ಕ್ರಿಸ್ಮಸ್ ಸಂದರ್ಭದ ಆ ಸಂಭ್ರಮವೇ ಅನುಪಮ. ಚಳಿಯ ಚುಮುಚುಮು ರಾತ್ರಿಯಲ್ಲಿನ ನಕ್ಷತ್ರಗಳ ಒಡ್ಡೋಲಗದಲ್ಲಿ ಇಬ್ಬನಿಯ ಮಸುಕಾದ ತೆರೆಯ ನಡುವೆ ಮೋಂಬತ್ತಿಗಳು ಜಗಮಗಿಸುತ್ತಿವೆ. ಜರತಾರಿ ರೇಷ್ಮೆಯ ಸರಪರ ಸದ್ದು ಕಿಲಕಿಲ ನಗುವಿನೊಂದಿಗೆ ಜುಗಲಬಂದಿ ಹಾಡುತ್ತಿದೆ. ನುಣುಪು ಹಸ್ತಗಳ ನಡುವೆ ಬೆಚ್ಚನೆಯ ಶುಭಾಶಯಗಳು ತವಕದಿಂದ ಕುಣಿಯುತ್ತಿವೆ. ಕುತ್ತಿಗೆಯ ಹಿಂಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಸಣ್ಣಗೆ ನಡುಕ ಹುಟ್ಟಿಸಿ ತನ್ನಿರುವನ್ನು ಪ್ರಕಟಪಡಿಸುವ ಆ ಚಳಿ ಮರುಕ್ಷಣವೇ ಮುದುಡಿಕೊಂಡು ಮೂಲೆ ಹಿಡಿಯುತ್ತಿದೆ. ನೂರಾರು ಕಂಠಗಳು ಚರ್ಚಿನ ಆ ಕಲ್ಲುಗೋಡೆಗಳ ನಡುವೆ ಕ್ಯಾರಲ್ಲುಗಳನ್ನು ಎದೆತುಂಬಿ ಹಾಡುತ್ತಿದ್ದರೆ ಆ ಬಿಸಿಯುಸಿರುಗಳ ಎದುರಲ್ಲಿ ಬೃಹತ್ ಬಾಗಿಲು ಕಿಟಕಿಗಳ ನಡುವಿನಿಂದ ತೂರಿಬರುವ ಹಿಮಗಾಳಿಯೂ ಸೋತು ಶರಣಾಗುತ್ತಿದೆ.
ನನ್ನ ಬಾಲ್ಯಕಾಲದಿಂದಲೂ ನೋಡುತ್ತಿದ್ದೇನೆ, ಅಲ್ಲ ಕೇಳುತ್ತಿದ್ದೇನೆ, ಕ್ರಿಸ್ಮಸ್ ಗೀತೆಗಳ ಆ ಸೊಬಗು ಆ ಸೊಗಡು ಆ ಸೌಂದರ್ಯ ನವನವೋನ್ಮೇಷಶಾಲಿನಿಯಾಗಿ ಚಿರಯೌವನೆಯಾಗಿಯೇ ಉಳಿದುಕೊಂಡಿದೆ. ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ, ಜನರೇ ಸಂತೋಷಿಸಿರಿ ಯೇಸುಬಾಲರು ಹುಟ್ಟಿದರು, ಭಗವಾನ್ ಕ್ರಿಸ್ತರು ಹುಟ್ಟಿದ ಸುದಿನ ಜಗದೊಳು ಮಹದಾನಂದದ ದಿನ, ಸುಂದರ ರಕ್ಷಕನೇ ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ, ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಂ ಗ್ರಾಮದಿ . . . ಹೀಗೆ ಈ ಕ್ರಿಸ್ಮಸ್ ಗೀತೆಗಳ ಸೊಗಸೇ ಅನನ್ಯ. ಅದರಲ್ಲಿ ಹೃದಯಗಳನ್ನು ಬೆಸೆಯುವ ಸುಮಧುರ ನಾದವಿದೆ, ಅನುಪಮ ಕಾಂತಿಯಿದೆ, ಪ್ರೀತಿಶಾಂತಿಯಿದೆ.
ಕ್ರಿಸ್ತಜಯಂತಿಗೆ ನಾಲ್ವತ್ತು ದಿನಗಳ ಮುಂಚಿನಿಂದಲೇ ಆಗಮನಕಾಲ ಶುರುವಾಗುತ್ತದೆ. ಕ್ರಿಸ್ತನನ್ನು ಎದುರುಗೊಳ್ಳುವ ನಿರೀಕ್ಷೆಯ ಈ ಕಾಲವೆಲ್ಲ ಸುಣ್ಣ ಬಣ್ಣ ಅಲಂಕಾರ, ಹೊಸಬಟ್ಟೆ ಖರೀದಿ, ಉಡುಗರೆಗಳ ಆಯ್ಕೆ, ಶುಭಾಶಯಪತ್ರಗಳ ಸಿದ್ಧತೆ, ಹಳೆಯ ಪಳೆಯ ವಸ್ತುಗಳ ವಸ್ತ್ರಗಳ ವಿಲೇವಾರಿ, ಕ್ಯಾರಲ್ಲುಗಳ ಗಾನ, ಕರ್ಚಿಕಾಯಿ ಕಜ್ಜಾಯ ಕಲ್ಕಲ್ಸ್ ಎಂಬ ವಿಶಿಷ್ಟ ತಿಂಡಿಗಳ ತಯಾರಿ, ಇವೆಲ್ಲವುಗಳ ಭರಾಟೆಯಲ್ಲಿ ಅತಿ ಶೀಘ್ರವಾಗಿ ಕಳೆಯುತ್ತದೆ. ಹೀಗೆ ಕ್ರಿಸ್‌ಮಸ್ಸು ನಿಜವಾಗಿಯೂ ಬಲು ನಿರೀಕ್ಷೆಯ ಹಬ್ಬವೇ ಸರಿ.
ಹಾಗೆ ನೋಡಿದರೆ ಈ ಕ್ರಿಸ್ಮಸ್ಸು ಮಕ್ಕಳ ಹಬ್ಬ ಎನ್ನಬಹುದೇನೋ? ಏಕೆಂದರೆ ಈ ದಿನಗಳಲ್ಲಿ ಮಕ್ಕಳ ಬಗ್ಗೆ ಎಂದಿಗಿಂತ ಹೆಚ್ಚು ಕಾಳಜಿ. ಅವರೆಷ್ಟು ಕುಣಿದು ಕುಪ್ಪಳಿಸಿದರೂ ಕೇಳುವವರಿಲ್ಲ. ಅವರಿಗೆ ಬೇಕೆನಿಸಿದ ಉಡುಗರೆ, ಬೇಕೆನಿಸಿದ ಬಟ್ಟೆಬರೆ, ತಿಂಡಿ ತಿನಿಸು, ಆಟೋಟ ಸುತ್ತಾಟ, ಸಂಭ್ರಮ ಸಡಗರ . . ನೋಡ್ತಾ ನೋಡ್ತಾ ಇದ್ರೆ ವಯಸ್ಕರೂ ಮಕ್ಕಳಲ್ಲಿ ಮಕ್ಕಳಾಗಿ ಬಿಡುವುದರಲ್ಲಿ ಸಂದೇಹವೇ ಇಲ್ಲ. ಮಕ್ಕಳ ಮನದಿಂಗಿತವನ್ನು ತಿಳಿದುಕೊಂಡು ಸಾಂಟಾಕ್ಲಾಸ್ ಎಂಬ ಕಾಲ್ಪನಿಕ ವ್ಯಕ್ತಿಯ ನೆವದಲ್ಲಿ ಇವರೇ ಉಡುಗರೆ ತಂದು ಮಕ್ಕಳ ಮನ ಗೆಲ್ಲುವುದು, ಆ ಮಕ್ಕಳು ಮುಂದೆ ದೊಡ್ಡವರಾಗಿ ಅವರ ಮಕ್ಕಳಿಗೆ ಈ ಪವಿತ್ರವಾದ ಗುಟ್ಟನ್ನು ಗುಟ್ಟಾಗಿಯೇ ದಾಟಿಸುವುದು ಇವೆಲ್ಲ ಕ್ರಿಸ್‌ಮಸ್ ಹಬ್ಬವು ದಯಪಾಲಿಸಿದ ಪ್ರೀತಿಯ ಕೊಡುಗೆಯೇ ಅಲ್ಲವೇ?
ಡಿಸೆಂಬರ್ ತಿಂಗಳಿನ ಇಪ್ಪತ್ನಾಲ್ಕನೇ ದಿನದ ಮೈ ನಡುಗಿಸುವ ಚಳಿಯಲ್ಲಿ ಅದೂ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಕ್ರಿಸ್‌ಮಸ್ ಸಂಭ್ರಮ ಗರಿಗೆದರುತ್ತದೆ. ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಡಿಸೆಂಬರ್ ಇಪ್ಪತ್ನಾಲ್ಕರ ನಡುರಾತ್ರಿ ಸೂರ್ಯನು ಮಕರ ಸಂಕ್ರಾಂತಿಯನ್ನು ದಾಟುವ ಈ ಸಂದರ್ಭ ಅವರಿಗೆಲ್ಲ ಸುಗ್ಗಿಯ ಹಬ್ಬ ಮಾತ್ರವಲ್ಲ ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಬೆಳಕಿನ ಹಬ್ಬವಾಗಿತ್ತು. ಪುರಾತನ ರೋಮನರು ಸೂರ್ಯನ ಜಾಗದಲ್ಲಿ ಯೇಸುಕ್ರಿಸ್ತನನ್ನು ಅಲಂಕರಿಸಿ ಕ್ರಿಸ್‌ಮಸ್ ಆಚರಣೆಗೆ ನಾಂದಿ ಹಾಡಿದರು. ಅದರಿಂದಲೇ ಕ್ರಿಸ್ಮಸ್ ದಿನದ ಹಿಂದಿನ ನಡುರಾತ್ರಿಯ ಆಚರಣೆಗೆ ವಿಶೇಷ ಪ್ರಾಮುಖ್ಯತೆ ಇದೆ.
ಅಂದಿನ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆಲ್ಲ ಎಲ್ಲೆಲ್ಲಿಂದ ಜನ ಬಂದು ಚರ್ಚಿನೊಳಗಡೆ ತಮ್ಮ ಜಾಗ ಹಿಡಿದುಕೊಳ್ಳುತ್ತಾರೆ. ಗಾನವೃಂದದವರು ಒಂದಾದ ಮೇಲೊಂದರಂತೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ಕ್ರಿಸ್ತನಿರೀಕ್ಷೆಗೆ ಹೊಳಪು ನೀಡುತ್ತಾರೆ. ಅವೆಲ್ಲ ಗೊತ್ತಿರುವ ಹಾಡುಗಳೇ. ಪ್ರತಿವರ್ಷ ಇದೇ ಸಮಯಕ್ಕೆ ನಾವು ಹಾಡಿದ್ದೇ ಅಲ್ಲವೇ? ಆದರೂ ಇಂದು ಅವು ಹೊಚ್ಚ ಹೊಸದರಂತೆ ನಿತ್ಯನಾವೀನ್ಯತೆಯಿಂದ ಕಂಗೊಳಿಸುತ್ತಿವೆ ಅಲ್ಲ ಇನಿದಾಗಿ ಕೇಳಿಸುತ್ತಿವೆ. ಆ ಹಾಡುಗಳಲ್ಲಿ ಅಪಾರ ಅರ್ಥವಿದೆ, ಅರ್ಥಕ್ಕೂ ಮಿಗಿಲಾದ ಸಂತಸವಿದೆ. ಹೃದಯವನರಳಿಸುವ ಮನ ಪ್ರಫುಲ್ಲಗೊಳಿಸುವ ತವಕವಿದೆ. 'ಬಂದಿಹುದು ಶುಭದಿನವು ತಂದಿಹುದು ಸಂತಸವ ಏನಾನಂದ ಏನಾನಂದ' ಎಂದು ಕೇಳಿಬರುವ ಆ ಗಾನವೃಂದದ ಮಕ್ಕಳ ಹಾಡು ನಮ್ಮ ಹೃದಯದ ಹಾಡಾಗಿ ಕುಣಿಯುತ್ತದೆ. ಚರ್ಚಿನೊಳಗಿನ ಎಲ್ಲರ ಎದೆಬಡಿತವೂ ಗಾನವೃಂದದ ರಾಗ ತಾನ ಪಲ್ಲವಿಗಳಿಗೆ ಮಿಡಿಯುತ್ತಾ ಭಕ್ತಿರಸದ ಹೊನಲಿನೊಂದಿಗೆ ತೃಪ್ತಿರಸದ ಸೊಬಗಿನಲ್ಲಿ ಮೀಯುತ್ತದೆ.
ಗಂಟೆ ಹನ್ನೆರಡಾಗುತ್ತಿದ್ದಂತೆ ಬಂಗಾರದ ಮೇಲುವಸ್ತ್ರ ಧರಿಸಿದ ಗುರುವರ್ಯರು ಶಿಶುಯೇಸುವಿನ ಸ್ವರೂಪವನ್ನು ಕರಗಳಲ್ಲಿ ಎತ್ತಿಹಿಡಿದು 'ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ' ಎಂಬ ದೂತಗಾನವನ್ನು ಮೇರುಸ್ವರದಲ್ಲಿ ಹಾಡುತ್ತಾರೆ. ಚರ್ಚಿನೊಳಗಣ ಭಕ್ತಾದಿಗಳೆಲ್ಲ ಆ ದನಿಗೆ ದನಿಗೂಡಿಸಿ ಎದೆ ತುಂಬಿ ಹಾಡುತ್ತಾ ದೈವ ಭಜನೆ ಮಾಡುತ್ತಾರೆ. ಅದರೊಂದಿಗೆ ಚರ್ಚಿನ ಎಲ್ಲ ದೀಪಗಳೂ ಜಗಮಗಿಸುತ್ತವೆ. ಎಲ್ಲ ಗಂಟೆಗಳೂ ತಾರಸ್ತಾಯಿಯಲ್ಲಿ ಮೊಳಗುತ್ತವೆ. ಸಂತೋಷದ ನಗೆಯ ಹೂವರಳಿ ಒಡೆದ ಮನಗಳು ಬೆಸೆಯುತ್ತವೆ, ವೈಮನಸ್ಯ ಮರೆತುಹೋಗುತ್ತದೆ, ಅಸಹನೆಯ ಉರಿ ಶಾಂತವಾಗುತ್ತದೆ, ಮುಖವಾಡಗಳು ಕಳಚಿಹೋಗುತ್ತವೆ. ಕೈಕುಲುಕುವಿಕೆಯ ಶುಭಾಶಯಗಳು ಹೃದಯದ ಮಾತಾಗುತ್ತವೆ. ದೇವಾಲಯದ ಗಂಟೆ ಇನ್ನೂ ಮೊಳಗುತ್ತಿರುವಂತೆ ಎಸ್ಸೆಮ್ಮೆಸ್ಸುಗಳು ಜಗದ ಉದ್ದಗಲಕ್ಕೂ ಸರಿದಾಡುತ್ತವೆ.
ಶಾಂತಿ ಪ್ರೀತಿ ದ್ಯೋತಕವಾದ ಕ್ರಿಸ್ಮಸ್ಸು ಮತ್ತೆ ಮತ್ತೆ ಬರುತಿರಲಿ, ಜಗದ ದ್ವೇಷವೆಲ್ಲ ತೊಡೆದು ಬಂದೂಕಿನ ಮೇಲೆ ಮಲ್ಲಿಗೆ
ಬಳ್ಳಿ ಹಬ್ಬಿ ಸಾಮರಸ್ಯದ ಹೂವರಳಿಸಲಿ.
http://www.prajavani.net/ Content/Dec232010/ metrothurs20101222218939.asp
ಬಳ್ಳಿ ಹಬ್ಬಿ ಸಾಮರಸ್ಯದ ಹೂವರಳಿಸಲಿ.
http://www.prajavani.net/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ