ಅನುವಾದಗಳಲ್ಲಿ
ಹೆಚ್ಚಿನವರು ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಸಂಸ್ಕೃತ ಪದಗಳನ್ನು ಕೊಟ್ಟುಬಿಡುತ್ತಾರೆ. ಕನ್ನಡ
ಪದಗಳಿಗಿಂತ ಅವು ಹೆಚ್ಚಿನ ಮರ್ಯಾದೆ ಗೌರವ ತಂದುಕೊಡುತ್ತದೆಂಬುದು ಅವರ ವಾದ. ಅದು ಹೇಗೆಂದರೆ, WIFE ಎಂಬುದನ್ನು ಅವರು ಪತ್ನಿ/ಭಾರ್ಯೆ ಎಂಬುದಾಗಿ ಅನುವಾದಿಸುತ್ತಾರೆ.
ಹೆಂಡತಿ ಎಂದು ಬರೆದರೆ ಗಂಡನ ಗೌರವ ಕಡಿಮೆಯಾಗುತ್ತದೆಂಬ ಭಾವನೆಯಿರಬಹುದು, ಪತ್ನಿ ಎಂದು ಬರೆದರೆ ಗಂಡ
ಹೆಂಡತಿ ಇಬ್ಬರಿಗೂ ಮರ್ಯಾದೆ ಎಂದೂ ಕೂಡಾ ಇರಬಹುದೇನೋ? ಇಂತಹ ಅನುವಾದವನ್ನು ಒಪ್ಪಿಕೊಳ್ಳಲೇಬೇಕು ಎಂಬಂತ
ಅನಿವಾರ್ಯತೆ ಇಂದು ಸಾರ್ವತ್ರಿಕವಾಗಿಬಿಟ್ಟಿದೆ.
ಹೀಗೆ
ನಾವು ಕನ್ನಡದ್ದೇ ಆದ ಮೂಡಣ ಪಡುವಣಗಳನ್ನು ಬಿಟ್ಟು ಪೂರ್ವ ಪಶ್ಚಿಮ ಎಂದು ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ
ತಮಿಳರ ಭಾಷಾಭಿಮಾನ ಅನುಕರಣೀಯ. RADIOಗೆ ನಮ್ಮವರು ಆಕಾಶವಾಣಿ ಎಂದು
ಹೆಸರಿಟ್ಟರೇನೋ ಸರಿಯೇ, ಆದರೆ ತಮಿಳರು ಅದನ್ನು ವಾನ್ (ಆಗಸ) ಉಲಿ (ವಾಣಿ) ಎಂದರೆ ವಾನುಲಿ ಎಂದು ಕರೆದರು.
ಆಮೇಲೆ ನಮ್ಮ ಕೆಲ ಕೇಂದ್ರಗಳೂ ಬಾನುಲಿ ಎಂದು ಕರೆದುಕೊಂಡವು ಎಂಬುದು ಹಳೆಕತೆ. ನಮ್ಮಲ್ಲೇ TEST
BED ಎಂಬುದನ್ನು ನಮ್ಮ ಸ್ನೇಹಿತರೊಬ್ಬರು ಪರೀಕ್ಷಾತಲ್ಪ ಎಂಬುದಾಗಿ ಅನುವಾದಿಸಿದ್ದರು. ಅವರು ಪರೀಕ್ಷೆ
ನಡೆಸುವ ಹಾಸಿಗೆ ಎಂದು ಮಾಡಬೇಕಿತ್ತು. ಆಗ ಜನರು ಹಾಸಿಗೆಯ ಮೇಲೆ ಅದೆಂಥ ಪರೀಕ್ಷೆ ಎಂದು ಕೇಳುತ್ತಿದ್ದರು.
ಅದು ಕಂಡಿತ ನಗೆಪಾಟಲಿನ ವಿಷಯ. ಅದಕ್ಕೇ ಸುಸಂಸ್ಕೃತರಾದ ಅವರು ಸಂಸ್ಕೃತದ ಮರೆಹೊಕ್ಕು ತಲ್ಪ ಎಂದದ್ದು.
ಪದಶಃ ಅನುವಾದ ಮಾಡಿದರೆ ಆಗೋದೇ ಹೀಗೆ.
ಟೆಸ್ಟ್
ಬೆಡ್ ಎಂಬ ಪದವನ್ನು ನಿಘಂಟು ನೋಡಿ ಅರ್ಥ ಹುಡುಕದೆ ಅದು ಬಳಕೆಯಾಗುತ್ತಿರುವ ಜಾಗ ಎಂಥದು, ಅಲ್ಲೇನು
ಕೆಲಸ ನಡೆಯುತ್ತದೆ ಎಂದು ಅರಿತರೆ ಅನುವಾದ ಸಲೀಸು. ವಿಮಾನಕ್ಕೆ ಇಂಜಿನನ್ನು ಅಳವಡಿಸುವ ಮುನ್ನ ಅದು
ಹಾರಾಟಕ್ಕೆ ಯೋಗ್ಯವೇ ಎಂದು ಪರೀಕ್ಷಿಸುವುದು ಈ ಟೆಸ್ಟ್ ಬೆಡ್ಡಿನಲ್ಲಿಯೇ. ಅಂದ ಮೇಲೆ ವಿಮಾನದ ಎಲ್ಲ
ಮಾನಕಗಳನ್ನೂ ನೆಲದಲ್ಲಿಯೇ ಅಳವಡಿಸಿ ಅದಕ್ಕೆ ತಕ್ಕಂತೆ ಯಂತ್ರವು ವರ್ತಿಸುತ್ತಿದೆಯೇ ಎಂದು ಒರೆಗೆ
ಹಚ್ಚಿ ನೋಡುವುದು. ಆದ್ದರಿಂದ ನಾನು TEST BED ಎಂಬುದನ್ನು ’ಒರೆಪೀಠ’ ಎಂದು ಕರೆದೆ. ಜನ ಅದನ್ನು
ಒಪ್ಪಿಕೊಂಡಿದ್ದಾರೆ.
ಈಗ
ನಾವಿರುವುದು ಇಂಟರ್ ನೆಟ್ ಕಾಲದಲ್ಲಿ. ಇಂಟರ್ನೆಟ್ ಎಂಬ ಪದವನ್ನಾದರೂ ನಾವು ಕನ್ನಡದ ಜಾಯಮಾನಕ್ಕೆ
ತಕ್ಕಂತೆ ರೂಪಿಸಬೇಕಿತ್ತು. ಆದರೆ ಅದು ಅಂತರಜಾಲ ಎಂಬುದಾಗಿ ಬಳಕೆಗೆ ಬಂದುಬಿಟ್ಟಿತು. INTERNATIONAL ಎಂಬುದನ್ನು ಅಂತರ ರಾಷ್ಟ್ರೀಯ
ಎಂಬುದಾಗಿ ಬಳಸಿಕೊಂಡು ಬಂದುಬಿಟ್ಟಿದ್ದೇವೆ. ಅದೇ ನೇರದಲ್ಲಿ INTERNET ಬಳಸಿದ ಮೊದಲಿಗರು ಮೊದಲ ಪದಕ್ಕೆ ಅಂತರ ಎಂದು ಅನ್ವಯಿಸಿದರು.
ಇನ್ನು ಎರಡನೇ ಪದ NET ಎಂಬುದನ್ನು ಬಲೆ ಎನ್ನಬಹುದಾಗಿತ್ತಲ್ಲವೇ? ಇಲ್ಲೂ ಮತ್ತೆ ಸಂಸ್ಕೃತಕ್ಕೆ ಜೀತಗೈಯುವುದು
ಸರಿಯೇ?
ಮೊನ್ನೆಮೊನ್ನೆ
ಕನ್ನಡದ ಕೋಟ್ಯಾಧಿಪತಿಯಲ್ಲಿ TRAIN ಎನ್ನಲು ಕನ್ನಡ ಪದವೇನು ಎಂದು ಕೇಳಿ ಅದಕ್ಕೆ ಉತ್ತರವನ್ನೂ ಹೇಳಿದರು.
ಅದು ’ಧೂಮ್ರಶಕಟ’ಅಂತೆ. ಅಲ್ಲಪ್ಪಾ ನಾವು ಚಿಕ್ಕ ಹುಡುಗರಿದ್ದಾಗಲೇ TRAIN ಗೆ ಉಗಿಬಂಡಿ ಎಂದು ಕರೆದಿದ್ದು
ಸಾಮಾನ್ಯವಾಗಿತ್ತು. ಉಗಿಯ ಅಥವಾ ಹಬೆಯ ಶಕ್ತಿಯಿಂದ ಓಡುವ ಬಂಡಿ. ಕೈಲಾಸಂ ಹೇಳುವಂತೆ ಎತ್ತು ಕುದುರೆ
ಇಲ್ಲದೆ ಗಾಡಿ. ಈಗ ಹಬೆಯ ಬಂಡಿ ಇಲ್ಲ, ಏನಿದ್ದರೂ ಡೀಸೆಲ್ ಅಥವಾ ವಿದ್ಯುತ್ತಿನಿಂದ ಚಲಿಸುವ ರೈಲು.
ಆದರೆ ನಮ್ಮ ಬಂಡಿಯನ್ನು ನಾವು ಶಕಟ ಎನ್ನುವ ಸಂಕಟವಾದರೂ ಏಕೆ?
CRECHE ಅನ್ನು ಶಿಶುಪಾಲನ ಕೇಂದ್ರ ಎಂದು ಬರೆದಿರುವುದನ್ನು ನೋಡಿದ್ದೇವಲ್ಲವೇ? ಅದೂ ಸಹ ಇಂತಹುದೇ ವಿಪರೀತ
ಬುದ್ಧಿಯ ಅನುವಾದ ಎನ್ನಬಹುದು. ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳನ್ನು ಅಂದರೆ ಎಳೆಯ ಕೂಸುಕಂದಮ್ಮಗಳನ್ನು
ಆರೈಕೆಗಾಗಿ ಬಿಟ್ಟುಹೋಗುವ ಮನೆಯನ್ನು ಚಿಕ್ಕದಾಗಿ ಕೂಸಿನಮನೆ, ಕಂದಕುಟೀರ, ಮಕ್ಕಳಾರೈಕೆ ಎನ್ನಬಹುದಲ್ಲ?
ಶಿಶುಪಾಲನ ಕೇಂದ್ರ ಅನ್ತಲೇ ಯಾಕೆ, ಶಿಶುಪಾಲನಿಗಿಂತಲೂ ದುರ್ಯೋಧನ ತನ್ನ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದವನೆಂದು
ರನ್ನನ ಗದಾಯುದ್ಧದಲ್ಲಿ ಓದಿದ್ದೇವೆ. ತಂದೆಗೆ ಮಗನಾದವನು ಎಳ್ಳುನೀರು ಬಿಡಬೇಕಾದುದು ಧರ್ಮ, ಆದರೆ
ನನಗಿಂತ ಮೊದಲು ನನ್ನ ಮಗ ಯುದ್ಧದಲ್ಲಿ ಮಡಿದು ನಾನೇ ಅವನಿಗೆ ತರ್ಪಣ ಬಿಡುವಂತಾಯಿತೇ ಎಂದು ಹಲುಬುತ್ತಾನೆ.
ಆದ್ದರಿಂದ ಶಿಶುಪಾಲನ ಕೇಂದ್ರ ಎನ್ನುವ ಬದಲು ದುರ್ಯೋಧನ ಕೇಂದ್ರ ಎಂದೇಕೆ ಕರೆಯಬಾರದು? ಹಾಗೆಯೇ ಕೆಲವು
ಸ್ಥಳಗಳನ್ನು ಕೀಚಕ ಕೇಂದ್ರ ಎಂದೂ ಕರೆಯೋಣ. ಇರಲಿ, ಮತ್ತೆ ಇಂಟರ್‌ನೆಟ್ ಗೆ ಬರೋಣ. ಈಗಾಗಲೇ ಕೆಲ ಕನ್ನಡಿಗರು
ಇದನ್ನು ಮಿನ್ ಬಲೆ ಎಂದು ಕರೆದಿದ್ದಾರೆ. ಮಿಂಚಿನ ವೇಗದಲ್ಲಿ ಬೇಕಾದ್ದನ್ನು ತೆರೆದು ತೋರುವ ಇಂಟರನೆಟ್ಟಿಗೆ
ಮಿಂಬಲೆ ತುಂಬಾನೇ ಸರಿಹೊಂದುವ ಹೆಸರಾಗಿದೆ. ನಿಧಾನಗತಿಯ ನಮ್ಮ ಅಂಚೆ ವಿಧಾನಕ್ಕಿಂತ ಮಿಂಚಿನ ಸಂಚಾರದ
ಅಂಚೆಯಾದ ಈ-ಮೇಲ್ ಅನ್ನು ಮಿನ್ನಂಚೆ ಎಂದು ಕರೆದು ಅದು ಚಲಾವಣೆಗೆ ಬರುತ್ತಲಿದೆ. ಹಾಗೆಯೇ ಮೊಬೈಲ್
ದೂರವಾಣಿಗೆ ಜಂಗಮವಾಣಿ ಎಂಬ ಪ್ರಯೋಗವೂ ಜನಪ್ರಿಯವಾಗಿದೆ.
ಅದೇ
ರೀತಿ ನಮ್ಮ ದೈನಂದಿನ ಬಳಕೆಯ ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಆದಂತಹ ಪದಗಳನ್ನು ಹುಡುಕಿ ಬಳಸಿ ಜನಪ್ರಿಯಗೊಳಿಸೋಣ.