ಕರ್ನಾಟಕದ ತುತ್ತತುದಿಯಲ್ಲಿರುವ ಬೀದರ ಪ್ರದೇಶದಲ್ಲಿ
ಮೊತ್ತಮೊದಲು ಕ್ರೈಸ್ತ ಧರ್ಮವನ್ನು ಬಿತ್ತಿದವರು ಮೆಥಡಿಸ್ಟರು. ಈ ಮೆಥಡಿಸ್ಟ್ ಪಂಥದ
ಕ್ರೈಸ್ತರಿಗೆ ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ. ಇಂದಿಗೂ ಬೀದರ ನಗರದ ಕೋಟೆಯ
ಬದಿಯಲ್ಲಿರುವ ಮಂಗಲಪೇಟೆಯು ಕ್ರೈಸ್ತರ ಕಾಲನಿಯಾಗಿದ್ದು ಇಲ್ಲಿನ ಬೀದಿ ಬೀದಿಗಳೆಲ್ಲ ಕ್ರೈಸ್ತ
ಹೆಸರನ್ನೇ ಹೊತ್ತಿವೆ. ಒಂದು ದೊಡ್ಡ ಮೆಥಡಿಸ್ಟ್ ಆಸ್ಪತ್ರೆಯೂ ಇಲ್ಲಿದೆ. ಮಂಗಲಪೇಟೆಯ ಕ್ರೈಸ್ತರು
ತಮ್ಮ ಸಂಖ್ಯಾ ಬಾಹುಳ್ಯದ ಕಾರಣದಿಂದ ಬೀದರ ನಗರಸಭೆಯ ದಿಕ್ಕನ್ನೇ ಬದಲಿಸಬಲ್ಲವರಾಗಿದ್ದಾರೆ.
ಇಲ್ಲಿಂದಲೇ ಉದಿಸಿದ ಡೇವಿಡ್ ಸಿಮೆಯೋನ ಎಂಬುವರು ನಮ್ಮ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗಿ
ಸೇವೆ ಸಲ್ಲಿಸಿದ್ದಾರೆ.
ಮಂಗಲಪೇಟೆಯ ಸಂತ ಪೌಲರ ಮೆಥಡಿಸ್ಟ್ ಚರ್ಚಿಗೆ
ಸುತ್ತಮುತ್ತಲ ಹಳ್ಳಿಗಳಿಂದಲೂ ಜನ ಆಗಮಿಸುತ್ತಾರೆ. ಮೇ ತಿಂಗಳ ಹತ್ತರಂದು ಈ ಚರ್ಚಿನಲ್ಲಿ ದೊಡ್ಡ
ಜಾತ್ರೆಯೇ ನೆರೆಯುತ್ತದೆ. ನಿಜಾಮರ ಆಳ್ವಿಕೆಯಲ್ಲಿದ್ದ ಬೀದರ್ ೧೯೫೬ರಲ್ಲಿ ಕರ್ನಾಟಕದ
ಅಂಗವಾಯಿತು. ಆದರೆ ಇಲ್ಲಿನ ಮೆಢಡಿಸ್ಟು ಚರ್ಚು ಕರ್ನಾಟಕದ ಹೊರಗಿನವರ ಅಧೀನದಲ್ಲಿತ್ತು. ಇದೀಗ
ಅದು ಕರ್ನಾಟಕ ಸೆಂಟ್ರಲ್ ಧರ್ಮಪ್ರಾಂತ್ಯದ ಆಡಳಿತಕ್ಕೆ ಬಂದಿದೆಯಾದರೂ ಸರಿಯಾದ ಆಧ್ಯಾತ್ಮಿಕ
ಪೋಷಣೆಯಿಲ್ಲದೆ ಸೊರಗಿದೆ. ಹಾಗಾಗಿ ಬೀದರಿನ ಕ್ರೈಸ್ತರು ತಪ್ಪಿಹೋದ ಕುರಿಗಳಂತಿದ್ದಾರೆ.
ಮೇಲ್ವರ್ಗದ ಜನರ ಅಟಾಟೋಪದಲ್ಲಿ ಸರಕಾರದ ಸವಲತ್ತುಗಳನ್ನು ಪಡೆಯಲಾಗದ ಅಸಹಾಯಕರೂ ಆಗಿದ್ದಾರೆ.
ಬಳ್ಳಾರಿ ಕಥೋಲಿಕ ಧರ್ಮಪ್ರಾಂತ್ಯಕ್ಕೆ ಸೇರಿದ್ದ
ಬೀದರದಲ್ಲಿ ಕಥೋಲಿಕ ಕ್ರೈಸ್ತರು ಇಲ್ಲವೇ ಇಲ್ಲವೆನ್ನುವಷ್ಟಿತ್ತು. ಇದ್ದ ಬೆರಳೆಣಿಕೆಯ ಮಂದಿ
ಉದ್ಯೋಗನಿಮಿತ್ತ ಹೊರಗಿನಿಂದ ಬಂದು ಇಲ್ಲಿ ನೆಲೆ ನಿಂತವರು. ೧೯೮೨ರಲ್ಲಿ ಮಂಗಳೂರು ಕಥೋಲಿಕ
ಧರ್ಮಪ್ರಾಂತ್ಯವು ಬೀದರ ಜಿಲ್ಲೆಯನ್ನು ದತ್ತು ತೆಗೆದುಕೊಂಡಿತು.
ಯುವಪಾದ್ರಿ ರಾಬರ್ಟ್ ಮಿರಾಂಡ ಅವರು ಬೀದರ ನಗರದಲ್ಲಿ
ಬಾಡಿಗೆ ಮನೆ ಹಿಡಿದು ಈ ಮೆಥಡಿಸ್ಟ್ ಕೋಟೆಗೆ ಲಗ್ಗೆಯಿಟ್ಟರು. ಮೆಥಡಿಸ್ಟ್ ಕ್ರೈಸ್ತರ ಮನೆಮನೆಗೆ
ತೆರಳಿದ ಅವರು ಅಲ್ಲಿನ ಕೆಲ ಮಕ್ಕಳಿಗೆ ಒಳ್ಳೆಯ ಮತ್ತು ಉಚಿತ ಶಿಕ್ಷಣದ ಮಹತ್ತನ್ನು ತಿಳಿಸಿ
ತಮ್ಮೆಡೆಗೆ ಸೆಳೆದರು. ಆ ಮೂಲಕ ಸುಮಾರು ೨೮ ಜನರಿಗೆ ಕಥೋಲಿಕ ದೀಕ್ಷೆ ಕೊಡುವ ಮೂಲಕ ಬೀದರದಲ್ಲಿ
ಕಥೋಲಿಕ ಚರ್ಚು ಕಟ್ಟುವ ಕೆಲಸಕ್ಕೆ ನಾಂದಿ ಹಾಡಿದರು. ಆಮೇಲೆ ೧೮-೦೮-೨೦೦೬ರಂದು ಬೀದರ್, ಗುಲ್ಬರ್ಗಾ, ಬಾಗಲಕೋಟೆ ಜಿಲ್ಲೆಗಳನ್ನೊಳಗೊಂಡ ಗುಲ್ಬರ್ಗಾ
ಧರ್ಮಪ್ರಾಂತ್ಯವು ಅಸ್ತಿತ್ವಕ್ಕೆ ಬಂದು ರಾಬರ್ಟ್ ಮಿರಾಂಡರು ಅದರ ಮೊತ್ತಮೊದಲ ಬಿಷಪರಾದರು. ಇಂದು
ಬೀದರ ಜಿಲ್ಲೆಯಲ್ಲಿ ಭಾಲ್ಕಿ, ಜಲಸಂಗ್ವಿ,
ತಾಳಮಡಗಿ,
ಹುಲಸೂರ, ಸಂತಪೂರ, ಉಜ್ಜಿನಿ,
ಕವಡಿಯಾಳ,
ಹಲಬುರ್ಗಾ,
ಔರಾದ, ಹುಮನಾಬಾದ,
ಬಸವಕಲ್ಯಾಣ ಮುಂತಾದೆಡೆಗಳಲ್ಲಿ ಕಥೋಲಿಕ ಚರ್ಚುಗಳಿವೆ.
ಹಲಬರ್ಗದಲ್ಲಿ ಕಪುಚಿನ್ ಸಂನ್ಯಾಸಿಗಳ ಕಿರಿಗುರುಮಠವಿದೆ, ಡಾನ್ ಬಾಸ್ಕೊ ಪಾದ್ರಿಗಳನೇಕರು ಸಹಾ ಬೀದರದಲ್ಲಿ
ಕಾರ್ಯನಿರತರಾಗಿದ್ದಾರೆ.
ಬೀದರ್ ಕ್ರೈಸ್ತರ ಕ್ರಿಸ್ತಾವಲಂಬನೆ ಅನುಕರಣೀಯ.
ಕ್ರೈಸ್ತ ತತ್ವಗಳು ಅವರ ಜಾನಪದದ ಅಂಗವಾಗಿವೆ. ಅವು ಕೀರ್ತನೆ, ಅಭಂಗ, ಕವಾಲಿಗಳ ರೂಪದಲ್ಲಿ ಹೊರಹೊಮ್ಮುತ್ತದೆ. ಅಲ್ಲದೆ ಒಳ್ಳೆಯ
ಗೇಯ ಮತ್ತು ಬಂಧವನ್ನು ಒಳಗೊಂಡಿವೆ. ಅವನ್ನು ಈ ಜನ ಭಜನೆಗಳೆಂದು ಕರೆಯುತ್ತಾರೆ. ನಾನು ಭೇಟಿಯಾದ
ಶಾಂತಮ್ಮ, ಡೇವಿಡ್ ಮುಂತಾದವರನ್ನು ಈ ಭಜನೆಗಳ ಕುರಿತಂತೆ
ಮಾತನಾಡಿಸಿದಾಗ ಅವರು ಎನ್ ಆರ್ ಲೂಕ್ ಎಂಬ ಉಪದೇಶಕನನ್ನು ಸ್ಮರಿಸಿಕೊಂಡರು.
ಲೂಕರು ಬಹುಶಃ ಸಂಗೀತಜ್ಞಾನವಿದ್ದವರಂತೆ ತೋರುತ್ತದೆ.
ಅನಾಮಿಕ ಕವಿಗಳ ಸೃಷ್ಟಿಯಾದ ಈ ಭಜನೆಗಳನ್ನು ಲೂಕರು ಊರಿಂದೂರಿಗೆ ತೆರಳಿ ಈ ಭಜನೆಗಳನ್ನು
ಜನಪ್ರಿಯಗೊಳಿಸಿದ್ದಾರೆ. ಪ್ರತಿವರ್ಷ ಮೇ ತಿಂಗಳ ಹತ್ತರಂದು ನಡೆಯುವ ಮಂಗಲಪೇಟೆ ಜಾತ್ರೆ ಹಾಗೂ
ತಪಸ್ಸುಕಾಲದಲ್ಲಿ ನಡೆಯುವ ಧಾರೂರು ಜಾತ್ರೆಗಳಲ್ಲಿ ಇವರು ಮುಖ್ಯ ಭೂಮಿಕೆಯಲ್ಲಿ
ಇರುತ್ತಿದ್ದರೆಂದು ಬಲ್ಲವರು ನೆನೆಯುತ್ತಾರೆ. ಇಂದು ಲೂಕರು ಇಲ್ಲವಾದರೂ ಅವರು ಬಿಟ್ಟುಹೋಗಿರುವ ಈ
ಭಜನೆಗಳನ್ನು ಪೇಟಿ ತಾಳ ಗೆಜ್ಜೆ ತಬಲಾಗಳ ಜೊತೆಗೆ ಕೈ ಚಪ್ಪಾಳೆ ಹೊಡೆಯುತ್ತಾ ಎಲ್ಲರೂ ಸೇರಿ
ಹಾಡುವುದನ್ನು ಕೇಳಲು ಬಲು ಸೊಗಸಾಗಿರುತ್ತವೆ. ಭಾಲ್ಕಿಯ ಚೆನ್ನಬಸವೇಶ್ವರ ಕಾಲೇಜಿನಲ್ಲಿ
ಉಪನ್ಯಾಸಕರಾಗಿರುವ ಮಿತ್ರರಾದ ಶ್ರೀನಿವಾಸ ಬೇಂದ್ರೆಯವರು ಭಾಲ್ಕಿಯ ಬಾಲಯೇಸು ದೇವಾಲಯಕ್ಕೆ
ನನ್ನನ್ನು ಕರೆದೊಯ್ದು ಅಲ್ಲಿನ ಜನ ಈ ವಾದ್ಯಗಳನ್ನು ಬಳಸುತ್ತಾ ಹಾಡುವುದನ್ನು ನನಗೆ ಉತ್ಸಾಹದಿಂದ
ತೋರಿದರಲ್ಲದೆ ತಾವೂ ಒಂದು ವಾದ್ಯವನ್ನು ಕೈಗೆತ್ತಿಕೊಂಡು ನುಡಿಸಿದರು. ನಾವು ದಕ್ಷಿಣ
ಕರ್ನಾಟಕದಲ್ಲಿ ಬಳಸುತ್ತಿರುವ ಶಿಲುಬೆಯೆ ನಿನ್ನ ಮಾರ್ಗ, ಮುಂದೆ ನಡೆಯುವಾಗ ಹಿಂದೆ ನೋಡದಿರು . . ಹಾಗೂ ನನ್ನೇಸು ರಾಜನು ಬರುವ ಅಸಂಖ್ಯ ದೂತರೊಡನೆ .
. ಇವೆಲ್ಲ ಮೂಲತಃ ಬೀದರ್ ಜಾನಪದ ಗೀತೆಗಳೇ
ಆಗಿವೆ.
ಸುಮಾರು ನಲವತ್ತು ವರ್ಷಗಳ ಹಿಂದೆ ಯೇಸುಸಭೆಯ ಸ್ವಾಮಿ
ಸುಪ್ರಿಯ ಅವರು ಸಂಗ್ರಹಿಸಿದ್ದ ಒಂದು ಗೀತಮಾಲಿಕೆಯಲ್ಲಿ ನಾನು ಈ ಒಂದು ಹಾಡನ್ನು ನೋಡಿದ
ನೆನಪಿದೆ. ಅದು ಹೀಗೆ ಪ್ರಾರಂಭವಾಗುತ್ತದೆ.
(ರಾಗ: ಭೈರವಿ ತಾಳ: ತ್ರಿತಾಳ)
ಎಲ್ಲಿ ಹಾನ ಪರಮಾತ್ಮ ಎನ್ನಾತ್ಮದೊಳು
ಎಲ್ಲಿಹಾನ ಪರಮಾತ್ಮ? ಎಲ್ಲೆಲ್ಲಿ ನೋಡಿದರೂ ಅಲ್ಲಿಯೂ ಹಾನ
೧. ಖುಲ್ಲ ಮಾನವರೆಲ್ಲಾ ಗಿಲ್ಲೆ ಮಾಡ್ವದು ಕಂಡು
ಕಲ್ಲಿಗಿಂತ ಕಲ್ಲಾಗ್ಯನ ಪರಮಾತ್ಮ
೨. ಪಾಪ ಗುಣಗಳ ಬಿಟ್ಟಲ್ಲಿ ಹಾನ
ಯೇಸು ನಾಮವು ನೆನೆದಲ್ಲಿ ಹಾನ
೩. ಕೂಸಿನ ಭಾವವು ಹೊಂದಿದಲ್ಲಿ ಹಾನ
ಹೇಸಿಗೆ ಕಾರ್ಯಗಳ ಬಿಟ್ಟಲ್ಲಿ ಹಾನ
ಯೇಸುಸಭೆಯ ಸ್ವಾಮಿ ಸುಪ್ರಿಯ, ಸ್ವಾಮಿ ಪ್ರಭುಧರ, ಸ್ವಾಮಿ ಅಮಲಾನಂದ, ಸ್ವಾಮಿ ಕ್ಲಾಡ್ ಡಿಸೋಜ ಮುಂತಾದವರು ಅಂದು ಬೆಳಗಾವಿ
ಬಿಜಾಪುರದ ಸುತ್ತಮುತ್ತಲಲ್ಲಿ ಕ್ರಿಸ್ತವಾಕ್ಯವನ್ನು ಸಾರಿದವರು. ಅಲ್ಲಿದ್ದ ಮೂಲನಿವಾಸಿ
ಕ್ರೈಸ್ತರಲ್ಲಿ ಬಹುಶಃ ಈ ಗೀತೆ ಪ್ರಚಲಿತವಾಗಿದ್ದಿರಬೇಕು. ಹಾಗೆಯೇ ಅದು ಬೀದರವರೆಗೂ
ಹರಿದುಬಂದಿರಬೇಕು ಎನ್ನಬಹುದು. ಅಥವಾ ಇಲ್ಲಿಂದಲೇ ಅದು ಬೆಳಗಾವಿವರೆಗೂ ತಲಪಿರಬಹುದೇನೋ?
ಬೀದರ್ ಜಿಲ್ಲೆಯು ೧೯೫೬ರವರೆಗೂ ಹೈದರಾಬಾದಿನ
ಆಳ್ವಿಕೆಯಲ್ಲಿದ್ದುದರ ಕಾರಣ ಆಡುಮಾತಿನಲ್ಲಿ ಉರ್ದು ಪ್ರಭಾವ ಸಾಕಷ್ಟಿದೆ. ’ಸಾಬರೇ, ನಿಮ್ ಸಲುವಾಗೇ ನಾನು ದೋನ್ ಕಿಲೊಮೀಟರು ನಡಕೋತಾ
ಬಂದೀನ್ರೀ ಯಪಾ, ಮತ್ತ ದೀಡ್ ತಾಸ್ ಕಾದೀನ್ರೀ, ನೀವ್ ಹೇಳೂದು ಖರೇ ಅದರೀ, ಮಗರ್ ಪೈಲೇ ನನ್ ಕಡಿ ಜರಾ ನೋಡ್ರೀ, ಹಫ್ತಾಗೊಂದ್ಸಾರಿ ದೇಖರೇಖೀ ಮಾಡುವಲ್ದ್ಯ, ವ್ಯಾಪಾರ್ ಭೀ ನುಕ್ಸಾನ್ ಆಗೇದರೀ, ನೀವು ಬೆಹೇಸ್ ಮಾಡಬ್ಯಾಡರೀ, ನಡೀರಿ ಮುಂದ ಗಾಡಿ ಚಾಲೂ ಮಾಡ್ರೀ, ನಿಮಗೂ ಭೀ ನನಗೂ ಭೀ ದೇವರು ನಜರ್ ಮಡಗಿದಾನ್ರೀ’
ಈ ರೀತಿಯಾಗಿ ಬೀದರದ ಆಡುಮಾತು ನಡೆದಿರುತ್ತದೆ. ಈ
ಆಡುಮಾತುಗಳ ಪ್ರಭಾವ ಕ್ರೈಸ್ತ ಭಜನೆಗಳ ಮೇಲೂ ಆಗಿವೆ. ಉರ್ದುವಿನ ಕವಾಲಿಗಳು ಕನ್ನಡ
ಕ್ರೈಸ್ತರಲ್ಲೂ ಕವಾಲಿಗಳನ್ನು ಹುಟ್ಟುಹಾಕಿವೆ. ಪವಿತ್ರ ಬೈಬಲ್ಲಿನ ಇಡೀ ಪಠ್ಯವನ್ನು ಕವಾಲಿಯ
ಮೂಲಕ ಹಾಡುತ್ತಾ ಸಾಗುವುದು ಬೀದರದ ವೈಶಿಷ್ಟ್ಯ. ತಪ್ಪಿಹೋದ ಮಗನ ಸಾಮತಿಯು ಒಂದಾನೊಂದು ಊರಿನಲ್ಲಿ
ಸಾಹುಕಾರನ . . . ಎಂದು ಕವಾಲಿಯಾಗಿ
ಮೂಡಿಬರುತ್ತದೆ. ಸ್ವಾಮಿ ಅಮಲಾನಂದರ ಮಧುರಮಯ ಕ್ರಿಸ್ತಹೃದಯ ಆಶ್ರಯ ನಮ್ಮಯ ಜೀವಿತದ . . ಎಂಬುದೂ
ಒಂದು ಕವಾಲಿಯಂತೆ ತೋರುತ್ತದೆ.
ಕೋಲಾಟವು ನಮ್ಮ ಜನಪದರ ಒಂದು ಸರಳ ಕಲಾತ್ಮಕ ಅಭಿವ್ಯಕ್ತಿ
ಎನ್ನಬಹುದು. ಕೋಲಾಟವು ಯಾವುದೇ ವಿಶಿಷ್ಟ ವೇಷಭೂಷಣ ರಂಗಸಜ್ಜಿಕೆ ವೇದಿಕೆಗಳ ಸಿದ್ಧತೆಯಿಲ್ಲದೆ
ನಿಂತ ನಿಲುವಿನಲ್ಲಿ ಆಡಬಹುದಾದ ಕಲೆ. ಅದಕ್ಕೆ ಬೇಕಾಗಿರುವುದು ಎರಡು ಕೋಲು, ಹಾಡುವ ಹಾಗೂ ಆಡುವ ಕಸುವು ಅಷ್ಟೇ. ಜೀವಾಳ. ಬೀದರದ ಕ್ರೈಸ್ತ ಜನಸಮುದಾಯದವರ
ಕಲಾಪ್ರಕಾರಗಳಲ್ಲಿ ಕೋಲಾಟಕ್ಕೂ ಸ್ಥಾನವಿದೆ. ಅವರು ಆಡುವ ಕೋಲಾಟಗಳಲ್ಲೂ ಕ್ರೈಸ್ತಸಂಬಂಧೀ ಗಾನಗಳು
ಬಳಕೆಯಲ್ಲಿರುವುದನ್ನು ಶಿಲುಬೆಯ ಹೊತಗೊಂಡು ಗೊಲ್ಗೊಥಾಕ್ ಹ್ಯಾಂಗ್ ಹೋದಿ ಎಂಬಂಥ ಒಂದು ಹಾಡು
ನಿರೂಪಿಸುತ್ತದೆ.
ಪವಿತ್ರ ಬೈಬಲ್ ಪಾರಾಯಣವನ್ನು ಮಾಡಲಾಗದ ಅವಿದ್ಯಾವಂತ
ಭಕ್ತರಿಗಾಗಿಯೇ ಹರಿಕತೆಯಂತಹ ಪ್ರಕಾರದಲ್ಲಿ ಹಾಡಲಾಗುತ್ತದೆ. ಬೀದರಿನ ಜನತೆಗೆ ಅದು ಬಾಯಿಪಾಠವೇ
ಆಗಿಬಿಟ್ಟಿದೆ. ಅಂಥ ಕೆಲ ಸಾಲುಗಳು ಹೀಗಿವೆ:
ಅರಣ್ಯ ಅಡವಿಯೊಳಗೆ ಯೇಸು ನಾಲ್ವತ್ತು ದಿನಗಳ ಕಳೆದ
ಪೊಡವಿಗೀಶನು ಉಪವಾಸ ಮಾಡಿದ ಮೇಲೆ
ಒಡಲೊಳಗಿಲ್ಲದೆ ಹಸಿದ
ಕಡುವೈರಿ ಆತನ ಶೋಧಿಸಿದ
ಎತ್ತರದ ಬೆಟ್ಟಕೆ ಒಯಿದ, ಎಲ್ಲ ರಾಜ್ಯಗಳ ತೋರಿಸಿದ
’ಸುತ್ತಮುತ್ತಲ ದೇಶಗಳೆಲ್ಲವಂ ಖಾತರಿ ಕೊಡುವೆನು ನಿನಗೆ,
ಸಾಷ್ಟಾಂಗ ಮಾಡು ನನಗೆ’
"ದುಷ್ಟ ಪಿಶಾಚನೆ ತೊಲಗು, ನೀ ನನ್ನನ್ನು ಬಿಟ್ಟು ಹೊರಟ್ಹೋಗು,
ಸೃಷ್ಟಿಕರ್ತನಿಗೆ ಅಡ್ಡಬೀಳಲೆಂದು
ಶ್ರೇಷ್ಠದಿ ಹೇಳುತದೆ ವೇದ
ನನಗ್ಯಾಕೆ ಹಾಕುತೀಯೋ ಶೋಧ?"
ಈ ನಿರೂಪಣೆಯಲ್ಲಿ ಬೀದರ್ ಜಿಲ್ಲೆಯ ನುಡಿಯ ಸೊಗಡು ಎದ್ದು
ಕಾಣುತ್ತದೆ ಅಲ್ಲವೇ? ಬೀದರದಲ್ಲಿ ಬಳಕೆಯಲ್ಲಿರುವ ಕ್ರೈಸ್ತ ಭಜನೆಗಳಲ್ಲಿ
ಹಿಂದೂಸ್ತಾನಿ ಮತ್ತು ಕರ್ನಾಟಕೀ ಶೈಲಿಯ ಸಂಗೀತ ಪ್ರಕಾರಗಳೆರಡೂ ಇವೆ. ಪುರಂದರದಾಸರ ’ಚಿಂತೆಯಾತಕೋ ಮನುಜ ಭ್ರಾಂತಿಯಾತಕೋ’ ಎನ್ನುವ ಕೀರ್ತನೆಯನ್ನೇ ಅಲ್ಪಸ್ವಲ್ಪ ಬದಲಾಯಿಸಿರುವ ಈ
ಹಾಡನ್ನು ನೋಡಿ.
ಚಿಂತೆಯಾತಕೋ ಮನುಜ ಭ್ರಾಂತಿಯಾತಕೋ?
೧. ಮಾತಾಪಿತರು ಕೈಬಿಟ್ಟರೇನು, ಸತಿಸುತರು ತೊರೆದರೇನು
ಜ್ಯೋತಿಯುಳ್ಳ ಯೇಸುರಕ್ಷಕ ಎಂದೂ ಕೈಬಿಡನು
೨. ನಾನಾ ತರದ ಕಷ್ಟಗಳಿದ್ದರೂ ನಾನಾ ತರದ ರೋಗಗಳಿದ್ದರೂ
ಜ್ಞಾನಭರಿತ ಯೇಸುನಾಥ ವಾಸಿ ಮಾಡ್ವನು
೩. ಸಕಲ ವೈಭವ ಪಡೆದರೇನು, ನಿಕಟ ಐಶ್ವರ್ಯವಿಟ್ಟರೇನು
ದಿಕ್ಕುತೋಚದೆ ತಾ ಸತ್ತು ಹೋದರೆ ಯೇಸು ಕೈಬಿಡನು
೪. ಗಗನ ಹಕ್ಕಿಗೆ ಗೂಡು ನೋಡು, ಬಗೆಬಗೆಯ ಪುಷ್ಪಗಳನು ನೋಡು
ಇದಕ್ಕಿಂತ ಹೆಚ್ಚಾಗಿ ಭಾಗ್ಯ ಕೊಟ್ಟ ಯೇಸು ಕೈಬಿಡನು
ಬೀದರವು ಮಹಾರಾಷ್ಟ್ರ ಮತ್ತು ಆಂಧ್ರ ಗಡಿಗಳನ್ನು ಸಮನಾಗಿ
ಹೊಂದಿದೆ. ಆದರೆ ಇಲ್ಲಿ ತೆಲುಗಿನ ಪ್ರಭಾವ ಏನೂ ಇಲ್ಲ. ಮರಾಠಿಯ ಪ್ರಭಾವ ಮಾತ್ರ ಆಗಿದೆಯೆನ್ನುವುದಕ್ಕೆ
ಕನ್ನಡದಲ್ಲೂ ಅಭಂಗಗಳ ಪ್ರಯೋಗ ಆಗಿರುವುದೇ ಸಾಕ್ಷಿ. ಇಲ್ಲೊಂದು ಅಭಂಗ ಇದೆ ನೋಡಿ.
(ಅಭಂಗ)
ಬಂಡೆ ಮೇಲೆ ಮನೆ ಕಟ್ಟಿರಯ್ಯಾ ಥಂಡಿ ಹಿಡಿದು
ಗಟ್ಯಾಗುವುದಯ್ಯಾ
೧. ರೇತಿ ಮೇಲೆ ಮನೆ ಕಟ್ಟಿಬಿಡಿರಯ್ಯಾ
ಖ್ಯಾತಿ ಕಳೆದು ಬಿಟ್ಹೋಗುವುದಯ್ಯಾ
೨. ಸ್ವಾಮಿಪಾದ ಗಟ್ಟಿ ಹಿಡಿಯಿರಯ್ಯಾ
ಪ್ರೇಮದಿಂ ಯೇಸುಗೆ ನೆನೆಸಿರಯ್ಯಾ
೩. ಕಷ್ಟ ಬಂದಾಗ ಜರಿಬೇಡಿರಯ್ಯಾ
ನಿಷ್ಠೆ ಇಟ್ಟು ಸ್ವಾಮಿಗೆ ಹಿಡುಕೊಳ್ಳಿರಯ್ಯಾ
೪. ನಮ್ಮ ಭಾರ ಯೇಸು ಹೊತ್ತನಯ್ಯಾ
ಭೂಮಿ ಜನಕ್ಕೆ ಶಾಂತಿ ಕೊಟ್ಟನಯ್ಯಾ
ಈಗ ಬೆಂಗಳೂರಿನಲ್ಲಿ ನೆಲೆಸಿರುವ ಆದರೆ ಮೂಲತಃ
ಬೀದರಿನವರೇ ಆದ ಡಾ. ಲೀಲಾವತಿ ದೇವದಾಸ್ ಅವರನ್ನು ಈ ಕುರಿತು ಮಾತನಾಡಿಸಿದಾಗ ಅವರು ತಮ್ಮೂರಿನ
ಜಾನಪದ ಸಿರಿಯ ಕುರಿತು ಸಂಭ್ರಮದಿಂದ ಮಾತನಾಡಿದರು. ಯೇಸುಸ್ವಾಮಿ ಹನ್ನೆರಡು ವಯಸ್ಸಿನ
ಬಾಲಕನಾಗಿದ್ದಾಗ ಕಳೆದುಹೋಗುವ ಸಂದರ್ಭದಲ್ಲಿ ಮರಿಯಾ ಮಾತೆಯು ಹಾಡುವ ಹೀಂಗಿದ್ದ ನನ ಮಗ, ಕಳೆದೋದ ತಾಯೇ, ಎಲ್ಲೆಲ್ಲೆ ನೋಡಿದರಿಲ್ಲ . . . ಎಂಬ ಹಾಡು ತಮಗೆ ತುಂಬಾ
ಇಷ್ಟ ಎಂದು ಹೇಳಿಕೊಂಡರು.
ಬೀದರ್ ಭಜನೆಗಳಲ್ಲಿ ಆಡುಮಾತಿನವಷ್ಟೇ ಅಲ್ಲದೆ
ಶಿಷ್ಟವೆನ್ನಬಹುದಾದ ಪ್ರಯೋಗಗಳೂ ಇವೆಯೆನ್ನಲು ಇಲ್ಲೊಂದು ಉದಾಹರಣೆ ಇದೆ.
(ರಾಗ: ಯಮನ್ ತಾಳ:ತ್ರಿತಾಳ)
ಜಗದಲ್ಲಿ ಮೆರೆಯುವೆವು ಓ ಸ್ವಾಮೀ ಬಗೆಬಗೆ ನೋಡುವೆವು
೧. ಸುಲಲಿತ ಸುಕಾರ್ಯ ಇಂದು ಮಾಡುವೆವು
ಶ್ರೀಗುರುಯೇಸುವೆ ವರವ ಬೇಡುವೆವು
ಅಘಹರ ಯೇಸುನಾಥ ಬಗೆಬಗೆ ನೋಡುವೆವು
೨. ಇಷ್ಟು ನಿನ್ನ ಆಟವೈ ಸೃಷ್ಟಿನಿಟ್ಟ ಫಲವೈ
ಸೃಷ್ಟಿಯೊಳು ಬಾಳುವ ಕರ್ತನ ನಾಮವೈ
ಅಘಹರ ಯೇಸುನಾಥ ಬಗೆಬಗೆ ನೋಡುವೆವು
೩. ಸುಲಲಿತ ಇಳೆಯೊಳು ಹೂತಟ ಗದ್ದೆಯೊಳು
ಮಳೆಯಂತೆ ಬೆಳೆದಿರ್ಪ ತರತರ ಫಲಗಳು
ಅಘಹರ ಯೇಸುನಾಥ ಬಗೆಬಗೆ ನೋಡುವೆವು
ಇಂಥಾ ಸಂಪದ್ಭರಿತ ಸಾಲುಗಳನ್ನು ರಚಿಸಿದ ಆ
ಪುಣ್ಯಾತ್ಮನಾರೋ ತಿಳಿಯದು. ಆದರೆ ಬೀದರಿನ ಅಮೋಘ ಕ್ರೈಸ್ತ ಜಾನಪದ ಸಿರಿಯನ್ನು ಅದು ಇದ್ದಹಾಗೆಯೇ
ದಾಖಲಿಸುವ ಹಾಗೂ ಅವುಗಳ ಬಗ್ಗೆ ವಿಸ್ತೃತ ಸಂಶೋಧನೆ ನಡೆಸುವಂಥ ಕಾಯಕ ಮಾತ್ರ ಆಗಬೇಕಿದೆ.
(ಬೀದರ್ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ
ಎದುಗಿರುವ ಪವಿತ್ರ ಹೃದಯ ಚರ್ಚಿನಲ್ಲಿ ಒಂದು ವಿಚಿತ್ರ ನಡವಳಿಕೆಯಿದೆ. ಸುಮಾರು ಇಪ್ಪತ್ತು
ಮೂವತ್ತು ಚದರಡಿಗಳ ಈ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ ಅಥವಾ ಗೊತ್ತಾದ ಸಮಯಗಳಲ್ಲಿ ಬೀದರದ
ಕನ್ನಡ ಕ್ರೈಸ್ತ ಬಾಂಧವರು ಸೇರಿ ಧಾರ್ಮಿಕ ವಿಧಿವಿಧಾನಗಳಲ್ಲಿ ಒಂದು ಕುಟುಂಬದಂತೆ
ಭಾಗವಹಿಸುತ್ತಾರೆ. ಭಾನುವಾರದಂದು ಲವಲವಿಕೆಯ ಈ ಕನ್ನಡ ಪೂಜೆಯನ್ನು ಹೊರತುಪಡಿಸಿ, ಹೊರಗಿನಿಂದ ಬಂದು ಬೀದರದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಾಗಿರುವ
ಸುಮಾರು ಇನ್ನೂರು ಮಂದಿಗಾಗಿ ಶಾಲಾ ಸಭಾಂಗಣದಲ್ಲಿ ಇಂಗ್ಲಿಶಿನಲ್ಲಿ ಪೂಜೆ ಇರುತ್ತದೆ. ಈ ಜನ
ಪೂಜೆಯಲ್ಲಿ ಭಾಗವಹಿಸಿ ಹುಂಡಿಗೆ ಪುಡಿಗಾಸು ಹಾಕಿ,
ಪೂಜಾನಂತರ ತಮ್ಮ ಭಾಷೆಯಲ್ಲಿ ಒಟ್ಟಾಗಿ ಪ್ರಾರ್ಥನೆ ಮಾಡಿ
ನಗುನಗುತ್ತಾ ಹೊರನಡೆಯುತ್ತಾರೆ. ಆದರೆ ಇವರಿಗೆ ಸ್ಥಳೀಯ ಧರ್ಮಸಭೆಯ ಅಥವಾ ಸ್ಥಳೀಯ ದೇವಾಲಯದ
ಕುರಿತು ಎಳ್ಳಷ್ಟೂ ಕಾಳಜಿಯಿಲ್ಲ. ಇಂಥ ಪ್ರವಾಸಿ ಕ್ರೈಸ್ತರ ಜನಸಂಖ್ಯೆಯನ್ನು ನೆಚ್ಚಿಕೊಂಡು
ಸ್ಥಳೀಯರನ್ನು ಮರೆತರೆ ಚರ್ಚಿಗೆ ಉಳಿಗಾಲವಿಲ್ಲ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ