ಮಂಗಳವಾರ, ಜನವರಿ 17, 2012

ಲಾಜರ್ ಸ್ವಾಮಿಯವರು


ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿಯ ದಂಡೆಯಲ್ಲಿರುವ ಒಂದು ಕುಗ್ರಾಮ ಹಾರೋಬೆಲೆ. ಬೆಂಗಳೂರಿನ ಇತರೆಡೆಗಳಲ್ಲಿ ಮಂಚನಬೆಲೆ, ಅತ್ತಿಬೆಲೆ, ಸೂಲಿಬೆಲೆ ಎಂಬ ಊರುಗಳಂತೆ ಹಾರೋಬೆಲೆಯ ಹೆಸರು ಬಳಕೆಯಲ್ಲಿದೆ. ನೂರಕ್ಕೆ ನೂರು ಕ್ರಿಸ್ತನುಯಾಯಿಗಳಿರುವ ಈ ಊರಿಗೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ.  ವಿದೇಶಗಳಿಂದ ಬಂದ ಕ್ರೈಸ್ತಮತಪ್ರಚಾರಕರ ವಾರ್ಷಿಕ ವರದಿಗಳಲ್ಲಿ ಈ ಊರಿನ ಬಗ್ಗೆ ಇತಿಹಾಸವಿದೆ. ಈ ವಿದೇಶಿಯರ ಶ್ರದ್ಧೆಯ ಫಲವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಕ್ರ್ರೈಸ್ತ ಧರ್ಮವನ್ನು ಸ್ವೀಕರಿಸಿ ೪೦೦ ವರ್ಷಗಳು ತಂದಿದೆ.  ಎಷ್ಟೋ ವಿದೇಶಿ ಪಾದ್ರಿಗಳ ಹೆಸರಿಗಿಂತಲೂ ಸ್ಥಳೀಯರಲ್ಲಿ ಪ್ರಥಮ ಎನಿಸಿದ ಲಾಜರ್ ಸ್ವಾಮಿಯವರ ಹೆಸರು ಇಂದಿಗೂ ಪ್ರಚಲಿತವಾಗಿದೆ. ಹಾರೋಬೆಲೆಯೊಂದಿಗೆ ಸಂಪರ್ಕವಿರುವವರಿಗೆ ಲಾಜರ್ ಸ್ವಾಮಿಯವರ ನೆನಪು ಸದಾ ತುಡಿಯುತ್ತದೆ.
ಆದರೆ ಈ ಲಾಜರ್ ಸ್ವಾಮಿಯವರ ಜೀವನದ ಕುರಿತಂತೆ ಲಿಖಿತದಾಖಲೆಗಳು ಸದ್ಯದಲ್ಲಿ ಲಭ್ಯವಿಲ್ಲ. ಇವರ ಸಮಕಾಲೀನರು ಹೇಳಿರುವ ಹೇಳಿಕೆಗಳು, ಬಾಯಿಂದ ಬಾಯಿಗೆ ಹಬ್ಬಿ ಹರಡಿರುವ ಅವರ ಜೀವನಗಾಥೆ ಇವುಗಳನ್ನು ಆಧರಿಸಿ ಲಾಜರ್ ಸ್ವಾಮಿಯವರ ಬದುಕಿನ ನಿರೂಪಣೆಯನ್ನು ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ.
ಬೆಂಗಳೂರಿನ ಬಿಷಪ್ಪರ ನಿವಾಸದ ಬಳಿ ಇರುವ ಬೇಡರಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಕ್ರಿ.ಸ್ತಶಕ ಸುಮಾರು ೧೮೬೨ ರಾಜಮ್ಮ ಎಂಬುವರ ಗರ್ಭಾಂಬುಧಿಯಲ್ಲಿ ಲಾಜರ್ ರವರು ಜನಿಸಿದರು. ಇವರ ಅಣ್ಣನ ಹೆಸರು ಚಿನ್ನಣ್ಣ, ತಂದೆಯ ಹೆಸರು ತಿಳಿಯದು. ಕೆಲವೇ ವರ್ಷಗಳಲ್ಲಿ ನಾಡಿನ ಅದ್ಯಂತ ಫ್ಲೇಗ್ ಮಾರಿ ಅಪ್ಪಳಿಸಿದ್ದರಿಂದಾಗಿ ಲಾಜರ್ ರವರ ಕುಟುಂಬವು ಬೆಂಗಳೂರಿನ ಹೊರವಲಯದ ದೊರೆಸಾನಿಪಾಳ್ಯಕ್ಕೆ ಸ್ಥಳಾಂತರಗೊಂಡಿತು. ದೈವಭಕ್ತಿಯವರೂ, ಚುರುಕುಮತಿಯವರೂ ಆಗಿದ್ದ ಲಾಜರ್ ಅವರನ್ನು ಅಂದಿನ ಫ್ರೆಂಚ್ ಕ್ರೈಸ್ತಸಭೆಯು ತರಬೇತಿ ಕೊಟ್ಟು ಕ್ರೈಸ್ತ ಗುರುಪಟ್ಟ ನೀಡಿತು.
ಲಾಜರ್ ಸ್ವಾಮಿಯವರ ಕಾರ್ಯವ್ಯಾಪ್ತಿಯು ಬೇಗೂರು, ಕಾಮನಹಳ್ಳಿ, ಸೋಮನಹಳ್ಳಿ, ಕಾನಕಾನಹಳ್ಳಿ, ಉಯ್ಯಂಬಳ್ಳಿ, ಹಾರೋಬೆಲೆ, ಕೊಳ್ಳೇಗಾಲ, ಪರಸೆಗೊಂಡನಪಾಳ್ಯ, ಮಾರ್ಟಳ್ಳಿ, ಕೌದಳ್ಳಿ, ಆನೇಕಲ್ಲು ಹಾಗೂ ಇಂದು ತಮಿಳುನಾಡಿಗೆ ಸೇರಿಹೋಗಿರುವ ಮಾರಂಡನಹಳ್ಳಿ, ದಾಸರಹಳ್ಳಿ, ಮದಗೊಂಡನಹಳ್ಳಿ ಇತ್ಯಾದಿಯಾಗಿತ್ತು. ಸ್ಥಳೀಯವಾಗಿ ಇವರು ಕುದುರೆಯ ಮೇಲೂ ದೂರದೂರುಗಳಿಗೆ ಎತ್ತಿನ ಗಾಡಿಯ ಮೇಲೂ ಪ್ರ್ರಯಾಣಿಸಿ ಕ್ರೈಸ್ತ ಭಕ್ತರ ಅಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ತಮ್ಮ ಬಂಟ ವೀಸಲ್ ಪಟ್ಟಿ ಚಿನ್ನಣ್ಣನೊಂದಿಗೆ ಕಮಾನು ಕಟ್ಟಿದ ಎತ್ತಿನ ಗಾಡಿಯಲ್ಲಿ ಊರಿಂದೂರಿಗೆ ಪ್ರಯಾಣಮಾಡುವಾಗ ಅವರಲ್ಲಿದ್ದ ಬಟ್ಟೆಬರೆ ಹಣ ಕಾಸು ಪೂಜಾಸಾಮಗ್ರಿ ಪ್ರಸಾದಗಳನ್ನು ಕದಿಯ ಬರುವ ಕಳ್ಳಕಾಕರಿಂದ ರಕ್ಷಣೆ ಪಡೆಯಲು ಅಂದಿನ ಬ್ರಿಟಿಷ್ ಸರಕಾರವು ಇವರಿಗೆ ಬಂದೂಕು ಬಳಸಲು ಪರವಾನಿಗೆ ನೀಡಿತ್ತು.  ಊರಿಂದೂರಿಗೆ ಪ್ರಯಾಣ ಮಾಡುತ್ತ ಮತ್ತೆ ಅದೇ ಊರಿಗೆ ಅವರು ಮರುಭೇಟಿ ನೀಡಲು ಮೂರು ತಿಂಗಳಾದರೂ ಆಗುತ್ತಿತ್ತು. ಆದರೆ ತಪಸ್ಸು ಕಾಲದಲ್ಲಿ ಹಾರೋಬೆಲೆ, ಮಳೆಗಾಲ ಕಳೆದು ಕ್ರಿಸ್ತಜಯಂತಿ ಮುಗಿಯುವವರೆಗೂ ಸೋಮನಹಳ್ಳಿ ಇವೆರಡು ಊರುಗಳು ಅವರ ಶಾಶ್ವತ ನೆಲೆಯಾಗಿದ್ದವು.
ಹಾರೋಬೆಲೆಯಲ್ಲಿ ಅವರು ಪ್ರಯೋಗಿಸಿದ, ಯೇಸುಸ್ವಾಮಿಯ ಪೂಜ್ಯ ಪಾಡುಗಳ ಕಥನ ಎಂಬ ರಂಗಪ್ರಯೋಗ ಅಭಿವೃದ್ಧಿಗೊಂಡು ಶತಮಾನ ಕಳೆದಿದೆ. ೧೯೦೬ನೇ ಏಪ್ರಿಲ್ ೧೩ರ ಪವಿತ್ರ ಶುಕ್ರವಾರದಂದು ಹಾರೋಬೆಲೆಯ ಜಪಸರದೊಡತಿಯ ಆಲಯದ ಮುಂದೆ ಹಾಕಿದ್ದ ಚಪ್ಪರದಡಿಯಲ್ಲಿ ಯೇಸುವಿನ ಜೀವನದ ಅಂತಿಮ ಕ್ಷಣಗಳ ಘಟನಾವಳಿಯನ್ನು ಲಾಜರ್ ಸ್ವಾಮಿಯವರು ಭಕ್ತಾದಿಗಳ ಮನಮುಟ್ಟುವಂತೆ ವ್ಯಾಖ್ಯಾನಿಸಿದರು.  ಅದಕ್ಕೆ ಆರು ಮಂದಿ ಪೂಜೆ ಒತ್ತಾಸೆಯ ಬಾಲಕರ ಅಭಿನಯವು ಪೂರಕವಾಗಿತ್ತು. ಹೊಂಗೆಸೊಪ್ಪು ಹೊದ್ದ ಬಗಿನಿಮರದ ಚಪ್ಪರಕ್ಕೆ ಪಂಜಿನ ಬೆಳಕಲ್ಲಿ ನಡೆದ ಈ ನಾಟಕದಂಥ ಪ್ರಯೋಗವನ್ನು ಅನಂತ ತಲ್ಲಿನತೆಯಿಂದ ನೋಡಿದ ಭಕ್ತಾದಿಗಳು ಭಾವಪರವಶರಾಗಿ ಶಿಲುಬೆಗೆ ಮುತ್ತನ್ನಿಟ್ಟು ಮನೆಗೆ ತೆರಳಿದರು.  ವರ್ಷಗಳು ಕಳೆದಂತೆ ಈ ನಾಟಕದ ಪಾತ್ರದಾರಿಗಳು ಹೆಚ್ಚಿ, ಅವಧಿಯೂ ಹೆಚ್ಚಿ, ಧಿರಿಸುಗಳೂ ಕಳೆಗೊಂಡು ದೂರುದೂರುಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.  ನಂತರದ ವರ್ಷಗಳಲ್ಲಿ ಶುಭಶುಕ್ರವಾರ ರಾತ್ರಿ ಪೂಜ್ಯಪಾಡುಗಳ ಅಭಿನಯವು ಪವಿತ್ರ ಶನಿವಾರದ ರಾತ್ರಿ ಪುನರುತ್ಥಾನದ ಮಹಿಮೆಯ ಪ್ರದರ್ಶನವು ಮರುದಿನ ಈಸ್ಟರ್ ಭಾನುವಾರದ ರಾತ್ರಿ ಕ್ರೈಸ್ತ ಸಂತರ ನಾಟಕವೂ ಪ್ರದರ್ಶನಗೊಳ್ಳತೊಡಗಿದವು.
ಇನ್ನೊಂದು ಪ್ರಸಂಗದಲ್ಲಿ ಕ್ರೈಸ್ತ ಸ್ವಾಮೀಜಿಯನ್ನು ಹೋಲುವ ಮರದ ಪುಟ್ಟ ಪ್ರತಿಮೆಯೊಂದು ಸಿಕ್ಕಿದೆ ಎಂದು ಬೆಟ್ಟದಹಲಸೂರಿನಿಂದ ಸುದ್ದಿ ಬಂತು. ಲಾಜರ್ ಸ್ವಾಮಿಯವರು ಅಲ್ಲಿಗೆ ಹೋಗಿ ನೋಡಲಾಗಿ ಆ ಪ್ರತಿಮೆ ಸಂತ ಅಂತೋಣಿಯವರದೆಂದು ತಿಳಿಯಿತು. ಅದನ್ನು ಅವರು ತಮ್ಮ ಉಣ್ಣೆಯ ನಿಲುವಂಗಿಯ ಕಿಸೆಯಲ್ಲಿಟ್ಟುಕೊಂಡು ಹಾರೋಬೆಲೆಗೆ ಮರಳಿದರು.  ಆದರೆ ಹಾರೋಬೆಲೆಗೆ ಬಂದು ನೋಡಿದರೆ ಅವರ ಕಿಸೆಯಲ್ಲಿ ಪ್ರತಿಮೆ ಇರಲಿಲ್ಲ. ಎಂದಿನ ಕೆಲಸಗಳಲ್ಲಿ ತೊಡಗಿಕೊಂಡು ಅವರು ಈ ಘಟನೆಯನ್ನು ಮರೆತು ಬಿಟ್ಟರು.  ಆ ರಾತ್ರಿ ಮಲಗುವ ಮುನ್ನ ಅವರು ಧ್ಯಾನಕ್ಕೆ ಕುಳಿತಾಗ ಅಂದಿನ ಘಟನೆಗಳನ್ನು ಮತ್ತೆ ನೆನಪು ಮಾಡಿಕೊಂಡರು. ಸಂತ ಅಂತೋಣಿಯವರ ಆ ಪ್ರತಿಮೆ ಬೆಟ್ಟದ ಹಲಸೂರಿನಲ್ಲೇ ಉಳಿದಿದೆ ಎಂದು ಅವರಿಗೆ ಅನಿಸಿತು. ಮರುದಿನ ಕುದುರೆ ಹತ್ತಿ ಅಲ್ಲಿಗೆ ಹೋದಾಗ ಆ ಪ್ರತಿಮೆ ಮೊದಲು ಸಿಕ್ಕ ಜಾಗದಲ್ಲೇ ಬಿದ್ದಿತ್ತು. ಸಂತ ಅಂತೋಣಿಯವರಿಗೆ ಆ ಸ್ಥಳವನ್ನು ಬಿಟ್ಟುಬರಲು ಮನಸ್ಸಿಲ್ಲವೆಂದು ಅರಿತುಕೊಂಡ ಅವರು ಸಂತ ಅಂತೋಣಿಯವರ ನೆನಪಿನಲ್ಲಿ ಅಲ್ಲೇ ಒಂದು ದೇಗುಲ ಕಟ್ಟಿಸಿದರು.  ಹಾರೋಬೆಲೆ ಮಹಿಮೆಗೆ ಬಂದವರು ಬೆಟ್ಟದ ಹಲಸೂರಿಗೂ ಭೇಟಿ ನೀಡುವ ಪರಂಪರೆ ಬೆಳೆಯಿತು.
ಸೋಮನಹಳ್ಳಿಯ ಜನತೆ ಅವರೊಂದಿಗೆ ಇರಿಸಿಕೊಂಡಿದ್ದ ಭಾವನಾತ್ಮಕ ಸಂಬಂಧ ತುಂಬ ಗಾಢವಾದದ್ದು. ೧೯೨೫ರಲ್ಲಿ ಅಂದರೆ ತಮ್ಮ ೬೩ನೇ ವಯಸ್ಸಿನಲ್ಲಿ ಲಾಜರ್ ಸ್ವಾಮಿಯವರು ತೀರಿಕೊಂಡಾಗ ವಾಡಿಕೆಯಂತೆ ಅವರ ಶರೀರವನ್ನು ನಗರದ ಪವಿತ್ರ ಹೃದಯಾಲಯದ ಆವರಣದಲ್ಲಿರುವ ಗುರುಪ್ರಸಾದಿಗಳ ಸಮಾಧಿ ಭೂಮಿಯಲ್ಲಿ ಮಣ್ಣು ಮಾಡಲಾಯಿತು.  ಆದರೆ ಅವರ ಅಂತಿಮಕ್ರಿಯೆ ತಮ್ಮೂರಲ್ಲೇ ನಡೆಯಬೇಕೆಂದು ಸೋಮನಹಳ್ಳಿಯ ಜನತೆ ಹಟ ಹಿಡಿದು ಸತ್ಯಾಗ್ರಹ ನಡೆಸಿದ್ದು ಲಾಜರ್ ಸ್ವಾಮಿಯವರ ಜನಪ್ರೀತಿಗೆ ಉಜ್ವಲ ಸಾಕ್ಷಿ.

ಶನಿವಾರ, ಜನವರಿ 14, 2012

ಬಾಲಕಯೇಸುವಿನ ಹಬ್ಬ


ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ
ವಿನಯದಿ ಮೆರೆಯುತ ಶಾಂತಿಯ ಬೀರುತ
ಅನುಪಮ ಸುಂದರ ಶಿಶುವಾಗಿಯೇ

ಎಂದೊಬ್ಬ ಕವಿ ಕ್ರಿಸ್ತನನ್ನು ಹಾಡಿ ಭಜಿಸಿದ್ದಾನೆ. ಇಂದು ಬಾಲಯೇಸುವಿನ ಹಬ್ಬ. ವಿವೇಕನಗರದ ಬಾಲಯೇಸುವಿನ ದೇವಾಲಯದಲ್ಲಿ ಅಪಾರ ಜನಜಾತ್ರೆ.
ಬಾಲಕೃಷ್ಣ, ಬಾಲಗಣಪರಂತೆಯೇ ಬಾಲಕನ ರೂಪದಲ್ಲಿ ಯೇಸುಕ್ರಿಸ್ತನನ್ನು ಪರಿಭಾವಿಸಿಕೊಂಡು ಪೂಜಿಸುವ ಈ ಆಚರಣೆ ಭಾರತೀಯ ಸಂಸ್ಕೃತಿಯ ನೆರಳಂತೆ ಅನಿಸಿದರೂ ಈ ಬಾಲಯೇಸು ಪರಿಕಲ್ಪನೆ ಮೂಡಿಬಂದದ್ದು ದೂರದ ಯೂರೋಪಿನ ಪ್ರೇಗ್ ಎಂಬ ಊರಿನಿಂದ.
ಹಾಗೆ ನೋಡಿದರೆ ಬಾಲಕ ಯೇಸುವಿನ ಕುರಿತ ಸಂಗತಿಗಳು ಪವಿತ್ರ ಬೈಬಲಿನಲ್ಲಿ ಉಲ್ಲೇಖಗೊಂಡಿರುವುದು ಕಡಿಮೆ. ಯೇಸುವನ್ನು ಉದರದಲ್ಲಿ ಹೊತ್ತು ತುಂಬುಗರ್ಭಿಣಿ ಮೇರಿ ಮಾತೆ ತಮ್ಮ ಪತಿ ಜೋಸೆಫರೊಂದಿಗೆ ಕಡ್ಡಾಯ ಜನಗಣತಿಯ ಕಾರಣದಿಂದ ನೆಲೆನಿಂತ ಊರನ್ನು ಬಿಟ್ಟು ಪೂರ್ವಜರ ಊರಾದ ಬೆತ್ಲೆಹೇಮಿಗೆ ಬರಬೇಕಾಯಿತು. ಅದಾಗಲೇ ಜನಗಣತಿಗೆ ಬಂದವರಿಂದ ಮನೆಗಳು ಭರ್ತಿಯಾಗಿದ್ದವು. ಜೋಸೆಫ ಮತ್ತು ಮರಿಯಾಳಿಗೆ ದನದ ಕೊಟ್ಟಿಗೆಯೇ ಗತಿಯಾಯ್ತು. ಕತ್ತೆಯ ಮೇಲೆ ಬಹುದೂರದ ಪ್ರಯಾಣ ಮಾಡಿ ಆಯಾಸಗೊಂಡಿದ್ದ ಬಿಮ್ಮನಸೆ ಮರಿಯಾಳಿಗೆ ಸರಿರಾತ್ರಿಯಲ್ಲಿ ಹೆರಿಗೆಯಾಗಿ ಗಂಡುಮಗು ಹುಟ್ಟಿತು. ಕರುಗಳಿಗೆ ಮೇವುಣ್ಣಿಸುವ ಗೊಂದಣಿಗೆ ಅಥವಾ ಗೋದಲಿಯೊಳಗೆ ಶಿಶುವನ್ನು ಮಲಗಿಸಿ ಜೋಸೆಫರು ಬಾಣಂತಿ ಮೇರಿಯ ಉಪಚಾರ ಮಾಡುತ್ತಾರೆ. ಯೇಸುಜನನದ ಕತೆಯ ಈ ಎಲ್ಲ ಸಂಗತಿಗಳಿಗೆ ಕುಂದು ತಾರದೇ ಸರ್ವಶಕ್ತ ದೇವರು ಸಮ್ಮನಸುಗಳ ಬಾಯಲ್ಲಿ ದೇವಗಾನ ಹಾಡಿಸುತ್ತಾನೆ, ಆಗಸದಲ್ಲಿ ವಿಶೇಷ ನಕ್ಷತ್ರಗಳನ್ನು ಬೆಳಗಿಸುತ್ತಾನೆ, ಜನಗಣತಿಯ ಜಾತ್ರೆಯಲ್ಲಿ ಕಳೆದುಹೋದ ಜನರನ್ನು ಬಿಟ್ಟು ಬಯಲಲ್ಲಿ ಬಿಡುಬೀಸಾಗಿ ಕುರಿಮೇಯಿಸುತ್ತಿದ್ದ ಕುರುಬರಿಗೆ ಯೇಸುವಿನ ಮೊದಲ ದರ್ಶನ ಮಾಡಿಸುತ್ತಾನೆ. ಕೊಟ್ಟಿಗೆಯಲ್ಲಿ ಅದಾಗಲೇ ನೆಲೆಕಂಡಿದ್ದ ದನಗಳು ಕರುಗಳು ಕತ್ತೆಗಳು ಆಡುಗಳು ಸಹ ಯೇಸುವಿನ ದರ್ಶನದಿಂದ ಪುಳಕಗೊಂಡವು. ಟಿಬೆಟ್ಟಿನ ಬುದ್ಧ ಚರಿತೆಯ ಪ್ರಕಾರ ಬೋಧಿಸತ್ವನು ಯೇಸುವಿನ ರೂಪದಲ್ಲಿ ಜನಿಸಿದ್ದನ್ನು ಕಂಡುಕೊಂಡ ಜ್ಞಾನಿಗಳು ನಕ್ಷತ್ರದ ಜಾಡು ಹಿಡಿದು ದೀರ್ಘ ಪ್ರಯಾಣ ಮಾಡಿ ಶಿಶು ಯೇಸುವನ್ನು ಕಂಡು ಪುನೀತರಾಗುತ್ತಾರೆ. ಆದರೆ ಆ ಜ್ಞಾನಿಗಳ ಮಾತು ಅಲ್ಲಿನ ರಾಜನಿಗೆ ಪಥ್ಯವಾಗುವುದಿಲ್ಲ. ಮಗು ಯೇಸು ಬೆಳೆದು ಮುಂದೆಂದೋ ತನ್ನ ವಿರೋಧಿಯಾಗುವ ಬದಲು ಇಂದೇ ಆತನನ್ನು ಇಲ್ಲವಾಗಿಸಿಬಿಟ್ಟರೆ ನೆಮ್ಮದಿ ಎಂದುಕೊಂಡು ತನ್ನ ರಾಜ್ಯದಲ್ಲಿನ ಶಿಶುಗಳನ್ನೆಲ್ಲ ಕೊಲ್ಲಿಸುತ್ತಾನೆ. ಆದರೆ ಅಷ್ಟರಲ್ಲಿ ಮೇರಿ ಮತ್ತು ಜೋಸೆಫರು ಶಿಶುಸಮೇತ ಪಲಾಯನ ಮಾಡಿರುತ್ತಾರೆ. ಹೀಗೆ ಊರು ತೊರೆಯುವ ಯೇಸು ಮತ್ತೆ ಕಾಣಿಸಿಕೊಳ್ಳುವುದು ತನ್ನ ಹನ್ನೆರಡನೇ ವಯಸ್ಸಿನಲ್ಲಿ. ಮುಂಜಿಗಾಗಿ ಜೆರುಸಲೇಮಿನ ಗುಡಿಗೆ ಬರುವ ಆತ ಅಲ್ಲಿನ ಧರ್ಮಗುರುಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಗಲಿಬಿಲಿಗೊಳಿಸುತ್ತಾನೆ.
ಇಷ್ಟರ ಹೊರತು ಬಾಲಕ ಯೇಸುವಿನ ಬಾಲಲೀಲೆಗಳ ಕುರಿತಾಗಲೀ ಇನ್ನಾವುದೇ ವಿವರಗಳಾಗಲೀ ನಮಗೆ ದೊರೆಯವು. ಕೆಲ ಚಿತ್ರಗಳಲ್ಲಿ ಆತ ತನ್ನ ತಂದೆ ಜೋಸೆಫನಿಗೆ ಬಡಗಿ ಕೆಲಸದಲ್ಲಿ ನೆರವಾಗುವ ವಿವರವಿದೆ. ಬಾಲಕ ಯೇಸುವು ಹನ್ನೊಂದನೇ ಶತಮಾನದ ಜನಪ್ರಿಯ ಸಂತ ಅಂತೋಣಿಯವರೊಂದಿಗೆ ಆಟವಾಡುತ್ತಿದ್ದರೆಂಬ ಪ್ರತೀತಿಯಿದೆ. ಸಹಾಯಮಾತೆಯ ಪಟದಲ್ಲಿ ದೇವದೂತರು ಮಗುಯೇಸುವಿಗೆ ಶಿಲುಬೆ ತೋರಿಸಿ ಹೆದರಿಸುವಾಗ ಗುಮ್ಮನ ಕಂಡು ಹೆದರುವ ಮಗು ತಾಯಿಯ ಮರೆಹೊಗುವಂತೆ ಯೇಸು ಅಮ್ಮನ ಮಡಿಲೇರಿದ್ದಾನೆ. ಹಾಗೆಯೇ  ಕವಿಗಳ ಕಲ್ಪನೆಯಲ್ಲಿ ಧರ್ಮಭೀರುಗಳ ಬೊಗಸೆಯಲ್ಲಿ ಬಾಲಯೇಸು ನರ್ತಿಸುತ್ತಾನೆ, ಕುಣಿಯುತ್ತಾನೆ, ಕುಪ್ಪಳಿಸುತ್ತಾನೆ, ತುಂಟಾಟವಾಡುತ್ತಾನೆ, ಕೇಳಿದ ವರಗಳನ್ನೆಲ್ಲ ಮೊಗೆಮೊಗೆದು ಕೊಡುತ್ತಾನೆ. ಹಾಗಾಗಿಯೇ ಜಾತಿಧರ್ಮಗಳ ಭೇದವಿಲ್ಲದೆ ಜನ ಅವನೆಡೆಗೆ ಧಾವಿಸಿ ಬರುತ್ತಾರೆ.
ಹೀಗೆ ಯಾವಾಗಲೂ ಎಲ್ಲ ಸ್ತರಗಳ ಜನರಿಂದ ತುಂಬಿ ತುಳುಕುವ ವಿವೇಕನಗರದಲ್ಲಿರುವ ಬಾಲಯೇಸು ದೇವಾಲಯ ಕಂಬಗಳಿಲ್ಲದೇ ರಚಿತವಾದ ಅರೆವರ್ತುಳಾಕಾರದ ದಿವ್ಯ ಭವ್ಯ ವಿಸ್ತಾರದ ಗುಡಿ. ಒಮ್ಮೆಗೇ ಹತ್ತು ಸಾವಿರ ಜನರು ನೆಮ್ಮದಿಯಾಗಿ ಕುಳಿತು ಯೇಸುಧ್ಯಾನ ಮಾಡಬಹುದಾದ ಸುಂದರ ತಾಣವಿದು. ಹಜಾರದ ಕೇಂದ್ರಸ್ಥಾನದಲ್ಲಿ ಯೇಸುಜನನದ ಬೃಹತ್ ಭಿತ್ತಿಯನ್ನು ಉಬ್ಬುಶಿಲ್ಪದಂತೆ ರಚಿಸಲಾಗಿದೆ. ಅಪೂರ್ವ ವರ್ಣಸಂಯೋಜನೆಯ ಈ ಚಿತ್ತಾರದಲ್ಲಿ ನಾಯಿಗಳೂ ಪಾರಿವಾಳಗಳೂ ಕ್ರಿಸ್ತಜನನಕ್ಕೆ ಸಾಕ್ಷಿಯಾಗಿವೆ. ಗುಡಿಯ ಹೊರ ಆವರಣದಲ್ಲಿ ಚಪ್ಪಡಿ ಹಾಸಿನ ವಿಶಾಲ ಜಗಲಿಯಿದ್ದು ದೇವಾಲಯದ ಸೌಂದರ್ಯಕ್ಕೆ ಪೂರಕವಾಗಿದೆ. ಇದರ ಕೆಳಗೆ ನೆಲಮಾಳಿಗೆಯಲ್ಲಿ ಇನ್ನೂರು ಕಾರುಗಳ ನಿಲುಗಡೆಗೂ ವ್ಯವಸ್ಥೆಯಿದೆ. ಪುಸ್ತಕ ಮತ್ತು ಗಾನಮುದ್ರಿಕೆಗಳ ಮಾರಾಟ, ಹರಕೆ ವಸ್ತುಗಳ ಪ್ರದರ್ಶನ, ಹರಕೆಯ ಅಂಕಣ, ವಧುವರಾನ್ವೇಷಣಾ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ ನಳನಳಿಸುತ್ತಿರುವ ಈ ಧಾರ್ಮಿಕ ಕೇಂದ್ರವನ್ನು ಯಾರು ಯಾವಾಗ ಬೇಕಾದರೂ ಸಂದರ್ಶಿಸಿ ಧನ್ಯರಾಗಬಹುದು.