ಶನಿವಾರ, ನವೆಂಬರ್ 1, 2008

ಅಂಗುಲಹುಳು

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.
ಪಶ್ಚಿಮದ ದೇಶದಲ್ಲಿ ’ಅಂಗುಲದಹುಳು" ಎಂಬ ಕೀಟವಿದೆಯಂತೆ. ಉದ್ದನೆಯ ಕಾಲುಗಳಲ್ಲಿ ಅದು ನಡೆದಾಡುವಾಗ ಅದರ ಪ್ರತಿಯೊಂದು ಹೆಜ್ಜೆಯ ಅಂತರ ಒಂದು ಅಂಗುಲ ಇರುತ್ತದೆಯಂತೆ. ಕರಾರುವಾಕ್ಕಾದ ಆ ಅಳತೆಯನ್ನೇ ಮುಂದೆ ಅಳತೆ ಪಟ್ಟಿ ಮಾಡುವಾಗ ಮಾನಕವಾಗಿ ತೆಗೆದುಕೊಂಡರಂತೆ. ಅಲ್ಲದೆ ತಾವು ಹೋದಲ್ಲೆಲ್ಲ ತಮ್ಮ ಅಳತೆಯೇ ಶ್ರೇಷ್ಠ ಹಾಗೂ ಸರ್ವಮಾನ್ಯ ಎಂದು ವಾದಿಸತೊಡಗಿದರಂತೆ.
ಆಫ್ರಿಕಾದ ಆನೆಗಳು ಆ ಹುಳುವನ್ನು ರಾಜಮರ್ಯಾದೆಯೊಂದಿಗೆ ಕರೆಸಿಕೊಂಡು ತಮ್ಮ ದಂತಗಳ ಉದ್ದವನ್ನು ಅಳತೆ ಮಾಡಿಸಿಕೊಂಡವು. ಅಮೆರಿಕದ ಮೊಸಳೆಗಳು ಬಾಯ್ದೆರೆದು ತಮ್ಮ ಹಲ್ಲುಗಳ ಮೊನಚನ್ನು ಜಗತ್ತಿಗೆ ಸಾರಿಕೊಂಡವು. ಯೂರೋಪಿನ ಹುಂಜಗಳು ತಮ್ಮ ರೆಕ್ಕೆಗರಿಯ ಥಳುಕನ್ನು ಲೆಕ್ಕ ಮಾಡಿಸಿಕೊಂಡು ಹೆಮ್ಮೆಯಿಂದ ಬೀಗಿದವು. ನಮ್ಮ ದೇಶಕ್ಕೂ ಆ ಹುಳ ಬಂದು ಹಿಮಾಲಯವನ್ನು ಹತ್ತಿಳಿದು ಉನ್ನತ ಶಿಖರದ ಎತ್ತರ ಇಂತಿಷ್ಟೇ ಎಂದು ತಿಳಿಹೇಳಿತು.
ಕೆಲವರು ತಮ್ಮ ಬಾಯಗಲವನ್ನು ಕೆಲವರು ತಮ್ಮ ನೋಟಶಕ್ತಿಯನ್ನು ಅಳತೆ ಮಾಡಿಸಿಕೊಂಡರು. ಕನ್ನಡದಲ್ಲೇನಿದೆ ಅನ್ತ ಯಾರೋ ಕೇಳ್ತಿದ್ರಲ್ಲ, ಆ ಹುಳು ಇತ್ತ ತಿರುಗಿತು. ಅಷ್ಟರಲ್ಲಾಗಲೇ ಮಲ್ಲಿಗೆಯ ಸುವಾಸನೆಗೆ ಅದರ ತಲೆ ತಿರುಗತೊಡಗಿತ್ತು. ಮಾವಿನ ಮರದಲ್ಲಿ ಕೋಗಿಲೆಯ ಇಂಚರ "ಕುಹೂ" ಎಂದಿತು. “ಕೋಗಿಲೆಯ ಸ್ವರವನ್ನೇ ಮೊದಲು ಅಳೆಯೋಣ, ಆ ನಂತರ ಮಿಕ್ಕಿದ್ದು" ಎಂದ ಆ ಹುಳು ಅದನ್ನು ಅಳೆಯತೊಡಗಿತು. ರಾಗಗಾನಮಾಧುರ್ಯದ ಆ ಪಂಚಮಸ್ವರವಲ್ಲರಿಯನ್ನು ಆ ಹುಳು ಇನ್ನೂ ಅಳೆಯುತ್ತಲೇ ಇದೆ, ಆದರೆ ಆ ಸುಮಧುರ ಕಂಠದ ಉದ್ದಗಲಗಳ ನಿಲುವನ್ನು ಅದು ಮುಟ್ಟಲಾಗಿಲ್ಲ.. ಇನ್ನು ಕನ್ನಡ ವಾಗ್ದೇವಿಯ ಭಂಡಾರದ ಸಿರಿ, ಪ್ರಾಕೃತಿಕ ಸಂಪತ್ತು, ಜನಮಾನಸದ ಔನ್ನತ್ಯ ಇವೆಲ್ಲ ಇನ್ನೂ ನಿಲುಕಲಾರದವು ಅಲ್ಲವೇ?

ಕಾಮೆಂಟ್‌ಗಳಿಲ್ಲ: