ಜನಿಸಿಹನಾರು
ಗೋದಲಿಯೊಳು ವಿನಯದ ಶಿಶುವಾಗಿ
ವಿನಯದಿ
ಮೆರೆಯುತ ಶಾಂತಿಯ ಬೀರುತ
ಅನುಪಮ
ಸುಂದರ ಶಿಶುವಾಗಿಯೇ
ಎಂದೊಬ್ಬ
ಕವಿ ಕ್ರಿಸ್ತನನ್ನು ಹಾಡಿ ಭಜಿಸಿದ್ದಾನೆ. ಇಂದು ಬಾಲಯೇಸುವಿನ ಹಬ್ಬ. ವಿವೇಕನಗರದ ಬಾಲಯೇಸುವಿನ ದೇವಾಲಯದಲ್ಲಿ
ಅಪಾರ ಜನಜಾತ್ರೆ.
ಬಾಲಕೃಷ್ಣ,
ಬಾಲಗಣಪರಂತೆಯೇ ಬಾಲಕನ ರೂಪದಲ್ಲಿ ಯೇಸುಕ್ರಿಸ್ತನನ್ನು ಪರಿಭಾವಿಸಿಕೊಂಡು ಪೂಜಿಸುವ ಈ ಆಚರಣೆ ಭಾರತೀಯ
ಸಂಸ್ಕೃತಿಯ ನೆರಳಂತೆ ಅನಿಸಿದರೂ ಈ ಬಾಲಯೇಸು ಪರಿಕಲ್ಪನೆ ಮೂಡಿಬಂದದ್ದು ದೂರದ ಯೂರೋಪಿನ ಪ್ರೇಗ್ ಎಂಬ
ಊರಿನಿಂದ.
ಹಾಗೆ
ನೋಡಿದರೆ ಬಾಲಕ ಯೇಸುವಿನ ಕುರಿತ ಸಂಗತಿಗಳು ಪವಿತ್ರ ಬೈಬಲಿನಲ್ಲಿ ಉಲ್ಲೇಖಗೊಂಡಿರುವುದು ಕಡಿಮೆ. ಯೇಸುವನ್ನು
ಉದರದಲ್ಲಿ ಹೊತ್ತು ತುಂಬುಗರ್ಭಿಣಿ ಮೇರಿ ಮಾತೆ ತಮ್ಮ ಪತಿ ಜೋಸೆಫರೊಂದಿಗೆ ಕಡ್ಡಾಯ ಜನಗಣತಿಯ ಕಾರಣದಿಂದ
ನೆಲೆನಿಂತ ಊರನ್ನು ಬಿಟ್ಟು ಪೂರ್ವಜರ ಊರಾದ ಬೆತ್ಲೆಹೇಮಿಗೆ ಬರಬೇಕಾಯಿತು. ಅದಾಗಲೇ ಜನಗಣತಿಗೆ ಬಂದವರಿಂದ
ಮನೆಗಳು ಭರ್ತಿಯಾಗಿದ್ದವು. ಜೋಸೆಫ ಮತ್ತು ಮರಿಯಾಳಿಗೆ ದನದ ಕೊಟ್ಟಿಗೆಯೇ ಗತಿಯಾಯ್ತು. ಕತ್ತೆಯ ಮೇಲೆ
ಬಹುದೂರದ ಪ್ರಯಾಣ ಮಾಡಿ ಆಯಾಸಗೊಂಡಿದ್ದ ಬಿಮ್ಮನಸೆ ಮರಿಯಾಳಿಗೆ ಸರಿರಾತ್ರಿಯಲ್ಲಿ ಹೆರಿಗೆಯಾಗಿ ಗಂಡುಮಗು
ಹುಟ್ಟಿತು. ಕರುಗಳಿಗೆ ಮೇವುಣ್ಣಿಸುವ ಗೊಂದಣಿಗೆ ಅಥವಾ ಗೋದಲಿಯೊಳಗೆ ಶಿಶುವನ್ನು ಮಲಗಿಸಿ ಜೋಸೆಫರು
ಬಾಣಂತಿ ಮೇರಿಯ ಉಪಚಾರ ಮಾಡುತ್ತಾರೆ. ಯೇಸುಜನನದ ಕತೆಯ ಈ ಎಲ್ಲ ಸಂಗತಿಗಳಿಗೆ ಕುಂದು ತಾರದೇ ಸರ್ವಶಕ್ತ
ದೇವರು ಸಮ್ಮನಸುಗಳ ಬಾಯಲ್ಲಿ ದೇವಗಾನ ಹಾಡಿಸುತ್ತಾನೆ, ಆಗಸದಲ್ಲಿ ವಿಶೇಷ ನಕ್ಷತ್ರಗಳನ್ನು ಬೆಳಗಿಸುತ್ತಾನೆ,
ಜನಗಣತಿಯ ಜಾತ್ರೆಯಲ್ಲಿ ಕಳೆದುಹೋದ ಜನರನ್ನು ಬಿಟ್ಟು ಬಯಲಲ್ಲಿ ಬಿಡುಬೀಸಾಗಿ ಕುರಿಮೇಯಿಸುತ್ತಿದ್ದ
ಕುರುಬರಿಗೆ ಯೇಸುವಿನ ಮೊದಲ ದರ್ಶನ ಮಾಡಿಸುತ್ತಾನೆ. ಕೊಟ್ಟಿಗೆಯಲ್ಲಿ ಅದಾಗಲೇ ನೆಲೆಕಂಡಿದ್ದ ದನಗಳು
ಕರುಗಳು ಕತ್ತೆಗಳು ಆಡುಗಳು ಸಹ ಯೇಸುವಿನ ದರ್ಶನದಿಂದ ಪುಳಕಗೊಂಡವು. ಟಿಬೆಟ್ಟಿನ ಬುದ್ಧ ಚರಿತೆಯ ಪ್ರಕಾರ
ಬೋಧಿಸತ್ವನು ಯೇಸುವಿನ ರೂಪದಲ್ಲಿ ಜನಿಸಿದ್ದನ್ನು ಕಂಡುಕೊಂಡ ಜ್ಞಾನಿಗಳು ನಕ್ಷತ್ರದ ಜಾಡು ಹಿಡಿದು
ದೀರ್ಘ ಪ್ರಯಾಣ ಮಾಡಿ ಶಿಶು ಯೇಸುವನ್ನು ಕಂಡು ಪುನೀತರಾಗುತ್ತಾರೆ. ಆದರೆ ಆ ಜ್ಞಾನಿಗಳ ಮಾತು ಅಲ್ಲಿನ
ರಾಜನಿಗೆ ಪಥ್ಯವಾಗುವುದಿಲ್ಲ. ಮಗು ಯೇಸು ಬೆಳೆದು ಮುಂದೆಂದೋ ತನ್ನ ವಿರೋಧಿಯಾಗುವ ಬದಲು ಇಂದೇ ಆತನನ್ನು
ಇಲ್ಲವಾಗಿಸಿಬಿಟ್ಟರೆ ನೆಮ್ಮದಿ ಎಂದುಕೊಂಡು ತನ್ನ ರಾಜ್ಯದಲ್ಲಿನ ಶಿಶುಗಳನ್ನೆಲ್ಲ ಕೊಲ್ಲಿಸುತ್ತಾನೆ.
ಆದರೆ ಅಷ್ಟರಲ್ಲಿ ಮೇರಿ ಮತ್ತು ಜೋಸೆಫರು ಶಿಶುಸಮೇತ ಪಲಾಯನ ಮಾಡಿರುತ್ತಾರೆ. ಹೀಗೆ ಊರು ತೊರೆಯುವ
ಯೇಸು ಮತ್ತೆ ಕಾಣಿಸಿಕೊಳ್ಳುವುದು ತನ್ನ ಹನ್ನೆರಡನೇ ವಯಸ್ಸಿನಲ್ಲಿ. ಮುಂಜಿಗಾಗಿ ಜೆರುಸಲೇಮಿನ ಗುಡಿಗೆ
ಬರುವ ಆತ ಅಲ್ಲಿನ ಧರ್ಮಗುರುಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಗಲಿಬಿಲಿಗೊಳಿಸುತ್ತಾನೆ.
ಇಷ್ಟರ
ಹೊರತು ಬಾಲಕ ಯೇಸುವಿನ ಬಾಲಲೀಲೆಗಳ ಕುರಿತಾಗಲೀ ಇನ್ನಾವುದೇ ವಿವರಗಳಾಗಲೀ ನಮಗೆ ದೊರೆಯವು. ಕೆಲ ಚಿತ್ರಗಳಲ್ಲಿ
ಆತ ತನ್ನ ತಂದೆ ಜೋಸೆಫನಿಗೆ ಬಡಗಿ ಕೆಲಸದಲ್ಲಿ ನೆರವಾಗುವ ವಿವರವಿದೆ. ಬಾಲಕ ಯೇಸುವು ಹನ್ನೊಂದನೇ ಶತಮಾನದ
ಜನಪ್ರಿಯ ಸಂತ ಅಂತೋಣಿಯವರೊಂದಿಗೆ ಆಟವಾಡುತ್ತಿದ್ದರೆಂಬ ಪ್ರತೀತಿಯಿದೆ. ಸಹಾಯಮಾತೆಯ ಪಟದಲ್ಲಿ ದೇವದೂತರು
ಮಗುಯೇಸುವಿಗೆ ಶಿಲುಬೆ ತೋರಿಸಿ ಹೆದರಿಸುವಾಗ ಗುಮ್ಮನ ಕಂಡು ಹೆದರುವ ಮಗು ತಾಯಿಯ ಮರೆಹೊಗುವಂತೆ ಯೇಸು
ಅಮ್ಮನ ಮಡಿಲೇರಿದ್ದಾನೆ. ಹಾಗೆಯೇ ಕವಿಗಳ ಕಲ್ಪನೆಯಲ್ಲಿ
ಧರ್ಮಭೀರುಗಳ ಬೊಗಸೆಯಲ್ಲಿ ಬಾಲಯೇಸು ನರ್ತಿಸುತ್ತಾನೆ, ಕುಣಿಯುತ್ತಾನೆ, ಕುಪ್ಪಳಿಸುತ್ತಾನೆ, ತುಂಟಾಟವಾಡುತ್ತಾನೆ,
ಕೇಳಿದ ವರಗಳನ್ನೆಲ್ಲ ಮೊಗೆಮೊಗೆದು ಕೊಡುತ್ತಾನೆ. ಹಾಗಾಗಿಯೇ ಜಾತಿಧರ್ಮಗಳ ಭೇದವಿಲ್ಲದೆ ಜನ ಅವನೆಡೆಗೆ
ಧಾವಿಸಿ ಬರುತ್ತಾರೆ.
ಹೀಗೆ
ಯಾವಾಗಲೂ ಎಲ್ಲ ಸ್ತರಗಳ ಜನರಿಂದ ತುಂಬಿ ತುಳುಕುವ ವಿವೇಕನಗರದಲ್ಲಿರುವ ಬಾಲಯೇಸು ದೇವಾಲಯ ಕಂಬಗಳಿಲ್ಲದೇ
ರಚಿತವಾದ ಅರೆವರ್ತುಳಾಕಾರದ ದಿವ್ಯ ಭವ್ಯ ವಿಸ್ತಾರದ ಗುಡಿ. ಒಮ್ಮೆಗೇ ಹತ್ತು ಸಾವಿರ ಜನರು ನೆಮ್ಮದಿಯಾಗಿ
ಕುಳಿತು ಯೇಸುಧ್ಯಾನ ಮಾಡಬಹುದಾದ ಸುಂದರ ತಾಣವಿದು. ಹಜಾರದ ಕೇಂದ್ರಸ್ಥಾನದಲ್ಲಿ ಯೇಸುಜನನದ ಬೃಹತ್
ಭಿತ್ತಿಯನ್ನು ಉಬ್ಬುಶಿಲ್ಪದಂತೆ ರಚಿಸಲಾಗಿದೆ. ಅಪೂರ್ವ ವರ್ಣಸಂಯೋಜನೆಯ ಈ ಚಿತ್ತಾರದಲ್ಲಿ ನಾಯಿಗಳೂ
ಪಾರಿವಾಳಗಳೂ ಕ್ರಿಸ್ತಜನನಕ್ಕೆ ಸಾಕ್ಷಿಯಾಗಿವೆ. ಗುಡಿಯ ಹೊರ ಆವರಣದಲ್ಲಿ ಚಪ್ಪಡಿ ಹಾಸಿನ ವಿಶಾಲ ಜಗಲಿಯಿದ್ದು
ದೇವಾಲಯದ ಸೌಂದರ್ಯಕ್ಕೆ ಪೂರಕವಾಗಿದೆ. ಇದರ ಕೆಳಗೆ ನೆಲಮಾಳಿಗೆಯಲ್ಲಿ ಇನ್ನೂರು ಕಾರುಗಳ ನಿಲುಗಡೆಗೂ
ವ್ಯವಸ್ಥೆಯಿದೆ. ಪುಸ್ತಕ ಮತ್ತು ಗಾನಮುದ್ರಿಕೆಗಳ ಮಾರಾಟ, ಹರಕೆ ವಸ್ತುಗಳ ಪ್ರದರ್ಶನ, ಹರಕೆಯ ಅಂಕಣ,
ವಧುವರಾನ್ವೇಷಣಾ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ ನಳನಳಿಸುತ್ತಿರುವ ಈ ಧಾರ್ಮಿಕ
ಕೇಂದ್ರವನ್ನು ಯಾರು ಯಾವಾಗ ಬೇಕಾದರೂ ಸಂದರ್ಶಿಸಿ ಧನ್ಯರಾಗಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ