ಕನಕಪುರ
ತಾಲೂಕಿನಲ್ಲಿ ಅರ್ಕಾವತಿ ನದಿಯ ದಂಡೆಯಲ್ಲಿರುವ ಒಂದು ಕುಗ್ರಾಮ ಹಾರೋಬೆಲೆ. ಬೆಂಗಳೂರಿನ ಇತರೆಡೆಗಳಲ್ಲಿ
ಮಂಚನಬೆಲೆ, ಅತ್ತಿಬೆಲೆ, ಸೂಲಿಬೆಲೆ ಎಂಬ ಊರುಗಳಂತೆ ಹಾರೋಬೆಲೆಯ ಹೆಸರು ಬಳಕೆಯಲ್ಲಿದೆ. ನೂರಕ್ಕೆ
ನೂರು ಕ್ರಿಸ್ತನುಯಾಯಿಗಳಿರುವ ಈ ಊರಿಗೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ. ವಿದೇಶಗಳಿಂದ ಬಂದ ಕ್ರೈಸ್ತಮತಪ್ರಚಾರಕರ ವಾರ್ಷಿಕ ವರದಿಗಳಲ್ಲಿ
ಈ ಊರಿನ ಬಗ್ಗೆ ಇತಿಹಾಸವಿದೆ. ಈ ವಿದೇಶಿಯರ ಶ್ರದ್ಧೆಯ ಫಲವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ
ಗ್ರಾಮಗಳು ಕ್ರ್ರೈಸ್ತ ಧರ್ಮವನ್ನು ಸ್ವೀಕರಿಸಿ ೪೦೦ ವರ್ಷಗಳು ತಂದಿದೆ. ಎಷ್ಟೋ ವಿದೇಶಿ ಪಾದ್ರಿಗಳ ಹೆಸರಿಗಿಂತಲೂ ಸ್ಥಳೀಯರಲ್ಲಿ
ಪ್ರಥಮ ಎನಿಸಿದ ಲಾಜರ್ ಸ್ವಾಮಿಯವರ ಹೆಸರು ಇಂದಿಗೂ ಪ್ರಚಲಿತವಾಗಿದೆ. ಹಾರೋಬೆಲೆಯೊಂದಿಗೆ ಸಂಪರ್ಕವಿರುವವರಿಗೆ
ಲಾಜರ್ ಸ್ವಾಮಿಯವರ ನೆನಪು ಸದಾ ತುಡಿಯುತ್ತದೆ.
ಆದರೆ
ಈ ಲಾಜರ್ ಸ್ವಾಮಿಯವರ ಜೀವನದ ಕುರಿತಂತೆ ಲಿಖಿತದಾಖಲೆಗಳು ಸದ್ಯದಲ್ಲಿ ಲಭ್ಯವಿಲ್ಲ. ಇವರ ಸಮಕಾಲೀನರು
ಹೇಳಿರುವ ಹೇಳಿಕೆಗಳು, ಬಾಯಿಂದ ಬಾಯಿಗೆ ಹಬ್ಬಿ ಹರಡಿರುವ ಅವರ ಜೀವನಗಾಥೆ ಇವುಗಳನ್ನು ಆಧರಿಸಿ ಲಾಜರ್
ಸ್ವಾಮಿಯವರ ಬದುಕಿನ ನಿರೂಪಣೆಯನ್ನು ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ.
ಬೆಂಗಳೂರಿನ
ಬಿಷಪ್ಪರ ನಿವಾಸದ ಬಳಿ ಇರುವ ಬೇಡರಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಕ್ರಿ.ಸ್ತಶಕ ಸುಮಾರು ೧೮೬೨ ರಾಜಮ್ಮ
ಎಂಬುವರ ಗರ್ಭಾಂಬುಧಿಯಲ್ಲಿ ಲಾಜರ್ ರವರು ಜನಿಸಿದರು. ಇವರ ಅಣ್ಣನ ಹೆಸರು ಚಿನ್ನಣ್ಣ, ತಂದೆಯ ಹೆಸರು
ತಿಳಿಯದು. ಕೆಲವೇ ವರ್ಷಗಳಲ್ಲಿ ನಾಡಿನ ಅದ್ಯಂತ ಫ್ಲೇಗ್ ಮಾರಿ ಅಪ್ಪಳಿಸಿದ್ದರಿಂದಾಗಿ ಲಾಜರ್ ರವರ
ಕುಟುಂಬವು ಬೆಂಗಳೂರಿನ ಹೊರವಲಯದ ದೊರೆಸಾನಿಪಾಳ್ಯಕ್ಕೆ ಸ್ಥಳಾಂತರಗೊಂಡಿತು. ದೈವಭಕ್ತಿಯವರೂ, ಚುರುಕುಮತಿಯವರೂ
ಆಗಿದ್ದ ಲಾಜರ್ ಅವರನ್ನು ಅಂದಿನ ಫ್ರೆಂಚ್ ಕ್ರೈಸ್ತಸಭೆಯು ತರಬೇತಿ ಕೊಟ್ಟು ಕ್ರೈಸ್ತ ಗುರುಪಟ್ಟ ನೀಡಿತು.
ಲಾಜರ್
ಸ್ವಾಮಿಯವರ ಕಾರ್ಯವ್ಯಾಪ್ತಿಯು ಬೇಗೂರು, ಕಾಮನಹಳ್ಳಿ, ಸೋಮನಹಳ್ಳಿ, ಕಾನಕಾನಹಳ್ಳಿ, ಉಯ್ಯಂಬಳ್ಳಿ,
ಹಾರೋಬೆಲೆ, ಕೊಳ್ಳೇಗಾಲ, ಪರಸೆಗೊಂಡನಪಾಳ್ಯ, ಮಾರ್ಟಳ್ಳಿ, ಕೌದಳ್ಳಿ, ಆನೇಕಲ್ಲು ಹಾಗೂ ಇಂದು ತಮಿಳುನಾಡಿಗೆ
ಸೇರಿಹೋಗಿರುವ ಮಾರಂಡನಹಳ್ಳಿ, ದಾಸರಹಳ್ಳಿ, ಮದಗೊಂಡನಹಳ್ಳಿ ಇತ್ಯಾದಿಯಾಗಿತ್ತು. ಸ್ಥಳೀಯವಾಗಿ ಇವರು
ಕುದುರೆಯ ಮೇಲೂ ದೂರದೂರುಗಳಿಗೆ ಎತ್ತಿನ ಗಾಡಿಯ ಮೇಲೂ ಪ್ರ್ರಯಾಣಿಸಿ ಕ್ರೈಸ್ತ ಭಕ್ತರ ಅಧ್ಯಾತ್ಮಿಕ
ಅಗತ್ಯಗಳನ್ನು ಪೂರೈಸುತ್ತಿದ್ದರು. ತಮ್ಮ ಬಂಟ ವೀಸಲ್ ಪಟ್ಟಿ ಚಿನ್ನಣ್ಣನೊಂದಿಗೆ ಕಮಾನು ಕಟ್ಟಿದ ಎತ್ತಿನ
ಗಾಡಿಯಲ್ಲಿ ಊರಿಂದೂರಿಗೆ ಪ್ರಯಾಣಮಾಡುವಾಗ ಅವರಲ್ಲಿದ್ದ ಬಟ್ಟೆಬರೆ ಹಣ ಕಾಸು ಪೂಜಾಸಾಮಗ್ರಿ ಪ್ರಸಾದಗಳನ್ನು
ಕದಿಯ ಬರುವ ಕಳ್ಳಕಾಕರಿಂದ ರಕ್ಷಣೆ ಪಡೆಯಲು ಅಂದಿನ ಬ್ರಿಟಿಷ್ ಸರಕಾರವು ಇವರಿಗೆ ಬಂದೂಕು ಬಳಸಲು ಪರವಾನಿಗೆ
ನೀಡಿತ್ತು. ಊರಿಂದೂರಿಗೆ ಪ್ರಯಾಣ ಮಾಡುತ್ತ ಮತ್ತೆ
ಅದೇ ಊರಿಗೆ ಅವರು ಮರುಭೇಟಿ ನೀಡಲು ಮೂರು ತಿಂಗಳಾದರೂ ಆಗುತ್ತಿತ್ತು. ಆದರೆ ತಪಸ್ಸು ಕಾಲದಲ್ಲಿ ಹಾರೋಬೆಲೆ,
ಮಳೆಗಾಲ ಕಳೆದು ಕ್ರಿಸ್ತಜಯಂತಿ ಮುಗಿಯುವವರೆಗೂ ಸೋಮನಹಳ್ಳಿ ಇವೆರಡು ಊರುಗಳು ಅವರ ಶಾಶ್ವತ ನೆಲೆಯಾಗಿದ್ದವು.
ಹಾರೋಬೆಲೆಯಲ್ಲಿ
ಅವರು ಪ್ರಯೋಗಿಸಿದ, ಯೇಸುಸ್ವಾಮಿಯ ಪೂಜ್ಯ ಪಾಡುಗಳ ಕಥನ ಎಂಬ ರಂಗಪ್ರಯೋಗ ಅಭಿವೃದ್ಧಿಗೊಂಡು ಶತಮಾನ
ಕಳೆದಿದೆ. ೧೯೦೬ನೇ ಏಪ್ರಿಲ್ ೧೩ರ ಪವಿತ್ರ ಶುಕ್ರವಾರದಂದು ಹಾರೋಬೆಲೆಯ ಜಪಸರದೊಡತಿಯ ಆಲಯದ ಮುಂದೆ
ಹಾಕಿದ್ದ ಚಪ್ಪರದಡಿಯಲ್ಲಿ ಯೇಸುವಿನ ಜೀವನದ ಅಂತಿಮ ಕ್ಷಣಗಳ ಘಟನಾವಳಿಯನ್ನು ಲಾಜರ್ ಸ್ವಾಮಿಯವರು ಭಕ್ತಾದಿಗಳ
ಮನಮುಟ್ಟುವಂತೆ ವ್ಯಾಖ್ಯಾನಿಸಿದರು. ಅದಕ್ಕೆ ಆರು
ಮಂದಿ ಪೂಜೆ ಒತ್ತಾಸೆಯ ಬಾಲಕರ ಅಭಿನಯವು ಪೂರಕವಾಗಿತ್ತು. ಹೊಂಗೆಸೊಪ್ಪು ಹೊದ್ದ ಬಗಿನಿಮರದ ಚಪ್ಪರಕ್ಕೆ
ಪಂಜಿನ ಬೆಳಕಲ್ಲಿ ನಡೆದ ಈ ನಾಟಕದಂಥ ಪ್ರಯೋಗವನ್ನು ಅನಂತ ತಲ್ಲಿನತೆಯಿಂದ ನೋಡಿದ ಭಕ್ತಾದಿಗಳು ಭಾವಪರವಶರಾಗಿ
ಶಿಲುಬೆಗೆ ಮುತ್ತನ್ನಿಟ್ಟು ಮನೆಗೆ ತೆರಳಿದರು. ವರ್ಷಗಳು
ಕಳೆದಂತೆ ಈ ನಾಟಕದ ಪಾತ್ರದಾರಿಗಳು ಹೆಚ್ಚಿ, ಅವಧಿಯೂ ಹೆಚ್ಚಿ, ಧಿರಿಸುಗಳೂ ಕಳೆಗೊಂಡು ದೂರುದೂರುಗಳಿಂದ
ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ನಂತರದ ವರ್ಷಗಳಲ್ಲಿ ಶುಭಶುಕ್ರವಾರ ರಾತ್ರಿ ಪೂಜ್ಯಪಾಡುಗಳ ಅಭಿನಯವು ಪವಿತ್ರ ಶನಿವಾರದ ರಾತ್ರಿ
ಪುನರುತ್ಥಾನದ ಮಹಿಮೆಯ ಪ್ರದರ್ಶನವು ಮರುದಿನ ಈಸ್ಟರ್ ಭಾನುವಾರದ ರಾತ್ರಿ ಕ್ರೈಸ್ತ ಸಂತರ ನಾಟಕವೂ
ಪ್ರದರ್ಶನಗೊಳ್ಳತೊಡಗಿದವು.
ಇನ್ನೊಂದು
ಪ್ರಸಂಗದಲ್ಲಿ ಕ್ರೈಸ್ತ ಸ್ವಾಮೀಜಿಯನ್ನು ಹೋಲುವ ಮರದ ಪುಟ್ಟ ಪ್ರತಿಮೆಯೊಂದು ಸಿಕ್ಕಿದೆ ಎಂದು ಬೆಟ್ಟದಹಲಸೂರಿನಿಂದ
ಸುದ್ದಿ ಬಂತು. ಲಾಜರ್ ಸ್ವಾಮಿಯವರು ಅಲ್ಲಿಗೆ ಹೋಗಿ ನೋಡಲಾಗಿ ಆ ಪ್ರತಿಮೆ ಸಂತ ಅಂತೋಣಿಯವರದೆಂದು
ತಿಳಿಯಿತು. ಅದನ್ನು ಅವರು ತಮ್ಮ ಉಣ್ಣೆಯ ನಿಲುವಂಗಿಯ ಕಿಸೆಯಲ್ಲಿಟ್ಟುಕೊಂಡು ಹಾರೋಬೆಲೆಗೆ ಮರಳಿದರು. ಆದರೆ ಹಾರೋಬೆಲೆಗೆ ಬಂದು ನೋಡಿದರೆ ಅವರ ಕಿಸೆಯಲ್ಲಿ ಪ್ರತಿಮೆ
ಇರಲಿಲ್ಲ. ಎಂದಿನ ಕೆಲಸಗಳಲ್ಲಿ ತೊಡಗಿಕೊಂಡು ಅವರು ಈ ಘಟನೆಯನ್ನು ಮರೆತು ಬಿಟ್ಟರು. ಆ ರಾತ್ರಿ ಮಲಗುವ ಮುನ್ನ ಅವರು ಧ್ಯಾನಕ್ಕೆ ಕುಳಿತಾಗ ಅಂದಿನ
ಘಟನೆಗಳನ್ನು ಮತ್ತೆ ನೆನಪು ಮಾಡಿಕೊಂಡರು. ಸಂತ ಅಂತೋಣಿಯವರ ಆ ಪ್ರತಿಮೆ ಬೆಟ್ಟದ ಹಲಸೂರಿನಲ್ಲೇ ಉಳಿದಿದೆ
ಎಂದು ಅವರಿಗೆ ಅನಿಸಿತು. ಮರುದಿನ ಕುದುರೆ ಹತ್ತಿ ಅಲ್ಲಿಗೆ ಹೋದಾಗ ಆ ಪ್ರತಿಮೆ ಮೊದಲು ಸಿಕ್ಕ ಜಾಗದಲ್ಲೇ
ಬಿದ್ದಿತ್ತು. ಸಂತ ಅಂತೋಣಿಯವರಿಗೆ ಆ ಸ್ಥಳವನ್ನು ಬಿಟ್ಟುಬರಲು ಮನಸ್ಸಿಲ್ಲವೆಂದು ಅರಿತುಕೊಂಡ ಅವರು
ಸಂತ ಅಂತೋಣಿಯವರ ನೆನಪಿನಲ್ಲಿ ಅಲ್ಲೇ ಒಂದು ದೇಗುಲ ಕಟ್ಟಿಸಿದರು. ಹಾರೋಬೆಲೆ ಮಹಿಮೆಗೆ ಬಂದವರು ಬೆಟ್ಟದ ಹಲಸೂರಿಗೂ ಭೇಟಿ ನೀಡುವ
ಪರಂಪರೆ ಬೆಳೆಯಿತು.
ಸೋಮನಹಳ್ಳಿಯ
ಜನತೆ ಅವರೊಂದಿಗೆ ಇರಿಸಿಕೊಂಡಿದ್ದ ಭಾವನಾತ್ಮಕ ಸಂಬಂಧ ತುಂಬ ಗಾಢವಾದದ್ದು. ೧೯೨೫ರಲ್ಲಿ ಅಂದರೆ ತಮ್ಮ
೬೩ನೇ ವಯಸ್ಸಿನಲ್ಲಿ ಲಾಜರ್ ಸ್ವಾಮಿಯವರು ತೀರಿಕೊಂಡಾಗ ವಾಡಿಕೆಯಂತೆ ಅವರ ಶರೀರವನ್ನು ನಗರದ ಪವಿತ್ರ
ಹೃದಯಾಲಯದ ಆವರಣದಲ್ಲಿರುವ ಗುರುಪ್ರಸಾದಿಗಳ ಸಮಾಧಿ ಭೂಮಿಯಲ್ಲಿ ಮಣ್ಣು ಮಾಡಲಾಯಿತು. ಆದರೆ ಅವರ ಅಂತಿಮಕ್ರಿಯೆ ತಮ್ಮೂರಲ್ಲೇ ನಡೆಯಬೇಕೆಂದು ಸೋಮನಹಳ್ಳಿಯ
ಜನತೆ ಹಟ ಹಿಡಿದು ಸತ್ಯಾಗ್ರಹ ನಡೆಸಿದ್ದು ಲಾಜರ್ ಸ್ವಾಮಿಯವರ ಜನಪ್ರೀತಿಗೆ ಉಜ್ವಲ ಸಾಕ್ಷಿ.
1 ಕಾಮೆಂಟ್:
ಮರಿಜೋಸಪ್ ರವರು ನಿರೂಪಿಸಿರುವ ’ಲಾಜರ್ ಸ್ವಾಮಿ’ ತುಂಬಾ ಸೊಗಸಾಗಿ ಮೂವಿ ಬಂದಿದೆ. ಮಹಿಮೆ ಬೆಳೆದು ಬಂದ ಪರಿ ಇನ್ನೂ ಸವಿಸ್ತಾರವಾಗಿ ಮೂವಿ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಸ್ವತಃ ಹಾರೊಬೆಲೆಗೆ ಸೇರಿದವನಾದರೂ ಅಲ್ಲಿನ ಕೆಲವೊಂದು ವಿಚಾರ ನನಗಿನ್ನೂ ಆಳವಾಗಿ ತಿಳಿದುಕೊಳ್ಳಬೇಕಾಗಿದೆ. ವಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ