಕರು ತಮ್ಮ ಕಂದಕಗಳಲ್ಲೇ ಕ್ರಿಸ್ಮಸ್ ಸಿದ್ಧತೆಗೆ ತೊಡಗಿದರು. ಅವರಲ್ಲಿ ಎಷ್ಟೋ ಮಂದಿ ಇನ್ನೂ ಹದಿನೆಂಟು ತುಂಬದ ಚಿಗುರು ಮೀಸೆಯ ಹುಡುಗರು. ಕ್ರಿಸ್ಮಸ್ ಆಚರಣೆಗೆ ಸಂಜೆಯೇ ಚರ್ಚುಗಳಿಗೆ ತೆರಳಿ ಅಪ್ಪ ಅಮ್ಮ ಬಂಧು ಬಾಂಧವರೊಂದಿಗೆ ಗೆಳೆಯ ಗೆಳತಿಯರೊಂದಿಗೆ ಕ್ರಿಸ್ತಜಯಂತಿಯ ಹಾಡು ಭಜನೆಗಳನ್ನು ಹಾಡಿ ಬಿಸುಪಾದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದ ಮಧುರ ನೆನಪುಗಳು ಅವರಲ್ಲಿ ಕಾಡಿದವು. ಕಂದಕಗಳ ಆಚೀಚೆ ಬೆಳೆದಿದ್ದ ಸಸಿಪೊದೆಗಳನ್ನು ತಂದು ಅಲಂಕಾರ ಮಾಡಿದರು. ತಮ್ಮಲ್ಲಿದ್ದ ಬಣ್ಣದ ಪುಡಿಗಳಿಂದ ರಂಗೋಲಿ ಬರೆದರು. ರಾತ್ರಿಯಾಗುತ್ತಿದ್ದಂತೆ ಕಂದಕಗಳ ಹೊರಗೆ ಮೇಣದ ಬತ್ತಿಗಳನ್ನು ಹಚ್ಚಿದರು. ಅಧಿಕೃತವಾಗಿ ಕದನವಿರಾಮ ಘೋಷಣೆ ಆಗಿರಲಿಲ್ಲ. ಯಾವ ಸಮಯದಲ್ಲಾದರೂ ಬಂದೂಕುಗಳು ಗರ್ಜಿಸಬಹುದಿತ್ತು.
ನಡುರಾತ್ರಿ ಸಮೀಪಿಸಿತು. ಎಲ್ಲೆಡೆ ನೀರವ. ಹುಳುಹುಪ್ಪಟೆಗಳ ಗುಂಗಿನಾದ ಕೇಳಿಸುತ್ತಿಲ್ಲ, ತಂಬೆಲರಿನ ಸದ್ದೂ ಇಲ್ಲ. ಜರ್ಮನ್ ಪಡೆಯ ಕಡೆಯಿಂದ ಒಬ್ಬ ಧೀರದಿಟ್ಟ ಸೈನಿಕನೊಬ್ಬ ತನ್ನ ಎಲ್ಲ ಧೈರ್ಯವನ್ನೂ ಒಟ್ಟುಗೂಡಿಸಿ ತಲೆ ಮೇಲೆತ್ತಿದ. ಗಟ್ಟಿದನಿಯಿಂದ ಅಷ್ಟೇ ಸ್ಪಷ್ಟತೆಯಿಂದ ತನ್ನ ಜರ್ಮನ್ ಭಾಷೆಯಲ್ಲಿಸ್ಟೀಲ್ಲೆ ನಾಕ್ಟ್ ಹೈಳಿಗೆ ನಾಕ್ಟ್ಎಂದು ಭಾವಪೂರಿತವಾಗಿ ಹಾಡಿದ. ಕತ್ತಲ ನೀರವ ವಾತಾವರಣದ ನಡುವೆ ಮೆಲುಗಾಳಿಯ ಅಲೆಅಲೆಯಲ್ಲಿ ಅವನ ಹಾಡು ಸ್ಪಟಿಕಸ್ಪಷ್ಟವಾಗಿ ನಿನದಿಸಿತು. ಅರೆಕ್ಷಣದ ಮೌನವನ್ನು ಮುರಿದು ಬ್ರಿಟಿಷ್ ಪಡೆಯ ಕಡೆಯಿಂದಆಲ್ ಈಸ್ ಕಾಮ್ ಆಲ್ ಈಸ್ ಬ್ರೈಟ್ಎಂಬ ಉತ್ತರ ಅದೇ ರಾಗದಲ್ಲಿ ಬಂತು. ಜರ್ಮನ್ ಪಡೆಯ ಸೈನಿಕರು ಒಕ್ಕೊರಲಿನಿಂದಹ್ಯಾಪೀ ಕ್ರಿಸ್ಮಸ್ಎಂದು ಕೂಗಿದರು. ತಕ್ಷಣವೇ ವಿರೋಧಿ ಬಣದ ಎಲ್ಲ ಸೈನಿಕರು ದನಿಗೂಡಿಸಿಮೆರ್ರಿ ಕ್ರಿಸ್ಮಸ್ಎಂದರು. ಇದುವರೆಗೆ ಕತ್ತಲಾಗಿದ್ದ ಬ್ರಿಟಿಷ್ ಫ್ರೆಂಚ್ ಪಡೆಗಳ ಕಂದಕಗಳುದ್ದಕ್ಕೂ ಸಾವಿರಾರು ಮೇಣದಬತ್ತಿಗಳು  ಒಮ್ಮಿಂದೊಮ್ಮೆಲೇ ಜಗ್ಗೆಂದು ಹತ್ತಿಕೊಂಡವು. ಅಲ್ಲಿಯತನಕ ಬಂದೂಕುಗಳೇ ಬೆಂಕಿ ಕಾರುತ್ತಿದ್ದ ರಣರಂಗದಲ್ಲಿ ಶತ್ರುಮಿತ್ರರೆನ್ನದೆ ಎರಡೂ ಕಡೆ ಮೈಲುಗಟ್ಟಲೇ ಸಾಲುಸಾಲಾಗಿ ಕ್ಯಾಂಡಲ್ಲುಗಳ ಪ್ರಶಾಂತ ಜ್ಯೋತಿ ನರ್ತಿಸಿ ಅದೊಂದು ಅಭೂತಪೂರ್ವ ರಾತ್ರಿಯೆನಿಸಿತು.
ಎರಡೂ ಬದಿಯ ಯೋಧರು ಕಂದಕಗಳಿಂದ ಮೇಲಕ್ಕೆ ಜಿಗಿದು ಬಂದು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಕ್ರಿಸ್ಮಸ್ ಶುಭಾಶಯಗಳನ್ನು ಹಂಚಿಕೊಂಡರು. ಉಡುಗೊರೆಯಾಗಿ ಕಾಗದ, ಪೆನ್ನು, ಬಣ್ಣದಪೆನ್ಸಿಲ್ಲು, ಸಿಗರೇಟು, ಮದ್ಯಬಾಟಲಿಗಳು ವಿನಿಮಯವಾದವು. ಇವರ ಟೋಪಿಯನ್ನು ಅವರು ತೊಟ್ಟು, ಅವರ ಟೋಪಿಯನ್ನು ಇವರು ತೊಟ್ಟು ಸಂಭ್ರಮಿಸಿದರು. ಎಲ್ಲರೂ ತಂತಮ್ಮ ಕ್ರಿಸ್ಮಸ್ ಹಾಡುಗಳನ್ನು ಹಾಡಿ ಬೆಂಕಿಯ ಸುತ್ತ ಕುಣಿದರು. ಎರಡೂ ಕಡೆಯ ಸೇನಾಮುಖ್ಯಸ್ಥರು ಎದುರುಬದುರಾಗಿ ಪರಸ್ಪರ ಕೈಕುಲುಕಿದರು. ಶಾಂತಿ ಹಂಚೋಣದ ಗುರುತಾಗಿ ಇವರ ಕೋಟಿನ ಎರಡು ಗುಂಡಿಗಳನ್ನು ಕಿತ್ತು ಅವರ ಕೈಗಿತ್ತರು, ಅದೇ ರೀತಿ ಅವರೂ ತಮ್ಮ ಗುಂಡಿಗಳನ್ನು ಕಿತ್ತು ಇವರ ಕಿಸೆಯಲ್ಲಿ ಹಾಕಿದರು. ಅದೊಂದು ಮರೆಯಲಾಗದ ಅತ್ಯಂತ ಭಾವುಕ ದೃಶ್ಯವಾಗಿತ್ತು.
ಡಿಸೆಂಬರ್ ೨೫, ಪಡ್ಡೆ ಸೈನಿಕನೊಬ್ಬ ತನ್ನ ತಾಯಿಗೆ ಪತ್ರ ಬರೆಯುತ್ತಾನೆ. ’ಪ್ರೀತಿಯ ಅಮ್ಮಾ, ಈಗ ಹಗಲು ಹನ್ನೊಂದು ಗಂಟೆ, ನಾನೀಗ ಕಂದಕದಲ್ಲಿದ್ದೇನೆ. ನನ್ನ ಪಕ್ಕದಲ್ಲಿರುವ ಬೆಂಕಿಯ ಕೆಂಡ ನನ್ನನ್ನು ಬೆಚ್ಚಗಿಟ್ಟಿದೆ. ವಾತಾವರಣ ನಿಜವಾಗಿಯೂ ತಣ್ಣಗಿದೆ. ಅಮ್ಮಾ ನನ್ನ ಬಾಯಲ್ಲಿ ಪೈಪ್ ಇದೆ, ರಾಜಕುಮಾರಿಯವರು ಉಡುಗೊರೆಯಾಗಿ ಕೊಟ್ಟ ಪೈಪ್, ಅಮ್ಮಾ ಇದರಲ್ಲೇನಿದೆ ಗೊತ್ತಾ? ಹಹ್ಹ ತಂಬಾಕಲ್ಲದೆ ಇನ್ನೇನಿರುತ್ತೆ ಅನ್ತೀಯಲ್ವಾ! ತಂಬಾಕಿದೆಯಮ್ಮ ನಿಜ, ಆದರೆ ಇದು ಜರ್ಮನ್ ಸೈನಿಕನ ತಂಬಾಕು. ಅವನನ್ನು ಹೊಡೆದುರುಳಿಸಿ ಅವರ ತಂಬಾಕನ್ನು ಕಿತ್ತುಕೊಂಡಿದ್ದೇನೆ ಅಂದುಕೋಬೇಡಮ್ಮ, ಇದು ಅವನೇ ನನಗೆ ಕೊಟ್ಟನಮ್ಮ, ನಿನ್ನೆ ರಾತ್ರಿ ಏನಾಯ್ತು ಗೊತ್ತೇನಮ್ಮಾ, ಕೇಳಿದರೆ ನೀನು ನಂಬೋದೇ ಇಲ್ಲ . . .’
ಒಂದು ಅಘೋಷಿತ ಯುದ್ಧವಿರಾಮವು ಜನವರಿ ಒಂದರವರೆಗೂ ಮುಂದುವರಿಯಿತು. ರಣಾಂಗಣದಲ್ಲಿ ಗಾಯಗೊಂಡು ನರಳುತ್ತಿದ್ದ ಸೈನಿಕರಿಗೆ ಸಾಂತ್ವನದ ಉಪಚಾರ ದೊರೆಯಿತು. ಸೆರೆಯಲ್ಲಿದ್ದ ಶತ್ರುಸೈನಿಕರನ್ನು ಗೌರವಪೂರ್ವಕವಾಗಿ ಮರಳಿಸಲಾಯಿತು. ವೀರಮರಣವಪ್ಪಿ ಅನಾಥವಾಗಿ ಬಿದ್ದದ್ದ ಶವಗಳನ್ನು ಎರಡೂ ಬಣಗಳವರು ಧಾರ್ಮಿಕ ವಿಧಿಯನುಸಾರ ಸಾಮೂಹಿಕ ಅಂತ್ಯಕ್ರಿಯೆ ನಡೆಸಿ ಗೌರವ ಸಲ್ಲಿಸಿದರು. ಕ್ರಿಸ್ಮಸ್ ಸೌಹಾರ್ದದ ಸಂಕೇತವಾಗಿ ಎರಡೂ ಪಡೆಗಳ ನಡುವೆ ಕಾಲ್ಚೆಂಡಾಟವೂ ನಡೆಯಿತು. ಅದೊಂದು ಅವಿಸ್ಮರಣೀಯ ಆಟ.
ಹೀಗೆ ಒಂದು ಮಹಾಯುದ್ಧವನ್ನು ತಾತ್ಕಾಲಿಕವಾಗಿಯಾದರೂ ಶಮನಗೊಳಿಸಿದ ಹೆಗ್ಗಳಿಗೆ ಸೈಲೆಂಟ್ ನೈಟ್ಹಾಡಿಗಿದೆ. ಇದಾದನಂತರ ಹಾಡಿನ ಕಂಪು ಪ್ರಪಂಚದ ಉದ್ದಗಲಕ್ಕೂ ಹರಡಿತು. ಎಲ್ಲ ಆರ್ಕೆಸ್ಟ್ರಾಗಳ ಆಲ್ಬಮ್ಮುಗಳಲ್ಲಿ ರಾಗ ಅನಿವಾರ್ಯವೆಂಬಂತೆ ತಾಣವಡೆಯಿತು.
೧೮೧೮ರಿಂದ ೨೦೧೮, ರಾಗ ಸಂಯೋಜನೆಗೊಂಡು ಇನ್ನೂರು ವರ್ಷಗಳಾಗಿವೆ. ಜಗತ್ತಿನ ಮುನ್ನೂರು ಭಾಷೆ ಉಪಭಾಷೆಗಳಿಗೆ ಹಾಡು ಅನುವಾದವಾಗಿ ಮೂಲ ರಾಗದೊಂದಿಗೆ ಸಹೃದಯತೆಯಿಂದ ಮಿಳಿತವಾಗಿದೆ. ಇಂದು ಹಾಡಲಾಗುವ ಹಾಡು ಮೂಲ ಗ್ರುಬೆರನ ರಾಗವನ್ನೇ ಹೋಲುವುದಾದರೂ ಕೊನೆಯ ಚರಣ ಮಾತ್ರ ಸ್ವಲ್ಪ ವ್ಯತ್ಯಸ್ತವಾಗಿ ತೋರುವುದುಂಟು. ಅದೇನೆಂದರೆ ಗ್ರುಬೆರನು ಮೂಲದಲ್ಲಿ ಕೊನೆಯ ಚರಣವನ್ನು ತ್ರಿಪುಟ ತಾಳದಲ್ಲಿ ರಚಿಸಿ ಉತ್ಕರ್ಷ ನೀಡಿದ್ದರೆ ಈಗಿನ ರಾಗದಲ್ಲಿ ಕೊನೆಯ ಚರಣವು ಮೊದಲಿನ ಚರಣಗಳಂತೆಯೇ ನಿಧಾನಗತಿಯ ಆಲಾಪನೆಯನ್ನು ಹೊಂದಿದೆ. ಸವಿಗಾನವು ಇಂದಿಗೂ ಕಾಲ ದೇಶ ಸಂಸ್ಕೃತಿ ಧರ್ಮಗಳನ್ನು ಮೀರಿ ಕೇಳಿದವರ ಸುಪ್ತ ಭಾವನೆಗಳನ್ನು ಪುಟಿದೆಬ್ಬಿಸಿ ಸಾಂತ್ವನವನ್ನೂ ಭರವಸೆಯನ್ನೂ ಮನೋಲ್ಲಾಸವನ್ನೂ ಪಡಿಮೂಡಿಸುತ್ತಿದೆ.
ಮೊತ್ತಮೊದಲು ಹಾಡನ್ನು ಹಾಡಿದ ಸಂತ ನಿಕೊಲಾ ಚರ್ಚು ಇಂದು ವಿಶ್ವಸಂಸ್ಥೆಯಿಂದವಿಶ್ವಪರಂಪರೆಯ ತಾಣಎಂದು ಮಾನ್ಯತೆ ಪಡೆದಿದೆ. ಜರ್ಮನಿಗೆ ಹೋದವರಾರೂ ಸೈಲೆಂಟ್ ನೈಟ್ ಚರ್ಚನ್ನು ನೋಡದೇ ಹಿಂದಿರುಗುವುದಿಲ್ಲ. ಪ್ರತಿವರ್ಷ ಕ್ರಿಸ್ಮಸ್ ಮುನ್ನಾದಿನ ಅಂದರೆ ಡಿಸೆಂಬರ್ ೨೪ರ ಸಂಜೆ ಐದು ಗಂಟೆಗೆ ವಿಶ್ವದೆಲ್ಲೆಡೆಯ ಪ್ರಸಿದ್ಧ ಗಾಯಕರು ಆಹ್ವಾನಿತರಾಗಿ ಇಲ್ಲಿನ ಗ್ರುಬೇರ್ ಸಮಾಧಿಯ ಮುಂದೆ ಸಮೂಹಗಾನದೊಂದಿಗೆ ಗ್ರುಬೇರನ ಆತ್ಮಕ್ಕೆ ಗೌರವ ಸಲ್ಲಿಸುತ್ತಾರೆ. ರಾತ್ರಿ ಕ್ರಿಸ್ಮಸ್ ಆಚರಣೆಯಲ್ಲಿ ಚರ್ಚಿನ ಪೈಪ್ ಆರ್ಗನ್ ನಾದದೊಂದಿಗೆ ಹಾಡನ್ನು ಗಾನವೃಂದವು ಹಾಡುವಾಗ ಭಕ್ತಾದಿಗಳು ಮಾತ್ರವಲ್ಲ ಅಲ್ಲಿಗೆ ಭೇಟಿಕೊಟ್ಟ ಎಲ್ಲರೂ ರಸಾರ್ದ್ರಲೋಕದಲ್ಲಿ ಮಿಂದು ಪುಳಕಿತರಾಗುತ್ತಾರೆ.
ಸೈಲೆಂಟ್ ನೈಟ್ ಹಾಡು ಕನ್ನಡದಲ್ಲಿಲ್ಲವೇ ಎಂಬ ಕುತೂಹಲ ನಿಮಗಿದೆಯೇ? ಐದು ದಶಕಗಳ ಹಿಂದೆ ಶ್ರೀಮತಿ ಸರಳಾ ಬ್ಲೇರ್ ನವರು ಹಾಡಿನ ಎರಡು ಚರಣಗಳನ್ನು ಕನ್ನಡಕ್ಕೆ ತಂದಿದ್ದಾರೆ. ಬನ್ನಿ, ಅವರೊಂದಿಗೆ ಸೇರಿ ನಾವೂ ಹಾಡೋಣ;
ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಮ್ ಚತ್ರದಿ
ವರಕನ್ಯೆಯಲಿ ಜನಿಸಿದ
ದೇವಪುತ್ರನಂ ವಂದಿಸುವ
ವಂದನೆ ರಕ್ಷಕನೇ ವಂದನೆ ರಕ್ಷಕನೇ

ಮಂಗಳಶ್ರೀ ರಾತ್ರಿಯಲಿ ದೂತರು ಹೊಲದಿ
ಹಿಂಡುಕಾಯುವ ಕುರುಬರ್ಗೆ
ತಂದ ವಾರ್ತೆಯು ಶ್ರೇಷ್ಠವೇ
ಸ್ವಾಗತ ರಕ್ಷಕನೇ ಸ್ವಾಗತ ರಕ್ಷಕನೇ





ಕಾಮೆಂಟ್‌ಗಳಿಲ್ಲ: