ಮಂಗಳವಾರ, ಮಾರ್ಚ್ 21, 2017

ಪವಿತ್ರ ಶಿಲುಬೆ

ಪವಿತ್ರ ಶಿಲುಬೆಯ ಗುರುತಿನ ಮೂಲಕ ... ನಮ್ಮ ದಿನಚರಿ ಆರಂಭವಾಗುವುದೇ ಹೀಗೆ. ಪವಿತ್ರ ಶಿಲುಬೆಯ ಗುರುತು ನಮ್ಮ ಬದುಕಿನ ಪ್ರತಿ ಕೆಲಸಕಾರ್ಯಗಳ ಮುನ್ನ ವಿಘ್ನಗಳನ್ನು ತೊಡೆದುಹಾಕುವ ಮಹಾಶಕ್ತಿಯಾಗಿ ರೂಪುಗೊಂಡಿದೆ. ಯಾವುದೇ ಕೆಲಸವನ್ನು ಶುರು ಮಾಡುವಾಗಲೂ ನಮ್ಮ ಜನ ಪಿತನ ಸುತನ ಎಂದು ಶಿಲುಬೆಯ ಗುರುತಿನ ಮೂಲಕವೇ ಪ್ರಾರಂಭಿಸುತ್ತಾರೆಂಬುದನ್ನು ಗಮನಿಸಿ. ಅದು ನೇಗಿಲು ಹೊರುವಾಗ, ನೊಗ ಕಟ್ಟುವಾಗ, ಮನೆಯಿಂದ ಹೊರಡುವಾಗ, ಊಟ ಮಾಡುವ ಮೊದಲು, ಪರೀಕ್ಷೆ ಬರೆಯುವ ಮೊದಲು, ಮದುವೆಯಲ್ಲಿ ಧಾರೆ ಹೊಯ್ಯುವಾಗ, ವಾಹನ ಏರುವಾಗ, ಪ್ರಯಾಣ ಆರಂಭಿಸುವಾಗ, ಮಲಗುವಾಗ ಏಳುವಾಗ ಹೀಗೆ ಪವಿತ್ರ ಶಿಲುಬೆಯು ನಮ್ಮ ಜೀವನದ ಆಗುಹೋಗುಗಳಲ್ಲಿ ಪ್ರತ್ಯಕ್ಷವಾಗುತ್ತದೆ.
ಶಿಲುಬೆ ನಮ್ಮ ಜೀವನದಲ್ಲಿ ಎಷ್ಟು ಆವರಿಸಿಕೊಂಡಿದೆಯೆಂದರೆ, ಶಿಲುಬೆಯ ಗೋಪುರವನ್ನು ಕಂಡ ಕೂಡಲೇ ನಮ್ಮ ಬಲಗೈ ಹಣೆಯ ಮೇಲಕ್ಕೆ ಹೋಗಿ ಶಿಲುಬೆ ಗುರುತನ್ನು ಹಾಕತೊಡಗುತ್ತದೆ. ಶವದ ವಾಹನ ಕಂಡ ಕೂಡಲೇ ನಮ್ಮ ಮನ ಪಿತನ ಸುತನ ಹಾಕಲು ಪ್ರೇರಿಸುತ್ತದೆ. ದೇವಾಲಯದ ಗಂಟೆಯ ನಾದ ಮಾರ್ದನಿಸುತ್ತಿದ್ದಂತೆ ಇದೇ ಶಿಲುಬೆ ಗುರುತು ದೇಹವನ್ನು ಪುಳಕಿಸುತ್ತದೆ.
ಅಷ್ಟೇ ಅಲ್ಲದೆ ಪವಿತ್ರ ಶಿಲುಬೆಯ ಗುರುತು ನಮ್ಮ ಮನೆಯ ಮುಂದಿನ ರಂಗೋಲಿಯಾಗಿ, ಮುಂಗೈ ಮೇಲೆ ಹಚ್ಚೆಯಾಗಿ, ಕಿವಿಯ ಲೋಲಾಕಿನ ಒಡವೆಯಾಗಿ, ಕೊರಳಮಾಲೆಯಲ್ಲಿ ವಿನಯದಿ ತೂಗಿ, ತಾಳಿಯ ಬೊಟ್ಟಿನಲ್ಲಿ ಆಸೀನವಾಗಿ, ಬೆರಳ ಉಂಗುರದಲ್ಲಿ ವಿರಾಜಮಾನವಾಗಿ, ಎದೆಯ ಅಂತರಾಳದಲ್ಲಿ ಸ್ಥಾವರವಾಗಿದೆ. 
ಹಿಸ್ಸೋಪ್ ಹುಲ್ಲಿನ ತೀರ್ಥಧಾರೆಯಾಗಿ, ಪೋಪ್ ಜಗದ್ಗುರುಗಳ ಕೋದಂಡವಾಗಿ, ಕ್ರಿಸ್ತಾಂಗನೆಯರ ಕೊರಳ ಪದಕವಾಗಿ, ಪವಿತ್ರ ಬುಧವಾರದ ವಿಭೂತಿಯಾಗಿ, ಸಮಾಧಿಯ ಮೇಲಿನ ಹೆಗ್ಗುರುತಾಗಿ, ಭೂತಪಿಶಾಚಿಗಳಿಗೆ ಭೀತಿಕಾರಕವಾಗಿ, ಗುಡಿಗೋಪುರದಲ್ಲಿ ದೇದೀಪ್ಯಮಾನವಾಗಿ, ಕ್ರೈಸ್ತಬಾಂಧವರ ನರನಾಡಿಯಾಗಿ, ನಮ್ಮ ಬದುಕೆಂಬ ಕಲ್ವಾರಿಪಯಣದ ದಾರಿದೀಪವಾಗಿ, ಕಂಗೊಳಿಸುತ್ತಿದೆ ಈ ಪರಮಪಾವನ ಮಹೋನ್ನತ ಶಿಲುಬೆ.

ನಮ್ಮ ಮನೆಯ ಬಾಗಿಲಲ್ಲಿ ನೆಲೆಗೊಂಡ ಶಿಲುಬೆ
ಕಷ್ಟದ
 ದಾರಿಯಲ್ಲಿ ಕೈಹಿಡಿವ ಶಿಲುಬೆ
ಕತ್ತಲೆಯ
 ಕೂಪದಲ್ಲಿ ದಾರಿ ತೋರುವ ಶಿಲುಬೆ
ಸೈತಾನನ
 ಶೋಧನೆಯನ್ನು ತೊಲಗಿಸುವ ಶಿಲುಬೆ
ಶತ್ರುತ್ವ
 ಅಳಿಸಿ ಪ್ರೀತಿ ಬೆಸೆಯುವ ಶಿಲುಬೆ
ಸುವಾಸಿತ ಸಿರಿಚಂದನದ ಶಿಲುಬೆ
ಪ್ರಕಾಶ ಬೀರುವ ಕಾಂತಿಯ ಶಿಲುಬೆ
ಪಾಪಭಾರದಿ
 ಬಾಗಿದ ಶಿಲುಬೆ
ಚಾಟಿಯೇಟಿಗೆ
 ನಲುಗಿದ ಶಿಲುಬೆ
ಮಾತೆ
 ಮರಿಯಳಿಗೆ ಭೀತಿಯ ಶಿಲುಬೆ
ಪಾಪಿ
 ಮನುಜನಿಗೆ ಪ್ರೀತಿಯ ಶಿಲುಬೆ
ಬಟ್ಟೆಗೆಟ್ಟೆಡೆಯಲ್ಲಿ
 ಬೆಟ್ಟದ ಶಿಲುಬೆ
ನೆತ್ತರಲಿ
 ಮಿಂದೆದ್ದ ಶಿಲುಬೆ
ಸಪ್ತಸಾಗರವ
 ದಾಟಿದ ಶಿಲುಬೆ
ಮುಕ್ತಿಮಾರ್ಗದ
 ದರ್ಶಕ ಶಿಲುಬೆ
ಲೋಕರಕ್ಷಕನ
 ಹೊತ್ತ ಶಿಲುಬೆ
ಶೋಕನಿವಾರಕ
 ಪಾವನ ಶಿಲುಬೆ
ನಿತ್ಯವೂ
 ಕಾಪಾಡೆಮ್ಮ ಸತ್ಯದ ಶಿಲುಬೆ.


ಕಾಮೆಂಟ್‌ಗಳಿಲ್ಲ: