ಭಾನುವಾರ, ನವೆಂಬರ್ 25, 2012

ನನ್ನ ಬಾಲ್ಯಕಾಲದ ಕೆಲ ನೆನಪುಗಳು


ನನ್ನ ಬಾಲ್ಯಕಾಲದ ಹೆಚ್ಚಿನ ದಿನಗಳು ಸಂತ ರಾಯಪ್ಪರ ಗುರುಮಠದ ಹಿಂಬದಿಯಲ್ಲಿನ ನೀಲಗಿರಿ ಮರದ ತೋಪಿನಲ್ಲೇ ಕಳೆದವು. ಆ ತೋಪಿನಲ್ಲಿ ನೀಲಗಿರಿಯಷ್ಟೇ ಅಲ್ಲ ಹೊಂಗೆ, ನೇರಳೆ, ಮಾವು, ಬೇವು, ಸಿರಿಗಂಧ, ಕತ್ತಿಕಾಯಿ, ಹೂವರಸಿ, ಸಾರುವೆ, ಬಾದಾಮಿ, ಜಾಲಿ, ಸೀಬೆಕಾಯಿ, ಸೀತಾಫಲ, ಚಕ್ಕೋತ ಹಾಗೂ ಇನ್ನೂ ಎಷ್ಟೋ ಹೆಸರು ಗೊತ್ತಿಲ್ಲದ ಮರಗಳಿದ್ದವು. ಕೆಲವು ಭಾರೀ ಗಾತ್ರದವು ಇನ್ನು ಕೆಲವು ಮರಕೋತಿ ಆಡಬಲ್ಲಂತವು. ಇನ್ನೂ ಕೆಲವು ಮರವೆನ್ನಲಾಗದ ಗಿಡವೂ ಎನ್ನಲಾಗದ ಸಣ್ಣಗಾತ್ರ ಸಸಿಗಳು. ಇವುಗಳ ನಡುವೆ ಸಣ್ಣಸಣ್ಣ ಪೊದೆಗಳು ಬಳ್ಳಿಗಳು ಕಾರೆಗಿಡ ಗಣಿಕೆಹುಲ್ಲು ಗರಿಕೆಹುಲ್ಲು ಅರಳು ತುಂಬೆ ಅಡ್ಡಿಗೆ ಮುಟ್ಟಿದರೆಮುನಿ ಇಂಥವು. ಇವೆಲ್ಲ ಬಹು ಸಹಜವಾಗಿ ಸ್ವೇಚ್ಛೆಯಾಗಿ ಬೆಳೆದು ಸದಾ ಹಸಿರಾಗಿ ಕಂಗೊಳಿಸುತ್ತಾ ಪ್ರಕೃತಿಯಲ್ಲಿ ತಾವೇ ತಾವಾಗಿದ್ದವು. ನಿಸರ್ಗ ಸೌಂದರ್ಯ ಇಲ್ಲಿ ಸಂತಸ ಸಂಭ್ರಮ ಲವಲವಿಕೆಯಿಂದ ಓಲಾಡುತ್ತಿತ್ತು.
ಸೆಮಿನರಿಯ ಮುಂದುಗಡೆಯಲ್ಲಿದ್ದ ಗಿಡಮರಗಳು ಕೃತಕವಾಗಿ ಬೆಳೆಸಿದ್ದಂತವು. ಅಲ್ಲಿ ಅಶೋಕ, ಕ್ರಿಸ್ಮಸ್, ಮೇಫ್ಲವರ್ ಮುಂತಾದ ಮರಗಳು ಲಿಲಿ, ಆಸ್ಟರ್, ಡೇಲಿಯಾ, ಕ್ರೋಟನ್, ರೋಜಾ, ಮನಿಪ್ಲಾಂಟ್ ಮುಂತಾದ ಕುಂಡಗಿಡಗಳು ನಳನಳಿಸುತ್ತಿದ್ದವು. ಇವಕ್ಕೆ ತಪ್ಪದೇ ಪ್ರತಿ ದಿನ ನೀರುಣಿಸಬೇಕಿತ್ತು. ಹಿಂದಿನ ತೋಟದಲ್ಲಿ ಬಾಳೆಗಿಡ ಟೊಮೆಟೊ ಬದನೆ ಬೆಂಡೆ ಸಪೋಟ ಗಿಡಗಳು ಪಡವಲ ಹಾಗಲ ಕುಂಬಳ ಬಳ್ಳಿಗಳು, ಇವಕ್ಕೆಲ್ಲ ತೊಪ್ಪೆಗೊಬ್ಬರ ಹಾಕಿ ಪಾತಿಕಟ್ಟಿ ಪೈಪು ಮೂಲಕ ನೀರು ಹಾಯಿಸಿ ಪೋಷಿಸುತ್ತಿದ್ದ ಸೋಲೂರಿನ ಕೃಷ್ಣ, ಇದ ನಡುವೆ ಬಾಬ್ಬಿ ಎಂಬ ಭರ್ಜರಿ ನಾಯಿ, ಚಪ್ಪಲಿ ಹೊಲೆಯುವ ಹನುಮಂತಯ್ಯ, ಧೋಬಿ ಜೋಸೆಪ್ಪು, ಹಾಲು ಕರೆಯೊ ಮಂದಿ, ಕುಸುನಿಮನೆ ಕೆಲಸಗಾರರು ಇವಾವುದೂ ನನ್ನ ನೆನಪಿನಿಂದ ಮಾಸಿಲ್ಲ.
ಬೆಳಗಾಗೋಕೆ ಮುಂಚೇನೇ ನಮ್ಮ ತಾತ ಅಮೃತರಾಜ್ (ಅಬ್ಬಯ್ಯ) ಎದ್ದು ಓಡಾಡಿ ಕ್ರಿಸ್ತರಾಜರ ದೇವಸ್ಥಾನದ ಗಂಟೇನ ಢಣ್ ಅನ್ನಿಸೋರು. ಮಣಭಾರದ ಗಂಟೇನ ಎಳುದ್ರೆ ಸುಲಭಕ್ಕೆ ಜಗ್ಗಲ್ಲ, ತುಂಬಾನೇ ಶಕ್ತಿ ಬೇಕು, ಅದುನ್ನೇನೂ ಅವರು ಸುಮ್ನೆ ಢಣಢಣಾಂತ ಎಳೆದಾಡ್ತಿರಲಿಲ್ಲ, ತ್ರಿಕಾಲಮಂತ್ರ ಅನ್ತ ಮಣಮಣ ಹೇಳ್ಕೊಂಡು ಮೂರು ಗಂಟೆ ಹೊಡೀತಿದ್ರು ಹೀಗೇ ಸ್ವಲ್ಪ ಹೊತ್ತು ಸುಮ್ನಿದ್ದು ಮತ್ತೆ ಮೂರು ಗಂಟೆ ಹೊಡೀತಿದ್ರು. ಮೂರುಸಾರಿ ಹೀಗೆ ಗಂಟೆ ಹೊಡೆದು ಆಮೇಲೆ ಕೊನೇಗೆ ಢಣಢಣಾ ಅನ್ನಿಸೋರು. ಗಂಟೆ ಹೊಡೆದ್ರೆ ಹೀಗೆ ಒಂದೇ ಸಮನೆ ಒಂದಷ್ಟು ಹೊತ್ತು ಹೊಡೀಬೇಕು ಆ ಸುಮಧುರ ನಿನಾದ ಮುಂಜಾನೆ ಆ ಹೊತ್ತಿನಲ್ಲಿ ಬಹುದೂರದವರೆಗೂ ಅನುರಣಿಸಬೇಕು, ಅದರ ಅನುಭವವೇ ಅನನ್ಯ.
ಚುಮುಚುಮು ಬೆಳಗಾಗ್ತಿದ್ದಂತೆ ಚಿನಕುರುಳಿ ಗುಬ್ಬಿಯೊಂದು ಕೊಂಬೆರೆಂಬೆಗಳ ಮೇಲೆ ಕುಳಿತು ಬಾಲ ಕುಣಿಸ್ತಾ ಪಿಟಿಪಿಟಿಪಿಟಿ ಅನ್ತ ಸದ್ದು ಮಾಡೋದು. ಒಂದು ಚೋಟುದ್ದ ಇರೋ ಹಕ್ಕಿ ಅದೆಷ್ಟು ಚುರುಕಾಗಿ ಎಲೆಗಳ ಮಧ್ಯೆ ಪುಟುಪುಟು ಓಡಾಡ್ಕೊಂಡು ಅದೇನು ಹೂ ನೆಕ್ತದೋ ತಿಂತದೋ ತಿಳೀವಲ್ದು. ಅದೊಂಥರಾ ಕೆಂಪು ಹೂ ಅದೇ ಮೈಯೆಲ್ಲ ಕೆಂಪು ಕೂದಲಿದ್ದು ಹೊಳೆಯುವ ಹೂ, ಗಿಡ ನೋಡಿದ್ರೆ ಹುಣಿಸೇ ಮರದ ಚಿಕ್ಕ ಸಸಿ ಇದ್ದಂಗೆ ಆ ಗಿಡದಲ್ಲಿ ಈ ಹಕ್ಕಿ ಆಟ.
ಅದೆಲ್ಲೋ ಯಾವ್ದೋ ಮರದಲ್ಲಿ ಕೋಗಿಲೆ ಕುಂತ್ಕಂಡು ಕುಹೂ ಅನ್ತ ಕೂಗ್ತಿತ್ತು. ಇನ್ನೆಲ್ಲೋ ಯಾವುದೋ ಮರದಿಂದ ಅದಕ್ಕುತ್ತರ ಬರುತ್ತಿತ್ತು. ಅದೆಲ್ಲಿಂದಲೋ ಒಂದು ವಿಚಿತ್ರ ಹಕ್ಕಿ ಬಾಲ ಎತ್ತಾಕ್ಕೊಂಡು ಕಿರುಚೋಕೆ ಶುರುಮಾಡೋದು. ಕಣ್ಣು ಸುತ್ತಲೂ ಬಿಳಿ ಚುಕ್ಕಿಗಳಿರೋ ಆ ಹಕ್ಕಿ ಟಿಟಿಟಿಟೂ ಟಿಟಿಟಿಟೂ ಅನ್ನುತ್ತಾ ಕೂಗಾಡಿ ಅರಚಾಡಿ ತನ್ನ ಹತ್ತಿರ ಬಂದ ಕಾಗೆಗಳನ್ನು ಓಡಿಸುತ್ತಿತ್ತು. ಆ ಹಕ್ಕಿಯ ಕೂಗು ಅಪ್ಯಾಯಮಾನ.
ಇಷ್ಟರ ನಡುವೆ ಇಬ್ಬನಿ ಸುರಿದ ಹುಲ್ಲಿನ ಮೆಲೆ ಗೊರವಂಕಗಳು ಕುಳಿತು ಹುಳಾ ಹಿಡೀತಿದ್ವು. ನೀಲಗಿರಿ ಮರದ ಮೇಲೆ ಗಿಳಿಗಳು ಚಕ್ಕಂದ ಅಡುತಿದ್ವು, ಗುಡಿಯ ಗಂಟೆ ಗೋಪುರದಲ್ಲಿ ಪಾರಿವಾಳಗಳು ಗುಟುರು ಹಾಕ್ತಿದ್ವು. ಇನ್ಯಾವುದೋ ಮೂಲೆಯಿಂದ ಮುತ್ತಿನಶೆಟ್ಟಿ ಮುತ್ತಿನಶೆಟ್ಟಿ ಅನ್ತ ಹಾಡಿಕೊಳ್ಳುವ ಹಕ್ಕಿ.
ಅರುವತ್ತು ಎಪ್ಪತ್ತರ ದಶಕದ ಆ ಸುಂದರ ಬೆಂಗಳೂರು ಈಗೆಲ್ಲಿದೆ?

ಕಾಮೆಂಟ್‌ಗಳಿಲ್ಲ: