ಅದನ್ನು ಓದಿದ ನಂತರ
ನನ್ನ ಮನಸು ಹಾಗೂ ವಿಚಾರಲಹರಿ ಇಂದಿಗೂ ಕೂಡಾ ಒಂದು ರೀತಿಯ ಅಲೌಕಿಕ ಆನಂದದ ತುಮುಲದಲ್ಲಿ
ತೇಲುತ್ತಿದೆ. ಹರಿಹರೇಶ್ವರರನ್ನು ನಾನು ನೋಡಿದವನಲ್ಲ. ಜೀವನಕ್ಕಾಗಿ ಅಮೆರಿಕದಲ್ಲಿ ಸುಮಾರು
ನಾಲ್ಕು ದಶಕಗಳ ಕಾಲ ನೆಲೆನಿಂತಿದ್ದ ಅವರು ಉದ್ಯೋಗದ ಜೊತೆಜೊತೆಗೇ ಅಲ್ಲಿನ ಹಿಂದೂ ಗುಡಿಯಲ್ಲಿ
ಪೂಜಾರಿಯಾಗಿ, ಹಿಂದೂ ಬಾಂಧವರ ಧಾರ್ಮಿಕ ರೀತಿ ರಿವಾಜುಗಳ ಪುರೋಹಿತರಾಗಿ, ಎಲ್ಲಕ್ಕಿಂತ ಮೇಲಾಗಿ
ಅಲ್ಲಿನ ಕನ್ನಡಿಗರನ್ನು ಒಂದುಗೂಡಿಸಿದ ’ಅಕ್ಕ’ ಎಂಬ ಸಂಘಟನೆಯ ರೂವಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಅಮೆರಿಕದ
ಜೀವನಯಾತ್ರೆಯಲ್ಲಿ ಸಹಜವಾಗಿಯೇ ಅವರು ಕ್ರೈಸ್ತ ಧರ್ಮದ ಆಚರಣೆಗಳ ಹಾಗೂ ಪವಿತ್ರ ಬೈಬಲಿನ ಸಂಸರ್ಗಕ್ಕೆ
ಬಂದಿದ್ದಾರೆ. ಯೊವಾನ್ನನು ಬರೆದ ಶುಭಸಂದೇಶವು ಅವರ ಮೇಲೆ ಗಾಢ ಪ್ರಭಾವ ಬೀರಿತೆಂದೂ, ಅದನ್ನು
ಭಗವದ್ಗೀತೆಯೊಂದಿಗೆ ಹೋಲಿಸಿ ಸಮಾನ ಅಂಶಗಳನ್ನು ದಾಖಲಿಸುತ್ತಾ ಅಧ್ಯಯನ ಪೂರ್ವಕವಾಗಿ ಓದಿದೆನೆಂದೂ
ಅವರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
“ಸುವಾರ್ತೆಗಳಲ್ಲಿ
ನನಗೆ ಬಹಳ ಪ್ರಿಯವಾದದ್ದು ಸಂತ ಜಾನನ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಕೊನೆಯ ಸುವಾರ್ತೆ. . .
[ಇ]ಲ್ಲಿ ಮಾತ್ರವೇ ಕಾಣಬರುವ ಹೊಸ ಹೊಸ ವಸ್ತುಗಳ ಪ್ರಾಮುಖ್ಯತೆಯಾದರೂ ಏನು?ಉಳಿದವಲ್ಲೂ ಇದ್ದು,
ಇಲ್ಲೂ ಇರುವ, ಕತೆಗಳಲ್ಲಿ ವಿಷಯಗಳಲ್ಲಿ ಈ ಸುವಾರ್ತೆಕಾರ ಮಾಡಿಕೊಂಡಿರುವ ಬದಲಾವಣೆಗಳ ಮತ್ತು
ಸೇರ್ಪಡೆಗಳ ಮಹತ್ವವಾದರೂ ಏನು? ಇವೆಲ್ಲ ಚಿಂತನೀಯ ವಿಷಯಗಳು. ನನ್ನ ತೌಲನಿಕ ಅಧ್ಯಯನಕ್ಕೆ ಈ
ಸುವಾರ್ತೆಯನ್ನೇ ಏಕೆ ಆರಿಸಿಕೊಂಡಿದ್ದೇನೆಂಬುದು
. . [ಈ ಪುಸ್ತಕವನ್ನು] ಓದಿದಾಗ ಸಹೃದಯರಿಗೆ ಮನವರಿಕೆಯಾಗುವುದು.”
ಎಂದು ಹೇಳಿರುವ
ಅವರು ಇಂಥದೊಂದು ಅಧ್ಯಯನ ನಡೆಸಿದ್ದೇನೆ, ಇದನ್ನೇ ಪಿಎಚ್‌ಡಿ ಪ್ರಬಂಧವಾಗಿ ರೂಪಿಸುವ ಬಯಕೆಯಿದೆ,
ಕನ್ನಡನಾಡಿನ ಯಾವುದಾದರೂ ಯೂನಿವರ್ಸಿಟಿಯಲ್ಲಿ ಈ ಕುರಿತು ನೋಂದಾಯಿಸಿಕೊಳ್ಳಲು ನೆರವಾಗಿರಿ ಎಂದು
ಪ್ರೊಫೆಸರ್ ಅಶ್ವತ್ಥನಾರಾಯಣರನ್ನು ಕೇಳಿದ್ದರಂತೆ. ದುರದೃಷ್ಟವಶದಿಂದ ಅದಾಗಿ ಒಂದೂವರೆ
ತಿಂಗಳಲ್ಲೇ ಅವರು ತೀರಿಕೊಂಡರು. ಅವರ ಶವವನ್ನು ಮೈಸೂರಿಗೆ ತಂದಾಗ ಅವರ ಕೊನೆಯ ದರ್ಶನ ಪಡೆಯಲು ಅಪಾರ
ಜನಸಂದಣಿ ಕಾದಿತ್ತು.
ಇತ್ತೀಚೆಗೆ ಪ್ರೊ.
ಅಶ್ವತ್ಥನಾರಾಯಣರು ದೂರವಾಣಿಯಲ್ಲಿ ಮಾತನಾಡುತ್ತಾ ಒಂದು ಹೊಸ ಪುಸ್ತಕವಿದೆ ಬಂದು ತೆಗೆದುಕೊಂಡುಹೋಗಿ ಎಂದರು. ಜಾನನ ಸುವಾರ್ತೆಯ ಅಧ್ಯಯನದ
ಹಸ್ತಪ್ರತಿಯನ್ನು ಹರಿಹರೇಶ್ವರರ ನಿಧನಾನಂತರ ಅವರ ಶ್ರೀಮತಿ ನಾಗಲಕ್ಷ್ಮೀ ಹರಿಹರೇಶ್ವರರು
ಪ್ರಕಟಿಸಿದ್ದ ಪುಸ್ತಕವದು. ಹರಿಹರೇಶ್ವರರ ಕುರಿತು ಪ್ರೊಫೆಸರು ಮಾತನಾಡುತ್ತಿದ್ದ ಹಾಗೇ ಒಂದೆರಡು
ಪುಟಗಳತ್ತ ಕಣ್ಣಾಡಿಸಿದೆ. ಯಾವುದೋ ಅವ್ಯಕ್ತ ಆನಂದದ ಭಾವ ಉದಯವಾಗಿ ಆ ಪ್ರಕಾಶ
ನನ್ನನ್ನಾವರಿಸಿತು. ನಾವು ದಿನನಿತ್ಯ ಓದುವ ನಮಗೆ ಚಿರಪರಿಚಿತವಾಗಿರುವ ಯೇಸುವಿನ ಜೀವನದ
ದೃಶ್ಯಗಳು ಇಂದು ಬೇರೆಯೇ ತೆರನಾಗಿರುವಂತೆ ಇನ್ನಷ್ಟು ಹೊಳಪಾದಂತೆ ಹರಿಹರೇಶ್ವರರು ಮಂಡಿಸುತ್ತಾ
ಸಾಗಿದರು.
ನಡುನಡುವೆ
ಕೃಷ್ಣನಿಗೆ ಹೋಲಿಸುತ್ತಾ, ಗೀತೆಯ ಮಾತುಗಳನ್ನು ಸಮೀಕರಿಸುತ್ತಾ, ಕಥಾಕಥಿತ ಚರ್ವಿತಚರ್ವಣದ
ಸಂಗತಿಗಳನ್ನು ತಿಳಿಯಾಗಿ ನವಿರಾಗಿ ಅಷ್ಟೇ ವಿಶದವಾಗಿ, ಸುಲಲಿತ ಸುಭಗ ಸಲಿಲಧಾರೆಯಾಗಿ
ಪ್ರವಹಿಸುತ್ತಾ ಹೋದರು. ಎಷ್ಟೋ ಕಡೆಗಳಲ್ಲಿ ಅವರ ಮಾತು ಅಪೂರ್ಣವಾಗಿದೆ ಆದರೆ ನಮ್ಮ ಮನದಂಗಳಕ್ಕೆ
ಮುಂದಿನದು ಗೋಚರವಾಗುತ್ತದೆ. ಮುಂದೆ ಇನ್ನಷ್ಟು ವಿಸ್ತರಿಸಿ ಬರೆಯೋಣ ಎಂದು ಅವರು ಗುರುತು
ಹಾಕಿಕೊಂಡಿದ್ದಿದೆ, ಆದರೆ ಬರೆದ ಸಾಲುಗಳೇ ಎಷ್ಟೋ ಸುಳಿವುಗಳನ್ನು ಒಳಗೊಂಡು ನಾನಾರ್ಥ
ಶ್ರೀಮಂತಿಕೆಯನ್ನು ತೋರುತ್ತಿವೆ. ಅವರ ಈ ಮಹಾನ್ ಕೃತಿಯಲ್ಲಿ ಬರುವ ಪ್ರಾರ್ಥನೆಯೆಂಬ ಉಪೋದ್ಘಾತದ
ಕುರಿತು ಒಂದೆರಡು ಮಾತುಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತೇನೆ. ಮಿಕ್ಕಿದ್ದನ್ನು ಪುಸ್ತಕ ಕೊಂಡು
ಓದಿರೆಂದು ನನ್ನ ಪ್ರಾರ್ಥನೆ.
ಕೇಳಿರಿ
ಕೊಡಲಾಗುವುದು ತಟ್ಟಿರಿ ತೆರೆಯುವುದು ಎಂಬ ಯೇಸುವಿನ ನುಡಿಗಳು ಹರಿಹರೇಶ್ವರರ ಮಾತುಗಳಲ್ಲಿ
ಗೇಯರೂಪ ಪಡೆದುಕೊಳ್ಳುತ್ತವೆ. (ಪುಟ ೯೭)
“ತಟ್ಟಿ ಕದವನು ಬೇಗ;
ಒಡನೆ ತೆರೆವನು ಬೆರಳ ಸಪ್ಪಳ ಕೇಳಿ, ಒಳಹೊಗಲು ಸಿದ್ಧರಿರೆ ಬರಮಾಡಿಕೊಳುವನವ ಸ್ವಾಗತವ ಕೋರಿ”
ಕೆಲವರು ಬಾಗಿಲ
ಮುಂದೆ ನಿಂತು ನಿಧಾನವಾಗಿ, ತಟ್ಟಲೋ ಬೇಡವೋ ಎಂಬಂತೆ ತಟ್ಟುತ್ತಾರೆ, ಬಾಗಿಲು ತೆರೆದಾಗ ಒಳಹೊಗಲು ಏನೋ
ಸಂಕೋಚ, ಏನೋ ನಾಚಿಕೆ, ಬಿಂಕ ಬಿಗುಮಾನ, ಇಲ್ಲವೇ ಕುಬ್ಜತೆಯಿಂದ ಮುದುಡುತ್ತಾರೆ. ಇಂಥಾ ದೊಡ್ಡ
ಸ್ವಾಮಿಯ ಮುಂದೆ ನಾನು ಕೇಳುವುದಾದರೂ ಏನನ್ನು, ಕೇಳಲಾದರೂ ನಾನು ಅರ್ಹನೇ, ಒಳಹೊಗಲು ಯೋಗ್ಯನೇ
ಎಂದೆಲ್ಲಾ ತಲ್ಲಣಿಸುತ್ತಾರೆ. ತಟ್ಟುವಾಗಿನ ತವಕ ತೆರೆದಾಗ ಕುಂದಿಹೋಗುತ್ತದೆ.
ಅದೇ ಆಗ ಯೇಸುವಿನಂಥ
ಒಡೆಯ ಪ್ರೀತಿಯಿಂದ ನಮ್ಮ ಕೈಕುಲುಕಿ ನಮ್ಮನ್ನು ಆಲಂಗಿಸಿ ಮೈದಡವಿ ತಾನೇ ಒಳ ಕರೆದೊಯ್ಯುತ್ತಾನೆ.
ನಮ್ಮ ಮನದ ಬಯಕೆಯನ್ನು ತಾನೇ ತಿಳಿದುಕೊಳ್ಳುವ ಸ್ವಾಮಿ ಅವನು, ನಮ್ಮ ಬೆರಳ ಸಪ್ಪಳ ಕೇಳಿಯೇ ಬಾಗಿಲ
ಬಳಿ ಬಂದು ನಿಂತು ನಮಗಾಗಿ ತನ್ನ ಮನೆಯ ಬಾಗಿಲನ್ನು ವಿಶಾಲವಾಗಿ ತೆರೆಯುತ್ತಾನೆ.
ಅಲ್ಲಿ ಪಸರಿಸಿದೆ: ಯೇಸುವಿನ ಕಂಗಳ ಬೆಳಕು ಹೃದಯದ ನಿನಾದ ಗಂಧ ಕಸ್ತೂರಿ ಜಾಜಿ ಸಂಪಿಗೆಗಳ ಪರಿಮಳ. ಹಾಲು ಬೆಳದಿಂಗಳಂತೆ ತಂಪು ಸೂಸುವ ಆ ಬೆಳಕಿನಲ್ಲಿ ನಮಗೆ
ನೆಮ್ಮದಿಯಿದೆ. ಸಂತೃಪ್ತಿಯಿದೆ.
“ಪ್ರಾರ್ಥನೆಯಲ್ಲಿ ಬಲವಿದೆ; ಅಪೂರ್ವ ಶಕ್ತಿಯಿದೆ, ನಂಬಲಾದಂತಹ
ಗುಣವಿದೆ ಎಂಬ ಮಾತನ್ನು ಎಲ್ಲ ಸಾಮಾನ್ಯರೂ, ಮನಶಾಸ್ತ್ರಜ್ಞ ಪಂಡಿತರೂ ಒಪ್ಪುತ್ತಾರೆ. ಧಾರ್ಮಿಕ
ವಲಯಗಳಲ್ಲಂತೂ ಪ್ರಾರ್ಥನೆಗೆ ಇರುವ ಮಹತ್ವ ಬೇರೊಂದಕ್ಕಿಲ್ಲ, ದಾರ್ಶನಿಕರು, ಪ್ರವಾದಿಗಳು, ಸಾಧು
ಸಂತರು, ಧರ್ಮಪ್ರವರ್ತಕರು, ಮತಪ್ರಚಾರಕರು ಎಲ್ಲರೂ ಈ ಉಪಕರಣವನ್ನು ಯಥೋಚಿತವಾಗಿ ತಮ್ಮ
ಕಾರ್ಯಸಾಧನೆಗೆ ಬಳಸಿಕೊಂಡದ್ದುಂಟು; ಯೇಸುವೂ ಇದಕ್ಕೆ ಹೊರತಾಗಿರಲಿಲ್ಲ” ಎನ್ನುವ ಹರಿಹರೇಶ್ವರರು
ಈ ಪುಸ್ತಕದ ತಯಾರಿಗಾಗಿ ಇಡೀ ಪವಿತ್ರ ಬೈಬಲ್ ಶ್ರೀಗ್ರಂಥವನ್ನೂ, ಯೆಹೂದ್ಯರ ರೀತಿ
ರಿವಾಜುಗಳನ್ನೂ, ಸಾಂದರ್ಭಿಕ ಇತಿಹಾಸ ಮತ್ತು ಸಂಸ್ಕೃತಿಯನ್ನೂ, ಇತರ ಧರ್ಮಗ್ರಂಥಗಳನ್ನೂ ಆಳವಾಗಿ
ಅಭ್ಯಸಿಸಿ ಒಂದು ಉತ್ಕೃಷ್ಟ ಸಂಶೋಧನಾ ಕೃತಿಯನ್ನು ಕನ್ನಡ ಸಾಹಿತ್ಯ ಸಂಪದಕ್ಕೆ ಕೊಡುಗೆಯಾಗಿ
ನೀಡಿದ್ದಾರೆ. ಇಂಥದೊಂದು ಪುಸ್ತಕ ನಮ್ಮ ಸಂಗ್ರಹದಲ್ಲಿ ಇದ್ದರೆ ಅದೊಂದು ಹೆಮ್ಮೆಯ ವಿಷಯವೇ ಸರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ