ಸೋಮವಾರ, ನವೆಂಬರ್ 19, 2012

ಶಿರಡಿಯ ಊಟ


ಅವರಂಗಾಬಾದ್ ನಿಂದ ಬೆಂಗಳೂರಿಗೆ ನೇರ ರೈಲು ಇಲ್ಲ. ಸುಮಾರು ನೂರು ಕಿಲೊಮೀಟರು ದೂರದಲ್ಲಿರುವ ಅಹಮದ್ ನಗರ ಅಥವಾ ಕೋಪರ್ಗಾಂವ್ ತಲಪಿದರೆ ದೆಹಲಿಯಿಂದ ಬರುವ ಕರ್ನಾಟಕ ಎಕ್ಸ್‌ಪ್ರೆಸ್ ಹಿಡಿಯಬಹುದು ಎಂದು ನನ್ನ ಲೆಕ್ಕಾಚಾರ. ಹೇಗೂ ಬಂದಿದ್ದೀವಿ ಶಿರಡೀನೂ ನೋಡಿಬಿಡೋಣ ಎಂಬುದು ಅಮ್ಮಮಗಳ ಅಭಿಪ್ರಾಯ. ಆದೂ ಆಗಿಬಿಡಲಿ ಎಂದು ಬಸ್ ಹತ್ತಿಕೊಂಡು ಶಿರಡಿ ತಲಪಿದಾಗ ರಾತ್ರಿ ಹತ್ತು ಗಂಟೆ. ಆಹಾ ಏನು ಸುಂದರ ತಾಣ, ಎಷ್ಟು ಒಳ್ಳೆಯ ಜನ, ಪ್ರಶಾಂತ ವಾತಾವರಣ, ಜನರೆಲ್ಲ ಪ್ರೀತಿವಿಶ್ವಾಸದಿಂದ ಕರೆದೂ ಕರೆದೂ ತಮ್ಮಲ್ಲೇ ವಾಸ್ತವ್ಯ ಹೂಡಿ ಎಂದು ಆತಿಥ್ಯ ಮೆರೆಯುವ ಪರಿ ಕಂಡು ಬೆಕ್ಕಸಬೆರಗಾದೆವು.
ಹೆಂಗಸರ ಜೊತೆ ಲಗೇಜು ಹೊತ್ತುಕೊಂಡು ರೂಮುಗಳಿಗಾಗಿ ಪರದಾಡಿದ್ದೇ ಬಂತು. ಇರುವುದೊಂದೇ ರೂಮು, ಇನ್ನು ಸ್ವಲ್ಪ ಹೊತ್ತು ಹೋದರೆ ಅದೂ ಇಲ್ಲ, ಸಾವಿರ ರೂಪಾಯಿ ಮಡಗಿ, ಬೆಳಗ್ಗೆ ಹತ್ತು ಗಂಟೆಗೆ ಚೆಕ್ಕೌಟು ಎಂಬ ಒಲವಿನ ಮಾತುಗಳಿಗೆ ಸೋಲದವರುಂಟೇ? ಸೋಲಲೇಬೇಕಾಯಿತು.
ಯಾವುದೇ ಪುಣ್ಯಕ್ಷೇತ್ರದ ಅಥವಾ ಪ್ರವಾಸಿ ತಾಣದ ಪಾಡೇ ಹೀಗೆ. ಪ್ರವಾಸಿಗರು ಬರುವುದೇ ಸುಲಿಗೆಗಾಗಿ ಎಂದು ಭಾವಿಸುವ ಸ್ಥಳೀಯರು.
ಸತ್ರದಲಿ ನೇಮದಿಂದಿರಲಿಕೆಡೆಯುಂಟು . . ಕಾಲಿಟ್ಟೆಡೆ ಕುಂಕುಮ ಬಳೆಯ ಚೂರುಗಳಿವೆ ಎಚ್ಚರ, ಗೋಡೆಗೆ ತಾಗದಿರಿ ಮೈಲಿಗೆಯಾದೀತು, ಮನೆಯಿಂದ ತಂದ ಹೊದಿಕೆ ಇದೆ ತಾನೇ ಹಾಸಿಕೊಳ್ಳಿ, ಬಚ್ಚಲು ವಾಸನೆಯೆಂದು ನೀರು ಚೆಲ್ಲದಿರಿ ಆಮೇಲೆ ತತ್ವಾರ, ಬಿಸಿನೀರು ಕೇಳಬೇಡಿ ಗೀಸರ್ ಇದೆ ಅಲಂಕಾರಕ್ಕೆ, . .  ಹತ್ತಾಯ್ತು ಹೊರಡೆನೆ ತೆರಳಿದೊಡೆ ಪಾರುಪತ್ಯದವ ಮೆಚ್ಚುವನು ಮಂಕುತಿಮ್ಮ.
ಬೆಳಗ್ಗೆ ರೂಮು ಖಾಲಿ ಮಾಡಿ ಐದು ಕಿಲೊಮೀಟರು ದೂರದ ರಾಹತಾ ಎಂಬ ಊರಿಗೆ ಸಾರೋಟಿನಲ್ಲಿ ಹೋಗಿ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನಲ್ಲಿ ಪೂಜೆಗೆ ಕುಳಿತಾಗ ಏನೋ ನೆಮ್ಮದಿ. ಮರಾಠಿ ಭಾಷಿಕರ ನಡುವೆ ಆಪ್ತ ಪೂಜಾರ್ಪಣೆ.
ಸಾಯಿಬಾಬಾ ಮಂದಿರದಲ್ಲಿ ಚಪ್ಪಲಿ, ಮೊಬೈಲು, ಕ್ಯಾಮೆರಾಗೆ ಪ್ರವೇಶವಿಲ್ಲ, ಇವನ್ನೆಲ್ಲ ಧರಿಸಿಕೊಂಡು ನಾನು ಪ್ರವೇಶವಾಗದೆ ಇವರಿಬ್ಬರನ್ನು ಮಾತ್ರವೇ ಪ್ರವೇಶಗೊಳಿಸಿದೆ. ಆ ಸಾಲಂತೂ ಸುಮಾರು ಒಂದು ಕಿಲೋಮೀಟರಿನಷ್ಟು ಉದ್ದದ ಅನಕೊಂಡಾ ಆಗಿತ್ತೆಂದೂ ದರ್ಶನಪ್ರಾಪ್ತಿಯಿಂದ ಆಗುವುದೇನೂ ಇಲ್ಲವೆಂದೂ ಸ್ವಲ್ಪಹೊತ್ತಿನಲ್ಲೇ ಅವರು ಹೊರಬಂದರು. ಆದರೆ ಭೋಜನಗೃಹದವರು ಮಾತ್ರ ಬೇಜಾರು ಮಾಡಿಕೊಳ್ಳಬೇಡಿ ಊಟ ಮಾಡಿಕೊಂಡೇ ಹೋಗಿ ಎಂದು ನೇರವಾಗಿ ನಮ್ಮ ಹೊಟ್ಟೆಯನ್ನೇ ಆಹ್ವಾನಿಸಿದ್ದರಿಂದಲೂ ಹೊರಗಡೆ ಇದ್ದ ಹೋಟೆಲು ಖಾನಾವಳಿಗಳು ಸಕತ್ ಹೈಜೀನ್ ಆಗಿದ್ದರಿಂದಲೂ ವಿಧಿಯಿಲ್ಲದೆ ಬಾಬಾ ಊಟದ ಮನೆಯೊಳಕ್ಕೆ ತೂರಿಕೊಂಡೆವು. ಒಟ್ಟಿಗೆ ಎರಡೂವರೆ ಸಾವಿರ ಮಂದಿ ಕೂತು ಊಟ ಮಾಡಬಹುದಾದ ಬಹುದೊಡ್ಡ ಅಂಕಣ. ಪೂರಿ ಅನ್ನ ಸಾರು ಗೊಜ್ಜು ಒಂದು ಸಿಹಿ ಹೊಟ್ಟೆ ತುಂಬುವಷ್ಟು ಬಡಿಸಿ ಕಳಿಸಿದರು. ಬಾಬಾ ಚೆನ್ನಾಗಿರಲಿ.
ಅಲ್ಲಿಂದ ಒಂದು ಶೇರಿಂಗ್ ರಿಕ್ಷಾ ಮಾಡಿಕೊಂಡು ನಾಲ್ಕು ಗಂಟೆಯ ವೇಳೆಗೆ ಕೋಪರಗಾಂವ್ ತಲಪಿದ ಸ್ವಲ್ಪ ಹೊತ್ತಿಗೇ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಬಂತು.