ಗುರುವಾರ, ಮೇ 24, 2012

ಆಂತೋನ್ ಮರೀ ತಬಾ (Antoine Marie Tabard, M.A., M.B.E.)


ಬೆಂಗಳೂರು ಮಹಾಧರ್ಮಪ್ರಾಂತ್ಯದ ರೂವಾರಿಗಳಲ್ಲಿ ಆಂತೋನ್ ಮರೀ ತಬಾ ಎಂಬ ಫ್ರೆಂಚ್ ಪಾದ್ರಿಯ ಹೆಸರು ಬಲು ಪ್ರಮುಖವಾದುದು. ಮೂರು ದಶಕಗಳ ಕಾಲ ಸಂತ ಪ್ಯಾಟ್ರಿಕ್ಕರ ದೇವಾಲಯದ ಪಾದ್ರಿಯಾಗಿ ಕೆಲಸ ನಿರ್ವಹಿಸುತ್ತಲೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿಅವರು ತೊಡಗಿಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಅವರ ಚಟುವಟಿಕೆಗಳಿಗೆ ಧಾರ್ಮಿಕ ಕಟ್ಟುಪಾಡುಗಳಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಅವರು ಪಾದರಸದಂತೆ ಚುರುಕಾಗಿ ತೊಡಗಿಸಿಕೊಳ್ಳುತ್ತಿದ್ದರು. ಭಾರತದ ಭೂಪಟದಲ್ಲಿ ಬೆಂಗಳೂರನ್ನು ಎಲ್ಲರೂ ಗುರುತಿಸುವಂತೆ ಮಾಡುವಲ್ಲಿ ಅವರ ಪಾತ್ರ ಗಣನೀಯ. “ಇದ್ದಲ್ಲೇ ಇದ್ದು ತುಕ್ಕು ಹಿಡಿಯುವುದಕ್ಕಿಂತ ಅತ್ತಿತ್ತ ಸರಿದಾಡಿ ಸವೆಯುವುದು ಮೇಲು” ಎನ್ನುವುದು ಅವರ ಧ್ಯೇಯವಾಕ್ಯವಾಗಿತ್ತು. ಸಂತ ಪ್ಯಾಟ್ರಿಕ್ಕರ ಚರ್ಚಿನ ಪಾದ್ರಿಯಾಗಿ ೩೩ ವರ್ಷಗಳ ಕಾಲ ಅವರು ಸೈನಿಕರಿಗೆ, ನಾಗರಿಕರಿಗೆ, ಹಳ್ಳಿಗರಿಗೆ, ಪ್ರಯಾಣಿಕರಿಗೆ ಪರಿಚಿತ ಅಪರಿಚಿತರೆಲ್ಲರಿಗೆ ನೆಚ್ಚಿನ ಫಾದರ್ ಆಗಿದ್ದರು. ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗಂತೂ ತಬಾ ಅವರು ಪ್ರಾತಃಸ್ಮರಣೀಯರಾಗಿದ್ದರು. ಒಬ್ಬ ಪಾದ್ರಿ ಹೀಗೂ ಬದುಕಲು ಸಾಧ್ಯ ಎಂದು ತೋರುವ ಅತ್ಯುತ್ತಮ ಮಾದರಿ ತಬಾ ಅವರದು.

ತಬಾ ಅವರು ಫ್ರಾನ್ಸ್ ದೇಶದ ವಾಯುವ್ಯ ಪ್ರದೇಶದಲ್ಲಿನ ತೊರಿಗ್ನಿಸೂರ್ ವಿಯ ಎಂಬ ಊರಲ್ಲಿ ೧೮೬೩ನೇ ಅಕ್ಟೋಬರ್ ೧೫ರಂದು ಜನಿಸಿದರು. ಮಧ್ಯಮವರ್ಗದ ಕುಟುಂಬದ ಅವರ ತಂದೆತಾಯಿಯರು ತಮ್ಮ ಸಜ್ಜನಿಕೆಯ ಕಾರಣದಿಂದ ಊರಲ್ಲಿ ಗೌರವಾನ್ವಿತರಾಗಿದ್ದರು. ಬಾಲ್ಯದಲ್ಲಿ ತಬಾ ಅವರು ಕೃಶಕಾಯರಾಗಿದ್ದುದರಿಂದ ಅವರ ವಿದ್ಯಾಭ್ಯಾಸವು ಮನೆಯಲ್ಲೇ ನಡೆಯಿತು. ಚುರುಕುಮತಿಯ ತಬಾ ಎಲ್ಲ ವಿದ್ಯೆಯನ್ನೂ ಕರಗತ ಮಾಡಿಕೊಂಡು ವಿಶ್ವವಿದ್ಯಾಲಯದ ಪ್ರವೇಶಕ್ಕೆ ಅಣಿಯಾಗುವ ವೇಳೆಗೆ ಅವರ ಆರೋಗ್ಯವೂ ಸುಧಾರಿಸಿತ್ತು. ತಮ್ಮ ಹದಿನಾರನೇ ವಯಸ್ಸಿಗೆ ಪದವೀಧರರಾದ ಅವರನ್ನು ಯಾರಾದರೂ ಮುಂದೇನು ಮಾಡುತ್ತೀ ಎಂದು ಕೇಳಿದರೆ ಪೂರ್ವದೇಶಗಳಿಗೆ ಹೋಗಿ ಧರ್ಮಪ್ರಚಾರ ಮಾಡುತ್ತೇನೆಂದು ತಟ್ಟನೇ ಉತ್ತರಿಸುತ್ತಿದ್ದರು. ಈ ಮಾತಿನಿಂದ ಅವರ ತಂದೆತಾಯಿಯರಿಗೆ ನೋವುಂಟಾದರೂ ತೋರ್ಪಡಿಸದೆ ಒಬ್ಬನೇ ಮಗನ ಮನದಿಂಗಿತಕ್ಕೆ ಮುಗುಳ್ನಗೆಯಿಂದಲೇ ಅಂಗೀಕಾರ ನೀಡಿದರು.

ಕಾಲೇಜು ಶಿಕ್ಷಕ
ಹೀಗೆ ತಬಾ ಅವರು ಪ್ಯಾರಿಸ್ಸಿನ ಹೊರದೇಶ ಧರ್ಮಪ್ರಚಾರ ಸಂಸ್ಥೆ (MEP) ಗೆ ಸೇರಿ ಧರ್ಮಾಧ್ಯಯನ ಮಾಡಿ ೧೮೮೬ರ ಜೂನ್ ೧೬ರಂದು ಗುರುಪಟ್ಟ ಪಡೆದರು. ಅದಾಗಿ ಮೂರು ತಿಂಗಳಾನಂತರ ಬೆಂಗಳೂರಿಗೆ ಬಂದಿಳಿದಾಗ ಅವರ ಪಾಂಡಿತ್ಯವನ್ನು ಗಮನಿಸಿ ಅವರನ್ನು ಸಂತ ಜೋಸೆಫರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಅಲ್ಲಿ ಅವರು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ಪ್ರಕಾಂಡ ಬೋಧಕರೆನಿಸಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾದರು.
ಆದರೆ ತಾನು ಅಂದುಕೊಂಡಿದ್ದಾದರೂ ಏನು? ಪೂರ್ವದೇಶಗಳಿಗೆ ತೆರಳಿ ಧರ್ಮಪ್ರಚಾರ ಮತ್ತು ಬಡಜನರ ಸೇವೆ ಮಾಡಬೇಕೆಂದಲ್ಲವೇ? ಇಲ್ಲಿ ನಗರವಾಸಿಯಾಗಿ ಮೇಲ್ವರ್ಗದ ಜನರಿಗೆ ಕಾಲೇಜು ಶಿಕ್ಷಣ ನೀಡುತ್ತಿದ್ದೇನಲ್ಲ ಎಂದು ನೊಂದುಕೊಂಡ ತಬಾ ಅವರು ಮೇತ್ರಾಣಿಯವರಾಗಿದ್ದ ಕ್ಲೀನೆ (Bishop Kleiner) ಅವರ ಬಳಿ ತೆರಳಿ ತಮ್ಮನ್ನು ಈ ಹುದ್ದೆಯಿಂದ ತೆರವುಗೊಳಿಸುವಂತೆ ವಿನಂತಿಸಿಕೊಂಡರು. ಅವರ ಮನವಿಗೆ ಒಪ್ಪಿದ ಬಿಷಪರು ತಬಾ ಅವರನ್ನು ಮೈಸೂರಿಗೆ ಕಳಿಸಿದರು.
ಫಾದರ್ ತಬಾ ಅವರು ಮೈಸೂರಿನಲ್ಲಿ ಫಾದರ್ ರೋತಿಯಾರಿ (Father Reautearu) ಅವರ ಸಹವರ್ತಿಯಾಗಿದ್ದುಕೊಂಡು ಕನ್ನಡವನ್ನು ಚೆನ್ನಾಗಿ ಕಲಿತುಕೊಂಡರು. ಆದರೆ ಒಂದು ವರ್ಷವಾಗುವಷ್ಟರಲ್ಲಿ ಅವರು ಮತ್ತೆ ಬೆಂಗಳೂರಿಗೆ ಮರಳುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತು. ಅಂದು ಪ್ರಧಾನಾಲಯವಾಗಿದ್ದ ಸಂತ ಪ್ಯಾಟ್ರಿಕ್ಕರ ದೇವಾಲಯದ ಮುಖ್ಯ ಗುರುಗಳಾಗಿದ್ದ ಫಾದರ್ ಕಿನಾ (Father Quenard) ಅವರು ತೀರಿಕೊಂಡಿದ್ದರಿಂದ ಅವರ ಸ್ಥಾನ ತುಂಬಲು ಫಾದರ್ ತಬಾ ಅವರನ್ನು ಕರೆಸಿಕೊಳ್ಳಲಾಯಿತು. ಹೀಗೆ ಅವರು ೧೮೯೧ರಿಂದ ೧೯೨೬ ವರೆಗಿನ ದೀರ್ಘ ಅವಧಿಯನ್ನು ಈ ದೇವಾಲಯದ ಮುಖ್ಯಗುರುವಾಗಿ ಕಳೆದರು. ಇಲ್ಲಿದ್ದುಕೊಂಡೇ ಅವರು ದೀನರ ಬಡಬಗ್ಗರ ಅನಾಥರ ಸೇವೆ ಮಾಡಿದರು.
ತಮ್ಮ ದೇವಾಲಯದ ಆವರಣದಲ್ಲಿ ಅನಾಥಾಶ್ರಮ (Saint Patrick’s Orphanage) ತೆರೆದು ಆಗಿನ ಕಾಲದಲ್ಲಿ ತೀವ್ರ ಬಡತನ ಅಂಟುಜಾಡ್ಯಗಳಿಂದ ಕಂಗೆಟ್ಟು ಹೋಗಿದ್ದ ಕುಟುಂಬಗಳ ಹುಡುಗರನ್ನು ಕರೆತಂದು ಊಟ ವಿದ್ಯೆ ನೀಡಿ ಅವರನ್ನು ಗೌರವಾನ್ವಿತ ಪ್ರಜೆಗಳಾಗಿ ರೂಪಿಸಿದರು.

ಮಿಧಿಕ್ ಸೊಸೈಟಿ
ಬೆಂಗಳೂರಿನ ಪ್ರಸಿದ್ಧ ಮಿಥಿಕ್ ಸೊಸೈಟಿಯನ್ನು ಹುಟ್ಟುಹಾಕುವಲ್ಲಿ ಇವರ ಪಾತ್ರ ಗಣನೀಯ. ಮೈಸೂರಿನ ಇತಿಹಾಸ ಸಂಶೋಧನೆಗೆ ಈ ಸಂಸ್ಥೆಯು ಬಲವಾದ ಬುನಾದಿಯಾಗಲೆಂದು ಆಶಿಸಿದರು. ತಮ್ಮ ವರ್ಚಸ್ಸನ್ನು ಉಪಯೋಗಿಸಿ ಎಲ್ಲೆಡೆಯಿಂದ ಚಂದಾ ಸಂಗ್ರಹಿಸಿ ಮಿಥಿಕ್ ಸೊಸೈಟಿಯನ್ನು ಸಾಕಾರಗೊಳಿಸಿದರು. ಒಮ್ಮೆ ದಳವಾಯಿ ದೇವರಾಜ ಅರಸರು ಒಂದು ಭೇಟಿಯಲ್ಲಿ ಬೆಳ್ಳನೆಯ ಮೊಲದ ಜೋಡಿಯನ್ನು ಕೊಡಲು ಹೋದಾಗ ನಕ್ಕ ತಬಾ ಅವರು “ಮೊಲಗಳ ಬೆಲೆಯನ್ನು ಕೊಟ್ಟರೆ ಮಿಥಿಕ್ ಸೊಸೈಟಿಗೆ ಉಪಕಾರವಾದೀತು” ಎಂದರಂತೆ. ಸಜ್ಜನರಾದ ದೇವರಾಜ ಅರಸರು ಮರುದಿನ ಜೋಡಿ ಮೊಲಗಳ ಜೊತೆಗೆ ಐನೂರು ರೂಪಾಯಿಗಳ ಚೆಕ್ಕನ್ನು ಸಹ ಕಳಿಸಿಕೊಟ್ಟರು.
ಸೆನೊಟಾಫ್ ರಸ್ತೆಯಲ್ಲಿ (ಇಂದಿನ ನೃಪತುಂಗ ರಸ್ತೆ) ಒಂದು ನಿವೇಶನ ಪಡೆದ ತಬಾ ಅವರು ಅಲ್ಲಿ ಡ್ಯಾಲಿ ಮೆಮೊರಿಯಲ್ ಹಾಲ್ ಕಟ್ಟಿ ತಮ್ಮಲ್ಲಿದ್ದ ಎಲ್ಲ ಮೌಲಿಕ ಪರಾಮರ್ಶನ ಗ್ರಂಥಗಳನ್ನು ಅಲ್ಲಿ ತಂದಿಟ್ಟು ಒಂದು ಪರಿಪೂರ್ಣ ಪುಸ್ತಕಾಲಯವನ್ನು ಸ್ಥಾಪಿಸಿದರು. ವಿದ್ವತ್ ಪ್ರಬಂಧಗಳನ್ನು ಮಂಡಿಸಲು ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಿ ಇಡೀ ಕಾರ್ಯಕ್ರಮದ ನಿರೂಪಣೆಯನ್ನು ತಾವೇ ಬಲು ಚೆಂದವಾಗಿ ಪ್ರಸ್ತುತಪಡಿಸುತ್ತಿದ್ದರು. ಪುರಾತತ್ವ ಉತ್ಖನನಗಳ ಕುರಿತ ಒಣವರದಿಗಳಿಗೆ ಫಾದರ್ ತಬಾ ಅವರು ನೀಡುತ್ತಿದ್ದ ವೈಜ್ಞಾನಿಕ ಹಾಗೂ ರೋಚಕ ನಿರೂಪಣೆಯಿಂದಾಗಿ ಅವು ಸರ್ವಗ್ರಾಹ್ಯವಾಗುತ್ತಿದ್ದವು. ವಿಷಯಜ್ಞಾನದಿಂದ ಕೂಡಿದ ಅವರ ಕಂಚಿನ ಕಂಠದ ಕಲಾತ್ಮಕ ನಿರೂಪಣೆ ಯುವರಾಜರಾದ ಕಂಠೀರವ ನರಸಿಂಹ ರಾಜರನ್ನೂ ಬಹುವಾಗಿ ಆಕರ್ಷಿಸಿತ್ತು.

ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಯಲ್ಲೂ ತಬಾ ಅವರದು ಬಹು ಮುಖ್ಯ ಪಾತ್ರವಿತ್ತು. ಮೊದಲ ಸೆನೆಟಿನ ಸದಸ್ಯರಾಗಿ, ಹಲವಾರು ಸಮಿತಿಗಳಲ್ಲಿ ಪಾಲ್ಗೊಂಡು, ಲತೀನ್ ಮತ್ತು ಫ್ರೆಂಚ್ ಅಧ್ಯಯನ ಪೀಠಗಳ ಅಧ್ಯಕ್ಷರಾಗಿ, ಮೈಸೂರು ವಿವಿಯ ಆಜೀವ ಫೆಲೊ ಆಗಿ ಅವರು ಕಾರ್ಯನಿರ್ವಹಿಸಿದರು. ಇಂದಿಗೂ ಮೈಸೂರು ವಿವಿಯು ಇತಿಹಾಸ ವಿಷಯದಲ್ಲಿ ಉತ್ತಮ ಅಂಕಗಳಿಸಿದವರಿಗೆ “ತಬಾ ಚಿನ್ನದ ಪದಕ” ನೀಡುತ್ತಿದೆ.
ತಬಾ ಅವರು ಮೈಸೂರು ಸಂಸ್ಥಾನ ಹಾಗೂ ಬ್ರಿಟಿಷ್ ಕಂಟೋನ್ಮೆಂಟ್ ಎರಡೂ ಕಡೆ ಬಲು ಪ್ರಭಾವೀ ವರ್ಚಸ್ಸು ಹೊಂದಿದ್ದರು. ಪೌರಾಡಳಿತ ಹಾಗೂ ಸೇನಾಡಳಿಗಳ ಈ ನಂಟನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಒಳಿತಿಗಾಗಿಯೇ ಸದಾ ದುಡಿಯುತ್ತಿದ್ದರು. ಕ್ರೈಸ್ತಧರ್ಮದ ಬೋಧಕರಾಗಿ ನಿಜವಾದ ಸಂನ್ಯಾಸ ಜೀವನ ನಡೆಸುತ್ತಿದ್ದ ತಬಾ ಅವರು ತಮಗಾಗಿ ಏನನ್ನೂ ಕೇಳುತ್ತಿರಲಿಲ್ಲ. ಕೇಳುತ್ತಿದ್ದುದೆಲ್ಲ ಸಮಾಜಕ್ಕೆ ಮಾತ್ರ. ದಿನದ ಪ್ರತಿ ಕ್ಷಣವೂ ಸಮಾಜದ ದುರ್ಬಲರ ಏಳಿಗೆಗಾಗಿಯೇ ದುಡಿಯುತ್ತಿದ್ದರು. ಯುವಕರು ತಮ್ಮ ಕಾಲ ಮೇಲೆ ನಿಲ್ಲಲು ಹಣ ಸಹಾಯ ಮಾಡುತ್ತಿದ್ದರು. ದೊಡ್ಡವರು ದಾರಿ ತಪ್ಪಿದಾಗ ಕರೆದು ಬುದ್ಧಿ ಹೇಳುತ್ತಿದ್ದರು. ಫಿನ್ಸ್ (ಫ್ರೆಂಡ್ಸ್ ಇನ್ ನೀಡ್ ಸೊಸೈಟಿ) ಯನ್ನು ಹುಟ್ಟುಹಾಕಿ ಬಡಬಗ್ಗರಿಗೆ ಕೌಶಲ್ಯದ ತರಬೇತಿ ನೀಡಿ ಆರ್ಥಿಕ ಸ್ವಾವಲಂಬನೆ ನೀಡಿದರು.

ಅನುಪಮ ವಿದ್ವಾಂಸ
ಇವೆಲ್ಲದರ ಜೊತೆಗೆ ಅವರು ವಿಜ್ಞಾನ, ಗಣಿತ ಮತ್ತು ಇತಿಹಾಸಗಳ ಪ್ರಕಾಂಡ ವಿದ್ವಾಂಸರಾಗಿದ್ದರು. ಅವರ ಕೆಲ ವಿದ್ವತ್ ಲೇಖನಗಳ ಶೀರ್ಷಿಕೆಗಳೇ ಅವರ ಅಧ್ಯಯನ ಕ್ಷೇತ್ರದ ವ್ಯಾಪ್ತಿಯನ್ನು ಸಾರುತ್ತವೆ.
1.                  Talakad, the burried city
2.                  Tipu Sultan’s Embassy to the French Court
3.                  The birth of Buddha
4.                  Savandurga
5.                  Sravanabelagola
6.                  The founder of Bangalore
7.                  Indian Tales
8.                  Kapilavastu & Siam
ಮೇಲಿನ ಪಟ್ಟಿಯನ್ನು ನೋಡಿದರೆ ತಮ್ಮೆಲ್ಲ ಬಿಡುವಿಲ್ಲದ ಕೆಲಸಗಳ ನಡುವೆಯೂ ಅವರು ಇಂಥ ವಿಷಯಗಳ ಅಧ್ಯಯನಕ್ಕೆ ಹೇಗೆ ಸಮಯ ಮೀಸಲಿಟ್ಟಿದ್ದರೆಂದು ಅಚ್ಚರಿಯಾಗುತ್ತದೆ. Essay on Gunadhya and Brihatkatha ಎಂಬುವುದು ಫೆಲಿಕ್ಸ್ ಲಕೋತ್ ಬರೆದ ಫ್ರೆಂಚ್ ಪುಸ್ತಕದ ಅನುವಾದವಾಗಿದೆ.
ತಬಾ ಅವರ ಸಮಾಜಮುಖಿ ವ್ಯಕ್ತಿತ್ವ ಹಾಗೂ ವಿಜ್ಞಾನದ ಪ್ರಸಾರದಲ್ಲಿನ ಅವರ ಪಾತ್ರವನ್ನು ಗುರುತಿಸಿ ಇಂಡಿಯಾ ಸರ್ಕಾರವು ಅವರಿಗೆ ’ಕೈಸೆರ್ ಇ ಹಿಂದ್’ ಎಂಬ ಬಿರುದು ನೀಡಿ ಗೌರವಿಸಿತು. ಅಂತೆಯೇ ಮೈಸೂರು ಪ್ರಾಂತ್ಯದ ಆಚಾರ ವಿಚಾರಗಳು ಇತಿಹಾಸ ಮತ್ತು ಪುರಾತತ್ವಗಳನ್ನು ಬಿಂಬಿಸಿದ ರೀತಿಯನ್ನು ಮೆಚ್ಚಿ ಮೈಸೂರು ದರ್ಬಾರು ’ರಾಜಸಭಾಭೂಷಣ’ ಎಂಬ ಬಿರುದಿನೊಂದಿಗೆ ಪುರಸ್ಕರಿಸಿತು.

ಕೊನೆಗಳಿಗೆ
೧೯೨೪ರ ವೇಳೆಗೆ ತಬಾ ಅವರ ಆರೋಗ್ಯ ಹದಗೆಟ್ಟಾಗ ವೈದ್ಯರ ಸಲಹೆಯ ಮೇರೆಗೆ ಅವರು ಸ್ವದೇಶವಾದ ಫ್ರಾನ್ಸಿಗೆ ತೆರಳಿ ಆರೋಗ್ಯ ಸುಧಾರಿಸಿಕೊಂಡರು. ಮತ್ತೆ ಇಂಡಿಯಾಕ್ಕೆ ಹಿಂದಿರುಗಿ ಮುನ್ನಿನಂತೆ ಚಟುವಟಿಕೆಗಳಲ್ಲಿ ನಿರತರಾಗಿದ್ದಂತೆಯೇ ೧೯೨೬ರ ಜುಲೈ ೨ರಂದು ಸ್ವರ್ಗವಾಸಿಯಾದರು. ಮಾರ್ಥಾಸ್ ಆಸ್ಪತ್ರೆಯಿಂದ ಸಂತ ಪ್ಯಾಟ್ರಿಕ್ ದೇವಾಲಯದವರೆಗೆ ನಡೆದ ಅವರ ಅಂತಿಮ ಯಾತ್ರೆಯಲ್ಲಿ ಮೈಸೂರಿನ ಯುವರಾಜರು, ಬ್ರಿಟಿಷ್ ರೆಸಿಡೆಂಟರು, ಎಲ್ಲ ಸರ್ಕಾರಿ ಅಧಿಕಾರಿಗಳು ಸೇನಾ ಅಧಿಕಾರಿಗಳು, ಪ್ರಜೆಗಳು ಮಕ್ಕಳೊಡಗೂಡಿದ ಅಪಾರ ಜನಸ್ತೋಮ ದುಃಖ ಗೌರವಗಳಿಂದ ಹೆಜ್ಜೆಹಾಕಿದರು. ಸಂತ ಪ್ಯಾಟ್ರಿಕ್ಕರ ದೇವಾಲಯದ ದ್ವಾರದಲ್ಲಿ ರೋಮ್ ಪ್ರತಿನಿಧಿಯಾಗಿ ಕಾರ್ಡಿನಲ್ ಮೋನೆ, ಬಿಷಪರುಗಳಾದ ದೇಪಾಟ್ಯುರ್ ಹಾಗೂ ವಿಸ್ಮಾರಾ ಅವರು ಗನ್ ಕ್ಯಾರೇಜ್ ಮೇಲಿನ ತಬಾ ಅವರ ಪಾರ್ಥಿವ ಶರೀರವನ್ನು ಸ್ವೀಕರಿಸಿ ದೇವಾಲಯದೊಳಕ್ಕೆ ಕೊಂಡೊಯ್ದು ಅಂತಿಮವಿಧಿಗಳನ್ನು ನೆರವೇರಿಸಿದರು. ದೇವಾಲಯದ ಬಲ ಪೂಜಾಂಕಣದಲ್ಲಿನ ಪಾಪಿಗಳಾಶ್ರಯ ಸಂತ ಮರಿಯಮ್ಮನವರ ಸ್ವರೂಪದ ಮುಂದಿನ ನೆಲದಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ತಬಾ ಅವರನ್ನು ಮಣ್ಣು ಮಾಡಲಾಯಿತು. ತಾಯಿ ಮರಿಯಮ್ಮನೊಂದಿಗಿನ ಭಾವನಾತ್ಮಕ ಬಾಂಧವ್ಯದಿಂದ ಅವರು ಸದಾ ಅಲ್ಲಿ ಮೊಣಕಾಲೂರಿ ಜಪಿಸುತ್ತಿದ್ದರು. ಈಗ ಅದೇ ತಾಯಿಯ ಚರಣದಲ್ಲಿ ಚಿರನಿದ್ರೆಯಲ್ಲಿ ಮಲಗಿದ್ದಾರೆ. ವಿಪರ್ಯಾಸವೆಂದರೆ ಮಾತೆ ಮರಿಯಳ ಪ್ರತಿಮೆಯ ಬದಲಿಗೆ ಅಲ್ಲಿ ಈಗ ಸಂತ ಜೋಸೆಫರ ಪ್ರತಿಮೆಯಿದೆ.
ಅವರ ಮರಣಾನಂತರ ರಾಯಲ್ ಏಷಿಯಾಟಿಕ್ ಸೊಸೈಟಿಯು ವಿಶೇಷ ಪುರವಣಿಯನ್ನು ಹೊರತಂದು ಅವರನ್ನು ಸ್ಮರಿಸಿಕೊಂಡಿತು. (Journal of the Royal Asiatic Society, October 1926 58: pp 807-807)

ಚರ್ಚಿನ ಪೋಷಕ
ತಬಾ ಅವರು ಸಂತ ಪ್ಯಾಟ್ರಿಕ್ಕರ ಚರ್ಚಿನ ಮುಂಭಾಗವನ್ನು ಸುಂದರಗೊಳಿಸಿ ಎರಡು ಗಗನಚುಂಬಿ ಗೋಪುರಗಳನ್ನು ನಿರ್ಮಿಸಿದ್ದಲ್ಲದೆ ಚರ್ಚಿನ ಎರಡು ರೆಕ್ಕೆಗಳಂತೆ ಪೂಜಾಂಕಣಗಳನ್ನೂ ರಚಿಸಿದರು. ಅವರು ಮಾಡಿದ ಮತ್ತೊಂದು ಮಹತ್ತರ ಕಾರ್ಯ ಪವಿತ್ರ ಹೃದಯಾಲಯವನ್ನು ಕಟ್ಟಿದ್ದು. ಆಗೆಲ್ಲ ಭಾನುವಾರ ಒಂದೇ ಪೂಜೆ ಇರುತ್ತಿತ್ತಾದ್ದರಿಂದ ಸಂತ ಪ್ಯಾಟ್ರಿಕ್ಕರ ದೇವಾಲಯದಲ್ಲಿ ಆ ದಿನ ವಿಪರೀತ ಸಂದಣಿ ಏರ್ಪಡುತ್ತಿತ್ತು. ಸ್ಕಾಟ್ಲೆಂಡ್ ಯೋಧರು ಕಟ್ಟಿದ ಈ ಪ್ರಧಾನಾಲಯದಲ್ಲಿ ಬಿಳಿಯರ ಅಸಹನೆ ಹಾಗೂ ಸ್ಥಳೀಯರ ಕೀಳರಿಮೆಗಳು ಮೇಳವಿಸಿ ಕ್ರೈಸ್ತ ತತ್ವಾದರ್ಶಗಳು ಕದಡುವ ಅಪಾಯವಿತ್ತು. ತಬಾ ಅವರು ರಿಚ್ಮಂಡ್ ರಸ್ತೆಯ ಕೊನೆಯಲ್ಲಿನ ಕಾಡಿನ ಭಾಗವನ್ನು ಮಿಲಿಟರಿ ಅಧಿಕಾರಿಗಳಿಂದ ಕೇಳಿ ಪಡೆದು ಅಲ್ಲೊಂದು ಭವ್ಯವಾದ ಚರ್ಚ್ ಕಟ್ಟಿದರು. ಆ ಜಾಗದಂಚಿನಲ್ಲಿ ಗುರುಗಳ ಸಮಾಧಿಭೂಮಿಗೆಂದು ಮೊದಲೇ ಒಂದಿಷ್ಟು ಜಾಗ ಪಡೆಯಲಾಗಿತ್ತು.
ಕಬ್ಬನ್ ಪೇಟೆಯಲ್ಲಿ ೧೮೦೦ರಲ್ಲೇ ಒಂದು ಚರ್ಚ್ ಇತ್ತಾದರೂ ಕಾಲದ ತುಳಿತದಲ್ಲಿ ನಲುಗಿತ್ತು. ಚರ್ಚಿನೊಂದಿಗೆ ಸಮಾಧಿಭೂಮಿಯೂ ಮಾಯವಾಗಿ ಒಂದಿಷ್ಟು ಚೂರುಪಾರು ಉಳಿದುಕೊಂಡಿತ್ತು. ತಬಾ ಅವರು ಆ ಪುರಾತನ ಚರ್ಚಿನ ಮರುನಿರ್ಮಾಣಕ್ಕಾಗಿ ೧೫೦೦೦ ರೂಪಾಯಿಗಳ ನಿಧಿಯನ್ನು ಕಾದಿರಿಸಿದರು. ಅವರು ಸತ್ತ ಮೂವತ್ತು ವರ್ಷಗಳ ನಂತರ ನೂತನ ದೇವಾಲಯದ ಅವರ ಕನಸು ನನಸಾಯಿತು.  ಆ ನನಸೇ ಇಂದಿನ ಸಂತ ತೆರೇಸಮ್ಮನವರ ದೇವಾಲಯ.
ಮೈಸೂರಿನ ದೋರನಹಳ್ಳಿ ಸಂತ ಅಂತೋನಿಯವರ ತೀರ್ಥಸ್ಥಳಕ್ಕೂ ತಬಾ ಅವರ ಕೊಡುಗೆಯಿದೆ. ಆಗ ದೋರನಹಳ್ಳಿಗಾಗಿ ನಿರ್ಮಿಸಲಾಗಿದ್ದ ರೈಲುನಿಲ್ದಾಣದಿಂದ ಚರ್ಚಿನವರೆಗೆ ದಾರಿಯೇ ಇರಲಿಲ್ಲ. ರೈಲಿಳಿದ ಜನರು ಹೊಲಗದ್ದೆಗಳ ಮಣ್ಣಿನಲ್ಲಿ ನಡೆಯುತ್ತಾ ನಾಲ್ಕೈದು ಕಿಲೊಮೀಟರು ಕ್ರಮಿಸಬೇಕಿತ್ತು. ಜನರ ಈ ಗೋಳು ತಬಾ ಅವರಿಗೆ ತಿಳಿದಿದ್ದೆ ತಡ ಅವರು ತಕ್ಷಣವೇ ಕಾರ್ಯೋನ್ಮುಖರಾಗಿ ಸರ್ಕಾರದಿಂದ ರಸ್ತೆಯೊಂದನ್ನು ಮಂಜೂರು ಮಾಡಿಸಿದರಲ್ಲದೆ ಯಾತ್ರಿಗಳ ವಸತಿಗಾಗಿ ಒಳ್ಳೇ ಮೊತ್ತದ ಹಣವನ್ನೂ ಕಳಿಸಿದರು.
ಅಂದಿನ ಅವಿಭಜಿತ ಧರ್ಮಪ್ರಾಂತ್ಯವು ಸ್ವಾವಲಂಬಿಯಾಗಲು ನಿಧಿ ಸಂಗ್ರಹ ಮಾಡಿಟ್ಟರು. ಅವರು ಕೂಡಿಸಿದ ಹಣವೇ ಬೆಂಗಳೂರು ಮೈಸೂರು ಧರ್ಮಪ್ರಾಂತ್ಯಗಳನ್ನು ಹಲವು ದಶಕಗಳ ಕಾಲ ಮುನ್ನಡೆಸಿತೆಂಬುದೇ ಅತಿಶಯ.

ಕಾಮೆಂಟ್‌ಗಳಿಲ್ಲ: