ಶನಿವಾರ, ಜೂನ್ 30, 2012

ಪಿಯೆಟಾ


ನಮ್ಮ ನಾಡಿನ ಸಂಸ್ಕೃತಿಯಲ್ಲಿ ಹೆಣ್ಣು ಶಕ್ತಿದೇವತೆಯಾಗಿ ಹಲವು ರೂಪಗಳಲ್ಲಿ ಕಾಣಿಸುತ್ತಾಳೆ. ಅಟ್ಟಿಲಕ್ಕಮ್ಮ, ದಂಡು ಮಾರಮ್ಮ, ಜಲಗೇರಮ್ಮ, ಕಬ್ಬಾಳಮ್ಮ ಅಕ್ಕಯ್ಯಮ್ಮ, ಮಾಂಕಾಳಮ್ಮ, ಮಾಸ್ತಮ್ಮ, ಎಂದು ಮುಂತಾಗಿ ಪೂಜೆಗೊಳ್ಳುವ ಆಕೆ ರೋಗ ಪೀಡೆಗಳ ಹೆಸರಿನಲ್ಲಿ ಭಕ್ತರನ್ನು ಹೆದರಿಸುತ್ತಾಳೆ.  ದೊಡ್ಡಮ್ಮ, ಚಿಕ್ಕಮ್ಮ, ಪ್ಲೇಗಮ್ಮ, ಗದ್ದಕಟ್ಟಮ್ಮ ಇತ್ಯಾದಿಯಾಗಿ ರೋಗರುಜಿನಗಳಿಂದ ಭಾಧಿತರಾದಾಗ ಅದೇ ಹೆಸರಿನ ಮಾತೆಯಾಗಿ ಅಭಯ ನೀಡುತ್ತಾಳೆ.
ಆ ಮಾತೃಶಕ್ತಿಯ ಇನ್ನೊಂದು ರೂಪವೇ ಮೇರಿಮಾತೆ. ನಿಜ ಹೇಳಬೇಕೆಂದರೆ ಈ ಮೇರಿಮಾತೆ ಎಂದೂ ಯಾರನ್ನೂ ಹೆದರಿಸಿದ್ದೇ ಇಲ್ಲ. ಶರಣುಬಂದ ಪಾಪಿಗೂ ಆಕೆ ಅಭಯದಾಯಿನಿಯೇ. ಪಾಶ್ಚಾತ್ಯರಿಗೆ ಆಕೆ ಸಮುದ್ರದ ನಕ್ಷತ್ರವಾಗಿ, ಗಹನವಾದ ರೋಜಾಪುಷ್ಪವಾಗಿ ಸ್ವರ್ಗದೂತರ ರಾಣಿಯಾಗಿ ಕಂಗೊಳಿಸಿದರೆ ನಮ್ಮ ದೇಶಸ್ತರಿಗೆ ಮರಿಯಮ್ಮ, ಸತ್ಯಮ್ಮ, ದೇವಮಾತೆ, ಆರೋಗ್ಯಮಾತೆ, ಬಡವರ ಮಾತೆ, ಕರುಣೆಯ ತಾಯಿ, ಭರವಸೆಯ ಬೆಳಕು, ನಿತ್ಯ ಸಹಾಯದಾತೆ ಆಗಿದ್ದಾಳೆ.
ಇದೇ ಸಾಲಿನಲ್ಲಿ ವ್ಯಾಕುಲಮಾತೆ ಎಂಬ ಹೆಸರೂ ಸಹ ಕೇಳಿಬರುತ್ತಲ್ಲವೇ? ವಿಶ್ವವಿಖ್ಯಾತ ಶಿಲ್ಪಿ ಮೈಕೆಲ್ ಆಂಜೆಲೊ ಕಡೆದ ’ಪಿಯೆಟಾ’ ಎಂಬ ದೃಶ್ಯಕಾವ್ಯವೇ ಈ ವ್ಯಾಕುಲಮಾತೆ. ಪಿಯೆಟಾ ನಮಗಾಗಿ ಬಾಯ್ದೆರೆದು ಏನನ್ನೂ ಹೇಳುವುದಿಲ್ಲ. ಸ್ನಿಗ್ದ ಮೊಗದ ಮರಿಯಾ ಮಾತೆಯ ಮುಚ್ಚಿದ ತುಟಿಗಳು ಕಟ್ಟಿಕೊಡುವ ಭಾವನೆಗಳೇ ಅನೂಹ್ಯ. ಮಾತುಗಳಿಗೆ ನಿಲುಕದ ಭಾವನೆಗಳಿಗೆ ಸಿಲುಕದ ಅಮೃತಶಿಲೆಯ ಸ್ವರೂಪವು ಪ್ರತಿನಿಧಿಸುವ ಪ್ರತಿಮೆಯಾದರೂ ಏನು? ಒಬ್ಬ ತಾಯಿ ತನ್ನ ಮಗನ ಕಳೇಬರವನ್ನು ಮಡಿಲಲ್ಲಿಟ್ಟುಕೊಂಡು ಜಗತ್ತಿನೆಡೆಗೆ ಬೀರುವ ದೃಷ್ಟಿಯಾದರೂ ಎಂಥದು? ಅದು ಕೇಳುವ ಪ್ರಶ್ನೆಯಾದರೂ ಏನು? ನೀಡುವ ಸಂದೇಶವಾದರೂ ಹೇಗಿರಬಹುದು?
’ಅವನು ಹೇಳಿದಂತೆ ಮಾಡಿ’ ಎಂದಾಗ ಆ ಸೇವಕರು ಕೊಡ ಕೊಡ ನೀರು ಹೊತ್ತು ತಂದು ಬಾನಿಗಳನ್ನು ತುಂಬಿಸಿದರಲ್ಲ. ಅವನ ಸ್ಪರ್ಶವೊಂದರಿಂದಲೇ ಆ ನೀರು ಪರಿಶುದ್ಧ ದ್ರಾಕ್ಷಾರಸವಾಯಿತಲ್ಲ! ಅದಕ್ಕಿಂತಲೂ ಪರಿಶುದ್ಧವಾದ ಪ್ರೀತಯ ನಗುವನ್ನು ಕರುಣೆಯ ಸಿಂಚನವನ್ನು ಹಂಚಿದವನಿಗೆ ಶಿಲುಬೆಯಲ್ಲಿ ನೇತುಹಾಕಿ ಕೊಂದಿರಲ್ಲ! ಏನಿದು ಜಗದ ವಿಚಿತ್ರ? ಸೋದರತೆಗಿಲ್ಲಿ ನೆಲೆಯೇ ಇಲ್ಲವೇ? ಸತ್ತಿರುವುದು ನನ್ನ ಮಗನಲ್ಲ, ನಿಮ್ಮಂತರಾತ್ಮಗಳು ಎಂದು ಹೇಳುತ್ತಿರಬಹುದೇ ಆ ತಾಯಿ? ಈ ಪ್ರತಿಮೆಯಲ್ಲಿ ಮಾತು ಮೌನವಾಗಿ, ವಾತ್ಸಲ್ಯದ ಕಂಬನಿ ಬತ್ತಿಹೋಗಿ, ಮಮತೆಯ ಕಡಲು ಹೆಪ್ಪುಗಟ್ಟಿ ಮನುಷ್ಯತ್ವದ ಹುಡುಕಾಟ ನಡೆಸಿದೆ.

ಪಿಯೆಟಾ
ಹಾಲುಗಲ್ಲಿನ ತುಟಿಗಳಲಿ
ಅನೂಹ್ಯ ಭಾವನೆಗಳ ಮಿಡುಕುತಿಹ
ವ್ಯಾಕುಲವೇ ಮೈವೆತ್ತ ಶಿಲ್ಪಕಾವ್ಯವೇ

ಶತಮಾನಗಳ ಕಾಲಡಿಯಲ್ಲಿ ಹೊಸಕಿಹೋದ ಮಾನವತೆಯ
ಕಳೇಬರವ ಮಡಿಲಿಗೇರಿಸಿ ಪ್ರೀತಿಯಿಂ ನೇವರಿಸುತಿಹ
ಜಗದಾಕ್ರಂದನದ ಮೂಕದನಿಯೇ?

ಅಣ್ಣನೊಬ್ಬ ದುರುಳನಾಗಿ ತೋಳಕಿಂತ ಖೂಳನಾಗಿ
ಪ್ರೀತಿನಗು ಮಾಸಿಹೋಗಿ ತುಮುಲದಲಿ ಬಂಧಿಯಾಗಿ
ತಮ್ಮನನ್ನೇ ಬೇಟೆಯಾಡಿ ಹೊಸಕಿರುವುದ ನೋಡಿ ನೋಡಿ
ಮರುಗಿಹೆಯಾ ತಾಯಿ?

ಜೀವಾತ್ಮನನು ಕೊಂದು ಸತ್ಯವನು ತುಳಿದು
ಗೆದ್ದಿರುವೆವು ತಾವೆಂದು ಜಗ ಭ್ರಮಿಸುತಿರೆ
ಸತ್ತಿರುವುದೆನ್ನ ಮಗನಲ್ಲ ಸತ್ಯಕ್ಕೆ ಸಾವಿಲ್ಲ
ಸತ್ತಿವೆ ನಿಮ್ಮಂತರಾತ್ಮಗಳು ಎನುತಿಹೆಯಾ ತಾಯಿ?

ಬಿತ್ತವದು ತಾ ಸತ್ತು ಮತ್ತೆ ಜೀವವ ತಳೆದು
ಕುಡಿಯೊಡೆದು ಸಸಿಯಾಗಿ ಮರನಾಗಿ ಬೆಳೆದು
ಜಗಕೆಲ್ಲ ನೆರಳಾಗಿ ಶಾಂತಿ ಕಹಳೆಯ ಮೊಳಗಿ
ಮನುಜ ಪ್ರೇಮದ ನುಡಿಯ ದೇಶದೇಶದಿ ಬೆಳಗಿ

ಸಹನೆಗಿರಲಿ ಹೆಸರು ಮರಿಯಳೆಂದು
ಕ್ರಿಸ್ತನುದಯಿಸಲಿ ಮತ್ತೆ ಜಗದಲಿಂದು
ದ್ವೇಷ ಹಗೆ ಮತ್ಸರ ತೊಡೆದುಹೋಗಿ
ಪ್ರೀತಿಸುಧೆಯ ಹೊಂಬೆಳಗು ಚೆಲ್ಲುತಿರಲಿ
ಅಮ್ಮನೆಂಬ ಮಲ್ಲಿಗೆಯ ಹೂವರಳಿ.

ಕಾಮೆಂಟ್‌ಗಳಿಲ್ಲ: