ಯೇಸುವಿನ ಕುರಿತ ಕಾವ್ಯಗಳಲ್ಲಿ ಇತ್ತೀಚಿನದು ’ಜನಕನ ಮನದನ್ನ’. ಇದನ್ನು ಯೇಸುಸಭೆಯ ಗುರುಗಳಾದ ಸ್ವಾಮಿ ದೇವದತ್ತ ಕಾಮತರು ರಚಿಸಿದ್ದಾರೆ. ಈ ಕಾವ್ಯದ ವಸ್ತು ಬೈಬಲ್ ಪವಿತ್ರಗ್ರಂಥವೇ ಆದರು ಅವರದನ್ನು ಹಾಗೆ ಕರೆದಿಲ್ಲ. ಕಾವ್ಯವನ್ನು ಅವರೇ ವರ್ಗೀಕರಿಸಿದ ಹಾಗೆ ಪೂರ್ವಕಾಂಡ ಹಾಗೂ ಉತ್ತರಕಾಂಡ ಎಂಬ ಎರಡು ಭಾಗಗಳಿವೆ. ಪೂರ್ವಕಾಂಡವನ್ನು ಅವರು ಯೇಹೂದ್ಯ ಇತಿಹಾಸ ಎಂದೂ ಕರೆದಿದ್ದು ಇದು ಹಳೇ ಒಡಂಬಡಿಕೆಗೆ ಆರೋಪಿತವಾಗಿದೆ. ಉತ್ತರಕಾಂಡವನ್ನು ಮಾನವಾವತಾರ ಎಂದೂ ಕರೆಯಲಾಗಿದ್ದು ಅದು ಯೇಸುವಿನ ಜೀವನವೃತ್ತಾಂತವನ್ನು ಹೇಳುತ್ತದೆ.
ಇದನ್ನು ಕಾವ್ಯವೆಂದು ಹೇಳಿದೆನಷ್ಟೆ. ಕಾವ್ಯಕ್ಕಿರಬೇಕಾದ ಅಷ್ಟಾದಶ ವರ್ಣನೆಗಳನ್ನು ಹುಡುಕ ಹೋಗದೆ ಅಲ್ಲಲ್ಲಿ ತಿರುವಿ ನೋಡಿರುವ ನಾನು ಅದನ್ನಿಲ್ಲಿ ವಿಮರ್ಶಿಸುವ ದಾರ್ಷ್ಟ್ಯ ತೋರುತ್ತಿಲ್ಲ. ಬದಲಿಗೆ ಅದನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇನೆ. ಲತೀನಿನ ಪಠ್ಯವೊಂದನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿಕೊಳ್ಳಲು ನಾನು ಅವರ ಬಳಿ ಮೊತ್ತಮೊದಲ ಸಲ ಹೋದಾಗ ನಡೆದ ಮಾತುಕತೆಯಿಂದ ನಾವು ಆತ್ಮೀಯರಾದೆವು. ಸುಮಾರು ಎಪ್ಪತ್ತರ ಆಸುಪಾಸಿನ ಆ ವೃದ್ಧ ಗುರು ಸುಮ್ಮನೆ ಕಾಲ ವ್ಯರ್ಥ ಮಾಡುವವರಲ್ಲ. ಆಗ ಅವರು ಇದೇ ಕಾವ್ಯದ ಗಿದೆಯೋನ್ ಅಧ್ಯಾಯವನ್ನು ಬರೆಯುತ್ತಿದ್ದರು. ಅದುವರೆಗೂ ಯಾರಿಗೂ ಅದರ ಸುಳಿವು ಕೊಡದಿದ್ದ ಅವರು ನನ್ನ ಮುಂದೆ ಅದನ್ನು ಓದಿ ಸಂತೋಷಪಟ್ಟರು ನಾನು ಸಂಭ್ರಮ ಪಟ್ಟೆ. ಅವರ ಕಾವ್ಯದ ಭಾಗವನ್ನು ಅವರ ಬಾಯಿಂದಲೇ ಕೇಳುವ ಸುಯೋಗ ದೊರೆತದ್ದಕ್ಕಾಗಿ ಹೆಮ್ಮೆ ಪಡುತ್ತೇನೆ.
ಆಮೇಲೆ ಒಂದೆರಡು ತಿಂಗಳಲ್ಲಿ ಅವರು ಕಾವ್ಯವನ್ನು ಪೂರ್ಣಗೊಳಿಸಿದ್ದಾರೆಂದೂ ಅದಕ್ಕೆ ಬಲ್ಲವರಿಂದ ಮುನ್ನುಡಿ ಬರೆಸಿಕೊಡಲು ಸಾಧ್ಯವೇ ಎಂದು ಫಾದರ್ ಅರುಳಪ್ಪನವರು ನನಗೆ ಕೇಳಿದಾಗ ಅಷ್ಟು ಬೇಗನೇ ಆ ಕಾವ್ಯ ಮುಕ್ತಾಯ ಕಂಡಿದ್ದನ್ನು ತಿಳಿದು ಸೋಜಿಗಗೊಂಡೆ. ಅದರ ಕುರಿತು ರಾಷ್ಟ್ರಕವಿಯವರೊಂದಿಗೆ ಮಾತನಾಡಿದಾಗ ಅವರಿನ್ನೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರು. ಕಲ್ಮಶವಿಲ್ಲದ ಮತ್ತೊಂದು ಕವಿಹೃದಯಿ ಯಾರಿರಬಹುದೆಂದು ಯೋಚಿಸುತ್ತಿದ್ದಾಗ ಫಕ್ಕನೇ ಸಾ ಶಿ ಮರುಳಯ್ಯನವರು ನೆನಪಾದರು.
ವಿಜಯನಗರದಲ್ಲಿನ ಅವರ ಮನೆಗೆ ಹೋದಾಗ ಆದರಿಸಿ ಸತ್ಕರಿಸಿದ ಅವರು ಕಾವ್ಯದ ಮೇಲೆ ಕಣ್ಣಾಡಿಸಿ ಅದನ್ನು ತಲೆಯ ಮೇಲಿಟ್ಟುಕೊಂಡರು. ಯೇಸು ಮಹಾತ್ಮನ ಕುರಿತು ಯಾರೆಷ್ಟು ಬರೆದರೂ ಸಾಲದು, ಅವನೊಬ್ಬ ಪುಣ್ಯಪುರಷ ಎಂದು ಉದ್ಗರಿಸಿದ ಅವರು, ಮನುಷ್ಯ ಜೀವವೆಂಬುದು ಅತ್ಯಮೂಲ್ಯ, ಮನುಷ್ಯನೇ ಮನುಷ್ಯತ್ವವನ್ನು ಕಳೆದುಕೊಂಡರೆ ಬೇರೆಲ್ಲಿ ಅದನ್ನು ಹುಡುಕಬೇಕು ಎಂಬುದನ್ನು ಯೇಸು ಅತ್ಯಂತ ಸರಳವಾಗಿ ’ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಆ ಉಪ್ಪಿಗೇನು ಬೆಲೆ ಅದು ಕಸ’ ಎಂದಿದ್ದಾನೆ ಅಂಥ ದೇವಮಾನವನಿಗೆ ನಮೋನಮಃ ಎಂದರು.
ಕೆಲವೇ ದಿನಗಳಲ್ಲಿ ಅವರು ಈ ಕಾವ್ಯಕ್ಕೊಂದು ಆದರ್ಶಪ್ರಾಯವಾದ ಮುನ್ನುಡಿಯನ್ನು ಬರೆದರು. ಆ ಮುನ್ನುಡಿಯಿಂದ ಆಯ್ದ ಭಾಗವಿದು. ’ಈ ಕೃತಿಯಲ್ಲಿ ಪ್ರಯೋಗಗೊಮಡಿರುವ ಛಂದಸ್ಸು ಕನ್ನಡಕ್ಕೆ ಹೊಸದು. ಮಾಮೂಲಿ ತ್ರಿಪದಿ, ಷಟ್ಪದಿ, ಸೀಸಪದ್ಯ, ಸಾನೆಟ್, ಎಲಿಜಿ, ಪ್ರಗಾಥ (Oದೆ) ಮೊದಲಾದ ಧಾಟಿಗಳಲ್ಲಿಲ್ಲ. ಕವಿ ದೇವದತ್ತರವರೇ ಆವಿಷ್ಕರಿಸಿದ ಅಷ್ಟಪದಿ (ಎಂಟುಪಾದ) ಯಲ್ಲಿದೆ. ಇದು ಪೂರ್ವಕಾಂಡ ಮತ್ತು ಉತ್ತರಕಾಂಡ ಎರಡು ಭಾಗಗಳಲ್ಲಿ ಹರಡಿಕೊಂಡಿದೆ. ಪೂರ್ವಕಾಂಡದಲ್ಲಿ ೧೦೯೨ ಉತ್ತರಕಾಂಡದಲ್ಲಿ ೭೬೩ ಅಷ್ಟಪದಿಗಳಿಂದ ಕೂಡಿದ ಮಹಾಗ್ರಂಥ. ಮೊದಲ ಕಾಂಡವು ಸೃಷ್ಟಿಯ ಮೂಲ, ನಾನಾರು, ನಾನೆಂದರೇನು ಎಂಬ ಜಿಜ್ಞಾಸಾರೂಪದ ನಾಂದಿ ಪದ್ಯದಿಂದ ಆರಂಭಗೊಂಡು, ಸೆರೆರಕ್ತವನ್ನು ಹಂಚಿಕೊಂಡು ಹುಟ್ಟಿದ ಸಹೋದರರಲ್ಲಿ ಹಿರಿಯ ಅಣ್ಣ ಕೇಡಾಳಿ ಕಾಯಿನ, ತಮ್ಮ ಮುಗ್ದ ತಮ್ಮ ಹೇಬಲನನ್ನು ಕೊಲೆ ಮಾಡಿ ತನ್ನ ಪಾಪಕೃತ್ಯವನ್ನು ಅರ್ಥ ಮಾಡಿಕೊಂಡ ಪಶ್ಚಾತ್ತಾಪ, ಪ್ರಾಯಶ್ಚಿತ್ತಗಳ ಮೂಲಕ ಆರಂಭಗೊಂಡು ಮಹಾಕಾವ್ಯದ ಚಾಲನೆ ಪಡೆದಿದೆ. .. ಎರಡನೆಯ ಕಾಂಡದಲ್ಲಿ ಯೇಸು ಸ್ವಾಮಿಯು ಜ್ಯೋಗಿರೂಪದಲ್ಲಿ ಜಗತ್ತಿಗೆ ಅವತರಿಸಿದ್ದು, ತ್ಯಾಗ ಬಲಿದಾನ ಮೊದಲಾದವುಗಳ ಅಂತ್ಯದಲ್ಲಿ ಪ್ರಭುವಿನ ದಿವ್ಯದರ್ಶನ ioದ್ಯುತಿ ಪಡೆದು ಬೆಳಗಿದ್ದು ತತ್ವೋಪದೇಶ ಸಾರಿದ್ದು ಇಡೀ ಭೂಮಂಡಲದಲ್ಲೇ ಆನಂದರಸಸ್ತೋತಸ್ವಿನಿ ಭಾಗೀರಥಿಯಾಗಿ ಪ್ರವಹಿಸಿದ್ದು. ಮಹಾಮಾನವಾವತಾರಾದಿಯಾದ ಯೇಸುಸ್ವಾಮಿಯ ಬದುಕಿನ ದಾರುಣ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತದೆ. ಸಮಾಧಿಯಿಂದ ಕಾಣೆಯಾದ ಪವಾಡ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಈ ಭಾಗ ದೇವದತ್ತ ಕಾಮತ್ ಅವರ ಕಾವ್ಯೋನ್ನತಿಯನ್ನು ಹಿಮಾಲಯದ ಉತ್ತುಂಗ ಶೃಂಗಕ್ಕೆ ಓದುಗರನ್ನು ಕೊಂಡೊಯ್ಯುತ್ತದೆ.’
ಜನಕನ ಮನದನ್ನವನ್ನು ಕಾಮತರು ಕ್ರಿಸ್ತಾಯನ ಎಂದೂ ಕರೆದಿದ್ದಾರೆ. ಪ್ರತಿಯೊಂದು ಪದ್ಯವೂ ಎಂಟು ಸಾಲುಗಳಲ್ಲಿದೆ. ಮೊದಲ ಸಾಲಿನಲ್ಲಿ ೨೦ ಮಾತ್ರೆಗಳಿದ್ದರೆ ನಂತರದ್ದು ೧೫ ಹೀಗೆ ೨೦,೧೫,೨೦,೧೫,೨೦,೧೫,೨೦,೧೫ ಮಾತ್ರೆಗಳು ಬರುತ್ತವೆ. ಆದರೆ ಗಣ ವರ್ಗೀಕರಣ ಮಾಡುವಾಗ ಎಷ್ಟು ಮಾತ್ರೆಗೊಂದು ಗಣ ಎಂಬುದು ತಿಳಿಯುತ್ತಿಲ್ಲ. ಗಣವಿಭಜನೆಗೆ ಹೋದಾಗ ಅದು ಅಂಶ ಛಂದಸ್ಸಿನಂತೆ ತೋರುತ್ತದೆ. ಒಂದು ಪದ್ಯನೋಡಿ:
ಈ ಮಾತು ಕದ್ದಾಲಿಸಿದ ರೆಬೇಕನು ತಾನೆ
ತನ್ನೊಲವಿನ ಸುಕುಮಾರನಿಗಾಗಿ
ಹೂಡಿದಳು ಸ್ತ್ರೀಸಹಜ ಹಂಚಿಕೆಯ ತವಕದಲಿ
ಅಳುಕುತಿಹ ಮಗನನ್ನು ಕಳುಹಿದಳು
ಮೇಕೆಗಳನೆರಡು ತರಲೆಂದವನ್ನಟ್ಟು ಸವಿ
ಯೂಟವಣಿಗೊಳಿಸಿದಳು, ಮೇಕೆಗಳ
ತೊಗಲಿಂದ ಯುವಕನಾ ಕೈ ಕತ್ತು ಸುತ್ತಿದಳು
ಏಸಾವಿನಾ ಬಟ್ಟೆ ತೊಡಿಸಿದಳು
ಇದರಲ್ಲಿ ಪ್ರಾಸದ ಹಂಗಿಲ್ಲ, ಭಾಷೆಯೂ ಸುಲಲಿತವಾಗಿದೆ. ಆದರೆ ಛಂದಸ್ಸಿನ ಬಂಧಕ್ಕೆ ಅಳವಡುವ ನಿಟ್ಟಿನಲ್ಲಿ ಕೆಲವೆಡೆ ಒತ್ತಕ್ಷರಗಳನ್ನು ವರ್ಜಿಸಿರುವುದು ದೋಷವೆಂಬಂತೆ ಕಣ್ಣಿಗೆ ರಾಚುತ್ತದೆ. ನೋಡಿ,
ಎಯ್ತಂದವನಿಗೆ ನಿನ ಮನೆಯಲೇ ನಾನಿಂದು
ತಂಗುವುದು ಎಂದೊಸಗೆಯನೆ ನುಡಿದ
ಸಖ್ಖಾಯನಿಗೊ ಇದನು ಕೇಳ್ದೆಲ್ಲಿಲದ ಸಂಭ್ರ
ಮ ಜನರಿಗೊ ವಿಭ್ರಮವು. ಯಃಕಶ್ಚಿ
ತ ವಸೂಲಿಗರ ಪಂಗಡದ ಮುಖಂಡನೆ ಇವನು,
ಈತನಲಿ ತಂಗುವುದು ಗುರುದೇವ
ನಿಗೆ ತರವೆ? ಎಂದು ಗೊಣಗಿದರು ನೆರೆದ ಮಡಿವಂತ
ತರು. ಪ್ರಭು ನಿರೀಕ್ಷಿಸಿದುದೂ ಇದನೆ.
ಈ ಪದ್ಯದ ಮೂರನೇ ಸಾಲಿನಲ್ಲಿ ’ಕೇಳ್ದೆಲ್ಲಿಲದ’ ಎಂಬ ಪ್ರಯೋಗವಿದೆ. ಲ ಕಾರಕ್ಕೆ ಒತ್ತು ಇಲ್ಲದಿರುವುದರಿಂದ ಇದು ನಮಗೆ ಅಪಭ್ರಂಶವಾಗಿ ಕಾಡುತ್ತದೆ. ಅಂದರೆ ಫಾದರ್ ದೇವದತ್ತ ಕಾಮತರು ಅಲ್ಪಜ್ಞರೆಂದಲ್ಲ. ಅವರು ಸಂಸ್ಕೃತದ ಪಂಡಿತೋತ್ತಮರು. ಅವರು ಕನ್ನಡವನ್ನು ಸಂಸ್ಕೃತದ ಜಾಯಮಾನಕ್ಕೆ ಹೊಂದಿಸುತ್ತಾರೆಂಬುದೇ ಅಸಮಾಧಾನದ ಸಂಗತಿ. ಇರಲಿ ಬಿಡಿ ನಡೆವರೆಡುಹದೇ ಕುಳಿತರೆಡಹುವರೇ. ಡಾಕ್ಟ್ರಿನ್ ಆಫ್ ಮಧ್ವಾಚಾರ್ಯ ಎಂಬುದು ಅವರ ಸಂಶೋಧನಾ ಪ್ರಬಂಧ. ಮಂಗಳೂರಿನ ಗುರುಮಠದಲ್ಲಿ ದೈವಶಾಸ್ತ್ರವನ್ನು ಬೋಧಿಸಿದವರು. ಅವರ ಈ ಕಾವ್ಯ ಬುಕ್ ಶೆಲ್ಫುಗಳಲ್ಲಿ ಧೂಳು ತಿನ್ನದೆ ಜನಮನದ ಕಾವ್ಯವಾಗಲಿ ಎಂದು ಹಾರೈಸುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ