ನಮ್ಮಪ್ಪ ನಮ್ಮನೆಗೆ ಚಂದಮಾಮ ತರಿಸ್ತಿದ್ರು. ನಾವ್ ಮಕ್ಕಳು ಓದಲಿ ಅಂತ. ನಮ್ಮ ಚಿಕ್ಕಪ್ಪ ಬಾಲಮಿತ್ರ ತರಿಸೋರು. ಚಂದಮಾಮನೇ ಚೆಂದ ಅಂತ ನಾವ್ಗೋಳು, ಬಾಲಮಿತ್ರ ಚಂದ ಅಂತ ನಮ್ಮ ಚಿಕ್ಕಪ್ಪನ ಮಕ್ಕಳು ಮಾತಾಡ್ಕೋತಿದ್ದು ಈಗ್ಲೂ ನೆಪ್ಪೈತೆ. ಎಂಟಿವಿ ಆಚಾರ್ಯರ ಭೀಮನಿಗೂ ರಮಾನಂದ ಸಾಗರರ ಭೀಮನಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುವುದು ಈ “ಅಜಗಜಾಂತರ”ಕ್ಕೆ ಕೊಡಬಹುದಾದ ಒಂದು ಒಳ್ಳೆಯ ಉದಾಹರಣೆ. ಇನ್ನು ಬೇತಾಳನ ಕಥೆಗಳಂತೂ ಯಾವ ಕ್ವಿಜ್ ಪ್ರೋಗ್ರಾಮನ್ನೂ ಮೀರಿಸುವಂಥದು. ಅದರ ಮುಂದೆ ಡೆರಿಕ್ ಒಬ್ರೇನು ಏನೇನೂ ಅಲ್ಲ.
ಮಲ್ಲೇಶ್ವರದಲ್ಲಿ ನಾನು ಓದುತ್ತಿದ್ದ ನಿರ್ಮಲರಾಣಿ ಶಾಲೆಯಲ್ಲಿ ಅಮರ ಚಿತ್ರಕಥೆಗಳ ದೊಡ್ಡ ಸಂಗ್ರಹವಿತ್ತು. ಆಗ ಅದು ಕೊಎಡ್ ಇಸ್ಕೂಲು. ಆರನೇ ತರಗತಿಯಲ್ಲಿದ್ದಾಗ ಪಕ್ಕದ ಕಪಾಟಿನಲ್ಲಿದ್ದ ಆ ಪುಸ್ತಕಗಳನ್ನು ಸದ್ದಿಲ್ಲದೇ ತೆಗೆದುಕೊಂಡು ಪಠ್ಯಪುಸ್ತಕದ ಕೆಳಗಿಟ್ಟುಕೊಂಡು ಕದ್ದುಮುಚ್ಚಿ ಓದುತ್ತಿದ್ದ ದಿನಗಳವು. ನಳದಮಯಂತಿ, ಶಕುಂತಲಾ ಹೀಗೆ ಒಂದೆರಡಲ್ಲ ನೂರಾಎರಡು. ನಮ್ಮ ಆ ಕಳ್ಳ ಓದು ಟೀಚರಾಗಿದ್ದ ಮದರ್ ಫ್ರಾನ್ಸಿಸ್ಕ ಅವರಿಗೆ ಗೊತ್ತಾಗುತ್ತಲೇ ಇರಲಿಲ್ಲ. ಪಕ್ಕದ್ಮನೆ ಹುಡುಗಿ ರಮಾಳನ್ನು ಕೀಟಲೆ ಮಾಡಿದಾಗಲೆಲ್ಲ ಅವಳು ಈ ಕಳ್ಳ ಓದಿನ ಬಗ್ಗೆ ಮದರ್ಗೆ ಹೇಳುವುದಾಗಿ ಹೆದರಿಸುತ್ತಿದ್ದಳು. ಸುಜಾತ ಅಂತ ಇನ್ನೊಂದು ಹುಡುಗಿ ಇದ್ದಳು. ಸಂಪಿಗೆ ರಸ್ತೆಯಲ್ಲಿ ಅವರ ಜ್ಯೂಸ್ ಅಂಗಡಿ ಇದೆ. ನನ್ನನ್ನು ಹೆದರಿಸೋದರಲ್ಲಿ ಆಕೆ ರುಸ್ತುಂ. ಹುಡುಗರಲ್ಲಿ ರಮೇಶ, ನಾಗರಾಜ, ಭಾಸ್ಕರ, ದಯಾನಂದ ಮುಂತಾದ ಗೆಳೆಯರ ನೆನಪಾಗುವುದೂ ಈ ಅಮರ ಚಿತ್ರಕತೆಗಳ ನೆರಳಿನಲ್ಲೇ. ಅಮರ ಚಿತ್ರಕಥೆ (ಐಬಿಎಚ್ ಪ್ರಕಾಶನ) ಯ ರೂಪದಲ್ಲಿ ಮನೋವಿಕಾಸದ ಹಾದಿಯಲ್ಲಿ ಬೈಬಲ್ಲಿನ ಜೊತೆಗೆ ಪುರಾಣವನ್ನೂ ರಕ್ತಗತ ಮಾಡಿಸಿದ್ದಕ್ಕಾಗಿ ಕಾರಂತರನ್ನು ನಾನು ಮರೆಯಲಾಗದು.
ನಾನು ಹೈಸ್ಕೂಲು (ಕಾಡುಮಲ್ಲೇಶ್ವರನ ಗುಡಿಯ ಬಳಿಯಿದ್ದ ಶಾರದಾ ವಿದ್ಯಾನಿಕೇತನ) ಸೇರುವ ವೇಳೆಗಾಗಲೇ ಕಾರಂತರ ಕಿರಿಯರ ವಿಶ್ವಕೋಶ (ನವಕರ್ನಾಟಕ ಪಬ್ಲಿಕೇಷನ್ಸ್) ಬಂದಿತ್ತು. ಆದರೆ ಅದು ಶಾಲೆಯ ಕಪಾಟಿನಲ್ಲಿ ಬಂಧಿಯಾಗಿತ್ತು. ನಾವು ಕೆಲ ಹುಡುಗರು ಈಸ್ಟ್ ಪಾರ್ಕ್ ಮೈದಾನದಲ್ಲಿ ಆಡ್ಕಂತಾ ಇದ್ದೋರು ಒಂದು ದಿನ ಕಲ್ ಬಿಲ್ಡಿಂಗ್ ಅಂತಾರಲ್ಲ, ಅದೇ ಹದಿನೆಂಟನೇ ಕ್ರಾಸ್ ಬಸ್ಟ್ಯಾಂಡ್ ಹತ್ರ ಇರೋ ಗೋರ್ಮೆಂಟಿಸ್ಕೂಲು, ಅದರಾಗೆ ಒಂದು ಲೇಬ್ರರಿ ಇರೋದ್ನ ಕಂಡಿಡಿದೋ. ಬಾಕ್ಲು ತೆಗೆದೇ ಇತ್ತು. ಅದ ನೋಡ್ಕಳೋರು ಒಬ್ರು ಬುಟ್ರೆ ಬ್ಯಾರೆ ಯಾರೂ ಇತ್ತಿಲ್ಲ. ಒಳೀಕ್ ಬರ್ಬೋದಾ ಅಂತ ಕೇಳಿದ್ದೇಟ್ಗೆ ಅಯ್ ಬನ್ನಿ ಓದ್ಕಳಿ ಅನ್ನೋದಾ. ಆಗ ಶುರುವಾಯ್ತು ನನ್ನ ಅಧ್ಯಯನದ ಪ್ರಸ್ಥಾನ. ಬಂಗಾಳ ದೇಶದ ಜಾನಪದ ಕತೆಗಳು, ಗೋನೂಝಾನ ಕತೆಗಳು, ಭಾರತಭಾರತಿ ಪುಸ್ತಕ ಸಂಪದ, ಅರೇಬಿಯನ್ ನೈಟ್ಸ್, ಮಕ್ಕಳ ಮಂಛೌಸನ್ ಹೀಗೆ ಅವೆಲ್ಲ ಆ ಕಾಲಕ್ಕೇ ಸರಿ.
ನನ್ನ ಯೌವನಕಾಲಕ್ಕೆ ಬಹುವಾಗಿ ಕಾಡಿದ್ದು ಖಂಡೇಕರರ ’ಯಯಾತಿ’ (ಇನಾಂದಾರ್ ಅನುವಾದ). ಆಮ್ಯಾಕೆ ಕೊಂಚ ಬಲಿತ ಮ್ಯಾಗೆ ಓದಿದ್ದು ಭೈರಪ್ನೋರು ಬರೆದಿರೋ ಪರ್ವ ಅಂತ ಮಾಬಾರ್ತದ ಕತೆ, ಓ ಯಾಪಾಟಿ ಐನಾತಿನನ್ಮಗಂದೂ ಅಂತೀರಾ? ತೇಜಸ್ವಿ ಅಂಬೋರು ಬರ್ದಿರೋ ಕಿರಗೂರಿನ ಗಯ್ಯಾಳಿಗಳು ಓದಿವ್ರಾ? ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲು? ಊ.. ದೇಸ ನೋಡ್ಬೇಕು ಕೋಸ ಓದ್ಬೇಕು ಅಂತಾರಲ್ಲ ದಿಟವೇನೇಯ. ಪುಸ್ತಕ ಓದ್ಬೇಕೂ ಅನ್ನೋ ತೆವಲು ನಿಮ್ಗೂ ಇದ್ರೆ ನೀವೂನೂ ಇಂಜಿನ್ ಡಿವಿಜನ್ನಾಗಿರೋ ನಮ್ ಕನ್ನಡ ಲೇಬ್ರೇರಿಗೆ ಬರಬೇಕ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ