ಸೋಮವಾರ, ಜೂನ್ 10, 2013

ಗಿರೀಶ್ ಕಾರ್ನಾಡ್

ಮಹಾರಾಷ್ಟ್ರದ ಮಾಥೇರಾನದಲ್ಲಿ ೧೯೩೮ ಮೇ ೧೯ರಂದು ಜನಿಸಿದ ಗಿರೀಶ ಕಾರ್ನಾಡರ ಪ್ರಗತಿಪರ ವಿಚಾರಗಳು ತಂದೆಯಿಂದ ಪಡೆದ ಬಳುವಳಿ. ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡ ತಂದೆ ರಘುನಾಥರು, ಸಮಾಜವನ್ನು ಧಿಕ್ಕರಿಸಿ ಬಾಲ್ಯವಿಧವೆ ಕೃಷ್ಣಾಬಾಯಿಯನ್ನು ಮದುವೆಯಾದರು. ಇವರ ದಾಂಪತ್ಯದ ಫಲವೇ ಗಿರೀಶ್ ಕಾರ್ನಾಡ್. ಗಿರೀಶರ ಮನೆಮಾತು ಕೊಂಕಣಿ, ಹಾಗೂ ಅವರ ಶಿಕ್ಷಣವೆಲ್ಲ ಕರ್ನಾಟಕದಲ್ಲೇ ನಡೆಯಿತು. ಆಮೇಲೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ಹೋದ ಅವರು ಅಲ್ಲಿನ ಆಕ್ಸ್ಫರ್ಡ್ ವಿವಿಯಲ್ಲಿ ಇಂಗ್ಲಿಷ್ ಅಭ್ಯಸಿಸಿದರು. ಅದರ ಚರ್ಚಾವೇದಿಕೆಯನ್ನು ಮುನ್ನಡೆಸಿದ ಮೊದಲ ಪೌರ್ವಾತ್ಯರಿವರು. ಅದರ ಪರಿಣಾಮವಾಗಿ ಇವರಿಗೆ ಇಂಗ್ಲೆಂಡಿನ ವಾಗ್ಮಿಗಳ ಕಲಾವಿದರ ಸಹವಾಸ ಲಭ್ಯವಾಯಿತು. ಅದು ಅವರ ಒಳಪ್ರತಿಭೆಯನ್ನು ಹೊರಗೆಡವಿತು. ಅಲ್ಲಿಂದ ಚಿಕಾಗೊ ವಿವಿಗೆ ಪ್ರಾಧ್ಯಾಪಕರಾಗಿ ತೆರಳಿದ ಅವರು ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿದರು. ಅಲ್ಲಿದ್ದಾಗಲೇ ಕನ್ನಡದಲ್ಲಿ ನಾಟಕಗಳನ್ನು ರಚಿಸಿದರು.
ನಮ್ಮ ನಾಡಿಗೆ ಹಿಂದಿರುಗಿದ ಮೇಲೆ ಅವರು ಪ್ರದರ್ಶಿಸಿದ ನಾಟಕಗಳು ಜನಮನ ಗೆದ್ದವು ಮಾತ್ರವಲ್ಲ ಹಿಂದೀ, ಪಂಜಾಬಿ, ಮರಾಠಿ ಮುಂತಾದ ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನಗೊಂಡವು. ಹಾಗೆ ನೋಡಿದರೆ ಅವರು ಇಂಗ್ಲಂಡಿಗೆ ತೆರಳುವ ಮೊದಲೇ ರಚಿಸಿದ್ದಯಯಾತಿನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಗಿತ್ತು. ವಿದೇಶದಿಂದ ಹಿಂದಿರುಗಿದ ಮೇಲೆ ಬರೆದತುಘಲಕ್ನಾಟಕ ಜವಾಹರಲಾಲ್ ಅವರ ವಿಡಂಬನೆಯಾಗಿತ್ತು. ನಾಟಕ ನವದೆಹಲಿಯಲ್ಲಿ ನೂರಾರು ಪ್ರದರ್ಶನ ಕಂಡು ಗಿರೀಶರಿಗೆ ಅಪಾರ ಹೆಸರು ತಂದುಕೊಟ್ಟಿತು. ಅವರುಹಯವದನ’, ‘ಅಂಜುಮಲ್ಲಿಗೆ’, ‘ನಾಗಮಂಡಲ’, ‘ತಲೆದಂಡ’, ’ಅಗ್ನಿ ಮತ್ತು ಮಳೆಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಬಿಬಿಸಿಗಾಗಿ ನಾಟಕ:’ಟಿಪ್ಪುವಿನ ಕನಸುಗಳು’. ಕನ್ನಡದಲ್ಲಿ ನಾಟಕ ರಚಿಸುತ್ತ, ಇತರ ಭಾಷೆಗಳೊಂದಿಗೆ ಸಾಂಸ್ಕೃತಿಕ ರಾಯಭಾರತ್ವ ವಹಿಸಿರುವ ಕಾರ್ನಾಡ್ ನಟರಾಗಿ, ನಿರ್ದೇಶಕರಾಗಿ ಹೆಸರಾಗಿದ್ದಾರೆ. ಆರಂಭದಲ್ಲಿ ರಂಗಭೂಮಿ ನಟರಾಗಿದ್ದವರು ಹೊಸ ವಿಚಾರಗಳತ್ತ ಗಮನ ಹರಿಸಿ ನಾಟಕ ರಚನೆಗೆ ಚಿಂತಿಸಿದರು. ಹೀಗಾಗಿ ಪುರಾಣ, ಇತಿಹಾಸಗಳ ಪಾತ್ರಗಳನ್ನು ಸಮಕಾಲೀನ ಸಂದರ್ಭದ ಆಗುಹೋಗುಗಳೊಂದಿಗೆ ಸಮೀಕರಿಸುವ ವಾಸ್ತವ ನೆಲೆಗಟ್ಟಿನಲ್ಲಿ ನೇಯ್ದರು.
ಸಿನಿಮಾರಂಗದಲ್ಲೂ ಕಾರ್ನಾಡರದು ಬಹುಮುಖ ಪ್ರತಿಭೆ. ಕನ್ನಡ ಚಿತ್ರರಂಗಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟವರೇ ಅವರು. ಅವರು ಚಿತ್ರಕತೆ ಬರೆದು ನಟಿಸಿದಸಂಸ್ಕಾರಚಲನಚಿತ್ರ ಕನ್ನಡಕ್ಕೆ ಮೊತ್ತಮೊದಲ ಸ್ವರ್ಣಕಮಲ ತಂದುಕೊಟ್ಟಿತು. ಅದು ಕನ್ನಡದ ಮೊದಲ ಕಲಾತ್ಮಕ ಚಿತ್ರವೂ ಆಗಿದೆ. ಅಲ್ಲಿಂದ ಮುಂದೆ ಅವರು ನಿರ್ದೇಶಿಸಿದ  ‘ತಬ್ಬಲಿಯು ನೀನಾದೆ ಮಗನೆ’, ‘ಕಾಡು’, ‘ಒಂದಾನೊಂದು ಕಾಲದಲ್ಲಿಚಿತ್ರಗಳು ಪ್ರಶಸ್ತಿಗಳ ಸರಮಾಲೆಯನ್ನೇ ಕಂಡವು. ಕುವೆಂಪು ಅವರಕಾನೂರು ಹೆಗ್ಗಡಿತಿಯನ್ನು ನಿರ್ದೇಶಿಸಿದ್ದು ಅವರ ಮತ್ತೊಂದು ಹೆಗ್ಗಳಿಕೆ. ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಹಿಂದೀ ಭಾಷೆಯಲ್ಲೂ ಅವರುಉತ್ಸವ’, ‘ಗೋಧೂಳಿಎಂಬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ’ ದಿನಗಳುಎಂಬ ಕನ್ನಡ ಚಲನಚಿತ್ರದಲ್ಲಿ ಅವರದು ಮನೋಜ್ಞ ಅಭಿನಯ.
ಇವಲ್ಲದೆ ಅನೇಕ ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ, ಪರಿಸರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರಸಿದ್ಧರ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್ಪಾಲ್ ಮಾರ್ಗದರ್ಶನದದಿ ಟರ್ನಿಂಗ್ ಪಾಯಿಂಟ್ಎನ್ನುವ ದೂರದರ್ಶನದ ಧಾರಾವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ಕೃತಿಗಳನ್ನು ನಮ್ಮ ದೇಶದ ಇತರ ಭಾಷೆಗಳ ಪ್ರಸಿದ್ದ ನಿರ್ದೇಶಕರಾದ ಇಬ್ರಾಹಿಂ ಅಲ್ಕಾಜಿ,ಅಲಿಖ್ ಪದಮ್ಸೀ, ಅರವಿಂದ ಗೌರ್, ಪ್ರಸನ್ನ, ವಿಜಯ ಮೆಹ್ತಾ, ಸತ್ಯದೇವ ದುಬೆ, ಶ್ಯಾಮಾನಂದ ಜಲಾನ್ ಹಾಗೂ ಅಮಲ್ ಅಲ್ಲಾನ ಮುಂತಾದವರು ತಂತಮ್ಮ ರಾಜ್ಯಭಾಷೆಗಳಲ್ಲಿ ಪ್ರಯೋಗಿಸಿದ್ದಾರೆ ಎಂಬುದು ಕಾರ್ನಾಡರಿಗೆ ಮಾತ್ರವಲ್ಲ ಕನ್ನಡಕ್ಕೆ ಹೆಮ್ಮೆ ತರುವ ವಿಷಯವಾಗಿದೆ.

ಕಾರ್ನಾಡರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆತಿದೆ. ನಾಟಕ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು. ಇಂಗ್ಲೆಂಡಿನಲ್ಲಿ ನೆಹರು ಸೆಂಟರಿನ ನಿರ್ದೇಶಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ನಾಲ್ಕು ಸಾರಿ ಫಿಲಂ ಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕನ್ನಡನಾಡಿನ ಹೊರಗಿದ್ದುಕೊಂಡೂ ಕನ್ನಡದ ಕಂಪನ್ನು ದೇಶದೆಲ್ಲೆಡೆ ಹರಡಿದ ಮಹಾನ್ ಕನ್ನಡಪ್ರೇಮಿ ನಮ್ಮ ನಿಮ್ಮೆಲ್ಲರ ಹೆಮ್ಮೆ.

ಕಾಮೆಂಟ್‌ಗಳಿಲ್ಲ: