ಜಾನಪದ ಅಧ್ಯಯನ ಮಾಡುವವರು ಅತ್ಯವಶ್ಯವಾಗಿ ಓದಲೇಬೇಕಾದಂತ ಒಂದು
ಪರಾಮರ್ಶನ ಗ್ರಂಥವೆಂದರೆ ಸ್ವಾಮಿ ಅಬ್ಬೆ ದ್ಯುಬುವಾ ಅವರು ಬರೆದ Hindu manners, customs and ceremonies ಎಂಬುದಾಗಿದೆ. ಇಂಡಿಯಾ
ದೇಶದ ಜನರ ಸ್ವಭಾವ, ನಡವಳಿಕೆ ಮತ್ತು ರೀತಿರಿವಾಜುಗಳ ವಿವರ ಹಾಗೂ ಅವರ ಧಾರ್ಮಿಕ ಹಾಗಾ ಸಾಮಾಜಿಕ
ಸಂಸ್ಥೆಗಳು (ಲಂಡನ್, ೧೮೧೬) ಎಂಬ ಆ ಪುಸ್ತಕ ಇಂದಿಗೂ ಒಂದು ಮಹತ್ವದ ಅಧ್ಯಯನ ಕೃತಿಯಾಗಿದೆ. ಅಬ್ಬೆ ದ್ಯುಬುವಾ ಅವರು
ಫ್ರಾನ್ಸ್ ದೇಶದವರಾಗಿದ್ದು ಸೇಂಟ್ ರಿಮೇಝ್ ಎಂಬ ಹಳ್ಳಿಯಲ್ಲಿ ೧೭೬೫ರಲ್ಲಿ ಜನಿಸಿದರು. ವಯಸ್ಕರಾದಾಗ
ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ ಸಂಸ್ಥೆ (ಎಂಇಪಿ) ಗೆ ಸೇರಿ ೧೭೯೧ರಲ್ಲಿ
ಗುರುಪಟ್ಟ ಪಡೆದ ಅವರು ಅದರ ಮರುವರ್ಷವೇ ಅಂದರೆ ಫ್ರೆಂಚ್ ಚಳುವಳಿಯ ಕಿಡಿ ಸ್ಫೋಟವಾಗುವ ಹೊತ್ತಿಗೆ ಮಲಬಾರ್ ಮಿಷನ್ನಿಗೆ ನಿಯುಕ್ತರಾಗಿ ಇಂಡಿಯಾ ದೇಶಕ್ಕೆ ಕ್ರಿಶ್ಚಿಯನ್
ಧರ್ಮಬೋಧನೆ ಮಾಡಲು ತೆರಳಿದರು.
ಆ ಸಂದರ್ಭದಲ್ಲಿ ದಕ್ಷಿಣ ಇಂಡಿಯಾದಲ್ಲಿ ಟಿಪ್ಪುವಿನ ಪ್ರಭಾವ
ಜೋರಾಗಿತ್ತು. ಪೂರ್ವದ ವೆಲ್ಲೂರಿನಿಂದ ಹಿಡಿದು ಮಧುರೆ ಮೈಸೂರು ಶೀಮೊಗ್ಗೆ ಸಮೇತ ಪಶ್ಚಿಮದ
ಕರಾವಳಿಯವರೆಗೆ ಅವನ ರಾಜ್ಯ ವ್ಯಾಪಿಸಿತ್ತು. ದಕ್ಷ ಆಡಳಿತಗಾರನೂ, ಯುದ್ಧಪ್ರೇಮಿಯೂ ಆಗಿದ್ದ
ಟಿಪ್ಪು ಹಲವು ಯುದ್ಧಗಳಿಂದ ಅಪಾರ ಸಂಪತ್ತನ್ನು ಅರ್ಜಿಸಿ ಸಾಮ್ರಾಜ್ಯವನ್ನು
ವಿಸ್ತರಿಸಿಕೊಂಡಿದ್ದನಲ್ಲದೆ ಧಾರ್ಮಿಕ ವಲಯದಲ್ಲೂ ಬದಲವಾವಣೆಗಳನ್ನು ಬಯಸಿದ್ದನು. ಈ ಒಂದು
ಕಾರಣಕ್ಕಾಗಿ ಅವನು ಅಪ್ರತಿಮ ದೇಶಪ್ರೇಮಿಯಾಗಿದ್ದರೂ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಲು ಪಣ
ತೊಟ್ಟ ಮೊತ್ತಮೊದಲಿಗನಾಗಿದ್ದರೂ ಧಾರ್ಮಿಕ ಅಸಹನೆಯ ಕಾರಣದಿಂದ ಜನರ ಸಹಜ ಪ್ರೀತಿಯನ್ನು
ಕಳೆದುಕೊಂಡಿದ್ದನು. ಅವನ ಆಳ್ವಿಕೆಯ ಪ್ರದೇಶಗಳಲ್ಲಿ ಕ್ರೈಸ್ತ ಧರ್ಮಪ್ರಚಾರ ನಡೆಸುತ್ತಿದ್ದವರು
ಅಂಜಿ ದೂರ ಸರಿದಿದ್ದರು.
೧೭೯೯ರಲ್ಲಿ ಟಿಪ್ಪುವಿನ
ಮರಣವಾದ ಮೇಲೆ ಸ್ವಾಮಿ ಅಬ್ಬೆ ದ್ಯುಬುವಾ ಅವರಿಗೆ ಮೈಸೂರು ಪ್ರಾಂತ್ಯದ ಕ್ರೈಸ್ತರನ್ನು
ಒಗ್ಗೂಡಿಸುವ ಹೊಣೆ ವಹಿಸಲಾಯಿತು. ಮೈಸೂರು ಪ್ರಾಂತ್ಯಕ್ಕೆ ಬಂದ ಇವರು ಜನರೊಂದಿಗೆ ಆಪ್ತರಾಗಲು ಸಿಡುಬಿನ
ವಿರುದ್ಧದ ಲಸಿಕೆಯನ್ನು ಪರಿಚಯಸಿದರಲ್ಲದೆ ಕೃಷಿ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ತಂದರು. ತಮ್ಮ
ಸಭ್ಯತೆ ಮತ್ತು ಸಹನೆಯ ಗುಣದಿಂದ ಸ್ಥಳೀಯರ ಮನಗೆದ್ದ ಅವರು ದೊಡ್ಡ ಸ್ವಾಮಿಯವರು
ಎಂದು ಜನಪ್ರಿಯರಾದರು. ಲಸಿಕೆ ಹಾಕುವ ಕಾರ್ಯದಲ್ಲಿ ಅವರ ಯಶಸ್ಸು ಅಪಾರ, ಅದನ್ನು ಗುರುತಿಸಿದ ಅಂದಿನ
ಬ್ರಿಟಿಷ್ ಸರ್ಕಾರ ಅವರ ಈ ಕೆಲಸಕ್ಕೆ ೨೦೦೦ ಫ್ರಾಂಕುಗಳ ಅನುದಾನ ನೀಡಿತು. ಬ್ರಿಟಿಷರು ತಮ್ಮ
ಮೇಲಿಟ್ಟಿದ್ದ ಗೌರವವನ್ನು ಸದುಪಯೋಗ ಪಡಿಸಿಕೊಂಡು ದ್ಯುಬುವಾ ಸ್ವಾಮಿಗಳು ಶ್ರೀರಂಗಪಟ್ಟಣ ಮತ್ತು
ಧರ್ಮಪುರಿ ಚರ್ಚುಗಳ ಖರ್ಚಿಗಾಗಿ ಭತ್ಯೆಯನ್ನೂ ಪಡೆದರು.
ಕ್ರೈಸ್ತರನ್ನು ಗುರುತಿಸಿ
ಅವರನ್ನು ತಮ್ಮ ಪ್ರೀತಿಯ ತೆಕ್ಕೆಗೆ ತೆಗೆದುಕೊಂಡು ಆದರಿಸಿದರು. ಸರಳ ಭಾಷೆಯಲ್ಲಿ ಅವರು ರಚಿಸಿದ
ಕ್ರೈಸ್ತಧರ್ಮೋಪದೇಶದ ಕೈಪಿಡಿಗಳು ಜನಮನ ಗೆದ್ದವು. ಧರ್ಮಪ್ರಚಾರ ಮಾಡುವವನು ಸ್ಥಳೀಯ ಜನರ
ರೀತಿನೀತಿ ಆಚಾರ ವಿಚಾರಗಳ ಬಗ್ಗೆ ಗೌರವ ತಳೆದು ಅವರಲ್ಲಿ ಒಂದಾದರೆ ಮಾತ್ರವೇ
ಯಶಸ್ವಿಯಾಗಬಲ್ಲನೆಂದು ಅವರು ತಿಳಿದಿದ್ದರು. ಅದಕ್ಕಾಗಿ ಅವರು ಸ್ಥಳೀಯ ಸ್ವಾಮಿಗಳಂತೆಯೇ ಕಾವಿ
ಉಡುಪು ತೊಟ್ಟು ಸಂಚರಿಸುತ್ತಿದ್ದರು. ದಕ್ಷಿಣ ಇಂಡಿಯಾದ ಎಲ್ಲ ಭಾಷೆಗಳಲ್ಲೂ ಪರಿಣತಿ ಪಡೆದ ಅವರು
ಸಂಸ್ಕೃತವನ್ನೂ ಅಭ್ಯಸಿಸಿದ್ದರು. ಆದರೆ ಈ ಸ್ಥಳೀಯ ಕ್ರೈಸ್ತರ ಅಪಕ್ವ ಧರ್ಮನಿಷ್ಠೆಯ ಕುರಿತು ದ್ಯು
ಬುವಾ ಸ್ವಾಮಿಗಳಿಗೆ ತುಂಬಾ ಅಸಮಾಧಾನವಿತ್ತು. ಧರ್ಮಪ್ರವರ್ತನೆಯ ಪ್ರಯಾಸದ ಕ್ಷೇತ್ರದಲ್ಲಿ ಮೂವತ್ತೆರಡು
ವರ್ಷಗಳ ಕಾಲ ದುಡಿದರೂ ಅವರ ದುಡಿಮೆ ಸತ್ಫಲಗಳನ್ನು ಕಾಣಲಿಲ್ಲ. ಇಂಡಿಯಾದ
ಮಣ್ಣಿನಲ್ಲಿ ಶತಮಾನಗಳಿಂದ ಬೇರೂರಿರುವ ಪೂರ್ವಗ್ರಹಗಳ ಕಾರಣ ಸದ್ಯದ
ಪರಿಸ್ಥಿತಿಯಲ್ಲಿ ಹೊಸಬರ ಮನಪರಿವರ್ತನೆ ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರುವ ಅವರು
ಪ್ಯಾರಿಸ್ಸಿಗೆ ಹಿಂದಿರುಗಲು ಮನಸ್ಸು ಮಾಡುತ್ತಾರೆ.
ಅವರು ಬರೆದ ಇಂಡಿಯಾ ದೇಶದ
ಕ್ರೈಸ್ತಧರ್ಮದ ವಸ್ತುಸ್ಥಿತಿಯ ಕುರಿತ ವರದಿಯು "Letters on the State
of Christianity in India" ಎಂಬ ಹೆಸರಿನಲ್ಲಿ
ಲಂಡನ್ನಿನಲ್ಲಿ ೧೮೨೩ರಲ್ಲಿ ಪ್ರಕಟವಾಯಿತು. ಕೂಡಲೇ ಲಂಡನ್ನಿನಲ್ಲಿ ಆ ವರದಿಯ
ವಿರುದ್ಧದ ಅಸಹನೆ ಭುಗಿಲೇಳುತ್ತದೆ. ದ್ಯುಬುವಾ ಅವರ ವರದಿಗೆ ಎದುರಾಗಿ ಜೇಮ್ಸ್ ಹೋ "A
Reply to the Letters of the Abbé Dubois"
(ಎ ರಿಪ್ಲೈ ಟು ದ ಲೆಟರ‍್ಸ್ ಆಫ್ ಅಬ್ಬೆ ದ್ಯುಬುವಾ, ಅಬ್ಬೆ ದ್ಯುಬುವಾ ಪತ್ರಕ್ಕೆ
ಪ್ರತ್ಯುತ್ತರ) ಮತ್ತು ಎಚ್ ಟೌನ್ಲಿ ಅವರು "An Answer to
the Abbé Dubois" (ಅನ್ ಆನ್ಸರ್ ಟು ಅಬ್ಬೆ ದ್ಯುಬುವಾ,
ಅಬ್ಬೆ ದ್ಯು ಬುವಾರಿಗೆ ಒಂದು ಉತ್ತರ) ಗಳನ್ನು ಪ್ರಕಟಿಸುತ್ತಾರೆ. ಕಲ್ಕತ್ತಾದಿಂದ ಪ್ರಕಟವಾಗುತ್ತಿದ್ದ "The
Friend of India" ಎಂಬ ಪತ್ರಿಕೆಯು ಅಬ್ಬೆ ದ್ಯುಬುವಾ ಅವರ
ವರದಿಗೆ ಬಂದ ಖಂಡನೆಯನ್ನೂ ಅದಕ್ಕೆ ತರ್ಕಬದ್ಧವಾಗಿ ದ್ಯಬುವಾ ಅವರು ಬರೆದ ಸ್ಪಷ್ಟೀಕರಣವನ್ನೂ
ಪ್ರಕಟಿಸಿತು. ಇದು ಆಮೇಲೆ ೧೮೨೫ ಮೇ ತಿಂಗಳಲ್ಲಿ "Bulletin des
Sciences" (ವಿಜ್ಞಾನಗಳ ಮಾಹಿತಿ) ಯಲ್ಲೂ ಬೆಳಕು ಕಂಡಿತು. ೧೮೪೧ರಲ್ಲಿ
ಏಷಿಯಾಟಿಕ್ ಜರ್ನಲ್ ತನ್ನ ಮೊದಲ ಆವೃತ್ತಿಯನ್ನು ಹೊರತಂದಾಗ ಅದರಲ್ಲೂ ಪ್ರಕಟವಾಯಿತು.
೧೮೦೭ರಲ್ಲಿ ಅಬ್ಬೆ
ದ್ಯುಬುವಾ ಅವರ Hindu manners, customs and ceremonies ಪುಸ್ತಕದ ಫ್ರೆಂಚ್ ಹಸ್ತಪ್ರತಿಯನ್ನು ಈಸ್ಟ್ ಇಂಡಿಯಾ ಕಂಪೆನಿಯ ಪರವಾಗಿ ಲಾರ್ಡ್
ವಿಲಿಯಂ ಬೆಂಟಿಕ್ಕನು ಎಂಟು ಸಾವಿರ ರೂಪಾಯಿಗಳಿಗೆ ಖರೀದಿಸಿದನು. ೧೮೧೬ರಲ್ಲಿ ಅದರ ಇಂಗ್ಲಿಷ್
ಆವೃತ್ತಿಯು ಮುದ್ರಣವಾಯಿತು. (೧೮೬೪ರಲ್ಲಿ ಅದು ಮರುಮುದ್ರಣ ಕಂಡಿತು.) ಕೆಲಕಾಲಾನಂತರ ಅಬ್ಬೆ
ದ್ಯುಬುವಾ ಅವರು ಇದನ್ನು ಹಿಗ್ಗಿಸಿ ಫ್ರೆಂಚ್ ಭಾಷೆಯಲ್ಲಿ ಮೆರ್ ಆನ್ಸ್ತಿತ್ಯುತಿಯೋಂ ಎ
ಸೆರೆಮೊನೀ ದೇ ಪೇಪಲ್ ದೆಲಾಂದ್ (Moeurs, institutions, et cérémonies des
peuples de l'Inde (Paris, 1825, 2 vols.), ಎಂಬ ಹೆಸರಿನಲ್ಲಿ
ಪ್ರಕಟಿಸಿದರು. ಇದು ಆ ವಿಷಯಾಧ್ಯಯನದ ಅತ್ಯುತ್ತಮ ಹಾಗೂ ಪರಿಪೂರ್ಣ ಪುಸ್ತಕವೆಂದು
ಪರಿಗಣಿತವಾಗಿದೆಯಲ್ಲದೆ ಸ್ಪಾನಿಷ್ ಭಾಷೆಯಲ್ಲೂ ಪ್ರಕಟವಾಯಿತು. ಇದಲ್ಲದೆ ದ್ಯುಬುವಾ ಅವರು
ಇನ್ನೆರಡು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವು ’ಬ್ರಾಹ್ಮಣ ಧರ್ಮದ ಪ್ರಮುಖಾಂಶಗಳ ನಿರೂಪಣೆ’
(Exposé de quelques-uns des principaux articles de la théologie des
Brahmes -Paris, 1825); ’ವಿಷ್ಣುಶರ್ಮ ಎಂಬ
ಬ್ರಾಹ್ಮಣನ ಪಂಚತಂತ್ರ ಅಥವಾ ಚಾಲಾಕಿತನದ ಕತೆಗಳು’ (Le Pantcha-tantra ou les
cinq ruses, fables du Brahme Vichnou-Sarma - Paris,
1826).
ಬ್ರಿಟಿಷ್ ಸರ್ಕಾರದ ಸನ್ಮಿತ್ರನಾಗಿದ್ದ ಅವರು
ಕ್ರೈಸ್ತ ಆಸ್ತಿಪಾಸ್ತಿಗಳನ್ನು ಹಿಗ್ಗಿಸಿಕೊಳ್ಳಲು ಆ ಸ್ನೇಹವನ್ನು ಸದುಪಯೋಗ ಪಡಿಸಿಕೊಂಡರು. ೧೮೧೩ರಲ್ಲಿ
ಪಾಂಡಿಚೆರಿ ಸೆಮಿನರಿಯು ಹಣದ ಮುಗ್ಗಟ್ಟಿನಲ್ಲಿದ್ದಾಗ ಅದರ ಉಸ್ತುವಾರಿ ವಹಿಸಿಕೊಂಡು ತಮ್ಮದೇ
ಸಂಪನ್ಮೂಲಗಳಿಂದ ಅದನ್ನು ಮುನ್ನಡೆಸಿದರು. ೧೮೧೯ರಲ್ಲಿ ಎಂಎಪಿ ಕೇಂದ್ರಕಚೇರಿಯು ಅವರನ್ನು
ಪ್ಯಾರಿಸಿಗೆ ಕರೆಸಿಕೊಂಡಿತು. ಅವರು ಸ್ವದೇಶಕ್ಕೆ ಹೊರಡುವ ಮುನ್ನ ಬ್ರಿಟಿಷ್ ಸರ್ಕಾರದ ಕೋರಿಕೆಯ
ಮೇರೆಗೆ ತಮ್ಮ ವರ್ಣಚಿತ್ರ ರಚನೆಗೆ ಅನವು ಮಾಡಿಕೊಟ್ಟರು. ಆ ಚಿತ್ರವನ್ನು ಮದ್ರಾಸ್
ಅಕಾಡೆಮಿಯಲ್ಲಿಡಲಾಯಿತು. ಆ ವರ್ಣಚಿತ್ರದ ಮೇಲೆ J
S Dubois Missionary Seringapatam 1st Dec 1826 ಎಂದು ಬರೆಯಲಾಗಿದೆ.
ಪ್ಯಾರಿಸ್ಸಿಗೆ
ಹಿಂದಿರುಗಿದ ಮೇಲೆ ಅಬ್ಬೆ ದ್ಯುಬುವಾ ಅವರು ತಮ್ಮ ಎಂಇಪಿ ಸಂಸ್ಥೆಯ ನಿರ್ದೇಶಕರಾದರು.
ರಾಯಲ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಮತ್ತು ಪ್ಯಾರಿಸ್
ಗಳ ಸದಸ್ಯರೂ ಆಗಿದ್ದ ಅವರು ನಮ್ಮ ದೇಶದ ಸಾಂಸ್ಕೃತಿಕ ಅಧ್ಯಯನಕ್ಕೆ ಹಲವು
ಕೊಡುಗೆಗಳನ್ನು ನೀಡಿದರು.
ಎಂಇಪಿ
ಸಂಸ್ಥೆಯು ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಫಾದರ್ ದ್ಯುಬುವಾ ಅವರು
೧೮೪೮ರ ಫೆಬ್ರವರಿ ೧೭ರಂದು ಸ್ವರ್ಗಸಾಮ್ರಾಜ್ಯ ಸೇರಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ