ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿ ದಂಡೆಯಲ್ಲಿರುವ ಹಾರೋಬೆಲೆ ಎಂಬ ಗ್ರಾಮವು ನೂರಕ್ಕೆ ನೂರು ಕನ್ನಡ ಮನೆಮಾತಿನ ಕ್ರೈಸ್ತರೇ ನೆಲೆಗೊಂಡಿರುವ ಪುರಾತನ ಊರು. ಈ ಹಾರೋಬೆಲೆ ಎಂಬ ಗ್ರಾಮನಾಮದ ವ್ಯುತ್ಪತ್ತಿಗೆ ತೊಡಗುವಾಗ ಸ್ವಾಮಿ ಅಂತಪ್ಪನವರು ಅದನ್ನು ಇಂಗ್ಲಿಷಿನ horrible ಪದದೊಂದಿಗೆ ತಳುಕು ಹಾಕವುದನ್ನು ಗಮನಿಸಿದ್ದೇವೆ. ಆದರೆ ಎರಡು ಶತಮಾನಗಳ ಮುನ್ನ ಇಂಗ್ಲಿಷರು ಇನ್ನೂ ಇಂಡಿಯಾಕ್ಕೆ ಕಾಲಿಡುವ ಮುನ್ನವೇ ಹಾರೋಬೆಲೆ ಗ್ರಾಮಕ್ಕೆ ಇತಾಲಿಯನ್ ಜೆಸ್ವಿತರ ಪ್ರವೇಶವಾಗಿತ್ತೆನ್ನುವುದನ್ನು ಗಮನಿಸಿರಿ.
ಅಂದು ರಸ್ತೆಗಳಿಲ್ಲದೆ ಗುಡ್ಡ ಬೆಟ್ಟ ಹೊಳೆ ಕಾಡುಗಳಿಂದ ಆವೃತವಾಗಿ ಹೊರಗಿನಿಂದ ದುರ್ಗಮವಾಗಿದ್ದ ಹಾರೋಬೆಲೆಯನ್ನು ಪ್ರವೇಶಿಸುವುದು ಸುಲಭಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಇತಾಲಿಯಾ ಭಾಷೆಯಲ್ಲಿ ಹಾರೋಬೆಲೆಗೆ ಹೋಗುವುದೆಂದರೆ ಅದು orribile ಅನುಭವ (ಭಯಂಕರ ಅನುಭವ) ಎಂಬುದಾಗಿ ಉದ್ಗರಿಸಿರಬೇಕು. ಇತಾಲಿಯಾದ orribile ಎಂಬ ಪದವು ಇಂಗ್ಲಿಷಿನ horrible ಎಂಬ ಪದಕ್ಕೆ ಸಂವಾದಿಯಾಗಿದೆ.
ಹೇಳಿಕೇಳಿ ಈ ಇತಾಲಿಯನ್ ಜೆಸ್ವಿತರು ಕನ್ನಡನಾಡಿಗೆ ಪ್ರವೇಶಿಸಿದ್ದು ೧೬೪೦ ರ ದಶಕದಲ್ಲಿ. ಅಂದರೆ ಕನ್ನಡದ ನುಡಿಗಟ್ಟಿನಲ್ಲಿ ’ಹ’ ಕಾರವು ಇನ್ನೂ ಸಾರ್ವತ್ರಿಕವಾಗಿರದೇ ಇದ್ದ ಕಾಲ. ಆದ್ದರಿಂದ ಹಾರೋಬೆಲೆ ಎಂಬ ಪದಾದಿಯಲ್ಲಿ ’ಹ’ ಕಾರವನ್ನು ಆರೋಪಿಸುವ ಬದಲು ಅಲ್ಲಿ ’ಅ’ ಕಾರವಿತ್ತೆನ್ನುವುದು ಸಮಂಜಸವೆನಿಸುತ್ತದೆ. ಅದು ಬಹುಶಃ ಆರುಬೆಲೆ ಅಥವಾ ಆರೋಬೆಲೆ ಇದ್ದಿರಬಹುದೆಂದು ನನ್ನ ಅನಿಸಿಕೆ.
ಕನ್ನಡದ ಆಡುಮಾತಿನಲ್ಲಿ ಆರು ಎನ್ನುವುದನ್ನು ಉಳುಮೆ, ಕೃಷಿಗೆ ಸಮಾನಪದವಾಗಿ ಬಳಸಲಾಗುತ್ತದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿನ ಮೂಲನಿವಾಸಿಗಳು’ ’ಅ’ ಕಾರವನ್ನು’ಹ’ ಕಾರವನ್ನಾಗಿ ಉಚ್ಚರಿಸುವುದು ಸಹಜವಾದ್ದರಿಂದ ’ಆರೋಬೆಲೆ’ಯನ್ನು ಜನ ’ಹಾರೋಬೆಲೆ’ ಎಂದೇ ಕರೆದಿರಬಹುದು.
ಅಲ್ಲದೆ ’ಬೆಲೆ’ ಎಂಬುದು ’ಬೇಲಿ’ ಎಂಬುದರ ಸಂಕ್ಷಿಪ್ತರೂಪವಾಗಿದೆ. ನಮ್ಮಲ್ಲಿ ಮಂಚನಬೆಲೆ, ಸೂಲಿಬೆಲೆ, ಅತ್ತಿಬೆಲೆ ಮುಂತಾದ ಊರುಗಳಿರುವುದನ್ನು ಗಮನಿಸಿರಿ.
ಆಡುವ ಪದಗಳನ್ನು ಬರವಣಿಗೆಯಲ್ಲಿ ಮೂಡಿಸುವಾಗ ಜನ ಸ್ವಯಂ ಪ್ರೇರಣೆಯಿಂದ ಅವಕ್ಕೆ ಶಿಷ್ಟರೂಪವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಹಾಗೆ ಮಾಡುವಾಗ ಅವರಿಗೆ ಅರಿವಿಲ್ಲದಂತೆಯೇ ಆಡುಮಾತಿನ ಮೂಲ ಆಶಯಕ್ಕೆ ವ್ಯತಿರಿಕ್ತವಾದ ಅರ್ಥ ಮೂಡುವ ಪದಗಳನ್ನು ಟಂಕಿಸಿರುತ್ತಾರೆ. ಉದಾಹರಣೆಗೆ ’ಕಾಡುಗೋಡಿ’ ಯನ್ನು ತೆಗೆದುಕೊಳ್ಳೋಣ. ಕೆರೆಯು ತುಂಬಿದಾಗ ಅದರ ಸುರಕ್ಷೆಯ ದೃಷ್ಟಿಯಿಂದ ಹೆಚ್ಚುವರಿ ನೀರು ಹರಿದುಹೋಗುವಂತೆ ಒಂದೆಡೆ ಒಡ್ಡು ತೆರೆದಿರುತ್ತಾರೆ. ಅದಕ್ಕೆ ಕೋಡಿ ಎನ್ನುತ್ತಾರೆ. ಆ ಕೋಡಿಯ ಮೂಲಕ ಹರಿವ ನೀರು ಹೊಳೆಯಾಗಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ, ಇರಲಿ. ಆ ಕೋಡಿಯು ಕಾಡಿನ ಅಂದರೆ ಸುಡುಗಾಡಿನ ಕಡೆಗಿದ್ದರೆ ಅದಕ್ಕೆ ಕಾಡುಗೋಡಿ (ಕಾಡು+ಕೋಡಿ=ಕಾಡುಗೋಡಿ, ಆಗಮಸಂಧಿ) ಎನ್ನುವುದು ಅತ್ಯಂತ ಸೂಕ್ತ. ಆದರೆ ಬರವಣಿಗೆಯ ಶಿಷ್ಟರು ಅದನ್ನು ಕಾಡುಗುಡಿ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಈ ಆರೋಬೆಲೆ ಅಥವಾ ಹಾರೋಬೆಲೆಯನ್ನು ಕೆಲವರು ಹಾರೋಬಲೆ ಎಂಬುದಾಗಿ ಬರೆಯುವುದನ್ನೂ ನೋಡುತ್ತಿದ್ದೇವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ